Sunday, 15th December 2024

ದೇವಾಲಯ ಭದ್ರತೆಯ ಪ್ರಶ್ನೆಯೆತ್ತಿದ ಕೀಲಿಕೈ

ಅಭಿಮತ

ಶಶಿಕುಮಾರ್‌ ಕೆ.

ನಮ್ಮ ನೆರೆಯ ರಾಜ್ಯವಾದ ಒರಿಸ್ಸಾದಲ್ಲಿ ಒಂದು ವಿಚಿತ್ರವಾದ ಚುನಾವಣಾ ವಿಷಯ ತೆರೆಯ ಮೇಲೆ ಬಂದಿದೆ. ಒಂದು ಬೀಗದ ಕೈ ವಿಚಾರ ಒರಿಸ್ಸಾದಲ್ಲಿ ಚುನಾವಣಾ ದಿಕ್ಕನ್ನೇ ಬದಲಾಯಿಸಿದೆ. ಸಾಮಾನ್ಯವಾಗಿ ಒರಿಸ್ಸಾ ಒಂದು ಸೈಲೆಂಟ್ ಆದಂತಹ ರಾಜ್ಯ. ಆದರೆ ಈಗ ಮಾತ್ರ ಇಡೀ ಒರಿಸ್ಸಾದ ಮತದಾರ ರೆಲ್ಲ ಒಂದು ಬೀಗದ ಕೈ ಕುರಿತು ತಲೆಕೆಡಿಸಿಕೊಂಡು ಕೂತಿzರೆ. ಈ ಬೀಗದಕೈ ವಿಚಾರಕ್ಕೆ ಈಗ ಕಾಂಗ್ರೆಸ್, ಬಿಜೆಪಿ, ಬಿಜು ಜನತಾದಳ ಪರಸ್ಪರ ಒಬ್ಬರ ನ್ನೊಬ್ಬರು ದೂಷಿಸಿಕೊಳ್ಳುತ್ತಿದ್ದಾರೆ.

ಇದೊಂದು ಸಾಧಾರಣವಾದ ಬೀಗದ ಕೀಲಿ ಅಲ್ಲ, ಇದು ಒರಿಯಾ ಪ್ರಜೆಗಳ ಆರಾಧ್ಯ ದೈವವಾದಂತಹ, ಪುರಿ ಜಗನ್ನಾಥ ಮಂದಿರಕ್ಕೆ ಸಂಬಂಧಿಸಿದ ಬೀಗದ ಕೀಲಿ. ಪುರಿ ಜಗನ್ನಾಥ ದೇವಾಲಯದಲ್ಲಿ ದೇವರಿಗೆ ಸಂಬಂಧಿಸಿದ ಬಂಗಾರದ ಆಭರಣಗಳು, ಬೆಳ್ಳಿಯ ವಸ್ತುಗಳು ಮುಂತಾದವುಗಳನ್ನು ಇಡುವಂತಹ ಒಂದು ಕೋಶಗಾರವಿದ್ದು ಅದನ್ನು ರತ್ನ ಭಂಡಾರ ಎನ್ನುವರು. ಜಗನ್ನಾಥ ಮಂದಿರವನ್ನು ಶ್ರೀಮಂದಿರ ಎನ್ನುವರು. ಇದರಲ್ಲಿನ ರತ್ನ
ಭಂಡಾರದಲ್ಲಿ ಈ ದೇವಾಲಯದ ಸಂಪತ್ತನ್ನೆಲ್ಲ ಇಡಲಾಗುತ್ತದೆ. ಇಲ್ಲಿನ ಸಂಪತ್ತಿನ ಮೌಲ್ಯ ಎಷ್ಟಿದೆ ಎಂದರೆ ೧೪೯ ಕೆಜಿಗಳಷ್ಟು ಬಂಗಾರದ ಆಭರಣ ಗಳಿದ್ದು ರತ್ನಗಳು, ವಜ್ರಗಳು, ವೈಡೂರ್ಯಗಳು ಮೊದಲಾದ ಬೆಲೆ ಬಾಳುವ ಸಂಪತ್ತು ಇಲ್ಲಿದೆ.

