Saturday, 23rd November 2024

ಒಲಿಂಪಿಕ್ಸ್- ನಮ್ಮದೇಕೆ ಕಂಚಿನ ತಗಡಿನ ತುತ್ತೂರಿ !

ಶಿಶಿರಕಾಲ

shishirh@gmail.com

ಒಲಿಂಪಿಕ್ಸ್ ಪಂದ್ಯಾವಳಿ ಬಂತೆದರೆ ಮೆಡಲ್‌ಗಳ ಸುದ್ದಿ, ಸಂಭ್ರಮ, ಲೆಕ್ಕಾಚಾರ. ಇಂತಹ ಜಾಗತಿಕ ವೇದಿಕೆಯಲ್ಲಿ ಯಾವುದೇ ಮೆಡಲ್ ಪಡೆಯುವುದೂ ದೊಡ್ಡ ವಿಷಯವೇ. ಒಲಿಂಪಿಕ್ಸ್‌ನಲ್ಲಿ ಕಂಚು ಪಡೆಯುವುದೂ ಕಿರಿದಲ್ಲ. ಇಲ್ಲಿ ಕಂಚಿಗೂ ಬೆಳ್ಳಿ, ಬಂಗಾರಕ್ಕೂ ಇರುವ ಅಂತರ ತೀರಾ ಕೂದಲೆಳೆಯದು. ಒಂದೆರಡು ಮೈಕ್ರೊಸೆಕೆಂಡ್, ಒಂದೆರಡು ಮಿಲಿಮೀಟರ್‌ನಷ್ಟು ಅತಿ ಚಿಕ್ಕ ಅಂತರ.

ಕಂಚಿಗೂ ಮತ್ತು ಮೆಡಲ್ ಪಡೆಯದ ನಾಲ್ಕು,  ಐದಾರನೇ ಸ್ಥಾನಕ್ಕೂ ಇರುವ ವ್ಯತ್ಯಾಸ ಕೂಡ ಅಷ್ಟೆ ಚಿಕ್ಕದು. ಕಂಚು ಗೆದ್ದರೆ ಏನೋ ಒಂದು ಲೆಕ್ಕದ ಸಾಧನೆ, ಮರ್ಯಾದಿ. ಆದರೆ ಉಗುರಿನಂಚಿನ ಅಂತರದ ನಾಲ್ಕನೇ ಸ್ಥಾನಕ್ಕೆ ಬೆಲೆಯೇ ಇಲ್ಲ. ನಾಲ್ಕನೇ ಸ್ಥಾನಕ್ಕೂ ಕೊನೆಯ ಸ್ಥಾನಕ್ಕೂ ವ್ಯತ್ಯಾಸವಿಲ್ಲ.
ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ಹೇಳಿಕೊಳ್ಳುವ, ಸಂಭ್ರಮ ಪಡುವ ಕ್ರೀಡಾಪಟುಗಳು ನಾಲ್ಕನೇ ಸ್ಥಾನ ಪಡೆದಲ್ಲಿ ಅದನ್ನು ಹೇಳಿಕೊಳ್ಳುವ ಸ್ಥಿತಿಯಲ್ಲಿ ಯೂ ಇರುವುದಿಲ್ಲ.

ಮೆಡಲ್ ಪಡೆದಿಲ್ಲವೆಂದರೆ ಕ್ರೀಡಾಪಟು ಪೂರ್ಣ ಸೋತಂತೆ. ಆಡುವುದೇ ಮುಖ್ಯ, ಗೆಲ್ಲುವುದು ಮುಖ್ಯವಲ್ಲ ಎನ್ನುವುದು ಸುಮ್ಮನೆ ಬಾಯಿ ಮಾತಿಗೆ ಆಗಬಹುದು. ಆದರೆ ಒಲಿಂಪಿಕ್ಸ್‌ನಲ್ಲಿ ಎಲ್ಲರೂ ಭಾಗವಹಿಸುವುದು ಚಿನ್ನದ ಹೆಗ್ಗಳಿಕೆಗಾಗಿ. ಯಾರೇ ಭಾಗವಿಸುವಾಗಲೂ ಎಲ್ಲರೂ ಹರಸುವುದು
Go for the gold ! ಎಂದೇ. ಚಿನ್ನ, ಬೆಳ್ಳಿ, ಕಂಚು ಎಂಬುದು ಇಲ್ಲಿ ಕೇವಲ ಲೋಹದ ತುಂಡಲ್ಲ. ಚಿನ್ನ ಗೆದ್ದವನು ಆ ಆಟದಲ್ಲಿ ಜಗತ್ತಿನ ಅತ್ಯಂತ ಶ್ರೇಷ್ಠ. ಪದಕ ಗೆಲ್ಲದಿದ್ದರೆ ಆ ಕ್ರೀಡಾಪಟುವಿನ ಜೀವಮಾನದ ಎಲ್ಲ ತಯಾರಿಗಳು, ಅಷ್ಟು ಆಯುಷ್ಯ ಎಲ್ಲವೂ ನೀರಿನಲ್ಲಿ ಮಾಡಿದ ಹೋಮ. ಹಾಗಂತ
ಕೇವಲ ತಾಲೀಮು ಹೆಚ್ಚು ನಡೆಸಿದ ಕಾರಣಕ್ಕೆ ಪದಕ ಬಂದುಬಿಡುವುದಿಲ್ಲ.

