ನವದೆಹಲಿ: ಪ್ರಧಾನಿ ಮೋದಿ 3.0 ಸರ್ಕಾರದ ಮೊದಲನೇ ಬಜೆಟ್ ಜು.23 ರಂದು ಮಂಡನೆಯಾಗಲಿದೆ. ಬಜೆಟ್ ಅಧಿವೇಶನ 2024 ಜುಲೈ 22 ರಿಂದ ಆಗಸ್ಟ್ 12 ರವರೆಗೆ ಪ್ರಾರಂಭವಾಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ತಿಳಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಪೂರ್ಣ ಪ್ರಮಾಣದ ಬಜೆಟ್ ಅನ್ನು ಜು.23ರಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ ಎಂದು ಹೇಳಿದರು.
ಭಾರತ ಸರ್ಕಾರದ ಶಿಫಾರಸಿನ ಮೇರೆಗೆ ಬಜೆಟ್ ಅಧಿವೇಶನಕ್ಕಾಗಿ ಸಂಸತ್ತಿನ ಉಭಯ ಸದನಗಳನ್ನು ಕರೆಯುವ ಪ್ರಸ್ತಾವನೆಯನ್ನು ಭಾರತದ ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. ಕೇಂದ್ರ ಬಜೆಟ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಮೊದಲ ಪ್ರಮುಖ ನೀತಿ ಘೋಷಣೆಯಾಗಿದೆ ಎಂದು ಕಿರಣ್ ರಿಜಿಜು ಹೇಳಿದ್ದಾರೆ.
ಈ ಬಾರಿಯ ಕೇಂದ್ರದ ಪೂರ್ಣ ಬಜೆಟ್ನಲ್ಲಿ, ಆರ್ಥಿಕ ಸ್ಥಿರತೆಯ ಮೇಲೆ ನಿರಂತರ ಗಮನ ಹರಿಸುವುದರೊಂದಿಗೆ ಉದ್ಯೋಗದ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ. ಅಲ್ಲದೆ ದೀರ್ಘಾವಧಿಯ ಯೋಜನೆಯಾಗಿ ಪಂಚವಾರ್ಷಿಕ ಯೋಜನೆಗಳು ಮತ್ತು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿದೆ ಎನ್ನಲಾಗಿದೆ.
ಚುನಾವಣಾ ವರ್ಷವಾಗಿರುವ ಕಾರಣ ಈ ವರ್ಷ ಎರಡು ಬಾರಿ ಬಜೆಟ್ ಮಂಡನೆಯಾಗುತ್ತಿದೆ. ಈ ಹಿಂದೆ 2024ರ ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡಿಸಲಾಗಿತ್ತು. ಈಗ ಸರ್ಕಾರ ರಚನೆಯಾದ ನಂತರ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದೆ. ಈ ಬಾರಿಯ ಕೇಂದ್ರ ಬಜೆಟ್ ಅನ್ನು ಮಂಡಿಸುವುದರ ಮೂಲಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ದಾಖಲೆ ಸೃಷ್ಟಿಸಲಿದ್ದಾರೆ.
ಸತತ ಏಳು ಬಾರಿ ಕೇಂದ್ರ ಬಜೆಟ್ ಮಂಡಿಸಿದ ದೇಶದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಸೀತಾರಾಮನ್ ಅವರು ಈಗಾಗಲೇ ಆರು ಬಜೆಟ್ ಮಂಡಿಸಿದ್ದಾರೆ. ಅವರಿಗಿಂತ ಮೊದಲು ಸತತ ಆರು ಬಜೆಟ್ ಮಂಡಿಸಿದ ದಾಖಲೆಯನ್ನು ಮೊರಾರ್ಜಿ ದೇಸಾಯಿ ಹೊಂದಿ ದ್ದರು.