ಇದೇ ಅಂತರಂಗ ಸುದ್ದಿ
vbhat@me.com
ಕೈ ಅಥವಾ ಕಾಲನ್ನು ಮುರಿದುಕೊಂಡು, ಬ್ಯಾಂಡೇಜ್ ಕಟ್ಟಿಸಿಕೊಂಡವರ ಅನುಭವವನ್ನು ಕೇಳಿದ್ದೀರಾ? ಕೈ-ಕಾಲು ಮುರಿದುಕೊಂಡ ನೋವಿಗಿಂತ,
ಬ್ಯಾಂಡೇಜ್ ಕಟ್ಟಿಕೊಂಡಿದ್ದೇಕೆ ಎಂದು ಎಲ್ಲರಿಗೂ ವಿವರಿಸಿದ ನೋವೇ ಜಾಸ್ತಿಯಾಗಿರುತ್ತದೆ. ಎಲ್ಲಿ ಬಿದ್ದೆ, ಹೇಗೆ ಬಿದ್ದೆ, ಜಾರಿ ದಾಗ ಏನೇನಾಯಿತು, ಮೂಳೆ ಎಲ್ಲಿ ಮುರಿದಿದೆ, ಹೇಗೆ ಅದನ್ನು ತಪ್ಪಿಸಬಹುದಿತ್ತು, ಮೂಳೆ ಎಷ್ಟು ಮುರಿದಿದೆ, ಯಾವ ವೈದ್ಯರನ್ನು ಸಂಪರ್ಕಿಸಿದ್ದೀರಿ, ಅವರು ಯಾವ ಯಾವ ಔಷಧಗಳನ್ನು ತೆಗೆದುಕೊಳ್ಳುವಂತೆ ಹೇಳಿzರೆ, ಇನ್ನು ಎಷ್ಟು ದಿನ ಬ್ಯಾಂಡೇಜ್ ಕಟ್ಟಿಕೊಳ್ಳಬೇಕು… ಈ ಎಲ್ಲ ಅಂಶಗಳನ್ನೂ ಒಪ್ಪಿಸಬೇಕು.
ನಂತರ ಅವರ ಉಪದೇಶದ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಮೂಳೆ ಬೇಗನೆ ಕೂಡಿಕೊಂಡು ವಾಸಿಯಾಗಲು ಯಾವ ಆಹಾರ ಸ್ವೀಕರಿಸಬೇಕು, ಯಾವ ಪಥ್ಯ ಮಾಡಬೇಕು ಎಂಬ ವಿವರಗಳಿಗೆ ಕಿವಿಯಾಗಬೇಕು. ಬ್ಯಾಂಡೇಜ್ ಕಟ್ಟಿಕೊಂಡು ಮಲಗುವಾಗ, ಸ್ನಾನ ಮಾಡುವಾಗ ಏನೆಲ್ಲ ಸಮಸ್ಯೆ ಗಳಾಗುತ್ತವೆ ಎಂಬ ಅವರ ಅನುಭವದ ನುಡಿಗಳನ್ನು ಕೇಳಿಸಿಕೊಳ್ಳಬೇಕು. ಈ ಮಧ್ಯೆ, ಆ ವೈದ್ಯರನ್ನು ಸಂಪರ್ಕಿಸಬೇಕಿತ್ತು, ಈ ವೈದ್ಯರನ್ನು ಕಾಣ
ಬೇಕಿತ್ತು ಎಂಬ ಸಲಹೆಗಳ ಕಿರ್ದಿ. ಈ ಮಾತುಕತೆ ಮುಗಿಯುವ ಹೊತ್ತಿಗೆ, ಕೈ-ಕಾಲು ಮುರಿದುಕೊಂಡವನಿಗೆ, ಈ ಸಲಹೆಗಳನ್ನು ಕೇಳುವುದಕ್ಕಿಂತ, ಮೂಳೆ ಮುರಿತದ ನೋವೇ ವಾಸಿ ಎಂದು ಅನಿಸಿದರೂ ಆಶ್ಚರ್ಯವಿಲ್ಲ.
ನನ್ನ ಸ್ನೇಹಿತರೊಬ್ಬರು, ತಾನು ಹೇಗೆ ಬಿz ಎಂಬಲ್ಲಿಂದ ಆರಂಭಿಸಿ ಈಗ ಹೇಗಿದ್ದೇನೆ ಎನ್ನುವ ತನಕ ಎಲ್ಲ ವಿವರಗಳನ್ನು ದಪ್ಪ ಅಕ್ಷರಗಳಲ್ಲಿ ಟೈಪು ಮಾಡಿಸಿ, ಅದನ್ನು ಲ್ಯಾಮಿನೇಟ್ ಮಾಡಿಸಿ, ಕುತ್ತಿಗೆಗೆ ಸೆಣಬಿನ ದಾರದಿಂದ ನೇತು ಹಾಕಿಕೊಂಡಿದ್ದರು. ’ಅಯ್ಯೋ! ಏನವಸ್ಥೆ ನಿಮ್ಮದು? ಹೇಗೆ ಕೈ ಮುರಿದುಕೊಂಡಿರಿ?’ ಎಂದು ಯಾರೇ ಕೇಳಿದರೂ, ಕುತ್ತಿಗೆಗೆ ನೇತು ಹಾಕಿಕೊಂಡ ಒಂದು ಪುಟವನ್ನು ಓದಿ ತಿಳಿದುಕೊಳ್ಳಿ ಎಂದು ಹೇಳುತ್ತಿದ್ದರು.
