ಅಭಿಮತ
ಮೋಹನದಾಸ ಕಿಣಿ
ಪ್ರಧಾನಿ ಮೋದಿಯವರು ದುಡಿದು ಸಂಪಾದಿಸುವ ಮನಸ್ಸಿದ್ದರೆ ಪಕೋಡಾ ಮಾರಾಟದಿಂದಲೂ ಲಕ್ಷಾಂತರ ರುಪಾಯಿ ಸಂಪಾದಿಸಬಹುದು ಎಂದು ಮಾತಿನ ಓಘದಲ್ಲಿ ಹೇಳಿದ್ದರು. ಅಷ್ಟಕ್ಕೇ ವಿಪಕ್ಷದ ನಾಯಕರೆಲ್ಲರೂ ಇನ್ನಿಲ್ಲದ ಗದ್ದಲವೆಬ್ಬಿಸಿದ್ದು ಹಳೆಯ ಕತೆ. ಆದರೆ, ಹೀಗೆ ಹೇಳುವ ಮೂಲಕ ಪದವಿ, ತಾಂತ್ರಿಕ ಪದವಿ ಪಡೆದವರು ಬೀದಿ ಬದಿಯಲ್ಲಿ ಪಕೋಡ ಮಾರಬೇಕೇ ಎಂಬ ವಾದವನ್ನು ಮುಂದಿಟ್ಟು ಬೀದಿ ಬದಿಯ ವ್ಯಾಪಾರಿಗಳನ್ನು
ಪರೋಕ್ಷವಾಗಿ ಅವಮಾನಿಸಿದರೆಂದರೆ ತಪ್ಪಾಗಲಾರದು.
ಒಂದು ಚಿಕ್ಕ ಉದಾಹರಣೆ ನೋಡಿ: ಓರ್ವ ವರದಿಗಾರನ ಎದುರು ಎಂಬಿಎ ಪದವೀಧರ(?)ನೊಬ್ಬನು ಧ್ವನಿಯೇರಿಸಿ ಮಾತನಾಡುತ್ತಾ, ನನಗೆ ನನ್ನ ಹೆತ್ತವರು ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಎಂಬಿಎ ಕಲಿಸಿದ್ದಾರೆ, ಆದರೆ ನನಗೆ ಸಿಕ್ಕಿದ ಉದ್ಯೋಗ ಕೇವಲ ೨೦,೦೦೦/- ವೇತನ ತರುವಂತಹದ್ದು.
ಇದು ದೇಶದ ಪರಿಸ್ಥಿತಿ ಎನ್ನುತ್ತಾನೆ. ಆದರೆ ಆತನಿಗೆ ಎಂಬಿಎ ಪದವಿಯೆಂದರೇನೆಂದೇ ಗೊತ್ತಿಲ್ಲ. ಒಂದನೇಯದಾಗಿ, ಆತ ಎಂಬಿಎ ಮಾಡಿದ್ದೇನೆಂದು ಹೇಳಿದ್ದೇ ಸುಳ್ಳು. ಏಕೆಂದರೆ ಆತನಿಗೆ ಎಂಸಿಎ ಪದವಿಯ ವಿಸ್ತೃತ ರೂಪವೇ ಗೊತ್ತಿಲ್ಲ.
