Friday, 22nd November 2024

ಅಪಘಾತದಲ್ಲಿ ವಿದ್ಯಾರ್ಥಿನಿ ದುರ್ಮರಣ: ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಕುಟುಂಬ

ತಿಪಟೂರು: ನಗರದ ಹುಳಿಯಾರ್ ರಸ್ತೆಯಲ್ಲಿ ಶಾಲೆ ಮುಗಿಸಿಕೊಂಡು ಮನೆಗೆ ವಾಪಸ್ ಆಗುವ ಸಂದರ್ಭ ಪ್ರಶಾಂತ ವೈನ್ಸ್ ಮುಂಭಾಗ ಕಳೆದ ಮಂಗಳವಾರ ವಿವೇಕಾನಂದ ಇಂಟರ್ನ್ಯಾಷನಲ್ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ಚಂದನ.ವಿ (13 ವರ್ಷ) ರಸ್ತೆ ಅಪಘಾತಕ್ಕೀಡಾಗಿ ಆತನನ್ನು ಹಾಸನದ ಮಹಾಲಕ್ಷ್ಮಿ ಮಂಜಪ್ಪ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಗೆ ಕರೆದೊಯ್ಯ ಲಾಯಿತು.

ಖಾಸಗಿ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ವಿದ್ಯಾರ್ಥಿನಿಯ ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯ ಗೊಂಡಿದ್ದು, ವಿದ್ಯಾರ್ಥಿನಿಗೆ ನೀಡುತ್ತಿರುವ ಚಿಕಿತ್ಸೆ ಫಲಿಸುವುದಿಲ್ಲ ಎಂಬುದು ವೈದ್ಯರು ಖಚಿತಪಡಿಸಿದ ನಂತರ ವಿದ್ಯಾರ್ಥಿನಿ ತಂದೆ ವಸಂತ್ ಕುಮಾರ್, ತಾಯಿ ದಿವ್ಯ ತನ್ನ ಮಗಳ ಅಂಗಾಂಗ ದಾನ ಮಾಡುವುದಾಗಿ ನಿರ್ಧರಿಸಿದರು.

ನಿಮ್ಮ ಮಗಳ ಅಂಗಾಂಗಗಳು ಆರು ಜನರಿಗೆ ಉಪಯೋಗಕ್ಕೆ ಬರುತ್ತದೆ ಎಂದು ವೈದ್ಯರುತಿಳಿಸಿದ್ದಾರೆ.

ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದು, ಇತರೆ ಪೋಷಕರಿಗೂ ಮಾದರಿಯಾದ ಚಂದನಳ ಪೋಷಕರು.

ಅಪ್ರಾಪ್ತ ಬಾಲಕಿಯ ಅಂಗಾಂಗ ದಾನ ಮಾಡಿರುವುದು ಜಿಲ್ಲೆಯಲ್ಲಿ ಇದೆ ಪ್ರಥಮ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ನಗರದ ಹಾಸನ ವೃತ್ತದಿಂದ ಬಿಎಚ್ ರಸ್ತೆಯ ಮೂಲಕ ಹಳೆಪಾಳ್ಯದ ಅವರ ಮನೆಯವರೆಗೆ ಚಂದನಳ ಪಾರ್ಥಿವ ಶರೀರವನ್ನು ಸಾವಿರಾರು ಸಂಖ್ಯೆ ಯಲ್ಲಿ ಸೇರಿದ್ದ, ಸಾರ್ವಜನಿಕರು ಹಾಗೂ ಸರಕಾರಿ ಅಧಿಕಾರಿಗಳು ಸರಕಾರಿ ಗೌರವದೊಂದಿಗೆ ಮೆರವಣಿಗೆ ಮೂಲಕ ಕರೆ ತರಲಾಯಿತು.

ಇನ್ನು ವಿವೇಕಾನಂದ ಇಂಟರ್ನ್ಯಾಷನಲ್ ಶಾಲಾ ಸಿಬ್ಬಂದಿ ಶಾಲಾ ಮುಂಭಾಗದಲ್ಲಿ ವಿದ್ಯಾರ್ಥಿನಿ ಚಂದನಳಿಗೆ ಭಾವಪೂರ್ಣ ಶ್ರದ್ಧಾಂಜಲಿಯೊಂದಿಗೆ ಮೌನಾಚರಣೆ ಮಾಡಿದರು. ಶಾಲಾ ವ್ಯವಸ್ಥಾಪಕರು ದಿನ ಶಾಲೆಗೆ ರಜೆ ಘೋಷಣೆ ಮಾಡಿದ್ದು, ತಂದೆ ತಾಯಿಯ ಈ ಧಾರಾಳತನಕ್ಕೆ ಜಿಲ್ಲೆಯಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಪಾರ್ಥಿವ ಶರೀರದ ಮೆರವಣಿಗೆಯ ಸಂದರ್ಭದಲ್ಲಿ ಉಪವಿಭಾಗ ಅಧಿಕಾರಿ ಸಪ್ತಶ್ರೀ, ತಾಲೂಕು ದಂಡಾಧಿಕಾರಿ ಪವನ್ ಕುಮಾರ್, ಡಿವೈಎಸ್ಪಿ ವಿನಾಯಕ ಶೆಟ್ಟಿಗೆರಿ, ತಾಲೂಕು ಪಂಚಾಯಿತಿ ಈಓ ಸುದರ್ಶನ್, ನಗರಸಭೆ ಆಯುಕ್ತ ವಿಶ್ವೇಶ್ವರಯ್ಯ ಬದರಗಡೆ, ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಬಿಜೆಪಿ ಮುಖಂಡ ಲೋಕೇಶ್ವರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಡೆನೂರು ಕಾಂತರಾಜು, ಶಾಲಾ ವ್ಯವಸ್ಥಾಪಕ ಡಾ.ಕೇಶವಕುಮಾರ್, ಶಾಲಾ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.