ಶಶಾಂಕಣ
shashidhara.halady@gmail.com
ಕೆಲವು ಕುಳ್ಳ, ಕೆಲವು ಎತ್ತರ, ಕೆಲವು ದಪ್ಪ, ಕೆಲವು ಸಪೂರ, ಕೆಲವುಗಳ ತುಂಬಾ ದಟ್ಟ ಹಸಿರೆಲೆ, ಅದೆಷ್ಟು ದಟ್ಟವೆಂದರೆ ಅಂತಹ ಮರಗಳಲ್ಲಿ ಯಾರಾದರೂ ಅಡಗಿ ಕುಳಿತರೆ ಕಾಣದೇ ಇರುವಷ್ಟು! ಆದ್ದರಿಂದಲೇ ಇರಬೇಕು, ಅಂತಹ ಕೆಲವು ದಟ್ಟ ಎಲೆಗಳ ಬೃಹತ್ ಮರಗಳಲ್ಲಿ ಭೂತಗಳು ವಾಸಿಸುತ್ತಿದ್ದವು ಎಂದು ನಮ್ಮೂರಿನವರು ಹೆದರುತ್ತಿದ್ದರು.
ಗೆಳೆತನದ ವ್ಯಾಖ್ಯಾನ ಒಂದೊಂದು ಕಡೆ, ಒಬ್ಬೊಬ್ಬರಿಗೆ ವಿಭಿನ್ನ ರೀತಿಯಲ್ಲೂ ಇರಬಹುದು. ಸದಾಕಾಲ ಸ್ನೇಹದಿಂದಿದ್ದು, ಸಹಾಯ ಮಾಡುತ್ತಾ, ನಮ್ಮ ಮನಸ್ಸಿನ ನೆಮ್ಮದಿಗೆ ತಮ್ಮ ಕೊಡುಗೆಯನ್ನು ಕೊಡುವವರು ಗೆಳಯರು ಎನ್ನಬಹುದು; ಸದಾ ನಮ್ಮ ಒಳಿತನ್ನು ಬಯಸುವವರ ಜತೆಯಲ್ಲಿ ನಮ್ಮ ಗೆಳೆತನದ ನಂಟು ಇದ್ದರೆ ಒಳ್ಳೆಯದೇ ತಾನೆ? ನಮ್ಮ ಹಳ್ಳಿಯ ಮನೆಯ ಸುತ್ತಲೂ ನಾನಾ ರೀತಿಯ ಮರಗಳಿದ್ದವು. ಅತ್ತ ನೋಡಿದರೂ ಮರ, ಇತ್ತ ನೋಡಿದರೂ ಮರ; ಮನೆ ಎದುರಿನಲ್ಲಿ ಮಾವಿನ ಮರ, ಅಲ್ಲೇ ಆಚೆ ಪೇರಳೆ ಮರ, ಎಡಭಾಗದಲ್ಲಿ ಅಡಕೆ ಮರ, ಇನ್ನಷ್ಟು ದೂರದಲ್ಲಿ ಹಲಸಿನ ಮರ, ಅಮಟೆ ಮರ, ಹೆಬ್ಬಲಸಿನ ಮರ, ದೀವಿ ಹಲಸಿನ ಮರ, ಹುಣಸೆ ಮರ, ಕಾಟುಮಾವಿನ – ಎಲ್ಲವೂ ಮನೆ ಎದುರು ನಿಂತು ದಿಟ್ಟಿ ಹಾಯಿಸಿದರೆ ಕಾಣಿಸುವಷ್ಟು ಹತ್ತಿರದಲ್ಲಿ!
