Thursday, 12th December 2024

ಕರಾವಳಿಯ ಮತ್ಸ್ಯೋದ್ಯಮಕ್ಕೆ ಬೇಕಿದೆ ಸರಕಾರದ ಲಕ್ಷ್ಯ

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ಕರಾವಳಿ ಜನರನ್ನು ನಿರ್ಲಕ್ಷ ಮಾಡುತ್ತಿರುವ ಬಗ್ಗೆ ಬರೆಯುತ್ತಾ ಹೋದರೆ ಪುಸ್ತಕದ ಪುಟಗಳು ತುಂಬಬಹುದೇ ಹೊರತು ಕೆಲಸದ ಫಲಶ್ರುತಿಗಳಲ್ಲ. ಯಾಕೆಂದರೆ ಈ ಹೊಸ ಸರ್ಕಾರದ ಭರವಸೆಗಳ ಪಟ್ಟಿಗಳು ಒಂದೆಡೆಯಾದರೆ, ಸಮಸ್ಯೆಗಳ ಪಟ್ಟಿ, ಅದನ್ನು ಮೀರಿಸಿ ಮರೆಸಿ ಬಿಡುತ್ತದೆ. ಇದಕ್ಕೆ ಸರಿಯೆನಿಸುವಂತೆ ಪ್ರತೀ ಸಲದಂತೆ ಮರವಂತೆಯಲ್ಲಿನ ಕಡಲ್ಕೊರೆತಕ್ಕೆ ಬೇರೆ ಬೇರೆ ರೀತಿಯ ಮಾದರಿ ತಡೆಗೋಡೆಗಳ ಭರವಸೆ ನೀಡಿದ ಸರಕಾರ ನಿರ್ಮಾಣದ ಸಂಧರ್ಭದಲ್ಲಿ ಮೌನದ ಮೂಲಕ ಉತ್ತರಿಸುತ್ತಿದೆ.

ಸುಂದರ ನದಿವನಗಳ ನಾಡು, ಸಿರಿಗಂಧದ ಬೀಡು, ಪವಿತ್ರ ಪಶ್ಚಿಮಘಟ್ಟಗಳ ವರದಾನ ನಮ್ಮ ಕರ್ನಾಟಕ. ಇಡೀ ಭಾರತದಲ್ಲಿ ಮಳೆನಾಡು ಮತ್ತು ಕರಾವಳಿಯನ್ನು ಹೊಂದಿರುವ ದಕ್ಷಿಣ ಭಾಗದ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ. ಅದರಲ್ಲೂ ಪಶ್ಚಿಮಘಟ್ಟಗಳ ಕೃಪೆ ನಮ್ಮ ಕರಾವಳಿ ಭಾಗಕ್ಕೆ ಮತ್ತು ಇಡೀ ರಾಜ್ಯಕ್ಕೆ ಸಿಕ್ಕ ಕೊಡುಗೆಯಾಗಿದೆ.

ಭಾರತವು ೨೦೯೪ ಕಿ.ಮೀ ದ್ವೀಪ ಪ್ರದೇಶಗಳು ಮತ್ತು ೫೪೨೨ ಕಿಮೀ ಮುಖ್ಯ ಭೂಭಾಗದ ಕರಾವಳಿಯನ್ನು ಒಳಗೊಂಡಂತೆ ಒಟ್ಟು ೭೫೧೬.೬ ಕಿಮೀ ಹಾಗೂ ದೇಶವು ಕರಾವಳಿಗಿಂತ ಮುಂದೆ ೧೨ ನಾಟಿಕಲ್ ಮೈಲುಗಳಷ್ಟು ವಿಶೇಷ ಆರ್ಥಿಕ ವಲಯವನ್ನು ಹೊಂದಿದೆ. ಭಾರತದ ಕರಾವಳಿಯೂ
ಒಂಬತ್ತು ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಕರ್ನಾಟಕದ ಕರಾವಳಿ ಮರ್ಮಗಾಂವ್ ಮತ್ತು ಮಂಗಳೂರಿನ ನಡುವೆ ಹಬ್ಬಿರುವ ಪ್ರದೇಶವಾಗಿದೆ. ಕನ್ನಡ ಕರಾವಳಿ ಬಯಲು ಗರಿಷ್ಠ ೭೦ ಕಿಲೋ ಮೀಟರ್ ಅಗಲವಿದ್ದು, ಮಂಗಳೂರಿನ ಬಳಿ ಸರಾಸರಿ ೩೦ ರಿಂದ ೫೦ ಕಿಮೀ ಅಗಲವಿದೆ. ಕರ್ನಾಟಕವು ೩೦೯.೫೯ ಕಿಮೀ ಕರಾವಳಿ ತೀರವನ್ನು
ಹೊಂದಿದ್ದು ಕೆನರಾ ತೀರ ಎಂದು ಹೆಸರುವಾಸಿ ಯಾಗಿದೆ. ರಾಜ್ಯಗಳ ಪೈಕಿ ಗೋವಾ, ಪಶ್ಚಿಮ ಬಂಗಾಳದ ನಂತರ ಮೂರನೇ ಅತೀ ಚಿಕ್ಕ ತೀರ
ಪ್ರದೇಶವನ್ನು ಕರ್ನಾಟಕ ಹೊಂದಿದೆ.

