Saturday, 23rd November 2024

ನಮ್ಮ ರಾಜ್ಯದಲ್ಲಿ ಒಂದು ಹಸಿರು ಪ್ರವಾಸಿ ಮಾರ್ಗ !

ಶಶಾಂಕಣ

shashidhara.halady@gmail.com

ಒಂದು ಕ್ವಿಜ್ ಪ್ರಶ್ನೆಯಿಂದ ಆರಂಭಿಸೋಣ. ನಮ್ಮ ರಾಜ್ಯದಲ್ಲಿ ಎಷ್ಟು ನ್ಯಾಷನಲ್ ಪಾರ್ಕ್ (ರಾಷ್ಟ್ರೀಯ ಉದ್ಯಾನವನ) ಗಳಿವೆ? ಹೆಚ್ಚಿನವರಿಗೆ ಇದಕ್ಕೆ ಸ್ಪಷ್ಟವಾದ ಉತ್ತರವಿಲ್ಲ; ಅಷ್ಟೇಕೆ, ನನಗೂ ಇದುವರೆಗೆ ಗೊತ್ತಿರಲಿಲ್ಲ. ಇದನ್ನು ಓದುತ್ತಿರುವ ನೀವು ತಕ್ಷಣ ಗೂಗಲ್ ಮಾಡಿ ನೋಡುವ ಸಾಧ್ಯತೆ ಇದೆ. ಅಚ್ಚರಿ ಎಂದರೆ, ಅಂತರ್ಜಾಲದಲ್ಲಿ ಹುಡುಕಿದರೂ, ತಕ್ಷಣ ಈ ಕ್ವಿಜ್ ಪ್ರಶ್ನೆಗೆ ನಿಖರವಾದ ಉತ್ತರ ನೀಡುವ ಸಾಧ್ಯತೆ ಕಡಿಮೆ! ಏಕೆಂದರೆ, ಒಂದೊಂದು ವೆಬ್‌ಸೈಟ್‌ನಲ್ಲಿ ಒಂದೊಂದು ರೀತಿಯ ಮಾಹಿತಿ ದೊರಕಬಹುದು; ಜತೆಗೆ, ಹುಲಿಯೋಜನೆಯ ವ್ಯಾಪ್ತಿಯ ಪ್ರದೇಶಗಳು, ಅಭಯಾರಣ್ಯಗಳು ಮತ್ತು ಇತರ ರಕ್ಷಿತ ಅರಣ್ಯಗಳು ಒಂದಕ್ಕೊಂದು ಸಮಾನಾಂತರವಾಗಿ ಅಡಕಗೊಂಡಿರುವುದರಿಂದ, ನಮ್ಮ ರಾಜ್ಯದಲ್ಲಿರುವ ನ್ಯಾಷನಲ್ ಪಾರ್ಕ್‌ಗಳ ಒಟ್ಟೂ ಸ್ವರೂಪವನ್ನು ಚಿತ್ರಿಸಿಕೊಳ್ಳಲು ಕೆಲ ಕಾಲ ಬೇಕಾಗುವುದಂತೂ ನಿಜ.

ನಮ್ಮ ರಾಜ್ಯದ ಅರಣ್ಯ ಇಲಾಖೆಯ ವೆಬ್‌ಸೈಟ್ ಮಾಹಿತಿ ಪ್ರಕಾರ ಐದು ನ್ಯಾಷನಲ್ ಪಾರ್ಕ್‌ಗಳಿವೆ: ನಾಗರಹೊಳೆ, ಬಂಡಿಪುರ, ಬನ್ನೇರುಘಟ್ಟ, ಅಣಶಿ
ಮತ್ತು ಕುದುರೆಮುಖ ನ್ಯಾಷನಲ್ ಪಾರ್ಕ್‌ಗಳು. ಇವುಗಳ ಜತೆಯಲ್ಲೇ ಹುಲಿ ಯೋಜನೆಯ ವ್ಯಾಪ್ತಿಯ ಹಲವು ಪ್ರದೇಶಗಳಿವೆ; ರಕ್ಷಿತ ಪ್ರದೇಶಗಳಿವೆ
(ರಾಣೆಬೆನ್ನೂರು ಕೃಷ್ಣಮೃಗ ರಕ್ಷಿತಾರಣ್ಯ, ದರೋಜಿ ಕರಡಿ ಧಾಮ ಇತ್ಯಾದಿ), ನಿಸರ್ಗಧಾಮಗಳಿವೆ, ಅಭಯಾರಣ್ಯಗಳಿವೆ, ಚಿಟ್ಟೆ ಪಾರ್ಕ್‌ಗಳಿವೆ,
ಕಾಂಡ್ಲಾವನಗಳಿವೆ.. ಇನ್ನೊಂದು ವಿಚಾರವೆಂದರೆ, ನಮ್ಮ ಅರಣ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿಲ, ನ್ಯಾಷನಲ್ ಪಾರ್ಕ್‌ಗಳ ಮಾಹಿತಿಯು ಸಮಗ್ರವಾ ಗಿಲ್ಲ. (ಉದಾ: ತಂಗಲು ತಾಣ, ರೂಟ್‌ಮ್ಯಾಪ್ ಇತ್ಯಾದಿ.)

