ಕನ್ಯಾಕುಮಾರಿ: ಸುಮಾರು 200 ಚುನಾವಣಾ ರ್‍ಯಾಲಿಗಳು ಮತ್ತು ರೋಡ್ ಶೋಗಳನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕೊನೆಯ ಹಂತದ ಚುನಾವಣೆಗೂ ಮುನ್ನ ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಎರಡು ದಿನಗಳ ಕಾಲ ಧ್ಯಾನ ಮಾಡಲಿದ್ದಾರೆ.
ಇದಕ್ಕಾಗಿ ಗುರುವಾರದಿಂದ ಸುಮಾರು 45 ಗಂಟೆಗಳ ಕಾಲ ಮೋದಿ ಅವರು ಕನ್ಯಾಕುಮಾರಿಯಲ್ಲಿ ಇರಲಿದ್ದು ಭಾರೀ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಸ್ಥಳದಲ್ಲಿ ಸುಮಾರು 2,000 ಪೊಲೀಸರ ಹೊರತಾಗಿ ವಿವಿಧ ಭದ್ರತಾ ಏಜೆನ್ಸಿಗಳು ಕಟ್ಟುನಿಟ್ಟಿನ ನಿಗಾ ವಹಿಸಲಿವೆ. ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕಾಪಡೆಯು ಕಡಲ ಗಡಿಗಳಲ್ಲಿ ಕಣ್ಗಾವಲು ನಡೆಸಲಿದೆ. 2019ರಲ್ಲಿ ಚುನಾವಣಾ ಪ್ರಚಾರ ಮುಗಿದ ಬಳಿಕ ಪ್ರಧಾನಿ ಮೋದಿ ಕೇದಾರನಾಥ ಗುಹೆಯಲ್ಲಿ ಧ್ಯಾನ ಮಾಡಿದ್ದರು. ಈಗ ಕನ್ಯಾಕುಮಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪ್ರಧಾನಿಯವರ ಆಧ್ಯಾತ್ಮಿಕ ವಾಸ್ತವ್ಯದ ವಿರುದ್ಧ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದೆ.
ಕನ್ಯಾಕುಮಾರಿಯ ಕಡಲತೀರಗಳು ಗುರುವಾರದಿಂದ ಶನಿವಾರದವರೆಗೆ ಪ್ರವಾಸಿಗರಿಗೆ ಮುಚ್ಚಲ್ಪಡುತ್ತವೆ. ಖಾಸಗಿ ದೋಣಿಗಳನ್ನು ಸಹ ಓಡಿಸಲು ಅನುಮತಿಸಲಾಗುವುದಿಲ್ಲ.
ಚುನಾವಣಾ ಕಾನೂನಿನ ಪ್ರಕಾರ, ಚುನಾವಣಾ ಸಮಯದಲ್ಲಿ ಪ್ರಧಾನಿ ಧ್ಯಾನ ಯಾತ್ರೆ ಕೈಗೊಳ್ಳುವುದಕ್ಕೆ ಯಾವುದೇ ನಿಷೇಧವಿಲ್ಲ ಎಂದು ಮೂಲಗಳು ಬುಧವಾರ ತಿಳಿಸಿವೆ.
ಮೇ 30 ರ ಸಂಜೆಯಿಂದ ಜೂನ್ 1 ರ ಸಂಜೆಯವರೆಗೆ ಮೋದಿ ಧ್ಯಾನ ಮಂಟಪದಲ್ಲಿ ಧ್ಯಾನ ಮಾಡಲಿದ್ದಾರೆ.