೭೬೧೬ ಕಿ.ಮೀ.ನಷ್ಟಿರುವ ದೇಶದ ಕರಾವಳಿಯಲ್ಲಿ ಕರ್ನಾಟಕದಲ್ಲಿ ಕರಾವಳಿ ಮತ್ತು ಮೀನುಗಾರಿಕಾ ಪ್ರದೇಶದ ವ್ಯಾಪ್ತಿ ಇರುವುದು ೩೨೦ ಕಿ.ಮೀ.
ಮಾತ್ರ. ಅಂದಿನ ಮೈಸೂರು ರಾಜ್ಯರು ೧೯೫೭ರಲ್ಲಿ ಮೀನುಗಾರಿಕಾ ಇಲಾಖೆ ಆರಂಭಿಸಿದರು. ೧೯೭೦ ರಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಯಿತು. ಇಷ್ಟಿದ್ದರೂ, ಇಡೀ ಇಲಾಖೆ ಕೆಲಸ ಮಾಡಬೇಕಿರುವುದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಮೂರು
ಜಿಗಳ ವ್ಯಾಪ್ತಿಯಲ್ಲಿ ಮಾತ್ರ. ಸಾಂಸ್ಕೃತಿಕ ಮತ್ತು ಧಾರ್ಮಿಕ ತಾಣಗಳನ್ನು ಹೊಂದಿರುವ ಕನ್ನಡ ಕರಾವಳಿಯನ್ನು ವಿಶ್ವ ಪ್ರವಾಸೋದ್ಯಮ ಭೂಪಟದಲ್ಲಿ ಚಿರಸ್ಥಾಯಿ ಯಾಗುವಂತೆ ಮಾಡಬಹುದು.

ಆದರೆ, ಸತ್ತ ಮೀನುಗಳಂತಿರುವ ಅಧಿಕಾರಿಗಳು ಹಾಗೂ ಇಲಾಖೆಯಿಂದ ಅಭಿವೃದ್ಧಿ ಮಾಡುವುದು ಬಿಡಿ, ಇರುವ ವ್ಯವಸ್ಥೆಯನ್ನು ಮತ್ತಷ್ಟು ಗಬ್ಬೆದ್ದು ಹೋಗುವಂತೆ ಮಾಡಿವೆ. ಇರುವ ಒಂದು ಗಂಗೊಳ್ಳಿ ಡ್ರೆಡ್ಜಿಂಗ್ ಸಮಸ್ಯೆಯು ಪತ್ರಿಕೆ, ಮಾಧ್ಯಮಗಳ ಮೂಲಕ ನಾಡಿನಾದ್ಯಂತ ಸುದ್ದಿಯಾದರೂ ಇದಕ್ಕೆ
ಶಾಶ್ವತ ಪರಿಹಾರ ಮಾಡುವುದು ಹೇಗೆಂಬುದನ್ನು ಇನ್ನೂ ಅರಿಯದಂತಾಗಿದೆ ಇಲಾಖೆ ಮತ್ತು ಆಡಳಿತ ವ್ಯವಸ್ಥೆ!