‘ಇದನ್ನು ನೇತು ಹಾಕಿಕೊಂಡ ದಿನದಿಂದ ನನ್ನ ಕೈ ನೋವು ವಾಸಿಯಾಯಿತು ನೋಡಿ’ ಎಂದು ಅವರು ತಮಾಷೆಯಾಗಿ ಹೇಳುತ್ತಿದ್ದರು. ಬಾಸಿಂಗ ಮತ್ತು ಬ್ಯಾಂಡೇಜ್ ಕಟ್ಟಿಕೊಂಡವರನ್ನು ಕಂಡಾಗ ಯಾರೂ ಸುಮ್ಮನೆ ಹೋಗುವುದಿಲ್ಲ. ನೂರೆಂಟು ಪ್ರಶ್ನೆಗಳನ್ನು ಕೇಳುತ್ತಾರೆ. ಅವರ ಪ್ರಶ್ನೆಗಳು ಹೇಗಿರುತ್ತವೆ ಅಂದ್ರೆ ಅವನ್ನು ಯಾಕಾದರೂ ಕಟ್ಟಿಕೊಂಡೆನಪ್ಪಾ ಎಂದು ಅನಿಸಿಬಿಡಬೇಕು, ಆ ರೀತಿ ಇರುತ್ತದೆ. ಮೊನ್ನೆ ನನಗೂ ಹಾಗೆ ಅನಿಸಿತು.
ನಾನು ಅನಿರೀಕ್ಷಿತ ಎದೆನೋವಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಒಂದು ವಾರ ದಾಖಲಾಗಿz. ಹಾಗೆ ನೋಡಿದರೆ, ಅರ್ಧ ಗಂಟೆಯೊಳಗೆ ನಾನು ಆರಾಮಾಗಿ ಕುಳಿತಿದ್ದೆ. ಆದರೆ ವಿಪರೀತ ಸುಸ್ತು ಇತ್ತು. ಔಷಧ-ಮಾತ್ರೆಗಳನ್ನು ಸೇವಿಸಿದ್ದರಿಂದ ಬಾಯಿರುಚಿ ಇರಲಿಲ್ಲ. ಹೀಗಾಗಿ ಏನನ್ನೂ ಸೇವಿಸಲು
ಮನಸ್ಸಾಗುತ್ತಿರಲಿಲ್ಲ. ಹೀಗಾಗಿ ಒಂಥರಾ ದೈಹಿಕ ಅಶಕ್ತತೆ. ಅದನ್ನು ಬಿಟ್ಟರೆ ನಾನು ಗುಂಡುಕಲ್ಲಿನಂತೆ ಇದ್ದೆ. ಹಾಗಂತ ನನ್ನ ದೇಹವೂ ಹೇಳುತ್ತಿತ್ತು. ‘ಭಟ್ರೇ, ಹೋಗೋಣವಾ, ಬರ್ತೀರಾ?’ ಎಂದು ಖಾಸಾಖಾಸ ಸ್ನೇಹಿತರು ಕೇಳಿದ್ದರೆ, ನಾನು ಸೂಟಕೇಸು ಕಟ್ಟಲು ಸಿದ್ಧನಾಗಿಬಿಡುತ್ತಿದ್ದೆ. ನನ್ನನ್ನು ನೋಡಿಕೊಳ್ಳುತ್ತಿದ್ದ ವೈದ್ಯರೂ ಅದೇ ಭರವಸೆ ತುಂಬಿದ್ದರು.
‘ಸ್ಟಂಟ್ ಹಾಕಿಸಿಕೊಂಡ ಮೂರು ದಿನಗಳಲ್ಲಿ ಆಫೀಸಿಗೆ ಹೋದವರಿದ್ದಾರೆ, ಇದ್ಯಾವ ಮಹಾ?’ ಎಂದು ಹೇಳಿದ್ದರು. ಆದರೆ ನನ್ನನ್ನು ನೋಡಲು ಬಂದವರ ಮುಂದೆ ಸುಮ್ಮನಿರುವುದು ಹೇಗೆ? ಎದೆನೋವು ಹೇಗೆ, ಯಾವಾಗ ಕಾಣಿಸಿಕೊಂಡಿತು, ಎಷ್ಟು ಪರ್ಸೆಂಟ್ ಬ್ಲಾಕೇಜ್ ಇತ್ತು ಎಂಬಲ್ಲಿಂದ ಆರಂಭವಾಗಿ ಸಂಪೂರ್ಣ ವಿವರ ಒಪ್ಪಿಸಬೇಕಲ್ಲ. ಸರಿ, ನಾನು ಸ್ವಲ್ಪವೂ ಎಡಿಟ್ ಮಾಡದೇ ಒಪ್ಪಿಸುತ್ತಿದ್ದೆ. ನನ್ನ ಕತೆಯನ್ನು ಕೇಳಿದ ನಂತರ,
ನಿಜವಾದ ಧಾರಾವಾಹಿ ಆರಂಭವಾಗುತ್ತಿತ್ತು.
