ತಿಳಿರು ತೋರಣ
srivathsajoshi@yahoo.com
ಕೆಲವು ಗುಣಲಕ್ಷಣಗಳಲ್ಲಿ ಭಗವಂತನಿಗೂ ಗುಮ್ಮನಿಗೂ ಏಕ್‌ದಂ ಹೋಲಿಕೆ ಇದೆಯೆಂದರೆ ಒಪ್ಪಲೇಬೇಕು. ಬೇಕಿದ್ದರೆ ಹೀಗೇ ಒಮ್ಮೆ ಯೋಚಿಸಿ ನೋಡಿ. ಮೊದಲನೆಯದಾಗಿ, ಭಗವಂತ ಇದ್ದಾನೆ ಎಂದು ಎಲ್ಲರೂ ನಂಬುತ್ತಾರೆ, ಹೇಳುತ್ತಾರೆ, ಆದರೆ ನಿಜಕ್ಕೂ ಅವನನ್ನು ನೋಡಿದವರಿಲ್ಲ. ಹೇಗಿರುತ್ತಾನೆ ಎಂದು ತಿಳಿದವರಿಲ್ಲ. ಗುಮ್ಮನ ವಿಚಾರವೂ ಡಿಟ್ಟೋ. ಗುಮ್ಮ ಇದ್ದಾನೆ, ಆದರೆ ನೋಡಿದವರಿಲ್ಲ! ಎರಡನೆ ಯದಾಗಿ, ಭಕ್ತರ ಕರೆಗೆ ಭಗವಂತ ಹೇಗೆ ತತ್‌ಕ್ಷಣ ಒಲಿದು ಬರುತ್ತಾನೋ ಗುಮ್ಮನೂ ಅಷ್ಟೇ- ಅಮ್ಮಂದಿರು ಆರ್ಡರ್ ಮಾಡಿದಾಗ ತತ್‌ಕ್ಷಣ ಓಡೋಡಿ ಬರಬಲ್ಲ.
ಅಳುವುದ್ಯಾತಕೊ ರಂಗ ಅತ್ತರಂಜಿಪ ಗುಮ್ಮ… ಅಂತೊಂದು ದಾಸರಪದ ಕೇಳಿದ್ದೀರಾ? ಪುರಂದರದಾಸರದೇ ರಚನೆ, ಕೊನೆಯ ಚರಣದಲ್ಲಿರುವ
ಅಂಕಿತದಿಂದ ಗೊತ್ತಾಗುತ್ತದೆ. ಯುಟ್ಯೂಬ್‌ನಲ್ಲಿ ಹುಡುಕಿದರೆ ಪ್ರಚಲಿತ ಗಾಯಕ-ಗಾಯಕಿಯರು ಸುಶ್ರಾವ್ಯವಾಗಿ ಹಾಡಿರುವ ಬೇರೆಬೇರೆ ಆವೃತ್ತಿಗಳು ಸಿಗುತ್ತವೆ. ಈ ಪದ್ಯದಲ್ಲಿ ಯಶೋದೆಯು ಬಾಲಕೃಷ್ಣನನ್ನು ರಮಿಸಿ ಸಂತೈಸುತ್ತ, ‘ಏಕೆ ಅಳುತ್ತಿದ್ದೀ? ನಿನ್ನ ಅಳುವಿಗೆ ಕಾರಣವೇನು?’ ಎಂದು ಕೇಳುತ್ತಾಳೆ.
‘ಪುಟ್ಟಿದೇಳು ದಿವಸದಲಿ ದುಷ್ಟ ಪೂತನಿಯ ಕೊಂದೆ| ಮುಟ್ಟಿ ವಿಷದ ಮೊಲೆ ಯುಂಡ ಕಾರಣ| ದೃಷ್ಟಿ ತಾಕಿತೆ…?’ ಅಥವಾ, ‘ಬಾಲಕತನದಿ ಗೋಪಾಲಕ ರೊಡಗೂಡಿ| ಕಾಳಿಂದಿ ಮಡುವನು ಕಲಕಿದ ಕಾರಣ| ಕಾಲು ಉಳುಕಿತೆ…?’ ಅಥವಾ ಎಲ್ಲಿಯಾದರೂ ‘ತುರುವ ಕಾಯಲು ಪೋಗೆ ಭರದಿ ಇಂದ್ರ ಮಳೆಗರೆಯೆ| ಬೆರಳಲಿ ಬೆಟ್ಟವನೆತ್ತಿದ ಕಾರಣ| ಬೆರಳು ಉಳುಕಿತೇ…?’ ಅಂತೆಲ್ಲ ಕೃಷ್ಣನ ಅಳುವಿಗೆ ಕಾರಣವೇನಿರಬಹುದು ಎಂದು ಒಂದೊಂದಾಗಿ ಊಹೆ ಮಾಡುತ್ತಾಳೆ.
ಅವಳು ಊಹಿಸಿದ ಕಾರಣಗಳೆಲ್ಲ ಕೃಷ್ಣಲೀಲೆಗಳೇ ಎಂದು ಬೇರೆ ಹೇಳಬೇಕಿಲ್ಲ. ಕೃಷ್ಣ ಸಮಸ್ತ ಜಗಕೆಲ್ಲ ಉದ್ಧಾರಕನಾದರೂ ಯಶೋದೆಯ ಪಾಲಿಗೆ ಮುದ್ದುಕಂದನೇ ತಾನೆ? ಆದ್ದರಿಂದಲೇ, ಅವನ ಕಿವಿ ಹಿಂಡುವ, ‘ಅಳು ನಿಲ್ಲಿಸದಿದ್ದರೆ ಗುಮ್ಮ ಬಂದು ಹೆದರಿಸುತ್ತಾನೆ!’ ಎಂದು ಹೇಳುವ ಅಧಿಕಾರ
ಅವಳಿಗಿದೆ. ಮಾತ್ರವಲ್ಲ, ಆ ಅಧಿಕಾರ ಇರುವುದು ಅವಳೊಬ್ಬಳಿಗೇ.
