Thursday, 12th December 2024

ಭಾಜಪಾದಲ್ಲಿ ಧನಂ ಜಯ ಯೋಜನೆ ಅಂತ್ಯವಾಗಲಿ !

ಅಭಿಪ್ರಾಯ

ರವೀ ಸಜಂಗದ್ದೆ

ಕರ್ನಾಟಕದ ಕರಾವಳಿ ಭಾಗದ ಕ್ಷೇತ್ರಗಳಲ್ಲಿ ಭಾಜಪಾ ಚಿಹ್ನೆಯಡಿ ಯಾರನ್ನು ನಿಲ್ಲಿಸಿದರೂ ಮತದಾರರು ಗೆಲ್ಲಿಸುತ್ತಾರೆ ಎನ್ನುವ ಪ್ರತೀತಿ ದಶಕಗಳ ಹಿಂದಿನಿಂದಲೇ ಇತ್ತು. ಅದನ್ನು ಮತ್ತೆ ಅಲ್ಲಿನ ಮತದಾರ ಬಂಧುಗಳು ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯ ಫಲಿತಾಂಶದ ಮೂಲಕ ಸಾಬೀತು ಮಾಡಿದ್ದಾರೆ.

ಭಟ್ಟಂಗಿಗಳ ಗುಂಪು ಗೆದ್ದಿದೆ, ಭಟ್ಟರು ಸೋತು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ! ಅನೇಕ ದೇವ ದುರ್ಲಭರು ಮನಸ್ಸಿಲ್ಲದಿದ್ದರೂ ಪಕ್ಷದ ಅಣತಿ ಯಂತೆ ಭಾಜಪಾ ಅಭ್ಯರ್ಥಿಯ ಪರ ಹಗಲಿರುಳು ಕೆಲಸ ಮಾಡಿದ್ದಾರೆ; ಮತ ಚಲಾಯಿಸಿದ್ದಾರೆ! ಅಲ್ಲಿಗೆ ಭಾಜಪಾ ಅಭ್ಯರ್ಥಿ ಧನಂಜಯ ಸರ್ಜಿಯವರು ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ. ಅಭಿನಂದನೆಗಳು.

ದೇವ ದುರ್ಲಭ ಕಾರ್ಯಕರ್ತನಿಗೆ ಸೋಲು ಹೊಸದೇನೂ ಅಲ್ಲ! ಹಲವು ದಶಕಗಳಿಂದ ದುಡಿದು ಸೋಲನ್ನು ಅನುಭವಿಸಿರುವ ಚರಿತ್ರೆ ಮತ್ತು ಅದರಿಂದ ಪಾಠ ಕಲಿತು ಪುಟಿದೇಳುವ ಅವನ ಪ್ರಯತ್ನ ನಿರಂತರ ಸಾಗುತ್ತಿದೆ. ಕಳೆದೊಂದು ದಶಕದಿಂದ ಅವನ ಪಾಳಯದವರು ಗೆಲ್ಲುತ್ತಿರುವ, ಅಧಿಕಾರ ಪಡೆದು ರಾಜ್ಯಭಾರ ಮತ್ತು ದೇಶ ಭಾರ ಮಾಡುತ್ತಿರುವುದನ್ನು ನೋಡಿ ಸಂತಸದಿಂದ ಇದ್ದಾನೆ. ಅವನ ಪಕ್ಷನಿಷ್ಠೆ ಮತ್ತು ಸೈದ್ಧಾಂತಿಕ ನಿಲುವು ಅಂದಿನಿಂದ ಇಂದಿನವರೆಗೂ ಅಪ್ಪಟ ಚಿನ್ನದಂತೆ ಹಾಗೇ ಇದೆ, ಭಾಜಪಾದ ಅನೇಕ ಓತಿಕ್ಯಾತ ಗಳಂತೆ, ಕಪ್ಪೆಯಂತೆ ಪಕ್ಷದಿಂದ ಪಕ್ಷಕ್ಕೆ ಜಿಗಿಯುವವ ರಂತೆ, ಅಧಿಕಾರಕ್ಕಾಗಿ ನಿಷ್ಠೆ ಬದಲಾಯಿಸುವವರಂತೆ ಒಂಚೂರು ಬದಲಾಗಲಿಲ್ಲ, ಬದಲಾಗುವುದೂ ಇಲ್ಲ!

