Friday, 22nd November 2024

ನಿವೃತ್ತಿ ಬಗ್ಗೆ ಭಾವುಕರಾದ ವಿರಾಟ್ ಕೊಹ್ಲಿ

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ತಮ್ಮ ನಿವೃತ್ತಿ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್ ನಂತಹ ದಿಗ್ಗಜ ಕ್ರಿಕೆಟಿಗರು ಕ್ರಿಕೆಟ್ ನಿಂದ ನಿವೃತ್ತಿಯಾಗುವುದನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತದೆ. ಈ ಹಿಂದೆ ಸಚಿನ್ ನಿವೃತ್ತಿಯಾದಾಗ ಎಷ್ಟೋ ಜನ ಕ್ರಿಕೆಟ್ ನೋಡುವುದನ್ನೇ ನಿಲ್ಲಿಸಿದ್ದರು. ಇದೀಗ ಕೊಹ್ಲಿ ನಿವೃತ್ತಿ ಬಗ್ಗೆ ಹೇಳಿದರೂ ಅಭಿಮಾನಿಗಳಿಗೆ ಅದೇ ರೀತಿಯ ಸಂಕಟವಾಗುತ್ತಿದೆ.

ಕೊಹ್ಲಿ ಕಾರ್ಯಕ್ರಮವೊಂದರಲ್ಲಿ ತಮ್ಮ ನಿವೃತ್ತಿ ಬಗ್ಗೆ ಮನದಾಳ ಬಿಚ್ಚಿಟ್ಟಿದ್ದಾರೆ.

‘ಕ್ರೀಡಾಳುಗಳೆಂದ ಮೇಲೆ ನಮ್ಮ ವೃತ್ತಿ ಜೀವನ ಎಂದಾದರೂ ಕೊನೆಗೊಳ್ಳಲೇಬೇಕು. ನಾನು ಕೂಡಾ ಆಡುತ್ತಲೇ ಇರಲು ಸಾಧ‍್ಯವಿಲ್ಲ. ನನಗೆ ಯಾವುದೇ ಪಶ‍್ಚಾತ್ತಾಪವಿಲ್ಲ. ನಾನು ಆಡುತ್ತಿರುವಷ್ಟು ಸಮಯವೂ ನನ್ನಿಂದ ಸಾಧ‍್ಯವಾದ ಎಲ್ಲಾ ಪ್ರಯತ್ನ ಮಾಡುತ್ತೇನೆ, ಆದರೆ ಒಮ್ಮೆ ನಾನು ನಿವೃತ್ತಿ ಹೇಳಿದರೆ, ಅಲ್ಲಿಗೆ ಮುಗಿಯಿತು. ಬಹುಶಃ ನಿಮಗೆ ನಾನು ಕೆಲವು ಸಮಯ ಕಣ್ಣಿಗೂ ಕಾಣಿಸಲ್ಲ’ ಎಂದಿದ್ದಾರೆ.

‘ನಾನು ತರಾತುರಿಯಲ್ಲಿ ನಿವೃತ್ತಿ ಹೇಳಲ್ಲ. ನಿವೃತ್ತಿ ಹೇಳಿದ ಮೇಲೂ ಛೇ ನಾನು ಇದನ್ನು ಮಾಡಬಹುದಿತ್ತು ಎಂದು ಪಶ್ಚಾತ್ತಾಪ ಪಡುವಂತಿರಬಾರದು. ಆಡುವಷ್ಟು ದಿನ ನಾನು ಸಕಲ ಪ್ರಯತ್ನ ನಡೆಸುತ್ತೇನೆ. ಆಟ ಸಾಕು ಎನಿಸಿದಾಗ ಇಷ್ಟು ಸಮಯ ಆಡಿದ್ದಷ್ಟೇ ನನ್ನ ನೆನಪಿನಲ್ಲಿರಲಿದೆ’ ಎಂದು ಕೊಹ್ಲಿ ಹೇಳಿದ್ದಾರೆ.