ಅಶ್ವತ್ಥಕಟ್ಟೆ
ranjith.hoskere@gmail.com
ದೇಶದಲ್ಲಿ ಲೋಕಸಭಾ ಚುನಾವಣೆ ಪೂರ್ಣಗೊಂಡು, ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರದ ಗದ್ದುಗೆಯನ್ನು ಏರಿದ್ದಾರೆ. ಮೂರನೇ ಅವಧಿಯ ಸಂಪುಟದಲ್ಲಿ ಕರ್ನಾಟಕದ ಐವರನ್ನು ಸಂಪುಟದೊಳಗೆ ಸೇರಿಸಿಕೊಂಡಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬಿಜೆಪಿಯ ಸಾಧನೆ ಕ್ಷೀಣಿಸಿದ್ದರೂ, ರಾಜ್ಯ ಬಿಜೆಪಿಗರಲ್ಲಿ ಒಂಬತ್ತು ಸ್ಥಾನ ಕಳೆದುಕೊಂಡಿರುವ ಬೇಸರಕ್ಕಿಂತ, ಒಂಬತ್ತೇ ಸ್ಥಾನಕ್ಕೆ ನಿಂತಿದೆಯಲ್ಲ ಎನ್ನುವ ನೆಮ್ಮದಿ ಕಾಣಿಸುತ್ತಿದೆ.
ಈ ರೀತಿ ತಮ್ಮಷ್ಟಕ್ಕೇ ತಾನೇ ಸಮಾಧಾನ ಮಾಡಿಕೊಳ್ಳುವುದನ್ನು ಗಮನಿಸಿದರೆ, ಹೆಚ್ಚು ಸೀಟುಗಳ ಸೋಲಿನ ಆತಂಕದಲ್ಲಿದ್ದವರಿಗೆ, ಮೂರರಿಂದ ನಾಲ್ಕು ಕ್ಷೇತ್ರಗಳಲ್ಲಿ ‘ಅಚ್ಚರಿ’ಯ ಗೆಲುವುಗಳು ಹಾಗೂ ‘ಕಳಪೆ’ ಪ್ರದರ್ಶನದ ಬದಲಿಗೆ ಮರ್ಯಾದೆ ಉಳಿಸಿಕೊಳ್ಳುವಷ್ಟು ಸೀಟುಗಳನ್ನು ಮೋದಿಗೆ ಕೊಡುಗೆ ಯಾಗಿ ನೀಡಿರುವ ನೆಮ್ಮದಿಯಿದೆ. ಆದರೆ ಈ ರೀತಿ ನಿಟ್ಟುಸಿರು ಬಿಡುವುದಕ್ಕೆ ಬಿಜೆಪಿ ಹಾಗೂ ಜೆಡಿಎಸ್‌ನ ರಾಜ್ಯ ನಾಯಕತ್ವ ಕಾರಣ ಎನ್ನುವುದಕ್ಕಿಂತ,
ಬಿಜೆಪಿಯ ರಾಷ್ಟ್ರ ನಾಯಕರು ಬಿಜೆಪಿಗಿಂತ ಹೆಚ್ಚಾಗಿ ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರನ್ನು ಬಳಸಿಕೊಂಡು ಹಳೇ ಮೈಸೂರು ಭಾಗದಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದಾರೆ.
ಒಂದು ವೇಳೆ ಹಳೇ ಮೈಸೂರು ಭಾಗದಲ್ಲಿ ಕ್ಲೀನ್ ಸ್ವೀಪ್ ಮಾಡದೇ ಹೋಗಿದ್ದರೆ, ಕಾಂಗ್ರೆಸ್ ಟಾರ್ಗೆಟ್ ೧೫ ರೀಚ್ ಆಗುವುದು ಬಹುದೊಡ್ಡ ವಿಷಯ ವಾಗಿರಲಿಲ್ಲ. ಲಿಂಗಾಯತರ ಕೋರ್ ಬೆಲ್ಟ್ ಆಗಿರುವ ಕಲ್ಯಾಣ ಕರ್ನಾಟಕದಲ್ಲಿ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿ ಶೂನ್ಯ ಸಾಧನೆ ಮಾಡಿತ್ತು. ಈ ಮೂಲಕ ‘ಲಿಂಗಾಯತ’ ಟ್ರಂಪ್ ಕಾರ್ಡ್ ವರ್ಕ್ ಆಗಲಿಲ್ಲ. ಆದರೆ ಜೆಡಿಎಸ್‌ನ ‘ಒಕ್ಕಲಿಗ’ ನಾಯಕತ್ವದ ಅಸ ಭರ್ಜರಿಯಾಗಿಯೇ ವರ್ಕ್ ಆಗಿದೆ.
