Sunday, 24th November 2024

ಹಲವು ಭಾವ ವಿವರಿಸಲು ಪದಗಳ ಅಭಾವ

ನೂರೆಂಟು ವಿಶ್ವ

vbhat@me.com

Words are not real. They dont have meaning. We do – John Koenig ನೀವು ಯಾವುದೇ ಪುಸ್ತಕವನ್ನು ಓದಲು ಶುರು ಮಾಡಿದರೆ ಮುಗಿಸ ಬಹುದಂತೆ. ಆದರೆ ಡಿಕ್ಷನರಿಯನ್ನು ಹಿಡಿದರೆ ಮುಗಿಸಲು ಆಗುವುದಿಲ್ಲವಂತೆ. ನಾನು ಈ ಡಿಕ್ಷನರಿಯನ್ನು ಸಂಪೂರ್ಣ ಓದಿ ಮುಗಿಸಿದ್ದೇನೆ ಎಂದು ಹೇಳಿದವರು ಇರಲಿಕ್ಕಿಲ್ಲ, ಅದನ್ನು ಬರೆದವರ ಹೊರತಾಗಿ. ಆದರೆ ನನಗೆ ಈ ಡಿಕ್ಷನರಿ ಓದುವ ಕಾಯಿಲೆ ಯಾವಾಗ ಅಂಟಿಕೊಂಡಿತೋ ಗೊತ್ತಿಲ್ಲ.

ದಿನದಲ್ಲಿ ಕನಿಷ್ಠ ಅರ್ಧಗಂಟೆಯಾದರೂ ಈ ‘ಕಾಯಿಲೆ’ಯಿಂದ ನರಳುತ್ತೇನೆ. ಒಂದೊಂದು ಪದ ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತದೆ. ಕೊನೆಗೆ, ಇಷ್ಟೆಲ್ಲ
ಪದಗಳ ಅಗತ್ಯವಿದೆಯಾ, ಯಾಕೆ ಬೇಕು ಇಷ್ಟೊಂದು ಪದಗಳು, ಇವುಗಳ ಅರ್ಥ ತಿಳಿದುಕೊಂಡು ಮಾಡುವುದಾದರೂ ಏನು, ಅಷ್ಟಕ್ಕೂ ಆ ಪದಗಳನ್ನು ನಾವು ನಮ್ಮ ಜೀವ ಮಾನದಲ್ಲಿಯೇ ಬಳಸುವುದಿಲ್ಲವಲ್ಲ ಎಂದು ಅನಿಸದಿರದು. ನಾನು ಲಂಡನ್‌ನ ‘ದಿ ಸನ್’ ಎಂಬ ದೈನಿಕ ಟ್ಯಾಬ್ಲಾಯಿಡ್ ನಲ್ಲಿ ಟ್ರೇನಿ ಪತ್ರಕರ್ತನಾಗಿ ಕೆಲಸ ಮಾಡುವಾಗ, ಸುದ್ದಿ ಸಂಪಾದಕ ರಿಚರ್ಡ್ ಮೂರ್ ಎಂಬಾತ, ಕಠಿಣ ಪದಗಳನ್ನು ಬಳಸಲು ಬಿಡುತ್ತಿರಲಿಲ್ಲ.

ಪೊಲೀಸ್ ಎಂದು ಬರೆದರೆ Cop ಎಂದು ತಿದ್ದುತ್ತಿದ್ದ. ಮೆಟ್ರೋಪಾಲಿಟನ್ ಎಂದು ಬರೆದರೆ ಸಿಟಿ ಎಂದು ಬರೆಯುತ್ತಿದ್ದ. ‘ಈ ೨೮೦ ಇಂಗ್ಲಿಷ್ ಪದಗಳ ಅರ್ಥ
ಮತ್ತು ಬಳಕೆ ಗೊತ್ತಿದ್ದರೆ ನೀವು ಉತ್ತಮ ಇಂಗ್ಲಿಷ್ ಪತ್ರಕರ್ತ ರಾಗುತ್ತೀರಿ’ ಎಂದು ಮೂರ್ ಯಾವತ್ತೂ ಹೇಳುತ್ತಿದ್ದ. ‘ನೀವು ಬಳಸಿದ ಪದದ ಅರ್ಥ ಓದುಗನಿಗೆ ತಿಳಿಯದೇ, ಅವನು ಅದಕ್ಕಾಗಿ ಡಿಕ್ಷನರಿ ನೋಡುವ ಕಷ್ಟ ಕೊಟ್ಟರೆ, ನೀವು ಕೆಟ್ಟ ಪತ್ರಕರ್ತರು. ಪತ್ರಿಕೆಯ ಜತೆಗೆ ಡಿಕ್ಷನರಿಯನ್ನೂ ಓದುಗರಿಗೆ ಉಚಿತವಾಗಿ ಕೊಡುವುದು ದುಬಾರಿ’ ಎಂದು ಕಿಚಾಯಿಸುತ್ತಿದ್ದ. ಅವನಿಗೆ ಯಾರಾದರೂ ಡಿಕ್ಷನರಿ ತೆರೆದು ನೋಡಿದರೆ ಮೈಯೆಲ್ಲ ಉರಿದು ಹೋಗುತ್ತಿತ್ತು. ‘ಡಿಕ್ಷನರಿ ಓದುವುದು
ಕೆಟ್ಟ ಅಭ್ಯಾಸ’ ಎಂದು ಸುದ್ದಿಮನೆಯಲ್ಲಿ ಸದಾ ವಟಗುಡುತ್ತಿದ್ದ.