ಕರ್ನಾಟಕ ಮೀನುಗಾರಿಕೆ ಇಲಾಖೆಯನ್ನು ಒಬ್ಬ ಕುರುಡನಿಗೆ ಕೊಟ್ಟರೂ, ಕೆಲವೇ ತಿಂಗಳುಗಳಲ್ಲಿ ಕರಾವಳಿ ಮತ್ತು ಮೀನುಗಾರರ ಸಮಸ್ಯೆಗಳನ್ನು
ಶಾಶ್ವತವಾಗಿ ಪರಿಹರಿಸಿಕೊಡಬಲ್ಲರು. ಇರುವ ೩೨೦ ಕಿ.ಮೀ. ವ್ಯಾಪ್ತಿಯ ವ್ಯಾಪಕ ಸಂಪನ್ಮೂಲವಿರುವ ಪ್ರದೇಶವನ್ನು ‘ಸಂಪೂರ್ಣ ಅಭಿವೃದ್ಧಿಗೊಂಡ
ಪ್ರದೇಶ’ ಮಾಡಲು ೬೭ ವರ್ಷಗಳಾದರೂ ಸಾಧ್ಯವಾಗುತ್ತಿಲ್ಲವೇಕೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಜಗತ್ತಿನ ಮತ್ಸ್ಯ ಉತ್ಪಾದನೆಯಲ್ಲಿ ಚೀನಾ, ಇಂಡೋನೇಷ್ಯಾದ ನಂತರ ೩ನೇ ಅತೀ ಹೆಚ್ಚು ಉತ್ಪಾದನೆ ಮಾಡುವ ರಾಷ್ಟ್ರ ಭಾರತ. ಜಗತ್ತಿನ ಉತ್ಪಾ
ದನೆಯಲ್ಲಿ ೭.೫೬% ನಷ್ಟು ಅಂದರೆ ೧೦.೯ ಮಿಲಿಯನ್ ಟನ್ ನಷ್ಟು ಭಾರತ ಮತ್ಸ್ಯ ಉತ್ಪಾದನೆ ಮಾಡುತ್ತಿದೆ. ಇದರಲ್ಲಿ ಕರ್ನಾಟಕದ ಪಾಲು ಎಷ್ಟು
ಎಂಬುದು ಕನ್ನಡಿಗರಲ್ಲಿ ಇದ್ದರೆ, ಪ್ರಮುಖ ೧೦ ರಾಜ್ಯಗಳಲ್ಲಿ ೯ನೇ ಸ್ಥಾನ ಹೊಂದಿರುವುದು ಅತ್ಯಂತ ದುರದೃಷ್ಟಕರ.

ಗೋವಾ, ದಿಯು ದಮನ್ ನಂತಹ ಅತೀ ಕಡಿಮೆ ತೀರ ಪ್ರದೇಶವನ್ನು ಹೊಂದಿರುವ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ನಮ್ಮ
ರಾಜ್ಯಕ್ಕಿಂತ ಹೆಚ್ಚಿನ ಮತ್ಸ್ಯ ಉತ್ಪಾದನೆ ನಡೆಯುತ್ತಿರುವುದು ನಮ್ಮ ರಾಜ್ಯದ ವಿಪರ್ಯಾಸ. ದೇಶದ ಬಹುತೇಕ ಕರಾವಳಿ, ಬಂದರು ಪ್ರದೇಶಗಳನ್ನು
ಹೊಂದಿರುವ ರಾಜ್ಯಗಳು ತಮ್ಮದೇ ಆದ ಒಂದು ವಿಶಿಷ್ಟತೆಯನ್ನು, ವೈವಿಧ್ಯತೆಯನ್ನು ಬಳಸಿಕೊಂಡು ಆಡಳಿತದ ಮೂಲಕ ಸೂಕ್ತ ಸರಿಯಾದ ಬಜೆಟ,
ಅನುದಾನ ಮತ್ತು ತ್ವರಿತಗತಿಯ ಕಾರ್ಯಕ್ಷಮತೆಯ ಮೂಲಕ ತಮ್ಮ ತಮ್ಮ ಕರಾವಳಿ ಬಂದರುಗಳನ್ನು, ಮೀನುಗಾರಿಕೆಯನ್ನು ಬೆಳೆಸುತ್ತ ರಾಷ್ಟ್ರ –
ಅಂತಾರಾಷ್ಟ್ರಮಟ್ಟದಲ್ಲಿ ತಮ್ಮ ವ್ಯವಹಾರವನ್ನು, ಹೂಡಿಕೆಯನ್ನು ಸೆಳೆದುಕೊಂಡಿವೆ ಮತ್ತು ಅವುಗಳ ಮೂಲಕ ಮೀನುಗಾರಿಕೆ, ಮೀನುಗಾರರಿಗೆ
ಮೂಲಭೂತ ಸೌಕರ್ಯಗಳನ್ನು ಅತ್ಯಂತ ಆಧುನಿಕ ರೀತಿಯಲ್ಲಿ ಒದಗಿಸಿ ಯಶಸ್ವಿಯಾಗಿವೆ.

