ಪಾಟ್ನಾ: ಅರಾರಿಯಾದಲ್ಲಿ ಬಕ್ರಾ ನದಿ ಮೇಲೆ ನಿರ್ಮಾಣ ಹಂತದ ಸೇತುವೆ ಇತ್ತೀಚೆಗೆ ಕುಸಿತವಾದ ಬೆನ್ನಲ್ಲೇ ಶನಿವಾರ ಸಿವಾನ್ ಜಿಲ್ಲೆಯ ಗಂಡಕ್ ಕಾಲುವೆಯ ಮೇಲಿನ ಮತ್ತೊಂದು ಸೇತುವೆ ಕುಸಿದಿದೆ.
ಈ ಕುಸಿತವು ಸುತ್ತಮುತ್ತಲಿನ ಪ್ರದೇಶದಲ್ಲಿ ಭೀತಿ ಉಂಟುಮಾಡಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ದಾರೋಂಡಾ ಬ್ಲಾಕ್‌ನ ರಾಮಗಢ ಪಂಚಾಯತ್ ವ್ಯಾಪ್ತಿಯಲ್ಲಿ ಈ ಸೇತುವೆ ಕುಸಿದಿದೆ. ಸೇತುವೆ ಹಳೆಯದಾಗಿದ್ದು, ಇತ್ತೀಚೆಗೆ ಕಾಲುವೆ ನಿರ್ಮಾಣದ ವೇಳೆ ನಿರ್ಲಕ್ಷ್ಯ ವಹಿಸಿದ್ದರಿಂದ ಕುಸಿದು ಬಿದ್ದಿದೆ ಎಂದು ವರದಿಗಳು ತಿಳಿಸಿವೆ. ಬಲವಾದ ನೀರಿನ ಹರಿವು ಸೇತುವೆಯ ಪಿಲ್ಲರ್‌ಗಳನ್ನು ದುರ್ಬಲ ಗೊಳಿಸಿದ್ದು, ಇದು ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.
ಸ್ಥಳೀಯ ನಿವಾಸಿಗಳು ಸೇತುವೆ ಬೀಳುವ ಮೊದಲು ದೊಡ್ಡ ಶಬ್ದವನ್ನು ಕೇಳಿದ್ದಾರೆ. ಇದರಿಂದಾಗಿ ಅವರು ತಮ್ಮ ಮನೆಗಳಿಂದ ಹೊರ ಓಡಿ ಬಂದಿದ್ದರು. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಈ ಸೇತುವೆಯ ಕುಸಿತದಿಂದಾಗಿ ಮಹಾರಾಜಗಂಜ್ ಬ್ಲಾಕ್‌ನ ಪಥೇಡಿ ಬಜಾರ್ ಮತ್ತು ದಾರೋಂಡಾ ಬ್ಲಾಕ್‌ನ ರಾಮಗಢ ಪಂಚಾಯತ್ ನಡುವಿನ ಸಂಪರ್ಕ ಕಡಿತಗೊಂಡಿದ್ದು, ಸಾವಿರಾರು ಜನರ ದೈನಂದಿನ ಸಂಚಾರಕ್ಕೆ ತೊಂದರೆಯಾಗಿದೆ.
ಕಳೆದ ವಾರ, ಅರಾರಿಯಾ ಜಿಲ್ಲೆಯ ಬಕ್ರಾ ನದಿಯ ಮೇಲಿನ ನೂತನ ಸೇತುವೆ ಕುಸಿದಿದು ಬಿದ್ದಿತ್ತು.