ತಿನ್ನುವ ಆಹಾರದಿಂದ ಹಿಡಿದು ದೇಹದ ತೂಕ, ಅಂಗ ರಚನೆ, ಜೀ ಎಲ್ಲವೂ ಸಂಬಂಧಿತ ವಿಷಯವೇ ಆಗಿರುತ್ತದೆ. ಯಾವುದೇ ಆಟವಿರಬಹುದು,
ಆಟಗಾರನಿರಬಹುದು, ಆತ ಹಿಂದಿನ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದ ಆಟಗಾರನಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ಸಿದ್ಧಿಸಿಕೊಂಡಿದ್ದರೂ ಈ ಬಾರಿ ಕಂಚು ಗೆಲ್ಲಲೂ ಸಾಧ್ಯವಾಗದಿರಬಹುದು. ಸಾಮರ್ಥ್ಯ, ಶಕ್ತಿ, ಗಟ್ಟಿತನ, ಏಕಾಗ್ರತೆ ಇವೆಲ್ಲವೂ ಇದ್ದರೂ, ದಶಕ ಕಾಲ ಪ್ರಾಕ್ಟೀಸ್ ಮಾಡಿದ್ದರೂ
ಆಟದ ಹಿಂದಿನ ದಿನದ ನಿದ್ರೆ ಸರಿಯಾಗಿಲ್ಲವೆಂದರೆ ಮಾರನೇ ದಿನ ಮೆಡಲ್ ಬದಲಿಗೆ ಚೊಂಬೇ ಗತಿ. ಆಟಗಾರ ಧರಿಸುವ ಬಟ್ಟೆ, ಶೂ, ಹೀಗೆ ಎಲ್ಲವೂ ಮುಖ್ಯವಾಗುತ್ತದೆ. ಸೇವಿಸಿದ ಆಹಾರದಿಂದ ಹಿಡಿದು ದೇಹದಲ್ಲಿನ ನೀರಿನ ಪ್ರಮಾಣ ಕೂಡ ಈ ಅತ್ಯಂತ ಚಿಕ್ಕ ಅಂತರಕ್ಕೆ ಕಾರಣವಾಗಿ ಮೆಡಲ್ ಗೆಲ್ಲುವಲ್ಲಿ ಸೋಲಾಗಬಹುದು.

ಇನ್ನು ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲಾಗಲಿಲ್ಲ, ಮುಂದಿನ ಬಾರಿ ನೋಡಿಕೊಂಡರಾಯಿತು ಎನ್ನುವಂತೆಯೂ ಇಲ್ಲ. ಮುಂದಿನ ಬಾರಿ ಎಂದರೆ ಅದು ನಾಲ್ಕು ವರ್ಷದ ನಂತರದ ಪಂದ್ಯಾವಳಿ. ಆಗ ಇನ್ನೊಂದಿಷ್ಟು ಹೊಸ ಸಾಮರ್ಥ್ಯದ ಆಟಗಾರರು ಸ್ಪರ್ಧೆಗಿಳಿಸಿರುತ್ತಾರೆ. ಪಂದ್ಯ ಇನ್ನಷ್ಟು
ಸ್ಪರ್ಧಾತ್ಮಕವಾಗಿರುತ್ತದೆ. ಆಗ ಆಟಗಾರನ ವಯಸ್ಸು ಕೂಡ ನಾಲ್ಕು ಹೆಚ್ಚಾಗಿರುತ್ತದೆ. ನಾಲ್ಕು ವರ್ಷದ ದೇಹ ಬದಲಾವಣೆಯೇನು ಎಂಬುದು ನಮಗೆಲ್ಲರಿಗೂ ಗೊತ್ತು. ನಾವು ನಾಲ್ಕು ವರ್ಷದ ಹಿಂದಿರುವಂತೆ ಈಗಿರುವುದಿಲ್ಲ.

ಅದಕ್ಕೆ ಯಾವುದೇ ಕ್ರೀಡಾಪಟು ಕೂಡ ಹೊರತಲ್ಲ. ಪಂದ್ಯ ಯಾವುದೇ ಇರಲಿ ವಯಸ್ಸಾದಂತೆ ಸಾಮರ್ಥ್ಯ ಏರುವುದಕ್ಕಿಂತ ಇಳಿಯುವುದೇ ಜಾಸ್ತಿ. ಹಾಗಾಗಿ ಆಗ ಸ್ಪರ್ಧಿಸಬೇಕೆಂದರೆ ಇನ್ನಷ್ಟು ತಾಕತ್ತು, ತಾಲೀಮು ಎಲ್ಲವೂ ಅವಶ್ಯಕ. ಏನೇ ತಯಾರಿ ಮಾಡಿಕೊಂಡರು ವಯೋಸಹಜ ಬದಲಾವಣೆಗಳು ಸವಾಲನ್ನು ಇನ್ನಷ್ಟು ಕ್ಲಿಷ್ಟಗೊಳಿಸುತ್ತವೆ. ಕಂಚೋ, ಬೆಳ್ಳಿಯೋ, ಬಂಗಾರವೋ, ಯಾವುದೇ ಮೆಡಲ್ ಗೆದ್ದರೂ ಅದು ಚಿಕ್ಕವಿಷಯವಲ್ಲ. ಜಗತ್ತಿನ ೭೯೫
ಕೋಟಿ ಜನರಿದ್ದಾರೆ. ಅವರಲ್ಲಿ ಒಂದು ಆಟದಲ್ಲಿ ಶ್ರೇಷ್ಠತೆ ಪಡೆದು ಮೊದಲ ಸ್ಥಾನ ಪಡೆಯುವುದಕ್ಕೂ, ಮೂರನೇ ಸ್ಥಾನ ಪಡೆಯುವುದಕ್ಕೂ ಈ ಲೆಕ್ಕದ ಪ್ರಕಾರ ಅದೇನು ವ್ಯತ್ಯಾಸ.