ಎರಡನೆಯದಾಗಿ ಕಲಿತ ಕೂಡಲೇ ಸರಕಾರ ಆತನಿಗೆ ಲಕ್ಷಗಟ್ಟಲೆ ವೇತನದ ಉದ್ಯೋಗ ನೀಡಬೇಕಿತ್ತು ಎಂದು ನಿರೀಕ್ಷಿಸುವುದು ಕೂಡಾ ತಪ್ಪು. ವರದಿ ಗಾರ ಮುಂದುವರಿದು, ನೀವು ಎಂಬಿಎ ಕಲಿತದ್ದು ನಿಜವೇ ಆಗಿದ್ದರೆ, ಸರಕಾರ ಒದಗಿಸುವ ಕಡಿಮೆ ಬಡ್ಡಿ ಸಾಲ ಮತ್ತಿತರ ಸೌಲಭ್ಯಗಳನ್ನು ಪಡೆದು ಕೊಂಡು ಸ್ವಂತ ಉದ್ಯಮ ಸ್ಥಾಪಿಸಿ, ಇನ್ನೂ ಕೆಲವರಿಗೆ ಉದ್ಯೋಗ ಕೊಡಬಹುದಿತ್ತು ಎನ್ನುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ಪದವೀಧರ (?) ನಾನು ಎಂಬಿಎ ಮಾಡಿದ್ದು ಪಕೋಡ ಮಾಡುವ ಬೀದಿ ಬದಿ ಅಂಗಡಿ ಮಾಡುವುದಕ್ಕಾ? ಎನ್ನುತ್ತಾನೆ! ಸಾಲದ್ದಕ್ಕೆ ಓರ್ವ ಸಚಿವರು; ಪ್ರಧಾನಿಯವರು
ವರ್ಷಕ್ಕೆ ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ಕೊಟ್ಟಿರುವುದನ್ನು ಈಡೇರಿಸಿಲ್ಲ.
ಆದ್ದರಿಂದ ಮೋದಿಯವರ ಹೆಸರು ಯಾರೇ ಹೇಳಿದರೂ ಅವರ ಕೆನ್ನೆಗೆ ಬಾರಿಸಿ! ಇವೆಲ್ಲದರ ಒಟ್ಟು ಅರ್ಥ, ಕಲಿಯುವುದಕ್ಕೆ ಸಾಲ ಕೊಡುವುದು ಮಾತ್ರವಲ್ಲ, ಕಲಿತಾದ ನಂತರ ದೊಡ್ಡ ಮೊತ್ತದ ವೇತನದೊಂದಿಗೆ ಬಿಳಿ ಕಾಲರ್ ಉದ್ಯೋಗ ನೀಡುವುದೂ ಸರಕಾರದ ಜವಾಬ್ದಾರಿಯೇ? ಪ್ರತಿಯೊ ಬ್ಬರೂ ಬಿಳಿ ಕಾಲರ್ ಉದ್ಯೋಗವನ್ನೇ ನಿರೀಕ್ಷಿಸಿದರೆ ಅದನ್ನು ಪೂರೈಸುವುದು ಸರಕಾರದ ಜವಾಬ್ದಾರಿ ಎನ್ನುವುದು ಕಾರ್ಯ ಸಾಧ್ಯವೇ? ಹಾಗೆ ವಾದಿಸುವವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಉದ್ಯೋಗ ಮಾಡುತ್ತಿರುವವರ ಬಗ್ಗೆ ಒಂದಿಷ್ಟು ದೃಷ್ಟಿ ಹರಿಸಬೇಕು.
ಉನ್ನತ ತಾಂತ್ರಿಕ ಪದವಿ ಪಡೆದು, ವಿದೇಶದಲ್ಲಿ ಭಾರೀ ಮೊತ್ತದ ವೇತನ ಬರುತ್ತಿದ್ದರೂ ಅದನ್ನು ತ್ಯಜಿಸಿ ಸ್ವದೇಶಕ್ಕೆ ಬಂದು ಕೃಷಿ, ಸಣ್ಣ ಉದ್ದಿಮೆ
ಅಥವಾ ಕೆಲವೊಂದು ಪ್ರಕರಣಗಳಲ್ಲಿ ಹತ್ತಾರು ಮಂದಿ ಒಟ್ಟು ಸೇರಿ, ಸಾಕಷ್ಟು ದೊಡ್ಡದೇ ಎನ್ನಬಹುದಾದ ಉದ್ಯಮವನ್ನು ಸ್ಥಾಪಿಸಿ, ಸ್ವೋದ್ಯೋಗದ ಜತೆಗೆ ಇನ್ನೂ ಒಂದಷ್ಟು ಜನರಿಗೆ ಉದ್ಯೋಗ ನೀಡಿದ ಪ್ರಕರಣಗಳು ಸಾಕಷ್ಟಿವೆ.
