Sunday, 15th December 2024

ಪ್ರಜಾಪ್ರಭುತ್ವಕ್ಕೆ ಜಯವಾಗಲಿ

ಅಭಿಮತ

ಕೆ.ವಿ.ವಾಸು. ಮೈಸೂರು

ದೇಶಾದ್ಯಂತ ಭಾರಿ ಕುತೂಹಲ ಕೆರಳಿಸಿದ್ದ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಎಲ್ಲಾ ಮತದಾನೋತ್ತರ ಸಮೀಕ್ಷೆಗಳನ್ನು ಅದು ಹುಸಿಯಾಗಿಸಿದೆ. ಜತೆಗೆ ಕಾಂಗ್ರೆಸ್ ನೇತೃತ್ವದ ‘ಇಂಡಿಯ’ ಮೈತ್ರಿಕೂಟ ೨೩೪ ಸ್ಥಾನಗಳನ್ನು ಗಳಿಸುವ ಮೂಲಕ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಒಂದು ಅತ್ಯಂತ ಪ್ರಬಲ ವಿಪಕ್ಷಗಳ ಒಕ್ಕೂಟವಾಗಲು ಈ ಚುನಾವಣೆ ಅನುವು ಮಾಡಿಕೊಟ್ಟಿದೆ.

೨೪೦ ಸ್ಥಾನಗಳನ್ನು ಗಳಿಸಿ ಲೋಕಸಭೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯು ಸ್ವಂತಬಲದಿಂದ ಸರಕಾರವನ್ನು ರಚಿಸ ಲಾಗದ ಅಸಹಾಯಕ ಪರಿಸ್ಥಿತಿಗೆ ತಲುಪಿದೆ. ಆದರೆ ಎನ್‌ಡಿಎ ಒಕ್ಕೂಟವು ೨೯೨ ಸ್ಥಾನಗಳನ್ನು ಗಳಿಸಿರುವುದರಿಂದ ಕೇಂದ್ರದಲ್ಲಿ ಮೋದಿಯವರ ನೇತೃತ್ವ ದಲ್ಲಿ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬರುವುದು ನಿಚ್ಚಳವಾಗಿದೆ.

ಕಳೆದ ಬಾರಿ ಬಿಜೆಪಿಯೇ ಸ್ವಂತಬಲದಿಂದ ಸರಕಾರ ರಚಿಸಿದ್ದರಿಂದ ಆಡಳಿತಕ್ಕೆ ಹೆಚ್ಚಿನ ಸ್ವಾತಂತ್ರ್ಯವಿತ್ತು. ಆದರೀಗ ಬಿಜೆಪಿಗೆ ಬಹುಮತವಿಲ್ಲದ ಕಾರಣ ಮೈತ್ರಿಧರ್ಮವನ್ನು ಅನಿವಾರ್ಯವಾಗಿ ಪಾಲಿಸಲೇಬೇಕಾಗಿದೆ. ಅಂದರೆ, ಮನಸ್ಸಿಗೆ ಬಂದಹಾಗೆ ನೀತಿ-ನಿರ್ಧಾರಗಳನ್ನು ಕೈಗೊಳ್ಳುವುದು ಸಾಧ್ಯವಿಲ್ಲ. ೧೯೯೧ರಲ್ಲಿ ಪಿ.ವಿ.ನರಸಿಂಹರಾವ್ ಅವರಿಗೆ ಎದುರಾಗಿದ್ದ ಪರಿಸ್ಥಿತಿಯೇ ಈಗ ಮೋದಿಯವರಿಗೂ ಎದುರಾಗಿದೆ. ಜೆಡಿಯು ಹಾಗೂ ತೆಲುಗುದೇಶಂ ಪಕ್ಷಗಳ ನಾಯಕರಾದ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು, ತಾವು ಎನ್‌ಡಿಎ ಒಕ್ಕೂಟದಲ್ಲೇ ಉಳಿಯುವುದಾಗಿ ಹೇಳಿರುವುದರಿಂದ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬರುವುದಕ್ಕೆ ಸದ್ಯಕ್ಕೆ ಯಾವುದೇ ತೊಡಕುಂಟಾಗುವ ಲಕ್ಷಣಗಳಿಲ್ಲ.

