ಮುಂಬೈ: ಮಹಾರಾಷ್ಟ್ರದ ವಿವಾದಿತ ಭಾರತೀಯ ಆಡಳಿತ ಸೇವೆ (ಐಎಎಸ್) ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅಕ್ರಮವಾಗಿ ರೆಡ್ಲೈಟ್ ಬಳಸಿದ್ದು, ಅದನ್ನೊಳಗೊಂಡ ಐಷಾರಾಮಿ ಆಡಿ ಕಾರನ್ನು ಪುಣೆ ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ.
ಪುಣೆಯ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ) ಖಾಸಗಿ ಕಂಪನಿಯೊಂದಕ್ಕೆ ನೋಟಿಸ್ ಜಾರಿ ಮಾಡಿದ್ದು, ಖೇಡ್ಕರ್ ಪ್ರೊಬೇಷನರಿಯಾಗಿ ನೇಮಕಗೊಂಡ ಸಂದರ್ಭದಲ್ಲಿ ಬಳಸುತ್ತಿದ್ದ ‘ಆಡಿ’ ಕಾರು ಈ ಕಂಪನಿಯ ಹೆಸರಿನಲ್ಲಿ ನೋಂದಣಿಯಾಗಿದೆ.
ಅಧಿಕಾರಿಗಳ ಪ್ರಕಾರ, ನೋಂದಾಯಿತ ಬಳಕೆದಾರರ ವಿಳಾಸವನ್ನು ಹವೇಲಿ ತಾಲೂಕಿನ ಶಿವನೆ ಗ್ರಾಮ ಎಂದು ನಮೂದಿಸಲಾಗಿದೆ. ಖೇಡ್ಕರ್ ಇತ್ತೀಚೆಗೆ ಪುಣೆಯಲ್ಲಿ ತನ್ನ ಪೋಸ್ಟಿಂಗ್ ಸಮಯದಲ್ಲಿ ಪ್ರತ್ಯೇಕ ಕೊಠಡಿ ಮತ್ತು ಸಿಬ್ಬಂದಿಗೆ ಬೇಡಿಕೆ ಇಟ್ಟು ವಿವಾದವನ್ನು ಸೃಷ್ಟಿಸಿದ್ದರು.
ಖೇಡ್ಕರ್ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾಗಲು ಅಂಗವೈಕಲ್ಯ ಮತ್ತು ಇತರೆ ಹಿಂದುಳಿದ ವರ್ಗ (ಒಬಿಸಿ) ಕೋಟಾವನ್ನು ದುರುಪಯೋಗಪಡಿಸಿ ಕೊಂಡಿದ್ದರು. ಅವರು ಆಡಿ ಕಾರಿನ ಮೇಲೆ ಕೆಂಪು ದೀಪವನ್ನು ಬಳಸಿದ್ದಾರೆ ಮತ್ತು ಅದರ ಮೇಲೆ ಅನುಮತಿಯಿಲ್ಲದೆ ‘ಮಹಾರಾಷ್ಟ್ರ ಸರ್ಕಾರ’ ಎಂದು ಬರೆಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ವಿವಾದದ ನಂತರ, ತರಬೇತಿ ಪೂರ್ಣಗೊಳ್ಳುವ ಮೊದಲೇ ಆಕೆಯನ್ನು ಪುಣೆಯಿಂದ ವಾಶಿಮ್ ಜಿಲ್ಲೆಗೆ ವರ್ಗಾಯಿಸಲಾಗಿದೆ. ಖೇಡ್ಕರ್ ಅವರು ಅನಧಿಕೃತವಾಗಿ ಕೆಂಪು ದೀಪ ಮತ್ತು ಸರ್ಕಾರಿ ಚಿಹ್ನೆಯನ್ನು ಬಳಸುತ್ತಿದ್ದ ಖಾಸಗಿ ಕಾರಿನ ಮೇಲೆ ಗುರುವಾರ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.