Friday, 22nd November 2024

ದೇವರು ಮೊದಲು ಮಾರಿಷಸ್ ನ್ನು ಸೃಷ್ಟಿಸಿದ, ನಂತರ ಸ್ವರ್ಗವನ್ನು !

ಇದೇ ಅಂತರಂಗ ಸುದ್ದಿ

vbhat@me.com

ಅದ್ಯಾಕೋ ಗೊತ್ತಿಲ್ಲ, ಅರವತ್ತರಷ್ಟು ಭೂಖಂಡ ಸುತ್ತಿದರೂ, ಮಾರಿಷಸ್ ಮಾತ್ರ ಬಿಟ್ಟು ಹೋಗಿತ್ತು. ಅದಕ್ಕೆ ನಿಶ್ಚಿತ ಕಾರಣಗಳೇನೂ ಇರಲಿಲ್ಲ. ಒಂದೆರಡು
ಬಾರಿ ಹೋಗಬೇಕೆಂದು ನಿರ್ಧರಿಸಿದ್ದರೂ ಅನಿವಾರ್ಯ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಆದರೆ ಮೊನ್ನೆ ‘ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಮೀಟ್’ ನಿಮಿತ್ತ ಅಲ್ಲಿಗೆ ಹೋಗುವ ಅವಕಾಶ ಒದಗಿಬಂದಿತು. ಈ ಬಾರಿ ಮಾರಿಷಸ್‌ನಲ್ಲಿ ನಮ್ಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರಿಂದ ಅದು ಸಾಧ್ಯವಾಯಿತು.

ಮಾರಿಷಸ್ ಹಿಂದೂ ಮಹಾಸಾಗರದಲ್ಲಿರುವ ಒಂದು ಪುಟ್ಟ ದ್ವೀಪ ರಾಷ್ಟ್ರ. ಉತ್ತರದಿಂದ ದಕ್ಷಿಣಕ್ಕೆ ೬೧ ಕಿಮೀ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ೪೬ ಕಿಮೀ ವಿಸ್ತೀರ್ಣವಿರುವ ಈ ದೇಶವನ್ನು ಒಂದು ದಿನದಲ್ಲಿ ಸುತ್ತು ಹಾಕಬಹುದು. ಈ ದೇಶವನ್ನು ಹದಿನಾರು ದಿಕ್ಕುಗಳಲ್ಲೂ ಸಮುದ್ರ ಆವರಿಸಿದೆ. ಅಂದರೆ ಸುಮಾರು ೧೬೦ ಕಿಮೀ ಕರಾವಳಿ ತೀರವನ್ನು ಹೊಂದಿದೆ. ಆ ದೇಶ ಹೆಚ್ಚೆಂದರೆ ಲಂಡನ್ ನಗರದಷ್ಟು ದೊಡ್ಡದಿರಬಹುದು. ಅದರ ಭೂಭಾಗ ಕೇವಲ ೧,೮೬೫ ಚದರ ಕಿಮೀ. ಭಾರತ ಮತ್ತು ಆಫ್ರಿಕಾ ಖಂಡದ ಮಧ್ಯದಲ್ಲಿ ಕೆಳಗಿರುವ ಮಾರಿಷಸ್ ಅನ್ನು ಜಗತ್ತಿನ ನಕಾಶೆಯ ಮೇಲೆ ಹುಡುಕುವುದು ಸಹ ಕಷ್ಟ. ವಿಶ್ವ ಭೂಪಟದಲ್ಲಿ ಒಂದು ಅಕ್ಕಿ ಕಾಳಿನಷ್ಟೇ ದೊಡ್ಡದಾಗಿ ಅಥವಾ ಚಿಕ್ಕದಾಗಿ ಕಾಣುತ್ತದೆ.

ಗೂಗಲ್ ಮ್ಯಾಪಿನಲ್ಲಿ ಹಿಗ್ಗಿಸಿದರೆ ಮಾತ್ರ ಮಾರಿಷಸ್ ಕಾಣುತ್ತದೆ. ಪಕ್ಕದಲ್ಲಿ ಮಡಗಾರ್ಸ್ಕ ಇದೆ ಎಂಬುದು ಗೊತ್ತಿದ್ದರೆ ಮಾತ್ರ ಮಾರಿಷಸ್ ನ್ನು ಸುಲಭವಾಗಿ
ಹುಡುಕಬಹುದು. ಮಾರಿಷಸ್ ಗಣರಾಜ್ಯ ಪಕ್ಕಕ್ಕೆ ಹೊಂದಿಕೊಂಡಿರುವ ಪುಟ್ಟ ಪುಟ್ಟ ದ್ವೀಪಗಳಾದ ರಾಡ್ರಿಗೀಸ್, ಅಗಲೆಗ ಮತ್ತು ಸೇಂಟ್ ಬ್ರ್ಯಾಂಡನ್‌ನ್ನೂ ಒಳಗೊಂಡಿದೆ. ಸಾಮಾನ್ಯವಾಗಿ ಒಂದೇ ವಿಮಾನ ನಿಲ್ದಾಣವಿರುವ ಯಾವ ದೇಶಕ್ಕೆ ಹೋದರೂ, ರಾಜಧಾನಿಯಲ್ಲಿ ಇಳಿಯುತ್ತೇವೆ ಎಂಬ ಭಾವನೆ ಸಹಜ. ಆದರೆ ಮಾರಿಷಸ್‌ನ ರಾಜಧಾನಿ ಪೋರ್ಟ್ ಲೂಯಿಸ್ ಇರುವುದೇ ಒಂದೆಡೆ, ಶಿವಸಾಗರ ರಾಮಗುಲಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವುದೇ ಬೇರೆಡೆ.