‘ಭಟ್ರೇ, ನೀವು ನಿಮ್ಮ ದೇಹವನ್ನು ಬಹಳ Zಚ್ಠಿoಛಿ ಮಾಡಿದಿರಿ. ವಿಪರೀತ ಒತ್ತಡ ನೀಡಿದಿರಿ. ಇನ್ನು ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ನಿಮ್ಮ ಲೈಫ್ ಸ್ಟೈಲ್ ಬದಲಿಸಿಕೊಳ್ಳಬೇಕು. ಇತ್ತೀಚೆಗೆ ನಿಮ್ಮ ದೇಹದ ತೂಕ ತುಸು ಜಾಸ್ತಿಯಾಗಿತ್ತು. ಈ ಸಂಗತಿಯನ್ನು ನಿಮ್ಮ ಗಮನಕ್ಕೆ ತರಬೇಕು
ಅಂತ ಅಂದುಕೊಂಡಿದ್ದೆ. ಇದು ನಿಮಗೆ ಎಚ್ಚರಿಕೆ ಗಂಟೆ. ಇನ್ನು ಮುಂದೆ ನೀವು ಪ್ರತಿಯೊಂದರಲ್ಲೂ ಶಿಸ್ತನ್ನು ರೂಢಿಸಿಕೊಳ್ಳಬೇಕು. ದಿನಕ್ಕೆ ಎಂಟು ಗಂಟೆ ಕಡ್ಡಾಯ ನಿದ್ದೆ ಮಾಡಬೇಕು. ರಾತ್ರಿ ಹನ್ನೊಂದು ಗಂಟೆಗೆ ಏನೇ ಆದರೂ ಮಲಗಬೇಕು. ಹೊತ್ತಲ್ಲದ ಹೊತ್ತಲ್ಲಿ ಆಹಾರ ಸೇವಿಸುವುದನ್ನು ನಿಲ್ಲಿಸಬೇಕು.
ಉತ್ತಮ ಆರೋಗ್ಯವಿಲ್ಲದೇ ಎಷ್ಟು ಗಳಿಸಿದರೆಷ್ಟು, ಬಿಟ್ಟರೆಷ್ಟು. ಇನ್ನು ಮುಂದೆ ನೀವು ಹೀಗೆ ಇರುವಂತಿಲ್ಲ. ಬೆಳಗ್ಗೆ ಕನಿಷ್ಠ ಮುಕ್ಕಾಲು ಗಂಟೆ ವಾಕ್ ಮಾಡಬೇಕು, ಅರ್ಧ ಗಂಟೆ ವ್ಯಾಯಾಮ ಮಾಡಬೇಕು, ಕಂಡಕಂಡಿzಲ್ಲವನ್ನೂ ಸೇವಿಸಬಾರದು, ಕಡ್ಡಾಯವಾಗಿ ಡಯಟ್ ಫಾಲೋ ಮಾಡಬೇಕು, ವಿದೇಶ ಪ್ರಯಾಣವನ್ನು ನಿಲ್ಲಿಸಬೇಕು, ಏನೇ ಆದರೂ ಒಬ್ಬರೇ ಹೋಗುವಂತಿಲ್ಲ, ಜತೆಯಲ್ಲಿ ಯಾರಾದರೊಬ್ಬರನ್ನು ಕರೆದುಕೊಂಡು ಹೋಗಬೇಕು, ಡ್ರೈವ್ ಮಾಡುವಂತಿಲ್ಲ, …’ ಎಂಬ ಸಲಹೆ-ಸೂಚನೆಗಳು ನನ್ನನ್ನು ಭೇಟಿ ಮಾಡಲು ಬರುವವರು ಹೇಳುತ್ತಿದ್ದರು. ಅವರೆಲ್ಲರ ಮಾತುಗಳಲ್ಲಿ ಕಾಳಜಿ, ಪ್ರೀತಿ, ಅಭಿಮಾನ, ನನ್ನ ಬಗ್ಗೆ ಅತೀವ ತುಡಿತ ಇರುವುದು ವ್ಯಕ್ತವಾಗುತ್ತಿತ್ತು.