ಅದೆಲ್ಲ ಅವನಿಗೆ ಆಗಿಬರದು, ಅದೇನಿದ್ದರೂ ಕರ್ನಾಟಕ ಬಿಜೆಪಿಯ ಹಲವು ಢೋಂಗಿ ರಾಜಕಾರಣಿ ಯಾನೆ ಉದ್ಯಮಿಗಳಿಗಷ್ಟೇ ಮೀಸಲು. ಬಿಜೆಪಿ
ಅಂದರೆ ಈಗ ‘ಭಟ್ಟಂಗಿಗಳ ಜನತಾ ಪಾರ್ಟಿ’ ಆದಂತೆ ಭಾಸವಾಗುತ್ತದೆ! ಭಾಜಪಾದಲ್ಲಿ ಈಗೇನಾಗಿದೆ ಅಂದರೆ ದುಡ್ಡಿರುವವರು, ತಾವಿರುವ ಕ್ಷೇತ್ರದಲ್ಲಿ ಒಂದಷ್ಟು ಪ್ರಭಾವ ಇರುವವರು, ತಮ್ಮ ಜಾತಿ, ಆರ್ಥಿಕ ಬಲದಿಂದ ಮತದಾರರನ್ನು ಸೆಳೆಯುವ ಅರ್ಹತೆ ಇರುವ ಯಾರೇ ಆದರೂ ಅಂಥವರನ್ನು
ಕೆಂಪುಹಾಸು ಹಾಕಿ ಮಶ್ವರಂನ ಜಗನ್ನಾಥ ಭವನಕ್ಕೆ ಸ್ವಾಗತಿಸಿ ಭಾಜಪಾ ಹಿರಿಯರಿಂದ ಶಾಲು ಮತ್ತು ಗಂಧದ ಮಾಲೆ ಹಾಕಿ ಸ್ವಾಗತಿಸುವ, ಭಾಜಪಾ ಬಳಗಕ್ಕೆ ಸೇರಿಸಿಕೊಳ್ಳುವ ಕೆಟ್ಟ ಸಂಪ್ರದಾಯ new normal ಅಂತಾಗಿದೆ!

ಇವರಿಗೆ ಫಂಡಿಂಗ್ ಮತ್ತು ರಾಶಿ ರಾಶಿ ಮತಗಳನ್ನು ತರಬಲ್ಲ ವ್ಯಕ್ತಿ ಬೇಕು; ಇವೆರಡು ಅರ್ಹತೆ ಇರುವ ಯಾರೇ ಆದರೂ, ಆ ವ್ಯಕ್ತಿ ಭಾಜಪದ ತತ್ವ- ಸಿದ್ಧಾಂತಗಳಿಗೆ ತದ್ವಿರುದ್ಧ ವ್ಯಕ್ತಿಯಾದರೂ ಚಿಂತೆಯಿಲ್ಲ. ಆ ವ್ಯಕ್ತಿಗೆ ಸ್ಥಾನಮಾನ ಮತ್ತು ಅಧಿಕಾರ ಬೇಕು. ಅಲ್ಲಿಗೆ ಉಳಿದ ಎಲ್ಲಾ ವಿಷಯ, ವಿಚಾರಗಳೂ ಗೌಣ. ಸಿದ್ಧಾಂತವೂ ಇಲ್ಲ, ಬದ್ಧತೆ ಮೊದಲೇ ಇಲ್ಲ -it’s pure business and both side sees the return on investment.ಕೈ ತುಂಬಾ ‘ಧನ’ ಹಿಡಿದುಕೊಂಡು ಪಕ್ಷದ ಪ್ರಮುಖರನ್ನು ಸಂಪರ್ಕಿಸುತ್ತಾರೆ, ಟಿಕೆಟ್‌ಗೆ ದರ ನಿಗದಿಯಾಗಿ ಸ್ಪರ್ಧಿಸುತ್ತಾರೆ.