ಆದರೆ, ಕರ್ನಾಟಕದ ಪರಿಸ್ಥಿತಿಯೋ ಅಯೋಮಯ. ಕರಾವಳಿ ಜನರನ್ನು ನಿರ್ಲಕ್ಷ ಮಾಡುತ್ತಿರುವ ಬಗ್ಗೆ ಬರೆಯುತ್ತಾ ಹೋದರೆ ಪುಸ್ತಕದ ಪುಟಗಳು
ತುಂಬಬಹುದೇ ಹೊರತು ಕೆಲಸದ ಫಲಶ್ರುತಿಗಳಲ್ಲ. ಯಾಕೆಂದರೆ ಈ ಹೊಸ ಸರ್ಕಾರದ ಭರವಸೆಗಳ ಪಟ್ಟಿಗಳು ಒಂದೆಡೆಯಾದರೆ, ಸಮಸ್ಯೆಗಳ ಪಟ್ಟಿ,
ಅದನ್ನು ಮೀರಿಸಿ ಮರೆಸಿ ಬಿಡುತ್ತದೆ. ಇದಕ್ಕೆ ಸರಿಯೆನಿಸುವಂತೆ ಪ್ರತೀ ಸಲದಂತೆ ಮರವಂತೆಯಲ್ಲಿನ ಕಡಲ್ಕೊರೆತಕ್ಕೆ ಬೇರೆ ಬೇರೆ ರೀತಿಯ ಮಾದರಿ
ತಡೆಗೋಡೆಗಳ ಭರವಸೆ ನೀಡಿದ ಸರಕಾರ ನಿರ್ಮಾಣದ ಸಂಧರ್ಭದಲ್ಲಿ ಮೌನದ ಮೂಲಕ ಉತ್ತರಿಸುತ್ತಿದೆ.

೨೦೧೧ರಲ್ಲಿ ಪ್ರಾರಂಭಗೊಂಡ ಮರವಂತೆ ಔಟ್ ಡೋರ್ ಬಂದರು ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದೆ ಎರಡನೇ ಹಂತದ ಕಾಮಗಾರಿಯನ್ನು ಆರಂಭಿಸಿರುವುದು ಸ್ಥಳೀಯರ ಅಸಮಾದಾನಕ್ಕೆ ಕಾರಣ ವಾಗಿದೆ. ಅದರಂತೆ ಅಪೂರ್ಣ ಕಾಮಗಾರಿಯಿಂದ ಸ್ಥಳೀಯ ಮೀನುಗಾರರ ಮನೆಗಳು ಸಮುದ್ರ
ಪಾಲಾಗುವ ಬೀತಿಯನ್ನು ಎದುರಿಸುತ್ತಿದ್ದಾರೆ. ಕಳೆದ ವರ್ಷದ ಮಳೆಗಾಲದಲ್ಲಿ ಗಂಗೊಳ್ಳಿಯ ಜಟ್ಟಿಯ ಒಂದು ಭಾಗ ಕುಸಿದು ಬಿದ್ದು ಜಟ್ಟಿಯ ಮರು ನಿರ್ಮಾಣ ಕಾರ್ಯ ಮೀನುಗಾರರಿಗೆ ಕನಸಾಗಿಯೇ ಉಳಿದಿದೆ. ಅಲ್ಲದೇ ಈ ಪ್ರದೇಶದಲ್ಲಿ ಹೂಳು ತುಂಬಿರುವುದರಿಂದ ಮೀನುಗಾರರು ಪರದಾಡುವಂತಾಗಿದೆ.