ಇದರ ಜತೆ ಮನೆಯ ಮೇಲೂ ಚಾಚಿಕೊಂಡ ಒಂದೆರಡು ತೆಂಗಿನ ಮರಗಳು! ನಮ್ಮ ಮನೆಯ ಸುತ್ತಮುತ್ತ ನನಗಿದ್ದ ಸಹಪಾಠಿಗಳು ಕೇವಲ ಬೆರಳೆಣಿಕೆಯಷ್ಟು. ಮಲೆನಾಡಿನ ಸೆರಗಿನಲ್ಲಿದ್ದ ನಮ್ಮೂರಿನಲ್ಲಿ ಒಂದು ಮನೆಗೂ ಇನ್ನೊಂದು ಮನೆಗೂ ಸಾಕಷ್ಟು ಅಂತರ. ಕೆಲವು ಮನೆಗಳೇ ಒಂದು ಹಳ್ಳಿಯಾಗಿಯೂ ಗುರುತಿಸು ವಂತಹ ಮನೆಗಳಿದ್ದವು. ಹೀಗಾಗಿ, ಮೂರ‍್ನಾಲಕ್ಕು ಕಿ.ಮೀ. ಸುತ್ತಳತೆಯ ನಮ್ಮೂರಿನಲ್ಲಿ ನನಗೆ ಗೆಳೆಯರಾಗಿ ದೊರೆಯುತ್ತಿದ್ದ ಸಹಪಾಠಿಗಳು ಬೆರಳೆಣಿಕೆಯಷ್ಟು ಮಾತ್ರ. ನಮ್ಮ ಮನೆಯ ಸುತ್ತ ಮುತ್ತ ಇದ್ದ ಇಂತಹ ಸಹಪಾಠಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದುದು ಮರಗಳು!
ನಮ್ಮ ಮನೆಯ ಸುತ್ತ ಹರಡಿದ್ದ ಮರಗಳು, ಹೂವಿನ ಗಿಡಗಳು, ಕೆಲವು ಬಳ್ಳಿಗಳು, ಮರಸಣಿಗೆ ಗಿಡದಂತೆ ಗಡ್ಡೆಯ ಗಿಡಗಳು ನನ್ನ ಗೆಳಯರಾಗಿದ್ದರು! ಹೇಗೆಂದು ಕೇಳುತ್ತೀರಾ? ದೀರ್ಘ ಕಾಲದ ಒಡನಾಟದ ಮೂಲಕ, ದಿನ ನಿತ್ಯ ಬೆಳಗಾಗೆದ್ದ ಕೂಡಲೆ ದೃಷ್ಟಿಗೆ ಬೀಳುವ ಈ ಮರಗಿಡಗಳೇ ನನ್ನ ಗೆಳೆಯ, ಗೆಳತಿಯರೇ ಆಗಿದ್ದವು ಎಂದರೆ, ಅದು ಅಚ್ಚರಿಯೂ ಅಲ್ಲ, ಅತಿಶಯೋಕ್ತಿಯೂ ಅಲ್ಲ. ಆ ಮರಗಳಲ್ಲಿ ಅದೆಷ್ಟು ವೈವಿಧ್ಯ! ಕೆಲವು ಕುಳ್ಳ, ಕೆಲವು ಎತ್ತರ, ಕೆಲವು ದಪ್ಪ, ಕೆಲವು ಸಪೂರ, ಕೆಲವುಗಳ ತುಂಬಾ ದಟ್ಟ ಹಸಿರೆಲೆ, ಅದೆಷ್ಟು ದಟ್ಟವೆಂದರೆ ಅಂತಹ ಮರಗಳಲ್ಲಿ ಯಾರಾದರೂ ಅಡಗಿ ಕುಳಿತರೆ ಕಾಣದೇ ಇರುವಷ್ಟು! ಆದ್ದರಿಂದಲೇ ಇರಬೇಕು, ಅಂತಹ ಕೆಲವು ದಟ್ಟ ಎಲೆಗಳ ಬೃಹತ್ ಮರಗಳಲ್ಲಿ ಭೂತಗಳು ವಾಸಿಸುತ್ತಿದ್ದವು ಎಂದು ನಮ್ಮೂರಿನವರು ಹೆದರುತ್ತಿದ್ದರು.