ಬಹುಶಃ ಕೃಷ್ಣನನ್ನು ಕಂಟ್ರೋಲ್‌ನಲ್ಲಿಡುವುದಕ್ಕೆ ಯಶೋದೆ ಕಂಡುಕೊಂಡ ಸುಲಭೋಪಾಯವೆಂದರೆ ಗುಮ್ಮನನ್ನು ಕರೆಯುವುದು. ‘ಸುಮ್ಮನಿರು ಸುಮ್ಮನಿರು ಬೇಡಿಕೊಂಬೆ| ಈ ಮಹಿಯೊಳತಿಶಯದ ಗುಮ್ಮ ಬಂದಿದಕೋ…’ ಅಂತ ಇನ್ನೊಂದು ಕೀರ್ತನೆ ಇದೆ. ಪುರಂದರ ದಾಸರದೇ. ಇದೂ ಗುಮ್ಮನನ್ನು ಕರೆಯುವ ರೀತಿಯದೇ. ಇದರಲ್ಲಿ ಪರಮೇಶ್ವರನೇ ಗುಮ್ಮ. ಮೈಗೆಲ್ಲ ಬೂದಿ ಬಳಿದುಕೊಂಡು ಕೈಯಲ್ಲೊಂದು ಕಪೋಲವನ್ನೇ ಭಿಕ್ಷಾಪಾತ್ರೆ
ಯಾಗಿ ಹಿಡಿದುಕೊಂಡವನನ್ನು ಗುಮ್ಮನಿಗೆ ಹೋಲಿಸಿದ್ದು ಸರಿಯೇ ಇದೆ ಬಿಡಿ. ಹೀಗೆ ಮಾತುಮಾತಿಗೂ ಯಶೋದೆಯಿಂದ ಗುಮ್ಮನಿಗೆ ಬುಲಾವ್
ಹೋಗುತ್ತಿದ್ದುದರಿಂದಲೇ ಪುಟ್ಟ ಕೃಷ್ಣ ಅವಳನ್ನು ಬೇಡಿಕೊಂಡಿದ್ದು ‘ಗುಮ್ಮನ ಕರೆಯದಿರೆ ಅಮ್ಮ ನೀನು…’ ಎಂದು.
ಮತ್ತು ಆಕೆಗೆ ಪ್ರಾಮಿಸ್ ಮಾಡಿದ್ದು ‘ಸುಮ್ಮನೆ ಇರುವೆನು ಅಮ್ಮಿಯ ಬೇಡೆನು ಮಮ್ಮು ಉಣ್ಣುತ್ತೇನೆ ಅಮ್ಮ ನಾನಿನ್ನು ಅಳುವುದಿಲ್ಲ..’ ಎಂದು. ಅಷ್ಟು
ಸಾಲದೆಂಬಂತೆ ‘ಹೆಣ್ಣುಗಳಿರುವಲ್ಲಿ ಪೋಗಿ ಅವರ ಕಣ್ಣು ಮುಚ್ಚುವುದಿಲ್ಲ. ಚಿಣ್ಣರ ಬಡಿಯುವುದಿಲ್ಲ. ಅಣ್ಣನ ಬೈಯುವುದಿಲ್ಲ. ಬೆಣ್ಣೆಯ ಬೇಡುವು ದಿಲ್ಲ. ಮಣ್ಣು ತಿನ್ನುವುದಿಲ್ಲ. ಬಾವಿಯ ಬಳಿ ಹೋಗುವುದಿಲ್ಲ. ಹಾವಿನ ಜೊತೆ ಆಡುವುದಿಲ್ಲ. ಆವಿನ ಮೊಲೆಯೂಡೆ ಕರುಗಳ ಬಿಡುವುದಿಲ್ಲ…’ ಎಂದು.
ಅಂದರೆ ಕೃಷ್ಣ ಆ ಎಲ್ಲ ಕಿತಾಪತಿಗಳನ್ನು ಮಾಡುತ್ತಿದ್ದಾಗ ಅದನ್ನು ನಿಲ್ಲಿಸಬೇಕಿದ್ದರೆ ಯಶೋದೆ ಗುಮ್ಮನನ್ನು ಕರೆಯಬೇಕಾಗುತ್ತಿತ್ತು. ಇನ್ನು ಮುಂದೆ ಅಂಥದ್ದನ್ನೆಲ್ಲ ಮಾಡುವುದಿಲ್ಲವೆಂದು ಕೃಷ್ಟ ಗೋಗರೆಯುತ್ತಾನೆ. ಅವನ ಮಾತಿನಿಂದ ಯಶೋದೆ ಕನ್ವಿನ್ಸ್ ಆದಳೇ? ಕೃಷ್ಣ ಕೊನೆಗೆ ‘ದೇವರಂತೆ ಒಂದು ಠಾವಿಲಿ ಕೂಡುವೆ…’ ಎಂದು ಕೂಡ ಹೇಳುತ್ತಾನೆ. ದೇವರಂತೆ ಏನು, ಕೃಷ್ಣ ದೇವರೇ ಅಲ್ಲವೇ? ಕೃಷ್ಣನೇ ದೇವರು ಅಲ್ಲವೇ? ದಾಸರ ಇಂಗಿತ ಮತ್ತು ಆಶಯವೂ ಅದೇ. ಕೃಷ್ಣ ಲೀಲೆಗಳ ಕೊಂಡಾಟ, ಗುಣಗಾನ. ಯಶೋದೆ, ಗುಮ್ಮ ಎಲ್ಲ ನಿಮಿತ್ತ ಮಾತ್ರ.
