ಪ್ರಸ್ತುತ
ಪ್ರಶಾಂತ್ ಕುಮಾರ ಶೆಟ್ಟಿ
ಹುಟ್ಟಿದಾಗಲೇ ತಿರಸ್ಕಾರ, ಧಿಕ್ಕಾರ. ಊಟ, ತಿಂಡಿ, ಆರೈಕೆ, ಶುಶ್ರೂಷೆ ಎಲ್ಲಕ್ಕೂ ತಾತ್ಸಾರ. ನಿತ್ಯದ ಜಳಕವಿಲ್ಲ. ಮೇವಿಗೆ ಹೋದವ ತಿರುಗಿ ಬಂದರೂ, ಬರದಿದ್ದರೂ ನನ್ನೆಡೆಗೆ ಗಮನವಿಲ್ಲ, ಕಾಳಜಿಯಿಲ್ಲ. ಮುಂಜಾನೆ ಮೇವಿಗೆ ಬಯಲಲ್ಲಿ ಕಟ್ಟಿ, ಬಿಸಿಲೇರಿ ಬಾಯಾರಿ ಉರಿಯೇರಿ ಕೂಗಿ ಕೂಗಿ ಕರೆದರೂ ನನ್ನ ಗೋಳಿಗೆ ಕಿವಿಯಾಗಿ ಸ್ಪಂದಿಸುವವರಿಲ್ಲ. ನನ್ನ ಪಾಲನೆಯೇ ಹೊರೆ ಎನ್ನುವ ಭಾರಭಾವ… ಗೋಧೂಳಿ ವೇಳೆಯಲ್ಲಿ ಹೋಗುವಾಗ, ಬರುವಾಗ ನಾ ಹಿಂಬಾಲಿಸಿದರೂ, ಹಿಂಬಾಲಿಸದೇ ಹೋದರೂ ಯಾರಿಗೂ ಚಿಂತೆಯಿಲ್ಲ.
ಎತ್ತಾದರೂ ಹೋಗಲಿ, ಹೋಗಿ ನಮ್ಮ ಹಂಗಿನಿಂದ ಹೊರಕ್ಕೆ ದೂರಕ್ಕೆ ಬದುಕು ಕಟ್ಟಿಕೊಳ್ಳಲಿ, ರೂಪಿಸಿಕೊಳ್ಳಲಿ ಅನ್ನೋ ಅನಾದರ. ನನ್ನ ಹೊಣೆಗಾರಿಕೆ ಯಿಂದ ಮುಕ್ತರಾಗೋದೇ ಹಕ್ಕು ಮತ್ತು ಕರ್ತವ್ಯವಾಗಿಸಿಕೊಂಡವರ ನಡುವೆ ಬಾಳಬೇಕು, ಬದುಕು ಸವೆಸಬೇಕು. ‘ಅಂಬಾ’ ಎನ್ನುವ ನನ್ನ ದನಿಯನ್ನೇ ಕರ್ಕಶವಾಗಿ, ಕ್ಷುಲ್ಲಕವಾಗಿ ಕಂಡವರ, ಕಾಣುವವರ ನಡುವೆ ನಿತ್ಯ ಸಾಯುವ ಕೊರಗು. ಸಮಯಕ್ಕೆ ಕುಡಿಯಲು ನೀರಿಲ್ಲ, ತಿನ್ನಲು ಮೇವಿಲ್ಲ. ಹೊರಗೆ ಓಡಾಡಿ ತಿಂದು ಬಂದರೆ ಅದೇ ಉಸಿರಿಗೆ ಆಸರೆ.