ಇನ್ನು ಕೆಲವು ಮರಗಳ ಎಲೆಗಳು ವಿರಳ, ತೆಳು. ಕೆಲವು ಮರ ಬೋಳು, ಬೋಳು, ನೆಟ್ಟಗೆ ಏಕಾಂಗಿಯಾಗಿ ಬೆಳೆದು ನಿಂತಿರುತ್ತಿದ್ದವು. ಇನ್ನೂ ಕೆಲವು ಮರಗಳು ವಿಶಾಲವಾಗಿ ಹರಡಿಕೊಂಡು, ರೆಂಬೆಕೊಂಬೆಗಳನ್ನು ಬಾನಿನುದ್ದಕ್ಕೂ ಚಾಚಿರುತ್ತವೆ. ಮಾತ್ರವಲ್ಲ, ತಮ್ಮ ಮಡಿಲಿನಲ್ಲಿ ಹಾವಸೆ, ಬಂದಳಿಕೆ, ಅಪ್ಪುಬಳ್ಳಿ, ಮರಕೆಸ ದಂತಹ ಪುಟಾಣಿ ಗಿಡಗಳಿಗೆ ಆಶ್ರಯ ನೀಡುತ್ತವೆ. ಹಕ್ಕಿ, ಪ್ರಾಣಿಗಳೂ ಅಷ್ಟೆ – ಕೆಲವು ಮರಗಳನ್ನು ಹುಡುಕಿಕೊಂಡು, ಹೋಗಿ ಅಲ್ಲೇ ಬೀಡುಬಿಟ್ಟು,ಅಲ್ಲೇ ಗೂಡು ಕಟ್ಟಿ, ಮರಗಳು ನೀಡುವ ಹಣ್ಣು, ಮಕರಂದಗಳನ್ನು ಸೇವಿಸಿ, ಆ ಮರದ ಆತಿಥ್ಯ ಪಡೆಯುವಲ್ಲಿ ಖುಷಿ ಕಾಣುತ್ತಿದ್ದವು.
ನಮ್ಮ ಮನೆಯ ಸುತ್ತಲಿದ್ದ ಮರಗಳಿಗೂ, ಮಾನವರಿಗೂ ಒಂದು ಸಾಮ್ಯತೆಯನ್ನು ನಾನು ಕಂಡಿದ್ದೇನೆ. ಇಂತಹದ್ದೇ ಗುಣದ ಕೆಲವು ಮನುಷ್ಯರನ್ನು ನೀವು ನೋಡಿರಬಹುದು – ಅಂದರೆ ಸದಾಕಾಲ ಗೆಳೆಯರ ಗುಂಪನ್ನು ಕಟ್ಟಿಕೊಂಡು, ಅವರಿಗೆ ಸಹಾಯ ಮಾಡುತ್ತಾ, ಕೆಲವರಿಗೆ ಆಹಾರ, ಪಾನೀಯ ನೀಡುತ್ತಾ, ಕೈಲಾದ ಸಹಾಯ ಮಾಡುತ್ತಿರುತ್ತಾರೆ. ಇನ್ನು ಕೆಲವು ಮರಗಳು ಯಾವ ಹಕ್ಕಿ ಪಕ್ಷಿಗೂ ಆತಿಥ್ಯ ನೀಡದೇ ಇರುವಂತಹವು, ನೆರಳನ್ನೂ ಕೊಡದಂತಹವು, ಯಾವ ಪ್ರಾಣಿಗೂ ಆಶ್ರಯ ನೀಡದೇ ಇರುವಂತಹವು – ಅಕೇಶಿಯಾ ದಂತಹ ಬರಡು ಮರಗಳು.
ದೀರ್ಘಕಾಲ ನಮ್ಮ ಮನೆಯ ಸುತ್ತಲೂ ಬೆಳೆದುಕೊಂಡಿದ್ದ ಹಲವು ಮರಗಳು ನಾನಾ ರೀತಿಯ ಸಹಾಯ ಮಾಡುತ್ತಿದ್ದವು! ಹಲವು ಬಾರಿ ನೇರ ಮತ್ತು ಪರೋಕ್ಷ ಸಹಾಯ ನೀಡಿ, ಸಿಹಿಹಣ್ಣುಗಳನ್ನು ತಿನ್ನಲು ಕೊಟ್ಟು, ಸುವಾಸಿತ ಹೂವುಗಳನ್ನು ನೀಡಿ, ಗುಡುಗು ಮಳೆ ಬಂದಾಗ ರಕ್ಷಣೆ ನೀಡಿದ ಆ ಮರಗಳು, ನನ್ನ ಬಾಲ್ಯ ಸ್ನೇಹಿತರಾಗಿ ಪರಿವರ್ತನೆಗೊಂಡದ್ದು, ನಿಸರ್ಗ ಸಹಜ ಕ್ರಿಯೆಯೇ ಇರಬೇಕು. ನಮ್ಮ ಮನೆಯ ಸುತ್ತಲೂ ಇದ್ದ ಮರಗಳ ಗುಣ ವಿಶೇಷತೆಗಳ ಬಗ್ಗೆ ಹೇಳುತ್ತಾ ಹೋದರೆ, ಅದು ಹಲವು ಪುಟಗಳ ಸುದೀರ್ಘ ಕಥನವೇ ಆದೀತು. ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ ಕೆಲವು ಮರಗಳ ಸವಿನೆನಪನ್ನು ಮಾತ್ರ ಇಲ್ಲಿ
ಹಂಚಿಕೊಳ್ಳಲು ಪ್ರಯತ್ನಿಸುವೆ.
