Saturday, 16th November 2024

ಅಕ್ಕನ ತವರಿನ ಅಭಿವೃದ್ಧಿಗೆ ಅರ್ಧ ಶತಮಾನ ಬೇಕಾಯಿತಾ ?

ಬೇಟೆ

ಜಯವೀರ ವಿಕ್ರಮ್ ಸಂಪತ್ ಗೌಡ

ಬಸವಣ್ಣ ಅವರ ಅನುಭವ ಮಂಟಪದ ಅವಿಭಾಜ್ಯ ಅಂಗವಾಗಿದ್ದ ಶಿವಶರಣೆ ಅಕ್ಕಮಹಾದೇವಿ ಹುಟ್ಟೂರಾದ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ಉಡುತಡಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭೇಟಿ ನೀಡಿ, ಅಲ್ಲಿ ಕೈಗೊಳ್ಳಲು
ಉದ್ದೇಶಿಸಿರುವ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದ ಸುದ್ದಿ ತಿಳಿದು ಅತೀವ ಸಂತೋಷವಾಯಿತು.

ಜತೆಯಲ್ಲಿ ಎ ಸಣ್ಣ ಬೇಸರವೂ ಆಯಿತು. ಸಂತೋಷಕ್ಕೆ ಕಾರಣ – ಹನ್ನೆರಡನೆಯ ಶತಮಾನದ ಪ್ರಮುಖ ಶಿವಶರಣೆ ಅಕ್ಕ ಮಹಾದೇವಿ ಜನಿಸಿದ ಪವಿತ್ರ ತಾಣವಾದ ಉಡುತಡಿ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ನಿಜಕ್ಕೂ ಆಸ್ಥೆ ವಹಿಸಿದ್ದರಲ್ಲ ಎಂದು. ಬೇಸರಕ್ಕೆ ಕಾರಣ – ಐವತ್ತು ವರ್ಷಗಳ ಹಿಂದೆ ಆಗಬೇಕಾದ ಕೆಲಸವಿದು, ಯಾಕೆ ಇಷ್ಟು ತಡವಾಗಿ ಆಗುತ್ತಿದೆ, ಯಾಕೆ ನಮಗೆ ಇಂಥ ಮಹತ್ವದ ಕಾರ್ಯಗಳಲ್ಲಿ ನಿರಾಸಕ್ತಿ? ಯಡಿಯೂರಪ್ಪನವರ ಆದೇಶದ ಮೇರೆಗೆ ಅಧಿಕಾರಿಗಳು ಉಡುತಡಿ ಅಭಿವೃದ್ಧಿಗೆ ಒಂದು ಚೆಂದದ ನೀಲನಕ್ಷೆ ಸಿದ್ಧಪಡಿಸಿzರೆ. ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ ಐದು ಕೋಟಿ ರುಪಾಯಿ ಬಿಡುಗಡೆ ಆಗಿದೆ.

ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ಆರಂಭವಾಗಿದೆ. ಉಳಿದ ಮೊತ್ತವನ್ನು ಸಂಗ್ರಹಿಸುವ ಕೆಲಸವೂ ಸಾಗಿದೆ. ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದಿಂದಲೂ ನೆರವು ಕೇಳಲಾಗಿದೆ. ಅಕ್ಕಮಹಾದೇವಿಯ ಜೀವನ – ಸಾಧನೆಯ ಜತೆಗೆ ಪ್ರಮುಖ ವಚನಕಾರರ ಬಗ್ಗೆ ತಿಳಿಸಿಕೊಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಇದನ್ನು ರಾಜ್ಯದ ಪ್ರಮುಖ ಪ್ರವಾಸಿ ಮತ್ತು ಪ್ರೇಕ್ಷಣೀಯ ತಾಣವನ್ನಾಗಿ ಮಾಡುವುದು ಉದ್ದೇಶ.

