ಪ್ರಕೃತಿ ಪುಳಕ
ಪ್ರಕಾಶ ಹೆಗಡೆ
ಅಘನಾಶಿನಿಯ ನದೀಮುಖದಲ್ಲಿ, ಈ ಪ್ರದೇಶದ ವಿಶೇಷತೆಗಳಲ್ಲಿ ಒಂದಾದ ‘ಕಗ್ಗನ ಭತ್ತ’ ಎಂಬ ಉಪ್ಪು-ಸಹಿಷ್ಣು ಅಕ್ಕಿಯನ್ನು ಬೆಳೆಯಲು ರೈತರು ಸಾಂಪ್ರದಾಯಿಕ ಕೃಷಿಯನ್ನು ಅಭ್ಯಾಸ ಮಾಡುತ್ತಾರೆ. ವಿಪರ್ಯಾಸವೆಂದರೆ, ಈ ಪ್ರಭೇದವು ತನ್ನ ಕೃಷಿ ಪ್ರದೇಶವನ್ನು ವೇಗವಾಗಿ ಕಳೆದುಕೊಳ್ಳುತ್ತಿದೆ. ಈ ತಳಿಯ ಮಹತ್ವ ಅರಿತ ಎಂ.ಎಸ್.ಸ್ವಾಮಿನಾಥನ್ ರಿಸರ್ಚ್ ಫೌಂಡೇಷನ್ ಬೀಜ ಬ್ಯಾಂಕ್ಗಳನ್ನು ಸ್ಥಾಪಿಸಿ ಕಗ್ಗನ ಭತ್ತದ ಬಿತ್ತನೆಗೆ ಪ್ರೋತ್ಸಾಹಿಸಿತು.
ಕುಮಟಾದ ಬಾಡ ಗ್ರಾಮದ ನಿರ್ಮಲ ಕಡಲತೀರ ಹಾಗೂ ಗಜನಿಯ ಹಿನ್ನೀರಿನ ಮ್ಯಾಂಗ್ರೋವ್ ತಾಣಗಳ ರಮಣೀಯ ದೃಶ್ಯಗಳು ನನ್ನ ಸ್ಮೃತಿಪಟಲದ ಮೇಲೆ ಸುಂದರ ಚಿತ್ತಾರಗಳನ್ನು ಮೂಡಿಸುತ್ತಿದ್ದವು. ನಾನಾಗ ನಮ್ಮ ತೋಟದ ಮನೆಯ ಜಗಲಿಯಲ್ಲಿ ಕುಳಿತು ಮುಸ್ಸಂಜೆಯ ಮುಂಗಾರಿನ ಆರ್ಭಟ ವೀಕ್ಷಿಸುತ್ತ ದಶಕಗಳ ಸುಂದರ ಗಳಿಗೆಗಳನ್ನು ಮೆಲುಕು ಹಾಕುತ್ತಿದ್ದೆ- ನಮ್ಮ ತಂದೆಯೊಂದಿಗೆ ವಿಹರಿಸುತ್ತಿದ್ದಾಗ ಕಾಣುತ್ತಿದ್ದ, ಹಲವಾರು ದೇಶಗಳಿಂದ
ವಾರ್ಷಿಕ ವಲಸೆ ಬಂದ ಸಾವಿರಾರು ಹಕ್ಕಿಗಳ ಸ್ವಾತಂತ್ರ್ಯದ ಒಡನಾಟ, ರೈತರ ಗದ್ದೆಯ ಸಂಭ್ರಮದ ಚಟುವಟಿಕೆಗಳು, ಮೀನುಗಾರರ ಸಮುದ್ರದ ಬಾಂಧವ್ಯ, ಗಜನಿ ಭತ್ತದ ಗದ್ದೆಯ ಹಸಿರಿನ ಸಿರಿ, ಚಿರನೂತನ ಕಡಲಸೌಂದರ್ಯ ಇತ್ಯಾದಿ.
