Thursday, 12th December 2024

ಬಹುಮತದ ಸರಕಾರ, ನಿರೀಕ್ಷೆಗಳ ಸಾಕಾರ

ವಿದ್ಯಮಾನ

ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ

ಅಯೋಧ್ಯೆಯಲ್ಲೇ ಬಿಜೆಪಿಗೆ ಸೋಲು, ಜನಪ್ರಿಯ ಪ್ರಧಾನಿಗೆ ಕಡಿಮೆ ಅಂತರದ ಗೆಲುವು, ಜೈಲಲ್ಲಿದ್ದ ಒಬ್ಬ ಭಯೋತ್ಪಾದಕನ ಗೆಲುವು, ತಮಿಳುನಾಡಿ ನಲ್ಲಿ ಅಣ್ಣಾಮಲೈ ಹೋರಾಟಕ್ಕೆ ಸೋಲು, ಆಂಧ್ರಪ್ರದೇಶದಲ್ಲಿ ಎನ್‌ಡಿಎ ಒಕ್ಕೂಟಕ್ಕೆ ವಿಜಯ ಇವು ಈ ಸಲದ ಲೋಕಸಭಾ ಚುನಾವಣಾ ಫಲಿತಾಂಶದ ಮುಖ್ಯಾಂಶಗಳು ಎನ್ನಬಹುದು.

ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದು ಜೂನ್ ೪ರಂದು ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ೨೯೩ ಸ್ಥಾನಗಳನ್ನು ಪಡೆದು ಸರಳ ಬಹುಮತದೊಂದಿಗೆ ಸತತ ಮೂರನೇ ಬಾರಿಗೆ ಅಽಕಾರಕ್ಕೆ ಬರಲಿದ್ದರೆ, ‘ಇಂಡಿಯ’ ಒಕ್ಕೂಟ ೨೩೪ ಸ್ಥಾನಗಳಲ್ಲಿ ನಿರೀಕ್ಷೆಗೂ ಮೀರಿದ ಗೆಲುವು ಸಾಧಿಸಿದೆ.

ಇನ್ನೇನು ಅಸ್ತಿತ್ವವೇ ಇಲ್ಲದಾಯಿತು ಎನ್ನುವ ಸ್ಥಿತಿಯಲ್ಲಿದ್ದ ಕಾಂಗ್ರೆಸ್, ಶತಕದ ಹತ್ತಿರಕ್ಕೆ ಬಂದು ನಿಂತಿದೆ ಮತ್ತು ಈ ಬಾರಿ ಅಧಿಕೃತ ವಿರೋಧ ಪಕ್ಷದ ಸ್ಥಾನ ತುಂಬಲಿದೆ. ಕಳೆದ ಹತ್ತು ವರ್ಷಗಳಿಂದ ದೇಶದ ಅಧಿಕಾರ ಚುಕ್ಕಾಣಿ ಹಿಡಿದಿರುವ ಮೋದಿ ಮತ್ತೊಮ್ಮೆ ಪ್ರಧಾನಿ ಗದ್ದುಗೆ ಏರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅಯೋಧ್ಯೆಯಲ್ಲೇ ಬಿಜೆಪಿಗೆ ಸೋಲು, ಪ್ರಧಾನಿಗೆ ಕಡಿಮೆ ಅಂತರದ ಗೆಲುವು, ಪಂಜಾಬಿನಲ್ಲಿ ಒಬ್ಬ ಭಯೋತ್ಪಾದಕನ ಗೆಲುವು, ತಮಿಳುನಾಡಿನಲ್ಲಿ ಅಣ್ಣಾಮಲೈ ಹೋರಾಟಕ್ಕೆ ಸೋಲು, ಕರ್ನಾಟಕದಲ್ಲಿ ದೇಶ ವಿಭಜನೆಯ ಮಾತಾಡುತ್ತಿ ದ್ದವರ ವಿರುದ್ಧ ಡಾ.ಮಂಜುನಾಥ್ ಅವರ
ಅಭೂತಪೂರ್ವ ಗೆಲುವು, ಒಡಿಶಾ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿಗೆ ಐತಿಹಾಸಿಕ ಜಯ, ಆಂಧ್ರಪ್ರದೇಶದಲ್ಲಿ ಚಂದ್ರಬಾಬುನಾಯ್ಡು ನೇತೃತ್ವದಲ್ಲಿ ಎನ್‌ಡಿಎ ಒಕ್ಕೂಟಕ್ಕೆ ವಿಜಯ, ಮಧ್ಯಪ್ರದೇಶ ಮತ್ತು ದೆಹಲಿಯಂಥ ರಾಜ್ಯಗಳಲ್ಲಿ ಬಿಜೆಪಿಯ ಕ್ಲೀನ್‌ಸ್ವೀಪ್ ಇವುಗಳು ಈ ಚುನಾವಣಾ ಫಲಿತಾಂಶದ ಮುಖ್ಯಾಂಶಗಳು ಎಂದು ಹೇಳಬಹುದು.

