Sunday, 15th December 2024

ಬೆಳ್ದು ಬೆಳ್ದು ಬಡವಾಯ್ತ ಬೆಂಗಳೂರು ?! 

ಪ್ರಸ್ತುತ

ಶ್ರೀಲಕ್ಷ್ಮೀ

ನೋಡ್ತಾ ನೋಡ್ತಾ ಹೇಗ್ ಬೆ ಬಿಟ್ತು?! ಹೀಗೆ ಹೇಳೋ ಹಳೆ ಬೆಂಗಳೂರಿಗರು ಇನ್ನೊಂದ್ ಮಾತನ್ನು ಸಹ ಖಂಡಿತ ಹೇಳ್ತಾರೆ. ‘ಮುಂಚೆ ಬೆಂಗ್ಳುರು ಹೀಗ್ ಇರ್ಲಿಲ್ಲ ಬಿಡಿ !’ ಸುಮಾರು ಆರೇಳು ದಶಕಗಳಿಂದ ಈ ನಗರದ ಹುಟ್ಟಿ, ಬೆಳದು, ಈಗಲೂ ಇಲ್ಲಿಯೇ ಜೀವನ ನಡೆಸುತ್ತಿರುವವರು ಈ ನಗರದ ದೊಡ್ಡ ಮಟ್ಟದ ಬದಲಾವಣೆ, ಬೆಳವಣಿಗೆ ಎರಡಕ್ಕೂ ಸಾಕ್ಷಿಯಾಗಿದ್ದಾರೆ. ಗಾರ್ಡನ್‌ನಿಂದ ಸಿಲಿಕಾನ್ ಎಂಬ ಹಣೆಪಟ್ಟಿಯನ್ನು ಹೊತ್ತು ನಿಂತಿರುವ ಈ ನಗರ, ಬದಲಾವಣೆಯ ಎಲ್ಲಾ ಮಜಲುಗಳನ್ನು ಕಂಡಿದೆ.

ಎಲ್ಲರನ್ನು ತನ್ನೆಡೆಗೆ ಸೆಳೆಯುವ ಅಯಸ್ಕಾಂತ ಶಕ್ತಿಯಿರುವುದೇ ಇಲ್ಲಿನ ಹವಾಗುಣದಲ್ಲಿ. ಆದರೆ ಈಗಿನ ಅತಿಯಾದ ವಾಯು ಮಾಲಿನ್ಯದಿಂದಾಗಿ ಹವಾಮಾನ ಹದಗೆಟ್ಟಿರುವುದಂತೂ ನಿಜ. ಮನುಷ್ಯನಿಗೆ ದೈಹಿಕ ಬೆಳವಣಿಗೆಯೊಂದಿಗೆ ಅವನ ಮಾನಸಿಕ ಬೆಳವಣಿಗೆಯು ಹೇಗೆ ಮುಖ್ಯವಾಗುವುದೊ, ಅದೇ ರೀತಿ ಒಂದು ಪ್ರದೇಶವು ಸಹ ಸರ್ವತೋಮುಖ ಅಭಿವೃದ್ಧಿಯೊಂದಿಗಿನ ಬೆಳವಣಿಗೆ ಕಾಣಬೇಕು. ಐಟಿ ಕ್ಷೇತ್ರ ಈ ನಗರವನ್ನು ಇಷ್ಟರ ಮಟ್ಟಿಗೆ ವ್ಯಾಪಿಸುತ್ತದೆ ಎಂದು ಯಾರು ಅಂದಾಜಿಸಿರಲಿಲ್ಲ. ನಾಡಪ್ರಭು ಕೆಂಪೇಗೌಡರು ಈ ನಗರದ ಅಂತಿಮ ಗಡಿ ಎಂದು ಗುರುತು ಮಾಡಿ, ಮೇಖ್ರಿ ವೃತ್ತ, ಹಲಸೂರು, ಕೆಂಪಾಂಬುಧಿ ಕೆರೆ ಹಾಗು ಲಾಲ್ ಬಾಗ್ ಪ್ರದೇಶಗಳಲ್ಲಿ ಕಟ್ಟಿದ ವಾಚ್ ಟವರ್‌ಗಳು ಈಗ ಬೆಂಗಳೂರಿನ ಮಧ್ಯ ಭಾಗದಲ್ಲಿ ಸೇರಿ ಹೋಗಿ ಅದರ ಸುತ್ತಗಲವು ಅಳತೆ ಮೀರಿ ಬೆಳೆದು ನಿಂತಿರುವ ಈಗಿನ ಬೆಂಗಳೂರಿಗೆ ಗಡಿ ಹಾಕಲು ಮತ್ತೆ ಕೆಂಪೇಗೌಡರೇ ಹುಟ್ಟಿ ಬರಬೇಕೇನೊ? ಮಿತಿ ಮೀರಿ
ಬೆಳೆಯುವುದು ಅಂದರೆ ಇದೆ ಇರಬಹುದಾ? ಈ ಮಹಾನಗರಿಗೆ ಕೆಲಸ ಅರಸಿ ಬರುವವರೇ ಹೆಚ್ಚು.

