ಅಭಿಮತ
ಮಲ್ಹಾರ ರಾವ್
ಇನ್ನೂ ಸರಿಯಾಗಿ ಮೀಸೆ ಬಂದಿರುವುದಿಲ್ಲ. ಆ ಹುಡುಗನಿಗೆ ಮನೆಯಲ್ಲಿ ಎಲ್ಲರೂ ಮುದ್ದು ಮಾಡುವವರೇ. ಅಪ್ಪನ ಕಳುವಿನಿಂದ ಅಮ್ಮನ ಹತ್ತಿರ, ಅಮ್ಮನಿಗೆ ಯಾಮಾರಿಸಿ ಅಪ್ಪನ ಹತ್ತಿರ. ಅಜ್ಜ, ಅಣ್ಣ ಹೀಗೆ ಎಲ್ಲರ ಹತ್ತಿರ ಹಣ ಇಸಿದುಕೊಂಡ ಆ ಹುಡುಗ. ಸ್ವಲ್ಪ ದಿನಗಳಲ್ಲಿಯೇ ಮಾದಕ ವಸ್ತುಗಳ ದಾಸನಾಗುತ್ತಾನೆ. ಹಾಗಂತ ಎಲ್ಲ ಹುಡುಗರೂ ಹಾಗೆಯೇ ಇರುತ್ತಾರೆ ಅಂತ ಅಲ್ಲ. ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಸೇವನೆ ಮಿತಿ ಮೀರುತ್ತಿದೆ.
ಸ್ವಲ್ಪ ಹಣವಂತರು, ಅದರಲ್ಲೂ ಸೆಲೆಬ್ರೆಟಿಗಳು, ಡ್ರಗ್ಸ್ ಸೇವನೆ ಮಾಡದೇ ಇದ್ದರೆ ನಾವು ಹಿಂದುಳಿದಿದ್ದೇವೆ ಎಂದೇ ತಪ್ಪು ತಪ್ಪಾಗಿ ಭಾವಿಸಿ ತಮ್ಮ ಜೀವನನ್ನು ತಾವೇ ಹಾಳು ಮಾಡಿಕೊಳ್ಳುವುದು ಕಣ್ಣ ಮುಂದೆ ನಡೆಯುವ ಅನೇಕ ಘಟನೆಗಳು ಸಾಕ್ಷಿಯಾಗುತ್ತವೆ. ೧೯೮೭ ಡಿಸೆಂಬರ್ ೭ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ ೨೬ ಅನ್ನು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರಸಾಗಾಟ ವಿರೋಧಿ ದಿನ ಎಂದು ಘೋಷಿಸಲಾಯಿತು. ವಿಶ್ವದಾದ್ಯಂತ ಈ ದುಶ್ಚಟಗಳಿಗೆ ಮಕ್ಕಳು ಮತ್ತು ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ.
ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣೆ ಕಾನೂನ ಬಾಹಿರ ಎಂದು ಗೊತ್ತಿದ್ದರೂ ಇದರ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಡ್ರಗ್ ಮಾಫಿಯಾ ಹತೋಟಿಗೆ ತರಲು ವಿಶ್ವದೆಲ್ಲೆಡೆ ಕಾನೂನು ಪ್ರಯತ್ನಗಳು ನಡೆಯುತ್ತಿವೆ. ಆದರೆ ಇದನ್ನು ಬುಡ ಸಮೇತ ಕಿತ್ತು ಹಾಕಲು ಸಾಧ್ಯವಾಗಿಲ್ಲ. ಪ್ರತಿಯೊಬ್ಬ ನಾಗರಿಕನೂ ಈ ಬಗ್ಗೆ ಜಾಗೃತಿ ಹೊಂದಿ ವಿಶ್ವವನ್ನು ಮಾದಕವಸ್ತುಗಳಿಂದ ಮುಕ್ತವಾಗಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಮಾದಕ ವ್ಯಸನ ಮುಕ್ತ
ಪ್ರಪಂಚದ ಗುರಿಯನ್ನು ಸಾಧಿಸುವಲ್ಲಿ ಕ್ರಿಯೆ ಮತ್ತು ಸಹಕಾರವನ್ನು ಬಲಪಡಿಸಲು ದಿನವನ್ನು ಆಚರಿಸಲಾಗುತ್ತದೆ ಅಷ್ಟೇ.