ಅಂದಹಾಗೆ ಗುಮ್ಮನ ರೆ-ರೆನ್ಸನ್ನು ಪುರಂದರ ದಾಸರು ಮಾತ್ರವಲ್ಲ, ವಾದಿರಾಜರು, ಪ್ರಸನ್ನ ವೇಂಕಟದಾಸರು, ಶ್ರೀಪಾದರಾಜರು ಮುಂತಾಗಿ ಬೇರೆ ಯವರೂ ಮಾಡಿದ್ದಾರೆ. ಆ ಕೀರ್ತನೆಗಳು ಗುಮ್ಮನ ಕರೆಯದಿರೆಯಷ್ಟು ಪ್ರಸಿದ್ಧವಾಗಿಲ್ಲ ಅಷ್ಟೇ. ಆದರೆ ಇಲ್ಲೊಂದು ವಿಪರ್ಯಾಸ ನೋಡಿ! ಭಗವಂತ ಸರ್ವಾಂತರ್ಯಾಮಿ, ಸರ್ವಶಕ್ತ, ಸರ್ವರೂಪಧಾರಿ ಅಂತೆಲ್ಲ ನಮ್ಮ ನಂಬಿಕೆ. ಅಣೋರಣೀಯ ಮಹತೋಮಹೀಯ ಎಂದು ನಾವು ಅವನನ್ನು ಕೊಂಡಾಡುತ್ತೇವೆ. ಅವರವರ ಭಾವಕ್ಕೆ ಅವರವರ ಭಕುತಿಗೆ ತೆರನಾಗಿ ಇರುವವನು ಎಂದು ಕೂಡ ಹೇಳುತ್ತೇವೆ. ಪರಂತು ಆ ಸರ್ವಶಕ್ತ ಭಗವಂತನನ್ನೂ ಹದ್ದುಬಸ್ತಿನಲ್ಲಿ ಇಡುವುದಕ್ಕೆ, ಹೆದರಿಸಿ ಸುಮ್ಮನಾಗಿಸುವುದಕ್ಕೆ ಯಶೋದೆ ಅವಲಂಬಿಸಿದ್ದು ಗುಮ್ಮನನ್ನು! ಆ ದೃಷ್ಟಿಯಿಂದ ನೋಡಿದರೆ ಭಗವಂತ ನಿಗಿಂತಲೂ ಗುಮ್ಮ ಮಿಗಿಲಾದವನೇ? ಭಗವಂತನಿಗಿಂತ ಗುಮ್ಮ ಮೇಲು ಎಂದು ವಾದಿಸಿ ಗುಮ್ಮನನ್ನು ಅಟ್ಟಕ್ಕೇರಿಸುವುದು ಬೇಡವೇನೊ.
ಆದರೂ ಕೆಲವು ಗುಣ ಲಕ್ಷಣಗಳಲ್ಲಿ ಭಗವಂತನಿಗೂ ಗುಮ್ಮನಿಗೂ ಏಕ್‌ದಂ ಹೋಲಿಕೆ ಇದೆಯೆಂದರೆ ನೀವೂ ಒಪ್ಪಲೇಬೇಕು. ಬೇಕಿದ್ದರೆ ಹೀಗೇ ಒಮ್ಮೆ
ಯೋಚಿಸಿ ನೋಡಿ. ಮೊದಲನೆಯದಾಗಿ, ಭಗವಂತ ಇದ್ದಾನೆ ಎಂದು ಎಲ್ಲರೂ ನಂಬುತ್ತಾರೆ, ಹೇಳುತ್ತಾರೆ, ಆದರೆ ನಿಜಕ್ಕೂ ಅವನನ್ನು ನೋಡಿದವರಿಲ್ಲ. ಹೇಗಿರುತ್ತಾನೆ ಎಂದು ತಿಳಿದವರಿಲ್ಲ. ಗುಮ್ಮನ ವಿಚಾರವೂ ಡಿಟ್ಟೋ. ಗುಮ್ಮ ಇದ್ದಾನೆ, ಆದರೆ ನೋಡಿದವರಿಲ್ಲ! ಎರಡನೆಯದಾಗಿ, ಭಕ್ತರ ಕರೆಗೆ ಭಗವಂತ ಹೇಗೆ ತತ್‌ಕ್ಷಣ ಒಲಿದು ಬರುತ್ತಾನೋ ಗುಮ್ಮನೂ ಅಷ್ಟೇ- ಅಮ್ಮಂದಿರು ಆರ್ಡರ್ ಮಾಡಿದಾಗ ತತ್‌ಕ್ಷಣ ಓಡೋಡಿ ಬರಬಲ್ಲ. ಬಂದೇಬಿಟ್ಟ
ಎಂದು ಚಿಕ್ಕ ಮಕ್ಕಳು ನಂಬುವಂತೆ ಮಾಡಬಲ್ಲ.
ಮೂರನೆಯದಾಗಿ, ಭಗವಂತ ಮತ್ತು ಗುಮ್ಮ ಇಬ್ಬರದೂ ಪವರ್ ಫುಲ್ ವ್ಯಕ್ತಿತ್ವ, ಆದರೂ ಏಕವಚನದಿಂದ ಕರೆಸಿಕೊಳ್ಳುವಷ್ಟು ಸಲುಗೆ. ಇನ್ನೂ ಒಂದು ಹೋಲಿಕೆಯೆಂದರೆ, ಭಗವಂತನನ್ನು ನಾವು ಬೇರೆಬೇರೆ ಹೆಸರುಗಳಿಂದ ಕರೆಯುವಂತೆ ಗುಮ್ಮನನ್ನೂ ಪ್ರಪಂಚದ ಬೇರೆಬೇರೆ ಜನಸಮುದಾಯಗಳಲ್ಲಿ ಬೇರೆಬೇರೆ ಹೆಸರಿನಿಂದ ಕರೆಯುತ್ತಾರೆ. ದೇವನೊಬ್ಬ ನಾಮ ಹಲವು ಇದ್ದಂತೆಯೇ ಗುಮ್ಮನೊಬ್ಬ ನಾಮ ಹಲವು.