ಅಮೃತ ಶಿಲೆಯಲ್ಲಿ ಅಕ್ಕಮಹಾದೇವಿ ವಿಗ್ರಹವನ್ನು ಕೆತ್ತಲಾಗಿದೆ. ಬೆಟ್ಟದ ಮೇಲೆ ನೂತನವಾಗಿ ನಿರ್ಮಾಣ ಮಾಡಿರುವ ಅಕ್ಕಮಹಾದೇವಿಯ ಕಂಚಿನ ಪುತ್ಥಳಿಯನ್ನು ಸಹ ಪ್ರತಿಷ್ಠಾಪನೆ ಮಾಡಲಾಗಿದೆ. ಸ್ವತಃ ಯಡಿಯೂರಪ್ಪನವರು ಕೈಹಾಕಿದ್ದರಿಂದ ಉಡುತಡಿ ಒಂದು ಸುಂದರ ಪ್ರವಾಸಿ ತಾಣವಾಗಿ, ಸ್ಮಾರಕವಾಗಿ ರೂಪುಗೊಳ್ಳಬಹುದು ಎಂಬ ಎ ವಿಶ್ವಾಸ ಮೂಡಿದೆ. ಹನ್ನೆರಡ ನೆಯ ಶತಮಾನದ ವಚನಕಾರರಲ್ಲಿ ಅಕ್ಕಮಹಾದೇವಿ ಕೂಡ ಪ್ರಮುಖರು. ಆಕೆ ರಚಿಸಿದ್ದು ಕೇವಲ ೪೩೦ ವಚನಗಳಾದರೂ, ಅವು ಅಮೃತಬಿಂದುಗಳು.

ಸಾಹಿತ್ಯಕವಾಗಿ ಮಹತ್ವವನ್ನು ಪಡೆದಂಥವು. ಕನ್ನಡ ಸಾಹಿತ್ಯದಲ್ಲಿ ಅಕ್ಕಮಹಾದೇವಿಯ ವಚನಗಳ ಬಗ್ಗೆ ನೂರಕ್ಕೂ ಹೆಚ್ಚು ಸಂಶೋಧನೆ, ಸಾವಿರಕ್ಕೂ ಹೆಚ್ಚು ವಿಮರ್ಶಾ ಗ್ರಂಥಗಳು ಪ್ರಕಟವಾಗಿರುವುದೇ ನಿದರ್ಶನ. ಇಂದಿಗೂ ಕೂಡ ಆಕೆಯ ವಚನಗಳು ಬಹುಶ್ರುತರ ನಾಲಗೆಯ ಮೇಲೆ ನಲಿದಾಡುತ್ತವೆ. ಲಾಲಿತ್ಯ, ಮಾಧುರ್ಯ, ಛಂದಸ್ಸು, ಅರ್ಥ, ಸರಳತೆ, ಜೀವನ ಸಿದ್ಧಾಂತ, ಅನುಭವ, ರಚನೆ ಮುಂತಾದ ಕಾರಣಗಳಿಂದ ಅವು ಮಹತ್ವವನ್ನು ಪಡೆದಿವೆ.

ಸಮಾಜವನ್ನು ಸನ್ಮಾರ್ಗದಲ್ಲಿ ಒಯ್ಯಲು ಅಕ್ಕಮಹಾದೇವಿ ವಚನಗಳಿಗೆ ಮೊರೆ ಹೋದವಳು. ಬಸವಣ್ಣ ಮತ್ತು ಅಲ್ಲಮಪ್ರಭು ವಿನ ಸಮಕಾಲೀನಳಾದ ಅಕ್ಕಮಹಾದೇವಿ ಅನುಭವ ಮಂಟಪದ ಅತ್ಯಂತ ಕ್ರಿಯಾಶೀಲ ಮತ್ತು ಮುಂಚೂಣಿಯ ವ್ಯಕ್ತಿಗಳಬ್ಬರು.
ವಚನಕ್ರಾಂತಿಯ ಹರಿಕಾರರಬ್ಬಳಾದ ಅಕ್ಕಮಹಾದೇವಿ, ಕೌಶಿಕ ರಾಜ ತನಗೆ ನೀಡಿದ ವಾಗ್ದಾನವನ್ನು ಮುರಿದಾಗ, ಅರಮನೆ ಯನ್ನು ಬಿಟ್ಟು ತನ್ನೆ ಸುಖ-ಸಂಪತ್ತುಗಳನ್ನು ತ್ಯಜಿಸಿ, ಚೆನ್ನಮಲ್ಲಿಕಾರ್ಜುನನ ಸ್ಮರಣೆ ಮಾಡುತ್ತಾ ಆತನ ಸಾನಿಧ್ಯವನ್ನು ಅರಸುತ್ತಾ ಶ್ರೀಶೈಲಕ್ಕೆ ಹೋಗಿ ಅಲ್ಲಿನ ಕದಳಿ ಮಂಟಪದಲ್ಲಿ ಐಕ್ಯವಾದವಳು.