ವಿರೋಧ ಪಕ್ಷಗಳ ಉತ್ತಮ ಸಾಧನೆಯಿಂದಾಗಿ ಈ ಚುನಾವಣೆಯಲ್ಲಿ ಎವಿಎಂ ಆರೋಪಮುಕ್ತವಾಗಿರುವುದು ಇನ್ನೊಂದು ವಿಶೇಷ. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಪ್ರಚಂಡ ಗೆಲುವು ಮತ್ತು ೨೦೧೯ರ ಚುನಾವಣೆಯ ಮತ್ತೂ ಅಽಕ ಅಂತರದ
ಗೆಲುವುಗಳ ಮುಂದೆ ೨೦೨೪ರ ಚುನಾವಣೆಯ ಗೆಲುವು ಎಲ್ಲರಿಗೂ ಸ್ವಲ್ಪ ಮಂಕಾಗಿ ಕಾಣಿಸುತ್ತಿರುವುದಂತೂ ನಿಜ. ಆದರೆ, ಗೆಲುವು ಗೆಲುವೇ! ಅದು ಅಭಿನಂದನಾರ್ಹವೇ.

ಇಂದಿರಾ ಮರಣದ ನಂತರ ರಾಜೀವ್ ಗಾಂಧಿಯವರಿಗೆ ದೊರೆತ ೪೧೪ ಸ್ಥಾನಗಳನ್ನು ಬಿಟ್ಟರೆ ಒಂದು ಪಕ್ಷಕ್ಕೆ ಸರಳ ಬಹುಮತ ಅಂತ ದೊರೆತಿರುವುದು ನರೇಂದ್ರ ಮೋದಿಯವರ ನಾಯಕತ್ವದ ೨೦೧೪ರ ಹೊಸ ಪೀಳಿಗೆಯ ಬಿಜೆಪಿಗೆ ಮಾತ್ರವೇ. ೨೦೧೯ರಲ್ಲಿ ಅವರು ಈ ಪ್ರದರ್ಶನವನ್ನು ಇನ್ನೂ ಉತ್ತಮಪಡಿಸಿಕೊಂಡರು ಮತ್ತು ಈಗ ೧೦ ವರ್ಷ ಗಳ ಆಡಳಿತದ ನಂತರ ಸ್ವಾಭಾವಿಕವಾಗಿ ಇರಬಹುದಾದ ಆಡಳಿತವಿರೋಧಿ ಮನಸ್ಥಿತಿಯ ಮಧ್ಯೆ ೨೪೦ ಸ್ಥಾನವನ್ನು ಸ್ವತಂತ್ರವಾಗಿ ಗೆಲ್ಲುವುದು ಹಾಗೂ ಎನ್‌ಡಿಎ ಒಕ್ಕೂಟವು ಸರಳ ಬಹುಮತಕ್ಕೆ ಬೇಕಾಗಿರುವುದಕ್ಕಿಂತ ೨೧ ಸ್ಥಾನ ಹೆಚ್ಚು
ಗಳಿಸುವುದು ಅಂದರೆ ಸಣ್ಣ ಮಾತಲ್ಲ. ಅದು ೨೦೧೪ ಮತ್ತು ೨೦೧೯ಕ್ಕಿಂತ ದೊಡ್ಡಮಟ್ಟದ ಸಾಧನೆಯೇ ಆಗಿದೆ ಎನ್ನುವುದು ಅನೇಕ ಪ್ರಾಜ್ಞರ ಅಭಿಪ್ರಾಯವಾಗಿದೆ. ಅಷ್ಟೇ ಅಲ್ಲದೆ, ಈ ತ್ರಿವಿಕ್ರಮದ ಯಶಸ್ಸು ಮೋದಿಯವರಿಗೇ ಸಲ್ಲುತ್ತದೆ ಎನ್ನುವುದನ್ನೂ ಪ್ರಾಂಜಲ ಮನಸ್ಸಿನಿಂದ ಒಪ್ಪಬೇಕಾಗುತ್ತದೆ.