ಒಕ್ಕಲಿಗ ಅಸ್ತ್ರ ಪೂರ್ಣ ಪ್ರಮಾಣದಲ್ಲಿ ಬಿಜೆಪಿಗೆ ಸಹಾಯವಾಗಲು ಜೆಡಿಎಸ್ ನಾಯಕತ್ವವೇ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಈ ಮೂಲಕ ಬಿಜೆಪಿ ವರಿಷ್ಠರ ಲೆಕ್ಕಾಚಾರದಂತೆ, ಈ ಬಾರಿಯ ಚುನಾವಣೆಯಲ್ಲಿ ಒಕ್ಕಲಿಗ ಮತದಾರರು ತೆನೆಹೊತ್ತ ಮಹಿಳೆ ಅಥವಾ ಕಮಲದ ಗುರುತನ್ನು ಆಯ್ಕೆ ಮಾಡಿ ಕೊಂಡಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಸಂಘಟನೆಯನ್ನು ಬಲಪಡಿಸಿಕೊಳ್ಳಲೇಬೇಕು ಎನ್ನುವ ಕಾರಣಕ್ಕೆ ಮಾಡಿಕೊಂಡಿದ್ದ ಮೈತ್ರಿ ಒಂದು ಹಂತದಲ್ಲಿ
ಯಶಸ್ವಿಯಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುದೊಡ್ಡ ಖುಷಿ ನೀಡಿರಬಹುದಾದ ವಿಭಾಗವೆಂದರೆ ಅದು ಹಳೇ ಮೈಸೂರು ಪ್ರದೇಶ. ದಶಕಗಳ ಹಿಂದಿನ ಸಂಘಟನೆಯನ್ನು ಗಮನಿಸಿದರೆ, ಹಳೇ ಮೈಸೂರು ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯ ಸಂಘಟನೆ
ಗಟ್ಟಿಯಾಗಿದೆ. ಆದರೆ ಅದು ‘ಕ್ಷೇತ್ರ’ಗಳಾಗಿ ಪರಿವರ್ತನೆಯಾಗುತ್ತಿರಲಿಲ್ಲ.
ಮೈಸೂರು, ಬೆಂಗಳೂರು ನಗರ ಭಾಗವನ್ನು ಹೊರತುಪಡಿಸಿದರೆ, ಇನ್ನುಳಿದ ಭಾಗದಲ್ಲಿ ‘ಭದ್ರಕೋಟೆ’ಗಳನ್ನು ಬೇಧಿಸುವಲ್ಲಿ ಬಹುತೇಕ ಚುನಾವಣೆ ಯಲ್ಲಿ ಬಿಜೆಪಿ ವಿಫಲವಾಗಿತ್ತು. ಆದರೆ ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಎನ್‌ಡಿಎ ಮೈತ್ರಿಕೂಟ ಕ್ಲೀನ್‌ಸ್ವೀಪ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಅದರಲ್ಲಿಯೂ ಪ್ರಮುಖವಾಗಿ ಡಿಕೆ ಸಹೋದರರ ಭದ್ರಕೋಟೆ ಎನಿಸಿದ್ದ ಬೆಂಗಳೂರು ಗ್ರಾಮಾಂತರದಲ್ಲಿಯೇ ಡಿ.ಕೆ.ಸುರೇಶ್‌ಗೆ ಸೋಲಿನ ರುಚಿ
ತೋರಿಸುವ ಮೂಲಕ ಕಾಂಗ್ರೆಸ್‌ಗೆ ಬಹುದೊಡ್ಡ ಹೊಡೆತವನ್ನು ನೀಡುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.
