Thursday, 12th December 2024

ಪ್ರಧಾನಿ ಮೋದಿಗೆ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅಭಿನಂದನೆ

ಬೆಂಗಳೂರು: ಪ್ರಧಾನಿಯಾಗಿ ನರೇಂದ್ರ ಮೋದಿ ಭಾನುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರು ಪ್ರಧಾನಿ ಮೋದಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ದೇವೇಗೌಡ ಅವರು ಅದನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ʼʼನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾನ ವಚನ ಸ್ವೀಕರಿಸುತ್ತಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಅನಾರೋಗ್ಯದ ಕಾರಣದಿಂದ ನನಗೆ ಈ ಕಾರ್ಯಕ್ರಮದಲ್ಲಿ ಭಾವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಖಂಡಿತ ವಾಗಿಯೂ ನಾನು ಟಿವಿಯಲ್ಲಿ ಲೈವ್‌ನಲ್ಲೇ ಕಾರ್ಯಕ್ರಮವನ್ನು ವೀಕ್ಷಿಸುತ್ತೇನೆ. ಕಾಂಗ್ರೆಸ್ ಏನೇ ಹೇಳಲಿ, ಭಾರತೀಯ ಪ್ರಜಾಪ್ರಭುತ್ವವು ದೃಢವಾಗಿದೆʼʼ ಎಂದು ದೇವೇಗೌಡ ಬರೆದುಕೊಂಡಿದ್ದಾರೆ.

ಇನ್ನು ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸತ್ತಿದ್ದು ಇವರೊಂದಿಗೆ ನೂತನ ಸಚಿವರೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ಪುತ್ರ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿಯವರು ಕೂಡ ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ದೇಶದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರು ಅವರ ಬಳಿಕ ಸತತ ಮೂರನೇ ಬಾರಿಗೆ ಪ್ರಧಾನಿಯಾದ ಖ್ಯಾತಿಗೆ ನರೇಂದ್ರ ಮೋದಿ ಭಾಜನರಾಗ ಲಿದ್ದಾರೆ. ಇಂದು ಸಂಜೆ 7.15ಕ್ಕೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸಲಿದ್ದಾರೆ.