ಬೆಂಗಳೂರು: ‘ಕೋಟಿ’ ಸಿನಿಮಾದ ಯಶಸ್ಸಿನಲ್ಲಿರುವ ನಟ ಡಾಲಿ ಧನಂಜಯ ಸರಳತೆಯಿಂದಲೇ ಅಭಿಮಾನಿಗಳ ಮನಗೆದ್ದವರು. ತಮ್ಮ ಕೆಲಸಗಳು, ಮಾತುಗಳಿಂದ ಮತ್ತೆ ಮತ್ತೆ ಕನ್ನಡಿಗರ ಹೃದಯ ಗೆದ್ದ ನಟ ತಮ್ಮ ಕಾರು ಬಿಟ್ಟು ಮೆಟ್ರೋ ರೈಲಿನಲ್ಲಿ ಜಾಲಿ ಟ್ರಿಪ್ ಮಾಡಿದ್ದಾರೆ.
ಐಷಾರಾಮಿ ಕಾರುಗಳಲ್ಲಿ ಓಡಾಡುವ ನಟ ಧನಂಜಯ ಕಾರು ಬಿಟ್ಟು ಮೆಟ್ರೋದಲ್ಲಿ ಓಡಾಡ್ತಿದ್ದಾರೆ. ತಮ್ಮ ಗುರುತು ಸಿಗದಂತೆ ಮಾಸ್ಕ್, ಕನ್ನಡಕ ಮತ್ತು ಟೋಪಿ ಧರಿಸಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ನಿಂತಿರುವ ಮತ್ತು ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿವೆ. ಡಾಲಿ ಧನಂಜಯ ಜೊತೆಗೆ ಯದುನಂದನ್ ಎಂ ಕೂಡ ಇದ್ದಾರೆ.
ಚಂದನವನದಲ್ಲಿ ತಮ್ಮದೆ ಆದ ಕಡಿಮೆ ಬಜೆಟ್, ಕನ್ನಡಿಗರಿಗೆ ಹತ್ತಿರವಾಗುವ, ಕನ್ನಡತನ ಮೆರೆಯುವ ಸಿನಿಮಾಗಳ ಮೂಲಕ ಅಪ್ಪಟ ಕನ್ನಡದ ಹುಡುಗ ಎನ್ನುವಂತೆ ಧನಂಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಯಾವುದೇ ದೊಡಸ್ತಿಕೆ ಇಲ್ಲದೆ, ಸಾಮಾನ್ಯರಂತೆ ಮೆಟ್ರೋ ಹತ್ತಿರುವುದನ್ನು ನೋಡಿ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿಯೂ ಹಲವರಿಗೆ ಇವರ ಗುರುತು ಸಿಕ್ಕಿಲ್ಲ.
ನಟ ಡಾಲಿ ಧನಂಜಯರ್ ಅವರು ನೇರಳೆ ಮಾರ್ಗದ ಮೆಟ್ರೋ ಹತ್ತಿದ್ದಾರೆ. ಕೆಂಗೇರಿಯಿಂದ ಕುಂದಲಹಳ್ಳಿಯ ತನಕ ಮೆಟ್ರೊದಲ್ಲಿ ಪ್ರಯಾಣ ಮಾಡಿದ್ದಾರೆ ಎನ್ನಲಾಗುತ್ತಿದೆ. ಮೆಟ್ರೊ ರೈಲಿನಲ್ಲಿ ಕುಳಿತಿದ್ದ ವೇಳೆ ಬಾಕ್ಸ್ ಹಿಡಿದುಕೊಂಡಿದ್ದಾರೆ. ಮೆಟ್ರೋದಲ್ಲಿ ಫೋಟೋ ತೆಗೆದುಕೊಂಡಿರುವ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು, ಕೆಂಗೇರಿಯಿಂದ ಕುಂದಲಹಳ್ಳಿಯವರೆಗೆ ಪ್ರಯಾಣಿಸಿದ್ದಾರೆ ಎನ್ನಲಾಗಿದೆ.
ಧನಂಜಯ್ ಅಭಿನಯದ ಕೋಟಿ ಸಿನಿಮಾ ಜೂ.14ರಂದು ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.