ಇದರ ಜೊತೆಗೆ ೨೦೮ ಕೆಜಿಗಳಷ್ಟು ದೇವರಿಗೆ ಸಂಬಂಧಿಸಿದ ಬೆಳ್ಳಿ ವಸ್ತುಗಳಿವೆ. ಈ ಭಂಡಾರಕ್ಕೆ ಭದ್ರವಾಗಿ ಬೀಗ ಹಾಕಲಾಗುತ್ತದೆ. ಈ ಬೀಗದಕೈಯನ್ನು ಸರಕಾರದ ಟ್ರೆಜರಿಯಲ್ಲಿ ಇಡಲಾಗುತ್ತದೆ. ರತ್ನಗಾರದ ಬೀಗ ತೆಗೆಯಬೇಕು ಎಂದಾಗ ದೇವಾಲಯಕ್ಕೆ ಸಂಬಂಧಿಸಿದ ಟ್ರಸ್ಟ್ ಇದ್ದು, ಆ ಟ್ರಸ್ಟ್ನಲ್ಲಿ ಪುರಿ ರಾಜನಾದಂತಹ ಗಜಪತಿ ರಾಜು, ಜೊತೆಗೆ ದೇವಾಲಯದ ಸಮಿತಿಯ ಸದಸ್ಯರು, ಸರಕಾರಿ ಅಧಿಕಾರಿಗಳ ಸಮಕ್ಷಮದಲ್ಲಿ ಈ ಬೀಗ ತೆಗೆಯಲಾಗುತ್ತದೆ.
ಪುರಿ ದೇವಾಲಯದ ನಿಯಮಗಳ ಪ್ರಕಾರ ಪುರಿ ಟೆಂಪಲ್ ರೂಲ್ಸ್ -೧೯೬೦ರ ರೀತ್ಯ ಪ್ರತಿ ಆರು ತಿಂಗಳಿಗೊಮ್ಮೆ ಎಲ್ಲಾ ಆಭರಣಗಳ ಲಿನ್ನು ನೋಡಬೇಕು. ಆಭರಣಗಳು ಸರಿಯಾಗಿ ಇವೆಯೇ ಎಂದು ನಿರ್ಧರಿಸಿದ ನಂತರ ರತ್ನ ಭಂಡಾರಕ್ಕೆ ಬೀಗ ಹಾಕಿ ಬೀಗದ ಕೀಲಿಯನ್ನು ಸರಕಾರದ ಟ್ರೆಜರಿಯಲ್ಲಿ ಇಡಲಾಗು ತ್ತದೆ. ವಿಶೇಷವಾದ ಹಬ್ಬಗಳು ನಡೆಯುವ ಸಂದರ್ಭದಲ್ಲಿ ಈ ಆಭರಣಗಳನ್ನು ಹೊರ ತೆಗೆಯಲಾಗುತ್ತದೆ.

೧೯೦೫ರಲ್ಲಿ ಒಮ್ಮೆ ಬೀಗ ತೆಗೆದಿದ್ದರು, ನಂತರ ೧೯೨೬ರಲ್ಲಿ ಆಭರಣಗಳನ್ನು ಹೊರಗಡೆ ತೆಗೆದಿದ್ದರು ಆ ನಂತರ ೧೯೭೮ರಲ್ಲಿ, ೧೯೮೪ ರಲ್ಲಿ ಕೊನೆಯ ಬಾರಿಗೆ ಆಭರಣಗಳನ್ನು ಹೊರ ತೆಗೆದಿದ್ದರು. ಆ ನಂತರ ರತ್ನ ಭಂಡಾರದ ಆಭರಣಗಳನ್ನು ಹೊರಗೆ ತೆಗೆಯಲೇ ಇಲ್ಲ. ಆರು ತಿಂಗಳಿಗೊಮ್ಮೆ ವೆರಿಫಿಕೇಷನ್ ನಡೆಯುತ್ತಿದೆಯೇ ಇಲ್ಲವೇ ಎಂಬುದು ಸಹ ಕಳೆದ ೨೦ ವರ್ಷಗಳಿಂದ ಯಾರಿಗೂ ತಿಳಿದಿಲ್ಲ. ೨೦೧೮ ಏಪ್ರಿಲ್ ೪ರಂದು ಒರಿಸ್ಸಾ ಸರಕಾರ ಈ ರತ್ನ ಭಂಡಾರದ ಬೀಗ ತೆರೆಯಲು ನಿರ್ಧರಿಸಿತು. ಹೈಕೋರ್ಟ್ ಆದೇಶದ ಮೇರೆಗೆ ಇದಕ್ಕಾಗಿ ೧೬ ಸದಸ್ಯರ ತಂಡವನ್ನು ನೇಮಿಸಲಾಗಿತ್ತು. ಆದರೆ ರತ್ನ ಭಂಡಾರ ತೆರೆಯಲು ಬೀಗದ ಕೀ ದೊರೆಯಲಿಲ್ಲ. ಬೀಗದ ಕೀ ಇಲ್ಲವೆಂದು ಸರಕಾರ ಘೋಷಿಸಿತು.