ನಮ್ಮ ಮನೆ ಎದುರಿನ ಗದ್ದೆಬೈಲನ್ನು ದಾಟಿದ ನಂತರ ಸಿಗುವ ಹಾಡಿಯ ನಡುವಿನ ಕಾಲ್ದಾರಿಯನ್ನು ಅನುಸರಿಸಿ ಪ್ರತಿದಿನ ಶಾಲೆಗೆ ಹೋಗುವ ಶಿಸ್ತು
ನಮ್ಮದು. ನಾನಾಗ ಮೂರನೆಯ ತರಗತಿಯಲ್ಲಿದ್ದೆ. ಎಂದಿನಂತೆ ಸ್ಲೇಟು, ಬಳಪ ಮತ್ತು ಆ ತರಗತಿಗೆ ಆಗ ಇದ್ದ ಏಕೈಕ ಪಠ್ಯಪುಸ್ತಕವನ್ನು ಪುಟ್ಟ ಬಟ್ಟೆಯ ಚೀಲಕ್ಕೆ
ತುಂಬಿಕೊಂಡು, ಗದ್ದೆಯ ಅಂಚಿನಲ್ಲಿ ಸಾಗಿ, ಒಂದು -ರ‍್ಲಾಂಗು ದೂರದ ಮುಡಾರಿ ತಲುಪಿದಾಗ ಒಂದು ಪುಟ್ಟ ವಿರಾಮ. ಮುಡಾರಿ ಮನೆಯಿಂದ ಇಬ್ಬರು ಅಥವಾ ಮೂವರು ಮಕ್ಕಳೊಡಗೂಡಿ, ಆ ಮನೆಯ ಹಿಂಭಾಗದ ಹಾಡಿಯ ನಡುವೆ ಸಾಗುತ್ತಿತ್ತು ನಮ್ಮ ದಾರಿ. ಆ ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ಮರಗಳು, ಗಿಡಗಳು, ಬಳ್ಳಿಗಳು. ಅವುಗಳ ಸಂಖ್ಯೆ ಅಕ್ಷರಶಃ ನೂರಾರು.
ಒಂದು ದಿನ ಶಾಲೆಯಿಂದ ವಾಪಸಾಗುವಾಗ, ಆ ಮರಗಳ ಪೈಕಿ ಒಂದು ಮಧ್ಯಮ ಗಾತ್ರದ ಒಂದನ್ನು ಏರಿದ ಸಹಪಾಠಿ ಸತ್ಯನು, ಕೆಂಪನೆಯ ಹಣ್ಣುಗಳನ್ನು
ಕಿತ್ತು ಕೆಳಗೆಸೆದ. ನಾವೆಲ್ಲರೂ ಆರಿಸಿಕೊಂಡೆವು. ಅದೇಕೋ ಆ ವರೆಗೆ ಆ ರೀತಿಯ ಹಣ್ಣುಗಳನ್ನೇ ನೋಡಿರದ ನನಗೆ, ಅವುಗಳನ್ನು ಬಿಡಿಸಿದಾಗ ಬಹು
ಅಚ್ಚರಿ! ಕೆಂಪನೆಯ ಆ ಹಣ್ಣಿನೊಳಗೆ ಗುಲಾಬಿ ಬಣ್ಣದ ನಾಲ್ಕಾರು ತೊಳೆಗಳು. ಬಾಯಲ್ಲಿಟ್ಟರೆ ಬಹು ರುಚಿಕರ, ಹುಳಿ ಮಿಶ್ರಿತ ಸಿಹಿ; ಮಾಂಸಲ ಭಾಗವನ್ನು ತಿಂದು ಬೀಜವನ್ನು ಉಗಿಯಬೇಕು. ಆ ಅದ್ಭುತ ರುಚಿಯನ್ನು ಸವಿದ ನನಗೆ, ಆ ಮರವೊಂದು ವಿಸ್ಮಯ ಎನಿಸಿತು. ಆ ಮರವನ್ನು ನಮ್ಮೂರಿನಲ್ಲಿ ಮುರಿನ ಮರ (ಪುನರ್ಪುಳಿ) ಎನ್ನುತ್ತಿದ್ದರು.