ಪ್ರತಿಸಲ ಶಬ್ದಕೋಶ ಓದುವಾಗಲೆಲ್ಲ ಮೂರ್ ಹೇಳಿದ ಮಾತುಗಳು ನೆನಪಾಗುತ್ತವೆ. ಕೆಲವು ಪದಗಳನ್ನು ಪದಕೋಶದಲ್ಲಿ ಬಿಟ್ಟರೆ ಬೇರೆಲ್ಲೂ ಬಳಸಿಯೇ ಇಲ್ಲವಂತೆ. ಉದಾಹರಣೆಗೆ: Omphalos ಎಂಬ ಪದವನ್ನೇ ತೆಗೆದು ಕೊಳ್ಳೋಣ. ಯಾರೂ ಈ ಪದವನ್ನು ಬಳಸಿಲ್ಲವಂತೆ. ಕಾರಣ ಈ ಪದದ ಅರ್ಥ ಮಧ್ಯಭಾಗ ಅಥವಾ ಹೊಕ್ಕಳು. ಹೊಕ್ಕಳಿಗೆ ಇಂಗ್ಲಿಷಿನಲ್ಲಿ navel ಎಂಬ ಪದವಿದೆ. ಹೀಗಾಗಿ ಯಾರೂ omphalos ಎಂದು ಹೇಳುವುದಿಲ್ಲ. ಒಂದು ಅರ್ಥವನ್ನು
ಹೇಳುವ ಪದಗಳಿರುವಾಗ ಅದೇ ಅರ್ಥವನ್ನು ವಿವರಿಸುವ ಒಂದಕ್ಕಿಂತ ಹೆಚ್ಚು ಅಥವಾ ಹತ್ತಾರು ಪದಗಳ ಅಗತ್ಯವಿದೆಯಾ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಕೆಲವ ರಿಗೆ ಯಾರಿಗೂ ಅರ್ಥವಾಗದ, ದೊಡ್ಡ ದೊಡ್ಡ ಪದಗಳನ್ನು ಬಳಸುವ ಖಯಾಲಿ ಇರುತ್ತದೆ.

ಅಂಥ ಪದಗಳನ್ನು ಬಳಸಿದರೆ ತಮ್ಮನ್ನು ಮಹಾಬುದ್ಧಿವಂತ ಎಂದು ಭಾವಿಸುತ್ತಾರೆಂದು ಭ್ರಮಿಸುತ್ತಾರೆ. ‘ನಾನು ನಿನಗೆ ಒಂದು ಬಿಲ್ಲೆಯನ್ನೂ ಕೊಡೊಲ್ಲ, I will
not give you a penny ಎಂಬುದನ್ನು I will not give you farthing ಎಂದು ಹೇಳುತ್ತಾರೆ. ನೀವು farthing ಅಂದ್ರೆ ಏನು ಎಂಬುದನ್ನು ತಿಳಿಯಲು ಮಣ ಭಾರದ ಪದಕೋಶವನ್ನೇ ಎತ್ತಿಕೊಳ್ಳಬೇಕು. ಆ ಆಯಾಸವನ್ನು ನೆನೆದು ಅದರ ಅರ್ಥ ತಿಳಿಯುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ ಆ ಪದ ಕೊನೆ ತನಕ ನಮ್ಮದಾಗುವುದೇ ಇಲ್ಲ. ಇಂಥ ಅಸಂಖ್ಯ ಪದಗಳ ಸಂಗ್ರಹವೇ ಪದಕೋಶ. ಭಾಷೆ ಅಂದ್ರೆ ನದಿ ಇದ್ದಂತೆ. ಅದು ಸದಾ ಹರಿಯುತ್ತಲೇ ಇರುತ್ತದೆ. ಪದಕೋಶ ಅಂದ್ರೆ ಅಣೆಕಟ್ಟು ಇದ್ದಂತೆ. ಅದು ಒಂದೆಡೆ ನಿಶ್ಚಲವಾಗಿ ಸಂಗ್ರಹವಾಗಿರುತ್ತದೆ. ನಿಶ್ಚಲವಾಗಿರುವುದು ಕ್ರಮೇಣ ಜಡವಾಗುತ್ತಾ ಹೋಗುತ್ತದೆ. ಈ ಕಾರಣದಿಂದ ಪದಕೋಶದ ಮುಕ್ಕಾಲು ಪಾಲು ಪದಗಳು ವಾಕ್ಯದಲ್ಲಾಗಲಿ, ಮಾತಿನಲ್ಲಾಗಲಿ ಬಂದು ನಲಿಯುವುದೂ ಇಲ್ಲ, ನುಲಿಯುವುದೂ ಇಲ್ಲ. ಕನಿಷ್ಠಪಕ್ಷ ‘ನುಡಿ’ಯಾಗಿಯೂ ಸಾರ್ಥಕ್ಯ ಪಡೆಯುವುದಿಲ್ಲ. ಶಬ್ದವಾಗಿಯೂ ಸದ್ದು ಮಾಡುವುದಿಲ್ಲ.

