ನ್ಯೂಯಾರ್ಕ್: ಅಮೆರಿಕದ ಕಾಲೇಜುಗಳಲ್ಲಿ ಪದವಿ ಪಡೆಯುವ ವಿದೇಶಿ ವಿದ್ಯಾರ್ಥಿಗಳಿಗೆ ಶುಭ ಸುದ್ದಿಯೊಂದನ್ನು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಂಚೂಣಿಯಲ್ಲಿರುವ ಟ್ರಂಪ್ ಅಮೆರಿಕದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ನೇರವಾಗಿ ಗ್ರೀನ್ ಕಾರ್ಡ್ ನೀಡುವ ಘೋಷಣೆಯನ್ನು ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ ವಾಗಲಿದೆ ಎಂದು ಹೇಳಲಾಗಿದೆ. ಆದರೆ ನವೆಂಬರ್ ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದರೆ ಮಾತ್ರ ಈ ವ್ಯವಸ್ಥೆ ಸಿಗಲಿದೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಉದ್ಯೋಗ ವಿಚಾರದಲ್ಲಿ ದೇಶದಲ್ಲಿರುವ ನಿರುದ್ಯೋಗಿಗಳಿಗೆ ಮೊದಲ ಪ್ರಾಶಸ್ತ್ಯ ನೀಡುತಿದ್ದರು. ಆದರೆ ಈ ಬಾರಿ ನೀಡಿರುವ ಹೇಳಿಕೆ ಸ್ವದೇಶೀಯರನ್ನು ಬಿಟ್ಟು ವಿದೇಶಿಗರರಿಗೆ ಹೆಚ್ಚಿನ ಮನ್ನಣೆ ನೀಡಿರುವುದು ನಿಜಕ್ಕೂ ವಿಶೇಷವಾಗಿದೆ.
ಡಿಪ್ಲೊಮಾ ಆದವರಿಗೆ ನೇರವಾಗಿ ಗ್ರೀನ್ ಕಾರ್ಡ್ ನೀಡಲು ಬಯಸುತ್ತೇನೆ, ಇದರಿಂದ ಅವರು ಕಾಲೇಜುಗಳಿಂದ ಪದವಿ ಪಡೆದ ನಂತರ ಈ ದೇಶದಲ್ಲಿ ಉಳಿಯಬಹುದು. ಎರಡು ವರ್ಷ ಅಥವಾ ನಾಲ್ಕು ವರ್ಷ ಇತ್ಯಾದಿ ಶಿಕ್ಷಣದ ಅವಧಿಗೂ ಇದಕ್ಕೂ ಸಂಬಂಧವಿಲ್ಲ. ಇದನ್ನು ಜೂನಿಯರ್ ಕಾಲೇಜು ಗಳಿಗೂ ಅನ್ವಯಿಸಬೇಕು ಎಂದು ನಾನು ಭಾವಿಸಿದ್ದೇನೆ” ಎಂದು ಟ್ರಂಪ್ ಹೇಳಿದರು.
ಭಾರತ, ಚೀನಾದಂತಹ ದೇಶಗಳಿಂದ ಇಲ್ಲಿಗೆ ಬರುವ ಅನೇಕರು ವೀಸಾ ಸಮಸ್ಯೆಯಿಂದ ಅಮೆರಿಕದಲ್ಲಿ ಇರಲು ಸಾಧ್ಯವಾಗುತ್ತಿಲ್ಲ, ಅವರೆಲ್ಲರೂ ತಮ್ಮ ದೇಶಗಳಿಗೆ ಹೋಗಿ ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತದೆ.
2023 ರಲ್ಲಿ 1,40,000 ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದ್ದಾರೆ.