ಮುರಿನ ಹಣ್ಣನ್ನು ತಿಂದು, ಅವರ ರುಚಿಗೆ ಬೆರಗಾದ ನಾನು, ಶಾಲೆಯಿಂದ ಮನೆಗೆ ಮರಳಿದ ಕೂಡಲೇ ಆ ಸವಿಯನ್ನು ನಮ್ಮ ಅಮ್ಮಮ್ಮನ ಬಳಿ ವರ್ಣಿಸಿದೆ.
ಅವರು ನಿರ್ಲಿಪ್ತ ಭಾವದಿಂದ ಕೇಳಿ, ನೀರಸದನಿಯಲ್ಲಿ ‘ಓ ಅದಾ, ಅದು ಮುರಿನ ಹಣ್ಣು. ನಮ್ಮ ಮನೆ ಹಿಂದಿನ ಹಕ್ಕಲಿನಲ್ಲೂ ಆ ಮರ ಉಂಟು’ ಎಂದರು. ನನಗೆ ಹೊಸದಾಗಿ ಪರಿಚಯವಾಗಿದ್ದ ಆ ಮರವು, ಅವರಿಗೆ ಬಾಲ್ಯದಿಂದಲೂ ಪರಿಚಿತ! ಮುರಿನ ಹಣ್ಣು ಮನುಷ್ಯರಿಗೆ ಸಹಾಯವನ್ನೂ ಮಾಡುತ್ತದೆ! ಹಣ್ಣಿನ ತೊಗಟೆ ಯನ್ನು ಒಣಗಿಸಿಟ್ಟುಕೊಂಡು, ಮಳೆಗಾಲದಲ್ಲೂ ಚಳಿಗಾಲದಲ್ಲೂ ಸಾರು, ತಂಬುಳಿ, ಪಾನಕ, ಗೊಜ್ಜು ತಯಾರಿಸಬಹುದು! ಮುರಿನ ಹಣ್ಣಿನ ಆ ಸಿಪ್ಪೆಯಲ್ಲಿ ನಾನಾ ರೀತಿಯ ಔಷಽಯ ಗುಣಗಳೂ ಇವೆಯಂತೆ!
ತಿಳಿಸಾರು ಮಾಡಲು ಹಣ್ಣಿನ ತೊಗಟೆ ನೀಡುವ ಪುನರ್ಪುಳಿ ಮರದ ಹತ್ತಿರವೇ, ಬೃಹದಾಕಾರದ ಇನ್ನೊಂದು ಮರವಿತ್ತು. ಊಟಕ್ಕೆ ನಂಜಿಕೊಳ್ಳಲು, ಹಪ್ಪಳ ಕರಿಯಲು, ಬೋಂಡಾ ಮಾಡಲು, ಹಲಸಿನ ಹಣ್ಣಿನ ಮುಳಕ ಮಾಡಲು ಅಗತ್ಯವಿರುವ ಎಣ್ಣೆ ಯನ್ನು ಈ ಮರದ ಕಾಯಿಯಿಂದ ತಯಾರಿಸುತ್ತಿದ್ದರು. ಅಂದಿನ ದಿನಗಳಲ್ಲಿ, ಅಂದರೆ ಇಪ್ಪತ್ತನೆಯ ಶತಮಾನದ ಮೊದಲರ್ಧದಲ್ಲಿ, ನಮ್ಮೂರಲ್ಲಿ ೧೯೭೫ರ ತನಕವೂ ಅಡುಗೆಗೆ ಬೇಕಾದ ಎಣ್ಣೆಯನ್ನು ನಮಗೆಲ್ಲಾ ನೀಡುತ್ತಿದ್ದ ಇನ್ನೊಬ್ಬ ಗೆಳೆಯ ಎಂದರೆ, ಇದೇ ದೂಪದ ಮರ. ಪ್ರತಿ ಮಳೆಗಾಲದಲ್ಲಿ ದೂಪದ ಮರ ಕೆಳಗೆ ಬೀಳಿಸುತ್ತಿದ್ದ ಸಾವಿರಾರು ಕಾಯಿಗಳನ್ನು ಹೆಕ್ಕಿತಂದು, ಬಿಡಿಸಿ, ತಿರುಳನ್ನು ಅರೆದು, ಬೇಯಿಸಿ ಮೇಲೆ ತೇಲುವ ಎಣ್ಣೆಯನ್ನು ಸಂಗ್ರಹಿಸಿ, ವರ್ಷಪೂರ್ತಿ ಉಪಯೋಗಿಸಬಹುದಿತ್ತು!