ಪ್ರತಿ-ಲಾಪೇಕ್ಷೆಯಿಲ್ಲದೆ ದುಡಿಯುವ ದೇವದುರ್ಲಭರ ನಿರಂತರ ಕೆಲಸ,  ಪ್ರಚಾರ ಪ್ರಯತ್ನದಿಂದ ‘ಜಯ’ ಗಳಿಸುತ್ತಾರೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಭಾಜಪಾ ಸೇರಿ, ಆ ಪಕ್ಷದ ಚಿಹ್ನೆಯಿಂದ ಗೆಲ್ಲುತ್ತಿರುವ ಹೆಚ್ಚಿನವರೂ ಪಾಪ್ಯುಲರ್ ‘ಧನಂ’ ‘ಜಯ’ ಯೋಜನೆಯ ಲಾಭಾಂಶಿಗಳೇ ಆಗಿದ್ದಾರೆ! ಮೋದಿ ಯವರು ಅಧಿಕಾರಕ್ಕೆ ಬರುವ ಮೊದಲು, ಅಂದರೆ ಹತ್ತು ವರುಷಗಳ ಹಿಂದೆ ದೇಶದಾದ್ಯಂತ ಭಾಜಪಾದಲ್ಲಿ ಇದ್ದ ನಾಯಕರ ಪಟ್ಟಿ ಮಾಡಿ ಅದನ್ನು ಇಂದಿನ ದೇಶದಾದ್ಯಂತ ಇರುವ ಭಾಜಪಾದ so called ನಾಯಕರ ಪಟ್ಟಿಯೊಂದಿಗೆ ಹೋಲಿಸಿ ನೋಡಿ. ಈಗ ಅರ್ಧಕ್ಕಿಂತ ಹೆಚ್ಚಿನವರು ಉದ್ಯಮಿಗಳು, ಹಣವಂತರು.

ಅಧಿಕಾರಕ್ಕಾಗಿ ಮತ್ತು ಮಾಡಿದ ಭ್ರಷ್ಟಾಚಾರದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಭಾಜಪಾ ಬಳಗಕ್ಕೆ ಬಂದವರ ಸಂಖ್ಯೆಯೂ ದೊಡ್ಡದಿರುವುದು ಮತ್ತೊಂದು ದುರಂತ. ಭ್ರಷ್ಟಾಚಾರದಿಂದ ಹಣ, ಆಸ್ತಿ, ಅಂತಸ್ತು ಮಾಡಿ, ಅನಂತರ ಭಾಜಪಾಗೆ ಬಂದರೆ ಆಗ ಪಕ್ಷದ washing machine ಅಂಥವ ರನ್ನು ಸ್ವಚ್ಛ, ಸಭ್ಯ ಮತ್ತು ನಿರಪರಾಧಿ ಎಂದು ಷರಾ ಬರೆಯುತ್ತದೆ. ಅಲ್ಲಿಗೆ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮತ್ತು ಅಧಿಕಾರದಲ್ಲಿ ಇರುವ ಪಕ್ಷದಲ್ಲಿ  ಇರುವು ದರಿಂದ ಮತ್ತಷ್ಟು ಬಾಚುವುದೂ ಸುಲಭ. ಇಂಥಾ ಸರಳ ಮತ್ತು ಸುಲಲಿತ business model ದೇಶದ ಯಾವುದೇ ಭಾಗದಲ್ಲೂ ಇರಲಾರದು, ಸಿಗಲಾರದು.