ಅಯೋಧ್ಯೆಯ ಕಾವಿಧಾರಿ ಸಂತರೊಬ್ಬರು ಕಣ್ಣಲ್ಲಿ ನೀರು ತುಂಬಿಕೊಂಡು ಮಾತಾಡುತ್ತಿದ್ದ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಅಯೋಧ್ಯೆಯಲ್ಲಿ ಬಿಜೆಪಿ ಗೆದ್ದು ಇಡೀ ರಾಷ್ಟ್ರದಲ್ಲಿ ಸೋತಿದ್ದರೂ ಬೇಸರ ಇರುತ್ತಿರಲಿಲ್ಲ, ಆದರೆ ಇಲ್ಲಿ ಸೋಲಬಾರದಾಗಿತ್ತು’
ಎನ್ನುವುದು ಅವರ ಅನಿಸಿಕೆ. ಅಯೋಧ್ಯೆಯ ಪ್ರಜೆಯೊಬ್ಬನ ಅನಪೇಕ್ಷಿತ ಆರೋಪದಿಂದ ಸೀತಾಮಾತೆಯ ಚಾರಿತ್ರ್ಯವನ್ನು ಅನುಮಾನಿಸಿ ಅರಣ್ಯಕ್ಕೆ ಕಳುಹಿಸಿದ ತ್ರೇತಾಯುಗದ ಪ್ರಸಂಗದಿಂದ ಅಯೋಧ್ಯಾ ನಗರ ಮತ್ತು ಅಲ್ಲಿನ ಜನರ ಮೇಲೆ ಶಾಶ್ವತವಾದ ಕಳಂಕವಂತೂ ಈಗಾಗಲೇ ಇದೆ. ಈ ಬಾರಿ ಅಯೋಧ್ಯೆಯಲ್ಲಿ, ೫೦೦ ವರ್ಷಗಳ ವಿವಾದವನ್ನು ಸುಸೂತ್ರವಾಗಿ ಬಗೆಹರಿಸಿ ಬೃಹತ್ ಮಂದಿರವನ್ನು ನಿರ್ಮಾಣ ಮಾಡಲಾಗಿತ್ತು.