ಆದರೆ ದೇಶ ಚಿಕ್ಕದಾಗಿರುವುದರಿಂದ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಮಾರಿಷಸ್‌ನಲ್ಲಿ ದೊಡ್ಡ ನಗರವೆಂದರೆ ಪೋರ್ಟ್ ಲೂಯಿಸ್. ಇದು ನಗರವೂ ಹೌದು, ಜಿಯೂ ಹೌದು, ದೇಶದ ರಾಜಧಾನಿಯೂ ಹೌದು. ಅದು ಹಣಕಾಸು, ರಾಜಕೀಯ ಮತ್ತು ಆಡಳಿತದ ಕೇಂದ್ರವೂ ಹೌದು. ಇಡೀ ದೇಶದಲ್ಲಿ ತಿರುಗಾಡಿದ
ಬಳಿಕ, ಅಂತೂ ಒಂದು ಮಾಲ್ ಕಣ್ಣಿಗೆ ಬಿದ್ದರೆ ಅದು ಪೋರ್ಟ್ ಲೂಯಿಸ್‌ನಲ್ಲಿ ಮಾತ್ರ. ಅಲ್ಲಿನ ಜನಸಂಖ್ಯೆ ಸುಮಾರು ಒಂದೂವರೆ ಲಕ್ಷವಿರಬಹುದು. ಅಂದ ಹಾಗೆ ಮಾರಿಷಸ್‌ನ ಜನಸಂಖ್ಯೆ ಸುಮಾರು ಹನ್ನೆರಡು ಲಕ್ಷ.

ಪೋರ್ಟ್ ಲೂಯಿಸ್‌ನ್ನು ಹೊರತುಪಡಿಸಿದರೆ, ಬೇರೆ ಊರುಗಳಲ್ಲಿ ಸಾರ್ವಜನಿಕ ಸಂಚಾರ-ಸಾರಿಗೆ ವ್ಯವಸ್ಥೆ ಇಲ್ಲವೇ ಇಲ್ಲ ಎನ್ನಬಹುದು. ಅಲ್ಲಿ ಮಾತ್ರ ಬಸ್ಸು ಮತ್ತು ರೈಲು ಸೌಕರ್ಯಗಳಿವೆ. ಬೇರೆ ಊರುಗಳಲ್ಲಿ ಸಾರ್ವಜನಿಕ ಬಸ್ಸುಗಳ ಸೇವೆಯಿಲ್ಲ. ಟ್ಯಾಕ್ಸಿ ಸೇವೆ ಸಹ ಸಮರ್ಪಕವಾಗಿಲ್ಲ. ರಾಜಧಾನಿ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳನ್ನು ಹೊರತುಪಡಿಸಿದರೆ, ಇಡೀ ದೇಶದಲ್ಲ ಸಿಂಗಲ್ ರಸ್ತೆ. ವಾಹನಗಳು ಮೈಮೈ ಸವರಿಕೊಳ್ಳುತ್ತವೋ ಅಥವಾ ಉಜ್ಜಿಕೊಳ್ಳುತ್ತವೋ ಎಂದು ಎನಿಸುವುದುಂಟು.

ಹಾಗಂತ ರಸ್ತೆಗಳು ಚೆನ್ನಾಗಿವೆ. ಅಷ್ಟು ಸುತ್ತಾಡಿದರೂ ಎಲ್ಲಿಯೂ ಹಳ್ಳ-ಗುಂಡಿಗಳು ಕಾಣಲಿಲ್ಲ. ಸುಮ್ಮನೆ ರಸ್ತೆಯಲ್ಲಿ ಸಂಚರಿಸಿದರೂ ಒಂದು ಪ್ರೇಕ್ಷಣೀಯ ಸ್ಥಳಕ್ಕೆ ಹೋದ ಅನುಭವವಾಗುತ್ತದೆ. ಒಂದೆಡೆ ಗುಡ್ಡ, ಬೆಟ್ಟ, ಕಾಡು, ಆಳೆತ್ತರ ಬೆಳೆದು ನಿಂತ ಕಬ್ಬು, ಸಪಾಟಾದ ಭೂಮಿಯ ಮೇಲೆ ಬೆಳೆದ ಚಹ ತೋಟ, ನದಿ, ಝರಿ, ಕೊಳ್ಳ, ಸರೋವರ, ಜಲಪಾತ ಮತ್ತು ಇನ್ನೊಂದೆಡೆ ನೀಲಿ ಸಮುದ್ರ ಕಿನಾರೆ. ಎಲ್ಲಿ ನೋಡಿದರೂ ಕಬ್ಬಿನ ತೋಟಗಳೇ. ದೃಷ್ಟಿ ಹಾಯಿಸಿದೆಡೆಯೆಲ್ಲಲ್ಲ ಕಣ್ಣಿಗೆ ರಾಚುವ ದಟ್ಟ ಹಸಿರು.