ಅವರೆಲ್ಲರೂ ನನ್ನ ಹಿತ ಚಿಂತಕರು, ಆಪ್ತರು. ನನ್ನ ಏಳಿಗೆಯನ್ನು ಇಷ್ಟಪಡುವವರು. ಆರಂಭದಲ್ಲಿ ನಾನು ಸಹ ಶ್ರದ್ಧೆಯಿಂದಲೇ ಕೇಳಿಸಿಕೊಳ್ಳುತ್ತಿದೆ. ಆದರೆ ಬಂದವರೆಲ್ಲರೂ ಇದನ್ನೇ ಮುಂದುವರಿಸಿದಾಗ, ಈ ಮಾತುಗಳನ್ನು ಕೇಳಿಸಿಕೊಳ್ಳುವುದು ದುಸ್ತರವೆನಿಸಲಾರಂಭಿಸಿತು. ನನ್ನನ್ನು ನೋಡಲು ಬಂದ ಎಲ್ಲರಿಗೂ ನನ್ನ ಬಗ್ಗೆ ಅತೀವ ಕಾಳಜಿಯೇ. ಅದೇ ಅವರನ್ನು ಆಸ್ಪತ್ರೆ ತನಕ ಕೈ ಹಿಡಿದು ಕರೆಯಿಸಿದೆ. ನನ್ನ ಆರೋಗ್ಯದದ ಈ ಏರು-ಪೇರು ಅವರಲ್ಲಿ ಗಾಬರಿಯನ್ನುಂಟು ಮಾಡಿದೆ. ಇವೆಲ್ಲವೂ ನಿಜ. ಆದರೆ ಬಂದವರೆಲ್ಲ ನನ್ನ ಮೇಲೆ ಈ ‘ಭೋರ್ಗರೆತ’ ಆರಂಭಿಸಿದರೆ, ನನ್ನ ಪರಿಸ್ಥಿತಿ ಏನಾಗ ಬೇಡ? ಆಗ ನನಗೆ ಈ ಚರ್ವಿತ ಚರ್ವಣಗಳನ್ನು ಕೇಳಿಸಿಕೊಳ್ಳುವ ನೋವಿಗಿಂತ ಎದೆನೋವೇ ವಾಸಿಯಾ ಎಂದು ಒಂದು ಕ್ಷಣ ಅನಿಸಿದ್ದು ಸುಳ್ಳಲ್ಲ.
ಅಕ್ಷರಶಃ ನಾನು ಬಾಸಿಂಗ ಮತ್ತು ಬ್ಯಾಂಡೇಜ್ ಕಟ್ಟಿಕೊಂಡವನ ತೊಳಲಾಟವನ್ನು ಅನುಭವಿಸಲಾರಂಭಿಸಿದ್ದೆ. ನಮಗೆ ಆಪ್ತರಾದವರು ಆಸ್ಪತ್ರೆಗೆ ಅಡ್ಮಿಟ್ ಆದ ಸುದ್ದಿ ಕೇಳಿದಾಕ್ಷಣ ಅವರನ್ನು ಅಲ್ಲಿಯೇ ಹೋಗಿ ನೋಡದಿದ್ದರೆ ಮನಸ್ಸು ಕೇಳುವುದಿಲ್ಲ. ಹೋಗದಿದ್ದರೆ ಅಪರಾಧ ಭಾವ. ನಾವು
ಅಲ್ಲಿ ಹೋಗಿ ಮಾಡುವುದು ಏನೂ ಇರುವುದಿಲ್ಲ. ಆದರೂ ನಾವು ಹೋಗಿಲ್ಲ ಅಂತಾಗಬಾರದು ಎಂಬ ತುಡಿತ ಅಲ್ಲಿಗೆ ಹೋಗುವಂತೆ ಮಾಡುತ್ತದೆ. ನೋಡಲು ಹೋದಾಗ ಸುಮ್ಮನೆ ಬರುವುದುಂಟಾ? ಹೀಗಾಗಿ ಸ್ವಲ್ಪ ಹೊತ್ತು ಅವರೊಂದಿಗೆ ಮಾತಾಡುತ್ತೇವೆ. ಅದು ನಿಮಗೆ ಮೊದಲ ಸಲ ಆಗಿರಬಹುದು.
ಆದರೆ ಪೇಶಂಟ್ ಹತ್ತಾರು ಸಲ ಕೇಳಿಸಿಕೊಂಡಿರುತ್ತಾನೆ. ಅದು ಅವನ ಬಳಲಿಕೆಯನ್ನು ಇನ್ನಷ್ಟು ತೀವ್ರಗೊಳಿಸುತ್ತದೆ. ಈ ಸಂಗತಿಯನ್ನು ಪೇಶಂಟ್ ನೋಡಲು ಬರುವವರು ಅಷ್ಟಾಗಿ ಗಮನಿಸುವುದಿಲ್ಲ. ನನ್ನನ್ನು ನೋಡಲು ಆಸ್ಪತ್ರೆಗೆ ಬಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, most sensible ಆದ ಮಾತುಗಳನ್ನು ಹೇಳಿದರು – ‘ಭಟ್ರೇ, ಡೋಂಟ್ ವರಿ, ನಾನು ಇಪ್ಪತ್ತು ವರ್ಷಗಳ ಹಿಂದೆಯೇ ಸ್ಟಂಟ್ ಹಾಕಿಸಿಕೊಂಡಿದ್ದೇನೆ. ಅದನ್ನು ಹಾಕಿಸಿಕೊಂಡಿದ್ದೇನೆ ಎಂಬುದೇ ಮರೆತು ಹೋಗಿದೆ. ಈಗಿನ ಹಾಗೆ ಆಗ ಸ್ಟಂಟ್ ಅಷ್ಟೇನೂ ಜನಪ್ರಿಯವಾಗಿರಲಿಲ್ಲ. ನಾನು ದಿಲ್ಲಿಯ ಎಸ್ಕಾರ್ಟ್ ಆಸ್ಪತ್ರೆಯಲ್ಲಿ ಸ್ಟಂಟ್ ಹಾಕಿಸಿಕೊಂಡೆ.
