Saturday, 14th December 2024

ಬ್ರಿಟನ್ ಪಿಎಂ ಆಗುವರೇ ರಿಷಿ ?

ರಿಷಿ ಸುನಕ್ ಅವರು ಪ್ರಭಾವಿ ಸಂವಹನಕಾರರಾಗಿ, ಬಹುಜನಾಂಗೀಯ ಆಧುನಿಕ ಬ್ರಿಟನ್ನಿನ ಸಮರ್ಥ ನಾಯಕನಾಗಿ ಹೊರ ಹೊಮ್ಮತೊಡಗಿದ್ದಾರೆ. 10 ತಿಂಗಳ ಹಿಂದೆ ಯಾರಿಗೂ ಅಷ್ಟಾಗಿ ಪರಿಚಯ ಇಲ್ಲದಿದ್ದ ಈ ಅನಾಮಧೇಯ ವ್ಯಕ್ತಿ, ಇದೀಗ ಜನಪ್ರಿಯತೆಯಲ್ಲಿ ಪ್ರಧಾನಿ ಜಾನ್ಸನ್ ಆವರನ್ನೂ ಹಿಂದಿಕ್ಕಿರುವುದು ಅಚ್ಚರಿಯಾದರೂ ಸತ್ಯ. ಪರಿಶ್ರಮದಿಂದ ಮೇಲೆ ಬಂದಿ ರುವ ರಿಷಿ ಸುನಕ್ ನಂ.10 ಡೌನಿಂಗ್ ಸ್ಟ್ರೀಟ್‌ಗೆ (ಪ್ರಧಾನಿ ನಿವಾಸ) ಬರುವ ಮುಂದಿನ ವ್ಯಕ್ತಿ ಎಂದೇ ಬಿಂಬಿಸಲಾಗುತ್ತಿದೆ.

ಲಂಡನ್: ಒಂದೊಮ್ಮೆ ಭಾರತವನ್ನು ಆಳಿದ್ದ ಬ್ರಿಟಿಷರು, ಮುಂದೊಂದು ದಿನ ಭಾರತೀಯ ಮೂಲದವರೊಬ್ಬರು ತಮ್ಮ ಪ್ರಧಾನಮಂತ್ರಿ ಆಗಬಹುದು ಎಂದು ಕನಸು ಮನಸಿನಲ್ಲೂ ಎಣಿಸಿರಲಿಕ್ಕಿಲ್ಲ. ಆದರೆ ಆ ದೇಶದಲ್ಲಿ ಭಾರತೀಯರ ಪ್ರಾಬಲ್ಯ, ಪ್ರಭಾವ ಹೆಚ್ಚುತ್ತಿರುವಂತೆ ಅಂಥದ್ದೊಂದು ದಿನ ಸನ್ನಿಹಿತವಾಗಿದೆ ಎನಿಸುತ್ತಿದೆ.

ಹೌದು. ಕರೋನಾ ಕಾಲದಲ್ಲಿ ಈಪಿಡುಗು ನಿಭಾಯಿಸುವುದು ಜಗತ್ತಿನಾದ್ಯಂತ ಎಲ್ಲ ನಾಯಕರಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ಹೊರತಲ್ಲ. ಅವರ ಜನಪ್ರಿಯತೆ ನಿಧಾನವಾಗಿ ಕುಸಿಯು ತ್ತಿದೆ. ಹಾಗಾದರೆ ಜಾನ್ಸನ್ ಒಂದೊಮ್ಮೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರೆ ಆ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಈಗ ಕೆಲವು ಸಮಯದಿಂದಲೂ ಕಾಡುತ್ತಿದೆ. ಅವರ ಸ್ಥಾನವನ್ನು ಸಮರ್ಥವಾಗಿ ತುಂಬಲು ಸದ್ಯ ಅಲ್ಲಿನ ಹಣಕಾಸು ಸಚಿವರಾಗಿರುವ, ಭಾರತೀಯ ಮೂಲದ ರಿಷಿ ಸುನಕ್ ಸಮರ್ಥರು ಎಂಬ ಮಾತು ಕೇಳಿಬರುತ್ತಿದೆ.

ಹಾಗೆಂದು ಜಾನ್ಸನ್ ತ್ಯಜಿಸಬಹುದಾದ ಸ್ಥಾನಕ್ಕೆ ಸುನಕ್ ಅವರೇ ಏಕೆ?