ಸುಮ್ಮನೆ ಒಂದೆರಡು ಗಂಟೆ ತಿರುಗಾಡಿ ಬಂದರೂ ಒಂದು ಅನೂಹ್ಯ, ಅನಿರ್ವಚನೀಯ ಅನುಭವ. ಮಾರಿಷಸ್‌ನ ಯಾವ ಪ್ರದೇಶಕ್ಕೆ ಹೋದರೂ ರಮಣೀಯ ದೃಶ್ಯಗಳನ್ನು ಬಿಟ್ಟು ಬೇರೇನನ್ನೋ ನೋಡುವುದು ಸಾಧ್ಯವೇ ಇಲ್ಲ. ಪ್ರಾಯಶಃ ಇದನ್ನು ಗಮನಿಸಿಯೇ ಮಾರ್ಕ್ ಟ್ವೈನ್, ‘ದೇವರು ಮೊದಲು ಮಾರಿಷಸ್‌ನ್ನು ಸೃಷ್ಟಿಸಿದ, ನಂತರ ಸ್ವರ್ಗವನ್ನು. ಮಾರಿಷಸ್‌ನ್ನು ನಕಲು ಮಾಡಿ, ಅದಕ್ಕೆ ಸ್ವರ್ಗ ಎಂದು ಹೆಸರಿಟ್ಟ’ ಎಂದು ಹೇಳಿದ್ದು. ಮಾರಿಷಸ್ ಸುಂದರವಾಗಿರಲು ಅದು ಹಿಂದುಳಿದಿರುವುದು ಅಥವಾ ಅಭಿವೃದ್ಧಿಯಾಗದಿರುವುದು ಸಹ ಒಂದು ಕಾರಣ.

ಯಾವ ಊರಿಗೆ ಹೋದರೂ ಅಂಗಡಿಗಳ ಸಾಲುಗಳು ಕಾಣುವುದಿಲ್ಲ, ಜನಸಂದಣಿಯಿಂದ ಗಿಜಗುಟ್ಟುವುದಿಲ್ಲ. ನಾಯಿಕೊಡೆಗಳಂತೆ ಬೆಳೆವ ಪೆಟ್ಟಿಗೆ ಅಂಗಡಿಗಳು ಕಾಣುವುದಿಲ್ಲ. ಎಡೆ ಶಾಂತ, ಸಮಾಧಾನದ ಜನಜೀವನ. ಬದುಕು ನೆಮ್ಮದಿ, ವಿಶ್ರಾಂತ ಭಾವ ಹೊದ್ದು ಬೆಚ್ಚಗೆ ಮಲಗಿದೆಯೇನೋ ಎನಿಸುವಷ್ಟು ನಿರುಮ್ಮಳ. ವಾಹನಗಳ ಭರಾಟೆ ಇಲ್ಲ. ಎಲ್ಲಿಯೂ ಹಾರ್ನ್ ಸದ್ದು ಮೊಳಗುವುದಿಲ್ಲ. ಜಗಳ, ತಪರಾಕಿ, ಹೊಯ್ – ಕೈ ಇಲ್ಲವೇ ಇಲ್ಲ. ಧಾರ್ಮಿಕ ಸಾಮರಸ್ಯ ಧಾರಾಳ. ಜನಜೀವನ ಅಲ್ಲಿನ ಬಿಳಿ ಸಮುದ್ರ ತಟ ಮತ್ತು ನೀಲಿ ಸಮುದ್ರದ ಅಲೆಗಳಂತೆ. ಒಂದು ವಾರದ ರಜಾ, ಆರಾಮಕ್ಕೆ ಹೇಳಿ ಮಾಡಿಸಿದ ತಾಣ. ಮಧುಚಂದ್ರಕ್ಕೆ ಆಪ್ತ ಪಲ್ಲಂಗ. ಜೀವಕಳೆಯ ಭರ್ಜರಿ ಸಿಂಚನ. ಸೌಂದರ್ಯವೇ ಆಭರಣ. ಹತ್ತಾರು ಕಿಮೀ ಸಂಚರಿಸಿದರೂ ಜನರಿಲ್ಲದೇ ಭಣ ಭಣ!

ಮಾರಿಷಸ್‌ನಲ್ಲಿದ್ದಷ್ಟು ಹೊತ್ತು ವಿದೇಶದಲ್ಲಿದ್ದೇವೆ, ಗೊತ್ತು-ಪರಿಚಯವಿಲ್ಲದ ಯಾವುದೋ ಅನ್ಯ ರಾಷ್ಟ್ರದಲ್ಲಿದ್ದೇವೆ ಎಂಬ ಭಾವನೆ ಮಾತ್ರ ಅಪ್ಪಿತಪ್ಪಿಯೂ ಬರುವುದೇ ಇಲ್ಲ. ಅಷ್ಟೊಂದು ಆಪ್ತ.