ಅಲ್ಲದೆ, ವಿಮಾನ ನಿಲ್ದಾಣವೂ ಸೇರಿ ಅಯೋಧ್ಯಾಪುರದ ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡಿದ್ದ ಬಿಜೆಪಿಯ ಅಭ್ಯರ್ಥಿಯನ್ನು ಸೋಲಿಸಿ, ರಾಮಮಂದಿರ ನಿರ್ಮಾಣದ ಪರವಾಗಿ ಕೆಲಸ ಮಾಡುತ್ತಿದ್ದ ಕಾರ್ಯಕರ್ತರ ಮೇಲೆ ಗುಂಡುಹಾರಿಸಿ ತಡೆಯೊಡ್ಡಿದ್ದ ಪಕ್ಷದವರನ್ನು ಗೆಲ್ಲಿಸುವ ಮೂಲಕ ಅಯೋಧ್ಯಾವಾಸಿಗಳಿಗೆ ‘ಕೃತಘ್ನರು’ ಎನ್ನುವ ಕಳಂಕವನ್ನು ತಂದಹಾಗಾಯಿತಲ್ಲಾ ಎನ್ನುವುದು ಆ ಸಾಧುವಿನ ಸಂವೇದನೆ. ಬಿಜೆಪಿಯ ಈ ಅಪಜಯ ಇಡೀ ಜಗತ್ತಿಗೆ ಕೆಟ್ಟದೊಂದು ಸಂದೇಶವನ್ನು ರವಾನಿಸುತ್ತದೆ ಎನ್ನುವುದು ಅವರ ಕಳಕಳಿ. ಅಯೋಧ್ಯೆಯಲ್ಲಿನ ಸೋಲು ಬಿಜೆಪಿಗೆ ಬಹುದೊಡ್ಡ ಮುಜುಗರವನ್ನು ಉಂಟು ಮಾಡಿರುವುದಂತೂ ಸತ್ಯ. ಅಲ್ಲಿನ ವಸ್ತುಸ್ಥಿತಿ ಏನಿದೆಯೋ ನನಗೆ ತಿಳಿಯದು. ಆದರೆ, ಅಭ್ಯರ್ಥಿಯ ಆಯ್ಕೆಯೂ ಸೇರಿದಂತೆ ಈ ಕ್ಷೇತ್ರದಲ್ಲಿ ಪಕ್ಷವು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿತ್ತೇನೋ ಎನ್ನುವುದು ಸಾರ್ವತ್ರಿಕವಾದ ಅಭಿಪ್ರಾಯ.

ಈ ಸೋಲಿಗೆ ಬಹಳ ಕಾಲ, ಬಹಳ ಜನರಿಗೆ ಬಿಜೆಪಿ ಉತ್ತರ ನೀಡಬೇಕಾಗಿರುವುದಂತೂ ಸತ್ಯ. ಇಂಥದ್ದೇ ಇನ್ನೊಂದು ಮುಜುಗರದ ಸಂಗತಿಯೆಂದರೆ ವಾರಾಣಸಿಯಲ್ಲಿ ನರೇಂದ್ರ ಮೋದಿಯವರ ಗೆಲುವಿನ ಅಂತರ. ಎಣಿಕೆ ಪ್ರಾರಂಭವಾದಾಗ ನರೇಂದ್ರ ಮೋದಿಯವರು ಹಿನ್ನಡೆ ಅನುಭವಿಸುತ್ತಿದ್ದಾರೆ ಎಂದು ಎಲ್ಲಾ ಮಾಧ್ಯಮಗಳಲ್ಲೂ ಬಿತ್ತರಿಸುವುದನ್ನು ನೋಡಿ ದೇಶಕ್ಕೆ ದೇಶವೇ ಅವಾಕ್ಕಾಗಿ ಹೋಯಿತು. ಕಳೆದ ೧೦ ವರ್ಷಗಳಲ್ಲಿ ಕಾಶಿಯಲ್ಲಿ ಎಂದೂ ಕೇಳರಿಯದ ಅಭಿವೃದ್ಧಿಯನ್ನು ಮಾಡಿ ತೋರಿಸಿದ್ದ ಮೋದಿಯವರನ್ನು ಈ ಬಾರಿ ೭ ಲಕ್ಷಕ್ಕಿಂತಲೂ ಅಧಿಕ ಮತಗಳಿಂದ ಗೆಲ್ಲಿಸುವುದು ಬಿಜೆಪಿಯ
ಆಶಯವಾಗಿತ್ತು.