ಇಂದಿಗೂ ಕೂಡ ಅಕ್ಕಮಹಾದೇವಿ ವಚನಗಳನ್ನು ಉಖಿಸುವುದು ಭಾಷಾ ಶ್ರೇಷ್ಠತೆ ದೃಷ್ಟಿಯಿಂದ ಮಹತ್ವದ್ದೊಂದು ಭಾವಿಸ ಲಾಗಿದೆ. ಅದಕ್ಕೆ ಆ ವಚನಗಳಿಗಿರುವ ಸಾಹಿತ್ಯಕ ಗುಣ ಮತ್ತು ವಸ್ತು ವೈವಿಧ್ಯವೇ ಕಾರಣ. ಭಾರತದ ಬಹುತೇಕ ಎ ಭಾಷೆಗಳಿಗೆ
ಅಕ್ಕಮಹಾದೇವಿ ವಚನ ಅನುವಾದಗೊಂಡಿರುವುದು ಅದರ ಸತ್ವ ಮತ್ತು ಮಹತ್ವಕ್ಕೆ ಸಾಕ್ಷಿ. ಆಕೆ ಬಳಸಿರುವ ಭಾಷೆ, ಉಪಮೆ, ಹೋಲಿಕೆ, ಪದ ಪ್ರಯೋಗ ಇಂದಿಗೂ ವಿಸ್ಮಯವೇ. ಒಂಬೈನೂರು ವರ್ಷಗಳ ಹಿಂದೆಯೇ ಅವಳಿಗೆ ಭಾಷೆಯ ಮೇಲೆ ಅದೆಂಥ ಅದ್ಭುತ ಹಿಡಿತವಿತ್ತು ಎಂಬುದು ಗೊತ್ತಾಗುತ್ತದೆ.

ಹಾಲು ತುಪ್ಪವ ನುಂಗಿ ಬೇರಾಗಬಲ್ಲುದೇ / ಸೂರ್ಯಕಾಂತಿಯಲ್ಲಿದಾಗ್ನಿಯ ನಾರುಬಲ್ಲರು / ಅಪಾರ ಮಹಿಮ ಚೆನ್ನಮಲ್ಲಿ ಕಾರ್ಜುನ / ನೀನೆನ್ನೊಳಗಿರ್ದ ಪರಿಯ ಬೇರಿಲ್ಲದೇ ಕಂಡು ಕಣ್ತೆರೆದೆನು ಎಂಬ ವಚನವಿರಬಹುದು, ಲೋಕದ ಚೇಷ್ಟೆಗೆ ರವಿ ಬೀಜವಾದಂತೆ / ಕರಣಂಗಳ ಚೇಷ್ಟೆಗೆ ಮನವೇ ಬೀಜ / ಎನಗುಳ್ಳುದೊಂದು ಮನ / ಆ ಮನ ನಿಮ್ಮಲ್ಲಿ ಒಡವೆರೆದ ಬಳಿಕ /ಎನಗೆ ಭವ ಉಂಟೇ ? ಚೆನ್ನಮಲ್ಲಿಕಾರ್ಜುನಯ್ಯ ಎಂಬ ವಚನವಿರಬಹುದು, ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿ ದೊಡೆಂತಯ್ಯ? / ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆ ತೆರೆಗಳಿಗಂಜಿದೊಡೆಂತಯ್ಯ? / ಸಂತೆಯೊಳಗೊಂದು
ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ? / ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ ಈ ಲೋಕದೊಳಗೆ ಹುಟ್ಟಿದ ಬಳಿಕ / ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.ಇವೇ ಮುಂತಾದ ವಚನಗಳು ಕನ್ನಡ ಸಾಹಿತ್ಯದ ಅನರ್ಘ್ಯ ರತ್ನಗಳು.