ಪೋರ್ಚುಗೀಸರಿಂದ ಬ್ರಿಟಿಷರ ತನಕ

ಆಡಳಿತಾತ್ಮಕ ದೃಷ್ಟಿಯಿಂದ, ಮಾರಿಷಸ್‌ನ್ನು ಒಂಬತ್ತು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಇದನ್ನು ಈಗ ಮಾಡಿದ್ದಲ್ಲ. ಮಾರಿಷಸ್‌ನ್ನು ಆಳಿದ ವಸಾಹತುಶಾಹಿಗಳ ಕಾಲದಲ್ಲಿ ವಿಂಗಡಿಸಿದ್ದು ಈಗಲೂ ಮುಂದುವರಿದುಕೊಂಡು ಬಂದಿದೆ. ಮಾರಿಷಸ್‌ನ್ನು ಹತ್ತನೇ ಶತಮಾನದ ಅಂತ್ಯದ ವೇಳೆಗೆ, ಅರಬ್ ನಾವಿಕರು ತಮ್ಮ ಹತೋಟಿಗೆ ತೆಗೆದುಕೊಂಡರು. ಆಗ ಮಾರಿಷಸ್ ನ್ನು ಅವರು ‘ದಿನಾ ಅರೋಬಿ’ ಎಂದು ಕರೆದರು. ಅಲ್ಲಿ ತನಕ ಆ ದ್ವೀಪವಿದೆ ಎಂಬುದೇ ಗೊತ್ತಿರಲಿಲ್ಲ. ೧೫೦೭ ರ ಹೊತ್ತಿಗೆ ಆ ದ್ವೀಪಕ್ಕೆ ಪೋರ್ಚುಗೀಸರು ಆಗಮಿಸಿದರು. ಹಡಗಿನಲ್ಲಿ ಸಂಚಾರ ಹೊರಟ ಅವರಿಗೆ ಆಸರೆಯಾಗಿ ಆ ದ್ವೀಪ ಕಣ್ಣಿಗೆ ಬಿತ್ತು. ಆದರೆ ಅವರು ದ್ವೀಪದ ಮೇಲೆ ನಿಯಂತ್ರಣ ಸಾಧಿಸಲು ಬಯಸಲಿಲ್ಲ. ಕಾರಣ ಇಡೀ ನಡುಗಡ್ಡೆ ಬರೀ ಕಾಡು, ಬೆಟ್ಟ, ಗುಡ್ಡಗಳಿಂದಲೇ ಆವೃತವಾಗಿತ್ತು. ಮಾರಿಷಸ್ ಗೆ ಹತ್ತಿರವಿರುವ ರಾಡ್ರಿಗೀಸ್ ದ್ವೀಪವನ್ನು ಮೊದಲು ಆಕ್ರಮಿಸಿಕೊಂಡವರೂ
ಪೋರ್ಚುಗೀಸರೇ.

೧೭೧೫ ರ ಹೊತ್ತಿಗೆ ಫ್ರೆಂಚರು ಮಾರಿಷಸ್ ಗೆ ಆಗಮಿಸಿದರು. ಅವರು ಅಕ್ಕಪಕ್ಕದ ದೇಶಗಳನ್ನು ಮತ್ತು ದ್ವೀಪಗಳನ್ನು ಆಗಲೇ ಕಬಳಿಸಿದ್ದರು. ಹೀಗಾಗಿ ಅವರಿಗೆ ಮಾರಿಷಸ್ ಮೇಲೆ ನಿಯಂತ್ರಣ ಸಾಧಿಸಲು ಕಷ್ಟವಾಗಲಿಲ್ಲ. ಅವರು ಬಂದವರೇ ಮಾರಿಷಸ್ ದ್ವೀಪವನ್ನು ‘ಐಲ್ ಡ -’ ಎಂದು ನಾಮಕರಣ ಮಾಡಿದರು. ಫ್ರೆಂಚರು ಸುಮಾರು ಎಂಬತ್ತು ಸಾವಿರಕ್ಕೂ ಅಧಿಕ ಕೂಲಿಕಾರ್ಮಿಕರನ್ನು ಹತ್ತಿರದ ಆಫ್ರಿಕಾ ದೇಶಗಳಿಂದ ಕರೆ ತಂದು ಗುಲಾಮರನ್ನಾಗಿ ಇಟ್ಟುಕೊಂಡರು. ಅವರಿಗೆ ಕೂಲಿಕಾರ್ಮಿಕರ ಅಗತ್ಯವಿತ್ತು. ಅವರ ಸಹಾಯವಿಲ್ಲದೇ ಆ ದ್ವೀಪದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾಗಿತ್ತು. ಇದರಿಂದ ದ್ವೀಪದ ಜನಸಂಖ್ಯೆ ಒಂದೇ ಸಲ ಹೆಚ್ಚಾಯಿತು. ಹದಿನೆಂಟನೇ ಶತಮಾನದ ಆರಂಭದಲ್ಲಿ ಆ ದ್ವೀಪದಲ್ಲಿ ಶೇ. ಎಂಬತ್ತರಷ್ಟು ಜನ ಆಫ್ರಿಕಾದಿಂದ ಬಂದ ಜೀತದಾಳುಗಳೇ ತುಂಬಿದ್ದರು. ೧೭೨೯ರ ಹೊತ್ತಿಗೆ ಭಾರತದ ಪಾಂಡಿಚೇರಿ ಮತ್ತು ತಮಿಳುನಾಡಿನಿಂದ ಸುಮಾರು ಐವತ್ತು ಸಾವಿರ ಮಂದಿ ಕೂಲಿ ಕೆಲಸ ಹುಡುಕಿ ದ್ವೀಪಕ್ಕೆ ಆಗಮಿಸಿದರು. ಅವರನ್ನೂ ಫ್ರೆಂಚರು ಜೀತದಾಳುಗಳಾಗಿ ಇಟ್ಟುಕೊಂಡರು. ಮರಳಿ ತಾಯ್ನಾಡಿಗೆ ಹೋಗದಂತೆ ನಿರ್ಬಂಧ ಹೇರಿದರು.

