Saturday, 23rd November 2024

ಟಿವಿ ಡಿಬೇಟ್ ಅಮೆರಿಕ ಚುನಾವಣೆಯ ಪ್ರತಿಬಿಂಬ

ಪ್ರಸ್ತುತ

ರಾಸುಮ ಭಟ್

ಪ್ರಸ್ತುತ ಇಂಟರ್ನೆಟ್ ಯುಗದಲ್ಲಿಯೂ ಚುನಾವಣಾ ಕಣದಲ್ಲಿನ ಅಭ್ಯರ್ಥಿಗಳು ಗೆಲ್ಲಲು ಚುನಾವಣಾ ಸಮಾವೇಶಗಳು, ಪಾದಯಾತ್ರೆಗಳು, ಮನೆ ಮನೆಗೆ ತೆರಳುವ ಕಾರ್ಯಕ್ರಮಗಳು, ಬ್ಯಾನರ್ ಆಳವಡಿಕೆ ಮುಂತಾದವು ಚಾಲ್ತಿಯಲ್ಲಿವೆ. ಜಗತ್ತು ಎಷ್ಟೆ ಮುಂದುವರಿದಿದ್ದರೂ, ದೂರವಾಣಿ ಕರೆ, ಎಸ್ಸೆಮ್ಮೆಸ್, ವಿಡಿಯೋ ಪ್ರಚಾರ, ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಕ್ಷಣ ಮಾತ್ರದಲ್ಲಿ ಮತದಾರರನ್ನು ತಲುಪಬಹುದಾದರೂ ಚುನಾವಣಾ ಪ್ರಚಾರದ
ವಿಷಯದಲ್ಲಿ ಅವು ಯಾವುವೂ ಚುನಾವಣಾ ಸಮಾವೇಶಗಳ ಪ್ರಭಾವದ ಮುಂದೆ ನಿಲ್ಲಲಾರವು.

ಇಂತಹದರ ಭಾಗವಾದ ಅಮೆರಿಕದ ಅಧ್ಯಕ್ಷರ ಟಿವಿಯ ಚರ್ಚೆಯ ಇತಿಹಾಸ ಗಮನಿಸುವುದಾದರೆ ೧೯೨೦ರ ಸಂದರ್ಭದಲ್ಲಿ ಅಭ್ಯರ್ಥಿಗಳ ಚರ್ಚೆಯು ರೇಡಿಯೊಗಳಲ್ಲಿ ಬಿತ್ತರಗೊಳ್ಳಲು ಪ್ರಾರಂಭವಾದವು. ೧೯೬೦ರ ಸೆಪ್ಟೆಂಬರ್‌ನಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮತ್ತು ಜಾನ್ ಎಫ್. ಕೆನಡಿ ನಡುವೆ ದೂರ ದರ್ಶನದ ಚರ್ಚೆ ನಡೆಯಿತು.

ಇದು ಅಮೆರಿಕದ ಅಧ್ಯಕ್ಷಿಯ ಚುನಾವಣೆಯ ಮೊದಲ ದೂರ ದರ್ಶನದ ಚರ್ಚೆಯಾಗಿತ್ತು ಎಂದೂ ಖ್ಯಾತಿ ಪಡೆಯಿತು ಮತ್ತು ಈ ಚುನಾವಣಾ ಚರ್ಚೆಯು ಅಮೆರಿಕದ ರಾಜಕೀಯವನ್ನು ಶಾಶ್ವತ ವಾಗಿ ಬದಲಿಸಿತು. ಆಗ ಅಮೆರಿಕದಲ್ಲಿ ಶೇ.೮೮ರಷ್ಟು ಮನೆಗಳಲ್ಲಿ ಟಿವಿ ಮಾಧ್ಯಮ ವಿತ್ತು, ಸುಮಾರು ೭ ಕೋಟಿ ಮಂದಿ ಈ ಚುನಾವಣಾ ಚರ್ಚೆಯನ್ನು ವೀಕ್ಷಿಸಿದರು ಮತ್ತು ಆ ಪ್ರಸಾರ ಕೆನಡಿ ಯವರ ಗೆಲುವಿಗೆ ಮುಖ್ಯ ಕಾರಣವಾಯಿತು.