ಅಂದಿನಿಂದ ಇಂದಿನ ತನಕ ಆರಾಮಾಗಿದ್ದೇನೆ. ಅಲ್ಲಿಂದ ಸೆಣಸಿದ ಚುನಾವಣೆಗಳೆಷ್ಟೋ, ಪ್ರತಿಭಟನೆ-ಹೋರಾಟಗಳೆಷ್ಟೋ… ಬೆಂಗಳೂರಿನಿಂದ ಬಳ್ಳಾರಿ ತನಕ ಪಾದಯಾತ್ರೆ ಹೋಗಿ ಬಂದೆ.. ಇಂದಿಗೂ ನನ್ನ ಹೋರಾಟದ ಜೀವನದ ಮುಂದುವರಿದಿದೆ.. ನನಗೆ ಏನಾದರೂ ಆಗಿದೆಯಾ? ನೋಡಿ, ಹೇಗಿದ್ದೇನೆ? ನಿಮಗೆ ನನ್ನಷ್ಟು ಟೆನ್ಷನ್ ಇದೆಯಾ? ಹೀಗಿರುವಾಗ ಆ ಬಗ್ಗೆ ಯಾಕೆ ಯೋಚನೆ? ನೀವು ಇನ್ನೂ ಮೂವತ್ತು ವರ್ಷ ಕ್ರಿಯಾಶೀಲರಾಗಿರುತ್ತೀರಿ. ನಿಮಗೆ ಏನೂ ಆಗೊಲ್ಲ ಬಿಡಿ.’
ಒಡೆದ ಪಿಂಗಾಣಿ ಪಾತ್ರೆ!
ಕೆಲವು ದಿನಗಳ ಹಿಂದೆ, ಜಪಾನಿನ ನಗೋಯಾದಲ್ಲಿರುವ ನನ್ನ ಸ್ನೇಹಿತರಾದ ಅಮರ್ ಅವರು ಒಂದು ಪಿಂಗಾಣಿ ಪಾತ್ರೆಯನ್ನು ಕಳುಹಿಸಿಕೊಟ್ಟಿದ್ದರು. ಅದು ಒಡೆದು ಹೋಗದಂತೆ, ಗುಳ್ಳೆ ಕಾಗದ (ಬಬಲ್ ಪೇಪರ್)ಗಳನ್ನು ಸುತ್ತಿದ್ದರು. ಅದರಲ್ಲಿ ವಿಶೇಷ ಅನಿಸುವಂಥದ್ದೇನೂ ಇರಲಿಲ್ಲ. ಆದರೆ ಆ ಪಿಂಗಾಣಿ ಎರಡು ಕಡೆ ಬಿರುಕು ಬಿಟ್ಟು ಒಡೆದು ಹೋದಂತಾಗಿತ್ತು. ಒಡೆದು ಹೋದ ಜಾಗದಲ್ಲಿ ಬಂಗಾರದ ಬಣ್ಣದ ಗಮ್ ಬಳಸಿ ಅದನ್ನು ಜೋಡಿಸಿ ದಂತೆ ಕಾಣುತ್ತಿತ್ತು. ಒಡೆದು ಹೋದ, ನಂತರ ಜೋಡಿಸಿದ ಪಿಂಗಾಣಿ ಪಾತ್ರೆಯನ್ನು ನನ್ನ ಸ್ನೇಹಿತ ಯಾಕೆ ಕಳಿಸಿದ ಎಂಬುದು ತಕ್ಷಣ ಅರ್ಥವಾಗಲಿಲ್ಲ.
ಇದರಲ್ಲಿ ಏನೋ ವಿಶೇಷ ಇರಲೇಬೇಕು ಎಂದು ಅನಿಸಿತು.
ನಾನಾಗಿಯೇ ಕೇಳಲಿ ಎಂದು ಆತ ಸುಮ್ಮನಾಗಿರಬೇಕು. ನಾನೂ ಕೂಡ, ’ಇಂಥ ವಿಷಯವನ್ನು ಹೇಗೆ ಚರ್ಚಿಸುವುದು? ಅದರನೋ ವಿಶೇಷ ಇದ್ದಿರು ವುದರಿಂದಲೇ ಕಳಿಸಿರಬೇಕು’ ಎಂದು ಸುಮ್ಮನಾದೆ. ಮೊನ್ನೆ ನನ್ನ ಸ್ನೇಹಿತ ಆರೋಗ್ಯ ವಿಚಾರಿಸಲೆಂದು ಫೋನ್ ಮಾಡಿದಾಗ, ‘ನಾನು ಕಳಿಸಿದ ಪಿಂಗಾಣಿ ಪಾತ್ರೆ ಸಿಕ್ಕಿತಾ?’ ಎಂದು ಕೇಳಿದ. ಆಗ ನಾನು ಕೇಳಬೇಕು ಎಂದಿದ್ದ ವಿಷಯವನ್ನು ಪ್ರಸ್ತಾಪಿಸಿದೆ.