ಬೇರೆಯವರಿಲ್ಲವೆ ಎಂಬ ಪ್ರಶ್ನೆ ಬಂದೇ ಬರುತ್ತದೆ. ಇದಕ್ಕೆ ಉತ್ತರ: ಸುನಕ್ ಸುಶಿಕ್ಷಿತ, ಸಮರ್ಥ ಹಾಗೂ ಜನಪ್ರಿಯತೆಯಲ್ಲಿ ಅವರ ರ‍್ಯಾಂಕ್ ಏರುತ್ತಿದೆ ಎಂಬುದೇ ಆಗಿದೆ. ಇತ್ತೀಚೆಗೆ ನಡೆದಿರುವ ಸಮೀಕ್ಷೆಗಳು ಈ ಮಾತನ್ನು ಪುಷ್ಟೀಕರಿಸಿವೆ. 10 ತಿಂಗಳ ಹಿಂದೆ
ಯಾರಿಗೂ ಅಷ್ಟಾಗಿ ಪರಿಚಯ ಇಲ್ಲದಿದ್ದ ಈ ಅನಾಮಧೇಯ ವ್ಯಕ್ತಿ, ಇದೀಗ ಜನಪ್ರಿಯತೆಯಲ್ಲಿ ಪ್ರಧಾನಿ ಜಾನ್ಸನ್ ಆವರನ್ನೂ
ಹಿಂದಿಕ್ಕಿರುವುದು ಅಚ್ಚರಿಯಾದರೂ ಸತ್ಯ. ’ಪ್ರಧಾನಿ ಜಾನ್ಸನ್‌ರಲ್ಲಿ ಇಲ್ಲದಿರುವಂಥ ಶಕ್ತಿ, ಸಾಮರ್ಥ್ಯ ರಿಷಿ ಸುನಕ್ ಅವರಲ್ಲಿದೆ. ಅಷ್ಟು ಮಾತ್ರವಲ್ಲದೆ ಅವರು ವಿಷಯದ ಆಳ, ಅಗಲ ಅರಿಯುವಲ್ಲಿ ಅವರಿಗಿಂತ ಸಾಕಷ್ಟು ಮುಂದಿದ್ದಾರೆ’ ಎಂದು ಲಂಡನ್ ಯುನಿವರ್ಸಿ ಟಿಯೊಂದರ ಪ್ರೊಫೆಸರ್ ಟಿಮ್ ಬೇಲ್ ಹೇಳುತ್ತಾರೆ.

ಹಾಗೆಂದು ಈ ಜನಪ್ರಿಯತೆ ರಿಷಿಗೆ ಏಕಾಏಕಿ ಬಂದಿರುವಂಥದ್ದಲ್ಲ. ಇದರ ಹಿಂದೆ ಸಾಕಷ್ಟು ಪರಿಶ್ರಮ ಅಡಗಿದೆ. ಅವರೂ ಇಲ್ಲಿ ಜನಾಂಗೀಯ ನಿಂದನೆ, ದ್ವೇಷದ ಬಿಸಿ ಕಂಡಿದ್ದಾರೆ. ಆದರೆ ಅದನ್ನೆೆಲ್ಲ ಮೀರಿ ಮೇಲೆ ಬಂದಿದ್ದಾರೆ. ರಿಷಿ ಸುನಕ್ ಅವರು ರಾಜಕೀಯ ಪಟ್ಟುಗಳನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ. ತಮ್ಮ ಕನ್ಸ್‌ರ್ವೇಟಿವ್ ಪಾರ್ಟಿಯ ಸಂಸದರೊಂದಿಗೆ ಸತತ ಸಂಪರ್ಕದಲ್ಲಿರುವುದು ಅವರಿಗೆ ನೆರವಾಗಿದೆ. ಇದರಿಂದಾಗಿ ಪಾರ್ಲಿಮೆಂಟಿನಲ್ಲಿ ಅವರು ತಮ್ಮದೇ ಆದ ದೊಡ್ಡ ಸಂಪರ್ಕ
ಜಾಲವನ್ನು ಬೆಳೆಸಿಕೊಂಡಿದ್ದಾರೆ.