ಆದರೆ, ದೇಶದ ಅತ್ಯಂತ ಜನಪ್ರಿಯ ಪ್ರಧಾನಿಯಾಗಿದ್ದವರು ಅಂತೂ ಇಂತೂ ಸುಮಾರು ಒಂದೂವರೆ ಲಕ್ಷ ಮತಗಳ ಅಂತರದಿಂದ ಪ್ರಯಾಸದ
ಗೆಲುವನ್ನು ಕಾಣುವಂತಾಗಿದ್ದು ನೋಡಿದರೆ, ಕ್ಷೇತ್ರದಲ್ಲಿ ಏನೋ ಯಡವಟ್ಟಾಗಿದೆ ಎನ್ನುವುದನ್ನೂ ಮತ್ತು ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಗಂಭೀರ ಸಮಸ್ಯೆಗಳು ಎದುರಾಗಬಹುದಾದ ಮುನ್ಸೂಚನೆಯನ್ನೂ ಅದು ನೀಡುತ್ತಿದೆ ಎಂದು ಸರಳವಾಗಿ ವಿಶ್ಲೇಷಿಸಬಹುದಾಗಿದೆ. ಮೋದಿಯಂಥ ವ್ಯಕ್ತಿತ್ವಕ್ಕೆ, ಅದರಲ್ಲೂ ವಾರಾಣಸಿಯಲ್ಲಿ ಅವರಿಗೆ ಸಿಗಬೇಕಾಗಿದ್ದ ಗೌರವದ ಫಲಿತಾಂಶ ಖಂಡಿತ ಇದಾಗಿರಲಿಲ್ಲ.

ಹಾಗಾಗಿ, ಭಾರತದ ಮತದಾರನ ಇಂಗಿತವನ್ನು ಹೀಗೇ ಎಂದು ನಿರ್ಧಾರವಾಗಿ ಹೇಳುವುದು ಕಷ್ಟ ಮತ್ತು ಅವನನ್ನು ಎಂದಿಗೂ ಲಘುವಾಗಿ ಪರಿಗಣಿಸಲಾಗುವುದಿಲ್ಲ ಎನ್ನುವುದು ಈ ಸಲದ ಫಲಿತಾಂಶದಿಂದ ಮತ್ತೊಮ್ಮೆ ಸಾಬೀತಾಯಿತು. ಈ ಬಾರಿಯ ಫಲಿತಾಂಶ ಹಲವರ ಊಹೆಗಳನ್ನು
ಬುಡಮೇಲು ಮಾಡಿ ಅನೇಕ ಅಚ್ಚರಿಗಳೊಂದಿಗೆ ಪ್ರಕಟ ವಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶವು ಬಿಜೆಪಿ ನೇತೃತ್ವದ ಎನ್‌ಡಿಎಗೆ ಆಡಳಿತ ನಡೆಸಲು ಅವಕಾಶ ಕೊಟ್ಟರೂ, ಇದು ದುರ್ಬಲ ಜನಾದೇಶವಾಗಿದೆ ಎನ್ನುವುದು ವಿರೋಧಿಗಳ ಅಭಿಪ್ರಾಯವಾಗಿದೆ.