ಫ್ರೆಂಚ್ ಕ್ರಾಂತಿಯ ಸಂದರ್ಭವನ್ನು ಹೊರತುಪಡಿಸಿದರೆ, ೧೭೬೭ ರಿಂದ ೧೮೧೦ರವರೆಗೆ ಫ್ರೆಂಚ್ ಸರಕಾರ ನೇಮಕ ಮಾಡಿದ (ಫ್ರೆಂಚ್) ಅಧಿಕಾರಿಗಳೇ ದ್ವೀಪವನ್ನು ಅಕ್ಷರಶಃ ಆಳಿದರು. ೧೭೯೬ರಲ್ಲಿ ಪ್ಯಾರಿಸಿನಲ್ಲಿ ಫ್ರೆಂಚ್ ಸರಕಾರ ಗುಲಾಮಗಿರಿಯನ್ನು ನಿಷೇಧಿಸಿದಾಗ, ಅದರ ಪರಿಣಾಮ ಮಾರಿಷಸ್ ಮೇಲೂ
ಆಯಿತು. ಜೀತದಾಳುಗಳ ಮೇಲಿದ್ದ ನಿಯಂತ್ರಣ ಸಡಿಲವಾಯಿತು. ಮಾರಿಷಸ್ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದ ಬ್ರಿಟಿಷ್ ಆಡಳಿತ, ೧೮೧೦ ರ ಹೊತ್ತಿಗೆ ದ್ವೀಪದ ಮೇಲೆ ದಂಡೆತ್ತಿ ಹೋಯಿತು. ಗ್ರಾಂಡ್ ಪೋರ್ಟ್ ನಲ್ಲಿ ಫ್ರೆಂಚ್ ಮತ್ತು ಬ್ರಿಟಿಷ್ ಸೇನೆ ಮಧ್ಯೆ ಯುದ್ಧ ಸಂಭವಿಸಿತು. ಈ ಯುದ್ಧದಲ್ಲಿ ಸಮಬಲದ
ಹೋರಾಟ ನಡೆದರೂ, ಕ್ರಮೇಣ ಫ್ರೆಂಚರ ಹಿಡಿತ ದುರ್ಬಲವಾಗುತ್ತಾ ಹೋಯಿತು.

ಮೂರು ತಿಂಗಳ ಬಳಿಕ ಬ್ರಿಟಿಷರು ಫ್ರೆಂಚರನ್ನು ಅಲ್ಲಿಂದ ಓಡಿಸಲು ಯಶಸ್ವಿಯಾದರು. ಆ ಸಮಯದಲ್ಲಿ ಅವರಿಬ್ಬರ ಮಧ್ಯೆ ಒಪ್ಪಂದವಾಯಿತು. ಯಾವ ಕಾರಣಕ್ಕೂ ಅಲ್ಲಿರುವವರ ಜಮೀನುಗಳನ್ನು ಕಿತ್ತುಕೊಳ್ಳಬಾರದು, ಫ್ರೆಂಚ್ ಭಾಷಾ ಕಲಿಕೆಯನ್ನು ಮುಂದುವರಿಸಬೇಕು ಮತ್ತು ಫ್ರೆಂಚ್ ಕಾನೂನನ್ನು ಪಾಲಿಸ ಬೇಕು ಎಂಬುದು ಆ ಒಪ್ಪಂದವಾಗಿತ್ತು. ಆದರೆ ಬ್ರಿಟಿಷರು ಬಂದವರೇ ದ್ವೀಪ ರಾಷ್ಟ್ರದ ಹೆಸರನ್ನು ’ಐಲ್ ಡ -’ ಬದಲು ಮಾರಿಷಸ್ ಎಂದು ಬದಲಿಸಿದರು. ಆದರೆ ಒಪ್ಪಂದವನ್ನು ಬಹುತೇಕ ಪಾಲಿಸಿದರು. ಹೀಗಾಗಿ ಇಂದಿಗೂ ಆ ದ್ವೀಪ ರಾಷ್ಟ್ರದಲ್ಲಿ ಫ್ರೆಂಚ್ ಭಾಷೆ ಉಳಿದಿದ್ದರೆ ಆ ಒಪ್ಪಂದವೇ ಕಾರಣ.