ಇದರೊಂದಿಗೆ ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾ ಪುರ, ಹಾವೇರಿ ಸೇರಿದಂತೆ ಹಲವು ಭಾಗದಲ್ಲಿ ಕಾಂಗ್ರೆಸ್ -ಬಿಜೆಪಿಗೆ ನೆಕ್‌ಟು ನೆಕ್ -ಟ್ ಇತ್ತು. ಈ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗೆ ಗೆಲುವಿನ ಸಿಹಿ ಉಣಿಸಲು ಜೆಡಿಎಸ್ ಮತಗಳೇ ನಿರ್ಣಾಯಕ ಪಾತ್ರವಹಿಸಿವೆ. ಸಾಂಪ್ರದಾಯಿಕ ಜೆಡಿಎಸ್ ಮತದಾರರು, ಬಿಜೆಪಿಯನ್ನು ಒಪ್ಪಿಕೊಂಡು ಮತ ಹಾಕಿದ್ದರಿಂದಲೇ ರಾಜ್ಯದಲ್ಲಿ ೧೭ ಸೀಟುಗಳನ್ನು ಪಡೆಯುವ ಮೂಲಕ ‘ಮರ್ಯಾದೆ’ ಉಳಿಸಿ ಕೊಂಡಿದೆ. ಇನ್ನು ಜೆಡಿಎಸ್ ಸ್ಪರ್ಧಿಸಿದ್ದ ಮೂರು ಕ್ಷೇತ್ರದ ಪೈಕಿ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸೋಲಿಗೆ ಅವರೇ ಕಾರಣ.
ಇನ್ನುಳಿದ ಎರಡೂ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಎನ್‌ಡಿಎ ಮೈತ್ರಿಕೂಟದ ಬಲವನ್ನು ೧೯ಕ್ಕೆ ಏರಿಸಿಕೊಳ್ಳುವುದರಲ್ಲಿ ಜೆಡಿಎಸ್ ಮಾತ್ರ ಮಹತ್ವ ದಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧಿಸಿರುವ ಗೆಲುವನ್ನು ಗಮನಿಸಿದರೆ, ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಬಹುದೊಡ್ಡ ಹಿನ್ನಡೆಯಾಗಲಿದೆ ಎನ್ನುವ ಲೆಕ್ಕಾಚಾರ ರಾಜಕೀಯ ವಲಯದಲ್ಲಿತ್ತು. ಈ ರೀತಿಯ ಆಲೋಚನೆಗೆ ಕಾರಣವೆಂದರೆ, ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಚುನಾವಣೆಗೆ ಧುಮುಕಿದ್ದವು. ೨೮ ಕ್ಷೇತ್ರಗಳ ಪೈಕಿ ಎಂಟನ್ನು ಜೆಡಿಎಸ್ ಪಡೆದುಕೊಂಡಿದ್ದರೆ, ೨೦ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸಿತ್ತು.