ಶಬ್ದಕೋಶದಲ್ಲಿ ಹೂತು ಹೋಗಿರುತ್ತವೆ. ಹಾಗಿರುವಾಗ ಆ ಪದಗಳ ಪ್ರಯೋಜನವಾದರೂ ಏನು? ಬಳಸದೇ, ಬರೆಯದೇ ‘ಸ್ವಾಭಾವಿಕ ಮರಣ’ವನ್ನಪ್ಪಿದ ಸಾವಿರಾರು ಪದಗಳಿವೆ. ಇಂಗ್ಲೆಂಡಿನ ಭಾಷಾಪ್ರೇಮಿಗಳ ಸಂಘ ಹೀಗೆ ಅಸುನೀಗಿದ ಹದಿನೈದು ಸಾವಿರಕ್ಕೂ ಹೆಚ್ಚು ಪದಗಳನ್ನು ಪಟ್ಟಿ ಮಾಡಿ The
Dictionary of Dead Words ಎಂಬ ಕೃತಿ ಪ್ರಕಟಿಸಿದೆ. ಇದನ್ನು ಪ್ರಕಟಿಸಿದ ನಂತರವಾದರೂ ಅದರಲ್ಲಿನ ಕೆಲವು ಪದಗಳು ಬಳಕೆಗೆ ಬಂದು ಪುನರ್‌ಜನ್ಮ ಪಡೆಯಬಹುದೆಂಬ ಲೇಖಕರ ಆಶಯ ನುಚ್ಚುನೂರಾಗಿದೆ.

Dead Words ಬದಲಿಗೆ Unused words ಎಂದು ಎರಡನೆ ಆವೃತ್ತಿಗೆ ಶೀರ್ಷಿಕೆ ಬದಲಿಸಿದರೂ ಏನೂ ಪ್ರಯೋಜನವಾಗಿಲ್ಲ. ಉಪಯೋಗಕ್ಕೆ ಬಾರದ ಪದಗಳು ಎಂಬ ಹಣೆಪಟ್ಟಿ ಹಚ್ಚಿ ಹೊರ ಹಾಕಿದ ನಂತರ ಅವುಗಳನ್ನು ಯಾರು ಒಳಬಿಟ್ಟುಕೊಂಡಾರು? ಭಾಷಾವಿಜ್ಞಾನಿಗಳು, ಪ್ರಾಧ್ಯಾಪಕರು ಅಕೆಡೆಮಿಕ್ ಆಸಕ್ತಿಯಿಂದ ಮಾತ್ರ ಈ ಪದಕೋಶವನ್ನು ನೋಡಬಹುದು. ಆದರೆ ನಾನು ಇತ್ತೀಚೆಗೆ ಜಾನ್ ಕಿಯೋನಿಗ್ ಬರೆದ The Dictionary of Obscure
Sorrows ಎಂಬ ವಿಚಿತ್ರ ವಾದ ಪದಕೋಶವನ್ನು ಓದುತ್ತಿದ್ದೆ. ಕಿಯೋನಿಗ್‌ನ ಪ್ರಕಾರ ಇಂಗ್ಲಿಷ್ ಭಾಷೆ ಎಲ್ಲ ಭಾಷೆಗಳಿಂದ ಎರವಲು ಪದಗಳನ್ನು ತೆಗೆದು ಕೊಂಡಿದ್ದರೂ, ಜಗತ್ತಿನ ಯಾವುದೇ ಮೂಲೆಯಲ್ಲಿ ಇಂಗ್ಲಿಷಿನಲ್ಲಿ ಫಿಟ್ ಆಗಿ ಕುಳಿತುಕೊಳ್ಳುವ ಪದಗಳನ್ನು ತಕ್ಷಣ ತನ್ನದಾಗಿ ಮಾಡಿಕೊಳ್ಳುತ್ತದೆ.

