Sunday, 15th December 2024

ಜೂನ್‌ 4ರಂದು ಇಂಡಿಯಾ ಮೈತ್ರಿಕೂಟ ಸರ್ಕಾರ: ಕೇಜ್ರಿವಾಲ್ ವಿಶ್ವಾಸ

ಖನೌ: ಜೂನ್‌ 4ರಂದು ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಲಿದೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿಶ್ವಾಸ  ವ್ಯಕ್ತಪಡಿಸಿದರು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌ ಅವರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್‌, ‘ಸಂವಿಧಾನವನ್ನು ರಕ್ಷಿಸಲು ಇಂಡಿಯಾ ಮೈತ್ರಿಕೂಟಕ್ಕೆ ಮತ ಹಾಕುವಂತೆ ಉತ್ತರ ಪ್ರದೇಶದ ಜನರಲ್ಲಿ ವಿನಂತಿ ಮಾಡುತ್ತೇನೆ’ ಎಂದರು.

‘ಬಿಜೆಪಿಯು 220ಕ್ಕಿಂತಲೂ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ ಎಂದು ಈಗಿನ ಟ್ರೆಂಡ್ ಹೇಳುತ್ತಿದೆ. ಹರಿಯಾಣ, ದೆಹಲಿ, ಪಂಜಾಬ್, ಕರ್ನಾಟಕ, ಮಹಾ ರಾಷ್ಟ್ರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ರಾಜಸ್ಥಾನದಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ.

‘ನಾನು ಇಲ್ಲಿ ನಾಲ್ಕು ವಿಷಯಗಳ ಬಗ್ಗೆ ಮಾತನಾಡಲು ಬಯಸುತ್ತೇನೆ. ಮೊದಲನೆಯದಾಗಿ ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರು ಅಮಿತ್ ಶಾ ಅವರನ್ನು ಪ್ರಧಾನಿ ಮಾಡಲು ಮತ ಕೇಳುತ್ತಿದ್ದಾರೆ. ಎರಡನೆಯದಾಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೂರು ತಿಂಗಳೊಳಗೆ ಮುಖ್ಯಮಂತ್ರಿ ಸ್ಥಾನ ದಿಂದ ಯೋಗಿ ಆದಿತ್ಯನಾಥ್ ಅವರನ್ನು ಕೆಳಗಿಳಿಸಲಿದೆ. ಮೂರನೆಯದಾಗಿ ಸಂವಿಧಾನವನ್ನು ಬದಲಾಯಿಸುವ ಮೂಲಕ ಬಿಜೆಪಿಯವರು ಮೀಸಲಾತಿ ಯನ್ನು ತೆಗೆದುಹಾಕಲಿದ್ದಾರೆ. ನಾಲ್ಕನೆಯದಾಗಿ ಜೂನ್ 4ರಂದು ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಲಿದೆ’ ಎಂದರು.