Monday, 25th November 2024

ಭಾರತ ಹಿಂದೂ ರಾಷ್ಟ್ರವಲ್ಲ ಎಂಬುದನ್ನು ಚುನಾವಣಾ ಫಲಿತಾಂಶವು ಸೂಚಿಸುತ್ತದೆ: ಅಮರ್ತ್ಯ ಸೇನ್

ಕೋಲ್ಕತ್ತಾ: ಇತ್ತೀಚಿನ ಲೋಕಸಭಾ ಚುನಾವಣಾ ಫಲಿತಾಂಶವು ಭಾರತ ಹಿಂದೂ ರಾಷ್ಟ್ರವಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ನೋಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಪ್ರತಿಪಾದಿಸಿದರು.

ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರತಿ ಚುನಾವಣೆಯ ಅನಂತರ ನಾವು ಯಾವಾಗಲೂ ಬದಲಾವಣೆ ಕಾಣುತ್ತೇವೆ ಎಂದ ಅವರು, ಭಾರತವು ಹಿಂದೂ ರಾಷ್ಟ್ರ ಅಲ್ಲ ಎಂಬುದು ಚುನಾವಣಾ ಫಲಿತಾಂಶಗಳಲ್ಲಿ ಪ್ರತಿಫಲಿಸುತ್ತದೆ ಎಂದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಿಂದಿನ ಅವಧಿಯಲ್ಲಿ ಜನರನ್ನು ವಿಚಾರಣೆಯಿಲ್ಲದೆ ಕಂಬಿಗಳ ಹಿಂದೆ ಹಾಕುವುದು ಮತ್ತು ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಹೆಚ್ಚಿಸುವಂತಹ ಕೆಲವು ಘಟನೆಗಳು ಇನ್ನೂ ಮುಂದುವರೆದಿದೆ. ಅದನ್ನು ನಿಲ್ಲಿಸಿ ಎಂದು ಹೇಳಿದರು.

ಭಾರತವು ಜಾತ್ಯತೀತ ಸಂವಿಧಾನವನ್ನು ಹೊಂದಿರುವ ಜಾತ್ಯತೀತ ರಾಷ್ಟ್ರವಾಗಿರುವಾಗ ರಾಜಕೀಯವಾಗಿ ಮುಕ್ತ ಮನಸ್ಸಿನ ಅವಶ್ಯಕತೆಯಿದೆ. ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ಕಲ್ಪನೆಯು ಸೂಕ್ತವಲ್ಲ ಎಂದು ಭಾವಿಸುತ್ತೇನೆ ಎಂದು ತಿಳಿಸಿದ ಅವರು, ಹೊಸ ಕೇಂದ್ರ ಸಚಿವ ಸಂಪುಟವು ಹಿಂದಿನ ಸಂಪುಟದ ನಕಲು ಎಂದು ಅಭಿಪ್ರಾಯಪಟ್ಟರು.

ನಾನು ಚಿಕ್ಕವನಿದ್ದಾಗ ನನ್ನ ಅನೇಕ ಚಿಕ್ಕಪ್ಪಂದಿರು ಮತ್ತು ಸೋದರಸಂಬಂಧಿಗಳನ್ನು ವಿಚಾರಣೆಯಿಲ್ಲದೆ ಜೈಲಿಗೆ ಹಾಕಲಾಯಿತು. ಭಾರತವು ಇದರಿಂದ ಮುಕ್ತವಾಗುತ್ತದೆ ಎಂದು ನಾವು ಭಾವಿಸಿದ್ದೇವೆ. ಇದು ನಿಲ್ಲದಿದ್ದಕ್ಕೆ ಕಾಂಗ್ರೆಸ್ ಕೂಡ ಕಾರಣ. ಅವರು ಅದನ್ನು ಬದಲಾಯಿಸಲಿಲ್ಲ. ಆದರೆ, ಪ್ರಸ್ತುತ ಸರ್ಕಾರದ ಅಡಿಯಲ್ಲಿ ಇದು ಹೆಚ್ಚು ಆಚರಣೆಯಲ್ಲಿದೆ ಎಂದು ಹೇಳಿದರು.

ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದೇಶದಲ್ಲಿ ಈ ರೀತಿ ನಡೆಯಬಾರದಿತ್ತು. ಭಾರತವನ್ನು ಹಿಂದೂ ರಾಷ್ಟ್ರ’ ಎಂದು ಬಿಂಬಿಸಲು ತುಂಬಾ ಹಣ ಖರ್ಚು ಮಾಡಿ ರಾಮ ಮಂದಿರವನ್ನು ನಿರ್ಮಿಸಲಾಗುತ್ತಿದೆ. ಇದು ಭಾರತದ ನಿಜವಾದ ಗುರುತನ್ನು ನಿರ್ಲಕ್ಷಿಸುವ ಪ್ರಯತ್ನವನ್ನು ತೋರಿಸುತ್ತದೆ ಮತ್ತು ಇದು ಬದಲಾಗಬೇಕು ಅವರು ಹೇಳಿದರು.