೧೮೧೦ರಿಂದ ಬ್ರಿಟಿಷರು ಮಾರಿಷಸ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಮುಂದಿನ ನೂರಾ ಐವತ್ತು ವರ್ಷಗಳ ತನಕ ಆ ದ್ವೀಪ ದೇಶ, ಬ್ರಿಟಿಷ್ ಆಡಳಿತ ಕ್ಕೊಳಪಟ್ಟಿತ್ತು. ಬ್ರಿಟಿಷರು ಮಾರಿಷಸ್ ನ್ನು ಅಭಿವೃದ್ಧಿಪಡಿಸಲು ಬಹಳ ಪ್ರಯತ್ನಿಸಿದರು. ಆದರೆ ಅದಕ್ಕೆ ಆಧುನಿಕ ಸ್ವರೂಪ ಕೊಡದಿರಲು ತೀರ್ಮಾನಿಸಿದರು. ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಿದರು. ಜೀತ ಪದ್ಧತಿಯನ್ನು ಅವರು ಹಂತ ಹಂತವಾಗಿ ತೆಗೆಯುತ್ತಾ ಹೋದರು. ಆ ಸಮಯದಲ್ಲಿ ಭಾರತವೂ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿತ್ತು. ಇದರ ಪ್ರಯೋಜನ ಪಡೆದ ಬ್ರಿಟಿಷರು ಭಾರಿ ಪ್ರಮಾಣದಲ್ಲಿ ಭಾರತದಿಂದ ಕೂಲಿ ಕಾರ್ಮಿಕರನ್ನು ಒಪ್ಪಂದದ ಮೇಲೆ ಕರೆಯಿಸಿಕೊಂಡರು. ೧೮೩೪ ರಿಂದ ೧೯೨೧ ರ ಅವಧಿಯಲ್ಲಿ ಮಾರಿಷಸ್ ನಲ್ಲಿ ಸುಮಾರು ಐದು ಲಕ್ಷ ಒಪ್ಪಂದದ ಮೇರೆಗೆ ಕರೆದುಕೊಂಡು ಬಂದ ಕೂಲಿ ಕಾರ್ಮಿಕರಿದ್ದರು. ಇವರನ್ನು ಹೆಚ್ಚಾಗಿ ಕಬ್ಬಿನ ತೋಟಗಳಲ್ಲಿ, ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಲಾಯಿತು. ಇದರ ಜತೆಗೆ ಬ್ರಿಟಿಷರು ಸುಮಾರು ಒಂಬತ್ತು ಸಾವಿರ ಭಾರತೀಯ ಸೈನಿಕರನ್ನು ಕರೆಯಿಸಿಕೊಂಡರು.

ಇಪ್ಪತ್ತನೇ ಶತಮಾನದ ಆರಂಭದಲ್ಲಿ, ದ್ವೀಪ ರಾಷ್ಟ್ರದಲ್ಲಿ ಗಲಭೆ, ಅಶಾಂತಿ ತಲೆದೋರಲಾರಂಭಿಸಿದವು. ಕಬ್ಬಿನ ತೋಟಗಳ ಮಾಲೀಕರ ವಿರುದ್ಧ ಕಾರ್ಮಿಕರು ದಂಗೆಯೇಳಲಾರಂಭಿಸಿದರು. ಇದು ಪರೋಕ್ಷವಾಗಿ ಬ್ರಿಟಿಷ್ ಆಡಳಿತದ ವಿರುದ್ಧದ ಹೋರಾಟವಾಗಿ ಪರಿಣಮಿಸಿತು. ಸುಮಾರು ಐವತ್ತು ವರ್ಷಗಳ ಕಾಲ ಮಾರಿಷಸ್ ಈ ರೀತಿಯ ಗಲಭೆ, ಕ್ಷೋಭೆಗೆ ತುತ್ತಾಯಿತು. ೧೯೫೯ ರಲ್ಲಿ ಬ್ರಿಟಿಷ್ ಪ್ರಧಾನಿ ಹೆರಾಲ್ಡ್ ಮ್ಯಾಕ್ ಮಿಲನ್, ಬ್ರಿಟಿಷ್ ವಸಹಾತುಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ಮಹತ್ವದ ನಿರ್ಧಾರ ಘೋಷಿಸಿದ. ಪರಿಣಾಮವಾಗಿ, ೧೯೬೫ ರಲ್ಲಿ ಮಾರಿಷಸ್ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆಯಿತು. ಅದಾಗಿ ಮೂರು ವರ್ಷಗಳ ಬಳಿಕ (೧೯೬೮), ಶಿವಸಾಗರ ರಾಮಗುಲಮ್ ದೇಶದ ಪ್ರಥಮ ಪ್ರಧಾನಿಯಾದರು.

ಎರಡನೇ ಎಲಿಜಬೆತ್ ರಾಣಿ ’ಹೆಡ್ ಆಫ್ ಸ್ಟೇಟ್’ ಆಗಿ ಮುಂದುವರಿದಳು. ಸ್ವಾತಂತ್ರ್ಯ ಪಡೆದ ಇಪ್ಪತ್ನಾಲ್ಕು ವರ್ಷಗಳ ನಂತರ, ೧೯೯೨ ರಲ್ಲಿ ಮಾರಿಷಸ್ ಗಣರಾಜ್ಯವಾಯಿತು.