ಅಡುಗೆಗೆ ಎಣ್ಣೆಯನ್ನು ನೀಡುವ, ಗೆಳೆಯನಂತಿರುವ ದೂಪದ ಮರವು, ಈಗ ತನ್ನ ಪ್ರಾಮುಖ್ಯತೆ ಕಳೆದುಕೊಂಡಿದೆ. ದೂಪದ ಎಣ್ಣೆಯು ಕ್ರಿಕೆಟ್ ಬಾಲ್ ರೀತಿ ಕಾಣಿಸುವ, ನೆಲದ ಮೇಲೆ ಉರುಳಿಸಿ ಬಿಡಬಹುದಾದಂತಹ ಬಿಳಿ ಉಂಡೆ. ಆದರೆ, ೧೯೮೦ರ ದಶಕದ ನಂತರ, ಈ ಸ್ನೇಹಜೀವಿ ಮರದ ಕಾಯಿಗಳಿಂದ ಎಣ್ಣೆ ಉಂಡೆಗಳನ್ನು ತಯಾರಿಸುವ ಪದ್ಧತಿ ನಮ್ಮೂರಿನಲ್ಲಿ ನಿಂತುಹೋಯಿತು. ಅಂಗಡಿಗಳಲ್ಲಿ ಸಿಗುವ ಕಡಿಮೆ ಬೆಲೆಯ ಪಾಮ್ ಆಯಿಲ್ ಅಥವಾ ಪಾಮ್‌ಆಯಿಲ್ ಮಿಶ್ರಿತ ಕಡಲೆಕಾಯಿ ಎಣ್ಣೆಯನ್ನು ದುಡ್ಡುಕೊಟ್ಟು ತರುವುದೇ ಹೆಚ್ಚು ಸುಲಭ ಎಂದು ಎಲ್ಲರೂ ನಿರ್ಧರಿಸಿದ್ದರಿಂದ, ದೂಪದ ಎಣ್ಣೆ ಮಾಡುವ ಪದ್ಧತಿಯೇ ಮರೆಯಾಗಿದೆ.
ಮನೆ ಎದುರಿನ ಹಾಡಿಯಲ್ಲಿದ್ದ ಬೃಹದಾಕಾರದ ದೂಪದ ಮರಗಳ ಸಂಖ್ಯೆಯೂ ಈಗ ಕಡಿಮೆಯಾಗಿದೆ. ಅಲ್ಲೇಲ್ಲಾ ಈಗ ಕಳೆಸ್ವರೂಪಿ ಅಕೇಶಿಯಯಾ ಮರಗಳ ಹಾವಳಿ. ನಮ್ಮ ಮನೆಗೆ ತಾಗಿಕೊಂಡಂತೆ ಬೆಳೆದುನಿಂತಿದ್ದ ಕೆಲವು ಮರಗಳ ವಿಚಾರ ಸ್ವಾರಸ್ಯಕರ. ಹೂವು ನೀಡುವ ಬಾಗಾಳು ಮರ, ಉಪ್ಪಿನ ಕಾಯಿ
ಮಾಡಲು, ಸಾಂಬಾರಿಗೆ ಹಾಕಲು ಕಾಯಿ ಕೊಡುವ ಅಮಟೆಕಾಯಿ ಮರ, ರುಚಿಕರ ಹಣ್ಣು ನೀಡುವ ಹೆಬ್ಬಲಸಿನ ಮರ, ಹುಣಸೆ ಬದಲಿಗೆ ಉಪಯೋಗಿಸುವ ಕಾಯಿ ನೀಡುವ ಬಿಂಬಲಿಕಾಯಿ ಮರ, ಮಾವಿನ ಮರ, ಹಲಸಿನ ಮರ, ದಾಸವಾಳದ ಪುಟ್ಟ ಮರ (ನಿಜ, ಮರದ ರೀತಿ ಬೆಳೆದ ಬಿಳಿ ದಾಸವಾಳದ ಗಿಡ), ಹಂಗಾರು ಮರ, ಇವೆಲ್ಲವೂ ನಮ್ಮ ಮನೆಯ ಸುತ್ತಲೂ ಸುಮಾರು ೫೦ ಮೀಟರ್ ಅಂತರದಲ್ಲಿ ಬೆಳೆದು ನಿಂತಿದ್ದವು. ಈ ಮರಗಳು ನಮ್ಮ ಮನೆ ಸುತ್ತ ಹರಡದೇ ಇದ್ದರೆ, ಅಷ್ಟರ ಮಟ್ಟಿಗೆ ನಮ್ಮ ಅಡುಗೆಯ ರುಚಿ, ವೈವಿಧ್ಯ ಸೊರಗುತ್ತಿತ್ತೆಂಬುದಂತೂ ನಿಜ.