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. ಇಲ್ಲಿ ‘ಇಂಡಿಯ’ ಮೈತ್ರಿಕೂಟ ೪೩ ಸ್ಥಾನಗಳನ್ನು ಗಳಿಸಿದರೆ ಎನ್‌ಡಿಎಗೆ ದಕ್ಕಿರುವುದು ೩೬ ಸ್ಥಾನಗಳು ಮಾತ್ರ. ಇದಕ್ಕಿಂತ ಅಚ್ಚರಿಯ ಸಂಗತಿಯೆಂದರೆ, ಅಯೋಧ್ಯೆ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಜಯಗಳಿಸಿರುವುದು. ಮಹಾರಾಷ್ಟ್ರ, ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ಎನ್‌ಡಿಎಗೆ ಹಿನ್ನಡೆಯಾಗಿದ್ದರೂ, ಗುಜರಾತ್, ಮಧ್ಯಪ್ರದೇಶ, ದೆಹಲಿ, ಒಡಿಶಾ, ಛತ್ತೀಸ್‌ಗಢ ಮುಂತಾದ ರಾಜ್ಯಗಳು ಬಿಜೆಪಿಯ ಕೈಹಿಡಿದಿವೆ. ಅತ್ತ ‘ಇಂಡಿಯ’ ಮೈತ್ರಿಕೂಟಕ್ಕೆ ಒಟ್ಟಾರೆಯಾಗಿ ೨೩೪ ಸ್ಥಾನಗಳು ಲಭಿಸಿದ್ದರೆ, ೯೯ ಸ್ಥಾನಗಳನ್ನು ಗಳಿಸುವ ಮೂಲಕ ಕಾಂಗ್ರೆಸ್ ತನ್ನ ಬಲವನ್ನು ದ್ವಿಗುಣಗೊಳಿಸಿಕೊಂಡಿರುವುದು ಈ ಚುನಾವಣೆಯ ಮತ್ತೊಂದು ವಿಶೇಷ.

ಬಹಳ ವರ್ಷಗಳ ನಂತರ, ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ದೊರಕಲಿದ್ದು, ಕೇರಳದ ವಯನಾಡು ಮತ್ತು ಉತ್ತರ ಪ್ರದೇಶದ ರಾಯ್‌ಬರೇಲಿ ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿರುವ ರಾಹುಲ್ ಗಾಂಧಿ ವಿಪಕ್ಷ ನಾಯಕನಾಗುವ ಸಾಧ್ಯತೆಗಳು ಸ್ಪಷ್ಟವಾಗಿವೆ. ಅವರು ಕೈಗೊಂಡಿದ್ದ ‘ಭಾರತ್ ಜೋಡೋ’ ಯಾತ್ರೆ ತಕ್ಕ ಮಟ್ಟಿಗೆ ಫಲ ನೀಡಿರಬಹುದು. ಮತ್ತೊಂದೆಡೆ ಇದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯವರ ಸಾಮರ್ಥ್ಯಕ್ಕೂ ಸಂದ ಮನ್ನಣೆಯಾಗಿದೆ. ಕೇರಳದಲ್ಲಿ ಬಿಜೆಪಿಯು ಇದೇ ಮೊದಲ ಬಾರಿಗೆ ಖಾತೆ ತೆರೆದಿರುವುದು ಅಚ್ಚರಿದಾಯಕ ವಾಗಿದ್ದರೆ, ಒಡಿಶಾ ವಿಧಾನಸಭೆಯಲ್ಲಿ ಬಹುಮತ ಗಳಿಸಿ ನವೀನ್ ಪಟ್ನಾಯಕ್‌ರನ್ನು ಅಧಿಕಾರದಿಂದ ಕೆಳಗಿಳಿಸಿ ಬಿಜೆಪಿ ಸರಕಾರದ ಸ್ಥಾಪನೆಯಾಗಲಿ ರುವುದು ಕೂಡ ಗಮನಾರ್ಹ ಅಂಶವಾಗಿದೆ.

