ಬೆಂಗಳೂರು: ವಿಪಕ್ಷ ನಾಯಕರು ಡಿ.ಕೆ.ಶಿವಕುಮಾರ್ ಸ್ಪರ್ಧೆ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ರಾಜಕೀಯ ಅಂತ್ಯವಾಗಲಿದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿರುವ ಡಿಸಿಎಂ, ನನ್ನ ರಾಜಕೀಯ ಅಂತ್ಯ ತೀರ್ಮಾನ ಮಾಡೋರು ಜನರು. ಬೇರೆ ಯಾರೂ ಅಲ್ಲ ಎಂದು ಹೇಳಿದ್ದಾರೆ.
ಚನ್ನಪಟ್ಟಣದಿಂದ ಸ್ಪರ್ಧೆ ಮಾಡಿದರೆ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯ ಅಂತ್ಯವಾಗಲಿದೆ ಎಂಬ ಸಿ.ಪಿ.ಯೋಗೇಶ್ವರ್ ಮಾತಿಗೆ, ನನ್ನ ರಾಜಕೀಯ ಭವಿಷ್ಯ ತೀರ್ಮಾನ ಮಾಡುವವರು ಜನರು. ಯೋಗೇಶ್ವರ್ ದೊಡ್ಡವರು. ಅವರ ಮಾತಿಗೆ ಪ್ರತಿಕ್ರಿಯೆ ನೀಡುವಷ್ಟು ಸಮಯ ನನ್ನ ಬಳಿ ಇಲ್ಲ ಎಂದರು.
ನಾನೂ ರಾಮನಗರ ಜಿಲ್ಲೆಯವನು. ನಿಮ್ಮ ಋಣ ತೀರಿಸಲು ಬದ್ಧನಿದ್ದೇನೆ, ಶಕ್ತಿ ಕೊಡಿ ಎಂದು ಆ ಕ್ಷೇತ್ರದ ಜನರ ಬಳಿ ಕೇಳಿಕೊಂಡಿದ್ದೇನೆ. ನನ್ನ ಮೇಲೆ ವಿಶ್ವಾಸವಿದ್ದರೆ ಬೆಂಬಲ ನೀಡುತ್ತಾರೆ ಎಂದು ತಿಳಿಸಿದರು.
ಸ್ವಪ್ರತಿಷ್ಠೆಗಾಗಿ ದೇಶದ ಸಂಪತ್ತು ಹಾಳು ಮಾಡುತ್ತಿದ್ದಾರೆ ಎಂಬ ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಚನ್ನಪಟ್ಟಣದಲ್ಲಿ ಉಪಚುನಾವಣೆ ನಡೆದರೆ ಕನಕಪುರದಲ್ಲಿ ಯಾಕೆ ಉಪಚುನಾವಣೆ ನಡೆಯುತ್ತದೆ. ನಾನು ಕನಕಪುರದ ಶಾಸಕ. ಪಕ್ಷದ ಅಧ್ಯಕ್ಷನಾಗಿ ನನ್ನ ಮೇಲೆ ಜವಾಬ್ದಾರಿ ಇದೆ. ಇದೂ ನನ್ನದೇ ಕ್ಷೇತ್ರ, ನನ್ನದೇ ನಾಯಕತ್ವ. ಸಿದ್ದರಾಮಯ್ಯ ಹಾಗೂ ನಾನು ಸೇರಿ ಚುನಾವಣೆ ನಡೆಸುತ್ತೇವೆ ಎಂದರು.