ಅದಕ್ಕೆ ಪುರಾವೆಯಾಗಿ ಪದಕೋಶ ದಲ್ಲಿ ಆ ಪದವನ್ನು ಸೇರಿಸಿಕೊಂಡು ಬಿಡುತ್ತದೆ. ಆದರೂ ಕೆಲವು ಭಾವನೆಗಳನ್ನು ಹೇಳಲು ಇಂಗ್ಲಿಷ್ ಪದಕೋಶದಲ್ಲಿ ಸೂಕ್ತವಾದ ಪದಗಳೇ ಇಲ್ಲ. ಒಂದೆಡೆ ಉಪಯೋಗಿಸದೇ ನಿರುಪಯುಕ್ತವಾದ, Dead words, ಇನ್ನೊಂದೆಡೆ ಭಾವನೆಗಳನ್ನು ತೋಡಿಕೊಳ್ಳಲು ಪದಗಳೇ ಇಲ್ಲದಂಥ ಸ್ಥಿತಿ. ಉದಾ ಹರಣೆಗೆ, ಕೆಲವರು ನೈಸರ್ಗಿಕ ಪ್ರಕೋಪ ಆಗಲಿ ಎಂದು ಕನವರಿಸುತ್ತಿರುತ್ತಾರಂತೆ. ಇನ್ನು ಕೆಲವರು ಆಕಾಶದಲ್ಲಿ ಹಾರುವ ವಿಮಾನವನ್ನು ಕಂಡಾಗ ಅದು crash ಆಗಿ ಬೀಳಬಾರದಿತ್ತಾ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರಂತೆ. ಅಂಥ ದೃಶ್ಯಕ್ಕೆ ತಾನು ಪ್ರತ್ಯಕ್ಷದರ್ಶಿಯಾಗಬೇಕು ಎಂಬುದಷ್ಟೇ ಅವರ ಆಶಯ. ಒಟ್ಟಾರೆ ಯಾಗಿ ಅವರ ಮುಂದೆ ಏನಾದರೂ ಒಂದು ದುರಂತ ಸಂಭವಿಸಬೇಕು. ಆದರೆ ಅವರಿಗೆ ಅದರಿಂದ ಯಾವ ನಷ್ಟವೂ ಆಗ ಬಾರದು. ಅಂಥ ದುರಂತದಿಂದ ಲಾಭ ಮಾಡಿಕೊಳ್ಳುವುದು ಹೇಗೆ ಎಂದು ಅಕಲು ಹಾಕುತ್ತಿರುತ್ತಾರೆ.

Everybody loves good drought ಅಂತಾರಲ್ಲ ಹಾಗೆ. ಇಂಥ ಒಂದು ವಿಚಿತ್ರ ಮನೋಭಾವವನ್ನು (hunger for disaster) ಹೇಳಲು ಇಂಗ್ಲಿಷಿನಲ್ಲಿ ಒಂದು ಶಬ್ದವೇ ಇಲ್ಲ! ಆದರೆ ಗ್ರೀಕ್‌ನಲ್ಲಿ ಈ ಭಾವನೆಯನ್ನು ನಿಖರವಾಗಿ ಹೇಳಲು lachesism ಎಂಬ ಪದವಿದೆ. ಇಂಗ್ಲಿಷ್ ಪದಕೋಶದಲ್ಲಿ ಯಥಾವತ್ತಾಗಿ ಆರಿಸಿಕೊಳ್ಳಲಾಗಿದೆ. ಬಾಲ್ಯದ ಆನಂದದ ಕ್ಷಣಗಳನ್ನು ನೆನಪಿಸಿಕೊಂಡು ಪುನಃ ಬಾಲ್ಯಕ್ಕೆ ಮರಳಿದರೆ ಎಷ್ಟು ಚೆನ್ನಾಗಿತ್ತೆಂದು ಕನವರಿಸುವುದನ್ನು ಬಣ್ಣಿಸುವು ದೆಂತು? ಅಂಥ ಒಂದು ಮಧುರ ಭಾವವನ್ನು ಒಂದು ಪದದಲ್ಲಿ ಹೇಳಲು ಸಾಧ್ಯವಿಲ್ಲ. ಕಾರಣ ಈ ಭಾವನೆಯನ್ನು ಹೇಳಲು ಒಂದು ಪದವಿಲ್ಲ. ಆದರೆ ಮಂಡಾರಿನ್
ಭಾಷೆಯಲ್ಲಿ ಮಾತ್ರ‘Yuyi’ ಎಂಬ ಪದವಿದೆಯಂತೆ. ಬೇರೆ ಯಾವ ಭಾಷೆಗಳಲ್ಲೂ ಪದಗಳಿಲ್ಲ. ನೀವು ನಿಮಗೆ ಇಷ್ಟವಾದ ವರ ಜತೆ ಕಾಲ್ಪನಿಕ ಸಂಭಾಷಣೆಯಲ್ಲಿ (hypothetical conversation) ನಿರತರಾಗಿರುತ್ತೀರಿ. ಕನ್ನಡದಲ್ಲಿ ಇದಕ್ಕೆ ಮನಸ್ಸಿನಲ್ಲಿ ಮಂಡಿಗೆ ತಿನ್ನುವುದು ಎಂಬ ಪ್ರಯೋಗವಿದೆ.