ನಮ್ಮ ರಾಜ್ಯದ ಪ್ರಕೃತಿ ಸಂಪತ್ತು, ವೈವಿಧ್ಯ, ಐತಿಹಾಸಿಕ ಸಿರಿವಂತಿಕೆ, ವಾಸ್ತು ಕಲಾಕೃತಿಗಳು, ಪುರಾತನ ಶಿಲಾ ತಾಣಗಳು ಮೊದಲಾದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡರೆ, ನ್ಯಾಷನಲ್ ಪಾರ್ಕ್ ಮತ್ತು ಇವೆಲ್ಲವುಗಳನ್ನೂ ಒಳಗೊಂಡು, ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬಹುದು ಮತ್ತು ಇದರಿಂದಾಗಿ, ಸಾವಿರಾರು ಜನರಿಗೆ ಉದ್ಯೋಗವೂ ದೊರಕುವುದು ಸಹಜ. ಇದನ್ನು ಯಾವ ರೀತಿಯಲ್ಲಿ ಮಾಡಬಹುದು? ನ್ಯಾಷನಲ್ ಪಾರ್ಕ್ ವಿಚಾರ ಬಂದರೆ, ಅಮೆರಿಕ (ಯುಎಸ್) ನೆನಪಿಗೆ ಬರುತ್ತದೆ. ಅಮೆರಿಕದಲ್ಲಿ ಇಂದು ೬೩ ನ್ಯಾಷನಲ್ ಪಾರ್ಕ್‌ಗಳಿವೆ; ನ್ಯಾಷನಲ್ ಪಾರ್ಕ್‌ಗಳ ಜತೆಯಲ್ಲೇ ಹಲವು ಐತಿಹಾಸಿಕ ತಾಣಗಳು, ರಿಕ್ರಿಯೇಷನಲ್ ಪ್ರದೇಶಗಳು, ಗಣ್ಯರ ಜನ್ಮಸ್ಥಳಗಳು ಮೊದಲಾದವುಗಳನ್ನು ಅಡಕಗೊಳಿಸಿ, ಇವುಗಳನ್ನು ನೋಡುವಂತೆ ಅಲ್ಲಿನ ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ; ಇಂತಹ ತಾಣಗಳ ಒಟ್ಟು ಸಂಖ್ಯೆ ಸುಮಾರು ೪೨೯.

ಸ್ಥಳೀಯರು ಮತ್ತು ವಿದೇಶಿ ಪ್ರವಾಸಿಗಳು ಈ ನ್ಯಾಷನಲ್ ಪಾರ್ಕ್ ಮತ್ತು ಇತರ ತಾಣಗಳನ್ನು ನೋಡುವುದರ ಮೂಲಕ ಅಲ್ಲಿನ ಆರ್ಥಿಕತೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ; ನ್ಯಾಷನಲ್ ಪಾರ್ಕ್ ಮತ್ತು ಇತರ ಪ್ರಮುಖ ತಾಣಗಳನ್ನು, ದಾರಿಗಳನ್ನು, ಪ್ರವಾಸಿ ರಸ್ತೆಗಳನ್ನು ನಿರ್ವಹಿಸಲೆಂದೇ ಅಲ್ಲೊಂದು ಪ್ರಮುಖ ಇಲಾಖೆಯಿದೆ! ಕೇಂದ್ರದ (ಫೆಡರಲ್) ನಿಯಂತ್ರಣದಲ್ಲಿರುವ, ‘ನ್ಯಾಷನಲ್ ಪಾರ್ಕ್ ಸರ್ವಿಸ್’ ಎಂಬ ಇಲಾಖೆಯು ಸುಮಾರು ೨೦,೦೦೦ ಜನರಿಗೆ ಉದ್ಯೋಗ ಒದಗಿಸಿದೆ ಮತ್ತು ಎರಡು ಲಕ್ಷಕ್ಕೂ ಅಽಕ ಸ್ವಯಂಸೇವಕರ ಸೇವೆಯನ್ನು ಪಡೆಯುತ್ತದೆ!