ಇನ್ನೂ ಕೆಲವು ಉದಾಹರಣೆ ನೋಡೋಣ: ಜಾತ್ರೆ, ಉತ್ಸವಾದಿಗಳ ಕಾಲದಲ್ಲಿ ಮಾತ್ರವಲ್ಲ ಅದು ಆರಂಭವಾಗುವ ಬಹಳಷ್ಟು ಮುಂಚಿತವಾಗಿಯೇ ಜಾತ್ರೆಯಲ್ಲಿ ಮಾರಾಟ ಮಾಡುವ ಆಟಿಕೆಗಳು, ತಿಂಡಿ ತಿನಿಸುಗಳನ್ನು ಹತ್ತಾರು ಜನರು ಸೇರಿ ತಯಾರಿಸುತ್ತಾರೆ. ಬೇರೆ ಬೇರೆ ಜಾತ್ರೆಗಳಲ್ಲಿ ಕೆಲವರು ಸೇರಿ ಅವುಗಳನ್ನು ಚಿಕ್ಕ-ಚಿಕ್ಕ ಮಳಿಗೆಗಳನ್ನು ತೆರೆದು ವ್ಯಾಪಾರ ಮಾಡುತ್ತಾರೆ. ಮೇಲ್ನೋಟಕ್ಕೆ ಇದು ಸಣ್ಣದಾಗಿ ಕಾಣಿಸಿದರೂ ಒಟ್ಟಾರೆ ನೂರಾರು ಜನರಿಗೆ
ಉದ್ಯೋಗ ಒದಗಿಸುತ್ತದೆ. ರಮ್ಜಾನ್ ಮಾಸದಲ್ಲಿ ಸಮೋಸ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುವ ತಿನಿಸುಗಳಲ್ಲಿ ಒಂದು. ಅದನ್ನು ತಯಾರಿಸುವ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಅಲ್ಲಲ್ಲಿ ಮಾರಾಟ ಮಾಡುವ ಜನರಿಗೆ ಸಣ್ಣ ಪ್ರಮಾಣದ ಉದ್ಯೋಗವೇ ಆದರೂ ಒಟ್ಟು ಸೇರುವಾಗ ಸಾಕಷ್ಟು ಉದ್ಯೋಗಾವಕಾಶಗಳನ್ನು ಒದಗಿಸಿದಂತೆ ತಾನೇ? ಇದೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉದ್ಯೋಗಗಳೇ ಅಲ್ಲವೇ? ಓರ್ವ ಪವರ್ ಎಲೆಕ್ಟ್ರಾನಿಕ್ಸ್
ಸ್ನಾತಕೋತ್ತರ ಪದವೀಧರ ಸಿಸಿ ಕ್ಯಾಮೆರಾ ಅಳವಡಿಸುವ ಉದ್ಯಮವನ್ನು ಸ್ಥಾಪಿಸಿ, ತನ್ನ ಸಂಸ್ಥೆಯಲ್ಲಿ ಇಪ್ಪತ್ತೈದು ಸಿಬಂದಿ ನೇಮಿಸಿಕೊಂಡಿzರೆ. ಅದಕ್ಕೂ ಮೊದಲು ಅವರು ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ತಿಂಗಳಿಗೆ ಲಕ್ಷ ರುಪಾಯಿಯಷ್ಟು ವೇತನದ ಉದ್ಯೋಗದಲ್ಲಿದ್ದವರು.