ನನ್ನನ್ನು ಹೊರದೂಡಲು ಪ್ಲಾನ್ ಎ, ಪ್ಲಾನ್ ಬಿ ಗಳು ತಯಾರಾಗುತ್ತಿವೆ. ನನ್ನಂತೆಯೇ ಕೇರಿಯ ಪ್ರತಿ ಮನೆಯಲ್ಲೂ ಬೀಡು ಬಿಟ್ಟಿರುವ ಎಲ್ಲರನ್ನೂ ಕಲೆಹಾಕಿ ವಾಹನ ಏರಿಸಿ ದೂರಕ್ಕೆ ಬಿಡುತ್ತಾರಂತೆ. ಕದ್ದು ಒಯ್ಯುವ, ಒಯ್ದು ಹೊಟ್ಟೆಗೆ ಆಹಾರವಾಗಿಸಿಕೊಂಡು ತೇಗುವ ಮಂದಿಯಿಂದ ಬಚಾವಾಗಿ ನಾ ಜೀವಿತ ಕಳೆಯುವುದು ಹೌದೇ? ಕೊಟ್ಟಿಗೆಯನ್ನೇ ಬಿಡದವರು ಬಯಲನ್ನು ಬಿಟ್ಟಾರೆಯೇ? ಹಾಗೆ ಅ ಗುಡ್ಡದ ಮೇಲೆ ಅಲೆದಾಡಿಕೊಂಡಿದ್ದ ನನ್ನನ್ನು
ರಾತ್ರಿಯ ಕಾರ್ಗತ್ತಲಲ್ಲಿ ಮೇವಿನ ಆಮಿಷವೊಡ್ಡಿ ಅಪಹರಿಸಿಕೊಂಡು, ಎತ್ತಿಕೊಂಡು ಬಂದು ಮರುದಿನದ ಹಬ್ಬದ ಗೌಜಿಗೆ ಕಾಯುತ್ತಿರುವ ಒಂದಷ್ಟು ಕಟುಕರು. ಬೆಳಕು ಹರಿದ ಹೊತ್ತಲ್ಲಿ ಇನ್ನೇನು ಕುತ್ತಿಗೆಯ ಹಗ್ಗವನ್ನು ಬಿಗಿಯಾಗಿಸಿ, ಕಾಲುಗಳನ್ನೂ ಹಗ್ಗಕ್ಕೆ ಎರವಾಗಿಸಿ ನನ್ನನ್ನು ಕಡಿದೇ ತೀರುವ ಹಠದಲ್ಲಿ ಮಚ್ಚು ಹಿಡಿದು ಹೆಜ್ಜೆ ಮುಂದಿಡುತ್ತಾ ಬರುತ್ತಿರುವ ಕಟುಕರ ಹಿಡಿತದಿಂದ ಒಂದು ಮಾಯಕದ ಕ್ಷಣದಲ್ಲಿ ಒಂದೇ ನೆಗೆತದಿಂದ ತಪ್ಪಿಸಿ ಕೊಂಡು ದಿಕ್ಕು ತೋಚದೇ ಸಿಕ್ಕ ಹಾದಿಯಲ್ಲಿ ಓಟಕ್ಕಿತ್ತವನು ನಾನು.
ಬೆನ್ನಟ್ಟಿ ಓಡಿ ಬರುತ್ತಿರುವ, ವಾಹನಗಳಲ್ಲೂ ಬೆನ್ನುಕಚ್ಚಿ ಬರುತ್ತಿರುವ ಕಟುಕ ಪಡೆ. ಜೀವಭಯದಲ್ಲಿ ಓಡುತ್ತಾ ಓಡುತ್ತಾ ಕಟುಕರ ಬೀದಿಯಿಂದ ಆರಾಧಕರ ಬೀದಿ ತಲುಪಿದ್ದೆ ನಾನು. ಎರಡು ಬೀದಿ ಗಳೂ ನನಗೆ ಅಪರಿಚಿತವೇ. ಅದಾಗಲೇ ಅಲ್ಲಿಗೆ ಬಂದು ತಲುಪಿದ್ದ ಕಟುಕ ಪಡೆಯ ಜೊತೆಗೆ ಮತ್ತೊಂದಿಷ್ಟು ಮತಾಂಧರು ಬಂದು ಸೇರಿಕೊಂಡರು. ವಾಗ್ವಾದ, ಹೊಯ್ ಕೈಯ್ ತಳ್ಳಾಟ, ಬಿರುನುಡಿ, ಕಟುನುಡಿ. ಕಟುಕರ ಮತ್ತು ಆರಾಧಕರ ನೇತಾರರ ರಂಗಪ್ರವೇಶ. ಅಂತೂ ಕಟುಕರು ಬಂದ ದಾರಿಗೆ ಸುಂಕವಿಲ್ಲದೇ ವಾಪಾಸಾದರು. ಬದುಕಿದೆಯಾ ಬಡಜೀವವೇ ಅಂತ ನಿಟ್ಟುಸಿರು ಬಿಟ್ಟೆ ನಾನು. ಆದರೆ ನನ್ನ ನಿರೀಕ್ಷೆಯಿನ್ನೂ ನಿಂತಿಲ್ಲ.