ಹಾಗೆ ನೋಡಿದರೆ ಹತ್ತನೇ ಸ್ಥಾನ ಪಡೆದವನ ಸಾಧನೆಯೂ ಅತಿ ದೊಡ್ಡ ಸಾಧನೆಯೇ ಹೌದು. ಅದನ್ನು ಸಂಭ್ರಮಿಸದಿರಲಿಕ್ಕೆ ಕಾರಣಗಳಿರಬಹುದು, ಹಾಗಂತ ಆತನ ಕ್ರೀಡೋತ್ಸಾಹವನ್ನು, ಪಟ್ಟ ಕಷ್ಟ ಕಾರ್ಪಣ್ಯವನ್ನು, ಆತ/ಆಕೆ ತನ್ನ ಜೀವನವನ್ನು ಕ್ರೀಡಿಗೆ ಮುಡುಪಾಗಿಟ್ಟ ದಿಟ್ಟತನವನ್ನು ಕಡೆಗಣಿ
ಸುವುದು ಸರಿಯಲ್ಲ. ಹಾಗಾಗಿ ಒಂದು ಕಂಚನ್ನು ದೇಶ ಸಂಭ್ರಮಿಸಿದರೂ ಅದನ್ನು ಕನಿಷ್ಠವಾಗಿ ನೋಡಬೇಕಿಲ್ಲ. ಮನು ಭಾರ್ಕ ಕಂಚು ಗೆzಗ ಖುದ್ದು ದೇಶದ ಪ್ರಧಾನಿ ಫೋನ್ ಮಾಡಿ ಖುಷಿಪಟ್ಟದ್ದು ನೋಡಿ ನಮ್ಮೆಲ್ಲರಿಗೂ ಖುಷಿಯಾಗಿದೆ. ಆಗೇ ಗೆದ್ದ ದಿನವಂತೂ ಎಲ್ಲ ಸೋಷಿಯಲ್ ಮೀಡಿಯಾದಲ್ಲಿ ಆಕೆಯ ಚಂದದ ನಗುವಿನ ಫೋಟೋಗಳು ಎಂದರಲ್ಲಿ ಕಾಣಿಸಿಕೊಂಡವು.

ಪ್ರತಿಯೊಂದು ಮೆಡಲ್ ಕೂಡ ಅಷ್ಟೇ ಸಂಭ್ರಮಕ್ಕೆ, ವಿಜಯೋತ್ಸಾಹಕ್ಕೆ ಅರ್ಹ. ಅದರಲ್ಲಿ ದೂಸ್ರಾ ಮಾತೇ ಇಲ್ಲ. ಆದರೆ – ಒಂದು ದೇಶ ಪಡೆಯುವ ಒಟ್ಟೂ ಮೆಡಲ್‌ಗಳ ಸಂಖ್ಯೆಯನ್ನು ಮಾತ್ರ ಈ ಎಲ್ಲ ರೀತಿಗಿಂತ ವಿಭಿನ್ನವಾಗಿ, ಪ್ರತ್ಯೇಕವಾಗಿ ವಿಶ್ಲೇಷಿಸಬೇಕಾಗುತ್ತದೆ. ದೇಶ ಪಡೆಯುವ ಒಟ್ಟೂ ಮೆಡಲ್‌ ಗಳ ಸಂಖ್ಯೆ ಎಂದರೆ ಅದು ದೇಶದ ಜನರ , ಕ್ರೀಡಾ ಹಿರಿಮೆಯ ಲೆಕ್ಕ. ಇದು ಸೂಕ್ಷ್ಮದಲ್ಲಿ ಅಲ್ಲಿನ ಜನರ ದೇಹ ಸಾಮರ್ಥ್ಯದ, ಸಾಧ್ಯತೆಯ ಲೆಕ್ಕವಲ್ಲ. ಬದಲಾಗಿ ಇದು ಒಂದು ದೇಶ ಕ್ರೀಡೆಗೆ ಕೊಡುವ ಮಹತ್ವ, ಅಲ್ಲಿನ ಕ್ರೀಡಾ ಇನ್ ಸ್ಟ್ರಕ್ಚರ್, ಆಂತರಿಕ ರಾಜಕಾರಣ, ಸ್ಪರ್ಧಾತ್ಮಕ ವ್ಯವಸ್ಥೆ ಇವೆಲ್ಲದಕ್ಕೆ ಹಿಡಿದ ಕನ್ನಡಿಯಾಗಿರುತ್ತದೆ. ಒಲಿಂಪಿಕ್ಸ್ ನಡೆದಾಗಲೆಲ್ಲ, ಮೆಡಲ್ಲುಗಳ ಸಂಖ್ಯೆಗಳನ್ನು ಕಂಡಾಗಲೆಲ್ಲ ಸಂತೋಷದ ಜೊತೆಜೊತೆ ಯಲ್ಲಿಯೇ ಎಲ್ಲಿಲ್ಲದ ಬೆಸರ ಕಾಡುತ್ತದೆ.