ಗುಮ್ಮನ ಜಗದ್ವ್ಯಾಪಿತನದ ಬಗ್ಗೆ ನನಗೆ ಕುತೂಹಲ ಹುಟ್ಟಿದ್ದು ಒಂದು ವಿಚಿತ್ರ ಸಂದರ್ಭದಲ್ಲಿ. ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರ ಒಂದು ಪ್ರವಚನ ಕೇಳುವಾಗ. ಕೆಲ ವರ್ಷಗಳ ಹಿಂದೆ ಅಮೆರಿಕದ ವಿವಿಧೆಡೆಗಳಲ್ಲಿ ಭಾಗವತ ಸಪ್ತಾಹ ಉಪನ್ಯಾಸಗಳನ್ನು ಕೊಡುತ್ತ ಅವರು ವಾಷಿಂಗ್ಟನ್‌ಗೂ ಬಂದಿದ್ದರು. ಅರಳು ಹುರಿದಂತೆ ಅವರ ಮಾತುಗಳನ್ನು ಕೇಳುವ ಅವಕಾಶ ನಮಗೆಲ್ಲ ಸಿಕ್ಕಿತ್ತು. ಒಂದು ದಿನ ಪ್ರವಚನದಲ್ಲಿ ಅವರು ಒಂದು ಹೃದಯಸ್ಪರ್ಶಿಯಾದ ಮಾತನ್ನು ಹೇಳಿದ್ದರು: ‘ಜಗತ್ತಿನಲ್ಲಿ ಪ್ರತಿಯೊಬ್ಬ ತಾಯಿಯೂ ತನ್ನ ಮಗುವಿನಲ್ಲಿ (ಹೆಣ್ಣಿರಲಿ ಗಂಡಿರಲಿ) ಒಂದಲ್ಲ ಒಂದು ಕ್ಷಣದಲ್ಲಿ ಕೃಷ್ಣನನ್ನು ಕಾಣುತ್ತಾಳೆ!’ ಇದು ಮೇಲ್ನೋಟಕ್ಕೆ ಮಾತಿನ ಚಂದಕ್ಕೆಂದು ಹೇಳಿದ್ದೆನಿಸಬಹುದು, ಆದರೆ ತಾಯಿಯೆನಿಸಿಕೊಂಡ ಯಾರೇ ಆದರೂ ಇದನ್ನು ಖಂಡಿತ ಒಪ್ಪುತ್ತಾರೆ.
ಮಾತ್ರವಲ್ಲ ಪುಳಕಿತರಾಗುತ್ತಾರೆ. ಇಲ್ಲಿ ಕೃಷ್ಣ ಎಂದರೆ ಭಗವಂತ ಎಂದು ವಿಶಾಲ ಅರ್ಥಮಾಡಿಕೊಂಡರೆ ಜಗತ್ತಿನಲ್ಲಿ ಎಲ್ಲ ಅಮ್ಮಂದಿರದೂ ಅದೇ ಅನುಭವ. ಮಕ್ಕಳೆಂದರೆ ದೇವರು. ಪ್ರವಚನ ಕೇಳುತ್ತ ನನ್ನ ಮನಸ್ಸಿಗೆ ಹೊಳೆದದ್ದಿದು: ಸರಿ, ಪ್ರತಿಯೊಬ್ಬ ತಾಯಿಯೂ ತನ್ನ ಮಗುವಿನಲ್ಲಿ ಕೃಷ್ಣನನ್ನು
ಕಾಣುತ್ತಾಳೆ; ಅಂದರೆ, ಮಗು ಕೃಷ್ಣನಂತೆಯೇ ಊಹಿಸಲಸದಳವಾಗಿ ಮತ್ತು ಸಹಿಸಲಸಾಧ್ಯವಾಗಿ ಪೋಕರಿ ಮಾಡುತ್ತಿದ್ದರೆ ಗುಮ್ಮನನ್ನೇ ಕರೆಯುತ್ತಾಳೆ. ಅಂದಮೇಲೆ ಜಗತ್ತಿನಲ್ಲಿ ಎಲ್ಲ ಅಮ್ಮಂದಿರಿಗೂ ಗುಮ್ಮ ಗೊತ್ತಿರುತ್ತಾನೆ ಅಂತಾಯ್ತು!
ಹೇಗಿರುತ್ತಾನೆ ಆ ಗ್ಲೋಬಲ್ ಗುಮ್ಮ? ನೀವು ನಂಬುತ್ತೀರೋ ಇಲ್ಲವೋ ಗುಮ್ಮ ಎಂಬ ಕಲ್ಪನೆ ಜಗತ್ತಿನ ಎಲ್ಲ ಕಡೆಯೂ ಇದೆ. ಚಿಕ್ಕಮಕ್ಕಳು ದೊಡ್ಡವರ
ಮಾತು ಕೇಳೋದಿಲ್ಲ, ಸರಿಯಾಗಿ ಊಟ ಮಾಡೋದಿಲ್ಲ, ಆಡಲಿಕ್ಕೆ ಹೋದರೆ ಕತ್ತಲಾದ ಮೇಲೂ ಮನೆಗೆ ಬರೋದಿಲ್ಲ, ರಾತ್ರಿ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡೋದಿಲ್ಲ ಮುಂತಾದ ಎಲ್ಲ ಸಮಸ್ಯೆಗಳಿಗೂ ರಾಮಬಾಣ ವಾಗಿ ಅಮ್ಮಂದಿರಿಗೆ ಗುಮ್ಮ ನೆರವಾಗಿದ್ದಾನೆ.
ಹೆಸರು, ಸ್ವರೂಪ, ಇತ್ಯಾದಿ ಬೇರೆಬೇರೆ ಇರಬಹುದು ಎನ್ನುವುದನ್ನು ಬಿಟ್ಟರೆ ಗುಮ್ಮ ನಿಜವಾಗಿಯೂ ಗ್ಲೋಬಲ್ ಸಿಟಿಜನ್. ಗುಮ್ಮನ ಬೆನ್ನೇರಿ ಪ್ರಪಂಚ ಪರ್ಯಟನೆ ಮಾಡಿದರೆ ನಮಗಿದು ಗೊತ್ತಾಗುತ್ತದೆ. ಗುಮ್ಮನ ವಿಶ್ವರೂಪದರ್ಶನ ಆಗುತ್ತದೆ. ನಮ್ಮ ಕನ್ನಡನಾಡಿನಲ್ಲಿ ಆರೇಳು ಶತಮಾನಗಳ ಹಿಂದೆಯೇ ದಾಸಸಾಹಿತ್ಯದಲ್ಲಿ ಗುಮ್ಮನನ್ನು ಗುರುತಿಸಲಾಗಿದೆಯೆಂದು ನೋಡಿದೆವು. ಅದೇ ಗುಮ್ಮ ಈಗಿನ ೨೧ನೆಯ ಶತಮಾನದ ಕನ್ನಡ ಚಿತ್ರಗೀತೆಗಳಲ್ಲೂ
ಕಾಣಿಸಿಕೊಳ್ಳುತ್ತಾನೆಂದರೆ ಆತ ಅದೆಷ್ಟು ಸಾರ್ವಕಾಲಿಕ! ಕನ್ನಡದ ಮಟ್ಟಿಗೆ ಇನ್ನೊಂದು ಸ್ವಾರಸ್ಯವೆಂದರೆ ಬರೀ ಚಿಕ್ಕ ಮಕ್ಕಳನ್ನು ಹೆದರಿಸುವವನಷ್ಟೇ ಗುಮ್ಮ ಅಲ್ಲ.
