ಪ್ರಸ್ತುತ
ಮಣಿಕಂಠ ಪಾ.ಹಿರೇಮಠ
ಸರಕಾರ ಮತ್ತು ಪ್ರತಿಪಕ್ಷದ ಸಹಯೋಗದಲ್ಲಿ ಸೌಹಾರ್ದತೆಯಿಂದ ನಡೆಯಬೇಕಾದ ೧೮ ನೇ ಲೋಕಸಭೆಯ ಚೊಚ್ಚಲ ಅಧಿವೇಶನದ ಮೊದಲೆರಡು ದಿನಗಳು ಆಡಳಿತ ಮತ್ತು ವಿರೋಧ ಪಕ್ಷಗಳ ಗದ್ದಲಕ್ಕೆ ಬಲಿಯಾದದ್ದು ಖಂಡನೀಯ.
ಚುನಾವಣೆ ಫಲಿತಾಂಶ ಬಂದ ನಂತರ ಮೊದಲ ಅಧಿವೇಶನದ ಕಾರ್ಯಕಲಾಪಗಳೆಲ್ಲವು ಹಂಗಾಮಿ ಸ್ಪೀಕರ್ ಅವರ ನೇತೃತ್ವದಲ್ಲಿಯೇ ನಡೆಯ ಬೇಕು, ಯಾವುದೇ ನಿರ್ದಿಷ್ಟ ಸಾಂವಿಧಾನಿಕ ಅಥವಾ ಶಾಸನಬದ್ಧ ನಿಬಂಧನೆಗಳಿಲ್ಲದಿದ್ದರೂ, ಸಾಂವಿಧಾನಿಕ ಸಂಪ್ರ ದಾಯದ ಮೂಲಕ ಸದನದ ಹಿರಿಯ ಸದಸ್ಯರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಬೇಕು. ಅದರಂತೆ ಕೇರಳದ ಮಾವೇಲಿಕರ ಕ್ಷೇತ್ರದ ಸಂಸದ ಕೆ ಸುರೇಶ ಅವರನ್ನು ರಾಷ್ಟ್ರಪತಿಗಳು ನೇಮಿಸಬೇಕಿತ್ತು ಆದರೆ ಅವರು ಸತತವಾಗಿ ಆಯ್ಕೆಯಾಗಿಲ್ಲ ಎಂಬ ಕಾರಣ ನೀಡಿ ಅವರ ಬದಲು ಬಿಹಾರದ ಭ್ರತೃಹರಿ ಮೆಹತಾಬ್ ಅವರಿಗೆ ಆ ಜವಾಬ್ದಾರಿ ನೀಡಿರುವುದು ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದೇ ವೇಳೆ ಕೆ.ಸುರೇಶ ದಲಿತ ವ್ಯಕ್ತಿಯಾಗಿರುವ ಕಾರಣಕ್ಕೆ ಆ ಸಮುದಾಯಕ್ಕೆ ಅವಕಾಶ ತಪ್ಪಿಸಲೆಂದು ಅವರನ್ನು ಆಯ್ಕೆಮಾಡಿಲ್ಲ ಎಂಬ ಕಾಂಗ್ರೆಸ್
ನಾಯಕರ ಹೇಳಿಕೆ ಶುದ್ಧ ಮೂರ್ಖತನದ್ದು. ಹತ್ತು ವರ್ಷಗಳ ನಂತರ ಅಧಿಕೃತ ವಿರೋಧ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದೆ ಅಷ್ಟೆ ಅಲ್ಲದೆ ಪ್ರತಿಪಕ್ಷಗಳ ಬಲವೂ ಹೆಚ್ಚಾಗಿದೆ. ಹಾಗೆಂದ ಮಾತ್ರಕ್ಕೆ ಸರಕಾರವನ್ನು ಪ್ರತಿದಿನ ಟೀಕಿಸುವುದೇ ಖಯಾಲಿ ಆಗಬಾರದು, ಸರಕಾರ ಎಡವಿದಾಗ ಅದರ ಕಿವಿ ಹಿಂಡುವ ಕೆಲಸ ವನ್ನು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾಂಗ್ರೆಸ್ ಮಾಡಬೇಕಿದೆ.
ಸ್ವಂತ ಬಲದ ಮೇಲೆ ಸರಕಾರವಿಲ್ಲ ಎಂಬುದನ್ನು ಅರಿತು ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯನಿರ್ವಹಿಸಬೇಕು, ಮೊದಲ ದಿನ ತಾವೇ ಹೇಳಿದಂತೆ ಸದನದಲ್ಲಿ ಚರ್ಚೆಗಳು ನಡೆಯಬೇಕು ಕೇವಲ ಸಮಯ ವ್ಯರ್ಥವಾಗುವಂತಹ ಟೀಕೆ, ಚರ್ಚೆಗಳ ಬದಲು ಆರೋಗ್ಯಕರ ಚರ್ಚೆಗಳಾಗಬೇಕು.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ನಮ್ಮನ್ನಾಳುವವರು ನಮಗೇನಾದರು ತುಸು ಒಳ್ಳೆಯದು ಮಾಡುತ್ತಾರೆ ಎಂದು ನಂಬಿ ದೇಶದ ಮತದಾರರು ಆಯ್ಕೆಮಾಡಿದ್ದಾರೆ ಆ ನಂಬಿಕೆಯನ್ನು ಉಳಿಸಿಕೊಂಡು ಪ್ರಜಾತಂತ್ರದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಎಲ್ಲ ಪಕ್ಷದವರು ಮಾಡಬೇಕಿದೆ.
(ಲೇಖಕರು: ಹವ್ಯಾಸಿ ಬರಹಗಾರರು)