ಎಲ್ಲೋ ಯಾರೋ ಆ ದಿನವನ್ನು ಆಚರಿಸುತ್ತಾರೆ. ಅಲ್ಲಿಗೆ ಅದು ಮುಗಿಯುತ್ತದೆ ಮರುದಿನದಿಂದ ಮತ್ತೆ ನಶೆ ಏರುತ್ತದೆ-ಮಿತಿ ಮೀರುತ್ತದೆ. ಡ್ರಗ್ ಸೇವಿಸುವ ನಾಲ್ಕು ಜನರಲ್ಲಿ ಒಬ್ಬರು ಸಾವಿಗೀಡಾಗುತ್ತಿದ್ದರೆ, ಶೇ.೭೦ರಷ್ಟು ಜನರು ಮಾನಸಿಕ ಖಿನ್ನತೆಗೆ ಗುರಿಯಾಗುತ್ತಿದ್ದಾರೆ ಎಂದು ಅಧ್ಯಯನಗಳು
ಹೇಳುತ್ತವೆ. ಸಾಕಷ್ಟು ಯುವ ಜನರು ಈ ಡ್ರಗ್ಸ್ ಎಂಬ ವ್ಯಸನಕ್ಕೆ ದಾಸರಾಗುತ್ತಾ ಹೋಗುತ್ತಿದ್ದಾರೆ. ಇದರಿಂದ ಅವರ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಹದಗೆಡುತ್ತಾ ಹೋಗುತ್ತದೆ. ಕ್ರಮೇಣ ಅವರು ಮಾನಸಿಕ ಖಿನ್ನತೆಗೂ ಒಳಗಾಗುತ್ತಾರೆ. ಕೆಲವೊಮ್ಮೆ ಡ್ರಗ್ ಸೇವನೆ ಕ್ಯಾನ್ಸರ್, ಸ್ಟ್ರೋಕ್, ಹೃದಯಾಘಾತ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗೆ ಕಾರಣವಾದರೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಇದರಿಂದ ಹೊರ ಬರುವ ಮಾರ್ಗ ಅತ್ಯಂತ ಕಠಿಣ. ಆದರೆ, ಪರಿಸ್ಥಿತಿ ಕೈ ಮೀರುವ ಮುನ್ನ ಈ ಸಮಸ್ಯೆಯಿಂದ ಹೊರಬರುವ ಮನಸ್ಸು ಮಾಡಿದರೆ, ಖಂಡಿತ ಡ್ರಗ್ಸ್ ವ್ಯಸನದಿಂದ ಮುಕ್ತವಾಗಬಹುದು.