ಸರಳವಾಗಿ ಹೇಳಬೇಕೆಂದರೆ, ಅಮೆರಿಕದಲ್ಲಿ ನ್ಯಾಷನಲ್ ಪಾರ್ಕ್ ವ್ಯವಸ್ಥೆಯು ಒಂದು ದೊಡ್ಡ ಬಿಸಿನೆಸ್; ಅದರಿಂದ ಸರಕಾರಕ್ಕೂ ಆದಾಯವಿದೆ, ಇತರ ರೀತಿಯಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅಪಾರ ಪ್ರೋತ್ಸಾಹ ದೊರಕುಕತ್ತಿದೆ. ಇಂತಹದೊಂದು ವ್ಯವಸ್ಥೆಯನ್ನು ನಮ್ಮ ರಾಜ್ಯದಲ್ಲಿ ಮತ್ತು ದೇಶದಲ್ಲಿ ಜಾರಿಗೆ ತರಬಹುದೇ ಎಂಬ ಚಿಂತೆನೆಯನ್ನೊಳಗೊಂಡಂತೆ, ಅಲ್ಲಿನ ಕೆಲವು ವ್ಯವಸ್ಥೆಗಳ ವಿವರಗಳನ್ನು, ಕಲ್ಪಿಸಿರುವ ಸೌಲಭ್ಯಗಳನ್ನು, ಅಂಕಿ ಅಂಶಗಳನ್ನು ನೋಡೋಣ.

ನಮಗೆಲ್ಲಾ ಪಾಸ್‌ಪೋರ್ಟ್ ಗೊತ್ತು. ಪಾಸ್ ಪೋರ್ಟ್‌ಗೆ ಬಹು ಮೌಲ್ಯವಿದೆ. ಅದನ್ನು ಎಲ್ಲರೂ ಜೋಪಾನವಾಗಿಟ್ಟುಕೊಳ್ಳುವುದು ಸಹಜ. ಪಾಸ್
ಪೋರ್ಟ್ ಹೊಂದುವುದೇ ಒಂದು ಹೆಮ್ಮೆ ಎಂದು ಹಲವರು ಇಂದಿಗೂ ತಿಳಿದಿದ್ದಾರೆ. ಅಮೆರಿಕದಲ್ಲಿ, ನ್ಯಾಷನಲ್ ಪಾರ್ಕ್‌ಗಳಿಗೆಂದೇ ಒಂದು ‘ಪಾಸ್
ಪೋರ್ಟ್’ ಲಭ್ಯ! ಆಕರ್ಷಕ ಬಣ್ಣ, ಆಕಾರ, ವಿನ್ಯಾಸ ಹೊಂದಿರುವ ಇದರಲ್ಲಿ, ನ್ಯಾಷನಲ್ ಪಾರ್ಕ್ ವಿವರಗಳು, ಸ್ಟಾಂಪಿಂಗ್ ಮಾಡುವ ಅವಕಾಶ,
ಫೋಟೋಗಳು, ವಿವಿಧ ಪ್ರಾಕೃತಿಕ ಮತ್ತು ಐತಿಹಾಸಿಕ ತಾಣಗಳ ವಿವರಗಳು, ‘ಬ್ಲೂರಿಜ್ ಪಾರ್ಕ್‌ವೇ’ ಅಂತಹ ಸುಂದರ ರಸ್ತೆಗಳ ವಿವರ, ನೂರಾರು ಮೈಲಿ ಉದ್ದದ ಚಾರಣ (ಹೈಕಿಂಗ್) ದಾರಿಯ ವಿವರಗಳನ್ನು ಮುದ್ರಿಸಲಾಗಿದೆ; ಜತೆಯಲ್ಲಿ ಆಕರ್ಷಕ ಮ್ಯಾಪ್!