ನಮ್ಮ ದೇಶ ಪಡೆಯುವ ಮೆಡಲ್ಲುಗಳ ಸಂಖ್ಯೆ ಯನ್ನು ಇನ್ನುಳಿದ ಚಿಕ್ಕಪುಟ್ಟ ದೇಶಗಳ ಸಂಖ್ಯೆಗೆ ಹೋಲಿಸಿಕೊಂಡಾಗ ಭಿನ್ನ ಭಾವ ಕಾಡುತ್ತದೆ.
ನಮ್ಮ ದೇಶ ಆರ್ಥಿಕವಾಗಿ ಐದನೇ ಗಟ್ಟಿ ದೇಶ. ನಮ್ಮಲ್ಲಿ ಹಣಕ್ಕೇನೂ ಕೊರತೆ ಇಲ್ಲ. ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚಿರಬಹುದು ಆದರೆ ದೇಶ ಈಗ ಬಡವಾಗಿ ಉಳಿದಿಲ್ಲ. ನಮ್ಮಲ್ಲಿ ಅಮೆರಿಕ, ಚೀನಾ, ಜಪಾನ್, ಜರ್ಮನಿಯಷ್ಟು ಆರ್ಥಿಕತೆ ಇಲ್ಲದಿರಬಹುದು ಆದರೆ ನಾವು ಆರ್ಥಿಕವಾಗಿ -, ರಷ್ಯಾ, ಯುನೈಟೆಡ್ ಕಿಂಗ್‌ಡಮ ಮೊದಲಾದ ಘಟಾನುಘಟಿ ದೇಶಗಳನ್ನು ಹಿಂದಿಕ್ಕಿ ಐದನೇ ಜಾಗದಲ್ಲಿ ಬಂದು ಕುಳಿತಿದ್ದೇವೆ. ಆರ್ಥಿಕವಾಗಿ ನಾವು ಇಂದು ಹಿಂದುಳಿದ ದೇಶವಾಗಿಲ್ಲ.

ಇನ್ನು ಜನಸಂಖ್ಯೆಯ ವಿಷಯಕ್ಕೆ ಬಂದರೆ ನಾವೇ ಕಿಂಗು, ಎಲ್ಲರಿಗಿಂತ ಮೊದಲು. ಇಷ್ಟಾಗಿಯೂ ಒಂದು ಕಂಚು ಬಂದರೆ ಪ್ರಧಾನಿಯಾದಿಯಾಗಿ ದೇಶಕ್ಕೆ
ದೇಶವೇ ಸಂಭ್ರಮಿಸುವುದನ್ನು ನೋಡಿ ಖುಷಿ ಪಡಬೇಕೋ? ಅಥವಾ ಮರುಕ ಪಡಬೇಕೋ? ಜಪಾನ್ ದೇಶ ಅಬ್ಬಬ್ಬಾ ಎಂದರೆ ಎಷ್ಟು ದೊಡ್ಡವಿರಬಹು
ದು? ನಮ್ಮ ಒಂದೆರಡು ರಾಜ್ಯಗಳನ್ನು ಸೇರಿಸಿದಷ್ಟು ವಿಸ್ತೀರ್ಣದ ದೇಶ ಅದು. ಅಲ್ಲಿನ ಒಟ್ಟೂ ಜನಸಂಖ್ಯೆ ಹನ್ನೆರಡು ಕೋಟಿ. ನಮಗೆ ಹೋಲಿಸಿದರೆ ಜಪಾನ್ ಒಂದು ವೃದ್ಧ ದೇಶ. ಒಲಿಂಪಿಕ್ಸ್ ಎಂದರೆ ಅದರಲ್ಲಿ ಭಾಗವಹಿಸುವ ಬಹುತೇಕರು ೧೭ ರಿಂದ ೨೭ ವಯಸ್ಸಿನವರು ಎಂದು ದೊಡ್ಡ ಹೊಡೆತದ
ಲೆಕ್ಕಾಚಾರಕ್ಕೆ ಇಟ್ಟುಕೊಳ್ಳೋಣ.

ಜಪಾನಿನ ಜನಸಂಖ್ಯೆಯಲ್ಲಿ ಶೇ. ೯ರಷ್ಟು ಜನಸಂಖ್ಯೆ ಈ ವಯೋವರ್ಗದವರು. ಇದರರ್ಥ ಅಲ್ಲಿ ಸ್ಪರ್ಧಾ ಸಾಧ್ಯತೆಯುಳ್ಳ ಜನಸಂಖ್ಯೆ ಕೇವಲ ಒಂದ ರಿಂದ ಒಂದೂವರೆ ಕೋಟಿ. ಭಾರತ ಹಾಗಲ್ಲ. ನಮ್ಮಲ್ಲಿನ ಜನಸಂಖ್ಯೆ ೧೪೦ ಕೋಟಿ. ನಮ್ಮದು ಯಂಗ್ ದೇಶ. ನಮ್ಮಲ್ಲಿನ ೧೭ ರಿಂದ ೨೭ ವಯಸ್ಸಿನವರ ಸಂಖ್ಯೆಯ ಪ್ರಮಾಣ ಶೇ. ೨೦ ರಷ್ಟು. ಎಂದರೆ ಭಾರತದ ಈ ವಯೋಮಾನದವರ ಸಂಖ್ಯೆ ಸುಮಾರು ೨೮ ಕೋಟಿ. ಇದು ಜಪಾನಿನ ಒಟ್ಟೂ ಜನಸಂಖ್ಯೆ ಯ ದುಪ್ಪಟ್ಟು. ಭಾರತದಲ್ಲಿ ಜನಸಾಂದ್ರತೆಯದ್ದೇ ಸಮಸ್ಯೆ ಎಂದರೆ ಜಪಾನಿನ ಜನ ಸಾಂದ್ರತೆಯೇ ಹೆಚ್ಚು.