ಆಗ ನನ್ನ ಸ್ನೇಹಿತರು ಹೇಳಿದರು – ‘ಜಪಾನಿನಲ್ಲಿ ಪಿಂಗಾಣಿ ಪಾತ್ರೆ ಬಿದ್ದು ಒಡೆದು ಹೋದರೆ ಅದನ್ನು ಬಿಸಾಡುವುದಿಲ್ಲವಂತೆ. ಬಂಗಾರದ ಬಣ್ಣದ ಗಮ್ ಸೇರಿಸಿ ಮರುಜೋಡಿಸುತ್ತಾರಂತೆ. ಒಡೆದು-ಕೂಡಿಸಿದ ಜಾಗ ಹೊಸ ಡಿಸೈನ್ ಅಥವಾ ಕಲೆಯಂತೆ ಕಂಗೊಳಿಸುತ್ತದೆ. ಆಗ ಅದರ ಮಹತ್ವ ಮತ್ತಷ್ಟು ಹೆಚ್ಚಾಗುವುದು. ಇದು ಜಪಾನಿಯರ ನಂಬಿಕೆ. ಒಡೆದು ಹೋದ ಪ್ರತಿ ವಸ್ತುವನ್ನೂ ಮರುಜೋಡಿಸಬಹುದು. ಒಂದು ಸಲ ಒಡೆದು ಹೋದ ಮಾತ್ರಕ್ಕೆ ಅದು ನಿಷ್ಪ್ರಯೋಜಕ ಅಲ್ಲ. ಈ ಕಾರಣದಿಂದ ಒಡೆದು, ನಂತರ ಜೋಡಿಸಿದ ವಸ್ತುಗಳನ್ನು ಜೋಪಾನವಾಗಿ ಎತ್ತಿಟ್ಟುಕೊಳ್ಳುತ್ತಾರೆ ಮತ್ತು ಶೋಕೇಸಿ ನಲ್ಲಿ ಸಂಗ್ರಹಿಸಿಡುತ್ತಾರೆ.’ ಮನಸ್ಸುಗಳು ಒಡೆದು ಹೋದಾಗಲೂ ಈ ರೀತಿ ಜೋಡಿಸುವುದು ಸಾಧ್ಯವಾಗುವಂತಿದ್ದರೆ ಎಷ್ಟು ಒಳ್ಳೆಯದಿತ್ತು ಅಲ್ಲವೇ?!
ಕಾಯಕ ಸಂಸ್ಕೃತಿ
ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾಯಕ ಸಂಸ್ಕೃತಿ ಬಹಳ ವೇಗವಾಗಿ ಹರಡುತ್ತದೆ. ಒಂದು ಆಫೀಸಿನಲ್ಲಿ ಯಾವುದಾದರೂ ಹೊಸ work culture ಜಾರಿಯಾದರೆ ಅದು ಬೇರೆ ಆಫೀಸುಗಳನ್ನು ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಸುಮಾರು ಹತ್ತು ವರ್ಷಗಳ ಹಿಂದೆ, ಅಮೆರಿಕದ ಆಸ್ಟಿನ್
ನಲ್ಲಿರುವ ಗೂಗಲ್ ಆಫೀಸಿನ ಮುಖ್ಯಸ್ಥರು, ‘ನೀವು ಆಫೀಸಿಗೆ ಬರುವಾಗ, ಸಾಕುಪ್ರಾಣಿಯನ್ನೂ ಕರೆದುಕೊಂಡು ಬರಬಹುದು’ ಎಂಬ ಸೂಚನೆಯನ್ನು ಹೊರಡಿಸಿದರು.
ಒಂದು ತಿಂಗಳ ಅವಧಿಯಲ್ಲಿ ಆ ಗೂಗಲ್ ಆಫೀಸು, ’ಸಾಕು ಪ್ರಾಣಿಗಳ ಕೇಂದ್ರ’ವಾಗಿಬಿಟ್ಟಿತು. ಇದಕ್ಕಿಂತ ಮುಖ್ಯವಾದ ಸಂಗತಿಯೆಂದರೆ, ಆ ಆಫೀಸಿನ ಉತ್ಪಾದಕತೆ ಎರಡುಪಟ್ಟು ಜಾಸ್ತಿಯಾಗಿದ್ದು. ಇದರಿಂದ ಪ್ರಚೋದಿತರಾಗಿ ನೂರಾರು ಕಂಪನಿಗಳು ಇದನ್ನು ಅನುಸರಿಸಿದವು. ಇಂದು ಬೇರೆ ಬೇರೆ ಸಂಸ್ಥೆಗಳಿಗೆ ಒಂದೇ ಕಟ್ಟಡದಲ್ಲಿ ಆಫೀಸು ಸ್ಪೇಸ್ ನೀಡುವ WEWORK ನಂಥ ಸಂಸ್ಥೆ ಸಹ ಸಾಕುಪ್ರಾಣಿಗಳಿಗೆ ಆಫೀಸಿನಲ್ಲಿ ಅವಕಾಶವನ್ನು ಕಲ್ಪಿಸಿ ಕೊಡಲಾರಂಭಿಸಿವೆ.