ಸರಕಾರದ ಬಹಳಷ್ಟು ಯೋಜನೆಗಳು ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಇರುವುದರ ಜತೆಗೆ ಇಂತಹ ಅದೆಷ್ಟೋ ಜನರು ಉದ್ಯೋಗ ಬಿಟ್ಟು ಕೃಷಿ
ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು, ಬೇರೆ ಸಂಸ್ಥೆಗಳ ಉದ್ಯೋಗಿಗಳಿಗೆ ಕಾರ್ಮಿಕ ಭವಿಷ್ಯ ನಿಧಿ, ಉದ್ಯೋಗಿಗಳ ವೈದ್ಯಕೀಯ ಸೌಲಭ್ಯ(ಉಖಐ) ಹೀಗೆ ಬಹಳಷ್ಟು ರೀತಿಯಲ್ಲಿ ಸ್ವ ಉದ್ಯೋಗ ಮಾಡುವ ಜೊತೆಗೆ ಇನ್ನಷ್ಟು ಜನರಿಗೆ ಉದ್ಯೋಗವನ್ನು ಕೂಡಾ ಕೊಟ್ಟಿದ್ದಾರೆ. ಇದೆಲ್ಲವೂ ಒಂದು ರೀತಿ ಯಲ್ಲಿ ಬಿಳಿ ಕಾಲರ್ ಉದ್ಯೋಗಗಳೇ ತಾನೇ? ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಜನೌಷಧಿ ಘಟಕಗಳನ್ನು ಸ್ಥಾಪಿಸುವ ಮೂಲಕ, ಒಂದೆಡೆ ಜನರಿಗೆ ಕಡಿಮೆ ದರದಲ್ಲಿ ಔಷಧಿ ಸಿಕ್ಕರೆ, ಇನ್ನೊಂದೆಡೆ ಅಂತಹ ಘಟಕಗಳ ಸ್ಥಾಪನೆಗೆ ಕಡಿಮೆ ಬಡ್ಡಿಯ ಸಾಲ, ಸಬ್ಸಿಡಿ ಇನ್ನೂ ಹಲವು ಸೌಲಭ್ಯಗಳನ್ನು ನೀಡುತ್ತದೆ, ಕೇಂದ್ರ ಸರಕಾರ.
ಹಿಂದಿನಿಂದಲೂ ಹಳ್ಳಿ ಪ್ರದೇಶ ಬಿಟ್ಟು ಮುಂಬೈ ಸೇರಿದ ಅದೆಷ್ಟೋ ಮಂದಿ, ರೈಲ್ವೇ ನಿಲ್ದಾಣದಲ್ಲಿ ಟೀ-ಕಾಫಿ ಮಾರಾಟದಿಂದ, ನಿಲ್ದಾಣದ ಹೊರಗೆ ಕರವಸ ಮಾರಾಟ ಮಾಡಿ ಮನೆ ಖರೀದಿ ಮಾಡಲು ಸಾಧ್ಯವಾಗುವಷ್ಟು ಆದಾಯ ಗಳಿಸಿದ ಉದಾಹರಣೆಗಳಿವೆ. ಓರ್ವ ಸೆಲೂನ್ ಮಾಲೀಕ ಅನಿರೀಕ್ಷಿತ ವಾಗಿ ನಿಧನ ಹೊಂದುತ್ತಾನೆ. ಆಗ ಆತನ ಮಗಳು ಒಂದಿಷ್ಟು ದಿನ ದಿಕ್ಕು ತೋಚದೇ ಕುಳಿತುಕೊಳ್ಳುತ್ತಾಳೆ. ಆದರೆ ತಂದೆ ಜೀವಂತವಿದ್ದಾಗ ಮಗಳು ಪ್ರತೀದಿನ ತಂದೆಯೊಂದಿಗೆ ಬಂದು ಅವರು ಮಾಡುತ್ತಿದ್ದ ಕೆಲಸವನ್ನು ಗಮನಿಸುತ್ತಿದ್ದಳು.