ದೇಹ ದಾರ್ಢ್ಯತೆಯ ಪ್ರಶ್ನೆ ಬಂದರೆ ಜಪಾನಿಯರು ಕುಬ್ಜರು. ಐತಿಹಾಸಿಕವಾಗಿ ಅವರೂ ಪೆಟ್ಟು ತಿಂದವರೇ. ನೀವು ಯಾವ ಮಾನದಂಡವನ್ನಾದರೂ ಇಟ್ಟು ನೋಡಿ, ಜಪಾನಿಗಿಂತ ನಾವು ಮುಂದಿರಬೇಕಿತ್ತು. ಆದರೆ ಹಿಂದಿನ ಪಂದ್ಯಾವಳಿಯ ಲೆಕ್ಕ ಬದಿಗಿಡಿ, ಈಗಿನ – ಒಲಿಂಪಿಕ್ಸ್ ಪದಕಗಳ ಸಂಖ್ಯೆ
ಯನ್ನು ತೆಗೆದುಕೊಂಡರೆ ಜಪಾನ್ ಇಲ್ಲಿಯವರೆಗೆ ಗೆದ್ದದ್ದು ಬರೋಬ್ಬರಿ ಹದಿನೈದು ಪದಕಗಳನ್ನು. ಅದರಲ್ಲಿ ಎಂಟು ಚಿನ್ನ, ಮೂರು ಬೆಳ್ಳಿ, ನಾಲ್ಕು ಕಂಚು. ನಮ್ಮದು ಒಂದು – ಅದೂ ಕಂಚು!

ಜಪಾನ್ ಬಿಡಿ. ಅವರ ಮೆಂಟಾಲಿಟಿ, ಶ್ರದ್ಧೆ, ಅವರು ದೇಶ ಕಟ್ಟಿದ ರೀತಿ ಇವೆಲ್ಲವೂ ಅನನ್ಯ ಎಂದು ಪುಕಾರಿಗೆ ಉತ್ತರಿಸಬಹುದು. ಜಪಾನೀಯರು ಗೌರವಾರ್ಹರೇ. ಹಾಗಾಗಿಯೇ ಹೋಲಿಸಿಕೊಳ್ಳಬೇಕು. ಆದರೆ ಪದಕಗಳ ಪಟ್ಟಿಯಲ್ಲಿ ಇಂದು ನಮ್ಮ ಸ್ಥಾನವೇನು? ನಮ್ಮದು ೪೦ ನೇ ಸ್ಥಾನ. ಪದಕ ಗೆದ್ದಿರುವ ಒಟ್ಟೂ ದೇಶವೇ ೪೩. ಅದರಲ್ಲಿ ನಾವು ಕೊನೆಯಿಂದ ಮೂರನೇ ಸ್ಥಾನ. ನೀವು ನಮ್ಮಿಂದ ಪದಕದಲ್ಲಿ ಮುಂದಿರುವ ೩೯ ದೇಶಗಳಲ್ಲಿ ಕನಿಷ್ಠ ಹತ್ತು ದೇಶಗಳ ಹೆಸರೇ ಕೇಳಿರಲಿಕ್ಕಿಲ್ಲ.

ಕ್ರೊಯೇಷಿಯಾ, ಅಜರ್ಬೈಜಾನ್, ಸ್ಲೊವೆನಿಯಾ, ಎಕ್ವಡಾರ್, ಕೊಸೊವೊ, ಫಿಜಿ, ಮಂಗೋಲಿಯಾ, ಸೆರ್ಬಿಯ, ಗ್ವಾಟೆಮಾಲಾ, ಉಜಬೆಕಿಸ್ತಾನ್, ಟ್ಯುನೇಷಿಯಾ – ಇಂತಹ ದೇಶಗಳು ನಮಗಿಂತ ಮೆಡಲ್ ಪಟ್ಟಿಯಲ್ಲಿ ಮೇಲಿವೆಯಲ್ಲ! ಈಗ ಹೇಳಿ. ನಾವು ಒಂದೆರಡು ಕಂಚಿಗೆ, ಮುಂದೆ ಬರಬಹುದಾದ ಇನ್ನೊಂದೆರಡು ಬೆಳ್ಳಿ, ಬಂಗಾರಕ್ಕೆ ಖುಷಿಪಡಬೇಕೋ? ಅಥವಾ ಈ ಖುಷಿಯ ನಡುವೆ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕೋ? ಭಾರತೀಯರು ಆಟದಲ್ಲಿ ಅಷ್ಟು ದುರ್ಬಲರೇ ಅಥವಾ ಇದಕ್ಕೆ ಇನ್ನೇನೋ ಕಾರಣವಿದೆಯೇ? ಹತ್ತಾರು ದೇಶಗಳನ್ನು ಕಂಡಾಗ ನನಗೆ ಕೆಲವೊಂದು ವಿಷಯಗಳು ಈ ನಿಟ್ಟಿನಲ್ಲಿ ಢಾಳಾಗಿ ಕಾಣಿಸುತ್ತವೆ. ಅದೆಲ್ಲ ದರ ಸಾಲಿನಲ್ಲಿ ಮೊದಲು ನಿಲ್ಲುವುದು ನಮ್ಮಲ್ಲಿನ ಕ್ರೀಡಾ ಮೂಲ ಸೌಕರ್ಯದ ಕೊರತೆ.