ಆದರೆ ಈ ಕಲ್ಪನೆಯ ಸಾರವನ್ನು ಒಂದು ಪದದಲ್ಲಿ ಹೇಳೋಣ ಅಂದ್ರೆ ಶಬ್ದವೇ ಇಲ್ಲ. ಆದರೆ ಪೋಲಿಷ್ ಭಾಷೆಯಲ್ಲಿ jouska ಎಂಬ ಪದವಿದೆ. ಅದು ನಿಖರವಾಗಿ ಈ ಭಾವನೆಯನ್ನು ಕಟ್ಟಿಕೊಡುತ್ತದೆ. ಜಗತ್ತು ರಭಸದಲ್ಲಿ ಮುನ್ನುಗ್ಗುತ್ತಿದೆ. ತಂತ್ರಜ್ಞಾನ ನಮ್ಮ ಜೀವನವಿಧಾನ, ಚಿಂತನಾಕ್ರಮವನ್ನು ಬದಲಿಸಿದೆ. ಹಿಂದೆಂದೂ ಯೋಚಿಸದ, ಅನುಭವಿಸದ ಪ್ರಸಂಗ, ಸಂಗತಿಗಳು ಮುಖಾಮುಖಿಯಾದಾಗ ಅವುಗಳನ್ನು ಬಣ್ಣಿಸಲು ಅಥವಾ ಹೇಳಲು ನಮಗೆ ಪದಗಳೇ ಸಿಗುವುದಿಲ್ಲ ಅಥವಾ ಹೊಸ ಪದಗಳು ಬೇಕಾಗುತ್ತವೆ. ಯುರೋಪಿಯನ್ ಯೂನಿಯನ್‌ನಿಂದ ಏಕಾಏಕಿ ಹೊರಹೋಗಲು ಬ್ರಿಟನ್ ನಿರ್ಧರಿಸಿತು.

ಈ ಸಂಬಂಧ ದೇಶಾದ್ಯಂತ ಜನಮತಗಣನೆಯಾಯಿತು. ಇಂಥದ್ದೊಂದು ಕಸರತ್ತು ಹಿಂದೆಂದೂ ನಡೆದಿರಲೇ ಇಲ್ಲ. ಹೀಗಾಗಿ ಈ ಪ್ರಕ್ರಿಯೆಯನ್ನು ವಿವರಿಸುವ
ಪದವೂ ಶಬ್ದಕೋಶದಲ್ಲಿ ಇದ್ದಿರಲಿಲ್ಲ. ಆದರೆ ಪದವಿಲ್ಲವೆಂದು ಸುಮ್ಮನಿರುವಂತಿಲ್ಲವಲ್ಲ. ಯಾವನೋ ಶಬ್ದಬ್ರಹ್ಮ (wordsmith) (Britain Exit- Brit Exist Brexit) ಎಂಬ ಹೊಸ ಪದವನ್ನು ಟಂಕಿಸಿದ. ಅದು ರಾತ್ರಿ ಬೆಳಗಾಗುವುದರೊಳಗೆ ಜಗತ್ಪ್ರಸಿದ್ಧವಾಯಿತು. ಇದಕ್ಕಿಂತ ಪರಿಣಾಮಕಾರಿಯಾದ ಮತ್ತೊಂದು ಪದ ಇರಲಿಕ್ಕಿಲ್ಲ. ಈಗ ಈ ಪದ ಇಂಗ್ಲಿಷ್ ಡಿಕ್ಷನರಿ ಸೇರಿದೆ.