ಈ ‘ಪಾಸ್‌ಪೋರ್ಟ್ ಟು ಯುವರ್ ನ್ಯಾಷನಲ್ ಪಾಕ್ ’ನ್ನು ಹೊಂದಿದ ಮಕ್ಕಳು, ಯುವಕರು, ಹಿರಿಯರು, ಹೆಮ್ಮೆಯಿಂದ ಅದನ್ನು ಕೈಯಲ್ಲಿ ಹಿಡಿದು, ಒಂದು ತಾಣದಿಂದ ಇನ್ನೊಂದು ತಾಣಕ್ಕೆ ಪಯಣಿಸುತ್ತಾ, ಪ್ರತಿ ಜಾಗದಲ್ಲಿ ಸೀಲ್ ಮಾಡಿಸಿಕೊಂಡು, ಮುಂದಿನ ತಾಣದತ್ತ ಧಾವಿಸುವುದನ್ನು ಕಾಣಬಹುದು. ಇಂತಹ ದೊಂದು ವರ್ಣಮಯ ‘ಪಾಸ್‌ಪೋರ್ಟ್’ನ್ನು ನೀಡುವ ಮೂಲಕ, ಅಲ್ಲಿನ ಸರಕಾರವು, ಜನರಲ್ಲಿ ನ್ಯಾಷನಲ್ ಪಾರ್ಕ್ ಸುತ್ತುವ ಹ್ಯವಾಸವನ್ನು ಬೆಳೆಸಿದೆ. ಜಗತ್ತಿನ ಮೊತ್ತಮೊದಲ ನ್ಯಾಷನಲ್ ಪಾರ್ಕ್‌ನ್ನು ರೂಪಿಸಿದ್ದು ನಾವೇ ಎಂದು ಅಮೆರಿಕದವರು ಹೇಳಿಕೊಳ್ಳುತ್ತಿದ್ದಾರೆ. ಅದೇ ಯೆಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್. ೧೮೭೨ರಲ್ಲಿ ಅಲ್ಲಿ ಘೋಷಣೆಗೊಂಡ ಯೆಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್, ಇಂದಿಗೂ ಒಂದು ಪ್ರಮುಖ ಪ್ರವಾಸಿ ಆಕರ್ಷಣೆ.

೨೦೨೨ರಲ್ಲಿ ಈ ನ್ಯಾಷನಲ್ ಪಾರ್ಕ್‌ಗೆ ೩೨ ಲಕ್ಷ ಜನ ಭೇಟಿ ನೀಡಿದ್ದರು. ಅಲ್ಲಿನ ಇನ್ನೊಂದು ಪ್ರಮುಖ ನ್ಯಾಷನಲ್ ಪಾರ್ಕ್ ಎನಿಸಿದ ಸ್ಮೋಕಿ ಮೌಂಟೆನ್ ನ್ಯಾಷನಲ್ ಪಾರ್ಕ್‌ಗೆ ೨೦೨೨ರಲ್ಲಿ ೧ ಕೋಟಿ ೨೯ ಲಕ್ಷ ಜನರು ಭೇಟಿ ನೀಡಿದ್ದರು! ಕೊಲೆರೋಡೋ ರಾಜ್ಯದ ನಾಲ್ಕು ನ್ಯಾಷನಲ್ ಪಾರ್ಕ್‌ಗಳಿಗೆ ವಾರ್ಷಿಕ ಒಂದು ಕೋಟಿಗೂ ಅಽಕ ಜನರು ಭೇಟಿ ನೀಡುತ್ತಿದ್ದಾರೆ. ಸಹಜವಾಗಿಯೇ, ನ್ಯಾಷನಲ್ ಪಾರ್ಕ್ ಸುತ್ತ ಮುತ್ತ ಇರುವ ವಸತಿ ಗೃಹ, ರೆಸ್ಟೋರೆಂಟ್, ಅಂಗಡಿಗಳಿಗೆ ವ್ಯಾಪಾರವೂ ಆಗಿ, ಹಲವರಿಗೆ ಉದ್ಯೋಗವೂ ದೊರಕಿದಂತಾಗುತ್ತದೆ.