ಇದರೊಂದಿಗೆ ನಂ.10 ಡೌನಿಂಗ್ ಸ್ಟ್ರೀಟ್‌ಗೆ (ಪ್ರಧಾನಿ ನಿವಾಸ) ಬರುವ ಮುಂದಿನ ವ್ಯಕ್ತಿ ಯಾರು ಎಂಬುದು ಇದೀಗ ನಿಚ್ಚಳ ವಾಗುತ್ತಿದೆ. ಬೇಲ್ ಅವರು ಕಳೆದ ಡಿಸೆಂಬರ್‌ನಲ್ಲಿ ಕನ್ಸ್ರ್ವೇಟಿವ್ ಪಕ್ಷದ ಸದಸ್ಯರಿಗಾಗಿ ನಡೆಸಿದ ಸಮೀಕ್ಷೆಯಲ್ಲೂ ’ಪ್ರಧಾನಿ ಪಟ್ಟದಿಂದ ಜಾನ್ಸನ್ ಕೆಳಗಿದರೆ ಯಾರು ಆ ಸ್ಥಾನ ತುಂಬಬಲ್ಲರು’? ಎಂಬ ಪ್ರಶ್ನೆಗೆ 1,191 ಸದಸ್ಯರ ಪೈಕಿ ಕೇವಲ 5 ಮಂದಿ ರಿಷಿ ಹೆಸರು ಹೇಳಿದ್ದರು. ಆಗ ಅನೇಕರಿಗೆ ಅವರ ಹೆಸರು ಬರೆಯಲು ಮತ್ತು ಉಚ್ಚರಿಸಲುಸಹ ಸರಿಯಾಗಿ ಬರುತ್ತಿರಲಿಲ್ಲವೇನೋ. ಆದರೆ ಈ ಹತ್ತು ತಿಂಗಳಲ್ಲಿ ಥೇಮ್ಸ್‌ ನದಿಯಲ್ಲಿ ಸಾಕಷ್ಟು ನೀರು ಹರಿದಿದೆ. 10 ತಿಂಗಳ ಹಿಂದೆ ಯಾರಿಗೂ ಅಷ್ಟಾಗಿ ಗೊತ್ತಿಲ್ಲದ ವ್ಯಕ್ತಿ ಈಗ 10 ಡೌನಿಂಗ್ ಸ್ಟ್ರೀಟ್‌ಗೆ ಬರುವಷ್ಟು ಪ್ರಭಾವಶಾಲಿಯಾಗಿ ಬೆಳೆದಿದ್ದಾನೆ.

ಹಾಗೆಂದು ರಿಷಿ ಮೊದಲಿನಿಂದಲೂ ಫೈರ್ ಬ್ರ‍್ಯಾಂಡ್ ಸ್ವಭಾವದವರೇನೂ ಅಲ್ಲ. ನಿಜ ಹೇಳಬೇಕೆಂದರೆ ಅವರು ಜಾನ್ಸನ್ ಅವರೇ
ಮುಂಬೆಳಕಿಗೆ ತಂದ ವ್ಯಕ್ತಿ. ರಿಷಿ ಮೊದಲು ಒಬ್ಬ ಸಾಮಾನ್ಯ ಮಂತ್ರಿಯಾಗಿದ್ದರು. ಹಣಕಾಸು ಸಚಿವರಾಗಿದ್ದ ಸಾಜಿದ್ ಜಾವಿದ್ ಎಂಬುವವರು ಜಾನ್ಸನ್ ಜತೆ ವಿರಸದಿಂದ ನಿರ್ಗಮಿಸಿದಾಗ ಆ ಜಾಗಕ್ಕೆ ರಿಷಿಯನ್ನು ಜಾನ್ಸನ್ ಅವರೇ ತಂದು ಕೂರಿಸಿದ್ದು. ’ಇವನು ನನ್ನ ನೆರಳಿನಲ್ಲೇ ಇದ್ದು, ನನಗೆ ವಿಧೇಯನಾಗಿ ಇರುತ್ತಾನೆ’ ಎಂಬ ಭಾವನೆಯಿಂದ ಅವರನ್ನು ಕರೆತಂದಿದ್ದು. ಹಾಗೆಂದು ರಿಷಿ ಎಂದೂ ಬಹಿರಂಗವಾಗಿ ಪ್ರಧಾನಿ ಜತೆ ವಿರೋಧ ಕಟ್ಟಿಕೊಂಡವರಲ್ಲ.

ಆದರೆ ಕರೋನಾ ಪಿಡುಗು ಹೆಚ್ಚಾದ ಸಂದರ್ಭದಲ್ಲಿ ಹೆಚ್ಚುತ್ತಿದ್ದ ಆರ್ಥಿಕ ಬಿಕ್ಕಟ್ಟು ಹಾಗೂ ನಿರುದ್ಯೋಗ ಸಮಸ್ಯೆಯನ್ನು
ಸಮರ್ಥವಾಗಿ ನಿಭಾಯಿಸುವುದು ಸ್ವತಃ ಜಾನ್ಸನ್‌ಗೆ ಸಾಧ್ಯವಾಗಲಿಲ್ಲ. ಆದರೆ ಹಣಕಾಸು ಸಚಿವರಾಗಿ ರಿಷಿ ಹಲವು ಕ್ರಮಗಳನ್ನು
ಕೈಗೊಂಡರು. ಜನರ ನೆರವಿಗೆ ಧಾವಿಸುವ ವಿಚಾರದಲ್ಲಿ ಜಾನ್ಸನ್ ನಿಲುವನ್ನು ನಯವಾಗಿಯೇ ವಿರೋಧಿಸಿದರು.