ನಂತರ ೧೯೬೪ರಲ್ಲಿ ಲಿಂಡನ್ ಬಿ. ಜಾನ್ಸನ್ ಬ್ಯಾರಿ ಗೋಲ್ಡ್ ವಾಟರ್ ಚರ್ಚೆಗೆ ಬರಲು ನಿರಾಕರಿಸಿದರು. ೧೯೬೮ ಮತ್ತು ೧೯೭೨ರಲ್ಲಿ ನಿಕ್ಸನ್ ಟಿವಿಯಲ್ಲಿ ಕಾಣಿಸಿಕೊಳ್ಳಲು ನಿರಾಕರಿಸಿದರು. ಆದರೆ, ೧೯೭೬ರಲ್ಲಿ ಆಗಿನ ಅಧ್ಯಕ್ಷ ಜೆರಾಲ್ಡ್ ಫೋರ್ಡ್ ಅವರು ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಜಿಮ್ಮಿ ಕಾರ್ಟರ್ ಅವರನ್ನು ಟಿವಿ ಚರ್ಚೆಯಲ್ಲಿ ಎದುರಿಸುವ ದೃಢ ನಿರ್ಧಾರ ಕೈಗೊಂಡರು.

ಅಮೆರಿಕದಲ್ಲಿ ಟಿವಿ ಚರ್ಚೆಯು, ದಶಕಗಳಿಂದ ಅಭ್ಯರ್ಥಿಗಳ ನಡವಳಿಕೆ, ದೇಶದ ಕುರಿತು ಅವರ ನಿಲುವುಗಳನ್ನು ಅರ್ಥ ಮಾಡಿಕೊಳ್ಳಲು ಬಹುಮುಖ್ಯ
ವೇದಿಕೆಯಾಗಿ ಕೆಲಸ ಮಾಡುತ್ತಾ ಬಂದಿದೆ. ಅಮೆರಿಕ ಅಧ್ಯಕ್ಷ ಚುನಾವಣೆಯ ಚರ್ಚೆ ಮಾದರಿಯನ್ನು ಗಮನಿಸುವುದಾದರೆ ಚರ್ಚೆಯಲ್ಲಿ ಗರಿಷ್ಠ ಐವರು ಅಭ್ಯರ್ಥಿಗಳು ಪಾಲ್ಗೊಂಡ ಉದಾಹರಣೆಯಿದ್ದು, ಸಾಮಾನ್ಯವಾಗಿ ಮೂವರು ಪಾಲ್ಗೊಳ್ಳುತ್ತಾರೆ ಇದರಲ್ಲಿ ಅಭ್ಯರ್ಥಿಗಳ ಹೊರತಾಗಿ ನಿರೂಪಕರು,
ಪತ್ರಕರ್ತರ ತಂಡ ಭಾಗವಹಿಸುತ್ತದೆ. ಪ್ರಾರಂಭದಲ್ಲಿ ಇಬ್ಬರೂ ಅಧ್ಯಕ್ಷಿಯ ಅಭ್ಯರ್ಥಿಗಳು ಪುಟ್ಟದಾಗಿ ಹೇಳಿಕೆಗಳನ್ನು ನೀಡುತ್ತಾರೆ.

ನಂತರ ಖ್ಯಾತನಾಮ ಪತ್ರಕರ್ತರ ತಂಡ ಮೊದಲೇ ಸಿದ್ಧಪಡಿಸಿದ್ದ ಪ್ರಶ್ನೆಗಳನ್ನು ಇಬ್ಬರಿಗೂ ಕೇಳುತ್ತದೆ. ಒಬ್ಬ ಅಭ್ಯರ್ಥಿ ಪ್ರಶ್ನೆಗೆ ಉತ್ತರಿಸಿ ಬಳಿಕ ಮತ್ತೊಬ್ಬ ಅಭ್ಯರ್ಥಿ ಆ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾರೆ. ಪ್ರತಿ ಪ್ರಶ್ನೆಗೂ ಇಂತಿಷ್ಟೆ ಸಮಯ ನಿಗದಿಯಾಗಿರುತ್ತದೆ, ಸಮಯ ಮೀರಿದಾಗ ನಿರೂಪಕರು ಚರ್ಚೆಯನ್ನು ನಿಯಂತ್ರಿಸುತ್ತಾರೆ.