ಇದೇ ಮಾತನ್ನು ಪ್ರಧಾನಿ ಮೋದಿಯವರು ಐನೂರು, ಸಾವಿರ ರುಪಾಯಿ ನೋಟುಗಳನ್ನು ನಿಷೇಧಿಸಿದಾಗ ಉಂಟಾದ ಪರಿಸ್ಥಿತಿಗೂ ಹೇಳಬಹುದು. ಆ ದಿನ ರಾತ್ರಿ ಎಲ್ಲ ಸುದ್ದಿಮನೆಯಲ್ಲೂ ಇದೇ ಚರ್ಚೆ. ಇಡೀ ಪ್ರಕ್ರಿಯೆಗೆ ಏನಂತ ಕರೆಯೋದು ಎಂಬ ತಾಕಲಾಟ. ಇಂಗ್ಲಿಷ್‌ನಲ್ಲಿ ಇದನ್ನು demonetization ಅಂತ ಕರೆದರು. ಕನ್ನಡದಲ್ಲಿ ಏನನ್ನೋದು? ಅಪಮೌಲ್ಯೀಕರಣ, ಅಪನಗದೀಕರಣ, ನೋಟು ಅಮಾನ್ಯ….ಹೀಗೆ ಒಂದೊಂದು ಪತ್ರಿಕೆ ಒಂದೊಂದು ಪದವನ್ನು ಬಳಸಿದವು. ಹಿಂದಿ ಪತ್ರಿಕೆಗಳು ನೋಟ್‌ಬಂದಿ ಎಂದು ಕರೆದವು. ನಾವು ಇಡೀ ಪ್ರಕ್ರಿಯೆಯನ್ನು ‘ನೋಟ್ಯಂತರ’ ಎಂದು ಕರೆದವು.

ಇಂಥದ್ದೊಂದು ಕ್ರಮವನ್ನು ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಯಾರೂ ಕೈಗೊಂಡಿರಲಿಲ್ಲ. ಹೀಗಾಗಿ ಅದನ್ನು ಸಮರ್ಥವಾಗಿ ಬಣ್ಣಿಸುವ ಪದಗಳು ನಮ್ಮಲ್ಲಿ ಇರಲಿಲ್ಲ. ಇಂದಿಗೂ ಕೆಲವು ಭಾವನೆಗಳನ್ನು ಹೇಳಲು ನಮ್ಮಲ್ಲಿ ಸೂಕ್ತ ಪದಗಳೇ ಇಲ್ಲ. ಉದಾಹರಣೆಗೆ, ಒಂದು ಆಹಾರದ ರುಚಿಯಂತೆ ಮತ್ತೊಂದು ಇದ್ದರೆ, ಒಂದು ಹಣ್ಣು, ಪದಾರ್ಥದ ರುಚಿಯಂತೆ ಮತ್ತೊಂದು ಸಹ ಇದ್ದರೆ ಅದಕ್ಕೆ ಏನನ್ನೋದು? ಪತ್ರಕರ್ತ ವೈಯೆನ್ಕೆ ಅವರು ಬಹಳ ವರ್ಷಗಳವರೆಗೆ ಹೀಗೊಂದು ಪದ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತೆಂದೂ, ಅಂಥ ಪದವೇನಾದರೂ ಇದ್ದಿರಬಹುದೆಂದೂ ಭಾಷೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು ಸಿಕ್ಕಾಗ ಕೇಳುತ್ತಿದ್ದರು. ಅದೇನೆಂದರೆ, ಆ ಪದಕ್ಕೆ ಯಾವುದೇ ಅರ್ಥವಿರಬಾರದು. ಆದರೆ ಯಾವುದಾದರೂ ಪದದ ಬದಲಿಗೆ ಅದನ್ನು ಎಲ್ಲಿ ಬೇಕಾದರೂ ಬಳಸಬಹುದು.