‘ಚನ್ನಮಲ್ಲಿಕಾರ್ಜುನ’ ಎಂಬ ಅಂಕಿತ ನಾಮದಲ್ಲಿ ವಚನ ಸಾಹಿತ್ಯಕ್ಕೆ (ಶರಣ ಸಾಹಿತ್ಯ) ತಮ್ಮದೇ ಆದ ಸಾಹಿತ್ಯ ಸೇವೆಯನ್ನು ಸಲ್ಲಿಸಿದ ಅಕ್ಕಮಹಾದೇವಿ, ಶರಣ ಚಳುವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ. ಅವರ ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯ, ಪ್ರಭಾವಗಳಿಂದ ತುಂಬಿದ್ದರೂ ಸಹ, ಅವರ ಬಗ್ಗೆ ಅವರ ಸಮಕಾಲೀನ ವಚನಕಾರರೂ, ಅಕ್ಕನ ಕಾಲಕ್ಕೆ ತುಂಬಾ ಹತ್ತಿರದವನಾದ ಹರಿಹರ ಮಹಾಕವಿಯು ರಚಿಸಿರುವ ‘ಮಹಾದೇವಿಯಕ್ಕಗಳ ರಗಳೆ’ ಮತ್ತು ಸ್ವತಃ ಅಕ್ಕಮಹಾದೇವಿ ಯವರೇ ರಚಿಸುವ ವಚನಗಳೂ, ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸು ತ್ತವೆ.

ಇವೆಲ್ಲವನ್ನೂ ನೋಡಿದಾಗ ಅಕ್ಕಮಹಾದೇವಿ ಜೀವನ ಅಸಾಮಾನ್ಯವಾದ, ವೈಚಾರಿಕವಾದ, ಅನುಭಾವ ಪೂರ್ಣವಾದ, ಸಂಸ್ಕಾರಶೀಲವಾದ ಪಡಿಯಚ್ಚಿನಂತೆ ಕಂಡುಬರುತ್ತದೆ. ವಚನಕಾರರಲ್ಲಿಯೇ ಅಕ್ಕಮಹಾದೇವಿ ಅತ್ಯಂತ ಕಿರಿಯ ವಯಸ್ಸಿನ ಅನುಭಾವಿ. ಆದರೆ ಅವರ ವಚನಗಳಲ್ಲಿ ವಯಸ್ಸಿಗೆ ಮೀರಿದ ಪಾಂಡಿತ್ಯವಿತ್ತು. ಆಕೆಯ ಜೀವನಾನುಭವ ಅತ್ಯಂತ ವಿಶಿಷ್ಟ ವಾದುದು.

ಅಕ್ಕಮಹಾದೇವಿಯನ್ನು ಕನ್ನಡ ಸಾಹಿತ್ಯ ಮೊದಲ ಬಂಡಾಯ ಕವಯತ್ರಿ ಎಂದೂ ಪರಿಗಣಿಸುವುದುಂಟು. ವಚನಗಾರ್ತಿ ಹಾಗೂ ಮಹಿಳಾ ಪ್ರತಿನಿಧಿಯಾಗಿ ಅಭಿವ್ಯಕ್ತಿಯಲ್ಲಿ ಪುರುಷ ಸಮಾಜವನ್ನು ಪ್ರತಿಭಟಿಸಿದವಳು. ಈ ಮೂಲಕ ಸಾಮಾಜಿಕ ಬದಲಾವಣೆಗೆ, ಸುಧಾರಣೆಗೆ ಶ್ರಮಿಸಿದವಳು. ಅಕ್ಕಮಹಾದೇವಿಯೇನಾದರೂ ಇಂಗ್ಲೆಂಡ್‌ನ, ಅಮೆರಿಕದ, ರಷ್ಯಾದ ಹುಟ್ಟಿದ್ದಿದ್ದರೆ,
ಲೋಕಪ್ರಸಿದ್ಧಿ ಪಡೆಯುತ್ತಿದ್ದಳು. ರಷಾದಲ್ಲಿ ದಾಸ್ತೋವಸ್ಕಿ, ತೋಲ್ಸ್ತೋಯ, ಪುಷ್ಕಿನ್ ಅವರ ಸ್ಮಾರಕ, ವಿಗ್ರಹ, ವೃತ್ತಗಳಿಲ್ಲದ ಊರುಗಳಿಲ್ಲ. ಶೇಕ್ಸ್‌ಪೀಯರ್ ಕವಿ ಹುಟ್ಟಿದ ‘ಸ್ಟ್ರಾಟಾರ್ಡ್ ಅಪಾನ್ ಅವೊನ್’ ಎಂಬ ಊರನ್ನೇ ಸ್ಮಾರಕವನ್ನಾಗಿ ಮಾಡಲಾಗಿದೆ. ಅದನ್ನು ಸರಿಯಾಗಿ ನೋಡಲು ಮೂರು ದಿನಗಳು ಬೇಕು. ಅಷ್ಟು ಚೆಂದವಾಗಿ ಅಭಿವೃದ್ಧಿಪಡಿಸಿದ್ದಾರೆ.