‘ತಿನ್ನುವುದಿಲ್ಲ; ತಿನ್ನಲು ಬಿಡುವುದಿಲ್ಲ’, ‘ಭ್ರಷ್ಟಾಚಾರದ ವಿಷಯದಲ್ಲಿ ಶೂನ್ಯ ಸಹಿಷ್ಣುತೆ’ (zero tolerance) ಇತ್ಯಾದಿ ಸ್ಲೋಗನ್‌ಗಳು ಕೇವಲ ಕೆಲವೇ ಕೆಲವರನ್ನು ದಮನಿಸಲು ಮಾತ್ರ ಉಪಯೋಗಕ್ಕೆ ಬರುತ್ತಿವೆ. ದೊಡ್ಡ ತಿಮಿಂಗಿಲಗಳು, ನುಂಗಣ್ಣಗಳು, ಧಗಾಕೋರರು, ಮೊಸಳೆಗಳು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಿರಂತರ ಬಾಚುತ್ತಾ ತಮ್ಮ ತಮ್ಮ ಆಸ್ತಿ ವೃದ್ಧಿಸುತ್ತಿವೆ. ಇವರು ಬೀಸುವ ಬಲೆಗೆ ಸಣ್ಣ ಮೀನುಗಳು ಮತ್ತು ಕೆಲ ಅದೃಷ್ಟ ಕಡಿಮೆ
ಇರುವ ಸಣ್ಣ ಸಣ್ಣ ಕಳ್ಳರು ಮಾತ್ರ ಬಿದ್ದು ED, CBI, Income Tax ಇತ್ಯಾದಿ ಕಚೇರಿಗಳಿಗೆ ಎಡತಾಗುತ್ತಿದ್ದಾರೆ. ಅಲ್ಲೂ ಕೆಲವೊಮ್ಮೆ ವ್ಯವಹಾರ ಕುದುರಿ ಕೇಸುಗಳಿಂದ ಖುಲಾಸೆಗೊಂಡ ಉದಾಹರಣೆಗಳೂ ತುಂಬಾ ಇವೆ!

ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸೀಟುಗಳು ಬಾರದೇ ಇರುವುದರ ಹಿಂದೆಯೂ ಇಂಥದ್ದೇ ಸಾಕಷ್ಟು ಅಬದ್ಧಗಳು ಮತ್ತು ಪಟ್ಟಭದ್ರ ಹಿತಾಸಕ್ತಿ ಗಳ ನಿರ್ಧಾರಗಳು ಕಾರಣ. ವಿರೋಧ ಪಕ್ಷದವರೂ ಸೇರಿ ಈ ಪರಿಸ್ಥಿತಿಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಗೆದ್ದವರು ಬೇಸರದಲ್ಲಿ ಇದ್ದಾರೆ; ಸೋತ ವರು ಕಳೆದ ಬಾರಿಗಿಂತ ಹೆಚ್ಚು ಸೀಟು ಪಡೆದ ಸಂತಸದಲ್ಲಿ ಇದ್ದಾರೆ! ಇದು ಸಾಕು! ಕರ್ನಾಟಕ ಭಾಜಪಾ ಮುಂದಿನ ವಿಧಾನಸಭಾ ಚುನಾವಣೆ ಗೆಲ್ಲಬೇಕಾದರೆ ನೈಜ ಕಾರ್ಯಕರ್ತ ಮತ್ತು ನಿಷ್ಠಾವಂತ ಜನರ ನಡುವಿನ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನೆಲೆಗೆ ತರಬೇಕು.