ಕರೆಯುವ ಹಸುವಲ್ಲ, ಗಂಡುಕರು ಅನ್ನುವ ನಿಕೃಷ್ಟತೆಯ ಹುಟ್ಟಿದ ಪರಿಸರದಲ್ಲಿ, ಮತ್ತೆ ದೂರದ ಗುಡ್ಡದ ಮೇಲೆ ಬಿಡಾಡಿ ಯಾಗಿ ಬೆಳೆದುಬಂದ ನನ್ನನ್ನು ಈಗ ಈ ಪರಿಸರದಲ್ಲಿ ಸಾಕಿ, ಸಲಹುವ ಹೊಣೆಯನ್ನು ಯಾರು ಹೊರುತ್ತಾರೆ?
-ಯಾರ ಮನೆಯಲ್ಲಿ ಮನೆಮಗನಷ್ಟೇ ಮುದ್ದಿನಲ್ಲಿ, ಸಲುಗೆ ಯಲ್ಲಿ ನಾನು ನಾಳೆಗಳನ್ನು ಕಳೆದೇನು? ಕಟುಕರ ಕೈಯಿಂದ ನನ್ನನ್ನು ಬಿಡಿಸುವಾಗ ಇದ್ದ-ಇರುವ ಉತ್ಸಾಹ, ಛಲ, ಬದ್ಧತೆಗಳು ನನ್ನನ್ನು ಪೊರೆ ಯುವಾಗಲೂ, ಪೊರೆಯುವ ದಿನಗಳಲ್ಲೂ ಉಳಿದೀತಾ? ಇಲ್ಲಿಂದ ಗೋಶಾಲೆಗೆ ನನ್ನನ್ನು ಸ್ಥಳಾಂತರ ಮಾಡಿಯಾರೇ?
– ಅಲ್ಲಿನ ವ್ಯವಸ್ಥೆಗಳು ನನ್ನ ಜೀವನಪ್ರೀತಿಯನ್ನು ಉತ್ತುಂಗಕ್ಕೆ ಏರಿಸಿಯಾವೇ? ಅದೇನೇ ಇದ್ದರೂ ಸಾಕುವ ಹೊಣೆ ಹೊತ್ತವರು ಕಟುಕರು ನೀಡುವ ಹಣದಾಸೆಗೆ ಮತ್ತೆ ನನ್ನನ್ನು ಅವರ ಕೈಗೆ ಒಪ್ಪಿಸದಿದ್ದರೆ, ಮತ್ತೆ ನನ್ನನ್ನು ಬಿಡಾಡಿಯಾಗಿ ಅಟ್ಟಿ ಕೈ ತೊಳೆದುಕೊಳ್ಳದಿದ್ದರೆ ಅಷ್ಟೇ ಸಾಕು. ನನಗಷ್ಟೇ ಸಾಕು.
ಉಳುಮೆ ಯಂತ್ರಗಳ ಅಬ್ಬರದಲ್ಲಿ ಗೋವುಗಳ ಜಾತಿಯಲ್ಲಿ ಗಂಡಾಗಿ ಹುಟ್ಟಿ ಹೀಗೆ ತುಚ್ಛವಾಗಿ ಬಾಳುವ ಅಸಹನೀಯ ಬದುಕು ಯಾರಿಗೂ ಯಾವ ಕಾಲಕ್ಕೂ ಬೇಡ, ಬೇಡವೇ ಬೇಡ. ಉಳುಮೆ ಮತ್ತು ಹಾಲಿನ ಹೊರತಾಗಿ ಗೋವುಗಳ ಸದ್ಬಳಕೆಯ ಶ್ರೇಷ್ಠತೆಯ ಅರಿವು ಮತ್ತು ಗೋ ಉತ್ಪನ್ನಗಳ ಶ್ರೇಷ್ಠತೆಯ ತಿಳಿವು ಈ ಮನುಷ್ಯರು ಅನ್ನಿಸಿಕೊಂಡವರ ಅಂತರಂಗದಲ್ಲಿ ಬೆಳಕಿನ ಕಾವಾಗುವುದು ಯಾವಾಗ?