ಫಲಿತಾಂಶದ ಸಮಯ ದಲ್ಲಿ ಜೆಡಿಎಸ್‌ನಿಂದ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್‌ನಿಂದ ಡಿ.ಕೆ.ಸುರೇಶ್ ಹೊರತುಪಡಿಸಿ, ಇನ್ನುಳಿದ ೨೬ ಅಭ್ಯರ್ಥಿಗಳು ಹೀನಾಯವಾಗಿ ಸೋಲನುಭವಿಸಿದ್ದರು. ೨೦೧೯ರಲ್ಲಿ ಮೈತ್ರಿ ಸರಕಾರವೇ ಅಽಕಾರದಲ್ಲಿದ್ದರೂ, ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸೋಲಿಗೆ ಕಾರಣವಾಗಿದ್ದು, ಮೇಲ್ಮಟ್ಟದ ಲ್ಲಾದ ಮೈತ್ರಿ ತಳಮಟ್ಟದವರೆಗೆ ಹೋಗಲೇ ಇಲ್ಲ ಎನ್ನುವುದಾಗಿತ್ತು. ರಾಜ್ಯ, ರಾಷ್ಟ್ರ ಮಟ್ಟದ ಕಾಂಗ್ರೆಸ್ -ಜೆಡಿಎಸ್ ನಾಯಕರು ಒಂದಾಗಿ ದ್ದರೂ, ಬ್ಲಾಕ್‌ಮಟ್ಟದಲ್ಲಿ ಕಾರ್ಯಕರ್ತರ ನಡುವೆಯಿದ್ದ ಭಿನ್ನಾಭಿಪ್ರಾಯ, ಜಗಳಗಳನ್ನು ಸರಿಪಡಿಸುವುದಕ್ಕೆ ಕೊನೆಯವರೆಗೆ ಆಗಲಿಲ್ಲ.
ಆದ್ದರಿಂದಲೇ ಮೈತ್ರಿ ವಿರೋಧಿಸಿದ್ದ ಬಹುತೇಕರು ತಟಸ್ಥರಾದರು. ಇನ್ನು ಕೆಲವರು ಬಿಜೆಪಿ ಪರ ವಾಲಿದ್ದರು. ಇದರಿಂದಾಗಿಯೇ, ಸ್ವತಃ ಮಾಜಿ ಪ್ರಧಾನಿ ದೇವೇಗೌಡರು ತುಮಕೂರಿನಲ್ಲಿ ಸೋಲಿನ ರುಚಿ ಕಾಣಬೇಕಾಯಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ -ಕಾಂಗ್ರೆಸ್ ಕಾರ್ಯಕರ್ತರ ನಡುವೆ ‘ಜೆಲ್’ ಆಗದಿರುವುದೇ ಅಂದಿನ ಆ ಫಲಿತಾಂಶಕ್ಕೆ ಕಾರಣವಾಗಿತ್ತು. ಆದರೆ ಈ ಬಾರಿ ಜೆಡಿಎಸ್ ಈ ವಿಷಯದಲ್ಲಿ ‘ಎಚ್ಚರಿಕೆ’ಯ ಹೆಜ್ಜೆಯನ್ನು ಇಡುವ ಪ್ರಯತ್ನ ಮಾಡಿತ್ತು. ಆರಂಭದಿಂದಲೇ ಎರಡೂ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಉಭಯ ಪಕ್ಷದ ನಾಯಕರು ಮುಂದಾದರು.
ಚುನಾವಣೆಗೆ ಕೆಲ ವಾರದ ಮೊದಲು ಬಿಜೆಪಿ ತೀರ್ಮಾನಗಳ ವಿರುದ್ಧ ಬಿಜೆಪಿಗೆ ಶುರುವಾಗಿದ್ದ ಭಿನ್ನಾಭಿಪ್ರಾಯವನ್ನು, ಬಿಜೆಪಿ ವರಿಷ್ಠರು ಕುಮಾರಸ್ವಾಮಿ, ದೇವೇಗೌಡರೊಂದಿಗೆ ಚರ್ಚಿಸಿ ಸರಿಪಡಿಸಿಕೊಳ್ಳುವ ಕೆಲಸವನ್ನು ಮಾಡಿದ್ದರು. ಈ ಕಾರಣದಿಂದಲೇ, ಬೆಂಗಳೂರು ಗ್ರಾಮಾಂತರ ದಂತದ ಕಠಿಣ ಕ್ಷೇತ್ರದಲ್ಲಿಯೂ ಎನ್‌ಡಿಎ ಅಭ್ಯರ್ಥಿ ಸುಲಭವಾಗಿ ಗೆದ್ದುಕೊಂಡು ಬರುವುದಕ್ಕೆ ಸಾಧ್ಯವಾಯಿತು. ಆರಂಭದಿಂದಲೂ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ಹೊಂದಾಣಿಕೆ ಸಾಧ್ಯವೇ ಎನ್ನುವ ಪ್ರಶ್ನೆಗಳು ಎದುರಾಗಿತ್ತು. ಭಿನ್ನ ಸೈದ್ಧಾಂತಿಕ ನೆಲಗಟ್ಟಿನಲ್ಲಿರುವ ಎರಡೂ ಪಕ್ಷದ ಕಾರ್ಯಕರ್ತರು ಒಗ್ಗೂಡಲು ಸಾಧ್ಯವೇ ಎನ್ನುವ ಅನುಮಾನ ಸ್ವತಃ ನಾಯಕರಲ್ಲಿಯೇ ಇತ್ತು.