ಬೈಂದೂರು ವಿಧಾನಸಭಾ ಕ್ಷೇತ್ರದ ಬಂಟ್ವಾಡಿ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಿದರೂ ನದಿಪಾತ್ರದ ಊರ ಬಾವಿಗಳಿಂದ ಉಪ್ಪು ನೀರು ಕುಡಿಯಬೇಕಾದ
ಪರಿಸ್ಥಿತಿ ಒದಗಿದೆ. ಕಾರಣ, ರಾಜ್ಯ ಸರಕಾರಗಳ ಅವೈಜ್ಞಾನಿಕ ಕಾಮಗಾರಿ ಹಾಗೂ ಬೇಜವಬ್ದಾರಿತನವೇ ಸರಿ. ಪ್ರತೀ ಮಳೆಗಾಲದಲ್ಲೂ ಬಂಟ್ವಾಡಿ
ಕಿಂಡಿ ಅಣೆಕಟ್ಟಿನ ಹಲಗೆ ತೆಗೆಯುವ ಪ್ರಕ್ರಿಯೆ ವಿಳಂಬವಾಗುವುದರಿಂದ ನಾವುಂದ, ಅರೆಹೊಳೆ, ಮರವಂತೆ ಸುತ್ತಮುತ್ತಲಿನ ಪರಿಸರದಲ್ಲಿ ಕೃತಕ
ನೆರೆಯುಂಟು ಮಾಡುತ್ತಿದೆ. ಇದು ಕೇವಲ ಒಂದು ಬೈಂದೂರು ಕ್ಷೇತ್ರಕ್ಕೆ ಸೀಮಿತವಾಗದೇ, ಕರಾವಳಿ ಉದ್ದಕ್ಕೂ ಸಮಸ್ಯೆಗಳ ಆಗರವನ್ನೇ ಸರ್ಕಾರ
ಸೃಷ್ಠಿಸಿದೆ. ಕಡಲ್ಕೊರತೆಕ್ಕೆ ಶಾಶ್ವತ ಯೋಜನೆಯಾಗಿ ಡಕುಟ್ ತಂತ್ರಜ್ಞಾನ ಅಥವಾ ಸೀ ವೇವ್ ಬ್ರೇಕರ್ ಅಳವಡಿಸುವ ನಿಟ್ಟಿನಲ್ಲಿ ಹಿಂದಿನ ಬಿಜೆಪಿ ಸರಕಾರ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿತ್ತು.

ಉಳ್ಳಾಲದ ಸೋಮೇಶ್ವರದಲ್ಲಿ ಸುಮಾರು ೩-೫ ಕಿ.ಮೀ. ದೂರದಲ್ಲಿ ಈ ತಂತ್ರಜ್ಞಾನ ಅಳವಡಿಸಲು ಸ್ಥಳ ಪರಿಶೀಲನೆ ಇತ್ಯಾದಿಗಳನ್ನು ಮಾಡಲಾಗಿತ್ತು. ತದನಂತರದ ವಿದ್ಯಾಮಾನದಲ್ಲಿ ಸರಕಾರ ಬದಲಾಯಿತು. ಆದರೆ, ಕಡಲ್ಕೊರತ ತಡೆಯುವ ಶಾಶ್ವತ ಯೋಜನೆ ಮಾತ್ರ ಬರಲಿಲ್ಲ. ಇದು ಒಂದು ಕ್ಷೇತ್ರದ ಸಮಸ್ಯೆಯಲ್ಲ. ಇಡೀ ಕರಾವಳಿಯ ಸಮಸ್ಯೆ. ರಾಜ್ಯವು ೯.೮೪ ಲಕ್ಷ ಮೀನುಗಾರರನ್ನು ಹಾಗೂ ೭೨೯ ಮೀನುಗಾರರ ಸಹಕಾರ ಸಂಘಗಳನ್ನು ಒಳಗೊಂಡಿದೆ. (೧೩೨ ಕರಾವಳಿ ಮತ್ತು ೫೯೭ ಒಳನಾಡು) ಅದರಲ್ಲಿ ೬೬೭ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.