‘ನೀವು ಮನೆಯಲ್ಲಿ ಹೇಗಿರುತ್ತೀರೋ, ಆಫೀಸಿನಲ್ಲೂ ಹಾಗೆ ಇರಬಹುದು. ಆಫೀಸನ್ನೂ ಮನೆಯೆಂದೇ ಭಾವಿಸಬಹುದು’ ಎಂಬುದು ಈ ಕಾಯಕ ಸಂಸ್ಕೃತಿ ಹಿಂದಿನ ಆಶಯ. ಕೆಲವು ತಿಂಗಳುಗಳ ಹಿಂದೆ, ಕ್ಯಾಲಿಫೋರ್ನಿಯಾದ ಕಂಪ್ಯೂಟರ್ ಕಂಪನಿಯೊಂದು ತನ್ನ ನೌಕರರಿಗೆ ಈಜುಗೊಳದಲ್ಲಿ
ಟೇಬಲ್ ಮತ್ತು ಕುರ್ಚಿಯನ್ನು ಒದಗಿಸಿ, ಈಜುಗೊಳದಲ್ಲೂ ಕೆಲಸ ಮಾಡಬಹುದು ಎಂದು ಸೂಚಿಸಿತು. ಇದರಿಂದ ಉತ್ತೇಜಿತರಾದ ಸಾವಿರಾರು ನೌಕರರು ತಮ್ಮ ಲ್ಯಾಪ್‌ಟ್ಯಾಪ್ ಹಿಡಿದು ಈಜುಗೊಳಕ್ಕಿಳಿದರು. ಇದರಿಂದ ಆ ಸಂಸ್ಥೆ ಏರ್ ಕಂಡೀಷನ್ ಖರ್ಚನ್ನು ಉಳಿಸಿತು. ಇತ್ತೀಚೆಗೆ ಅಮೆರಿಕದ ಪತ್ರಿಕೆಯೊಂದರಲ್ಲಿ ಓದಿದ ಒಂದು ತಮಾಷೆಯ ಪ್ರಸಂಗ.
‘ಎಲ್ಲಿದ್ದೀಯಾ?’ ಎಂದು ಬಾಸ್ ಕೇಳಿದ. ‘ನಾನು ಇನ್ನು ಮುಂದೆ ಪ್ರತಿ ಸೋಮವಾರವನ್ನು ಬಾಯ್ಕಾಟ್ ಮಾಡಲು ನಿರ್ಧರಿಸಿದ್ದೇನೆ’ ಎಂದೆ. ಅದೇಗೋ ಈ ವಿಷಯ ಎಡೆ ಹರಡಿತು. ಎಲ್ಲರೂ ಸೋಮವಾರ ಆಫೀಸಿಗೆ ಹೋಗದೇ ಮನೆಯಲ್ಲಿಯೇ ಉಳಿಯಲಾರಂಭಿಸಿದರು ಹಾಗೂ ಅವರೆಲ್ಲ ಈಗ ಮಂಗಳ ವಾರ ಅಂದ್ರೆ ಮೂಗು ಮುರಿಯಲಾರಂಭಿಸಿದ್ದಾರಂತೆ.
ಅಡ್ಡ ಪರಿಣಾಮ
ಇತ್ತೀಚೆಗೆ ಖ್ಯಾತ ವಕೀಲ ಪ್ರಶಾಂತ ಭೂಷಣ ಒಂದು ಟ್ವೀಟ್ ಮಾಡಿದ್ದರು. ಕೋವಿಶೀಲ್ಡ ವ್ಯಾಕ್ಸಿನ್‌ನ ಸೈಡ್ ಇಫೆಕ್ಟ್ ಬಗ್ಗೆ ಮಾಧ್ಯಮಗಳಲ್ಲಿ ವರದಿ ಯಾದ ಹಿನ್ನೆಲೆಯಲ್ಲಿ ಅವರು ಆ ಟ್ವೀಟ್ ಮಾಡಿದ್ದರು. ‘ಭಾರತದಲ್ಲಿ ಕೋವಿಶೀಲ್ಡ ಲಸಿಕೆಯ ಅಡ್ಡ ಪರಿಣಾಮದ ಬಗ್ಗೆ ಮಾಧ್ಯಮಗಳಲ್ಲಿ ಮೊದಲ ವರದಿ ಪ್ರಕಟವಾಗಿದೆ. ಲಸಿಕೆಯನ್ನು ಹಾಕಿಸಿಕೊಳ್ಳಲು ನಾನೇಕೆ ಹಿಂದೇಟು ಹಾಕಿದ್ದೇ ಎಂಬ ಬಗ್ಗೆ ನಾನು ೨೦೨೧ರಲ್ಲಿಯೇ ಲೇಖನ ಬರೆದು ನನ್ನ ಆತಂಕವನ್ನು ವ್ಯಕ್ತಪಡಿಸಿz. ಆ ಸಂದರ್ಭದಲ್ಲಿ ನನ್ನ ಈ ಅಧ್ಯಯನಪೂರ್ಣ ಲೇಖನವನ್ನು ಪ್ರಕಟಿಸಲು ಮುಖ್ಯವಾಹಿನಿ ಪತ್ರಿಕೆಗಳು ನಿರಾಕರಿಸಿದವು.’ ಎಂದು ಪ್ರಶಾಂತ ಭೂಷಣ ಟ್ವೀಟ್ ಮಾಡಿದ್ದರು.