ಆದ್ದರಿಂದ ಆಕೆ ಗಟ್ಟಿ ಮನಸ್ಸು ಮಾಡಿ ಸೆಲೂನ್ ಬಾಗಿಲು ತೆರೆದು ಕುಳಿತೇ ಬಿಟ್ಟಳು. ಕ್ರಮೇಣ ಗ್ರಾಹಕರು ಬಂದರು. ವ್ಯಾಪಾರ ವೃದ್ಧಿಸಿತು. ಮನಸ್ಸಿದ್ದರೆ
ಮಾರ್ಗವಿದೆ ಎಂಬುದನ್ನು ಇದು ತೋರಿಸುತ್ತದೆ. ಪ್ರವಾಸಿ ತಾಣಗಳಲ್ಲಿ ಚಿಕ್ಕ ಪುಟ್ಟ ಅಂಗಡಿಗಳು, ದೇವಸ್ಥಾನಗಳ ಹತ್ತಿರ ಹಣ್ಣು, ಬತ್ತಿ, ಇನ್ನೂ ಹಲವಾರು ರೀತಿಯ ವ್ಯಾಪಾರ ಮೇಲ್ನೋಟಕ್ಕೆ ಚಿಕ್ಕದೆಂದು ಕಂಡರೂ ಒಂದೆಡೆ ಪ್ರತ್ಯಕ್ಷವಾಗಿ, ಅಲ್ಲಿ ಮಾರಾಟಕ್ಕೆ ಇಡುವ ವಸ್ತುಗಳನ್ನು ಸ್ಥಳೀಯವಾಗಿ ತಯಾರಿಸುವ ಹಲವರಿಗೆ ಉದ್ಯೋಗ ಒದಗಿಸುತ್ತದೆ. ಇಡ್ಲಿ, ಶ್ಯಾವಿಗೆ ಮುಂತಾದ ಹಲವಾರು ಬಗೆಯ ತಿಂಡಿಗಳನ್ನು ಮನೆಯಲ್ಲಿ ತಯಾರಿಸಿ
ಒದಗಿಸುವ ಗೃಹೋದ್ಯಮವೂ ಸಾಕಷ್ಟು ಜನರಿಗೆ ಉದ್ಯೋಗ ಒದಗಿಸುತ್ತದೆ.
ಕರಾವಳಿ ಜಿಲ್ಲೆಗಳಲ್ಲಿ ಮನೆಗಳಲ್ಲಿ ಬೀಡಿ ಸುತ್ತಿ ಕೊಡುವ ಉದ್ಯೋಗ ಬಹಳ ಹಿಂದಿನಿಂದಲೂ ಹಲವಾರು ಮನೆಗಳಲ್ಲಿ ಸಂಪಾದನೆಯ ಏಕೈಕ
ಮಾರ್ಗವಾಗಿದೆ. ಒಟ್ಟಿನಲ್ಲಿ ಮನಸ್ಸಿದ್ದರೆ ಮಾರ್ಗ ಎಂಬ ತತ್ವವನ್ನು ಪಾಲಿಸಿಕೊಂಡು ಬಂದು ಪ್ರಾಮಾಣಿಕವಾಗಿ ದುಡಿದು ತಿನ್ನುವ ಮನಸ್ಸಿದ್ದರೆ ಯಾವುದೂ ಕೀಳಲ್ಲ. ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳಿರುವುದು ಸಾರ್ವಕಾಲಿಕ ಸತ್ಯ. ನಾವದನ್ನು ಅರ್ಥ ಮಾಡಿಕೊಂಡು
ಪಾಲಿಸಬೇಕು, ಅಷ್ಟೇ, ಆಗ ಎಲ್ಲವೂ ಸಲೀಸು.
(ಲೇಖಕರು: ನಿವೃತ್ತ ಕಚೇರಿ ಅಧಿಕ್ಷಕ, ಆರೋಗ್ಯ
ಇಲಾಖೆ ಮತ್ತು ಹವ್ಯಾಸಿ ಬರಹಗಾರ)