ನಮ್ಮಲ್ಲಿ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಮಾತ್ರ AI (Sports Authority of India) ಅಂತಹ ತಕ್ಕಮಟ್ಟಿಗಿನ ಸುಸ್ಸಜ್ಜಿತವೆನ್ನಬಹು ದಾದ ಸೌಕರ್ಯಗಳಿವೆ. ಅಂತಹ ಸೌಕರ್ಯಗಳು ಇಡೀ ಭಾರತದಲ್ಲಿ ಇರುವುದು ಕೇವಲ ಹನ್ನೊಂದು. ಅವೆಲ್ಲ ಇರುವುದು ಮಹಾನಗರಗಳಲ್ಲಿ ಮಾತ್ರ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಇಂತಹ ದೊಡ್ಡ ನಗರ ಗಳಲ್ಲಿ. ಇನ್ನುಳಿದವು ಚಿಕ್ಕ ಪುಟ್ಟ ‘ನಾಮ್ ಕೆ ವಾಸ್ತೆ’ ಫೆಸಿಲಿಟಿ ಗಳು. ಇದರಿಂದಾಗಿ ಬಹು ದೊಡ್ಡ ರೂರಲ್ ಜನಸಂಖ್ಯೆ ಈ ಸೌಕರ್ಯದಿಂದ ವಂಚಿತವಾಗುತ್ತಿದೆ.

ನಮ್ಮಲ್ಲಿ ಜನಸಂಪನ್ಮೂಲವಿರುವುದೇ ಹಳ್ಳಿಯಲ್ಲಿ. ಹಳ್ಳಿಯ ಕ್ರೀಡಾ ಪ್ರತಿಭೆಗಳಿಗೆ ಇವುಗಳಿಂದ ಎಂಟಾಣಿ ಪ್ರಯೋಜನವಿಲ್ಲ. ಕ್ರೀಡೆಯನ್ನೇ ನೆಚ್ಚಿ ಕೊಳ್ಳಬೇಕೆಂದರೆ ಊರುಬಿಡಬೇಕು. ನಮ್ಮಲ್ಲಿನ ಕ್ರೀಡಾ ಕೇಂದ್ರಗಳ ಸ್ಥಿತಿಗತಿಗಳ ಬಗ್ಗೆ ಔಟ್ ಲುಕ್ ಪತ್ರಿಕೆ ಈಗೊಂದು ವರ್ಷದ ಹಿಂದೆ ವಿವರವಾದ ವರದಿ ಮಾಡಿತ್ತು. ಆ ವರದಿಯನ್ನೇ ಆಧರಿಸಿ ಕಂಡರೆ ನಮ್ಮದು ಯಾವುದೇ ಕಾರಣಕ್ಕೂ ಅಂತಾರಾಷ್ಟ್ರೀಯ ಹೋಲಿಕೆಯ ಸೌಲಭ್ಯವಲ್ಲ. ಜನಸಂಖ್ಯೆಗೆ
ಹೋಲಿಸಿ ನೋಡುವುದಾದರೆ ಇದು ಅರೆಕಾಸಿನ ಮಜ್ಜಿಗೆಗೆ ಸಮ. ಇನ್ನು ಜಪಾನ್ ಮೊದಲಾದ ದೇಶಗಳಲ್ಲಿ ಚಿಕ್ಕಂದಿನ ಒಬ್ಬ ವಿದ್ಯಾರ್ಥಿಯ ಕ್ರೀಡಾ ಸಾಮರ್ಥ್ಯವನ್ನು ಗುರುತಿಸಿ, ಪೋಷಿಸಿ ಬೆಳೆಸುವ ವ್ಯವಸ್ಥಿತ ಮಾರ್ಗಗಳಿವೆ.

ಅಮೆರಿಕಾ ಮೊದಲಾದ ದೇಶಗಳಲ್ಲಿ ಕ್ರೀಡೆಯಲ್ಲಿ ಮುಂದಿದ್ದರೆ ಆ ವಿದ್ಯಾರ್ಥಿಗೆ ಉನ್ನತ ಶಿಕ್ಶಣದಲ್ಲಿ ಮೊದಲ ಮಣೆ, ಸ್ಕಾಲರ್ ಶಿಪ್ ಇತ್ಯಾದಿ. ಅಲ್ಲಿನ ಯೂನಿವರ್ಸಿಟಿಯಲ್ಲಿ ಸೀಟು ಪಡೆಯಲು ಕ್ರೀಡೆ ಒಂದೊಳ್ಳೆ ಮಾರ್ಗ. ಹಾಗಾಗಿಯೇ ಪಾಲಕರೇ ಕ್ರೀಡೆಯಲ್ಲಿ ತೊಡಗಿಕೊಳ್ಳುವಂತೆ ನೋಡಿಕೊ
ಳ್ಳುತ್ತಾರೆ. ಆದರೆ ನಮ್ಮಲ್ಲಿ ಹೇಗೆಂದು ನಿಮಗೇ ಗೊತ್ತು. ಕ್ರೀಡೆಯಲ್ಲಿ ಯಾರೇ ಮುಂದುವರಿಯಲು ಮುಂದಾದರೆ ಖುದ್ದು ತಂದೆತಾಯಿಯರೇ ಅವರಿಗೆ ಮೊದಲು ಅಡ್ಡಲಾಗಿ ನಿಲ್ಲುತ್ತಾರೆ. ಏಕೆಂದರೆ ಕ್ರೀಡೆಯಿಂದ ಬದುಕು ಮಹಾ ಕಷ್ಟ. ಕ್ರೀಡಾ ಮೀಸಲಾತಿ ತೀರಾ ನಗಣ್ಯ. ಕ್ರೀಡೆಯಲ್ಲಿ ತೊಡಗಿಸಿ ಕೊಳ್ಳಬೇಕೆಂದರೆ ಬದುಕಿಗೆ, ಟ್ರೈನಿಂಗ್‌ಗೆ ಅತ್ಯವಶ್ಯಕ ಹಣದ ವ್ಯವಸ್ಥೆ. ಕಿಸೆಯಲ್ಲಿ ಬಿಡಿಕಾಸಿಲ್ಲದೆ ಸಾಧನೆ ತೀರಾ ಕಷ್ಟ. ಹವಾಯಿ ಚಪ್ಪಲಿ ಧರಿಸಿ ಆಟ ಆಡಲಿಕ್ಕಾಗುವುದಿಲ್ಲ, ಪ್ರಾಕ್ಟೀಸ್ ಮಾಡಲಾಗುವುದಿಲ್ಲ.

