ತುಮಕೂರು : ಜೂನ್ 7 ರಿಂದ ಮುಂದಿನ ಮೂರು ತಿಂಗಳು ಆರೋಗ್ಯ ತುಮಕೂರು ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಏಕ ಕಾಲಕ್ಕೆ ಎಲ್ಲಾ ತಾಲ್ಲೂಕುಗಳಲ್ಲೂ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಾರ್ಯನಿರ್ವಾಹ ಅಧಿಕಾರಿಗಳು, ತಾಲ್ಲೂಕು ಆರೋಗ್ಯ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 30 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೂ ಅಭಿಯಾನದಡಿ ತಪಾಸಣೆ ಮತ್ತ ಚಿಕಿತ್ಸೆ ನೀಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಮನೆ ಮನೆಗಳಿಗೆ ತೆರಳಿ ತಪಾಸಣೆ ಮಾಡಿ ಸಂಬಂಧಿಸಿದ ಖಾಯಿಲೆಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದರು.
ಈ ಅಭಿಯಾನಕ್ಕೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಹಕಾರ ಬಹಳ ಮುಖ್ಯವಾಗಿದೆ. ಅಭಿಯಾನದ ಭಾಗವಾಗಿ ಜಾಥಾ ಕಾರ್ಯಕ್ರಮ ವನ್ನು ಹಮ್ಮಿಕೊಂಡು ಜನರಿಗೆ ಆರೋಗ್ಯ ತುಮಕೂರು ಅಭಿಯಾನದಡಿ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಬೇಕು ಎಂದರು.
17 ಲಕ್ಷ ಜನ 30 ವರ್ಷ ಮೇಲ್ಪಟ್ಟ ನಾಗರೀಕರು ಜಿಲ್ಲೆಯಲ್ಲಿದ್ದು, ಈ ಎಲ್ಲರಿಗೂ ರಕ್ತದೊತ್ತಡ, ಮಧುಮೇಹ, ಟಿಬಿ, ರಕ್ತ ಹೀನತೆ ಸೇರಿದಂತೆ ಹಲವು ಖಾಯಿಲೆಗಳಿಗೆ ತಂಡಗಳನ್ನ ರಚಿಸಿಕೊಂಡು ಚಿಕಿತ್ಸೆ ನೀಡಲಾಗುವುದು ಎಂದರು.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ 5 ಲಕ್ಷದವರೆಗೆ ಚಿಕಿತ್ಸಾ ಸೌಲಭ್ಯವನ್ನು ನೀಡಲಾಗಿದೆ. ಆದ್ದರಿಂದ ಅವಶ್ಯಕತೆ ಇರುವ ಎಲ್ಲರಿಗೂ ಈ ಯೋಜನೆಯ ಸೌಲಭ್ಯ ಸಿಗುವಂತೆ ಮಾಡಬೇಕು ಎಂದರು. ಜನರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಕಟ ಯೋಜನೆಯ ಬಗ್ಗೆ ಮಾಹಿತಿ ಸಿಗುವ ಫಲಕಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಕಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಮಂಜುನಾಥ್ ಸೇರಿಂದತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.