ಆದರೆ ಇಂದಿನ ‘ಅಧಿಕಾರ’ದ ರಾಜಕೀಯಕ್ಕೆ ಈ ಎಲ್ಲವನ್ನು ನಿಭಾಯಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾದರು. ಲೋಕಸಭಾ ಚುನಾವಣಾ ಫಲಿತಾಂಶ ಬಿಜೆಪಿ-ಜೆಡಿಎಸ್ ನಾಯಕರಿಗೆ ಖುಷಿ ಕೊಡಲು ಮತ್ತೊಂದು ಕಾರಣವಿದೆ. ಅದೇನೆಂದರೆ, ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ಬರೋಬ್ಬರಿ ೧೪೨ ಕ್ಷೇತ್ರಗಳಲ್ಲಿ ಲೀಡ್ ದಕ್ಕಿದೆ. ಅಂದರೆ, ಈಗ ಚುನಾವಣೆ ನಡೆದರೂ, ಈ ೧೪೨ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ‘ಲಾಭ’ವಿರುತ್ತದೆ. ಲೀಡ್ ಸಿಕ್ಕಿರುವುದಕ್ಕೆ ಮಾತ್ರವಲ್ಲದೇ, ಯಾವೆಲ್ಲ ಕ್ಷೇತ್ರಗಳಲ್ಲಿ ಲೀಡ್ ಸಿಕ್ಕಿದೆ ಎನ್ನುವುದು ಪ್ರಮುಖವಾಗುತ್ತದೆ.
ತುಮಕೂರು, ಮಂಡ್ಯ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ೪೦ಕ್ಕೆ ೪೦ ಕ್ಷೇತ್ರದಲ್ಲಿಯೂ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಮುನ್ನಡೆ ದೊರೆಕಿದೆ. ಇದೇ ರೀತಿಯಲ್ಲಿ ಮೈತ್ರಿ ಧರ್ಮ ಮುಂದುವರೆಸಿಕೊಂಡು ಹೋದರೆ ಮುಂದಿನ
ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ಪೆಟ್ಟುಕೊಡಬಹುದು ಎನ್ನುವುದು ಮೈತ್ರಿ ನಾಯಕರ ಲೆಕ್ಕಾಚಾರವಾಗಿದೆ.
ಮುಂದಿನ ಆರು ತಿಂಗಳಲ್ಲಿ ಕರ್ನಾಟಕದಲ್ಲಿ ಎದುರಾಗಬಹುದಾದ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮೊದಲು ಉಭಯ ಪಕ್ಷಗಳ ಕಾರ್ಯಕರ್ತರು ಒಂದಾಗಿರುವುದು ಎನ್‌ಡಿಎಗೆ ಲಾಭವಾಗಲಿದೆ. ಕರ್ನಾಟಕದಲ್ಲಿ ೬೦೨೨ ಗ್ರಾಮ ಪಂಚಾಯಿತಿ, ೧೭೬ ತಾಲೂಕು ಪಂಚಾಯಿತಿ, ೩೦ ಜಿಲ್ಲಾ ಪಂಚಾಯಿತಿ, ೯೭ ಪಟ್ಟಣ ಪಂಚಾಯಿತಿ ಹಾಗೂ ೧೧ ಮಹಾನಗರ ಪಾಲಿಕೆಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಇದೀಗ ರಾಜಧಾನಿ ಬೆಂಗಳೂರಿನ ಬಿಬಿಎಂಪಿಗೆ ಚುನಾವಣೆಯಾಗಬೇಕಿದೆ. ಇದರೊಂದಿಗೆ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆಯಬೇಕಾಗಿದೆ. ಲೋಕಸಭಾ ಚುನಾವಣೆಯಲ್ಲಿ ಲೀಡ್ ಸಿಕ್ಕಿರುವ ಪ್ರಮಾಣವನ್ನು ನೋಡಿದರೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿಯೂ ಬಿಜೆಪಿ-ಜೆಡಿಎಸ್‌ಗೆ ಲಾಭವಾಗಲಿದೆ ಎನ್ನುವ ಲೆಕ್ಕಾಚಾರಗಳಿವೆ.