ಅಂಥ ಪದವೇನಾದರೂ ಇದೆಯಾ? ಈ ಪ್ರಶ್ನೆಯನ್ನು ಅವರು ಗುಲ್ವಾಡಿ, ಕಾರ್ನಾಡ್, ಟಿಜೆಎಸ್ ಜಾರ್ಜ್, ಪಾವೆಂ…. ಹೀಗೆ ಅನೇಕರನ್ನು ಕೇಳಿದ್ದರು. ಯಾರಿಂದಲೂ ಸಮರ್ಪಕ ಉತ್ತರ ಸಿಕ್ಕಿರಲಿಲ್ಲ. ‘ಅಂಥದ್ದೊಂದು ಪದ ಇರಬೇಕಿತ್ತು’ ಎಂದು ಚಡಪಡಿಸುತ್ತಿದ್ದರು. ಇತ್ತೀಚೆಗೆ The Dictonary Of Obscure Sorrows ಓದುವಾಗ ಅಂಥದ್ದೊಂದು ಪದ ಸಿಕ್ಕಿತು. ವೈಯೆನ್ಕೆ ಇದ್ದಿದ್ದರೆ ಎಷ್ಟು ಖುಷಿ ಪಡುತ್ತಿದ್ದರು ಎಂದೆನಿಸಿತು. ಆ ಪದ Eglaf. ಅದರ ಅರ್ಥವನ್ನು ಹೀಗೆ ವಿವರಿಸಿದ್ದರು-A word that has no meaning; can be used in place of any other word. (ಆದರೆ ಈ ಪದವನ್ನು ಇತ್ತೀಚೆಗೆ ಸೇರಿಸಿದ್ದು)

ಕೆಲವು ಸಣ್ಣಪುಟ್ಟ ಪ್ರಸಂಗಗಳನ್ನು ಹೇಳಲು ಸಹ ನಮ್ಮಲ್ಲಿ ಒಳ್ಳೆಯ ಪದಗಳಿಲ್ಲ. ಉದಾಹರಣೆಗೆ, ಕಾರು ಹೊರಟ ತಕ್ಷಣ ಕೆಲವರು ನಿದ್ದೆ ಮಾಡಲಾರಂಭಿಸುತ್ತಾರೆ. ಇದಕ್ಕೇನು ಹೇಳುವುದು, ಇಂಥವರಿಗೆ ಏನೆಂದು ಕರೆಯೋದು? ಕೆಲದಿನಗಳ ಹಿಂದೆ ಇದೇ ಪ್ರಶ್ನೆಯನ್ನು ಲಂಡನ್‌ನ ‘ದಿ ಗಾರ್ಡಿಯನ್’ ಪತ್ರಿಕೆ ತನ್ನ ಓದುಗರಿಗೆ ಕೇಳಿ, ತಮಗೆ ಹೊಳೆಯುವ ಪದವನ್ನು ಸೂಚಿಸುವಂತೆ ವಿನಂತಿಸಿಕೊಂಡಿತು. ಸಾವಿರಾರು ಪದಗಳು ಓದುಗರಿಂದ ಹರಿದು ಬಂದವು. ಅಂತಿಮವಾಗಿ, Carcolepsy ಎಂಬ ಪದವನ್ನು ಆಯ್ಕೆ ಮಾಡಲಾಯಿತು.

ಅಮೆರಿಕನ್‌ರಿಗೆ ಒಂದು ವಿಚಿತ್ರ ಖಯಾಲಿ ಇದೆ. ಅದೇನೆಂದರೆ ತಾವೇ ಅದನ್ನು ಕಂಡು ಹಿಡಿದಿದ್ದು ಎಂಬ ಹಿರಿಮೆ, ಹೆಗ್ಗಳಿಕೆ. ಹಾಗಂತ ಅದು ಹಲವು ವರ್ಷ, ದಶಕ
ಗಳಿಂದ ಅಲ್ಲಿಯೇ ಇರುತ್ತದೆ. ಆದರೂ ತಮ್ಮಿಂದಾಗಿಯೇ ಅದು ಜಗತ್ತಿಗೆ ತಿಳಿಯಿತು ಎಂಬುದನ್ನು ಅವರು ಟಾಂಟಾಂ ಮಾಡುತ್ತಾರೆ. ಈ ಖಯಾಲಿಗೆ ಏನೆಂದು ಹೇಳುವುದು? Elite Daily ಎಂಬ ಪತ್ರಿಕೆ ಓದುಗರಿಂದ ಸಲಹೆಗಳನ್ನು ಅಪೇಕ್ಷಿಸಿದಾಗ ಮೂಡಿಬಂದ ಸುಂದರ ಪದವೆಂದರೆ- Columbusing. ಕೊಲಂಬಸ್ ಕಂಡುಹಿಡಿದಿದ್ದು ಮೊದಲೇ ಇದ್ದಿದ್ದನ್ನು ತಾನೆ? ಹೊಸತೇನನ್ನೂ ಅಲ್ಲವಲ್ಲ? ಇವುಗಳನ್ನು ಭಾಷಾತಜ್ಞರು ಸುಲಭಕ್ಕೆ ಸ್ವೀಕರಿಸುವುದಿಲ್ಲ. ಅವರ ಪ್ರಕಾರ ಇವು Made-Up Words. ಆದರೆ ಹೊಸ ಪದಗಳನ್ನು ಹುಟ್ಟು ಹಾಕುವುದು ಸುಲಭ ಅಲ್ಲ ಎಂಬುದು ಅವರಿಗೂ ಗೊತ್ತಿದೆ.