ಪ್ರಸ್ತುತ ಒಂದೂವರೆ ಕೋಟಿ ಜನರಿಗೆ ಆಶ್ರಯ ಕೊಟ್ಟಿರುವ ಈ ನಗರದ ಅಂದಾಜು ನೋಡುವುದಾದರೆ ನಮ್ಮ ರಾಜ್ಯದ ಐದರಲ್ಲಿ ಒಬ್ಬರು ಹಾಗು ದೇಶದ ನೂರರಲ್ಲಿ ಒಬ್ಬರು ಈ ನಗರದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಜನಸಂಖ್ಯೆ ಹೆಚ್ಚಾದಂತೆ, ವಾಹನ ದಟ್ಟನೆ, ಭೂಮಿಯ ಬೆಲೆ, ಬಾಡಿಗೆ ದರ ಹೀಗೆ ಒಂದಕ್ಕೆ ಒಂದು ಕೊಂಡಿ ಎಂಬಂತ್ತೆ ಎಲ್ಲವು ಹೆಚ್ಚುತ್ತಲೆ ಹೋಗಿದೆ. ಮುಂಬೈ ನಗರ ಬೆಳೆಯುತ್ತಾ ಹೋದಂತೆ ಮುಂಬೈ ನಗರದ ಪಕ್ಕದ ಎರಡು ಜಿಲ್ಲೆ ಗಳಾದ ಥಾಣೆ ಹಾಗೂ ರಾಯ್ಗಡ್ ಜಿಗಳು ಕೂಡಿ ನವಿ ಮುಂಬೈ (ನ್ಯೂ ಬಾಂಬೆ) ಎಂಬುದಾಗಿ ರಚಿಸಲ್ಪಟ್ಟಿತು. ಇದೇ ರೀತಿ ಮುಂದಿನ ದಿನಗಳಲ್ಲಿ ಹೊಸ ಬೆಂಗಳೂರು ಪರಿಕಲ್ಪನೆ ಬರಬಹುದೇ? ಕಾದು ನೋಡಬೇಕಿದೆ. – ಓವರ್‌ಗಳು, ಅಂಡರ್‌ಪಾಸ್‌ಗಳು, ಮೆಟ್ರೋ ಟ್ರೈನ್, ದೊಡ್ಡ ದೊಡ್ಡ ಅಂಬರ ಚುಂಬಿತ ಕಟ್ಟಡಗಳು, ಅಪಾರ್ಟ್ಮೆಂಟ್‌ಗಳು, ಪಂಚತಾರಾ ಹೋಟೆಲ್‌ಗಳು ಬಂದು ನಗರದ ಫೇಸ್ ವ್ಯಾಲ್ಯೂ, ಪ್ಲೇಸ್ ವ್ಯಾಲ್ಯೂ, ಮಾರ್ಕೆಟ್ ವ್ಯಾಲ್ಯೂ ಹೆಚ್ಚಿಸಿತೇ
ಹೊರತು ಈ ನಗರದ ಹಳೆಯ ಸೊಗಡನ್ನು ಕಸಿದುಕೊಂಡಿತು.

‘ಪ್ರಪಂಚದ ಅತಿ ವೇಗವಾಗಿ ಬೆಳಯುತ್ತಿರುವ ನಗರ ’ಬೆಂಗಳೂರು”, ‘ಭಾರತದ ಐದನೇ ದೊಡ್ಡ ಮಹಾನಗರ ’ಬೆಂಗಳೂರು”ಎಂದಾಗ ಖುಷಿಯಾಗ
ಬೇಕೊ ಅಥವ ಹೆದರಬೇಕೋ ಅನ್ನುವ ಪರಿಸ್ಥಿತಿ ಬಂದೊದಗಿದೆ. ವೇಗವಾಗಿ ಬೆಳೆಯುವುದರೊಂದಿಗೆ ಕ್ರೈಂ ರೇಟ, ಸೈಬರ್ ಕ್ರೈಂ, ಡ್ರಗ್ಸ್  ಮಾಫಿಯಾ ದಂತಹ ದಾಂದಲೆಗಳು ಹೆಚ್ಚಾಗುತ್ತಿರುವುದು ಭಯದ ಸಂಗತಿ.

ರಾಜ್ಯದ ರಾಜಧಾನಿ ಬೆಂಗಳೂರು ಆಗಿರುವಾಗ, ಕರ್ನಾಟಕ ಮಾತೆಯ ಹೃದಯ ಭಾಗ ಬೆಂಗಳೂರು ಅಲ್ಲವೇ? ‘ಕನ್ನಡದವರು ವಿಶಾಲ ಹೃದಯದವರು’ ಎಂಬುದಕ್ಕೆ ಸಾಕ್ಷಿಯೇ ಈ ನರಗರದಲ್ಲಿರುವ ಲಕ್ಷಾಂತರ ವಲಸಿಗರ ಜನಸಂಖ್ಯೆ. ನಮ್ಮ ಬಾಷೆಯನ್ನು ಬದಿಗಿಕ್ಕಿ ಬೇರೆಯವರ ಭಾಷೆಯನ್ನು ಕಲಿತು ವ್ಯವಹರಿಸೋ ಹೃದಯವಂತಿಕೆ ನಮ್ಮದಲ್ಲವೇ? ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಮೂರನೇ ಸ್ಥಾನದಲ್ಲಿರುವ ಈ ನಗರ ಜನಸಂಖ್ಯಾ ಸೋಟಕ್ಕೆ ಉದಾಹರಣೆಯಾಗಿದೆ. ಗತಿಸಿಹೋದ ‘ಓಲ್ಡ ಬ್ಯಾಂಗ್ಲೂರ್’ ಕಂಡವರೇ ಪುಣ್ಯವಂತರು! ಏನಂತೀರ?