ಅಂದಿನಿಂದ ಇಂದಿನವರೆಗೆ, ನಿಧಾನವಾಗಿ ನಶಿಸುತ್ತಿರುವ ಈ ನೈಸರ್ಗಿಕ ಸಂಪನ್ಮೂಲವನ್ನು ತುಲನಾತ್ಮಕವಾಗಿ ಹೋಲಿಕೆ ಮಾಡುತ್ತಿದ್ದೆ. ಆ ಸಂಜೆ ಅದೇಕೋ ನೀರಸ ಎನಿಸಲಾರಂಭಿಸಿತು. ಅಷ್ಟರಲ್ಲೇ ಪ್ರಕಟಿತ ಸುದ್ದಿಯೊಂದು ಸೂರ್ಯೋದಯದ ಬೆಳಕಿನ ರಶ್ಮಿಯಂತೆ ‘ಅಡ್ರಿನಾಲಿನ್ ರಶ್’ ಒದಗಿಸಿತು! ಆ ಸುದ್ದಿ ಎಂದರೆ, ‘ಯುನೆಸ್ಕೋ ರಾಮ್ಸರ್ ತಾಣ’ವೆಂದು ಘೋಷಿತವಾದ ಅಘನಾಶಿನಿ ನದೀಮುಖ. ರಾಮ್ಸರ್ ನೋಂದಾಯಿತ ಪ್ರದೇಶ ಗಳು ಅಂತಾರಾಷ್ಟ್ರೀಯ ಜನೋಪಯೋಗಿ ತಾಣ ಗಳಾಗಿರುವುದರಿಂದ ಅವುಗಳ ಉಳಿವು ಮತ್ತು ಬೆಳವಣಿಗೆ ಸರಕಾರದ ಜವಾಬ್ದಾರಿಯಾಗಿರುತ್ತದೆ.
ಆ ಸಂಜೆ ನನ್ನ ಮನವು ಪುನಶ್ಚೇತನದ ಮುದದೆಡೆಗೆ ಹೊರಳಿತು. ಈ ತಾಣವು, ಕರ್ನಾಟಕ ರಾಜ್ಯದ ಅಘನಾಶಿನಿ ನದಿಯು ಅರಬ್ಬೀ ಸಮುದ್ರಕ್ಕೆ ಹರಿಯುವ ನದಿಯ ಪಾತಳಿ. ಅಘನಾ ಶಿನಿ ಸುಮಾರು ೧೧೭ ಕಿ.ಮೀ. ಉದ್ದದ ಸಣ್ಣನದಿ. ಶಿರಸಿಯ ಘಟ್ಟದಲ್ಲಿ ಜನಿಸಿ ಪಶ್ಚಿಮಾಭಿಮುಖವಾಗಿ ಹರಿದು
ಕುಮಟಾದ ಅಘನಾಶಿನಿ ಗ್ರಾಮದಲ್ಲಿ ಅರಬ್ಬೀ ಸಮುದ್ರ ವನ್ನು ಸೇರುತ್ತದೆ. ಅಘನಾಶಿನಿಯ ನದೀಮುಖವು ಆಳ ವಿಲ್ಲದ ಸಮುದ್ರದ ನೀರಿನ ಜತೆಗೆ, ಕಲ್ಲಿನ ತೀರಗಳು, ಉಬ್ಬರವಿಳಿತದ ಮಡ್ ಪ್ಲಾಟ್ಗಳು, ಕೆಲವು ಜಲಚರ ಕೊಳಗಳು ಮತ್ತು ಭತ್ತದ ಗದ್ದೆಗಳನ್ನು ಹೊಂದಿದೆ. ಈ ವೈವಿಧ್ಯಮಯ ಪರಿಸರವು ೮೦ಕ್ಕೂ ಹೆಚ್ಚು ಮೀನು ಪ್ರಭೇದಗಳು, ೧೧೫ ಪಕ್ಷಿ ಪ್ರಭೇದಗಳು, ೪೫ ಮ್ಯಾಂಗ್ರೋವ್ಗಳು ಮತ್ತು ಮ್ಯಾಂಗ್ರೋವ್ ಸಂಬಂಧಿತ ಪ್ರಭೇದಗಳಿಗೆ ಆವಾಸಸ್ಥಾನವನ್ನು ಒದಗಿಸುತ್ತದೆ.
ಇದರಲ್ಲಿ ಜಾಗತಿಕವಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳಾದ ಹಲವಿ ಗಿಟಾರ್ ಫಿಶ್ (ಗ್ಲಾಕೊಸ್ಟೆಗಸ್ ಹಲವಿ), ಲೆಸ್ಸರ್ ಅಡ್ಜುಟಂಟ್ (ಲೆಪ್ಟೋಪ್ಟಿ ಲೋಸ್ ಜಾವಾನಿಕಸ್) ಮತ್ತು ಇಂಡಿಯನ್ ರಿವರ್ ಟೆರ್ನ್ (ಸ್ಟರ್ನಾ ಔರಾಂಟಿಯಾ) ಸೇರಿವೆ. ಮೀನುಗಾರಿಕೆ, ಕೃಷಿ, ಸೀಗಡಿ ಜಲಚರ ಸಾಕಣೆ, ಬಿವಾಲ್ವ್ ಚಿಪ್ಪಿನ ಗಣಿಗಾರಿಕೆ ಮತ್ತು ಉಪ್ಪು ಉತ್ಪಾದನೆಯಂಥ ಚಟುವಟಿಕೆಗಳಲ್ಲಿ ತೊಡಗಿರುವ ೬,೦೦೦ಕ್ಕೂ ಹೆಚ್ಚು ಕುಟುಂಬಗಳ ಜೀವನೋಪಾಯವನ್ನು ಈ ತಾಣವು ಬೆಂಬಲಿಸುತ್ತದೆ.
ಈ ನದೀಮುಖದಲ್ಲಿ, ಈ ಪ್ರದೇಶದ ವಿಶೇಷತೆಗಳಲ್ಲಿ ಒಂದಾದ ‘ಕಗ್ಗನ ಭತ್ತ’ ಎಂಬ ಉಪ್ಪು-ಸಹಿಷ್ಣು ಅಕ್ಕಿಯನ್ನು ಬೆಳೆಯಲು ರೈತರು ಸಾಂಪ್ರದಾಯಿಕ ಕೃಷಿಯನ್ನು ಅಭ್ಯಾಸ ಮಾಡುತ್ತಾರೆ. ವಿಪರ್ಯಾಸವೆಂದರೆ, ಈ ಪ್ರಭೇದವು ತನ್ನ ಕೃಷಿ ಪ್ರದೇಶವನ್ನು ವೇಗವಾಗಿ ಕಳೆದುಕೊಳ್ಳುತ್ತಿದೆ. ನನ್ನ ತಂದೆಯ ವರು ಕಗ್ಗನ ಭತ್ತದ ವೈಶಿಷ್ಟ್ಯವನ್ನು ವಿವರಿಸಿ ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್.ಸ್ವಾಮಿನಾಥನ್ ರವರಿಗೆ ಪತ್ರ ಬರೆದಿದ್ದರು. ಅವರಿಂದ ಉತ್ತೇಜನ ದಾಯಕ ಮತ್ತು ಬೆಂಬಲ ಸೂಚಿತ ಲಿಖಿತ ಉತ್ತರವೂ ಬಂದಿತ್ತು.
ಭತ್ತದ ಲವಣತೆ- ನಿರೋಧಕ ತಳಿಯ ಮಹತ್ವವನ್ನು ಅರಿತ ಎಂ. ಎಸ್.ಸ್ವಾಮಿನಾಥನ್ ರಿಸರ್ಚ್ ಫೌಂಡೇಷನ್ (ಎಂಎಸ್ಎಸ್ಆರ್ಎಫ್) ೨೦೦೭ರಲ್ಲಿ ಗ್ರಾಮ ಆಧರಿತ ಬೀಜ ಬ್ಯಾಂಕ್ಗಳನ್ನು ಸ್ಥಾಪಿಸಿ ಕಗ್ಗನ ಭತ್ತದ ಬಿತ್ತನೆ ಮಾಡಲು ಪ್ರೋತ್ಸಾಹಿಸಿತು. ಆರಂಭದಲ್ಲಿ ಈ ಚಟುವಟಿಕೆಯು ವೇಗವನ್ನು ಪಡೆಯಿತು, ಆದರೆ ನಿಧಾನವಾಗಿ ಆಸಕ್ತಿ ಕಡಿಮೆ ಯಾಯಿತು. ಈಗ ಕೇವಲ ಮೂರು ಗ್ರಾಮಗಳು ಈ ಭತ್ತದ ತಳಿಯನ್ನು ಬೆಳೆಯುತ್ತಿವೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಸಮುದ್ರಮಟ್ಟ ದಲ್ಲಿನ ಹೆಚ್ಚಳವು, ಬಹುಪಾಲು ಕೃಷಿಭೂಮಿಯು ಲವಣಯುಕ್ತ ಕೃಷಿಗೆ ಒಳಗಾಗಲು ಕಾರಣವಾಗು
ತ್ತದೆ. ಉಪ್ಪಿನ ನೀರನ್ನು ತಡೆದುಕೊಳ್ಳುವಲ್ಲಿ ಹೆಸರುವಾಸಿಯಾದ ಕಗ್ಗನ ಭತ್ತವು ನಮ್ಮ ಭವಿಷ್ಯದ ಅಗತ್ಯಗಳಿಗೆ ಪರಿಹಾರವನ್ನು ಒದಗಿಸುತ್ತದೆ.
ಕಗ್ಗನ ಬೆಳೆಯ ಕೃಷಿ, ಕೊಯ್ಲು ಮತ್ತು ಮಿಲ್ಲಿಂಗ್ ಒಂದು ಪ್ರಯಾಸಕರ ಪ್ರಕ್ರಿಯೆಯಾಗಿರುವುದರಿಂದ ಅನೇಕ ರೈತರು ಈ ಭತ್ತದ ಕೃಷಿಗೆ ಪರ್ಯಾಯ ವಾದ ಇತರೆ ಭತ್ತದ ತಳಿಯ ಮೊರೆಹೋಗಿದ್ದಾರೆ. ದೊಡ್ಡ ನಗರಗಳಲ್ಲಿ ಕಗ್ಗನ ತಳಿಯ ಅಕ್ಕಿಗೆ, ಅದರ ಔಷಧಿಯ ಮೌಲ್ಯದಿಂದಾಗಿ ಭಾರಿ ಬೇಡಿಕೆಯಿದೆ. ಈಗ ಉತ್ತಮ ಬೀಜಗಳು ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವ ಮೂಲಕ ಕಗ್ಗನ ಭತ್ತದ ಕೃಷಿಯನ್ನು ಉತ್ತೇಜಿಸುವ ಕಗ್ಗನ ಬೆಳೆಗಾರರ ಸಂಘಗಳಿವೆ.
ಹೆಚ್ಚು ಹೆಚ್ಚು ರೈತರು ಕಗ್ಗನ ಭತ್ತದ ಕೃಷಿಗೆ ಮರಳುವ ಭರವಸೆ ಕಾಣುತ್ತಿದೆ. ಯುನೆಸ್ಕೋದ ‘ರಾಮ್ಸರ್ ಸಮಾವೇಶ’ದಲ್ಲಿ ನೋಂದಾಯಿಸಿ ಗುರುತಿಸ ಲಾದ ತಾಣವು ಅಂತಾ ರಾಷ್ಟ್ರೀಯ ಪ್ರಾಮುಖ್ಯ ಪಡೆದು ಅಂಥ ಜೌಗು ಪ್ರದೇಶಗಳನ್ನು ರಕ್ಷಿಸಿ ವೃದ್ಧಿಸಲು ಸಹಾಯಕ ವಾಗುತ್ತದೆ. ಭಾರತದಲ್ಲಿ ರಾಮ್ಸರ್ ತಾಣಗಳು ಹಿಂದಿನ ಹತ್ತು ವರ್ಷಗಳಲ್ಲಿ ೨೬ರಿಂದ ೮೨ಕ್ಕೆ ಏರಿರುವುದು ಉತ್ತೇಜಕ ಸಂಕೇತವಾಗಿದೆ. ಹಾಗಿದ್ದರೆ, ಯುನೆಸ್ಕೋದ ರಾಮ್ಸರ್ ಗುರುತಿಸಿದ ತಾಣಗಳೆಂದರೆ ಏನೆಂದು ತಿಳಿದುಕೊಳ್ಳುವ ಅವಶ್ಯಕತೆಯಿದೆ.
ಮಾನವಕುಲ ಹಾಗೂ ಇತರೆ ಪ್ರಾಣಿ-ಸಸ್ಯಗಳ ಉಳಿವಿಗಾಗಿ ಜೌಗು ಪ್ರದೇಶಗಳು ಅತ್ಯಗತ್ಯವಾಗಿವೆ. ಅವುಗಳಿಂದ ನೈಸರ್ಗಿಕ ಸುಸ್ಥಿರತೆಗೆ ಉಪಯುಕ್ತವಾಗಿ ರುವ ಅತ್ಯಂತ ಉತ್ಪಾದಕ ಪರಿಸರಗಳು ನಿರ್ಮಾಣವಾಗುತ್ತವೆ. ಜೌಗು ಪ್ರದೇಶಗಳು ಜೈವಿಕ ವೈವಿಧ್ಯಗಳಾದ ಅಸಂಖ್ಯಾತ ಜಾತಿಯ ಸಸ್ಯಗಳು ಮತ್ತು ಪ್ರಾಣಿಗಳು ಬದುಕುಳಿಯಲು ಸೃಷ್ಟಿಯಾಗಿರುವ ತೊಟ್ಟಿಲು ಗಳು. ಸಿಹಿನೀರಿನ ಪೂರೈಕೆ, ಆಹಾರ ಮತ್ತು ಕಟ್ಟಡ ಸಾಮಗ್ರಿಗಳು ಹಾಗೂ ಜೀವವೈವಿಧ್ಯತೆ ಯಿಂದ ಹಿಡಿದು ಪ್ರವಾಹ ನಿಯಂತ್ರಣ, ಅಂತರ್ಜಲ ಮರುಪೂರಣ ಮತ್ತು ಹವಾಮಾನ ಬದಲಾವಣೆಯ ತಗ್ಗಿಸುವಿಕೆಯವರೆಗೆ ಮಾನವ ಕುಲಕ್ಕೆ ಒದಗಿಸುವ ಅಸಂಖ್ಯಾತ ಪ್ರಯೋಜನ ಗಳು ಅಥವಾ ಪರಿಸರ ವ್ಯವಸ್ಥೆಯ ಸೇವೆಗಳಿಗೆ ಜೌಗು ಪ್ರದೇಶಗಳು ಅನಿವಾರ್ಯವಾಗಿವೆ.
ಅನೇಕ ದೇಶಗಳನ್ನು ಪ್ರತಿನಿಧಿಸುವ ಪರಿಸರ ವಾದಿಗಳು ೧೯೭೧ರಲ್ಲಿ ಇರಾನ್ ದೇಶದ ರಾಮ್ಸರ್ ನಗರದಲ್ಲಿ ಜೌಗು ಪ್ರದೇಶಗಳ ಸಂರಕ್ಷಣೆ ಮತ್ತು
ವಿವೇಕಯುತ ಬಳಕೆಯ ಚೌಕಟ್ಟನ್ನು ಒದಗಿಸಲುಒಗ್ಗೂಡಿದರು. ಪರಿಣಾಮವಾಗಿ ‘ರಾಮ್ಸರ್ ಕನ್ವೆನ್ಷನ್’ ರೂಪುಗೊಂಡಿತು. ಭಾರತವೂ ಸೇರಿ ದಂತೆ ಈಗ ೧೭೨ ದೇಶಗಳು ಇದರ ನೋಂದಾಯಿತ ಸದಸ್ಯರಾಗಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿನ ಮುಖ್ಯ ಜೌಗು ಪ್ರದೇಶವೆಂದು ಸಾಬೀತು ಮಾಡಲು, ಅಂಥ ತೇವಾಂಶದ ಪ್ರದೇಶವು ಹಲವು ಅನನ್ಯ ಮತ್ತು ವಿಶೇಷ ಗುಣಗಳನ್ನು ಹೊಂದಿರಬೇಕು.
ಜೈವಿಕ-ಭೌಗೋಳಿಕ ಪ್ರದೇಶದಲ್ಲಿ ನೈಸರ್ಗಿಕ ವಾಗಿ ಕಂಡುಬರುವ ಇಂಥ ಪ್ರದೇಶವು ಪ್ರಾತಿನಿಽಕವಾದ, ಅಪರೂಪದ ಅಥವಾ ವಿಶಿಷ್ಟ ಉದಾಹರಣೆ ಯನ್ನು ಹೊಂದಿದ್ದರೆ ಅಂಥ ತೇವಾಂಶ ಭೂಮಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖ್ಯವಾದುದೆಂದು ಪರಿಗಣಿಸಲಾಗುತ್ತದೆ. ಪ್ರತಿ ಸದಸ್ಯ ದೇಶಗಳು ಯುನೆಸ್ಕೋ ಮೂಲಕ ತಮ್ಮಲ್ಲಿರುವ ಜೌಗು ಪ್ರದೇಶಗಳನ್ನು ಗುರುತಿಸಿ ಅವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಸರಕ್ಕೆ ಮುಖ್ಯ ಎಂದು
ಪರಿಗಣಿಸುವಂತೆ ಅರ್ಜಿಯನ್ನು ಕಳುಹಿಸಬೇಕು. ಕೂಲಂಕಷ ಪರಿಶೀಲನೆಯ ನಂತರ ಅಂಥ ಜೌಗು ಪ್ರದೇಶ ವನ್ನು ‘ರಾಮ್ಸರ್ ತಾಣಗಳು’ ಎಂದು
ಗುರುತಿಸಲಾಗುತ್ತದೆ.
ರಾಮ್ಸರ್ ಸಮಾವೇಶದ ಮೂರು ಗುರಿಗಳು ಹಾಗೂ ಸ್ತಂಭಗಳು ಹೀಗಿವೆ: ಅಂತಾರಾಷ್ಟ್ರೀಯ ಪ್ರಾಮುಖ್ಯದ ಜೌಗು ಪ್ರದೇಶಗಳನ್ನು ರಾಮ್ಸರ್
ತಾಣ ಗಳೆಂದು ಹೆಸರಿಸುವುದು, ಪ್ರತಿ ದೇಶದ ಭೂಪ್ರದೇಶದಲ್ಲಿರುವ ಎಲ್ಲಾ ಜೌಗು ಪ್ರದೇಶಗಳ ವಿವೇಚನಾಯುಕ್ತ ಬಳಕೆಯನ್ನು ಉತ್ತೇಜಿಸುವುದು ಮತ್ತು ಜೌಗು ಪ್ರದೇಶಗಳು ಹಾಗೂ ಅವುಗಳ ಸಂಪನ್ಮೂಲಗಳ ವಿವೇಕಯುತ ಬಳಕೆಯನ್ನು ಹೆಚ್ಚಿಸಲು ಇತರ ದೇಶಗಳೊಂದಿಗೆ ಅಂತಾರಾಷ್ಟ್ರೀಯ ಸಹಕಾರವನ್ನು ಪ್ರಚೋದಿಸುವುದು. ರಾಮ್ಸರ್ ಸಮಾವೇಶವು ನೈಸರ್ಗಿಕ ಮತ್ತು ಮಾನವನಿರ್ಮಿತ ಜೌಗು ಪ್ರದೇಶಗಳೆಂದು ಅನೇಕ ಪರಿಸರಗಳನ್ನು ಹೆಸರಿಸುತ್ತದೆ.
ಅವುಗಳಲ್ಲಿ ಎಲ್ಲಾ ಸರೋವರಗಳು, ನದಿಗಳು, ಜಲಚರಗಳು, ಜೌಗು ಪ್ರದೇಶಗಳು, ತೇವಾಂಶ ವುಳ್ಳ ಹುಲ್ಲುಗಾವಲುಗಳು, ಓಯಸಿಸ್ಗಳು, ನದೀಮುಖ ಗಳು/ನದೀಮುಖಜ ಭೂಮಿಗಳು, ಮ್ಯಾಂಗ್ರೋವ್ಗಳು ಮತ್ತು ಇತರ ಕರಾವಳಿ ಪ್ರದೇಶಗಳು, ಹವಳದ ದಿಬ್ಬಗಳು ಸೇರಿವೆ. ಮಾತ್ರವಲ್ಲ, ಭತ್ತದ ಗದ್ದೆಗಳು, ಮೀನುಕೊಳ ಗಳು, ಜಲಾಶಯಗಳು ಮತ್ತು ಉಪ್ಪಿನ ತೊಟ್ಟಿಗಳಂಥ ಎಲ್ಲ ಮಾನವನಿರ್ಮಿತ ತಾಣಗಳೂ ಇದರಲ್ಲಿ ಸೇರಿವೆ.
೨೦೨೪ರ ಫೆಬ್ರವರಿಯಲ್ಲಿ ರಾಮ್ಸರ್ ತಾಣ ಗಳೆಂದು ಘೋಷಿಸಲಾದ ಕರ್ನಾಟಕದ ಮೂರು ಹೊಸ ಜೌಗು ಪ್ರದೇಶಗಳೆಂದರೆ, ಗದಗ ಬಳಿಯ ಮಾಗಡಿ ಕೆರೆ ಸಂರಕ್ಷಣಾ ಮೀಸಲು ಪ್ರದೇಶ, ಹಂಪಿ ಬಳಿಯ ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ ಹಾಗೂ ಕುಮಟಾ- ಗೋಕರ್ಣ ಸಮೀಪದ ಅಘನಾ ಶಿನಿ ನದೀ ಮುಖ. ರಂಗನತಿಟ್ಟು ಪಕ್ಷಿಧಾಮವು ೨೦೨೨ರಲ್ಲಿ ಈ ಪಟ್ಟಿಯಲ್ಲಿ ಸೇರ್ಪಡೆಯಾದ ಕರ್ನಾಟಕದ ಮೊದಲ ತಾಣವಾಗಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು ನಾಲ್ಕು ರಾಮ್ಸರ್ ಜೌಗು ತಾಣಗಳಿವೆ.
ಮಿಕ್ಕಂತೆ, ಭಾರತದಲ್ಲಿ ಒಟ್ಟು ೮೨ ರಾಮ್ಸರ್ ಅಂಕಿತ ಜೌಗು ತಾಣಗಳಿದ್ದು ಈ ವಿಷಯದಲ್ಲಿ ದೇಶವು ಪ್ರಪಂಚದಲ್ಲಿ ಮೂರನೆಯ ಸ್ಥಾನದಲ್ಲಿದೆ. ಚೀನಾದಲ್ಲೂ ಇಂಥ ೮೨ ಪ್ರದೇಶಗಳಿದ್ದು ಭಾರತದೊಂದಿಗೆ ಮೂರನೆಯ ಸ್ಥಾನವನ್ನು ಅದು ಹಂಚಿಕೊಂಡಿದೆ. ಪ್ರಸ್ತುತ ಬ್ರಿಟನ್ನಲ್ಲಿ ಅತಿಹೆಚ್ಚು ಸಂಖ್ಯೆಯ (೧೭೫) ಜೌಗು ಪ್ರದೇಶ ಗಳಿದ್ದರೆ, ಇಂಥ ೧೪೪ ತಾಣಗಳೊಂದಿಗೆ ಎರಡನೆಯ ಸ್ಥಾನದಲ್ಲಿದೆ ಮೆಕ್ಸಿಕೋ. ಪ್ರಪಂಚದಲ್ಲಿ ಈಗ ಸುಮಾರು ೨,೪೦೦ ಇಂಥ ‘ರಾಮ್ಸರ್ ತಾಣ’ಗಳಿವೆ. ಮುಂಬರುವ ದಿನಗಳಲ್ಲಿ ಉತ್ತರ ಕನ್ನಡದ ಶರಾವತಿ, ಗಂಗಾವಳಿ ಮತ್ತು ಕಾಳಿ ನದಿಗಳ ಪಾತಳಿಯಲ್ಲಿರುವ ಜೌಗು ಪ್ರದೇಶಗಳೂ ರಾಮ್ಸರ್ ತಾಣಗಳೆಂದು ನೋಂದಾಯಿತವಾದರೆ, ಈ ಜಿಲ್ಲೆ ತನ್ನ ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಂಡು ಬರಲು ಸಹಾಯಕ ವಾಗುತ್ತದೆ.
(ಲೇಖಕರು ಲೆಕ್ಕ ಪರಿಶೋಧಕರು)