Sunday, 15th December 2024

ಫಿಲ್ ಸಾಲ್ಟ್ ತವರಿಗೆ: ಕೆಕೆಆರ್‌ ತಂಡಕ್ಕೆ ಶಾಕ್‌

ಕೋಲ್ಕತ್ತಾ: ಐಪಿಎಲ್ ಸೀಸನ್ 17 ರಲ್ಲಿ ಪ್ಲೇಆಫ್ ಪ್ರವೇಶಿಸಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಸ್ಪೋಟಕ ದಾಂಡಿಗ ಫಿಲ್ ಸಾಲ್ಟ್ ಹೊರ ನಡೆದಿದ್ದಾರೆ.
ಮೇ 21 ರಿಂದ ಪಾಕಿಸ್ತಾನ್ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿ ಶುರುವಾಗಲಿದ್ದು, ಈ ಸರಣಿಯಲ್ಲಿ ಭಾಗವಹಿಸಲು ಇಂಗ್ಲೆಂಡ್ ದಾಂಡಿಗ ತವರಿಗೆ ಮರಳಿದ್ದಾರೆ. ಇದರೊಂದಿಗೆ ಕೆಕೆಆರ್ ತಂಡದ ಪ್ಲೇಆಫ್ ಪಂದ್ಯಗಳಿಗೆ ಫಿಲ್ ಸಾಲ್ಟ್ ಕಣಕ್ಕಿಳಿಯುವುದಿಲ್ಲ. ಇತ್ತ ಸಾಲ್ಟ್ ಅಲಭ್ಯತೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ಲೈನಪ್ ಮೇಲೆ ಪರಿಣಾಮ ಬೀರಬಹುದು.

ಈ ಬಾರಿಯ ಐಪಿಎಲ್​ನಲ್ಲಿ ಫಿಲ್ ಸಾಲ್ಟ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸ್ಪೋಟಕ ಆರಂಭ ಒದಗಿಸುವಲ್ಲಿ ಯಶಸ್ವಿಯಾಗಿದ್ದರು. ಸುನಿಲ್ ನರೈನ್ ಜೊತೆಗೂಡಿ ಇನಿಂಗ್ಸ್ ಆರಂಭಿಸಿದ್ದ ಸಾಲ್ಟ್ 12 ಇನಿಂಗ್ಸ್​ಗಳಿಂದ ಒಟ್ಟು 435 ರನ್ ಕಲೆ ಹಾಕಿದ್ದರು. 4 ಸ್ಪೋಟಕ ಹಾಫ್ ಸೆಂಚುರಿ ಬಾರಿಸಿ ಅಬ್ಬರಿಸಿದ್ದರು.

ಈಡನ್ ಗಾರ್ಡನ್ಸ್ ಮೈದಾನದಲ್ಲಿ ಒಂದೇ ಸೀಸನ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆಯನ್ನು ಸಹ ಬರೆದಿದ್ದರು.

ಪ್ಲೇಆಫ್ ಪಂದ್ಯಗಳಿಗೂ ಮುನ್ನ ಫಿಲ್ ಸಾಲ್ಟ್ ತಂಡವನ್ನು ತೊರೆದಿರುವುದು ಕೆಕೆಆರ್ ಪಾಲಿಗೆ ಹಿನ್ನಡೆಯನ್ನು ಉಂಟು ಮಾಡಲಿದೆ. ಇನ್ನು ಸಾಲ್ಟ್ ಅಲಭ್ಯತೆಯ ನಡುವೆ ಕೊಲ್ಕತ್ತಾ ನೈಟ್ ರೈಡರ್ಸ್ ಪರ ರಹಮಾನುಲ್ಲಾ ಗುರ್ಬಾಝ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡ: ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ಅಂಗ್​ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರಮಣ್​ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ, ಅನುಕುಲ್ ರಾಯ್, ಮನೀಶ್ ಪಾಂಡೆ, ರಹಮಾನುಲ್ಲಾ ಗುರ್ಬಾಝ್, ರಿಂಕು ಸಿಂಗ್, ಅಲ್ಲಾ ಗಜನ್ಫರ್, ಸಾಕಿಬ್ ಹುಸೇನ್, ಶೆರ್ಫಾನೆ ರುದರ್ಫೋರ್ಡ್, ಚೇತನ್ ಸಕರಿಯಾ, ನಿತೀಶ್ ರಾಣಾ, ಶ್ರೀಕರ್ ಭರತ್, ದುಷ್ಮಂತ ಚಮೀರಾ.