ಆಗ ರತ್ನ ಭಂಡಾರದ ಗ್ರಿಲ್ಸ ಒಳಗಡೆ ಆಭರಣಗಳು ಇವೆಯೇ ಇಲ್ಲವೇ ಎಂದು ನೋಡಿ ಅಲ್ಲಿಂದ ಹೊರ ಬಂದರು. ಕಳೆದ ಆರು ವರ್ಷಗಳಿಂದಲೂ ಜಗನ್ನಾಥ ಮಂದಿರದ ರತ್ನ ಭಂಡಾರದ ಕೀಲಿಕೈ ದೊರೆಯಲಿಲ್ಲ. ಸರಕಾರ ಇದನ್ನು ಹುಡುಕಲಿಲ್ಲ. ಇದರಿಂದ ಭಕ್ತರು ಹೈಕೋರ್ಟ್ ಮೊರೆ ಹೋದರು. ಹೈಕೋರ್ಟ್ ಕಳೆದು ಹೋದ ಬೀಗದಕೈ ಕುರಿತು ತನಿಖೆ ನಡೆಸಿ ಪತ್ತೆ ಹಚ್ಚಲು ರಘುವರ ದಾಸ್, ಜಸ್ಟೀಸ್ ಹರಿಚಿತ್ ಪಸಾಯತ್ ನೇತೃತ್ವದಲ್ಲಿ ಎರಡು ಕಮಿಟಿಗಳನ್ನು ನೇಮಿಸಿತು. ಆದರೆ ಈ ನ್ಯಾಯಾಂಗ ತನಿಖಾ ಸಮಿತಿಗಳು ನೀಡಿದಂತಹ ವರದಿಗಳನ್ನು ಸರಕಾರ ಬಹಿರಂಗಪಡಿಸಲೇ ಇಲ್ಲ.

ಈ ಬಾರಿಯ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪುರಿ ಜಗನ್ನಾಥ ಮಂದಿರದ ರತ್ನ ಭಂಡಾರದ ಕೀಲಿ ಕೈ ವಿಚಾರ ತೆರೆಗೆ ಬಂದಿದೆ. ಈ ಬೀಗದ ಕೈ ಕುರಿತು ಒರಿಸ್ಸಾ ಸರಕಾರದ ಬಳಿ ಯಾವುದೇ ಉತ್ತರವಿಲ್ಲ, ವಿವರಣೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಒರಿಸ್ಸಾದಲ್ಲಿ ಈ ಬೀಗದ ಕೈ ಕುರಿತು ಪ್ರಸ್ತಾಪಿಸಿದರು. ಅಲ್ಲದೆ ಒರಿಸ್ಸಾದ ದಿನಪತ್ರಿಕೆಗಳ ಮುಖಪುಟದಲ್ಲಿ ಬಿಜೆಪಿಯು ದೊಡ್ಡದಾದ ಬಾಗಿಲ ಫೋಟೋ ಹಾಕಿ ಅದರ ಮುಂಭಾಗದಲ್ಲಿ ಕಮಲದ ಚಿತ್ರದ ಕೆಳಗೆ ಕೀಲಿಕೈ ಒಂದನ್ನು ಹಾಕಿ ಒರಿಸ್ಸಾದ ಅಭಿವೃದ್ಧಿಯ ಕೀಲಿಕೈ ನಮ್ಮ ಬಳಿ ಇದೆ ಎಂದು ಜಾಹೀರಾತು ಹಾಕಿತ್ತು.

ಕಾಂಗ್ರೆಸ್ ಕೂಡ ಈ ರತ್ನ ಭಂಡಾರದ ಬೀಗದ ಕುರಿತು ಮಾತನಾಡುತ್ತಿದೆ. ಬಿಜೆಡಿ ಸರಕಾರ ಕೂಡ ಬೀಗದ ಕೀಲಿ ನಮ್ಮ ಬಳಿ ಇಲ್ಲ ಎಂದು ಸಮಜಾಯಿಸಿ ನೀಡುತ್ತಿದೆ. ಒಟ್ಟಾರೆ ಒರಿಸ್ಸಾದ ರಾಜಕೀಯವೆಲ್ಲ ಈ ಬಾರಿಯ ರತ್ನ ಭಂಡಾರದ ಕೀಲಿಕೈ ಸುತ್ತಾ ಸುತ್ತುತ್ತಿದೆ. ಅಲ್ಲದೆ ಈ ಪ್ರಕರಣ ಮತ್ತೊಂದು ರೀತಿಯ ಪ್ರಶ್ನೆಯನ್ನು ಹುಟ್ಟು ಹಾಕುತ್ತಿದೆ. ಸರಕಾರದ ಬಳಿ ಇರುವ ದೇವಾಲಯದ ಆಸ್ತಿಗಳಿಗೆ ಸರಿಯಾದ ಭದ್ರತೆ ಇದೆಯೇ? ಸೆಕ್ಯುಲರಿಸಂ ಮತ್ತಿನಲ್ಲಿ ಇರುವಂತಹ ಸರಕಾರಗಳು ದೇವಾಲಯದ ಆಸ್ತಿಗಳನ್ನು ಕಾಪಾಡುವ ವಿಷಯದಲ್ಲಿ ಏತಕ್ಕಾಗಿ ನಿರ್ಲಕ್ಷ ಮಾಡುತ್ತಿವೆ.

ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿ ಆಗಿzಗ ತಿರುಪತಿಯಲ್ಲಿ ದೇವರ ಚಿನ್ನದ ಕಿರೀಟ ಕಳ್ಳತನವಾಗಿದೆ ಎಂಬ ವಿಷಯ ಬೆಳಕಿಗೆ ಬಂದಿತ್ತು. ಕೊನೆಗೆ ವಿಜಯವಾಡದಿಂದ ಬಂಗಾರದ ಕಿರೀಟವೆಂದು ನಕಲಿ ಕಿರೀಟವನ್ನು ತೆಗೆದುಕೊಂಡು ಇಟ್ಟಿzರೆಂದು ಆಗ ಸುದ್ದಿ ಬಂದಿತ್ತು. ದೇವರಿಗೆ ಭಕ್ತರು ಶ್ರದ್ಧೆಯಿಂದ, ಭಕ್ತಿಯಿಂದ ನೀಡಿರುವಂತಹ ಆಭರಣಗಳ ವಿಷಯದಲ್ಲಿ ಹಲವು ಸರಕಾರಗಳು ನಿರ್ಲಕ್ಷ ವಹಿಸುತ್ತಿವೆ. ದೇವಾಲಯದ ಆಸ್ತಿಗಳನ್ನು ರಕ್ಷಿಸುವ ಜವಾಬ್ದಾರಿ ಸರಕಾರ ತೆಗೆದುಕೊಂಡ ನಂತರ ಅವುಗಳನ್ನು ಕಾಪಾಡುವ ವಿಷಯದಲ್ಲೂ ಸರಕಾರವನ್ನೇ ಪ್ರಶ್ನಿಸಬೇಕು. ಒಂದು ವೇಳೆ ಖಾಸಗಿ ವ್ಯಕ್ತಿಗಳ ಅಽನದಲ್ಲಿ ದೇವಾಲಯವಿದ್ದರೆ ಆಗ ಅವರನ್ನೇ ಪ್ರಶ್ನಿಸಬಹುದಿತ್ತು.

ಆದರೆ ಸರಕಾರವೇ ಕಳೆದ ಆರು ವರ್ಷಗಳಿಂದ ದೇವಾಲಯದ ಕೀಲಿ ದೊರೆಯುತ್ತಿಲ್ಲ ಎನ್ನುತ್ತಿದ್ದರೆ, ಇದರ ಜವಾಬ್ದಾರಿ ಹೊರುವವರು ಯಾರು? ಭಾರತದಾದ್ಯಂತ ಇರುವ ದೇವಾಲಯಗಳ ವಿಷಯದಲ್ಲೂ ಇದೇ ನಿರ್ಲಕ್ಷ ಇರುವುದು ದುರದೃಷ್ಟಕರ. ಪುಣ್ಯ ಎಂಬಂತೆ ದೇವಾಲಯದ ಆಸ್ತಿಯ ವಿಷಯ ಚುನಾವಣಾ ವಿಷಯವಾಗಿದ್ದು ಮುಂದೆ ಏನು ನಡೆಯುತ್ತದೆ ಎಂಬುದನ್ನು ನೋಡಬೇಕು. ಆದರೆ ದೇಶದಾದ್ಯಂತ ಇದೇ ರೀತಿಯ ಸಮಸ್ಯೆ
ಇದ್ದು ಮುಜರಾಯಿ ಇಲಾಖೆ, ದೇವಾಲಯದ ಕೀಲಿಗಳನ್ನು ತಮ್ಮ ಬಳಿ ಇಟ್ಟುಕೊಂಡು ದೇವಾಲಯಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಿರುವುದು ವಿಶಾದದ ಸಂಗತಿ.