ಕ್ಯಾಶ್ಲೆಸ್ಗೆ ಮುಂದಾದ ನಿಗಮ
೧೦ ಸಾವಿರಕ್ಕೂ ಹೆಚ್ಚು ಯಂತ್ರಗಳ ಖರೀದಿಗೆ ಸಿದ್ಧತೆ
ಅಪರ್ಣಾ ಎ.ಎಸ್
ಬೆಂಗಳೂರು: ಟಿಕೆಟ್ ಖರೀದಿ ವೇಳೆ ಒಂದೆರೆಡು ರುಪಾಯಿ ಚಿಲ್ಲರೆಗಾಗಿಯೇ ಪ್ರಯಾಣಿಕ ಹಾಗೂ ಕಂಡಕ್ಟರ್ಗಳ ನಡುವೆ ಮಾರಾಮಾರಿ ನಡೆದಿರುವ
ಅದೆಷ್ಟೇ ಘಟನೆಗಳಿವೆ. ಇಂದಿನ ಆನ್ಲೈನ್ ಜಮಾನದಲ್ಲಿ ಕಾಸಿದೆ ಎಂದು ಬಸ್ ಹತ್ತಿ ಬಳಿಕ ಪರ್ಸ್ನಲ್ಲಿ ಹಣವಿಲ್ಲವೆಂದು ತಿಳಿದು ಸಂಕಷ್ಟಕ್ಕೆ ಸಿಲುಕಿದ
ಘಟನೆಗಳು ನಿತ್ಯ ವರದಿಯಾಗುತ್ತದೆ. ಈ ಎಲ್ಲ ಸಮಸ್ಯೆ ಗೆ ಪರಿಹಾರ ನೀಡುವ ಸಲುವಾಗಿ ಕೆಎಸ್ಆರ್ಟಿಸಿ ಇದೀಗ ಕ್ಯಾಶ್ಲೆಸ್ ಸಂಚಾರಕ್ಕೆ ಸಿದ್ಧತೆ ನಡೆಸಿಕೊಂಡಿದೆ.
ಊರಿಂದ ಊರಿಗೆ ಹೋಗುವಾಗ ಟಿಕೆಟ್ ಪಡೆಯಲು ಹತ್ತು ಹಲವು ಸಮಸ್ಯೆಗಳು ಎದುರಾ ಗುತ್ತಿತ್ತು. ಇಂದಿನ ಆನ್ಲೈನ್ ಜಮಾನದಲ್ಲಿ ಚಿಲ್ಲರೆಯ ಸಮಸ್ಯೆಯನ್ನು ಅನೇಕರು ಅನುಭ ವಿಸುತ್ತಿದ್ದರು. ಆದ್ದರಿಂದ ಈ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭಾಗವಾಗಿ ಇನ್ನು ಮುಂದೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಸೇರಿದಂತೆ ಯುಐಪಿ ಮೂಲಕ ಟಿಕೆಟ್ ಹಣ ಸ್ವೀಕರಿಸಲು ನಿಗಮ ಯೋಜನೆ ರೂಪಿಸಿದೆ.
ಇತ್ತೀಚಿನ ದಿನದಲ್ಲಿ ಆನ್ಲೈನ್ ವರ್ಗಾವಣೆ ಹೆಚ್ಚಾಗಿರುವುದರಿಂದ, ಕ್ಯಾಶ್ಲೆಸ್ಗೆ ಬಹುತೇಕರು ಒಗ್ಗಿಕೊಂಡಿರುತ್ತಾರೆ. ಇದನ್ನು ಗಮನಿಸಿರುವ ಕೆಎಸ್
ಆರ್ಟಿಸಿ ಇದೀಗ, ತಮ್ಮ ನಿಗಮದ ಬಸ್ಗಳಲ್ಲಿ ಆನ್ ಲೈನ್ ಹಣ ಪಾವತಿಸಿ ಟಿಕೆಟ್ ಪಡೆಯುವುದನ್ನು ಪರಿಚಯಿಸಲು ಮುಂದಾಗಿದೆ. ಈಗಾಗಲೇ
ಬಿಎಂಟಿಸಿಗಳಲ್ಲಿ ಡಿಜಿಟಲ್ ಪಾವತಿಯ ಮೂಲಕ ಟಿಕೆಟ್ ಖರೀದಿಗೆ ಅವಕಾಶ ನೀಡಲಾಗಿದೆ. ಇದೀಗ ಇದೇ ರೀತಿ ಕೆಎಸ್ಆರ್ಟಿಸಿಯಲ್ಲಿಯೂ ಡಿಜಿಟಲ್ ಪಾವತಿ ಪರಿಚಯಿಸಲು ಸಿದ್ಧತೆ ನಡೆಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಡಿಗೆ ಆಧಾರದಲ್ಲಿ ಯಂತ್ರಗಳ ಖರೀದಿ: ಎಲೆಕ್ಟ್ರಾನಿಕ್ ಟಿಕೆಟಿಂಗ್ಗೆ ಸರಿಹೊಂದುವ ಯಂತ್ರಗಳನ್ನು ಬಾಡಿಗೆ ಆಧಾರದಲ್ಲಿ ಖರೀದಿಸಲು ಎಸ್ಆರ್ಟಿಸಿ ಮುಂದಾಗಿದೆ. ಸಮಗ್ರ ಟಿಕೆಟಿಂಗ್ ತಂತ್ರಾಂಶದ ವಿನ್ಯಾಸ, ಅಭಿವೃದ್ಧಿ, ಅನುಷ್ಠಾನ, ವೆಬ್ ಹೋಸ್ಟಿಂಗ್, ಕಾರ್ಯಚರಣೆ ಮತ್ತು ನಿರ್ವಹಣೆಯ ಜತೆಗೆ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರ ಗಳ ಪೂರೈಕೆದಾರರನ್ನು ಆಯ್ಕೆ ಮಾಡಲು ಟೆಂಡರ್ ಕರೆಯಲಾಗಿತ್ತು. ಇದೀಗ ಈ ಟೆಂಡರ್ ಅನ್ನು ದೆಹಲಿ ಮೂಲದ ಮೇ ಎಬಿಕ್ಸ್ ಕ್ಯಾಶ್ ಸಂಸ್ಥೆ ಪಡೆದು ಕೊಂಡಿದೆ. ಈ ಸಂಸ್ಥೆ ಯಂತ್ರಗಳನ್ನು ಪೂರೈಸಲಿದ್ದು, ಆರಂಭಿಕ ಹಂತದಲ್ಲಿ ೧೦೨೪೫ ಟಿಕೆ ಟಿಂಗ್ ಯಂತ್ರ ಗಳನ್ನು ಬಳಸಿ ಕೊಳ್ಳ ಲಾಗುತ್ತಿದೆ. ಬಳಿಕ ಸಂಖ್ಯೆಗೆ ಅನುಗುಣವಾಗಿ ಯಂತ್ರ ಬಳಸಿಕೊಳ್ಳಲು ಮುಂದಾಗಿದೆ.
ಶೀಘ್ರದಲ್ಲಿಯೇ ಜಾರಿ
ಈಗಾಗಲೇ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ವ್ಯವಸ್ಥೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಯಂತ್ರಗಳನ್ನು ಶೀಘ್ರವೇ ಎಲ್ಲಾ ಮಾರ್ಗಗಳಲ್ಲಿಯೂ ಪರಿಚಯಿಸಲು ನಿಗಮ ಮುಂದಾಗಿದೆ. ಈ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರದಿಂದ ಕ್ಯಾಶ್ಲೆಸ್ ಸಂಚಾರವನ್ನು ಉತ್ತೇಜಿಸಲಿದೆ. ಈ ಯಂತ್ರಗಳು ಕ್ಯೂ ಆರ್ ಕೋಡ್ ಮೂಲಕ ಟಿಕೆಟ್ ನೀಡಲಿದ್ದು, ಡೆಬಿಟ್, ಕ್ರೆಡಿಟ್ ಕಾರ್ಡ್ಗಳೊಂದಿಗೆ ಯುಪಿಐ ಪಾವತಿಯನ್ನು ಹೊಂದಿರಲಿದೆ. ಈ ಮೂಲಕ
ಸುಲಭವಾಗಿ ಟಿಕೆಟ್ ಕೈಸೇರಲಿದ್ದು ಟಿಕೆಟ್ ಪಡೆಯುವ ಸಲುವಾಗಿ ಗಂಟೆಗಟ್ಟಲೆ ಕಾಯುವ ಹಾಗೂ ಚಿಲ್ಲರೆಗಳಿಗಾಗಿ ನಿರ್ವಾಹಕರೊಂದಿಗೆ ಕಾದಾಟ ಕ್ಕಿಳಿಯುವ ಸನ್ನಿವೇಶಗಳು ಬಂದ್ ಆಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ನೂತನ ಐಷಾರಾಮಿ ಬಸ್ ಖರೀದಿಗೆ ಸಿದ್ಧತೆ
ಈ ನಡುವೆ ಕೆಎಸ್ಆರ್ಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ ಅಂಬಾರಿ, ಪಲ್ಲಕ್ಕಿ, ಅಶ್ವಮೇಧ, ಇವಿ ಪ್ಲಸ್ ಬಸ್ಗಳನ್ನು ಹೆಚ್ಚುವರಿಯಾಗಿ ಖರೀದಿಸಲು ಮುಂದಾಗಿದೆ. ೧೦೦ ಪಲ್ಲಕ್ಕಿ, ೨೦ ಅಂಬಾರಿ, ೩೦ ಪಲ್ಲಕ್ಕಿ ಕಾಂಬೋ, ಹಾಗೂ ೨೦ ಐರಾವತ ಕ್ಲಬ್ ಕ್ಲಾಸ್ ಬಸ್ಗಳನ್ನು ಖರೀದಿಸಲು ಸಿದ್ಧತೆ ನಡೆಸಿದ್ದು, ಶೀಘ್ರವೇ ಈ ಬಸ್ಗಳು ರಸ್ತೆಗಿಳಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.