ಅಮೆರಿಕದ ಸ್ಥಳೀಯರು ಮತ್ತು ಪ್ರವಾಸಿಗರು ಹಲವು ದಿನ ಪಯಣ ಮಾಡಿ, ನಿಸರ್ಗಸೌಂದರ್ಯವನ್ನು ಆಸ್ವಾದಿಸಲು ಅನುಕೂಲವಾಗುವಂತೆ ರೂಪಿಸಲಾಗಿರುವ ‘ಬ್ಲೂ ರಿಜ್ ಪಾರ್ಕ್‌ವೇ’ ವಿಶಿಷ್ಟ. ಬೆಟ್ಟ ಗುಡ್ಡಗಳ ನಡುವೆ ರಸ್ತೆಯ ಮೂಲಕ ಪ್ರವಾಸ ಮಾಡುವಂತೆ ವಿನ್ಯಾಸಗೊಳಿಸಲಾಗಿರುವ
ಇಲ್ಲಿನ ರಸ್ತೆಗಳಲ್ಲಿ ಗರಿಷ್ಠ ವೇಗ ೪೫ ಮೈಲು. ಅಂದರೆ, ಅಮೆರಿಕದ ಇತರ ಹೆದ್ದಾರಿಗಳಂತೆ ಇಲ್ಲಿ ೭೦ ಮೈಲು ವೇಗದಲ್ಲಿ ಚಲಿಸುವಂತಿಲ್ಲ. ಈ
‘ನ್ಯಾಷನಲ್ ಪಾರ್ಕ್‌ವೇ’ಯನ್ನು ಪ್ರಾಕೃತಿಕ ಸೌಂದರ್ಯವನ್ನು ಸವಿಯಲೆಂದೇ ವಿನ್ಯಾಸಗೊಳಿಸಲಾಗಿದ್ದು, ಇದು ಅಲ್ಲಿನ ವರ್ಜೀನಿಯಾ ಮತ್ತು
ಉತ್ತರ ಕ್ಯಾರೊಲಿನಾ ರಾಜ್ಯಗಳಲ್ಲಿ ಸಾಗಿದೆ. ಈ ಪಾರ್ಕ್‌ವೇ ಉದ್ದ ೪೬೯ ಮೈಲಿ (೭೫೫ ಕಿ.ಮೀ.) ಬಹುಮಟ್ಟಿಗೆ ಅಲ್ಲಿನ ಬ್ಲೂ ರಿಜ್ ಪರ್ವತ ಶ್ರೇಣಿಯ ತುದಿಯಲ್ಲೇ ಸಾಗುವ ಈ ರಸ್ತೆಯು, ಇತರ ಕೆಲವು ನ್ಯಾಷನಲ್ ಪಾರ್ಕ್‌ಗಳಿಗೆ ಸಂಪರ್ಕವನ್ನೂ ನೀಡುತ್ತದೆ.

೨೬ ಸುರಂಗ, ೧೬೮೯ ಸೇತುವೆ ಈ ರಸ್ತೆಯ ಆಕರ್ಷಣೆ. ಅಮೆರಿಕದ ನ್ಯಾಷನಲ್ ಪಾರ್ಕ್ ವ್ಯವಸ್ಥೆಯಲ್ಲಿ, ಅತಿ ಹೆಚ್ಚು ಜನರು ಭೇಟಿ ನೀಡುವ ರಸ್ತೆ ಇದು ಎಂಬ ಪ್ರಚಾರವೂ ಇದೆ. ಕಾಡು, ಜಲಪಾತ, ಬೆಟ್ಟ ಗುಡ್ಡಗಳ ನಡುವೆ ಸಾಗುವ ಈ ರಸ್ತೆಯಲ್ಲಿ ಚಲಿಸಲು ವಾಹನಗಳ ಶುಲ್ಕ ನೀಡಬೇಕಾಗಿಲ್ಲ. ಚಳಿಗಾಲ ಕಳೆದ ನಂತರ, ಬಿಸಿಲು ಬೀಳುವ ಸಮಯದಲ್ಲಿ ನಡೆಯುವುದು, ಹೈಕಿಂಗ್ ಮಾಡುವುದು, ಸೈಕ್ಲಿಂಗ್ ಮಾಡುವುದು ಅಮೆರಿಕದವರ ನೆಚ್ಚಿನ ಹವ್ಯಾಸ; ಅದಕ್ಕಾಗಿ ಇಲ್ಲಿ ಹಲವು ಅನುಕೂಲಗಳನ್ನು ಮಾಡಿಕೊಡಲಾಗಿದೆ. ನಡುನಡುವೆ ಹಲವು ಕ್ಯಾಂಪಿಂಗ್ ತಾಣಗಳಿವೆ. ಬ್ಲೂ ರಿಜ್ ಪಾರ್ಕ್‌ವೇನಲ್ಲಿ ಕಾರ್ ಮೂಲಕ ಪ್ರವಾಸ ಮಾಡುವವರಿಗೆ, ಎಲ್ಲೆಲ್ಲಿ ಯಾವ ಯಾವ ಆಕರ್ಷಕ ತಾಣಗಳನ್ನು ನೋಡಬಹುದು ಎಂಬ ಮಾಹಿತಿಯನ್ನು ಸಹ ನೀಡಲಾಗುತ್ತಿದೆ.