ಯುವಕರು ತಮ್ಮ ಅರಿವಿನಲ್ಲಿ ಅಥವಾ ಅರಿವಿಲ್ಲದೆ, ಅದರಲ್ಲಿಯು ಹೆಚ್ಚಾಗಿ ಶ್ರೀಮಂತ ಕುಟುಂಬದ ಯುವಕರು ಮಾದಕ ದ್ರವ್ಯಗಳು ಮತ್ತು ಸೈಕೋ ಟ್ರೋಪಿಕ್ ಪದಾರ್ಥಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ ಇದನ್ನು ವ್ಯಸನ ಎಂದು ಕರೆಯುತ್ತಾರೆ. ಮನುಷ್ಯನಿಗೆ ಬದುಕಲು ಆಹಾರ ಹೇಗೆ ಅನಿವಾರ್ಯ ವೋ ಚಟಕ್ಕೆ ಬಲಿಯಾಗಿರುವಂತಹ ಯುವಕರಿಗೆ ಆಹಾರದಷ್ಟೇ ಪ್ರಧಾನವಾಗಿರುತ್ತದೆ. ಮಾದಕ ದ್ರವ್ಯಗಳ ಸೇವನೆ ಈ ದಿನ ಕಾಲದಲ್ಲಿ ಹುಟ್ಟಿದ್ದಲ್ಲ, ಹಿಂದಿನ ಕಾಲದಿಂದಲು ವಿಧ ವಿಧ ರೂಪದಲ್ಲಿ ಸೇವಿಸುಕೊಂಡು ಬಂದಿದ್ದಾರೆ. ಈ ದಿನಗಳಲ್ಲಿ ಹಲವು ಹೆಸರಿನಲ್ಲಿ ಇದನ್ನು ಮಾರ್ಫಿನ್, ಕೊಕೇನ್, ಎಲ್ ಎಸ್‌ಡಿ, ಎಂಡಿಎಂ ಇನ್ನೂ ಹಲವು ಹೆಸರುಗಳಲ್ಲಿ ಕರೆಯಲ್ಪಟ್ಟಿದೆ ಮತ್ತು ಇವುಗಳನ್ನು ಯುವಕರು ಹೆಚ್ಚಾಗಿ ಸೇವಿಸುತ್ತಾರೆ. ಈ ಮಾದಕ ದ್ರವ್ಯಗಳು ಹೆಚ್ಚಾಗಿ ಸೇವಿಸುವ ರಾಷ್ಟ್ರಗಳು ಅಫ್ಘಾನಿಸ್ತಾನ್, ಇರಾನ್, ರಷ್ಯಾ, ಮಾಲ್ಕಿನ್ಸ್ ಮತ್ತು ಅನೇಕ ರಾಷ್ಟ್ರಗಳಲ್ಲಿ ಕಂಡುಬರುತ್ತಿದ್ದು ಇದೀಗ ಭಾರತದಲ್ಲಿಯೂ ಅಧಿಕವಾಗುತ್ತಿದೆ.
ಮಾದಕ ದ್ರವ್ಯಗಳ ಸೇವೆಯ ನಿಯಂತ್ರಣಕ್ಕಾಗಿ ಕಠಿಣ ಕ್ರಮ ಕೈಗೊಳ್ಳಲು ಭಾರತವು ೧೯೬೧ ರ ನಾರ್ಕೋಟಿಕ್ಸ್ ಡ್ರಗ್ಸ್ ಮೇಲಿನ ಯುಎನ್ ಏಕ ಸಮಾವೇಶ, ೧೯೭೧ ರ ಸೈಕೋಟ್ರೋಪಿಕ್ ಪದಾರ್ಥಗಳ ಸಮಾವೇಶ ಮತ್ತು ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ವಸ್ತುಗಳ ಅಕ್ರಮ ಸಾಗಣೆಯ ಸಮಾವೇಶ, ೧೯೮೮ ಗೆ ಸಹಿ ಹಾಕಿದೆ. ಇದು ವಿವಿಧ ರೀತಿಯ ನಿಯಂತ್ರಣದ ಉದ್ದೇಶವನ್ನು ಸಾಧಿಸಲು ಸೂಚಿಸಿದೆ. ವೈದ್ಯಕೀಯ ಮತ್ತು ವೈಜ್ಞಾನಿಕ ಉದ್ದೇಶಗಳಿಗಾಗಿ ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ವಸ್ತುಗಳ ಬಳಕೆ ಮತ್ತು ಅದರ ದುರುಪಯೋಗವನ್ನು ತಡೆಗಟ್ಟುವುದು ಮತ್ತು ಸೈಕೋಟ್ರೋಪಿಕ್ ಸಬೈನ್ಸಸ್ ಆಕ್ಟ್, ೧೯೮೫ ಮಾದಕವಸ್ತು ಅಪರಾಧಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಕಠಿಣವಾದ ದಂಡವನ್ನು ಸೂಚಿಸುತ್ತದೆ.