ಅಜ್ಞಾತವಾಗಿದ್ದು ಹೆದರಿಕೆ ಹುಟ್ಟಿಸುವ ಯಾವುದನ್ನೇ ಆದರೂ ನಾವು ಗುಮ್ಮ ಎನ್ನುತ್ತೇವೆ. ಶಾಲಾ-ಕಾಲೇಜು ಮಕ್ಕಳಿಗೆ ಪರೀಕ್ಷೆಯೆಂಬ ಗುಮ್ಮ. ಅಧಿಕಾರಿಗಳಿಗೆ ವರ್ಗಾವಣೆಯ ಗುಮ್ಮ. ವ್ಯಾಪಾರಿಗಳಿಗೆ ಜಿಎಸ್‌ಟಿ ಗುಮ್ಮ. ರಾಜ್ಯ ಬಿಜೆಪಿಗೆ ಪಕ್ಷಾಂತರದ ಗುಮ್ಮ. ಕಾಂಗ್ರೆಸ್ ನಾಯಕರ ನಿದ್ದೆಗೆಡಿಸು ತ್ತಿರುವ ತೃತೀಯರಂಗವೆಂಬ ಗುಮ್ಮ. ಕರೋನಾ ವೈರಾಣುವಂತೂ ಬಹುದೊಡ್ಡ ಗುಮ್ಮ ಎನಿಸಿತ್ತು. ಆಮೇಲೀಗ ಕೊವಿಡೋ-ಸೋಮ್ನಿಯಾ ಎಂಬ ನಿದ್ರಾಹೀನತೆ ಮತ್ತಿತರ ಕಾಯಿಲೆಗಳ ಗುಮ್ಮ. ಕನ್ನಡಿಗರ ಮೋಸ್ಟ್ ಫೇವರಿಟ್ ಅಂದರೆ ಆರ್‌ಸಿಬಿ ತಂಡಕ್ಕೆ ಈ ಸಲವೂ ಕಪ್ ನಮ್ದಲ್ಲ ಎಂಬ ಸೋಲೇ ಗುಮ್ಮ.
ಇರಲಿ, ಆ ಎಲ್ಲ ಗುಮ್ಮಗಳನ್ನು ಬಿಟ್ಹಾಕಿ ನಮ್ಮ ಇಂದಿನ ಟಾಪಿಕ್ ಗುಮ್ಮನನ್ನಷ್ಟೇ ಹಿಡಿದುಕೊಳ್ಳೋಣ. ಕರ್ನಾಟಕದ ಕೆಲವೆಡೆ ಈತ ‘ಗೊಗ್ಗಯ್ಯ’ ಎಂಬ ಹೆಸರಿನಿಂದಲೂ ಗುರುತಿಸಿಕೊಳ್ಳುತ್ತಾನೆ. ‘ಜೋಗಿ’ಯನ್ನೂ ಗುಮ್ಮನಿಗೆ ಸಮಾನಾರ್ಥಕವಾಗಿ ಬಳಸಿರುವುದು ಕಾಣುತ್ತದೆ. ‘ಇವನ ಪಿಡಿದುಕೊಂಡು
ಹೋಗೆಲೋ ಜೋಗಿ ಇವ ನಮ್ಮ ಮಾತು ಕೇಳದೆ ಪುಂಡನಾದ…’ ಎಂಬ ಕೀರ್ತನೆಯನ್ನು ನೆನಪಿಸಿಕೊಳ್ಳಿ. ತಮಿಳುನಾಡಿನಲ್ಲಿ ಗುಮ್ಮನನ್ನು ‘ಪೂಚ್ಚಾಂಡಿ’ ಎನ್ನುತ್ತಾರಂತೆ. ತೆಲುಗಿನಲ್ಲಿ ಅವನು ‘ಬೂಚಿವಾಡು’ ಆಗಿದ್ದಾನೆ. ಮಲಯಾಳಂನಲ್ಲಿ ‘ಕೊಕ್ಕಾಯಿ’.
ಕೊಂಕಣಿ ಮತ್ತು ನಮ್ಮ ಚಿತ್ಪಾವನಿಯಲ್ಲಿ ‘ಘೊಂಗೊ’. ಇವರೆಲ್ಲ ಕನ್ನಡದ ಗೊಗ್ಗಯ್ಯನ ದಾಯಾದಿಗಳಿರಬೇಕು. ಉತ್ತರ ಭಾರತದಲ್ಲಿ ಚಿಕ್ಕಮಕ್ಕಳನ್ನು ‘ನೋಡು, ಅಳು ನಿಲ್ಲಿಸದಿದ್ದರೆ ನಿನ್ನನ್ನು ಬೋರಿಬಾಬಾ ಎತ್ತಿಕೊಂಡು ಹೋಗ್ತಾನೆ!’ ಎಂದು ಗದರಿಸುತ್ತಾರಂತೆ. ಬೋರಿ ಎಂದರೆ ಗೋಣಿಚೀಲ. ಶ್ರೀಲಂಕಾ
ದಲ್ಲಿಯೂ ಗೋಣಿ ಬಿಲ್ಲ ಎಂದೇ ಗುಮ್ಮನ ಹೆಸರು. ಒಟ್ಟಾರೆ ಯಾಗಿ ‘ಗೋಣಿಚೀಲ ಹಿಡಕೊಂಡು ಅಡ್ಡಾಡುವ ಕುರೂಪಿ ಮುದುಕ’ – ಇದು ಮುಕ್ಕಾಲು ಪಾಲು ಜಗತ್ತಿನಲ್ಲಿ ಗುಮ್ಮನ ಚಹರೆ.