ಪ್ರತಾಪ್ ಸಿಂಹ, ಸಿಟಿ ರವಿ, ಅರುಣ್ ಕುಮಾರ್ ಪುತ್ತಿಲ, ರಘುಪತಿ ಭಟ, ಅರವಿಂದ ಬೆಲ್ಲದ, ಬಸನಗೌಡ ಪಾಟೀಲ್ ಯತ್ನಾಳ್, ಪ್ರೀತಂ ಗೌಡ ಮುಂತಾದ
ನಡುವಯಸ್ಸಿನ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದೊಳ್ಳೆ ಕೆಲಸ ಮಾಡುವ ತಂಡವನ್ನು ಕಟ್ಟಬೇಕು. ಮತ್ತು ಅವರಿಗೆ ಕೆಲಸದ ವಿಚಾರ ದಲ್ಲಿ free hand ಕೊಡಬೇಕು. ಒಂದೆರಡು ವರುಷಗಳಲ್ಲಿ ಇಂಥಾ ತಂಡದ ಕೆಲಸ ಮತ್ತು ಕಾರ್ಯನಿರ್ವಹಣಾ ಶೈಲಿಯ ಫಲಿತಾಂಶ ನೋಡಿ ಭಾಜಪಾ ಜೊತೆಗೆ ಇತರ ಪಕ್ಷಗಳೂ ಬೆರಗಾಗದಿದ್ದರೆ ಮತ್ತೆ ಹೇಳಿ!

ಇದೆಲ್ಲ ಪಕ್ಷದ ನಾಯಕರಿಗೆ ಗೊತ್ತಿಲ್ಲದ ವಿಚಾರ ವೇನಲ್ಲ! ‘ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?!’ ಎನ್ನುವುದೇ ಯಕ್ಷಪ್ರಶ್ನೆ. ಪುತ್ತೂರಿನಲ್ಲಿ ಪುತ್ತಿಲರಿಗೆ ಟಿಕೆಟ್ ನಿರಾಕರಣೆ, ದೇಶದ ಅಭಿವೃದ್ಧಿ ವಿಚಾರದಲ್ಲಿ ಮೊದಲಿಗರಾಗಿದ್ದ ಇದ್ದ ಪ್ರತಾಪ್ ಸಿಂಹಗೆ ಟಿಕೆಟ್ ಕೊಡದಿದ್ದುದು, ಕೊಟ್ಟ ಮಾತಿಗೆ ತಪ್ಪಿ ರಘುಪತಿ ಭಟ್ಟರಿಗೆ ಎರಡೆರಡು ಬಾರಿ ಟಿಕೆಟ್ ನಿರಾಕ ರಿಸಿದ್ದು, ಯತ್ನಾಳ್ ಸೋಲಿಸಲು ಯತ್ನಿಸಿ ಸ್ವಲ್ಪದರ ವಿಫಲರಾದದ್ದು, ಪ್ರೀತಂ ಗೌಡ, ಮಾಧು ಸ್ವಾಮಿ ಮತ್ತು ಸಿಟಿ ರವಿಯವರನ್ನು ಹೊಂದಾಣಿಕೆ ರಾಜಕಾರಣ ಮಾಡಿ ಸೋಲಿಸಿದ್ದು… ಇದೆಲ್ಲವೂ ಭಾಜಪದ ಸರ್ವಾಂಗೀಣ ಅಭಿವೃದ್ಧಿಗೆ ದೊಡ್ಡ ಹೊಡೆತ ಕೊಟ್ಟಿರುವುದು ಅಲ್ಲಿನ ಎಲ್ಲರಿಗೂ ಗೊತ್ತಿದೆ.