ತನ್ನ ಭದ್ರಕೋಟೆಯಾದ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಂಥ ಹಲವು ರಾಜ್ಯಗಳಲ್ಲಿ ಬಿಜೆಪಿಗೆ ನಿರೀಕ್ಷಿತ ಸಾಧನೆ ತೋರಲಾಗಲಿಲ್ಲ ಹಾಗೂ ಬೇರೆಡೆ ದೊರಕಿದ ಲಾಭಗಳು ಈ ಭದ್ರಕೋಟೆಗಳಲ್ಲಿನ ನಷ್ಟವನ್ನು ಸರಿದೂಗಿಸಲು ಬಿಜೆಪಿಗೆ ಸಾಕಾಗಲಿಲ್ಲ, ಇದು ಮೋದಿ
ಯವರ ಪ್ರತಿಷ್ಠೆಗೆ ಹಾನಿಯುಂಟುಮಾಡಿದ ಫಲಿತಾಂಶ ಎನ್ನುವುದು ವಿರೋಧ ಪಕ್ಷಗಳ ಅದರಲ್ಲೂ ಕಾಂಗ್ರೆಸ್ಸಿನ ವಿಶ್ಲೇಷಣೆಯಾಗಿದೆ. ಪಕ್ಷದಲ್ಲಿ ಈ ಹಿಂದೆ ಗೆಲುವಿನ ಎಲ್ಲಾ ಶ್ರೇಯಸ್ಸನ್ನು ಮೋದಿಯವರಿಗೆ ನೀಡಲಾಗುತ್ತಿತ್ತು; ಈಗ ಸ್ವಂತದ ಸರಳ ಬಹುಮತವನ್ನೂ ಪಡೆಯಲು ಬಿಜೆಪಿಗೆ ಸಾಧ್ಯವಾಗದಿರುವುದು ಮೋದಿಯವರು ರಾಜಕೀಯ ವಾಗಿ ದುರ್ಬಲರಾಗುತ್ತಿದ್ದಾರೆ ಎನ್ನುವುದರ ಸೂಚನೆಯಾಗಿದೆ, ಹಾಗಾಗಿ ಪಕ್ಷದ ಈ ಹಿನ್ನಡೆಯ ನೈತಿಕ ಜವಾಬ್ದಾರಿ ಹೊತ್ತು ಅವರು ಪ್ರಧಾನಮಂತ್ರಿಯ ಸ್ಥಾನ ವನ್ನು ವಹಿಸಿಕೊಳ್ಳಬಾರದು ಎನ್ನುವುದು ಕಾಂಗ್ರೆಸ್‌ನ ವಾದ.

ಈ ವಾದ ಸರಿಯೇ? ಎಂದರೆ, ಇಲ್ಲ ಅಂತಲೇ ಹೇಳಬೇಕಾಗುತ್ತದೆ. ಏಕೆಂದರೆ, ೨೦೦೪ರಲ್ಲಿ ಕೇವಲ ೧೪೫ ಸ್ಥಾನ ಗಳಿಸಿದ್ದ ಕಾಂಗ್ರೆಸ್‌ನ ಮನಮೋಹನ್ ಸಿಂಗ್ ಅವರು ಚುನಾವಣಾಪೂರ್ವ ಮತ್ತು ಚುನಾವಣೋತ್ತರ ಮೈತ್ರಿಯ ಬಲದಿಂದ ಪ್ರಧಾನಮಂತ್ರಿಯಾಗಿ ದೇಶವನ್ನು ಮುನ್ನಡೆಸಿರಲಿಲ್ಲವೇ? ೨೦೦೯ರಲ್ಲೂ ಕಾಂಗ್ರೆಸ್ಸಿಗೆ ಸ್ವಂತ ಬಹುಮತ ಇರಲಿಲ್ಲ; ಅದು ೨೦೬ ಸ್ಥಾನಗಳನ್ನು ಮಾತ್ರ ಗಳಿಸಿದರೂ ಸ್ಥಿರವಾಗಿ ಅಽಕಾರ ನಡೆಸಿತ್ತು ಎನ್ನುವುದನ್ನು ನೆನಪಿಸಿ ಕೊಳ್ಳಬೇಕಿದೆ.

ತನ್ನದೇ ಆದ ಬಹುಮತಕ್ಕೆ ಅಲ್ಪ ಕೊರತೆಯುಂಟಾಗಿ ಈಗ ಬಿಜೆಪಿಯು ತನ್ನ ಮಿತ್ರಪಕ್ಷಗಳ ಮೇಲೆ ಹೆಚ್ಚು ಅವಲಂಬಿತವಾಗಬೇಕಾಗಿ ಬಂದಿರುವು ದರಿಂದ, ತನ್ನ ನೀತಿ-ನಿಯಮಗಳನ್ನು ಈ ಮೊದಲು ಜಾರಿಗೆ ತಂದ ರೀತಿಯಲ್ಲಿ ತರಲು ಸಾಧ್ಯವಾಗಲಿಕ್ಕಿಲ್ಲ ಮತ್ತು ಮೂರನೇ ಅವಧಿಗಾಗಿ ಕಾಯ್ದಿರಿಸಿದ್ದ ತನ್ನ ಯೋಜನೆಗಳನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರುವುದು ಬಿಜೆಪಿಗೆ ಕಷ್ಟವಾಗಬಹುದು ಎನ್ನುವ ಅನುಮಾನ ಜನರದ್ದು. ಸಮ್ಮಿಶ್ರ
ಸರಕಾರದಲ್ಲಿ ‘ಝಂಡಾ’ (ಪತಾಕೆ) ಮಾತ್ರ ಬಿಜೆಪಿ ಯದ್ದು, ಆದರೆ ‘ಅಜೆಂಡಾ’ ಮಾತ್ರ ಎನ್‌ಡಿಎಯದ್ದು ಎನ್ನುವಂತಾಗಿಬಿಡಬಹುದೇನೋ ಎನ್ನುವ ಆತಂಕ ಜನರಿಗಿರುವುದು ಸ್ವಾಭಾವಿಕ.