ರಚ್ಚೆ-ರಂಪಮಾಡುವ ಮಕ್ಕಳನ್ನು ಗೋಣಿಚೀಲದಲ್ಲಿ ಹಾಕಿಕೊಂಡು ಹೋಗ್ತಾನೆ ಎಂಬ ನಂಬಿಕೆ. ಆಮೇಲೆ ಅವರನ್ನು ಏನು ಮಾಡುತ್ತಾನೆನ್ನುವುದು ಪ್ರಾದೇಶಿಕವಾಗಿ ವ್ಯತ್ಯಾಸವಾಗುತ್ತದೆ. ಕೊಂದು ತಿನ್ನಬಹುದು, ಎಲ್ಲೋ ಅಜ್ಞಾತಸ್ಥಳದಲ್ಲಿ ಅಡಗಿಸಿಡಬಹುದು, ಅಥವಾ ಅಸ್ಸಾಂನವರು ನಂಬುವಂತೆ ಹೊತ್ತೊಯ್ದ ಮಕ್ಕಳ ಕಿವಿಗಳನ್ನಷ್ಟೇ ತಿಂದು ಖುಷಿಪಡಬಹುದು (ಅಸ್ಸಾಮೀ ಭಾಷೆಯಲ್ಲಿ ಗುಮ್ಮನನ್ನು ‘ಕಾನ್‌ಖೋವಾ’ ಎನ್ನುತ್ತಾರಂತೆ). ಅಂತೂ ಮಕ್ಕಳಿಗೆ ಇಷ್ಟ ಆಗುವಂಥದ್ದನ್ನು ಖಂಡಿತ ಮಾಡುವುದಿಲ್ಲ. ಮೊದಲೇ ನೈಟ್‌ಡ್ಯೂಟಿಯವ, ಕಗ್ಗತ್ತಲಲ್ಲಿ ಏನು ಮಾಡುತ್ತಾನೆಂದು ನೋಡಿದವರಾರು?
ಸ್ಪೈನ್, ಪೋರ್ಚುಗಲ್, ಬ್ರಝಿಲ್ ಮುಂತಾದ ಸ್ಪಾನಿಷ್ ದೇಶಗಳಲ್ಲಿ ಗುಮ್ಮನನ್ನು ‘ಹೊಂಬ್ರೆ-ಡೆಲ್-ಸಾಕೊ’ ಎನ್ನುತ್ತಾರೆ.
ಗೋಣಿಚೀಲ ಹಿಡಿದುಕೊಂಡ ಮನುಷ್ಯ ಎಂಬರ್ಥದಲ್ಲಿ. ಕ್ರಿಸ್ಮಸ್ ತಾತ ಸಾಂತಾಕ್ಲಾಸ್ ಸಹ ಗೋಣಿಚೀಲ ಹಿಡಿದುಕೊಂಡು ಬರುವ ಮುದುಕನೇ. ಆದರೆ ಅವನ ಜೋಳಿಗೆಯ ತುಂಬ ಮಕ್ಕಳಿಗೆ ಕೊಡಲಿಕ್ಕೆ ಉಡುಗೊರೆಗಳು. ಗುಮ್ಮ ಹಾಗಲ್ಲ, ಅವನದು ಖಾಲಿ ಗೋಣಿಚೀಲ. ಹಠಮಾರಿ ಮಕ್ಕಳನ್ನು ತುಂಬಿಸಿ ಕೊಂಡು ಹೋಗಲಿಕ್ಕೆ! ಸ್ಪಾನಿಷ್ ಜನಪದ ಕಥೆಗಳ ಪ್ರಕಾರ ನಾಲ್ಕೈದು ಶತಮಾನಗಳ ಹಿಂದೆ ‘ಹೊಂಬ್ರೆ-ಡೆಲ್-ಸಾಕೊ’ಗಳು ನಿಜವಾಗಿಯೂ ಊರೂರು ಗಳಲ್ಲಿ ತಿರುಗಾಡಿಕೊಂಡು ಇರುತ್ತಿದ್ದರಂತೆ. ಅನಾಥ ಮಕ್ಕಳನ್ನು ಎತ್ತಿಕೊಂಡು ಅನಾಥಾಶ್ರಮಗಳಿಗೆ ತಲುಪಿಸುವುದು ಅವರ ಕಾಯಕ.
ಗೋಣಿಯಲ್ಲಿ ತುಂಬಿಸಿ ಒಯ್ಯುತ್ತಿದ್ದುದರಿಂದ ಕೆಲವು ಮಕ್ಕಳು ಸತ್ತೇಹೋಗುತ್ತಿದ್ದವೋ ಏನೋ. ಯೂರೋಪ್, ಏಷ್ಯಾ, ಆಫ್ರಿಕಾ ಖಂಡಗಳ ಹೆಚ್ಚಿನೆಲ್ಲ ದೇಶಗಳಲ್ಲೂ ಆಯಾ ಪ್ರದೇಶಗಳ ಭಾಷೆಯಲ್ಲಿ ‘ಗೋಣಿಚೀಲ ಹಿಡಿದ ಮನುಷ್ಯ’ ಎಂಬ ಅರ್ಥ ಬರುವ ಪದ ಬಳಕೆಯಾಗುವುದು ಗುಮ್ಮ ಎಂಬ ಕಲ್ಪನೆಗೇ; ಚಿಕ್ಕ ಮಕ್ಕಳನ್ನು ಹೆದರಿಸುವುದಕ್ಕೇ. ಕೊಲಂಬಿಯಾ, ಮೆಕ್ಸಿಕೊ, ಅರ್ಜೆಂಟಿನಾ, ಚಿಲಿ, ಎಲ್ ಸಾಲ್ವಡಾರ್ ಮುಂತಾದ ಲ್ಯಾಟಿನ್ ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಭಾಗಗಳಲ್ಲಿ ‘ಎಲ್-ಕೊಕೋ’ ಹೆಸರಿನಿಂದ ಗುಮ್ಮನನ್ನು ಗುರುತಿಸುತ್ತಾರೆ. ಅಲ್ಲಿನ ಜೋಗುಳದ ಹಾಡುಗಳಲ್ಲೂ ಎಲ್-ಕೊಕೊ ಬರುತ್ತಾನಂತೆ. ‘ಮಲಗು ಮಲಗೆನ್ನ ಮರಿಯೇ ಬಣ್ಣದ ನವಿಲಿನ ಗರಿಯೇ…’ ಎಂದು ನಾವು ಹಾಡಿದಂತೆ ಅವರು ಬಹುಶಃ ‘ನಿದ್ದೆ ಮಾಡ್ಲಿಲ್ಲಾದ್ರೆ ಎಲ್
-ಕೊಕೊ ಎತ್ಕೊಂಡ್ಹೋಗ್ತಾನೆ ತಿಳಿಯೇ!’ ಎಂದು ಜೋಗುಳ ಹಾಡುತ್ತಾರೆ.