ಯಾರೂ ಮಾತನಾಡುತ್ತಿಲ್ಲ, ಇವೆಲ್ಲ ಏಟುಗಳು ಭಾಜಪಾಗೆ ದುಬಾರಿಯಾಗಿವೆ. ಇಂಥಾ ಎಲ್ಲ ಅಪದ್ಧಗಳೂ ಸಂಪೂರ್ಣ ನಿಂತು ಎಲ್ಲರನ್ನೂ ವಿಶ್ವಾಸ ದಿಂದ ತೆಗೆದುಕೊಂಡು ಹೋಗುವ ಕೆಲಸವಾಗಬೇಕು, ನಾಯಕರು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಕರ್ನಾಟಕ ಭಾಜಪಾ ಥಿಂಕ್ ಟ್ಯಾಂಕ್ ಈ ಎಲ್ಲ ಆಯಾಮಗಳಲ್ಲಿ ಯೋಚಿಸಿ ಒಂದು ಸದೃಢ, ಕೆಲಸ ಮಾಡುವ ಮತ್ತು ಸಮಷ್ಟಿಯ ದೃಷ್ಟಿಕೋನ ಇರುವ ನವ-ಯವ ತಂಡ ಮತ್ತು ಯೋಜನೆ ಕೈಗೆತ್ತಿಕೊಳ್ಳುವ ತುರ್ತು ಬಂದಿದೆ. ಫೀಲ್ಡಿಗಿಳಿದು ಕಾರ್ಯಪ್ರವೃತ್ತರಾಗಬೇಕಷ್ಟೇ!

ಭಟ್ಟರು ಚುನಾವಣೆಯಲ್ಲಿ ಸೋತಿದ್ದಾರೆ, ಜೊತೆಗೆ ಅಲ್ಲಿನ ದೇವದುರ್ಲಭ ಕಾರ್ಯಕರ್ತನೂ. ಅವರ ಛಲ, ಸೆಡವು ಮತ್ತು ತಾನು ಉಸಿರಾಡುವ ಸೈದ್ಧಾಂತಿಕತೆ ಇನ್ನೂ ಹಸಿರಾಗಿದೆ ಮತ್ತು ಅದಕ್ಕೆ ಇನ್ನಷ್ಟು ಹಸಿವಿದೆ! ಅಲ್ಲಿನ ಒಳಗಿನವರೇ ಹಲವರು ಖಂಡಿತಾ ತುಂಬಾ ‘ಸಂತೋಷ’ ಪಡುತ್ತಿರ ಬಹುದು. ‘ತಾನು ಮಾಡಿದರೆ ಮಾತ್ರ ತ್ಯಾಗ, ಉಳಿದವರದ್ದು ಭೋಗ ಎಂದು ತಿಳಿದುಕೊಂಡವನು ಅಯೋಗ್ಯ’ ಎನ್ನುವ ಉಕ್ತಿಯೊಂದಿದೆ. ಹಾಗೇನಾ ದರೂ ಈ ಬಾರಿಯೂ ಅಂದುಕೊಂಡರೆ ಇರಲಿ ‘ಅವರವರ ಭಾವಕ್ಕೆ; ಅವರವರ ಭಕುತಿಗೆ’. ಭಾಜಪಾದಲ್ಲಿ ಪಕ್ಷ ಕಟ್ಪುವವರಿಗಿಂತ, ಇತ್ತೀಚೆಗೆ ಮಾಮೂ ಲಾಗಿರುವ ಪಕ್ಷದೊಳಗೆ ಒಬ್ಬರನ್ನೊಬ್ಬರು ಎತ್ತಿ ಕಟ್ಟುವ ಚಾಳಿ-ಸಂಸ್ಕೃತಿ ಕೊನೆಯಾಗಬೇಕಿದೆ.