ಇವುಗಳ ನಡುವೆ ಸ್ಥಾನ ಪಡೆದಿರುವ ದಾಸವಾಳ ಮತ್ತು ಹಂಗಾರದ ಕುರಿತು ಕೆಲವು ಸಾಲು ಬರೆಯಲೇ ಬೇಕು. ನಮ್ಮ ಮನೆ ಅಂಗಳದಾಚೆ ಇರುವ ಹಟ್ಟಿಯ ಹಿಂಭಾಗದಲ್ಲಿ, ಎರಡು ಅಡಿ ಅಗಲವಿರುವ ಪುಟ್ಟ ತೋಡು ಒಂದಿದೆ. ತೋಟದಾಚೆಯಿರುವ ಅಗೇಡಿಯಲ್ಲಿ ಸುಗ್ಗಿಯ ಕಾಲದಲ್ಲಿ ಬತ್ತ ಬೆಳೆಯಲು ನೀರು ಸಾಗಿಸುವ ಕಾಲುವೆ ಅದು. ಆ ನೀರಿನ ತೊರೆಗೆ ತಾಗಿಕೊಂಡಂತೆ, ಎರಡು ದಾಸವಾಳ ಗಿಡಗಳು ಬೆಳೆದಿದ್ದವು. ಅವುಗಳನ್ನು ಗಿಡ ಎಂದು ಕರೆಯಲಾಗದಷ್ಟು ಎತ್ತರವಾಗಿ ಬೆಳೆದಿದ್ದವು. ಆ ಎರಡು ದಾಸವಾಳದ ಮರಗಳು ಅಲ್ಲಿ ತಲೆ ಎತ್ತಿ ನಿಂತಿದ್ದು, ಕೇವಲ ಹೂಗಿಡಗಳ ರೂಪದಲ್ಲಿ ಮಾತ್ರವಲ್ಲ, ಬದಲಿಗೆ ಆಹಾರಕ್ಕೆ ಎಲೆಗಳನ್ನು ಒದಗಿಸುವ ಮರಗಳ ರೀತಿ! ಆ ಎರಡು ದಾಸವಾಳ ಗಿಡಗಳ ಎಲೆಗಳಿಗೆ ನಮ್ಮ ಹಳ್ಳಿಯಲ್ಲಿ ಎಲ್ಲಿಲ್ಲದ ಬೇಡಿಕೆ!