ಇಂಗ್ಲಿಷ್ ಸಾಹಿತ್ಯ ವಿದ್ಯಾರ್ಥಿಗಳಿಗೆ ಮತ್ತು ಸಾಹಿತ್ಯಾಸಕ್ತರಿಗೆ ಅಲ್ಲಿಗೆ ಹೋಗುವುದೇ ಜೀವಮಾನದ ಕನಸು. ಅಲ್ಲಿಗೆ ಭೇಟಿ ನೀಡಿದ ವರೆಲ್ಲರಿಗೂ ಧನ್ಯತೆ ಭಾವ ಸ್ಪುರಿಸುತ್ತದೆ. ಆ ರೀತಿಯಲ್ಲಿ ಸ್ಟ್ರಾಟಾರ್ಡ್ ಅಪಾನ್ ಅವೊನ್‌ನ್ನು ಅಭಿವೃದ್ಧಿಪಡಿಸಿದ್ದಾರೆ. ವರ್ಷ ದಲ್ಲಿ ಕನಿಷ್ಠ ಇಪ್ಪತ್ತೈದು ಲಕ್ಷ ಜನ ಅಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲಿಗೆ ಭೇಟಿ ನೀಡಿ ಬಂದವರಲ್ಲಿ ಒಂದು ಅವಿಸ್ಮರಣೀಯ
ಅನುಭವ ಸವಿದ ಸಂತೃಪ್ತಿ ಮನೆ ಮಾಡುತ್ತದೆ. ಅಲ್ಲದೆ ಒಬ್ಬ ಕವಿ, ಸಾಹಿತಿ, ನಾಟಕಕಾರನ ಸ್ಮಾರಕವನ್ನು ಯಾವ ರೀತಿ
ಅಭಿವೃದ್ಧಿಪಡಿಸಬೇಕು ಎಂಬುದಕ್ಕೆ ಸ್ಟ್ರಾಟಾರ್ಡ್ ಅಪಾನ್ ಅವೊನ್ ಒಂದು ಮಾದರಿ.

ಅಕ್ಕಮಹಾದೇವಿಗೂ ಅಂಥದೇ ಅರ್ಹತೆಯಿದೆ. ಆಕೆಯ ಜೀವನ, ಸಾಹಿತ್ಯ, ಸಿದ್ಧಾಂತ, ಪ್ರತಿಪಾದಿಸಿದ ಮೌಲ್ಯಗಳಿಗೆ ಬೆಲೆ ಕಟ್ಟಲಾಗದು. ಅವು ಯಾವಜ್ಜೀವ ಪ್ರಸ್ತುತವಾದವು. ಆಕೆಯ ವಚನಗಳು ದೇಶ – ಕಾಲವನ್ನು ಮೀರಿದ ಅನಂತತೆ ಭಾವ ಮೂಡಿ ಸುವ ಜೀವನದ್ರವ್ಯಗಳ ಗಣಿ. ಅಂಥ ಮಹಾಮಹಿಳೆಯ ಹೆಸರಿನಲ್ಲಿ ಆಕೆ ಕಾಲವಾಗಿ ಒಂಬೈನೂರು ವರ್ಷಗಳ ನಂತರ, ಹುಟ್ಟೂರಿನಲ್ಲಿ ಆಕೆಯ ನೆನಪನ್ನು ಜೀವಂತವಾಗಿರಿಸುವ ಪ್ರಯತ್ನಗಳಾಗುತ್ತಿರುವುದಕ್ಕೆ ಖುಷಿಪಡಬೇಕೋ, ಇದನ್ನೇ ದೌರ್ಭಾಗ್ಯ ವೆನ್ನಬೇಕೋ ತಿಳಿಯುತ್ತಿಲ್ಲ.