ಮಾರಿಷಸ್‌ನಲ್ಲಿ ಭಾಷೆ
ಪ್ರತಿಯೊಂದು ದೇಶವೂ ತನ್ನದೇ ಆದ ಅಧಿಕೃತ ಅಥವಾ ಆಡಳಿತ ಭಾಷೆಯನ್ನು ಹೊಂದಿರುವುದು ಸಹಜವಷ್ಟೇ. ಆದರೆ ಮಾರಿಷಸ್ ಸಂವಿಧಾನ ಯಾವ ಭಾಷೆಯನ್ನೂ ಅಧಿಕೃತ ಭಾಷೆ ಎಂದು ಹೆಸರಿಸಿಲ್ಲ. ಇಂಗ್ಲಿಷ್ ಸಂಸತ್ತಿನ ಅಽಕೃತ ಭಾಷೆ ಆದರೆ ಸದಸ್ಯರು ಸಭಾಧ್ಯಕ್ಷರನ್ನುದ್ದೇಶಿಸಿ, ಫ್ರೆಂಚ್ ಭಾಷೆಯಲ್ಲೂ
ಮಾತಾಡಬಹುದು ಎಂದು ಸಂವಿಧಾನದಲ್ಲಿ ಹೇಳಲಾಗಿರುವುದರಿಂದ, ಇಂಗ್ಲಿಷ್ ಮತ್ತು ಫ್ರೆಂಚ್ ಅಧಿಕೃತ ಭಾಷೆ ಎಂದು ಹೇಳಬಹುದು. ಆದರೆ ಸಂವಿಧಾನದಲ್ಲಿ ಮಾತ್ರ ಅಧಿಕೃತ ಭಾಷೆಯ ಬಗ್ಗೆ ಏನನ್ನೂ ಹೇಳಿಲ್ಲ. ಆದರೆ ಮಾರಿಷಸ್‌ನ ಸಂಪರ್ಕ ಭಾಷೆ ಅಂದ್ರೆ ಕ್ರಿಯೋಲ. (ಎರಡು ಅಥವಾ ಅದಕ್ಕಿಂತ ಹೆಚ್ಚು ಭಾಷೆಗಳ ಸಮ್ಮಿಶ್ರಣದಿಂದ ಹುಟ್ಟಿಕೊಂಡ ಸರಳ ಭಾಷೆಗೆ ಕ್ರಿಯೋಲ್ ಅಂತಾರೆ.) ಮಾರಿಷಸ್ ನ ಕ್ರಿಯೋಲ್‌ನಲ್ಲಿ ಫ್ರೆಂಚ್ ಭಾಷೆಯಿಂದ ತೆಗೆದುಕೊಂಡ ಪದಗಳೇ ಹೆಚ್ಚು. ಅದು ಇಂಗ್ಲಿಷ್, ಫ್ರೆಂಚ್ ಭಾಷೆಗಳ ಮಿಶ್ರಣ. ಜತೆಗೆ ಕೆಲವು ಅಶಿಷ್ಟ ಅಥವಾ ಗ್ರಾಮ್ಯ ಪದಗಳು ಅದರಲ್ಲಿ ಸೇರಿವೆ.

ಮಾರಿಷಸ್‌ನಲ್ಲಿ ಶೇ.೫೩ರಷ್ಟು ಜನ ಕ್ರಿಯೋಲ್ ಮಾತಾಡುತ್ತಾರೆ. ಭೋಜಪುರಿ (೩೧.೪%), ತಮಿಳು (೩.೫%), ಹಿಂದಿ (೨.೮%), ಉರ್ದು (೨.೭%) ಭಾಷೆಗಳನ್ನೂ ಮಾತಾಡುತ್ತಾರೆ. ೩% ರಷ್ಟು ಮಂದಿ ಚೀನಿ ಭಾಷೆಯನ್ನೂ ಮಾತಾಡುತ್ತಾರೆ. ಶಾಲಾ, ಕಾಲೇಜುಗಳಲ್ಲಿ ಇಂಗ್ಲಿಷ್ ಮತ್ತು ಫ್ರೆಂಚ್ ಬೋಧನಾ ಭಾಷೆ. ಸಾಮಾನ್ಯವಾಗಿ ಮಾರಿಷಸ್ ನಲ್ಲಿ ಹುಟ್ಟಿದವರು ಕನಿಷ್ಠ ನಾಲ್ಕು ಭಾಷೆಗಳನ್ನು (ಇಂಗ್ಲಿಷ್, ಫ್ರೆಂಚ್, ಕ್ರಿಯೋಲ, ತಮಿಳು ಅಥವಾ ಹಿಂದಿಯಲ್ಲಿ) ಮಾತಾಡುತ್ತಾರೆ. ಬ್ರಿಟಿಷರು ೧೮೧೦ ರಲ್ಲಿ ಮಾರಿಷಸ್ ಗೆ ಆಗಮಿಸಿದಾಗ, ದ್ವೀಪ ರಾಷ್ಟ್ರದಲ್ಲಿ ಎಲ್ಲರೂ ಫ್ರೆಂಚ್ ಭಾಷೆಯನ್ನೇ ಮಾತಾಡುತ್ತಿದ್ದರು.

ಆಗ ಬ್ರಿಟಿಷರಿಗೆ ಭಾಷೆಯೇ ತೊಡಕಾಗಿತ್ತು. ಎರಡೂಕಾಲು ಶತಮಾನ ಕಳೆದರೂ ಫ್ರೆಂಚ್ ಪ್ರಾಬಲ್ಯವನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿಲ್ಲ. ಈ ಕಾರಣದಿಂದಲೇ ಮಾರಿಷಸ್‌ನಲ್ಲಿ ಯಾವ ಭಾಷೆಯೂ ಅಧಿಕೃತ ಭಾಷಾ ಸ್ಥಾನಮಾನವನ್ನು ಗಿಟ್ಟಿಸಿಕೊಳ್ಳಲು ಸಾಧ್ಯವಾಗಿಲ್ಲ. ಆಡಳಿತ ಅಥವಾ ಸರಕಾರದಲ್ಲಿ ಇಂಗ್ಲಿಷ್‌ಗೆ
ಅಗ್ರತಾಂಬೂಲ.