ಪ್ರಯೋಜಕತ್ವವಿಲ್ಲದೆ ಕ್ರೀಡೆಯಲ್ಲಿ ತೊಡಗಿಕೊಳ್ಳಲಾಗುವುದಿಲ್ಲ. ಸಾಮರ್ಥ್ಯ ಓರೆಗೆ ಹಚ್ಚುವುದಕ್ಕೂ ಹಣ ಬೇಕು. ಗೆದ್ದ ಮೇಲೆ ಚಿಕ್ಕಾಸು ಬರಬಹುದು, ಆದರೆ ಆ ಗೆಲುವಿನ ಹಾದಿಯಲ್ಲಿ ಹಣವಿಲ್ಲದಿದ್ದರೆ ಅಲ್ಲಿಯೇ ಸೋಲುವವರೇ ಜಾಸ್ತಿ. ಕ್ರೀಡೆಯನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಳ್ಳಲಾಗುವುದಿಲ್ಲ. ನೀವು ಒಳ್ಳೆಯ ಓಟಗಾರ ಎಂದರೆ ನೀವು ಪದಕವನ್ನೆಲ್ಲ ಗೆದ್ದರೆ ಮಾತ್ರ ಏನೋ ನಾಲ್ಕಸು ಸಿಗಬಹುದು. ಅಲ್ಲಿಯವರೆಗೆ? ನಮ್ಮಲ್ಲಿ ಬಹುತೇಕ ಕ್ರೀಡೆ ಯನ್ನು ಸರಕಾರವೇ ಪ್ರಾಯೋಜಿಸಬೇಕು. ನಮ್ಮ ದೇಶದಲ್ಲಿ ಕ್ರಿಕೆಟ್ ಬಿಟ್ಟರೆ ಉಳಿದವಕ್ಕೆ ಪ್ರಯೋಜಕರೇ ಇಲ್ಲ.

ಚೆಸ್ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ವಿಶ್ವನಾಥನ್ ಆನಂದ್‌ನಂಥವರೇ ಪ್ರಯೋಜಕತೆಗೆ ಕಷ್ಟಪಟ್ಟಿದ್ದಿದೆ. ಹೀಗಿರುವಾಗ ಕ್ರಿಕೆಟ್ ಬಿಟ್ಟು ಇನ್ನುಳಿದ ಕ್ರೀಡೆಯನ್ನು ಉದ್ಧರಿಸುವುದು ಅಸಾಧ್ಯ. ಹಾಗಾಗಿ ಸರಕಾರೀ ಪ್ರಯೋಜಕತೆ ಮಾತ್ರ ತಕ್ಕಮಟ್ಟಿಗೆ ಪೋಷಿಸಬಲ್ಲದು. ಅ, ರಾಜಕೀಯ, ವಸೂಲಿತನ,
ಜಾತಿ ಮೊದಲಾದ ಅಪಸವ್ಯಗಳು. ಇನ್ನು ಮೂಲಸೌ ಕರ್ಯ ದ ನವೀಕರಣಕ್ಕೂ ಹಣ ವ್ಯಯಿಸಬೇಕು. ಅಲ್ಲಿನ ಟೆಂಡರುಗಳ ಕಥೆಯ ಬಗ್ಗೆ ವಿವರಿಸು ವುದು ಬೇಕಿಲ್ಲವೆನಿಸುತ್ತದೆ.

ನಮ್ಮನಿದ್ದರೂ ಮಕ್ಕಳು ಡಾಕ್ಟರ್ ಆಗಬೇಕು, ಇಲ್ಲವೇ ಎಂಜಿನಿಯರ್ ಎಂದು ಕುಹಕ ಆಡುವವರನ್ನು ಕಂಡಿದ್ದೇನೆ. ಅದು ಅನಿವಾರ್ಯವೇ ಆಗಿ ಹೋಗಿದೆ. ಈ ವೃತ್ತಿಪರ ಶಿಕ್ಷಣಕ್ಕೆ ಸೇರಿಕೊಂಡರೆ ಅಲ್ಲಿ ಕ್ರೀಡೆ ಎಂಬುದೇ ಇಲ್ಲ. ನಮ್ಮ ಶಿಕ್ಷಣದಲ್ಲಿ ಕ್ರೀಡೆಗೆ ಎಷ್ಟು ಮಹತ್ವವಿದೆ ಎಂದು ಬಿಡಿಸಿ ಹೇಳಬೇಕಿಲ್ಲ. ಪಿಟಿ ಪೀರಿಯೆಡ್‌ನಲ್ಲಿ ಗಣಿತ, ವಿeನದ ಶಿಕ್ಷಕರು ಕ್ಲಾಸು ತೆಗೆದುಕೊಳ್ಳುತ್ತಾರೆ ಎಂದರೆ ಹೆಡ್ ಮಾಸ್ಟರ್ ಕೂಡ ಅದೇ ಸರಿ ಎಂದು ಪಿಟಿ ಮಾಸ್ಟರ್ ಅನ್ನು ಸುಮ್ಮನಾಗಿಸುತ್ತಾರೆ. ಪಿಟಿ ಪಿರಿಯೆಡ್‌ನಲ್ಲಿ ಅವರು ಆಟವನ್ನು ಕಲಿಯುವುದು ಎಂಬ ಕಲ್ಪನೆಯೇ ಅಪತ್ಯ. ಬಯಲಿನಲ್ಲಿ ಸೊಕ್ಕಲೊಂದಿಷ್ಟು ಸಮಯ.