ಅಕ್ಕಮಹಾದೇವಿ ಅಮೆರಿಕದಲ್ಲಿ ಹುಟ್ಟಿದ್ದರೆ, ಅವಳನ್ನು ಇಡೀ ಜಗತ್ತಿಗೆ ಪರಿಚಯಿಸಿರುತ್ತಿದ್ದರು. ಆದರೆ ನಮಗೆ ಇನ್ನೂ ಅಕ್ಕ ಮಹಾದೇವಿ ವಚನ, ವ್ಯಕ್ತಿತ್ವದ ಮಹತ್ವವೇ ಗೊತ್ತಿಲ್ಲ. ಆಕೆಯ ಹೆಸರಿನಿನಲ್ಲಿ ಅವಳ ಹುಟ್ಟಿದ ಊರನ್ನು ಚೆಂದದ ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂಬ ದರ್ದು, ಹುಕಿ ಕೂಡ ಇಲ್ಲಿ ತನಕ ಯಾರಲ್ಲೂ ಮೂಡದಿದ್ದುದು ದುರ್ದೈವವೇ. ಉಡುತಡಿ ಯಲ್ಲಿ ಅಕ್ಕಮಹಾದೇವಿಗೊಂದು ಸುಂದರ ಸ್ಮಾರಕ ಕಟ್ಟಬೇಕು ಎಂಬ ಯೋಚನೆ ಮೊದಲು ಬಂದಿದ್ದು ಯಡಿಯೂರಪ್ಪ ನವರಿಗಲ್ಲ.

೧೯೬೨ರಲ್ಲಿ ನಾಲ್ಕು ತಿಂಗಳುಗಳ ಅಲ್ಪ ಕಾಲ ಮುಖ್ಯಮಂತ್ರಿಯಾಗಿದ್ದ ಎಸ್.ಆರ್.ಕಂಠಿ ಮೊದಲ ಬಾರಿಗೆ ಉಡುತಡಿಯಲ್ಲಿ ಅಕ್ಕಮಹಾದೇವಿ ಹೆಸರನ್ನು ಶಾಶ್ವತವಾಗಿರಿಸುವ ಬಗ್ಗೆ ಯೋಜನೆ ರೂಪಿಸುವುದಾಗಿ ಪ್ರಸ್ತಾಪಿಸಿದ್ದರು. ಅನಂತರ
ಮುಖ್ಯಮಂತ್ರಿಯಾದ ಎಸ್. ನಿಜಲಿಂಗಪ್ಪನವರು ಉಡುತಡಿಯಲ್ಲಿ ಅಕ್ಕಮಹಾದೇವಿ ಪ್ರತಿಮೆ ಸ್ಥಾಪಿಸುವುದಾಗಿ ಹೇಳಿದ್ದರು.
ಕಳೆದ ಐವತ್ತೈದು ವರ್ಷಗಳಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿಗಳೆಲ್ಲ ದೊಡ್ಡ ದೊಡ್ಡ ವೇದಿಕೆಗಳಲ್ಲಿ, ವಿಧಾನಸಭೆಯಲ್ಲಿ, ಸಾರ್ವಜನಿಕ ಸಭೆ – ಸಮಾರಂಭಗಳಲ್ಲಿ, ತಮ್ಮ ಭಾಷಣಗಳಲ್ಲಿ ಅಕ್ಕಮಹಾದೇವಿ ವಚನಗಳನ್ನು ಹೇಳಿದ್ದಾರೆ.