ಆದರೆ ಫ್ರೆಂಚ್ ಭಾಷೆಯನ್ನು ಕಡೆಗಣಿಸುವಂತಿಲ್ಲ. ಈ ಎರಡು ಭಾಷೆಗಳಿಂದ ಹುಟ್ಟಿದ ಕ್ರಿಯೋಲ್ ಗಾಂವಟಿ ಅಥವಾ ಕಚ್ಚಾ ಭಾಷೆ. ಅದನ್ನು ಅತಿ ಹೆಚ್ಚು ಜನ ಮಾತಾಡಿದರೂ, ಅಧಿಕೃತ ಭಾಷೆ ಪಟ್ಟವನ್ನು ಕೊಡುವ ಪ್ರಶ್ನೆಯೇ ಇಲ್ಲ. ಹೀಗಾಗಿ ಇಂದಿಗೂ ಅಲ್ಲಿನ ಸರಕಾರಕ್ಕೆ ತನ್ನ ಅಧಿಕೃತ ಭಾಷೆ ಯಾವುದು ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಕಾರ್ಮಿಕರು, ಜನಸಾಮಾನ್ಯರು, ಹೊಲಗಳಲ್ಲಿ ಕೆಲಸ ಮಾಡುವ ಕೂಲಿಗಳು ಕ್ರಿಯೋಲ್ ನಲ್ಲಿ ಹೆಚ್ಚಾಗಿ ಮಾತಾಡುತ್ತಾರೆ. ಇವರೊಂದಿಗೆ ವ್ಯವಹರಿಸಲು ಸಹಾಯವಾಗಲೆಂದು ಸಮಾಜದ ಉನ್ನತ ಸ್ಥರದಲ್ಲಿರುವವರು ಸಹ ಕ್ರಿಯೋಲ್ ನಲ್ಲಿ ಮಾತಾಡುವುದುಂಟು.
ಇಂಗ್ಲಿಷ್ ಮತ್ತು ಫ್ರೆಂಚ್ ಕಲಿಯುವುದಕ್ಕಿಂತ ಕ್ರಿಯೋಲ್ ಕಲಿಯುವುದು ಸುಲಭ.

ಹೀಗಾಗಿ ಈ ಭಾಷೆಯನ್ನೂ ಮಾತಾಡುವವರ ಸಂಖ್ಯೆ ಹೆಚ್ಚು. ಸಭೆ-ಸಮಾರಂಭ ಅಥವಾ ಪಾರ್ಟಿಗಳಲ್ಲಿ ಯಾರೂ ಕ್ರಿಯೋಲ್ ಮಾತಾಡುವುದಿಲ್ಲ ಅಥವಾ ಅದನ್ನು ಮಾತಾಡಲು ಹಿಂದೇಟು ಹಾಕುತ್ತಾರೆ. ಅದನ್ನು ಮಾತಾಡಿದರೆ ತಮ್ಮ ಸ್ಥಾನಮಾನಕ್ಕೆ ಧಕ್ಕೆ ಎಂದು ಭಾವಿಸುವವರೂ ಇದ್ದಾರೆ. ಅದನ್ನು ಎರಡನೇ ದರ್ಜೆ ಭಾಷೆ, ಸಮಾಜದ ಕೆಳಸ್ಥರದವರ ಭಾಷೆ ಎಂದು ಪರಿಗಣಿಸುವವರೂ ಇದ್ದಾರೆ. ಶಾಲೆ-ಹೈಸ್ಕೂಲುಗಳಲ್ಲಿ ಯಾರೂ ಕ್ರಿಯೋಲ್ ಮಾತಾಡುವುದಿಲ್ಲ. ಆದರೆ ಟೀಚರುಗಳು ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳನ್ನು ಮಕ್ಕಳಿಗೆ ಸುಲಭವಾಗಿ ಮನದಟ್ಟು ಮಾಡಿ ಕಲಿಸುವಾಗ ಕ್ರಿಯೋಲ್ ಬಳಸುವುದುಂಟು.

ಇಂದಿಗೂ ಅಂಗಡಿಗಳ ಫಲಕಗಳು ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿರುವುದನ್ನು ಕಾಣಬಹುದು. ಅಲ್ಲಲ್ಲಿ ಹಿಂದಿ ಫಲಕಗಳೂ ಕಾಣುತ್ತವೆ. ಪ್ರವಾಸಿಗರು ಅಥವಾ ಹೊರಗಿನಿಂದ ಬಂದವರು ಯಾವ ಭಾಷೆಯಲ್ಲಿ ಮಾತಾಡುತ್ತಾರೆ ಎಂಬುದನ್ನು ಆಧರಿಸಿ ಮಾರಿಷಸ್ ಜನ ಆ ಭಾಷೆಯಲ್ಲಿ ಮಾತಾಡುತ್ತಾರೆ. ನಮ್ಮ ಭಾಷೆಯೇ ಅವರ ಭಾಷೆ. ನಮಗೆ ಬರುವ ಹರುಕು-ಮುರುಕು ಭಾಷೆಯಲ್ಲಿ ಮಾತಾಡಿದರೂ ತಪ್ಪು ಭಾವಿಸುವುದಿಲ್ಲ. ಫ್ರೆಂಚ್ ಭಾಷೆಯಲ್ಲಿ ಮಾತಾಡಲು ಕಷ್ಟ ಪಡುತ್ತಿದ್ದಾರೆ ಎಂಬುದು ಗೊತ್ತಾದರೂ ಅವರೇ ಸಾವರಿಸಿಕೊಂಡು ಮಾತಾಡುತ್ತಾರೆ.