ಲೋಕಸಭಾ ಚುನಾವಣೆ ಹೋಲಿಸಿದರೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ‘ಅಜೆಂಡಾ’ ವಿಭಿನ್ನವಾಗಿದ್ದರೂ, ರಾಜಕೀಯ ಶಕ್ತಿ ಒಂದೇ ಆಗಿರುತ್ತದೆ. ಆದ್ದರಿಂದ ಈ ಮೈತ್ರಿ ಶಕ್ತಿಯನ್ನು ಬಳಸಿಕೊಂಡು ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಹಿಡಿಯುವ ಲೆಕ್ಕಾಚಾರದಲ್ಲಿ ಮೈತ್ರಿ ನಾಯಕರಿದ್ದಾರೆ. ರಾಜ್ಯ ಬಿಜೆಪಿಯಲ್ಲಿರುವ ನೂರಾರು ಹುಳುಕುಗಳ ಹೊರತಾಗಿಯೂ ಉತ್ತಮ ಸಂಖ್ಯೆಯಲ್ಲಿ ಸೀಟು ಪಡೆಯಲು ಕುಮಾರಸ್ವಾಮಿ ಆಂಡ್ ಟೀಂ ಕಾರಣವಾಗಿದ್ದ ರಿಂದಲೇ, ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಸಂಪುಟ ಸ್ಥಾನಮಾನದೊಂದಿಗೆ ಆಯಕಟ್ಟಿನ ಖಾತೆಗಳನ್ನು ನೀಡಲಾಗಿದೆ. ಭಾರಿ ಕೈಗಾರಿಕೆ, ಉಕ್ಕು ಖಾತೆ ನೀಡುವ ಮೂಲಕ, ಕುಮಾರಸ್ವಾಮಿ ಹಾಗೂ ದೇವೇಗೌಡರನ್ನು ಸಂತೃಪ್ತಿಪಡಿಸುವ ಕೆಲಸವನ್ನು ಮಾಡುವ ಮೂಲಕ, ಕರ್ನಾಟಕದಲ್ಲಿ ದೀರ್ಘಕಾಲದ ಮೈತ್ರಿಯ ಮುನ್ಸೂಚನೆಯನ್ನು ಕೇಂದ್ರದ ಬಿಜೆಪಿ ನಾಯಕ ನೀಡಿದ್ದಾರೆ.
ಬಿಜೆಪಿಯ ಕೇಂದ್ರ ನಾಯಕರು ಕರ್ನಾಟಕದಲ್ಲಿ ಯಡಿಯೂರಪ್ಪ ಕುಟುಂಬದ ಹೊರತಾದ ಗಟ್ಟಿ ನಾಯಕತ್ವದ ಹುಡುಕಾಟದಲ್ಲಿದ್ದರು. ಕಳೆದ ವಿಧಾನಸಭಾ ಚುನಾವಣೆಗೂ ಮೊದಲೇ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿ ಲಿಂಗಾಯತ ಅಸ್ತ್ರದ ಪರೀಕ್ಷೆ ಮಾಡಿದ್ದರು.
