ಗುವಾಹಟಿ: ಅಸ್ಸಾಂನ ಪ್ರವಾಹದಿಂದಾಗಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಈವರೆಗೆ ಆರು ಖಡ್ಗಮೃಗಗಳು ಸೇರಿ 131 ಕಾಡು ಪ್ರಾಣಿಗಳು ಮೃತಪಟ್ಟಿವೆ ಎಂದು ಉದ್ಯಾನವನದ ಅಧಿಕಾರಿಗಳು ಸೋಮವಾರ ಪ್ರಕಟಿಸಿದ್ದಾರೆ.
ಪ್ರವಾಹದಿಂದಾಗಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ 131 ಕಾಡು ಪ್ರಾಣಿಗಳು ಸಾವನ್ನಪ್ಪಿವೆ ಎಂದು ಕ್ಷೇತ್ರ ನಿರ್ದೇಶಕಿ ಸೋನಾಲಿ ಘೋಷ್ ತಿಳಿಸಿದ್ದಾರೆ.
“ಆರು ಖಡ್ಗಮೃಗಗಳು, 100 ಹಂದಿ ಜಿಂಕೆಗಳು ಪ್ರವಾಹದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ, 17 ಹಂದಿ ಜಿಂಕೆಗಳು, ತಲಾ ಒಂದು ಜೌಗು ಜಿಂಕೆ, ರೀಸಸ್ ಮಕಾಕ್ ಮತ್ತು ಒಟ್ಟರ್ (ನಾಯಿಮರಿ) ಆರೈಕೆಯಲ್ಲಿ ಸಾವನ್ನಪ್ಪಿವೆ. ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡು ಹಂದಿ ಜಿಂಕೆಗಳು ಸಾವನ್ನಪ್ಪಿವೆ ಎಂದು ಹೇಳಿದ್ದಾರೆ.
ಪ್ರವಾಹದ ಸಮಯದಲ್ಲಿ, ಉದ್ಯಾನ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆಯಿಂದ 97 ಕಾಡು ಪ್ರಾಣಿಗಳನ್ನು ಸಹ ರಕ್ಷಿಸಲಾಗಿದೆ. ರಾಷ್ಟ್ರೀಯ ಉದ್ಯಾನದ ಪ್ರವಾಹ ಪರಿಸ್ಥಿತಿ ಸುಧಾರಿಸುತ್ತಿದ್ದರೂ, 233 ಅರಣ್ಯ ಶಿಬಿರಗಳಲ್ಲಿ 69 ಮುಳುಗಿವೆ.
ಕಾಜಿರಂಗ ವ್ಯಾಪ್ತಿಯಲ್ಲಿ 22 ಅರಣ್ಯ ಶಿಬಿರಗಳು, ಬಗೋರಿ ವಲಯದಲ್ಲಿ 20 ಶಿಬಿರಗಳು, ಅಗ್ರಟೋಲಿ ವಲಯದಲ್ಲಿ 14 ಶಿಬಿರಗಳು, ಬುರಾಪಹಾರ್, ಬೊಕಾಖಟ್ ಮತ್ತು ನಾಗಾವ್ ವನ್ಯಜೀವಿ ವಿಭಾಗದಲ್ಲಿ ತಲಾ 4 ಶಿಬಿರಗಳು ಮತ್ತು ಬಿಸ್ವಾನಾಥ್ ವನ್ಯಜೀವಿ ವಿಭಾಗದ ಅಡಿಯಲ್ಲಿ ಒಂದು ಶಿಬಿರವು ಪ್ರಸ್ತುತ ನೀರಿನಲ್ಲಿ ಮುಳುಗಿದೆ ಎಂದು ಉದ್ಯಾನವನ ಪ್ರಾಧಿಕಾರ ತಿಳಿಸಿದೆ.
ಪ್ರವಾಹವು ಕಾಜಿರಂಗ ಮತ್ತು ಬೊಕಾಖಾಟ್ ವಲಯಗಳಲ್ಲಿ ತಲಾ ಎರಡು ಸೇರಿದಂತೆ ನಾಲ್ಕು ಅರಣ್ಯ ಶಿಬಿರಗಳನ್ನು ಸ್ಥಳಾಂತರಿಸಲು ಉದ್ಯಾನ ನಿರ್ವಹಣೆಯನ್ನು ಒತ್ತಾಯಿಸಿದೆ.