ಪತ್ರಕರ್ತರ ತಂಡದ ಪ್ರಶ್ನೆಗಳು ಮುಗಿದ ಬಳಿಕ ಅಭ್ಯರ್ಥಿಗಳು ಕೊನೆಯದಾಗಿ ಎರಡು ಮಾತುಗಳಿಂದ ಚರ್ಚೆಯನ್ನು ಮುಗಿಸುವುದು ವಾಡಿಕೆಯಾಗಿದೆ. ಇತ್ತೀಚೆಗೆ ನಡೆದ ಅಮೆರಿಕ ಅಧ್ಯಕ್ಷರ ಚರ್ಚೆಯಲ್ಲಿ ಜೋ ಬೈಡನ್ ಮತ್ತು ಡೊನಾಲ್ಡ ಟ್ರಂಪ್ ನಡುವೆ ವಲಸಿಗರು, ಅಮೆರಿಕದ ಆರ್ಥಿಕ ಸ್ಥಿತಿ, ಭಯೋ ತ್ಪಾದನೆ ನಿಯಂತ್ರಣ, ಚೀನಾ ದೇಶದ ಜೊತೆಗಿನ ಸಂಬಂಧ, ರಷ್ಯಾ -ಉಕ್ರೇನ್ ಯುದ್ಧ, ಇಸ್ರೇಲ್ -ಪ್ಯಾಲೆಸ್ತೀನ್ ನಡುವಿನ ಸಮರ ಹೀಗೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಯಿತು ಮತ್ತು ಈ ಚರ್ಚೆಯಲ್ಲಿ ಡೊನಾಲ್ಡ್ ಟ್ರಂಪ್  ಮುನ್ನಡೆ ಸಾಧಿಸಿದರು, ಪ್ರಸುತ್ತ ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಮ್ಮ ವಯೋಸಹಜತೆಯಿಂದ ಕೆಲವು ಸಂದರ್ಭಗಳಲ್ಲಿ ಉತ್ತರಿಸವಲ್ಲಿ ಹಿನ್ನಡೆ ಅನುಭವಿಸಿದರು.

ಒಟ್ಟಿನಲ್ಲಿ ಒಂದು ದೇಶದ ಭವಿಷ್ಯಕ್ಕಾಗಿ ಅಲ್ಲಿನ ಚುನಾವಣಾ ಅಭ್ಯರ್ಥಿಗಳನ್ನು ಅವರ ದೂರದರ್ಶಕತ್ವ ಗುಣ, ಅವರ ದೇಶದ ಸಮಸ್ಯೆಗಳ ಬಗೆಗಿನ ಅರಿವು ಮತ್ತು ದೇಶವನ್ನು ಮುನ್ನಡೆಸಲು ಯಾರು ಸೂಕ್ತ ಎನ್ನುವುದನ್ನು ಟಿವಿ ಚುನಾವಣಾ ಚರ್ಚೆ ನಿರ್ಧರಿಸುವುದು ಒಂದು ದೇಶದ ಭವಿಷ್ಯಕ್ಕೆ ಉತ್ತಮವಾಗಿದೆ ಇಂತಹ ಚುನಾ ವಣಾ ವ್ಯವಸ್ಥೆ ಎಲ್ಲ ದೇಶಗಳಿಗೂ ಮಾದರಿಯಾಗಿದೆ.

(ಲೇಖಕರು: ಸಂಶೋಧನಾ ವಿದ್ಯಾರ್ಥಿ)