Saturday, 5th October 2024

ತೊರಗಲ್ಲ ಮಹಾರಾಜ ನರಸೋಜಿರಾವ ಶಿಂಧೆಯವರ 114ನೇ ಜಯಂತೋತ್ಸವ ನಾಳೆ

ಗೊಡಚಿ : ಉತ್ತರ ಕರ್ನಾಟಕ ಭಾಗದ ಆರಾಧ್ಯ ದೈವ ಗೊಡಚಿಯ ವೀರಭದ್ರ ಸ್ವಾಮಿ ದೇವಸ್ಥಾನದ ಭಕ್ತರಾದ ಕಿಲ್ಲಾ ತೊರಗಲ್ಲ ಮಹಾರಾಜರಾದ ನರಸೋಜಿರಾವ್ ಮುರಾರಿರಾವ್ ಶಿಂಧೆ ಅವರ 114ನೇ ಜಯಂತೋತ್ಸವ ಭಾನುವಾರ ಜರುಗಲಿದೆ.

ನರಸೋಜಿರಾವ್ ಶಿಂಧೆ ಅವರು ರಾಮದುರ್ಗ ತಾಲೂಕು ತೊರಗಲ್ ಗ್ರಾಮದ ಏಳು ಸುತ್ತಿನ ಕೋಟೆಯಲ್ಲಿ 1910 ಜುಲೈ 7ರಂದು ಜನಿಸಿದರು. ಚಿಕ್ಕ ವಯಸ್ಸಿನಲ್ಲಿ ತಂದೆ, ತಾಯಿ ಕಳೆದುಕೊಂಡಿದ್ದರಿಂದ, ಕೊಲ್ಲಾಪುರ ಶಾಹು ಮಾಹಾರಾಜರು ಬಾಲಕ ನರಸೋಜಿರಾವ್ ಅವರನ್ನು ಆರೈಕೆ ಮಾಡಲು ಪ್ಯಾಟರಸನ್ ಎಂಬ ದಾದಿಯನ್ನು ನಿಯೋಜಿಸಿದ್ದರು. ನಂತರ ಇವರ 6 ನೇ ವಯಸ್ಸಿನಲ್ಲಿಯೇ ಕೆನಡಾ ದೇಶಕ್ಕೆ ವ್ಯಾಸಂಗಕ್ಕೆ ಕಳುಹಿಸಿದ್ದು ವಿಶೇಷ.

ಕೆನಡಾ ವಿದ್ಯಾಭ್ಯಾಸದ ನಂತರ ತಮ್ಮ 18 ನೇ ವಯಸ್ಸಿಗೆ ನರಸೋಜಿರಾವ್ ಅವರು ಭಾರತಕ್ಕೆ ವಾಪಸ್ಸಾದರು. ನಂತರ ತಮ್ಮ ಉನ್ನತ ವ್ಯಾಸವನ್ನು ಕೊಲ್ಲಾಪುರದ ಪಾಂಚಗಣಿ ಮತ್ತು ಬೆಂಗಳೂರಿನಲ್ಲಿ ಪಡೆದುಕೊಂಡರು.

ಶಿಕ್ಷಣವನ್ನು ಪೂರ್ಣಗೊಳಿಸಿ ಸ್ವಗ್ರಾಮಕ್ಕೆ ಮರಳಿದ ಇವರು ನರಸೋಜಿರಾವ್ ಅವರು ರಾಮದುರ್ಗ ತಾಲೂಕಿನ ತೊರಗಲ್ ರಾಜಮನೆತನದ ಕಾರ್ಯ ಭಾರವನ್ನು ಸ್ವೀಕರಿಸಿದರು. 1931 ರಲ್ಲಿ ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜರ ಸಹೋದರನ ಪುತ್ರಿ ಸುವರ್ಣದೇವಿಯವರನ್ನು ವಿವಾಹವಾದರು.

1932 ರ ಜೂನ್ 3 ರಂದು ತೊರಗಲ್ ರಾಜಮನೆತನದ ರಾಜರಾಗಿ ಪಟ್ಟಾಭಿಷೇಕ ಸ್ವೀಕರಿಸಿದರು. ನಂತರ ನರಸೋಜಿರಾವ್ ಅವರು ಆಡಳಿತಾತ್ಮಕ ಬದಲಾವಣೆಗಳನ್ನು ತರುವ ಉದ್ದೇಶದಿಂದ ಕೆನಡಾ, ಜಪಾನ್, ಶ್ರೀಲಂಕಾ, ಚೀನಾ ಮತ್ತಿತರ ರಾಷ್ಟ್ರಗಳಿಗೆ ಭೇಟಿ ನೀಡಿ ಅಲ್ಲಿನ ಉತ್ತಮ ಯೋಜನೆ ಗಳನ್ನು ಜಾರಿಗೆ ತರಲು ಯಶಸ್ವಿಯಾದರು.