ಕೆಲವು ಕಡೆ ಕಾರು ನಿಲ್ಲಿಸಿ, ಕುದುರೆ ಸವಾರಿ ಮಾಡಬಹುದು! ಇನ್ನು ಕೆಲವು ಕಡೆ ಮೀನು ಹಿಡಿಯಬಹುದು! ಸ್ಥಳೀಯ ಇಂಡಿಯನ್ ಬುಡಕಟ್ಟು ಜನಾಂಗವಾದ ಅಪ್ಪಲಾಚಿಯನ್ ಅವರ ಜನಪದ ಕಲೆಯನ್ನು ಪ್ರದರ್ಶಿಸುವ ಕೇಂದ್ರವೂ ಇದೆ. ಇದೊಂದು ರಸ್ತೆಯ ಕುರಿತು ಇಷ್ಟು ವಿವರವಾಗಿ
ಏಕೆ ಬರೆದೆ ಎಂದು ನಿಮಗೆ ಕುತೂಹಲವಾಗಿರಬಹುದು. ಇಂತಹದೊಂದು ಪ್ರಯತ್ನವನ್ನು ನಮ್ಮ ರಾಜ್ಯದಲ್ಲಿ ಮಾಡಬಹುದು ಮತ್ತು ಅದೇಕೆ
ಮಾಡಬಾರದು ಎಂಬ ಯೋಚನೆಯಿಂದ ಈ ಮಾಹಿತಿ ಹಂಚಿಕೊಂಡೆ. ನಮ್ಮ ದೇಶದ ಎಲ್ಲಾ ನ್ಯಾಷನಲ್ ಪಾಕ್ ಗಳನ್ನು ನೋಡುವಂತೆ ನಮ್ಮ ದೇಶದ ನಿವಾಸಿಗಳನ್ನು ಹುರಿದುಂಬಿಸುವ ಕೆಲಸವಾಗಬೇಕಾಗಿದೆ; ಅದು ಸದ್ಯಕ್ಕೆ ಕಷ್ಟ – ಏಕೆಂದರೆ, ಅದೊಂದು ದೊಡ್ಡ ಕೆಲಸ, ಹಲವು ರಾಜ್ಯಗಳ ಸಹಕಾರ ಬೇಕು ಮತ್ತು, ನ್ಯಾಷನಲ್ ಪಾರ್ಕ್ ಮೇಲುಸ್ತುವಾರಿಗೆ, ಬೇರೊಂದೇ ನಿಗಮ ಬೇಕಾಗುತ್ತದೆ (ರಾಷ್ಟ್ರೀಯ ಹೆದ್ದಾರಿ ನಿಗಮದ ರೀತಿ).

ಇದಕ್ಕೆ ಪೂರಕವಾಗಿ, ನಮ್ಮ ರಾಜ್ಯದ ನ್ಯಾಷನಲ್ ಪಾರ್ಕ್ ಮತ್ತು ಇತರ ತಾಣಗಳನ್ನು ಒಟ್ಟಾಗಿ ನೋಡುವಂತೆ ಜನರನ್ನು ಪ್ರೋತ್ಸಾಹಿಸುವ ಕೆಲಸ ವನ್ನು ಮಾಡಬಹುದು ಎಂದೆನಿಸುತ್ತದೆ. ಇದಕ್ಕೆ ಬೇಕಾದ ಪ್ರಾಕೃತಿಕ ಸೌಂದರ್ಯ ನಮ್ಮಲ್ಲಿದೆ, ಮೂಲಭೂತ ಸೌಕರ್ಯ (ವಸತಿ ಗೃಹ, ರೆಸ್ಟೋರೆಂಟ್ ಇತ್ಯಾದಿ) ಈಗಾಗಲೇ ಅಲ್ಲಲ್ಲಿ ಇವೆ. ನ್ಯಾಷನಲ್ ಪಾರ್ಕ್, ಐತಿಹಾಸಿಕ ತಾಣ ಮತ್ತು ಇತರ ಪ್ರವಾಸಿ ಸ್ಥಳಗಳನ್ನು ಬೆಸೆಯುವ, ಒಂದು ವೈಜ್ಞಾನಿಕ ರೂಟ್ ಮ್ಯಾಪ್‌ನ್ನು ಜನರಿಗೆ ನೀಡುವ ಕೆಲಸ ಆಗಬೇಕಿದೆ. ನಮ್ಮ ಸರಕಾರದ ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆಗಳು ಇದನ್ನು ಖಂಡಿತ ಮಾಡಬಹುದು.