ಅದರಂತೆ ಭಾರತ ದೇಶದಲ್ಲಿಯು ಕೂಡ ಅನೇಕ ಕಾನೂನುಗಳನ್ನು ಜಾರಿಗೊಡಿಸಲಾಗಿದೆ ಅದರಲ್ಲಿ ಪ್ರಮುಖವಾಗಿ ನಾರ್ಕೋಟಿಕ್ ಡ್ರಗ್ಸ್ ಮತ್ತು
ಸೈಕೋಟ್ರೋಪಿಕ್ ಪದಾರ್ಥಗಳ ಖಾಯಿದೆ, ೧೯೮೫ ಜಾರಿಗೊಳಿಸಲಾಗಿದೆ.
ಅದರಂತೆ, ಅಪರಾಧಿಗಳನ್ನು ತೀವವಾಗಿ ದಂಡನೆ ಒಳಪಡಿಸಲಾಗಿದೆ. ಈ ಸಮಸ್ಯೆಯು ಪ್ರಪಂಚದಾದ್ಯಂತ ಇರುವುದರಿಂದ ಎಲ್ಲಾ ದೇಶಗಳು ಒಟ್ಟು ಗೂಡಿ ಯುವಜನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಮಾನವ ಸಮಾಜವು ಕೂಡ ಒಗ್ಗಟ್ಟಿನಲ್ಲಿ ಈ ಮಾದಕ ದ್ರವ್ಯ ವ್ಯಸನಕ್ಕೆ ಯುವಜನತೆ ಭಾಗಿಯಾಗದಂತೆ ಒಗ್ಗಟ್ಟಿನಲ್ಲಿ ಈ ಪಿಡುಗನ್ನು ನಿರ್ಮುಲನೆ ಮಾಡಲು ಮತ್ತು ವೆಸನಕ್ಕೆ ಒಳಗಾಗಿದವರನ್ನು ಅದರಿಂದ ಹೊರತರಲು, ಒಮ್ಮತದಿಂದ ಇಡೀ ಮನವ ಸಮಾಜ ಒಗ್ಗಟ್ಟಿನಲ್ಲಿ ಕೆಲಸಮಾಡಬೇಕಾಗಿದೆ.
ಯುವಜನತೆಯು ದೇಶದ ಆಸ್ತಿಯಾಗಿದ್ದರಿಂದ ಯುವಜನತೆಯ ಷೋಷಕರು ತಮ್ಮ ಮಕ್ಕಳನ್ನು ಈ ದುಷ್ಟಚಟಗಳಿಂದ ದೂರ ಇಡಿಸಲು ಸಾಕಷ್ಟು
ಮುಂಜಾಗೃತೆವಹಿಸಬೇಕು ಮತ್ತು ಮಾದಕ ವಸ್ತುಗಳನ್ನು ಸೇವಿಸುವ ಮತ್ತು ಮಾರಾಟ ಮಾಡುವ ಸ್ಥಳ ಗೊತ್ತಿದ್ದಲ್ಲಿ ಸಂಬಂಧ ಪಟ್ಟ ಪೋಲಿಸ್ ಇಲಾಖೆಯ, ನಾರ್ಕೋಟಿಕ್ ಡ್ರಗ್ಸ್ ನಿಯಂತ್ರಣ ವಿಭಾಗಕ್ಕೆ ತಕ್ಷಣವೇ ತಿಳಿಸಿ ನಮ್ಮ ಸಮಾಜವನ್ನು ಕಾಪಡಬೇಕು.
(ಲೇಖಕರು: ಹೆಚ್ಚುವರಿ ಅಡ್ವೋಕೇಟ್ ಜನರಲ್)