ಸುನಕ್ ಅವರು ಸೋಷಿಯಲ್ ಮೀಡಿಯಾದಲ್ಲೂ ತುಂಬ ಸಕ್ರಿಯರಾಗಿದ್ದು, ತಮ್ಮ ನೀತಿ, ನಿಲುವುಗಳನ್ನು ಸ್ಪಷ್ಟವಾಗಿ ಪ್ರಚುರ
ಪಡಿಸುತ್ತಾರೆ. ಅವರ ಈ ಧೋರಣೆ ಜಾಹೀ ರಾತಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಇದೇ ಕಾರಣದಿಂದ ಜನಸಾಮಾನ್ಯರು ಅವರ ಈ ಗುಣಗಳನ್ನು ಮೆಚ್ಚಿಕೊಂಡಿದ್ದಾರೆ. ಅವರಲ್ಲಿ ಮುಂದಿನ ನಾಯಕನನ್ನು ಕಾಣತೊಡಗಿದ್ದಾರೆ. ಇತ್ತ ಇದು ಬೋರಿಸ್ ಜಾನ್ಸನ್ ಅವರಿಗೂ ನುಂಗಲಾರದ ತುತ್ತಾಗಿದೆ. ಒಂದೆಡೆ ಹೆಚ್ಚುತ್ತಿರುವ ಸುನಕ್ ಜನಪ್ರಿಯತೆ. ಇನ್ನೊಂದೆಡೆ ತಾವೇ ತಂದು ಕೂರಿಸಿರುವ ವ್ಯಕ್ತಿಯನ್ನು ಆ ಹುದ್ದೆಯಿಂದ ವಜಾ ಮಾಡಲಾಗದ ಅಸಹಾಯಕತೆ. ಇದೆಲ್ಲದರ ನಡುವೆ ರಿಷಿ ಸುನಕ್ ಅವರು ಪ್ರಭಾವಿ ಸಂವಹನಕಾರರಾಗಿ, ಬಹುಜನಾಂಗೀಯ ಆಧುನಿಕ ಬ್ರಿಟನ್ನಿನ ಸಮರ್ಥ
ನಾಯಕನಾಗಿ ಹೊರಹೊಮ್ಮತೊಡಗಿದ್ದಾರೆ.

ಇನ್ಫಿಮೂರ್ತಿ ದಂಪತಿಯ ಅಳಿಯ
ರಿಷಿ ಸುನಕ್ ಕರ್ನಾಟಕದ ನಂಟು ಹೊಂದಿರುವ ಕಾರಣಕ್ಕೆ ನಮಗೆ ಹೆಚ್ಚು ಆಪ್ತರೂ, ಪ್ರಸ್ತುತರೂ ಆಗುತ್ತಾರೆ. ಅವರು
ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಅಳಿಯ. ರಿಷಿಯ ತಾತ, ಅಜ್ಜಿ  ಮೂಲತಃ ಪಂಜಾಬ್‌ನವರು. ಅವರು ಬ್ರಿಟಿಷ್ ಹಿಡಿತದಲ್ಲಿದ್ದ ಈಸ್ಟ್ ಆಫ್ರಿಕಾಗೆ ವಲಸೆ ಹೋದವರು. ಅಲ್ಲಿಂದ ಬ್ರಿಟನ್‌ಗೆ ಬಂದವರು. ವಿಂಚೆಸ್ಟರ್ ಖಾಸಗಿ ಕಾಲೇಜಿ ನಲ್ಲಿ ಅಧ್ಯಯನ ಮಾಡಿ, ಮುಂದೆ ಆಕ್ಸಫರ್ಡ್ ವಿವಿಯಲ್ಲಿ ಪದವಿ, ಸ್ಟ್ಯಾನ್ ಫೋರ್ಡ್ ವಿವಿಯಿಂದ ಎಂಬಿಎ ಪದವಿ ಪಡೆದರು. ಅಲ್ಲಿಯೇ ಮೂರ್ತಿ ದಂಪತಿ ಪುತ್ರಿ ಅಕ್ಷತಾ ಮೂರ್ತಿಯವರ ಪರಿಚಯ 4 ವಾಯಿತು. ಅವರನ್ನೇ ವಿವಾಹವಾದರು.