ಕರ್ನಾಟಕದಂತಹ ಒಂದು ರಾಜ್ಯದ ಒಬ್ಬ ಮುಖ್ಯಮಂತ್ರಿ ಸರಿಯಾಗಿ ಮನಸ್ಸು ಮಾಡಿದರೆ ರಾಜ್ಯದಿಂದಲೇ ಹತ್ತಾರು ಗೋಲ್ಡ್ ಮೆಡಲ್ ಪಡೆಯುವಷ್ಟು ಕ್ರೀಡಾಪಟುಗಳನ್ನು ತಯಾರಿಸಿಬಿಡಬಹುದು. ಏಕೆಂದರೆ ನಮ್ಮಲ್ಲಿ ಪ್ರತಿಭೆಗೆ, ಮಾನವ ಸಂಪನ್ಮೂಲಕ್ಕೆ ಕೊರತೆಯಿಲ್ಲ. ಒಬ್ಬ ರಾಜ್ಯದ ಕ್ರೀಡಾ ಮಂತ್ರಿ ಇದನ್ನೊಂದು ಚಾಲೆಂಜ್ ಆಗಿ ಸ್ವೀಕರಿಸಿದಲ್ಲಿ ಇದೆಲ್ಲ ವೂ ಅಸಾಧ್ಯವೇನಲ್ಲ. ಆದರೆ ನಮ್ಮ ಇಂದಿನ ಕ್ರೀಡಾ ಮಂತ್ರಿ ‘”One District One Game’’ ಅಂಬಿತ್ಯಾದಿ ಅವೈಜ್ಞಾನಿಕ ನಮೂನಾ ಕಾರ್ಯಕ್ರಮಗಳಲ್ಲಿಯೇ ಹಣ, ಸಮಯ ವ್ಯರ್ಥಮಾಡುತ್ತಿದ್ದಾರೆ. ಪ್ರತೀ ಬಾರಿ ಮಂತ್ರಿಮಂಡಲ
ಬದಲಾದಾಗಲೂ ಯೋಜನೆ, ದಿಕ್ಕು ಬದಲಾಗುತ್ತದೆ.

ಕ್ರೀಡಾ ಸ್ಟೈಫಂಡ್ ಪಡೆಯುವ ಕೆಲಸಕ್ಕೂ ಕೈಬಿಸಿಮಾಡಬೇಕಾದ ಸ್ಥಿತಿ. ಹಾಗಂತ ನಮ್ಮಲ್ಲಿ ಕ್ರೀಡೆಗೆ ಮೀಸಲಿಡುವ ಹಣವೇನು ಕಡಿಮೆಯಲ್ಲ. ಬರೋಬ್ಬರಿ ಮೂರು ಸಾವಿರ ಕೋಟಿಗೂ ಮಿಕ್ಕಿದ ಬಜೆಟ್ ಅದು! ಅಯ್ಯೋ ಇದೆಲ್ಲ ಹೇಳುತ್ತಾ ಹೋದರೆ ಅದು ಅರಣ್ಯ ರೋಧನ. ಹೀಗಿರುವಾಗ ಒಂದೇ ಕಂಚು ಗೆದ್ದರೂ ಅದು ಚಿನ್ನಕ್ಕಿಂತ ದೊಡ್ಡ ಸಾಧನೆ. ನಮ್ಮಲ್ಲಿರುವ ಏಕೈಕ ಕೊರತೆ ರಾಜಕೀಯ ಹಿತಾಸಕ್ತಿಯದು. ಆ ಕಾರಣಕ್ಕೇ ಒಂದೆರಡು ಕಂಚಿಗೆ ದೇಶದ ಪ್ರಧಾನಿಯಾದಿಯಾಗಿ ನಾವೆಲ್ಲ ಇಂದು ಇಷ್ಟು ಸಂಭ್ರಮಪಡಬೇಕಾದ ದಯನೀಯ ಸ್ಥಿತಿಗೆ ತಲುಪಿದ್ದೇವೆ. ಸಂಭ್ರಮದ ಭರದಲ್ಲಿ ಇದನ್ನು ಪ್ರಶ್ನಿಸಿದರೆ ಅದು ದೇಶದ್ರೋಹದ ಬಣ್ಣ ಪಡೆಯುತ್ತದೆ. ಒಟ್ಟಾರೆ ಬದುಕಿಗೆ ಕ್ರೀಡೆಯನ್ನು ನೆಚ್ಚಿಕೊಳ್ಳುವುದು ಇಂತಹ ವ್ಯವಸ್ಥೆಯಲ್ಲಿ ಮುರ್ಖತನ ವೆನಿಸಿಬಿಟ್ಟಿದೆ.

ನಮ್ಮಲ್ಲಿ ಕ್ರೀಡೆ ಎಂದರೆ ಕ್ರಿಕೆಟ್. ಎರಡನೇ ದೊಡ್ಡ ಕ್ರೀಡೆ, ಮನರಂಜನೆ ಎಂದರೆ ರಾಜಕಾರಣ. ರಾಜಕಾರಣವನ್ನೇ ಒಂದು ಕ್ರೀಡೆಯಾಗಿ ಇಟ್ಟಿದ್ದರೆ ಎಲ್ಲಾ ಗೋಲ್ಡ್ ಮೆಡಲ್‌ಗಳು ನಮಗೇ ಪ್ರಾಪ್ತಿಯಾಗುತ್ತಿದ್ದವೇನೋ! ಛೇ.