ಕೊಕೊ ಎಂದರೆ ಕಂದುಬಣ್ಣದ ಕೂದಲುಳ್ಳ ವಿಕಾರರೂಪಿ ಮನುಷ್ಯ. ದೆವ್ವ ಎಂದರೂ ಸರಿಯೇ. ನಿಮಗೆ ಆಶ್ಚರ್ಯವಾಗಬಹುದು, ತೆಂಗಿನಕಾಯಿಗೆ ಕೊಕೋನಟ್ ಎಂಬ ಪದ ಬಂದಿರೋದು ಅದರಿಂದಲೇ! ಕಂದು ಕೂದಲು, ಮೂರು ಕಣ್ಣುಗಳುಳ್ಳದ್ದು ಇದೆಂಥದಪ್ಪಾ ವಿಚಿತ್ರ ಫುಲ್ ಎಂದು ಪೋರ್ಚು ಗೀಸ್ ನಾವಿಕರು ಅಚ್ಚರಿಗೊಂಡು ಅದನ್ನು ಕೊಕೊನಟ್ ಎಂದರಂತೆ. ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಎಲ್ -ಕೊಕೊ ಬಗ್ಗೆ ಎಷ್ಟು ಹೆದರಿಸುತ್ತಾರೆಂದರೆ ಮಕ್ಕಳು ಮಲಗುವ ಮಂಚದಡಿಯಲ್ಲೇ ಅವನು ಅಡಗಿರುತ್ತಾನೆ, ತಂಟೆ ಮಾಡಿದರೆ ಎತ್ತಿಕೊಂಡು ಹೋಗ್ತಾನೆ ಎನ್ನುತ್ತಾರೆ. ಮಕ್ಕಳು ಗಪ್‌ಚುಪ್ ಆಗಿ ನಿದ್ದೆಗೆ ಜಾರುತ್ತವೆ. ಕೆಲವರು ಎಲ್-ಕೊಕೋನನ್ನು ಬೆಟ್ಟದ ಮೇಲೆ ಗುಹೆಯಲ್ಲಿ ಮಲಗಿರುವ ವಿಕಾರ ಜೀವಿ, ಮೊರದಗಲದ ಒಂದೇ ಕಿವಿಯಿಂದ ಮಕ್ಕಳ ಕಲರವವನ್ನು ಆಲಿಸುತ್ತಲೇ ಇರುತ್ತಾನೆ, ಅವೇನಾದರೂ ರಂಪಾಟ ಮಾಡಿದರೆ ಎಚ್ಚೆತ್ತುಕೊಳ್ಳುತ್ತಾನೆ, ಸದ್ದಿಲ್ಲದೆ ಎದ್ದುಬಂದು ಅಂಥ ಮಕ್ಕಳನ್ನೆತ್ತಿ ಗೋಣಿಚೀಲದಲ್ಲಿ ತುಂಬಿಸಿಕೊಂಡು ಹೋಗುತ್ತಾನೆ, ತನ್ನ ಗುಹೆಯ ಕತ್ತಲಲ್ಲಿ ಆ ಮಕ್ಕಳನ್ನು ಒಂದೋ ಇಡಿ ಇಡಿಯಾಗಿ ನುಂಗುತ್ತಾನೆ.
ಇಲ್ಲವೇ ಕೋರೆ ದಾಡೆಗಳಿಂದ ಸಿಗಿದು ಜಗಿದು ಗುಳುಂ ಮಾಡುತ್ತಾನೆ. ಮಕ್ಕಳು ಎಲ್ಲಿ ಹೋದುವು ಏನಾದುವು ಎಂದು ಯಾರಿಗೂ ಗೊತ್ತಾಗುವುದಿಲ್ಲ… ಅಂತೆಲ್ಲ ಇನ್ನಷ್ಟು ಬಣ್ಣ ಹಚ್ಚಿ ರಂಜಿಸುತ್ತಾರೆ. ದಂಷ್ಟ್ರಾಕರಾಲಾನಿ ಭಯಾನಕಾನಿ… ಎಂದು ಗೀತೆಯಲ್ಲಿ ವಿಶ್ವರೂಪದರ್ಶನ ಶ್ಲೋಕದ ಸಾಲು
ನನಗಿಲ್ಲಿ ನೆನಪಾಗುತ್ತಿದೆ. ಗುಮ್ಮನ ಬಗ್ಗೆ ಅಂತಹ ಭಯಾನಕ ಚಿತ್ರಣದ ಉದ್ದೇಶ ಒಂದೇ- ಮಕ್ಕಳಿಗೆ ಒಂದಿಷ್ಟಾದರೂ ಹೆದರಿಕೆ ಇರಲಿ ಎಂಬುದು.