Made-Up ಪದಗಳು ಬಹುಬೇಗ ಸ್ವೀಕಾರವಾಗುತ್ತದೆಂಬುದನ್ನು ಅವರೂ ಒಪ್ಪುತ್ತಾರೆ. ನೀವು ನಿಮ್ಮ ಮನೆಯಲ್ಲಿ ಹೆಚ್ಚು ಆತ್ಮವಿಶ್ವಾಸದಿಂದ ಇರುತ್ತೀರಿ. ಬೇರೆಡೆ ಹೋದಾಗ ಪರಕೀಯರಾಗಿರುತ್ತೀರಿ. ನಿಮಗೆ ಖಡಾಖಡಿ ವರ್ತಿಸಲು ಸಾಧ್ಯವಾಗುವುದಿಲ್ಲ. ಈ ಕಾರಣ ದಿಂದ ಕೆಲವರು ಮಹತ್ವದ ಮಾತುಕತೆ, ಒಪ್ಪಂದವನ್ನು ತಮ್ಮ ಮನೆಯಲ್ಲೇ ಆಗಲಿ ಎಂದು ಹಠ ಹಿಡಿಯುತ್ತಾರೆ. ಬೇರೆಯ ವರ ಮನೆ ಬಾಗಿಲಿಗೆ ಯಾಕೆ ಹೋಗಬೇಕು ಎಂಬ ಭಾವನೆ. ಈ ಯೋಚನೆ ಯನ್ನು ನಾವೆಲ್ಲರೂ ಆಗಾಗ ಅನುಭವಿಸುತ್ತೇವೆ. The place where you are your most authentic self ಅಂತಾರಲ್ಲ. ಅದಕ್ಕೆ ಏನನ್ನೋದು? ಕನ್ನಡದಲ್ಲಿ ಈ ಭಾವನೆ, ಗ್ರಹಿಕೆಗೆ ಯಾವ ಪದವಿದೆ? ನಾವು ಯಾರನ್ನಾದರೂ ಭೇಟಿಯಾದಾಗ ಅವರ ಬುದ್ಧಿವಂತಿಕೆಗೆ ಬಹಳ ಆಕರ್ಷಿತರಾಗುತ್ತೇವೆ.

ಅವರ ರೂಪ, ಸ್ಥಾನಮಾನ, ವ್ಯಕ್ತಿತ್ವ, ಹಣ, ಶ್ರೀಮಂತಿಕೆ…. ಯಾವುದೂ ನಮಗೆ ಮುಖ್ಯ ಅಲ್ಲ. ಬರೀ ಬುದ್ಧಿವಂತಿಕೆಗೆ ಮಾತ್ರ ಒಲಿಯುತ್ತೇವೆ. ಈ ಭಾವನೆಯನ್ನು ಯಾವ ಪದದಿಂದ ವ್ಯಕ್ತಪಡಿಸೋದು? ನೀರಿನ ಮೇಲೆ ಬಿದ್ದ ಚಂದಿರನ ಬೆಳಕನ್ನು ಬಣ್ಣಿಸುವ ಪದ ಯಾವುದು? ಮಣ್ಣಿನ ವಾಸನೆಯನ್ನು ಒಂದೇ ಪದದಲ್ಲಿ ಹೇಳಲು ಸಾಧ್ಯವಾ? ಮನಸ್ಸಿನಲ್ಲಿದೆ ಆದರೆ ಬಾಯಲ್ಲಿ ಬರೊಲ್ಲ, ಅದಕ್ಕೇನು ಹೇಳುವುದು? ಬೆಂಕಿಪೊಟ್ಟಣ ದಿಂದ ಕಡ್ಡಿ ತೆಗೆದು ಎಷ್ಟೇ ಗೀರಿದರೂ ಬೆಂಕಿ ಹೊತ್ತಿಕೊಳ್ಳು ವುದೇ ಇಲ್ಲ, ಇದನ್ನು ಬಣ್ಣಿಸುವ ಪದ ಯಾವುದು? ಇಂದು ನಮಗೆ ಶಬ್ದಬ್ರಹ್ಮರು ಬೇಕಾಗಿದ್ದಾರೆ. ಅವರ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಿದೆ ಎಂದು ಅನಿಸುವುದಿಲ್ಲವಾ?