ವಿರೋಧಿಗಳಿಂದ ಸೋಲುಂಟಾದಾಗ ಆಗುವ ನೋವಿಗೂ ಒಳಗಿನವರೇ ಸೋಲಿಸಿದಾಗ ಆಗುವ ಅದಮ್ಯ ಸಂಕಟಕ್ಕೂ ಇರುವ ವ್ಯತ್ಯಾಸ ನಾವು ಅರಿತಿ
ದ್ದೇವೆ. ಬಿಟ್ಟುಬಿಡಿ, ನಮಗೆಲ್ಲ ಇದೇನೂ ಹೊಸದಲ್ಲವಲ್ಲ! ಭಟ್ರೇ ಮುಂದಿನ ಕ್ರಿಯಾ ಯೋಜನೆ ಸಿದ್ಧಪಡಿಸೋಣ. ನಾಳೆಯಿಂದಲೇ ಫೀಲ್ಡಿಗಿಳಿಯೋಣ. ಮೊದಲು ಉಡುಪಿಯಲಿ ನೆಲೆಸಿರುವ ಪೊಡವಿಯೊಡೆ ಯನಿಗೆ ನಮಸ್ಕರಿಸಿ ಅನ್ನ ಪ್ರಸಾದ ಸ್ವೀಕರಿಸಿ ನಂತರ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ, ಮಂತ್ರಾಕ್ಷತೆ ಪಡೆಯೋಣ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಗೆದ್ದಿರುವ ಡಾ. ಧನಂಜಯ ಸರ್ಜಿಯವರನ್ನು ಭೇಟಿ ಯಾಗಿ ಗೆಲುವಿಗೆ ಅಭಿನಂದನೆ ಸಲ್ಲಿಸೋಣ, ನೀವು ಅಭ್ಯರ್ಥಿಯಾಗಿ ಘೋಷಿಸಿದ್ದ ಪ್ರಣಾಳಿಕೆಯ ವಿವರಗಳನ್ನು ಅವರ ಮುಂದಿಟ್ಟು ಅದನ್ನೆಲ್ಲ ಪೂರೈಸಿ ಕೊಡುವಂತೆ
ವಿನಂತಿಸಿ ವಾಗ್ದಾನ ಪಡೆಯೋಣ.

ಅನಂತರ ಹಿತೈಷಿಗಳ ಸಭೆ ನಡೆಸಿ, ಒಂದೊಳ್ಳೆಯ ಶುಭದಿನ ನೋಡಿ ಮತ್ತೆ ತವರುಮನೆಗೆ ಹೊರಟು ನಿಣ! ನಿಮಗೆ ಭಾಜಪಾ ಬಳಗದಲ್ಲಿ ಇದ್ದು
ದುಡಿಯುವ ಜರೂರತ್ತು ಎಷ್ಟಿದೆಯೋ, ಅಷ್ಟೇ ನಿಮ್ಮ ಜರೂರತ್ತು ಭಾಜಪಾಗೆ ಮುಂದಿನ ದಿನಗಳಲ್ಲಿ ಉಡುಪಿ ಮತ್ತು ಕರ್ನಾಟಕದಾದ್ಯಂತ ಇದ್ದೇ ಇದೆ ಎನ್ನುವುದು ನನ್ನ ಬಲವಾದ ವಾದ ಮತ್ತು ನಂಬಿಕೆ! ಹೌದು, ಎರಡೂ ಕಡೆಯಿಂದ ಒಂದಷ್ಟು ಕೆಸರೆರಚಾಟ ನಡೆದಿದೆ, ತಪ್ಪಾಗಿದೆ.

ಅಂದು ಕೆಜೆಪಿ ಕಟ್ಟಿ ಭಾಜಪಾ ಸೋಲಿಗೆ ಕಾರಣರಾ ದವರನ್ನು, ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಪಕ್ಷ ಬಿಟ್ಟು ಹೋದ ಮಾಜಿ ಮುಖ್ಯಮಂತ್ರಿ ಗಳನ್ನೂ ವಾಪಸ್ ಕರೆಸಿ ಸೂಕ್ತ ಸ್ಥಾನಮಾನ ಕೊಟ್ಟಿರುವ ಹೆಗ್ಗಳಿಕೆ ಇರುವ ಪಕ್ಷವಿದು! ಹಾಗಾಗಿ ನಿಮ್ಮ ಘರ್ ವಾಪಸಾತಿಗೆ ತೊಂದರೆ, ಹಿನ್ನಡೆ ಆಗಲಾರದು. ಆಗಲೂ ಕೂಡದು.

(ಲೇಖಕರು: ಹವ್ಯಾಸಿ ಬರಹಗಾರರು)