ಕರಾವಳಿಯಲ್ಲಿ ಪರ್ಮಿಟ್ ಪಡೆದ ೮,೦೩೦ ಸಾಂಪ್ರದಾಯಿಕ ಮೀನುಗಾರಿಕೆ ದೋಣಿಗಳಿಗೆ ಮಾಸಿಕ ೧೩೫೫ ಕಿಲೋ ಲೀಟರ್ ಸೀಮೆ ಎಣ್ಣೆಯನ್ನು ಪಡಿತರ ದರದಲ್ಲಿ ನೀಡಲಾಗುತ್ತಿದೆ. ಮೀನುಗಾರಿಕೆಗೆ ಅನುಕೂಲವಾಗುವಂತೆ ಬಂದರುಗಳಲ್ಲಿ ಮೂಲಸೌಕರ್ಯ ಸುಧಾರಿಸಲೇಬೇಕು. ಮೀನು ಹರಾಜು ಕೇಂದ್ರಗಳಲ್ಲಿ ಸರಿಯಾದ ವ್ಯವಸ್ಥೆಯಿಲ್ಲ. ಅಧಿಕಾರಗಳು ಅತ್ತ ಗಮನವೇ ನೀಡುತ್ತಿಲ್ಲ. ಮಲ್ಪೆಯ ಸರ್ವ ಋತು ಬಂದರು ದೇಶದ ಖ್ಯಾತಿ ಪಡೆದಿದೆ. ಗಂಗೊಳ್ಳಿ, ಹೆಜಮಾಡಿ, ಕೊಡೇರಿ ಕಿರು ಬಂದರು ಹೀಗೆ ಉಡುಪಿ ಜಿಯಲ್ಲಿ ಮೀನುಗಾರಿಕೆಯ ಹಬ್ ಆಗಿ ಬೆಳೆಯುತ್ತಿದೆ ಎಂದರೂ ತಪ್ಪಾಗಲಾರದು.

ಇದಕ್ಕೆ ಪೂರಕವಾಗಿ, ಬಂದರುಗಳಲ್ಲಿ ಪ್ರತಿ ವರ್ಷ ಡ್ರಜ್ಜಿಂಗ್ ಮಾಡದಿದ್ದರೆ, ಅಳುವೆ ಬಾಯಿಯಲ್ಲಿ ಹೂಳು ತುಂಬಿ ಬಿಡುತ್ತದೆ. ನೀರಿನ ಇಳಿತದ ಸಂದರ್ಭದಲ್ಲಿ ದೋಣಿ, ಬೋಟುಗಳು ಬಂದರಿನ ಒಳಗೆ ಬರಲು ಕಷ್ಟವಾಗುತ್ತದೆ. ವೈeನಿಕವಾಗಿ ಮತ್ತು ವೇಗವಾಗಿ ಡ್ರಜ್ಜಿಂಗ್ ಮಾಡುವ ಕಾರ್ಯ ಸಹ ಆಗುತ್ತಿಲ್ಲ. ೨೦೨೨-೨೩ನೇ ಸಾಲಿನಲ್ಲಿ ೭.೩೦ ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಕಡಲ ಮೀನು ಉತ್ಪಾದನೆ ನಮ್ಮ ಕರಾವಳಿಯಿಂದ ಆಗಿದೆ. ಕಡಲ
ಮೀನುಗಾರಿಕೆಯಲ್ಲಿ ೪೬೪೬ ಯಾಂತ್ರೀಕೃತ ದೋಣಿಗಳು, ೧೦,೯೬೧ ಮೋಟಾರೀಕೃತ ದೋಣಿಗಳು ಮತ್ತು ೮೬೫೭ ಸಾಂಪ್ರದಾಯಿಕ ದೋಣಿಗಳಿವೆ.

ಯಾಂತ್ರೀಕೃತ ಮೀನುಗಾರಿಕೆ ದೋಣಿಗಳು ರಾಜ್ಯದ ಒಟ್ಟು ಕಡಲ ಮೀನು ಉತ್ಪಾದನೆಯಲ್ಲಿ ಶೇ.೮೫ಕ್ಕಿಂತಲೂ ಹೆಚ್ಚಿನ ಪ್ರಮಾಣದ ಮೀನನ್ನು ಹಿಡಿಯುತ್ತಿವೆ. ಇಷ್ಟು ಆದಾಯ ತಂದುಕೊಂಡು ಮೀನುಗಾರಿಕೆಯ ಅಭಿವೃದ್ಧಿಯನ್ನು ಅಧಿಕಾರಿಗಳು ಮರೆತು ಬಿಟ್ಟಿದ್ದಾರೆ. ಬಂದರಿನಲ್ಲಿ ಬೋಟು ಲಂಗರು ಹಾಕಲು ಸರಿಯಾದ ವ್ಯವಸ್ಥೆಯಿಲ್ಲ. ಮೀನುಗಾರಿಕೆ ಕಡೆಗಣಿಸಿದರೆ ಸ್ಥಳೀಯ ಆರ್ಥಿಕತೆಯ ಮೇಲೆ ನೇರ ಹೊಡೆತ ಬೀಳಲಿದೆ.