ಅದಕ್ಕೆ ಡಾ.ವೇದು ಎನ್ನುವವರು ಹೀಗೆ ಪ್ರತಿಕ್ರಿಯಿಸಿದ್ದರು- ‘ಭೂಷಣ್ ಅವರೇ, ಕಾಂಡೋಮ್ ಸೇರಿದಂತೆ ಪ್ರತಿ ಔಷಧಕ್ಕೂ ಅಡ್ಡಪರಿಣಾಮ ಎಂಬುದು ಇದ್ದೇ ಇರುತ್ತದೆ. ನಿಮ್ಮ ತಂದೆಯವರು ಅದನ್ನು ಬಳಸಿಯೂ, ನೀವು ಹುಟ್ಟಿರಬಹುದು. ಹತ್ತು ಲಕ್ಷದಲ್ಲಿ ಒಬ್ಬರಿಗೆ ಕೋವಿಶೀಲ್ಡ ಅಡ್ಡಪರಿಣಾಮ
ತಟ್ಟಿರಬಹುದು. ಆದ್ದರಿಂದ ಜನರಲ್ಲಿ ಆತಂಕ ಸೃಷ್ಟಿಸುವ ನಿಮ್ಮ ಚಾಳಿಯನ್ನು ಬಿಟ್ಟುಬಿಡಿ. ಒಂದು ವೇಳೆ ಈ ಲಸಿಕೆಯನ್ನು ಕಾಂಗ್ರೆಸ್ ಸರಕಾರ ನೀಡಿದ್ದಿದ್ದರೆ ನೀವು ಸೊಂಟಕ್ಕೆ, ಭುಜಕ್ಕೆ ಸೇರಿದಂತೆ ಹತ್ತು ಲಸಿಕೆಗಳ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದೀರಿ.’
ಸೆಕ್ಸ್ ಮತ್ತು ಪತ್ನಿ ಮುಖ
ಟ್ವಿಟ್ಟರ್‌ನಲ್ಲಿ (ಈಗ ಎP) ಮಹಿಳೆಯೊಬ್ಬಳು, ಸೆಕ್ಸ್ ಮಾಡುವಾಗ ಗಂಡಸರು ತಮ್ಮ ಹೆಂಡತಿಯನ್ನು ನೋಡುತ್ತಾರಾ?’ ಎಂಬ ಪ್ರಶ್ನೆಯನ್ನು ಕೇಳಿದ್ದಳು. ಇಂಥ ಪ್ರಶ್ನೆಗಳನ್ನು ಓದಿ ಯಾರೂ ಸುಮ್ಮನಿರುವುದಿಲ್ಲ. ತಲೆಗೊಬ್ಬರು ತರಲೆ ಉತ್ತರ ಅಥವಾ ಪ್ರತಿಕ್ರಿಯೆ ನೀಡುತ್ತಾರೆ. ಈ ಪ್ರಶ್ನೆಗೆ ನೂರಕ್ಕೂ ಹೆಚ್ಚು ಜನ ಪ್ರತಿಕ್ರಿಯೆ ನೀಡಿದ್ದರು. ಆದರೆ ನನಗೆ ಒಂದು ಪ್ರತಿಕ್ರಿಯೆ ಇಷ್ಟವಾಯಿತು. ಕ್ಸೆವಿಯರ್ ಎನ್ನುವವರು ಹೀಗೆ ಬರೆದಿದ್ದರು – ನಾನು ಒಮ್ಮೆ ಅವಳ ಮುಖವನ್ನು ನೋಡಿದೆ. ಅವಳ ಮುಖ ಕೋಪದಲ್ಲಿ ಕುದಿಯುತ್ತಿತ್ತು. ಆಕೆ ಕಿಟಕಿಯಾಚೆಯಿಂದ ದುರುದುರು ನಮ್ಮನ್ನು ದಿಟ್ಟಿಸುತ್ತಿದ್ದಳು.’