‘ದೇಶದ ಸರ್ವಾಂಗೀಣ ಅಭಿವೃದ್ಧಿ ಕುರಿತಾದ ನಿಮ್ಮ ಸಂಕಲ್ಪಕ್ಕೆ ನಮ್ಮ ಸಾಥ್ ಕೊನೆಯವರೆಗೆ ಇರಲಿದೆ’ ಎಂದು ಎನ್‌ಡಿಎ ಒಕ್ಕೂಟದ ಮಿತ್ರಪಕ್ಷ ಗಳೆಲ್ಲವೂ ಮೋದಿಯವರಿಗೆ ಹೇಳುತ್ತಿದ್ದರೂ, ಚಂದ್ರಬಾಬು ನಾಯ್ಡು ಮತ್ತು ‘ಪಲ್ಟೂ ರಾಂ’ ಎಂದೇ ಕುಖ್ಯಾತರಾಗಿರುವ ಬಿಹಾರದ ನಿತೀಶ್ ಕುಮಾರ್ ಅವರ ನಡೆಯ ಮೇಲೆಯೇ ಜನರಿಗೆ ಸಂದೇಹ. ಸರಳವಾದರೂ ಸ್ಪಷ್ಟ ಬಹುಮತ ಗಳಿಸಿರುವ ಎನ್‌ಡಿಎ ಒಕ್ಕೂಟಕ್ಕೆ ಸೇರಿಕೊಳ್ಳಲು ಇನ್ನೂ ಅನೇಕ ಪಕ್ಷೇತರರು ಸರತಿಯಲ್ಲಿ ನಿಂತಿರುವುದನ್ನು ನೋಡಿದಾಗ, ಸರಕಾರದ ಭದ್ರತೆಗೆ ತೊಂದರೆ ಆಗಲಿಕ್ಕಿಲ್ಲ ಎನ್ನುವುದು ವಿಶ್ಲೇಷಕರ ಅನಿಸಿಕೆಯಾಗಿದೆ.