ಆ ಎಲೆಗಳನ್ನು ಅಕ್ಕಿ ಹಿಟ್ಟಿನ ಜತೆ ಮಿಶ್ರಣಮಾಡಿ, ಅರೆದು ಸೆಕೆಹಿಟ್ಟು (ಇಡ್ಲಿಯ ಹಳ್ಳಿರೂಪ) ಮಾಡಿ ತಿಂದರೆ, ಆರೋಗ್ಯಕ್ಕೆ ಉತ್ತಮ. ನಮ್ಮ ತೋಟದಲ್ಲಿದ್ದ
ಆ ಎರಡು ದಾಸವಾಳದ ಪುಟಾಣಿ ಮರಗಳು ‘ಬಿಳಿ ದಾಸವಾಳ’ ಪ್ರಭೇದದವು. ಪ್ರತಿ ದಿನ ಹತ್ತಾರು ಬಿಳಿ ಹೂವುಗಳನ್ನು ಬಿಡುತ್ತಿದ್ದು, ಅವುಗಳನ್ನು ಕೊಯ್ದು ದೇವರ ಪೂಜೆಗೆ ಬಳಸುತ್ತಿದ್ದ ಪದ್ಧತಿ ಇದ್ದದ್ದೇ. ಅದರ ಜತೆ, ಆ ದಾಸವಾಳದ ಎಲೆಗಳಲ್ಲಿದ್ದ ಔಷಧಿಯ ಗುಣಗಳಿಂದಾಗಿ, ಆಹಾರದ ಜತೆ ಅವುಗಳನ್ನು ಬೇಯಿಸಿ ತಿನ್ನುವ ಪರಿಪಾಠ ಸಣ್ಣ ಮಟ್ಟದ ವಿಸ್ಮಯವೇ ಸರಿ. ಇದೇ ರೀತಿ ಔಷಧಿಯ ಸಸ್ಯವಾಗಿ, ನಮ್ಮ ಮನೆಯವರ ಗೆಳೆಯನಾಗಿದ್ದು ಎಂದರೆ ಹಂಗಾರ ಮರ. ಮೈತುಂಬಾ ಮುಳ್ಳು ಹೊಂದಿದ್ದ, ಆ ಮೆದುಮರದ ತೊಗಟೆಯು ಜ್ವರ ಕಡಿಮೆ ಮಾಡುವಲ್ಲಿ ರಾಮಬಾಣ. ಆಗಿನ್ನೂ ನಮ್ಮ ಹಳ್ಳಿ ಯಲ್ಲಿ ಕ್ಲಿನಿಕ್ ಅಥವಾ ಆಸ್ಪತ್ರೆ ಇರಲಿಲ್ಲ. ಸುತ್ತಮುತ್ತ ಯಾರಿಗೇ ಮೂರು ಸೊರ ಸೊರವಾದರೆ, ಮೈ ಬೆಚ್ಚಗಾಗಿ ಜ್ವರ ಬಂದರೆ, ಅದೇ ಸಂಜೆ ಹಂಗಾರ ಮರದ ಎರಡಿಂಚು ತೊಗಟೆಯನ್ನು ಕೆತ್ತಿ, ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಕುಡಿಸುವ ಪರಿಪಾಠ.
ಹಂಗಾರ ಕೆತ್ತೆ ಕಷಾಯಕ್ಕೆ ಮೆಣಸಿನ ಕಾಳನ್ನು ಪುಡಿಮಾಡಿ ಕುದಿಸಿದರಂತೂ, ಹೆಚ್ಚಿನ ಜ್ವರಗಳು ಓಡಿಹೋಗುತ್ತಿದ್ದವು. ಹಂಗಾರು ಮರವು ಮಕ್ಕಳ ಜತೆ ಬೇರೊಂದು ರೀತಿಯಲ್ಲಿ ಸ್ನೇಹಿತ – ಅರ್ಧ ಸೆಂಟಿಮೀಟರ್ ಉದ್ದನೆಯ ಅದರ ಕೆಂಪನೆಯ ಬೀಜಗಳು ಚೆನ್ನೆಮಣೆ ಆಡಲು ಚಂದವಾದ್ದರಿಂದ, ಸದಾಕಾಲ ಮಕ್ಕಳ ಜೇಬಿನಲ್ಲಿ ಅವುಗಳ ರಾಶಿ! ಮನೆಯವರ ದಿನಚರಿಯಲ್ಲಿ ಆಹಾರವಾಗಿ, ಔಷಧವಾಗಿ, ಹಣ್ಣು ಒದಗಿಸುವ ಆಕರವಾಗಿ ಮನೆ ಸುತ್ತಲೂ ಬೆಳೆದಿದ್ದ ಇಂತಹ ಮರಗಳು, ನಮ್ಮೆಲ್ಲರ ಜತೆ ಗೆಳೆತನದ ನಂಟು ಹೊಂದಿದ್ದರಲ್ಲಿ ಅಚ್ಚರಿ ಇಲ್ಲ, ಅಲ್ಲವೆ?