ಕಳೆದ ೧೦ ವರ್ಷಗಳಲ್ಲಿ ಮೋದಿ ಸರಕಾರ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಭಾರತಕ್ಕೆ ವಿಶ್ವಮಟ್ಟದಲ್ಲಿ ಒಳ್ಳೆಯ ಸ್ಥಾನ ಲಭಿಸಿದೆ. ಜಗತ್ತಿನ ೫ನೇ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಭಾರತ ಹೊರ ಹೊಮ್ಮಿದೆ. ವಿಶ್ವದ ಪ್ರಭಾವಿ ನಾಯಕರ ಪೈಕಿ ಮೋದಿಯವರೂ ಒಬ್ಬರಾಗಿದ್ದಾರೆ. ಇವೆಲ್ಲವೂ ಒಪ್ಪುವಂಥದ್ದೇ. ಆದರೆ, ರಾಹುಲ್ ಗಾಂಧಿಯವರನ್ನು ‘ಪಪ್ಪು’, ‘ಎಳಸು’ ಎಂದೆಲ್ಲಾ ಅಣಕಿಸುತ್ತಿದ್ದವರ ಬಾಯಿಗೆ ದೊಡ್ಡ ಬೀಗ ಬಿದ್ದಂತಾ ಗಿದೆ.

ಸುಮಾರು ೨೫ ವರ್ಷಗಳಷ್ಟು ದೀರ್ಘ ಕಾಲ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಿದ್ದ ಎಡಪಕ್ಷಗಳು ಈ ಸಲ ಅಲ್ಲಿ ಖಾತೆಯನ್ನೇ ತೆರೆಯದಿರುವುದು ಅವುಗಳ ಶೋಚನೀಯ ಸ್ಥಿತಿಗೆ ಹಿಡಿದ ಕೈಗನ್ನಡಿ. ಕರ್ನಾಟಕದಲ್ಲಿ ಬಿಜೆಪಿ ೧೭ ಸ್ಥಾನಗಳನ್ನು ಗಳಿಸಿದ್ದರೆ, ಆಡಳಿತಾರೂಢ ಕಾಂಗ್ರೆಸ್ ೯ ಸ್ಥಾನಗಳನ್ನು ದಕ್ಕಿಸಿಕೊಂಡಿದೆ. ಕಾಂಗ್ರೆಸ್ ಇಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದರೆ ಕೇಂದ್ರ ಮಟ್ಟದಲ್ಲಿ ಪಕ್ಷಕ್ಕೆ ಮತ್ತಷ್ಟು ಅನುಕೂಲವಾಗುತ್ತಿತ್ತು. ಒಟ್ಟಿನಲ್ಲಿ ಈ ಚುನಾವಣೆ ದೇಶದಲ್ಲಿ ಹೊಸ ರಾಜಕೀಯ ಪರ್ವಕ್ಕೆ ನಾಂದಿ ಹಾಡಿದೆ. ಯಾವುದೇ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಬೇರೂರಬೇಕೆಂದರೆ, ಪ್ರಬಲವಾದ ಪ್ರತಿಪಕ್ಷಗಳು ಇರಲೇಬೇಕು. ಅಂಥ ಒಂದು ಸದವಕಾಶ ಈಗ ದೇಶಕ್ಕೆ ಲಭಿಸಿದೆ. ಪ್ರಜಾಪ್ರಭುತ್ವಕ್ಕೆ ಜಯವಾಗಲಿ.

(ಲೇಖಕರು ವಕೀಲರು ಮತ್ತು ನೋಟರಿ)