ಬಳಿಕ ಅಶೋಕ್ ಅವರನ್ನು ಪ್ರತಿಪಕ್ಷ ನಾಯಕನನ್ನಾಗಿ ಮಾಡಿ ಒಕ್ಕಲಿಗರ ಸೆಳೆಯುವ ಪ್ರಯತ್ನ ಮಾಡಿತ್ತು. ಆದರೆ ಇದ್ಯಾವುದು ವರ್ಕ್‌ಔಟ್ ಆಗದಿರು ವುದು ಖಚಿತವಾಗುತ್ತಿದ್ದಂತೆ, ಕುಮಾರಸ್ವಾಮಿ ಅವರನ್ನೇ ಸೆಳೆದು, ಪರ್ಯಾಯ ನಾಯಕತ್ವ ಬೆಳೆಸುವ ಲೆಕ್ಕಾಚಾರದಲ್ಲಿದೆ. ಇಂದಲ್ಲದಿದ್ದರೂ
ಮುಂದೊಂದು ದಿನ ಪಕ್ಷದೊಂದಿಗೆ ವಿಲೀನವಾದರೂ ಅಥವಾ ಮೈತ್ರಿಕೂಟದ ನೆಪದಲ್ಲಾದರೂ ರೆಡಿಮೆಡ್ ನಾಯಕನನ್ನು ಬಿಜೆಪಿ ಕರ್ನಾಟಕದಲ್ಲಿ ಸ್ಥಾಪಿಸಿದೆ. ಒಳಜಗಳಗಳಿಂದ ತಳಮಟ್ಟದಲ್ಲಿ ನಲುಗಿ ಹೋಗಿರುವ ಬಿಜೆಪಿಗೆ ಇದೀಗ ಜೆಡಿಎಸ್ ಬಲ ತುಂಬುವ ಕೆಲಸವನ್ನು ಮಾಡಿದೆ.
ಸದ್ಯದ ಮಟ್ಟಿಗೆ ಎನ್‌ಡಿಎ ಅಂಗಪಕ್ಷವಾಗಿರುವ ಜೆಡಿಎಸ್ ನಾಯಕರು, ಅದರಲ್ಲಿಯೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಬಿಜೆಪಿಯ ನೀತಿ-ನಿರೂಪಣೆಯನ್ನು ಸಮರ್ಥಿಸಿಕೊಳ್ಳುವುದರಲ್ಲಿ, ಕಾಂಗ್ರೆಸ್ ನಾಯಕರ ವಿರುದ್ಧ ಮುಗಿಬೀಳುವ, ದಾಖಲೆಗಳನ್ನು ಸಂಗ್ರಹಿಸುವ ವಿಷಯದಲ್ಲಿ ರಾಜ್ಯ ಬಿಜೆಪಿ ನಾಯಕರಿಗಿಂತ ಹಲವು ಪಟ್ಟು ಮುಂದಿದ್ದಾರೆ. ದೀರ್ಘಕಾಲಿಕ ಮೈತ್ರಿಯ ಲೆಕ್ಕಾಚಾರದಲ್ಲಿ ಜೆಡಿಎಸ್ ನಾಯಕರಿದ್ದರೂ, ಬಿಜೆಪಿ ರಾಷ್ಟ್ರೀಯ ನಾಯಕರು ಮಾತ್ರ ಭವಿಷ್ಯದಲ್ಲಿ ಬಿಜೆಪಿಯೊಂ ದಿಗೆ ಜೆಡಿಎಸ್ ಅನ್ನು ವಿಲೀನ ಮಾಡಿಕೊಂಡು ಕರ್ನಾಟಕದಲ್ಲಿ ಮತ್ತಷ್ಟು ಶಕ್ತಿಶಾಲಿ ಯಾಗಬೇಕು ಎನ್ನುವ ಲೆಕ್ಕಾಚಾರದಲ್ಲಿದೆ. ಮಾಜಿ ಪ್ರಧಾನಿ ದೇವೇಗೌಡರು ಇರುವ ತನಕ ಈ ವಿಲೀನ ಪ್ರಕ್ರಿಯೆ ಸಾಧ್ಯವಿಲ್ಲ. ಆದರೆ ಅವರ ನಂತರ ಏನಾಗಲಿದೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.