ಆದರೂ, ಮೋದಿ-ಅಮಿತ್ ಶಾ ಜೋಡಿಯ ‘ಆನೆ ನಡೆದದ್ದೇ ದಾರಿ’ ಎನ್ನುವ ರಾಜಕೀಯ ಶೈಲಿಯ ಬದಲಿಗೆ ಈ ಸಲ ಬಿಜೆಪಿ ತನ್ನ ಮಿತ್ರಪಕ್ಷಗಳ ಅಭಿಪ್ರಾಯಗಳಿಗೆ ಅಗತ್ಯ ಮನ್ನಣೆ ಒದಗಿಸಿ ಸರಕಾರವನ್ನು ನಡೆಸಬೇಕಾಗುತ್ತದೆ ಎನ್ನುವ ವಾಸ್ತವವನ್ನು ಬಿಜೆಪಿಯ ಉನ್ನತ ನಾಯಕತ್ವವು ಅರಿಯಬೇಕಿದೆ. ನಿರ್ಣಾಯಕ ನಿರ್ಧಾರಗಳಲ್ಲಿ ಸಹವರ್ತಿಗಳು ತಮ್ಮ ಅಭಿಪ್ರಾಯಕ್ಕೆ ಗೌರವವನ್ನು ಅಪೇಕ್ಷೆ ಮಾಡಿಯೇ ಮಾಡುತ್ತಾರೆ. ಮಿತ್ರಪಕ್ಷ ಗಳಿಂದ ಬರಬಹುದಾದ ಅಸಂಗತ ಬೇಡಿಕೆಗಳನ್ನು ನಿರ್ವಹಿಸುವುದೂ ಸವಾಲಾಗಿದ್ದು, ಮೋದಿಯವರು ಅದನ್ನು ಜಾಣ್ಮೆಯಿಂದ ನಿರ್ವಹಿಸ ಬೇಕಾಗುತ್ತದೆ. ಮೋದಿಯವರ ಸುದೀರ್ಘ ರಾಜಕೀಯ ಪಯಣದಲ್ಲಿನ ಅವರ ಕ್ಷಮತೆ ಯನ್ನು ಗಮನಿಸಿದರೆ ಇದು ಅವರಿಗೆ ಅಸಾಧ್ಯವಾದ ಸಂಗತಿಯೇ ನಲ್ಲ; ಹಾಗಾಗಿ ಸಮ್ಮಿಶ್ರ ಸ್ಥಿತಿಯ ನಡುವೆಯೂ ಮೋದಿಯವರು ಬಿಜೆಪಿಯ ಝಂಡಾ ಹಾರಿಸುತ್ತಾ ತಮ್ಮ ಅಜೆಂಡಾವನ್ನೂ ಸಾಧಿಸಲು ಸಮರ್ಥ ರಿದ್ದಾರೆ ಎನ್ನುವ ಅಭಿಪ್ರಾಯ ಮೂಡುತ್ತದೆ.

ಈ ಮೊದಲು ಭಾರತದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರುಗಳು ಸಮ್ಮಿಶ್ರ ಸರಕಾರಗಳ
ಯಶಸ್ವಿ ನಿರ್ವಹಣೆಗೆ ಮಾದರಿಯಾಗಿದ್ದಾರೆ. ಅವರಿಬ್ಬರೂ ತಮ್ಮ ಮಿತ್ರಪಕ್ಷಗಳ ಬಗ್ಗೆ ಹೆಚ್ಚು ಸಹನೆಯ ಮತ್ತು ಎಚ್ಚರಿಕೆಯ ವಿಧಾನ ಅನುಸರಿಸಿ, ಪೂರ್ಣಾವಧಿಯ ಸರಕಾರವನ್ನು ಯಶಸ್ವಿ ಯಾಗಿ ನಡೆಸಿ ತೋರಿಸಿದ್ದಾರೆ. ಆ ಇಬ್ಬರ ಮಾದರಿಯನ್ನು ಮೋದಿಯವರು ಈ ಬಾರಿ ಮೈಗೂಡಿಸಿಕೊಂಡು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕಾಗಿದೆ. ಗೆಲುವಿನ ಸಾಧನೆಯ ಅಮಲಿನಲ್ಲಿ ತೇಲಾಡದೆ, ಪಕ್ಷದ ಭವಿಷ್ಯದ ದೃಷ್ಟಿಯಿಂದ ಮೋದಿಯ
ವರೂ ಸೇರಿದಂತೆ ಬಿಜೆಪಿಯ ಉನ್ನತ ನಾಯಕರುಗಳು ಆತ್ಮಾವಲೋಕನ ಮಾಡಿಕೊಂಡು, ಈ ಚುನಾವಣೆಯಲ್ಲಿನ ತಪ್ಪು ನಿರ್ಧಾರಗಳಿಂದ ಪಾಠ ಕಲಿತು, ಸಂಘಟನೆಯನ್ನು ಬಲಪಡಿಸಿಕೊಳ್ಳಬೇಕಾಗಿದೆ ಎನ್ನುವುದನ್ನು ಈ ಚುನಾವಣಾ ಫಲಿತಾಂಶದಿಂದ ಮನಗಾಣಬೇಕಾಗಿದೆ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)