ಮೀನುಗಾರು, ಮೀನುಗಾರ ಕುಟುಂಬ, ಅದನ್ನು ಅವಲಂಬಿಸಿಕೊಂಡಿರು ವಿವಿಧ ವೃತ್ತಿಗಳು ಹೀಗೆ ಈ ಸರಪಳಿ ವ್ಯವಸ್ಥೆಯಲ್ಲಿ ಎಲ್ಲರಿಗೂ ಹೊಡೆತ
ಬೀಳಲಿದೆ. ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಎಸಿ ಕೊಠಡಿಯೊಳಗೆ ಕುಳಿತು ಯೋಜನೆ ರೂಪಿಸಿದರೇ ಆಗದು, ಬಂದರುಗಳಲ್ಲಿ ದೋಣಿ ಒಳ ಬರಲು ಎಷ್ಟು ಪ್ರಮಾಣದ ಆಳ ಇರಬೇಕು ಮತ್ತು ಜಟ್ಟಿ ನಿರ್ಮಾಣ ಹೇಗಿರಬೇಕು (ನಾಡದೋಣಿ ಮತ್ತು ಬೋಟುಗಳಿಗೆ ಭಿನ್ನವಾಗಿರಬೇಕು) ಎಂಬು ದನ್ನು ಸ್ಥಳೀಯ ಮೀನುಗಾರರು, ಮೀನುಗಾರಿಕೆಯ ಬಗ್ಗೆ ಆಳ ಜ್ಞಾನ ಹೊಂದಿರುವವರಿಂದ ಮಾಹಿತಿ ಪಡೆದು ಅನುಷ್ಠಾನ ಮಾಡಬೇಕಾಗುತ್ತದೆ.

ಇಲ್ಲವಾದರೆ ನಿರ್ಮಾಣವಾದ ಕಾಮಗಾರಿ ನಿರುಪಯುಕ್ತವಾಗುತ್ತದೆ. ಈ ಎಚ್ಚರಿಕೆಯಿಂದ ಕೆಲಸ ಮಾಡಿದಾಗ ಮಾತ್ರ ಮೀನುಗಾರಿಕೆ ಇಲಾಖೆಗೆ ಹೊಸ ಚೈತನ್ಯ ತುಂಬಲು ಸಾಧ್ಯ ಮತ್ತು ನವೀನ ಆವಿಷ್ಕಾರಗಳ ಅನುಷ್ಠಾನ ತಳಮಟ್ಟದಲ್ಲಿ ಆಗಬೇಕು. ಕರ್ನಾಟಕ ಕೇವಲ ಮೀನುಗಾರಿಕೆಗೆ ಮಾತ್ರವಲ್ಲದೇ ಕರಾವಳಿ ಪ್ರವಾಸೋಧ್ಯಮ ತಾಣವಾಗಿ ಬೆಳೆಸಲು ಸರಕಾರಕ್ಕೆ ಯಥೇಚ್ಛ ಅವಕಾಶ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ ಭಾರತದ
೧೨ ಬ್ಲು -ಗ್ ಬೀಚ್‌ಗಳಲ್ಲಿ ೨ ಬೀಚ್‌ಗಳು ಅಂದರೆ ಉಡುಪಿ ಜಿಯ ಪಡುಬಿದ್ರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡ್ ಬೀಚ್ ಇದೆ ಎಂಬುದು ಕರ್ನಾಟಕಕ್ಕೆ ಸಿಕ್ಕ ಗೌರವ.

ಆದರೆ ಪ್ರವಾಸೋಧ್ಯಮಕ್ಕೆ ಸರಿಯಾದ ಮೂಲಸೌಕರ್ಯದ ಕೊರತೆ ಅತಿಯಾಗಿ ಕಂಡುಬರುವುದು ಸರಕಾರದ ಮತ್ತು ಇಲಾಖೆಯ ಹೊಣೆಗೇಡಿತನಕ್ಕೆ
ಜ್ವಲಂತ ಸಾಕ್ಷಿ.