ಅವಳನ್ನು ಹಾಡಿ ಹೊಗಳಿದ್ದಾರೆ. ಆದರೆ ಇವರಾರಿಗೂ ಅಕ್ಕಮಹಾದೇವಿ ಹುಟ್ಟಿದ ಊರನ್ನು ಸುಂದರವಾಗಿ ಅಭಿವೃದ್ಧಿ ಪಡಿಸಬೇಕು, ಅವಳ ಪ್ರತಿಮೆ ಸ್ಥಾಪಿಸಬೇಕು, ಅವಳ ವಚನಗಳನ್ನು ಕಲ್ಲಿನಲ್ಲಿ ಕೆತ್ತಿಡಬೇಕು, ಉಡುತಡಿಯನ್ನು ಒಂದು ಅನೂಹ್ಯ ಪ್ರವಾಸಿತಾಣವಾಗಿ ರೂಪಿಸಬೇಕು, ಅವಳ ಜೀವನ-ಸಾಧನೆಯನ್ನು ಇಡೀ ಜಗತ್ತಿಗೆ ತಿಳಿಸಿಕೊಡುವ ಪ್ರಯತ್ನ ಮಾಡಬೇಕು, ಆ
ಮೂಲಕ ಅವಳ ನೆನಪನ್ನು ಶಾಶ್ವತವಾಗಿರಿಸಬೇಕು ಎಂದು ಅನಿಸಲಿಲ್ಲ. ಇದಕ್ಕೆ ಏನೆನ್ನೋಣ? ಇಂದು ಉಡುತಡಿಗೆ ಭೇಟಿ ನೀಡಿದರೆ ಯಾರಿಗಾದರೂ ಬೇಸರವಾಗುತ್ತದೆ. ಅಂಥ ಅದ್ಭುತ ವಚನಗಳನ್ನು ಕೊಟ್ಟ, ಸಮಾಜದಲ್ಲಿ ಕ್ರಾಂತಿಗೆ ಕಾರಣಳಾದ ಆ ಪುಣ್ಯಾತಗಿತ್ತಿಯ ಕಂಚಿನ ವಿಗ್ರಹವನ್ನು, ಸರಳುಗಳ ಹಿಂದಿನ ಕೈದಿಗಳಂತೆ, ಬಂಧಿಸಿ ಇಟ್ಟಿದ್ದಾರೆ.

ಅಲ್ಲಿ ಸೌಂದರ್ಯ, ಸ್ವಚ್ಛತೆಗೆ ಕಿಮ್ಮತ್ತೇ ಇಲ್ಲ. ಮೂಲಭೂತ ಸೌಕರ್ಯಗಳೂ ಇಲ್ಲ. ಎಂಥ ಮಹಾವನಿತೆಗೆ ಇಂಥ ದಯನೀಯ ಸ್ಥಿತಿಯೇ ಎಂದು ಕನಿಕರವಾಗುತ್ತದೆ. ಇಲ್ಲಿಯವರೆಗೆ ನಮ್ಮ ಮುಖ್ಯಮಂತ್ರಿಗಳೆನಿಸಿಕೊಂಡವರಿಗೆ ಅಕ್ಕಮಹಾದೇವಿ ನಮ್ಮ
ಸಂಪತ್ತು, ಅವಳ ನೆನಪನ್ನು ಮುಂದಿನ ಪೀಳಿಗೆಗೂ ಶಾಶ್ಚತವಾಗಿರಿಸಬೇಕು, ಅವಳ ಸಾಧನೆಯಿಂದ ಜನ ಸದಾ ಪ್ರೇರಣೆ ಪಡೆಯ ಬೇಕು ಎಂದು ಅನಿಸಲೇ ಇಲ್ಲವಲ್ಲ, ಛೇ ! ಇಂಥ ಕೆಲಸಗಳಿಗೆ ಹಣದ ಕೊರತೆ ನೆಪವಾಗಬಾರದು.

ಬೇರೆ ಕುಂದುಗಳು ಕುತ್ತಾಗಬಾರದು. ಇದು ಜಗತ್ತು ಮೆಚ್ಚುವ ಕೆಲಸ. ಮುಂದಿನ ಪೀಳಿಗೆ ಹೆಮ್ಮೆಪಡುವ ಕೆಲಸ. ಅಕ್ಕಮಹಾದೇವಿ ಕಾಲಾತೀತಳು. ವಚನಗಳಲ್ಲಿ ಜೀವನಾನುಭವ ಮೊಗೆದುಕೊಟ್ಟ ಆ ಮಹಾಮಹಿಳೆಯ ತವರನ್ನು ಸುಂದರವಾಗಿಸಲು ನಾವು ವಚನ ಸ್ವೀಕರಿಸೋಣ! ಇದು ಯಡಿಯೂರಪ್ಪನವರ ಯೋಗಾಯೋಗ. ಅವರಿಗೆ ಆ ಮಹಾತಾಯಿಯ ಸೇವೆ ಮಾಡುವ ಸುಯೋಗ. ಅವರ ಮಗ, ಆ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರ ಭಾಗ್ಯ. ಇವರಿಬ್ಬರು ಉಡುತಡಿ ಅಭಿವೃದ್ಧಿಗೆ ಆಸ್ಥೆ ವಹಿಸಿದ್ದಾರೆ. ಇಬ್ಬರೂ ಅಭಿನಂದನಾರ್ಹರು !