ಶಶಾಂಕಣ
shashidhara.halady@gmail.com
ಸರಸ್ವತಿ ಚೇಳಿನ ನಾಜೂಕಾದ ಪುಟಾಣಿ ಗಾತ್ರವಂತೂ ವಿಸ್ಮಯ ಹುಟ್ಟಿಸುವಂಥದ್ದು. ಬೇರೆ ಬೇರೆ ಸಂದರ್ಭಗಳಲ್ಲಿ ಆಗಾಗ ಮನೆಯೊಳಗೆ ಬರುವ ಅವು, ಅಂದಾಜು ಒಂದು ಇಂಚಿನಿಂದ ಎರಡು-ಎರಡೂವರೆ ಇಂಚು ಉದ್ದವಿದ್ದುದನ್ನು ಕಂಡಿದ್ದೆ. ಅದಕ್ಕೂ ಉದ್ದನೆಯ ಸರಸ್ವತಿ ಚೇಳನ್ನು ನಾನು ಕಂಡಿಲ್ಲ. ಇದಕ್ಕಿಂತ ವಿಭಿನ್ನ ಪ್ರಭೇದದ, ಮೈಮೇಲೆ ಪಟ್ಟಿ ಪಟ್ಟಿ ಬಣ್ಣ ಇರುವ ಲಕ್ಷ್ಮಿ ಚೇಳುಗಳು ಇನ್ನೂ ಉದ್ದ, ದಪ್ಪ ಇರುತ್ತವೆ.
ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದ ಮನೆಯಲ್ಲಿ ವರ್ಷಗಟ್ಟಲೆ ವಾಸಿಸಿದವರಿಗೆ ಮಾತ್ರ ಪರಿಚಯವಿರಬಹುದಾದ ಒಂದು ಪುಟ್ಟಜೀವಿ ಇದೆ. ಅದುವೇ ಸರಸ್ವತಿ ಚೇಳು! ವಿದ್ಯುತ್ ಬೆಳಕಿಗೂ,
ಈ ಜೀವಿಯು ಗೋಚರವಾಗುವುದಕ್ಕೂ ಅದೇಕೆ ವಿರುದ್ಧ ಸಂಬಂಧವೆಂದು ನಿಮಗೆ ಕುತೂಹಲವೆ? ಹಾಗಿದ್ದರೆ, ೧೯೭೦ರ ದಶಕದಿಂದ ನನ್ನ ಕಥನ ಆರಂಭಿಸುವೆ. ನಸುಗತ್ತಲಿನ ಹೊತ್ತು. ಶಾಲೆಯಿಂದ ವಾಪಸಾದ ನಾವು ಮಕ್ಕಳು, ಪುಸ್ತಕಗಳನ್ನು ನೆಲದ ಮೇಲೆ ಹಾಸಿದ ಚಾಪೆಯ ಮೇಲೆ ಹರಡಿಕೊಂಡು, ಚೂರು ಪಾರು ಬರೆಯುವುದೋ, ಓದುವುದೋ ಮಾಡುತ್ತಾ ