Thursday, 19th September 2024

ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣಕ್ಕೆ ಸುದ್ದಿವಾಹಿನಿಗಳು ನೆರವಾಗಬಹುದಲ್ಲವೇ?

ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು

ಮೊನ್ನೆ ಖಾಸಗಿ ಸುದ್ದಿವಾಹಿನಿಯಲ್ಲಿ ಒಂದು ಕಾರ್ಯಕ್ರಮ ಪ್ರಸಾರ ವಾಗುತ್ತಿತ್ತು. ‘ಇನ್ನು ನಾಲ್ಕು ದಿನಗಳಲ್ಲಿ ದಿವಂಗತ
ನಟ ಚಿರಂಜೀವಿ ಸರ್ಜಾ ಅವರ ಮಡದಿ ಮೇಘನಾಸರ್ಜಾ ಅವರಿಗೆ ಗಂಡು ಮಗು ಹುಟ್ಟುತ್ತದೆ, ಏಕೆಂದರೆ ಆ ದಿನ ಜಿರಂಜೀವಿ ಸರ್ಜಾರ ಜನ್ಮದಿನ, ಅದೇ ದಿನದಂದು ಅವರೇ ಗಂಡುಮಗುವಾಗಿ ಜನಿಸುತ್ತಾರೆ’.

ಹೀಗೆ ಅರ್ಧಗಂಟೆಯ ಕಾರ್ಯಕ್ರಮವನ್ನು ಬಿತ್ತರಿಸಿದರು. ಬಹಳ ಸಂತೋಷದ ವಿಷಯ. ಅಕಾಲಿಕವಾಗಿ ತನ್ನ ಪತಿಯನ್ನು
ಕಳೆದುಕೊಂಡ ಆ ಹೆಣ್ಣುಮಗಳಿಗೆ ಹಾಗೆಯೇ ಆಗಲಿ. ಚಿರಂಜೀವಿಸರ್ಜಾ ಅವರೇ ಜನಿಸಿ ಅವರ ಕುಟುಂಬ ಹರ್ಷಪಡಲಿ. ಆದರೆ ಅಷ್ಟೊೊಂದು ನಿಖರವಾಗಿ ಗಂಡುಮಗುವೇ ಹುಟ್ಟುತ್ತದೆ ಎಂಬುದು ಸುದ್ದಿವಾಹಿನಿಗೆ ಹೇಗೆ ತಿಳಿಯುತ್ತದೆ?. ಭ್ರೂಣಪರೀಕ್ಷೆ ಯಾಗಿ ಅದರಿಂದ ತಿಳಿಯಿತೇ?, ಭ್ರೂಣ ಪರೀಕ್ಷೆ ಮಾಡುವುದು ಅಪರಾಧ.

ಅದು ಸಾಧ್ಯವಿಲ್ಲ. ಅಥವಾ ಕವಡೆ ಉದುರಿಸಿ ತಿಳಿದುಕೊಂಡರೆ ಎಂಬುದು ಪ್ರಶ್ನೆ. ಒಂದೊಮ್ಮೆ ಹಾಗೆಯೇಗಂಡು ಮಗು ಜನಿಸಿ ಬಿಟ್ಟಿತೆನ್ನಿ, ‘ನೋಡಿದಿರಾ, ನಮ್ಮ ವಾಹಿನಿ ತೋರಿಸಿದ್ದೇ ನಿಜವಾಯ್ತು, ನಮ್ಮ ಭವಿಷ್ಯವೇ ಸುಳ್ಳಾಗಲಿಲ್ಲ, ಇದು ನಮ್ಮಲ್ಲೇ ಮೊದಲು’ ಎಂಬ ದಿನಪೂರ್ತಿ ಬ್ರೇಕಿಂಗ್ ನ್ಯೂಸ್ ಬಿತ್ತರಗೊಳ್ಳದಿದ್ದರೆ ಕೇಳಿ. ಇರಲಿ, ಸುದ್ದಿ ವಾಹಿನಿಗಳಿಂದ ಸಮಾಜಕ್ಕೆ ಏನೇನು ಒಳಿತಾಗಬೇಕೋ ಅದೆಲ್ಲಾ ಆದರೆ ನಿಜಕ್ಕೂ ವಿದ್ಯುನ್ಮಾನ ಪತ್ರಿಕೋದ್ಯಮ ಸಾರ್ಥಕವಾದಂತೆಯೇ.

ಇಂದಿನ ಕರೋನಾ ಸಂಕಷ್ಟ ಕಾಲದಲ್ಲಿ ದೇಶದ ಆರೋಗ್ಯ ಆರ್ಥಿಕತೆ ಅಭಿವೃದ್ಧಿಯಷ್ಟೇ ಮಹತ್ವವಾದದ್ದು ನಮ್ಮ ಮಕ್ಕಳ
ಶೈಕ್ಷಣಿಕ ಬದುಕು. ಲಾಕ್‌ಡೌನ್ ಭಾಗವಾಗಿ ಶಾಲೆಗಳು ಕಾಲೇಜುಗಳ ಶೈಕ್ಷಣಿಕ ಸಂಸ್ಥೆಗಳು ಕಾರ್ಯನಿರ್ವಹಿಸದೆ ವಿದ್ಯಾರ್ಥಿಗಳಿಗೆ ಶಾಲೆ ಪಾಠ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತವಾಗಿ ಈ ಅವಧಿಯ ಶೈಕ್ಷಣಿಕ ವರ್ಷ ಜರುಗುವುದೇ ಅನುಮಾನವಾಗಿದೆ. ಆದರೆ ಇಲ್ಲಿ ವಿದ್ಯಾರ್ಥಿಗಳಿಗಿಂತ ಆತಂಕಗೊಂಡಿದ್ದು ಖಾಸಗಿ ವಿದ್ಯಾಸಂಸ್ಥೆಗಳು. ವಿದ್ಯಾರ್ಥಿಗಳ ಓದಿಗಿಂತ ಶಾಲೆಗಳ ಶುಲ್ಕಗಳನ್ನು ವಸೂಲಿ ಮಾಡುವುದೇ ‘ಫಸ್ಟ್‌ ಲಾಂಗ್ವೇಜ್’ ಆಗಿ ಪೋಷಕರು ವಿದ್ಯಾರ್ಥಿಗಳದ್ದೇನಿದ್ದರೂ ಸೆಕೆಂಡ್ ಥರ್ಡ್ ಲಾಂಗ್ವೇಜ್‌ಗಳಾಗಿ ಖಾಸಗಿ ಶಾಲೆಗಳು ಪೋಷಕರ ಕೆಂಗೆಣ್ಣಿಗೆ ಗುರಿ ಯಾಗಿದ್ದವು. ಆದರೂ ಕೆಲ ಮಠಗಳು ಧಾರ್ಮಿಕ ಸಂಸ್ಥೆಗಳು ನಡೆಸುತ್ತಿರುವ
ಶಾಲೆಗಳು ಪೋಷಕರ ಮೇಲೆ ಒತ್ತಡ ಹೇರದೆ ಸಾತ್ವಿಕವಾಗಿ ನಡೆದುಕೊಂಡವು. ಈ ಸಮಯದಲ್ಲಿ ಎಚ್ಚೆತ್ತ ರಾಜ್ಯ ಸರಕಾರ
ಪಠ್ಯಕ್ರಮವನ್ನು ಚಂದನ ವಾಹಿನಿಯಲ್ಲಿ ‘ಸೇತುಬಂಧ’ ಯೋಜನೆಯಡಿಯಲ್ಲಿ ಮಕ್ಕಳಿಗೆ ನಿರಂತರ ಕಲಿಕೆಯಾಗಿ ಬೋಧನೆ ಮಾಡುವುದನ್ನು ಆಂಭಿಸಿದ್ದು ಮಕ್ಕಳ ಮತ್ತು ಪೋಷಕರ ಮೆಚ್ಚುಗೆಯನ್ನು ಗಳಿಸಿದೆ.

ಈಗಲೂ ಅಷ್ಟೇ ಸರಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳನ್ನು ಈ ಸೇತುಬಂಧ ಶಿಕ್ಷಣ ಪದ್ಧತಿ ಪಠ್ಯಚಟುವಟಿಕೆಯಲ್ಲಿ ಬಂಧಿಸಿ ಮಕ್ಕಳ ಜ್ಞಾನಾರ್ಜನೆಗೆ ನೆರವಾಗುತ್ತಿದೆ. ಹಾಗೆ ನೋಡಿದರೆ ಈಗಿರುವ ದುಬಾರಿ ಅದ್ದೂರಿ ಭಯಾನಕ ಸುದ್ದಿವಾಹಿನಿಗಳ ಮುಂದೆ ದೂರದರ್ಶನದ ಚಂದನ ಬಡಪಾಯಿ ವಾಹಿನಿಯಾಗಿದೆ.

ಇನ್ನೊಂದೆಡೆ ಇಂಥ ಕರೋನಾ ಸಂಕಷ್ಟದಲ್ಲಿ ಮಕ್ಕಳ ವಿದ್ಯಾರ್ಥಿ ಬದುಕನ್ನು ಕಾಪಾಡಿಕೊಂಡು ಅವರ ಶೈಕ್ಷಣಿಕ ಮನಸ್ಥಿತಿ ಯನ್ನು ದಾರಿತಪ್ಪದಂತೆ ಮಾಡುವುದು ಪ್ರಮುಖವಾಗಿದೆ. ಇಲ್ಲದಿದ್ದರೆ ಹೊಸ ವಿಷಯವನ್ನು ಕಲಿಯದೆ ಕಲಿತ ವಿಷಯ ವನ್ನೆಲ್ಲಾ ಮರೆತು ಬಿಡುವ ಅಪಾಯವೂ ಇದೆ. ಆದ್ದರಿಂದ ಹಲವು ಶಾಲೆಗಳು ಆನ್ ಲೈನ್ ತರಗತಿಗಳನ್ನು ಮಾಡುತ್ತಿವೆ. ಕೆಲ ಶಾಲೆಗಳು ‘ಝೂಮ್’ ಆಪ್ ಮೂಲಕ ಇಂಟರ್ನೆಟ್ ಸಂಪರ್ಕದಲ್ಲಿ ಮೂವತ್ತು ನಲವತ್ತು ವಿದ್ಯಾರ್ಥಿಗಳನ್ನು ಏಕಕಾಲಕ್ಕೆ ಸಂಪರ್ಕದಲ್ಲಿರಿಸಿ ತರಗತಿಗಳನ್ನು ನಡೆಸುತ್ತಿವೆ. ಇದಕ್ಕಾಗಿ ಅನೇಕ ಮನೆಗಳಲ್ಲಿ ಮಕ್ಕಳ ಕೈಗೆ ಮೊಬೈಲ್ ಇಂಟರ್ನೆಟ್ ಇಯರ್
ಫೋನ್, ಹೆಡ್ ಫೋನ್‌ಗಳನ್ನು ಖರೀದಿಸಿ ಒದಗಿಸಬೇಕಾಗಿದೆ. ಕೆಲವೆಡೆ ನೆಟ್‌ವರ್ಕ್ ಸರಿಯಾಗಿ ಜೋಡಣೆಯಾಗದೆ ಅಡಚಣೆ ಗಳೂ ಆಗುತ್ತಿವೆ.

ಬಹುತೇಕ ಮನೆಗಳಲ್ಲಿ ಪೋಷಕರು ತಮ್ಮ ಖಾಸಗಿ ಮೊಬೈಲ್‌ಗಳನ್ನು ಮಕ್ಕಳ ಕೈಗೆ ಕೊಟ್ಟು ನಡೆಯುತ್ತಾರೆ. ಉಳ್ಳವರು
ಅದಕ್ಕಾಗಿಯೇ ಮೊಬೈಲ್ ಖರೀದಿಸಿ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಜ್ಞಾನವು ಯಾವ ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಬೇಕು ಎಂದು ಹೇಳುತ್ತದೆಯೋ ಈಗ ಅದೇ ಮೊಬೈಲನ್ನು ಮಕ್ಕಳ ಕೈಗೆ ಕೊಡಲೇಬೇಕಾದ ಅನಿವಾರ್ಯತೆ ತಲೆದೋರಿದೆ. ಜತೆಗೆ ಮಕ್ಕಳ ಮಾನಸಿಕತೆ ಮತ್ತು ಕಣ್ಣಿನ ದೃಷ್ಟಿಯ ಮೇಲೂ ನಕಾರಾತ್ಮಕ ಪರಿಣಾಮಗಳು ಬೀರುವುದರಲ್ಲೂ ಸಂಶಯವಿಲ್ಲ.

ಕರೋನಾರಹಿತ ಕಾಲದಲ್ಲೇ ಮಕ್ಕಳನ್ನು ನಿಯಂತ್ರಿಸುವುದು ಸುಲಭವಿರಲಿಲ್ಲ. ಇನ್ನು, ಇಂದು ಶಾಲೆಗಳು ಆರಂಭಗೊಂಡರೂ ಮಾಸ್ಕ್ ಸ್ಯಾನಿಟೈಜರ್ ಸಾಮಾಜಿಕ ಅಂತರ ಕರೋನಾ ಪರೀಕ್ಷೆಗಳು ಕಡ್ಡಾಯವಾಗಿ ಅದನ್ನು ಪಾಲಿಸುವುದು ನಿರ್ವಹಿಸುವುದು ಶಿಕ್ಷಕರುಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಮಕ್ಕಳನ್ನು ಕಟ್ಟಿಕೊಂಡು ಯುದ್ಧಕ್ಕೆ ಹೊರಟಂಥ ಮನಸ್ಥಿತಿ ಶಿಕ್ಷಕರುಗಳಿಗೆ ಮತ್ತು ಪೋಷಕರಿಗೆ ಎದುರಾಗುತ್ತದೆ. ಆದ್ದರಿಂದ ಈಗ ತುರ್ತಾಗಿ ಬೇಕಿರುವುದು ಚಂದನವಾಹಿನಿಯಂತೆ ಕಾರ್ಯನಿರ್ವಸಬಲ್ಲ
ಜವಾಬ್ದಾರಿಯುಳ್ಳ ಮಾಧ್ಯಮಗಳು. ನ್ಯಾಯಾಂಗ ಶಾಸಕಾಂಗ ಕಾರ್ಯಾಂಗ ಪತ್ರಿಕಾರಂಗ ದೇಶದ ನಾಲ್ಕ ಸ್ತಂಭಗಳು ಎಂಬ ನಂಬಿಕೆಯಿದೆ. ಈ ನಾಲ್ಕು ರಂಗಗಳು ಅದರದೇ ಆದ ಮೂಲಭೂತ ಕರ್ತವ್ಯಗಳು ಸಾಮಾಜಿಕ ಹೊಣೆಗಾರಿಕೆಗಳನ್ನು ಹೊಂದಿವೆ.

ಇದು ಸಾರ್ಥಕವಾದರೆ ಸಮಾಜ ಖಂಡಿತವಾಗಿಯೂ ಹೊಳಪು ಪಡೆಯುತ್ತದೆ. ಆದರೆ ಇಂದು ಪತ್ರಿಕಾರಂಗದ ಭಾಗವಾಗಿರುವ ಸುದ್ದಿವಾಹಿನಿಗಳು ಟಿಆರ್‌ಪಿ ಕುದುರೆಯನ್ನೇರಿ ವಿಧೂಷಕರಂತೆ ಆಗಿಹೋಗಿರುವುದೊಂದು ವಿಪರ್ಯಾಸ. ಅದರಲ್ಲೂ ಕರೋನಾ ಸಂಕಷ್ಟದ ಕಾಲದಲ್ಲಿ ಅತಿಯಾದ ವರ್ಣರಂಜಿತ ಕಪೋಲಕಲ್ಪಿತ ಉತ್ಪ್ರೇಕ್ಷಿತ ಉನ್ಮಾದ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಾರ್ವಜನಿಕರಲ್ಲಿ ಭಯ ಆತಂಕ ಹೆಚ್ಚಿಸಿ ನಂಬಿಕೆಯನ್ನು ಕಳೆದುಕೊಂಡಿರುವುದು ಸುಳ್ಳಲ್ಲ. ‘ಯಾವುದೇ
ಮಹತ್ವದ ಸುದ್ದಿ ಹೊರಬಂದರೆ ಅದು ಚಂದನ ಟಿ.ವಿ.ಯಲ್ಲಿ ಬಂದರೆ ಮಾತ್ರ ನಂಬುತ್ತೇನೆ’ ಎನ್ನುವಷ್ಟು ಅಪವಾದಕ್ಕೆ
ಗುರಿಯಾಗಿವೆ. ಇಂಥ ಪರಿಸ್ಥಿತಿಯಲ್ಲಿ ಸರಕಾರದ ಚಂದನ ವಾಹಿನಿ ನಿಜಕ್ಕೂ ಮಕ್ಕಳಿಗೆ ಆಪತ್ಬಾಂಧವನಂತೆ ಕಾಣುತ್ತಿದೆ.

ಕನಿಷ್ಠ ಟಿ.ವಿ ನೋಡಿಕೊಂಡು ಪಾಠ ಕೇಳಿಸಿಕೊಳುವುದು ನೋಟ್ಸ್‌ ಬರೆದುಕೊಳ್ಳುವುದು ಮೊಬೈಲ್ ಇಂಟರ್ನೆಟ್ಗಿಂತಲೂ ಬಲು ಉತ್ತಮ ಮತ್ತು ಸುರಕ್ಷಿತ ಪದ್ಧತಿಯಾಗಿದೆ. ಇಂಥ ನೈತಿಕತೆ ಬದ್ಧತೆ ಕೇವಲ ಸರಕಾರಿ ವಾಹಿನಿಗಳಿಗೆ ಮಾತ್ರ ಸೀಮಿತವೇ ಎಂಬುದು ಈಗಿನ ಪ್ರಶ್ನೆ. ಏಕೆಂದರೆ ಖಾಸಗಿ ವಾಹಿನಿಗಳ ಕ್ವಾಂಟಿಟಿ ಹೆಚ್ಚಾಗಿ ಕ್ವಾಲಿಟಿ ಹಳ್ಳ ಹಿಡಿದಿರುವುದು ಅಗೋಚರವೇನಲ್ಲ. ದಿನ ಗಟ್ಟಲೆ ಅಗತ್ಯಕ್ಕಿಂತ ಹೆಚ್ಚಾಗಿ ಡ್ರಗ್ಗಿಣಿಗಳ ಸುತ್ತ ಸೆಲೆಬ್ರೆಟಿಗಳ ಮದುವೆ ಮುಂಜಿ ನಾಮಕರಣಗಳ ಹುತ್ತವನ್ನು ಮಾಡಿಕೊಂಡು ಒಂದೋ ರಾಜಕೀಯ ಅಥವಾ ಸಿನಿಮಾ ಅದೂ ಇಲ್ಲವಾ ಕ್ರೈಂ ಸ್ಟೋರಿಗಳು, ದೇಶಗಳಲ್ಲಿ ಅಳಸಿದ ಕಥೆಗಳನ್ನು ತೋರಿಸಿ
ದಿನದ ಇಪ್ಪತ್ನಾಲ್ಕು ಗಂಟೆಗಳನ್ನು ಸುತ್ತುವುದು ಎಷ್ಟು ತ್ರಾಸದಾಯಕವಾಗಿದೆಯೆಂದರೆ ಮೊನ್ನೆ ಡ್ರಗ್ಸ್‌ ಕೇಸಿನಲ್ಲಿ ಬಂಧಿತ ಳಾಗಿರುವ ರಾಗಿಣಿ ಮೂರೂ ದಿನ ಒಂದೇ ಸೀರೆಯಲ್ಲಿದ್ದಾರೆ ಎಂಬುದನ್ನು ಬ್ರೇಕಿಂಗ್ ನ್ಯೂಸ್‌ನಲ್ಲಿ ತೋರಿಸಬೇಕಾದಂಥ ದಯನೀಯ ಸ್ಥಿತಿಗೆ ತಲುಪಿತ್ತು.

ನಾವು ತೋರಿಸ್ತೇವೆ, ನಾವು ಹೇಳ್ತೇವೆ, ನಮ್ಮಲ್ಲೇ ಮೊದಲು ನಮ್ಮಲ್ಲಿ ಮಾತ್ರ ಎಂದು ಎದೆಬಡಿದುಕೊಳ್ಳುವಂಥ ಘೋರ ಪ್ರತಿಧ್ವನಿ
ಅವರ ನಿರೂಪಣೆಯಲ್ಲೇ ಗೋಚರವಾಗುತ್ತದೆ. ಇಂದು ಕರೋನಾ ಹೊಡೆತ ಹಲವು ಬದಲಾವಣೆಗಳನ್ನು ತಂದೊಡ್ಡಿದೆ. ಅನೇಕರ ದುಡಿಮೆಯ ಬದುಕೇ ದುಸ್ತರವಾಗಿ ಕೂತಿದೆ. ಸಣ್ಣಪುಟ್ಟ ವ್ಯಾಪಾರಿಗಳೆಲ್ಲಾ ಹೊಟ್ಟೆಪಾಡಿಗಾಗಿ ಮಾಸ್ಕ್  ಸ್ಯಾನಿಟೈಜರ್ ಮಾರಾಟಕ್ಕೆ ಇಳಿದಿದ್ದಾರೆ. ಆಟೋ ಚಾಲಕರು ಸೊಪ್ಪು ತರಕಾರಿ ತುಂಬಿಸಿಕೊಂಡು ಮಾರುತ್ತಿದ್ದಾರೆ. ಶಿಕ್ಷಕರು ಆಶಾಕಾರ್ಯ ಕರ್ತರು ಮನೆಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.

ಪೊಲೀಸರು, ಗೃಹರಕ್ಷಕ ದಳದವರು, ವೈದ್ಯರು ಮೂಲ ಕರ್ತವ್ಯಗಳ ವ್ಯಾಪ್ತಿಗಳನ್ನು ಮೀರಿ ಶ್ರಮಿಸುತ್ತಿದ್ದಾರೆ. ಇಂಥ ತುರ್ತು ಪರಿಸ್ಥಿತಿಯಲ್ಲಿ ಕೆಲ ಸುದ್ದಿವಾಹಿನಿಗಳೂ ಹಲವು ರೀತಿಯ ಅಪಾಯಗಳನ್ನು ಎದುರಿಸಿ ಕರೋನಾ ಕುರಿತ ಜಾಗೃತಿ, ಸಮಾಜಿಕ ಕಾಳಜಿ, ಸರಕಾರಗಳ ನಡವಳಿಕೆ, ಸಾರ್ವಜನಿಕರ ಹೊಣೆಗೇಡಿತನಗಳ ಕುರಿತು ಕಾರ್ಯಕ್ರಮಗಳನ್ನು ಮಾಡಿರುವುದು ಸಾರ್ಥಕದ ವಿಚಾರವೇ ಹೌದು. ಆದರೆ ಈಗ ನಿಯಂತ್ರಣ ತಪ್ಪಿ ಸಾಗುತ್ತಿರುವ ಕರೋನಾ ಸೋಂಕು ಸದ್ಯಕ್ಕೆ ಶಾಲೆಗಳು ಪುನರಾರಂಭ
ವಾಗದಂತೆ ಮಾಡಿವೆ.

ಶಾಲೆಗಳು ತೆರೆದರೂ ಪೋಷಕರು ಮಕ್ಕಳನ್ನು ಕಳುಹಿಸುವ ಧೈರ್ಯವಿಲ್ಲ. ಹೀಗಾಗಿ ಮಕ್ಕಳ ಜ್ಞಾನ ವಿಕಾಸ, ಶಿಕ್ಷಣ ಚಟುವಟಿಕೆ, ಮಾನಸಿಕ ಆರೋಗ್ಯ ಇವುಗಳನ್ನುಕಾಪಾಡಿಕೊಳ್ಳುವುದು ಸೂಕ್ಷ್ಮ ವಿಚಾರವಾಗಿದೆ. ಇಂಥ ಸಂದಭದಲ್ಲಿ ಸುದ್ದಿವಾಹಿನಿಗಳು ತಮ್ಮ ಟಿಆರ್‌ಪಿಯತ್ತ ಗಮನ ಕಡಿಮೆಮಾಡಿ ಚಂದನವಾಹಿನಿಯಂತೆ ಶಿಕ್ಷಣ ಇಲಾಖೆ ಶಿಕ್ಷಣ ಸಂಸ್ಥೆಗಳೊಂದಿಗೆ ಚರ್ಚಿಸಿ ಅವರೊಂದಿಗೆ ಕೈಜೋಡಿಸಿ ಅವರು ನಡೆಸುತ್ತಿರುವ ಝೂಮ್ ಯೂಟೂಬ್ ಪಠ್ಯಗಳನ್ನು ನೇರವಾಗಿ ತಮ್ಮ ವಾಹಿನಿಗಳಲ್ಲಿ ಪ್ರಸಾರ ಮಾಡುವ ಉದಾರತೆಯ ಕೆಲಸಕ್ಕೆ ಮುಂದಾದರೆ ನಿಜಕ್ಕೂ ಸಮಾಜಕ್ಕೆ ಅದರಲ್ಲೂ ವಿದ್ಯಾರ್ಥಿಗಳಿಗೆ ದೊಡ್ಡ ಕೊಡುಗೆ ಯಾಗುತ್ತದೆ. ಚಂದನ ವಾಹಿನಿಗೆ ಹೋಲಿಸಿದರೆ ಪ್ರಸಾರದ ವ್ಯಾಪ್ತಿ, ವೇಗ, ಕ್ಯಾಮೆರಾ ಎಡಿಟಿಂಗ್, ಗ್ರಾಫಿಕ್ಸ್‌ ತಾಂತ್ರಿಕತೆ, ಅತ್ಯಾಧುನಿಕ ಸ್ಟುಡಿಯೋಗಳು ರಾಜ್ಯದ ಯಾವ ಮೂಲೆಯಲ್ಲಿ ಕುಳಿತಾದರೂ ಸಾಕ್ಷಾತ್ ನೇರಪ್ರಸಾರ ಮಾಡಬಹುದಾದ
ತಂತ್ರಜ್ಞಾನಗಳೆಲ್ಲಾ ಹತ್ತುಪಟ್ಟು ಹೆಚ್ಚಾಗಿದೆ.

ಕಂಪ್ಯೂಟರ್ ಗ್ರಾಫಿಕ್ಸ್‌‌ನಲ್ಲಿ ಪಠ್ಯಗಳನ್ನು ಪರಿಣಾಮಕಾರಿಯಾಗಿ ದೃಶ್ಯರೂಪದಲ್ಲಿ ತೋರಿಸಿ ಶಿಕ್ಷಣದಲ್ಲಿ ಹೆಚ್ಚು ಪ್ರಭಾವ
ಬೀರಬಹುದಾದ ಅವಕಾಶ ನಮ್ಮ ಸುದ್ದಿವಾಹಿನಿ ಗಳಿಗಿವೆ. ದಶಕದ ಹಿಂದೆ ಕನ್ನಡದ ಸುದ್ದಿವಾಹಿನಿಯೊಂದು ಆರಂಭವಾದಾಗ ಹೆಲಿಕಾಪ್ಟರ್ ಅನ್ನು ಸಹ ಹೊಂದಿದ್ದು ವಾಹಿನಿಗಳ ಶ್ರೀಮಂತಿಕೆಗೆ ಸಾಕ್ಷಿ. ಇಂದು ಮಾನವರಹಿತ ಉಪಗ್ರಹವನ್ನು ಬಾಹ್ಯಾಕಾಶ ಮಂಗಳ, ಚಂದ್ರನ ಮೇಲಿಸಿರಿ ಹಾಸನದಲ್ಲಿ ಕುಳಿತು ಅದನ್ನು ನಿಯಂತ್ರಿಸುವ ಕಾಲ. ಎಲ್ಲದರಲ್ಲೂ ಟೆಕ್ನಾಲಜಿಯನ್ನು ಬಳಸಿ ಅದ್ಭುತ ಬದಲಾವಣೆ ಮತ್ತು ಯಶಸ್ಸನ್ನು ಸಾಧಿಸಿರುವಾಗ ಬಹುಮುಖ್ಯವಾದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ಸಮಾಜದಲ್ಲಿ ಶಾಲೆರಹಿತ ಶಿಕ್ಷಣವನ್ನು ಮನೆಯಲ್ಲೇ ಬೋಧಿಸುವ ತಂತ್ರಜ್ಞಾನವನ್ನು ಅಳವಡಿಸುವುದು ಸುದ್ದಿವಾಹಿನಿಗಳಿಗೆ ಅಥವಾ ಸರಕಾರಕ್ಕೆ ಅಸಾಧ್ಯವೇನಲ್ಲ.

ಸರಳವಾಗಿ ಹೇಳಬೇಕೆಂದರೆ ಒಂದು ವೇದಿಕೆಯಲ್ಲಿ ಶಿಕ್ಷಕರಿಂದ ಪಠ್ಯಕ್ರಮಗಳು ಸಾಗಬೇಕು. ಇನ್ನೊಂದು ವೇದಿಕೆಯಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿ ಕೂರುವಂತೆ ಮನೆಯಲ್ಲೇ ಕೂತು ಅದನ್ನು ದೃಶ್ಯರೂಪದಲ್ಲಿ ನೋಡಿ ಕಲಿಯಬೇಕು. ಇದಕ್ಕೆೆ ಒಂದು ಮಾಧ್ಯಮ ಬೇಕು. ಈ ಕೆಲಸವನ್ನು ವಾಹಿನಿಗಳು ನಿರ್ವಹಿಸಿ, ಅದನ್ನು ಬಿತ್ತರಿಸಿ ವಿದ್ಯಾರ್ಥಿಗಳಿಗೆ ದೃಷ್ಟಿಯಾಗಬೇಕು ಅಷ್ಟೇ. ಅದೇ ‘ಸೇತುಬಂಧ’. ಇದಕ್ಕೆೆ ಸರಕಾರವೂ ಸ್ಪಂದಿಸಿ, ಅದಕ್ಕೆ ಬೇಕಾದ ನೆರವು ನೀಡಬೇಕು. ರಾಜ್ಯದ ಪಠ್ಯಕ್ರಮಗಳು ಇಡೀ
ನಾಡಿನಲ್ಲಿ ಒಂದೇ ಪಠ್ಯ ಇರುವುದರಿಂದ ಅದು ಸುಲಭವಾಗಿರುತ್ತದೆ. ಆದರೆ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಪಠ್ಯಕ್ರಮಗಳು ಪರಿವಿಡಿಗಳು ಕೆಲ ಶಾಲೆಯಿಂದ ಶಾಲೆಗಳ ಅನುಕ್ರಮಗಳು ಬೇರೆಯಾಗಿರುತ್ತದೆ. ಜತೆಗೆ ಒಂದರಿಂದ ಏಳನೇ ತರಗತಿಯವರೆಗೆ ಪಠ್ಯಗಳು ಶಾಲೆಗಳಲ್ಲಿಭಿನ್ನವಾಗಿರುತ್ತದೆ. ಅಂಥ ಸಂದರ್ಭದಲ್ಲಿ ಒಂದೇ ಪಠ್ಯದ ಪರಿವಿಡಿ ಇರುವ ಶಾಲೆಗಳನ್ನು ಕ್ರೋಢೀಕರಿಸಿ ಅಥವಾ ಒಂದೇ ತೆರೆನಾದ ಪಠ್ಯಗಳಿಗೆ ಅನ್ವಯಿಸಿಕೊಂಡು ಒಂದು ನಗರದ ಅಥವಾ ಒಂದು ಪ್ರದೇಶದ ಶಾಲೆಗಳನ್ನು ಒಟ್ಟು ಗೂಡಿಸಿ, ಅದಕ್ಕೆ ಒಂದು ಏಕಸಾಮ್ಯದ ವೇದಿಕೆಯನ್ನು ರಚಿಸಿ ಒಂದೊಂದು ಸುದ್ದಿವಾಹಿನಿ ಒಂದೊದು ಪಠ್ಯವಿಷಯವನ್ನು ಆಯ್ದುಕೊಂಡು ಆಯಾ ಪಠ್ಯಗಳ ಬೋಧನೆಯನ್ನು ಏಕಕಾಲದಲ್ಲಿ ನೇರಪ್ರಸಾರ ಮಾಡಬಹುದಾದ ಸಾಧ್ಯತೆ ಖಂಡಿತಾ ಇದೆ.

ಇದಕ್ಕೊಂದು ವ್ಯವಸ್ಥಿತಿವಾದ ನೆಟ್‌ವರ್ಕ್‌ನ್ನು ಸ್ಥಾಪಿಸುವುದು ಕಷ್ಟವೇನಲ್ಲ. ಇಂಥದೊಂದು ವ್ಯವಸ್ಥೆಯನ್ನು ಜಾರಿಗೆ ತಂದರೆ ಯಾವ ಲಾಕ್‌ಡೌನ್ ಸೀಲ್‌ಡೌನ್‌ಗಳಿದ್ದರೂ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲ. ಒಂದೊಂದು ವಾಹಿನಿ ಒಂದೊಂದು ಪ್ರದೇಶ ಅಥವಾ ಇಂತಿಷ್ಟು ಶಾಲೆಗಳು ಇಂತಿಷ್ಟು ಸಮಯಗಳು ಎಂದು ನಿಗದಿಪಡಿಸಿ ದೂರದರ್ಶನದ ಶಿಕ್ಷಣ ಆರಂಭಗೊಳ್ಳಲಿ
ನೋಡಿ, ಹಿಂದೆ ರಾಮಾಯಣ ಮಹಾಭಾರತ ಪ್ರಸಾರದ ಕಾಲದಲ್ಲಿ ಟಿ.ವಿ. ಮುಂದೆ ಕುಳಿತುಕೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳು ಸುದ್ದಿವಾಹಿನಿಗಳ ಮುಂದೆ ಕೂರುತ್ತಾರೆ.

ಆಗ ಅವುಗಳ ಟಿಆರ್‌ಪಿಯೂ ಹೆಚ್ಚುವುದರಲ್ಲಿ ಸಂಶಯಲ್ಲ. ಈಗಾಗಲೇ ಪರೀಕ್ಷಾರಹಿತ ಶೈಕ್ಷಣಿಕ ವರ್ಷಕ್ಕೆ ಒಲವು ವ್ಯಕ್ತ ವಾಗುತ್ತಿದೆ. ಸಂಪೂರ್ಣ ಪಠ್ಯಗಳಲ್ಲದಿದ್ದರೂ ಈ ಒಂದು ಶೈಕ್ಷಣಿಕ ವರ್ಷದಲ್ಲಿ ಪಠ್ಯಜ್ಞಾನವನ್ನು ಅರಿತು ಮುಂದಿನ ತರಗತಿಗೆ ಸಿದ್ಧವಾಗುವಷ್ಟು ಶಿಕ್ಷಣವನ್ನು ನೀಡಿದರೆ ಅದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ. ಇದು ಸುದ್ದಿವಾಹಿನಿಗಳು ಸಮಾಜಕ್ಕೆ ತೋರುವ ಜವಾಬ್ದಾರಿಯುತ ಸ್ಪಂದನೆಯಾಗುವುದರಲಿ ಸಂಶಯವೇ ಇಲ್ಲ.

ಇಂದು ಬಹುತೇಕ ಶಾಲೆಗಳು ಶಿಕ್ಷಣ ಸಂಸ್ಥೆಗಳು ರಾಜಕೀಯ ಮತ್ತು ಪ್ರಭಾ ಕ್ಷೇತ್ರಗಳ ವಾಹಿನಿಗಳು ಒಂದೋ ರಾಜಕೀಯ ಪುಡಾರಿಗಳ ಅಥವಾ ಪ್ರಭಾವಿಗಳ ಒಡೆತನದಲ್ಲಿರುತ್ತದೆ. ಹಾಗೆಯೇ ಬಹುತೇಕ ಸುದ್ದಿವಾಹಿನಿಗಳೂ ಸಹ ಇಂಥವರ ಮಾಲೀಕತ್ವ ದಲ್ಲೇ ನಡೆಯುತ್ತಿವೆ. ಹೀಗಿರುವಾಗ ‘ಸೇತುಬಂಧ’ ನೆರವೇರಿಸಲು ಯಾವುದೇ ಚಾನಲ್‌ಗಳಿಗೆ ಕಷ್ಟವೇನಲ್ಲ. ಇಚ್ಛಾಶಕ್ತಿಯೊಂದಿ ದ್ದರೆ ಸಾಕು. ಭಾರತೀಯ ಪರಂಪರೆಯಲ್ಲಿ ದೂರದರ್ಶನದ ಶಿಕ್ಷಣ ಅಥವಾ ಜ್ಞಾನಸಿದ್ಧಿ ಎಂಬುದು ಹೊಸತೇನಲ್ಲ. ಧ್ಯಾನ, ತಪಸ್ಸು ಎಂಬ ಆತ್ಮಾಂತರಿಕ ವ್ರತಾಚರಣೆಯಲ್ಲೇ ಲೌಕಿಕ ಮತ್ತು ಅಲೌಕಿಕವಾದ ಜ್ಞಾನ ಸಿದ್ಧಿಸಿಕೊಳ್ಳುವ ಪದ್ಧತಿ ಅಸ್ತಿತ್ವ ದಲ್ಲಿತ್ತು.

ಅಂಥ ವ್ರತಕ್ಕೆ ಇಂದಿನ ಮಕ್ಕಳನ್ನು ಪ್ರೇರೇಪಿಸಿ ಮನೆಯಲ್ಲೇ ಕುಳಿತು ಜ್ಞಾನವನ್ನು ಗಳಿಸುವಂತೆ ಮಾಡಬಹುದಾಗಿದೆ. ಇಂಥ ಒಂದು ವ್ಯವಸ್ಥೆಯನ್ನು ನಮ್ಮ ಸುದ್ದಿವಾಹಿನಿಗಳು ಕಾರ್ಯರೂಪಕ್ಕೆ ತರಲಿ. ಇಲ್ಲದಿದ್ದರೆ ಯಾವುದೇ ಅಬ್ಬರ, ಆರ್ಭಟ, ಕಿರು ಚಾಟ, ಕೂಗಾಟ, ಉತ್ಪ್ರೇಕ್ಷೆ, ಗಿಮಿಕ್‌ಗಳಿಲ್ಲದ ಚಂದನ ಟಿ.ವಿ.ಯನ್ನು ಚಂದವಾಗಿ ಕೂತು ನೋಡಬೇಕಷ್ಟೆ !

Leave a Reply

Your email address will not be published. Required fields are marked *