ಸಾಕಷ್ಟು ದಟ್ಟ ಕಾಡಿನಿಂದ ಕೂಡಿದ, ಬೆಟ್ಟ ಗುಡ್ಡಗಳಿಂದ ಆವೃತವಾಗಿರುವ, ಪ್ರಾಕೃತಿಕ ದೃಶ್ಯಗಳನ್ನು ಹೊಂದಿರುವ ಪಶ್ಚಿಮ ಘಟ್ಟಗಳು, ಈ
ನಿಟ್ಟಿನಲ್ಲಿ ನಮ್ಮ ರಾಜ್ಯದ ಅಪೂರ್ವ ಸಂಪತ್ತು. ಈಚಿನ ಒಂದು ದಶಕಗಳಲ್ಲಿ ನಮ್ಮ ರಾಜ್ಯದ ಹಲವು ಉತ್ಸಾಹಿಗಳು ಸಾಕಷ್ಟು ಪ್ರವಾಸ ಹೋಗು ತ್ತಿದ್ದಾರೆ; ವಾರಂತ್ಯ ಬಂದರೆ ಸಾಕು, ಬೆಂಗಳೂರಿನಿಂದ ನೂರಾರು ಕಾರುಗಳು ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಹೋಂಸ್ಟೇಗಳಿಗೆ ಸಾಗುವುದನ್ನು ಕಾಣಬಹುದು ಮತ್ತು ಅದು ಇಂದು ಸಹಜ ಚಟುವಟಿಕೆಯಾಗಿದೆ. ಜನರ ಈ ಪ್ರವಾಸೋತ್ಸಾಹವನ್ನು, ಪಶ್ಚಿಮ ಘಟ್ಟಗಳ ವೀಕ್ಷಣೆಗೆ ಸದುಪಯೋಗ ಪಡಿಸಿಕೊಳ್ಳುವ ಕೆಲಸವನ್ನು ನಮ್ಮ ರಾಜ್ಯದಲ್ಲಿ ಮಾಡುವ ಅವಕಾಶವಿದೆ.

ಮಡಿಕೇರಿಯಿಂದಾರಂಭಿಸಿ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಮೂಲಕ ಸಾಗುವ ರಸ್ತೆಗಳನ್ನು
ಉಪಯೋಗಿಸಿಕೊಂಡು, ಒಂದು ಪ್ರವಾಸಿ ಮ್ಯಾಪ್‌ನ್ನು ರೂಪಿಸಿದರೆ, ಅಂತಹದೊಂದು ವಿಶಿಷ್ಟ ಹವ್ಯಾಸಕ್ಕೆ ಸಹಕರಿಸಬಹುದು. ಇಂದು ನಮ್ಮ ರಾಜ್ಯದ ರಸ್ತೆಗಳು ಸಾಕಷ್ಟು ಉತ್ತಮವಾಗಿವೆ; ಯಾವ ರಸ್ತೆಯಲ್ಲಿ ಸಾಗಿದರೆ, ಯಾವ ಪ್ರವಾಸಿ ತಾಣ ದೊರಕುತ್ತದೆ ಎಂಬ ರೂಟ್ ಮ್ಯಾಪ್‌ನ್ನು ರಾಜ್ಯ ಸರಕಾರದ ಸಂಬಂಧ ಪಟ್ಟ ಇಲಾಖೆಗಳು ಮಾಡಿಕೊಟ್ಟರೆ, ಖಂಡಿತಾ ಅನುಕೂಲವಾಗುತ್ತದೆ.