ಈ ಸಂದರ್ಭದಲ್ಲಿ ತಮ್ಮ ಆಡಳಿತಾವಧಿಯಲ್ಲಿ ಇದ್ದ 33 ಹಳ್ಳಿಗಳ ಅಭಿವೃದ್ಧಿ ಮಾಡುವಲ್ಲಿ ಯಶಸ್ವಿಯಾದರು. ಪ್ರಜೆಗಳ ನೋವು ಅರಿಯುವ ಮೂಲಕ ಅವರ ಸಮಸ್ಯೆಗೆ ಪರಿಹಾರ ನೀಡುವಲ್ಲಿ ನರಸೋಜಿರಾವ್ ಅವರ ಕೊಡುಗೆ ಅಪಾರ. 1952ರಲ್ಲಿ ಗೊಡಚಿ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನವನ್ನು ನಿರ್ಮಿಸಿ ದೇವಸ್ಥಾನದ ಎಲ್ಲ ಕಾರ್ಯಕ್ರಮಗಳು ಸರಾಗವಾಗಿ ನಡೆದುಕೊಂಡು ಹೋಗಲು ದೇವಸ್ಥಾನಕ್ಕೆ ತಮ್ಮ ನೂರಾರು ಎಕರೆ ಜಮೀನನ್ನು ದಾನವಾಗಿ ನೀಡಿದರು.

1937 ರಲ್ಲಿ ನಿರ್ಮಾಣವಾಗಿರುವ ಚಂದರಗಿಯಲ್ಲಿದ್ದ ತಮ್ಮ ಬೇಸಿಗೆ ಅರಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಕ್ರೀಡಾಶಾಲೆಯಾಗಿ ಮಾರ್ಪಡಿಸಿ ಯುವಕರಿಗೆ ನೆರವಾದರು. ಜೊತೆಗೆ ಸಾವಿರಾರು ಎಕರೆ ಜಮೀನನ್ನು ಬಡವರಿಗೆ ನೀಡಿ ವಿಭಿನ್ನವಾಗಿ ಗುರುತಿಸಿಕೊಂಡ ಮನೆತನ ನರಸೋಜಿರಾವ್ ಅವರದು.

ರೈತರ ಪರ ಕಾಳಜಿ ಹೊಂದಿದ್ದ ನರಸೋಜಿರಾವ್ ಸಿಂಧೆ ಅವರು ರಾಮದುರ್ಗ ತಾಲ್ಲೂಕಿಗೆ ಪ್ರಥವಾಗಿ ಕಬ್ಬು ಬೆಳೆಯನ್ನು ಪರಿಚಯಿಸಿದರು. ಇದೇ ಕಾರಣಕ್ಕೆ ಬೆಳಗಾವಿ ಜಿಲ್ಲೆ ಸೇರಿ ರಾಜ್ಯದ ಅನೇಕ ಭಾಗದ ಜನ ಈ ಮನೆತನದ ಮೇಲೆ ವಿಶೇಷ ಭಕ್ತಿ ಹಾಗೂ ಗೌರವ ಇಟ್ಟುಕೊಂಡಿದೆ.

ಗೊಡಚಿ ಕ್ಷೇತ್ರದ ವೀರಭದ್ರನ ಸನ್ನಿಧಿಯಲ್ಲಿ ಶಿಂಧೆ ವಂಶಸ್ಥರ ಮುಂದಾಳತ್ವದಲಿ ದೇವಸ್ಥಾನದ ಸಕಲ ಕಾರ್ಯಗಳು ಸುಗಮವಾಗಿ ನಡೆಯುತ್ತವೆ. ಇದೇ ಕಾರಣಗಳಿಂದ ಇಲ್ಲಿ ಜನತೆ ಶಿಂಧೆ ಕುಟುಂಬಕ್ಕೆ ಪ್ರೀತಿ, ಆದರದಿಂದ ಕಾಣುತ್ತಾರೆ. ಹಿಂದಿನ ಕಾಲದ ಶಿಂಧೆ ಕುಟುಂಬಸ್ಥರ ಆದರ್ಶ ಜೀವನ ಇಂದಿಗೂ ಈ ಭಾಗದ ಜನಮಾನಸದಲ್ಲಿ ಉಳಿದಿದೆ ಎಂದರೆ ತಪ್ಪಲ್ಲ.