ಅಲ್ಲಿಂದ ಉತ್ತರ ಅಮೆರಿಕಕ್ಕೆ ಬಂದರೆ ಗುಮ್ಮನ ಹೆಸರು ‘ಬೂಗಿಮ್ಯಾನ್’ ಎಂದಾಗುತ್ತದೆ. ಅವನೂ ಅಷ್ಟೇ, ವಿಕಾರರೂಪಿ ನಿಶಾಚರಿ. ಮನೆಯ ಹೊರಗೆ ಕಿಟಕಿಯ ಬಳಿ -ರ-ರ ಸದ್ದು ಮಾಡಬಹುದು. ಹಸಿರು ಹೊಗೆಯಾಗಿ ಕಾಣಿಸಿಕೊಳ್ಳಬಹುದು. ಕತ್ತಲಲ್ಲಿ ಕಣ್ಣುಗಳನ್ನು ಫಳಫಳ ಬಿಟ್ಟುಕೊಂಡು ಓಡಾಡು ತ್ತಿರಬಹುದು. ಡಿನ್ನರ್ ಟೈಮ್‌ನಲ್ಲಿ ವಠಾರದಲ್ಲಿ ಅತ್ತಿಂದಿತ್ತ ಸುತ್ತುತ್ತಿರಲು ಅವನಿಗೆ ಹೆತ್ತವರೆಲ್ಲರ ಅನುಮತಿ ಇರುತ್ತದೆ. ಯಾರ ಮನೆಯಲ್ಲಿ
ಮಗು ರಚ್ಚೆ-ರಂಪ ಮಾಡುತ್ತದೆಯೋ ಅಲ್ಲಿಂದ ರಿಮೋಟ್ ಕಂಟ್ರೋಲ್ ಸಿಗ್ನಲ್ ಹೋಗುತ್ತದೆ ಬೂಗಿಮ್ಯಾನ್‌ನಿಗೆ. ಅವನು ಆ ಮನೆಗೆ ಬರಬೇಕಂತಲೂ ಇಲ್ಲ, ನಿಜವಾಗಿಯಾದರೆ ಬರುವುದೂ ಇಲ್ಲ. ಆದರೆ ಅಷ್ಟರಲ್ಲಿ ಮಗು ಹಠ ನಿಲ್ಲಿಸಿ ಹಾಯಾಗಿ ಮಲಗಿರುತ್ತದೆ!
ಅಮೆರಿಕದಲ್ಲಿ ಬೂಗಿಮ್ಯಾನ್ ಇದ್ದಂತೆ ಇಟಲಿ, ರೊಮಾನಿಯಾ, ಗ್ರೀಸ್, ಈಜಿಪ್ಟ್ ಮೊದಲಾದ ಮೆಡಿಟರೇನಿಯನ್ ದೇಶಗಳಲ್ಲಿ ‘ಬಾಬೌ’ ಅಥವಾ ‘ಬೊವ್‌ಬೌ’, ಜರ್ಮನಿಯಲ್ಲಿ ‘ಬುಝ್‌ಮ್ಯಾನ್’, ಡೆನ್ಮಾರ್ಕ್‌ನಲ್ಲಿ ‘ಬುಸೆಮಾಂಡನ್’, ನೆದರ್‌ಲ್ಯಾಂಡ್ಸ್‌ನಲ್ಲಿ ‘ಬೋಮ್ಯಾನ್’ ಇರುತ್ತಾನೆ. ಗುಮ್ಮನೊಬ್ಬ
ನಾಮ ಹಲವು ಎಂದಿದ್ದೇಕಂತ ಈಗ ತಿಳಿಯಿತಲ್ಲ? ಆದರೂ ಒಂದು ಮಾತು. ಸುಮಾರು ಆರೇಳು ವರ್ಷ ಪ್ರಾಯವಾದಾಗ ಮಗುವಿಗೆ ಗುಮ್ಮನ ಹೆದರಿಕೆ ಇಲ್ಲವಾಗುತ್ತದೆ.
ಗುಮ್ಮ ಇಲ್ಲ ಏನೂ ಇಲ್ಲ ಅಮ್ಮ ಸುಮ್ಮನೆ ರೈಲು ಬಿಡೋದು ಎಂದು ಮಗುವಿಗೆ ಮನವರಿಕೆಯಾಗುತ್ತದೆ. ಪುರಂದರ ದಾಸರು ಅದನ್ನೇ ‘ಗುಮ್ಮನೆಲ್ಲಿಹ ತೋರಮ್ಮ ಸುಮ್ಮನಂಜಿಸಬೇಡಮ್ಮ…’ ಎಂಬ ಇನ್ನೊಂದು ಕೀರ್ತನೆಯಲ್ಲಿ ಚಂದವಾಗಿ ಬಣ್ಣಿಸಿದ್ದಾರೆ. ಅದರಲ್ಲಿ ಕೃಷ್ಣ ಯಶೋದೆಗೇ ಚಾಲೆಂಜ್ ಹಾಕುತ್ತಾನೆ. ಮೂರು ಲೋಕವೆಲ್ಲ ಸುತ್ತಾಡಿ ಬಂದೆ, ಗುಮ್ಮ ಎಲ್ಲೂ ಇಲ್ಲ, ಸೊಲ್ಲುಸೊಲ್ಲಿಗೆ ನೀ ಬೆದರಿಸಬೇಡಮ್ಮ ಸುಮ್ಮಸುಮ್ಮನೆ ಎನ್ನ ಹೆದರಿಸ ಬೇಡಮ್ಮ ಎನ್ನುತ್ತಾನೆ.
ನಾವಾದರೂ ಅಷ್ಟೇ, ಚಿಕ್ಕವರಿದ್ದಾಗ ಗುಮ್ಮನಿಗೆ ಹೆದರಿದವರು ಆಮೇಲೆ ಗುಮ್ಮ ಅಲ್ಲ ಅವನಜ್ಜ ಬಂದರೂ ಹೆದರೋದಿಲ್ಲ ಅಂತೇವೆ. ಮತ್ತೆ ನಮ್ಮ ಮಕ್ಕಳನ್ನು ಹೆದರಿಸಲಿಕ್ಕೆ ನಮಗೆ ಗುಮ್ಮನೇ ಬೇಕಾಗುತ್ತಾನೆ. ಹೀಗೆ ತಲೆತಲಾಂತರಗಳಲ್ಲೂ ಅಸ್ತಿತ್ವವಿರುವ ಗುಮ್ಮ ಮಹಾಶಯ ಚಿರಂಜೀವಿ ಅಷ್ಟೇಅಲ್ಲ,
ಆದಿಯಾಗಲೀ ಅಂತ್ಯವಾಗಲೀ ಇಲ್ಲದವನು. ಥೇಟ್ ಭಗವಂತನಂತೆಯೇ.