ಜತೆಗೆ, ಕೆಲವು ಕಡೆ, ಮೂಲಭೂತ ಸೌಕರ್ಯಗಳನ್ನು ಸಹ ಮಾಡಿಕೊಡಬೇಕಾದೀತು. ಅರಣ್ಯ ಇಲಾಖೆ ಮತ್ತು ಪ್ರವಾಸೊದ್ಯಮ ಇಲಾಖೆಗಳ ಜಂಟಿ ಜವಾಬ್ದಾರಿ ಇದು. ಈ ಉದ್ದೇಶಿತ ರಸ್ತೆ ಪ್ರವಾಸವನ್ನು ಕೈಗೊಳ್ಳುವವರು, ನಮ್ಮ ರಾಜ್ಯದ ನ್ಯಾಷನಲ್ ಪಾರ್ಕ್‌ಗಳನ್ನು ಸಹ ನೋಡಬಹುದು.
ಆರಂಭದಲ್ಲಿ ಬನ್ನೇರುಘಟ್ಟ ನ್ಯಾಷನಲ್ ಪಾಕ್ ನ್ನೂ ಸೇರಿಸಿ, ನಾಗರಹೊಳೆ, ಬಂಡಿಪುರ, ಕುದುರೆಮುಖ, ಅಣಶಿ ನ್ಯಾಷನಲ್ ಪಾರ್ಕ್‌ಗಳು ದಾರಿಯಲ್ಲಿ ದೊರಕುವಂತೆ ರೂಪಿಸಬಹುದಾದ ಈ ಉದ್ದೇಶಿತ ರಸ್ತೆಯು, ಎತ್ತಿನ ಭುಜ, ಕೊಡಚಾದ್ರಿ ಮೊದಲಾದ ಹಲವು ತಾಣಗಳಿಗೆ ಚಾರಣಕ್ಕೂ ಅವಕಾಶ ಮಾಡಿಕೊಡಬಲ್ಲದು; ಹಲವು ಜಲಪಾತಗಳನ್ನು, ಬೀಚ್‌ಗಳನ್ನು ಸಹ ಒಳಗೊಳ್ಳಬಹುದು.

ಈ ಕುರಿತು ಒಂದು ಪುಟ್ಟ ಪುಸ್ತಕವನ್ನು ಸಹ ಮುದ್ರಿಸಬಹುದು : ಅದೇ ಕರ್ನಾಟಕದ ಹಸಿರು ಪಾಸ್‌ಪೋರ್ಟ್! ಹಸಿರು ಸಿರಿಯ ಮೂಲಕ ಸಾಗುವ ಈ ಉದ್ದೇಶಿತ ರಸ್ತೆಯು, ನಮ್ಮ ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ಆಯಾಮವನ್ನು ಕೊಡುವುದಂತೂ ನಿಜ. ಇದೇ ರೀತಿ ಬಯಲು ಸೀಮೆಯ ತಾಣಗಳನ್ನು ನೋಡುವ ಚಟುವಟಿಕೆಗೂ ಆಹ್ವಾನ ನೀಡುವ ಅವಕಾಶವಿದೆ. ಇದರಿಂದೇನು ಲಾಭ ಎಂದು ಕೇಳಬಹುದು. ನಮ್ಮ ರಾಜ್ಯದ ಎಲ್ಲಾ ನ್ಯಾಷನಲ್ ಪಾರ್ಕ್‌ಗಳನ್ನು ನೋಡುವಂತೆ ಆಹ್ವಾನ ನೀಡುವ ಮೂಲಕ, ಮಕ್ಕಳಲ್ಲಿ, ಯುವಕರಲ್ಲಿ, ಹಿರಿಯರಲ್ಲಿ ಒಂದು ಆರೋಗ್ಯಪೂರ್ಣ
ಹವ್ಯಾಸಕ್ಕೆ, ಚಟುವಟಿಕೆಗೆ ನಾಂದಿ ಹಾಡಬಹುದು.

ಜತೆಗೆ, ಸಹಜವಾಗಿಯೇ, ವಸತಿ ಗೃಹ, ರೆಸ್ಟೋರೆಂಟ್, ಪೆಟ್ರೋಲ್ ಬಂಕ್, ಸ್ಥಳೀಯ ಅಂಗಡಿಗಳ ವ್ಯಾಪಾರ. ವೃದ್ಧಿಗೂ ಈ ಆರೋಗ್ಯಕರ ಚಟುವಟಿಕೆ ಯಿಂದ ಸಹಾಯವಾಗುತ್ತದೆ. ರಾಜ್ಯ ಸರಕಾರದ ಸಂಬಂಧ ಪಟ್ಟ ಇಲಾಖೆಗಳು ಇಂತಹದೊಂದು ‘ಹಸಿರು ಪ್ರವಾಸಿ ಮಾರ್ಗ’ವನ್ನು ರೂಪಿಸಿ, ನಮ್ಮ ರಾಜ್ಯದ ಎಲ್ಲಾ ನ್ಯಾಷನಲ್ ಪಾರ್ಕ್ ವೀಕ್ಷಣೆಗೆ ವಿಶೇಷ ಒತ್ತು ನೀಡಬೇಕು ಎಂದು ಮನವಿ ಮಾಡುತ್ತೇನೆ.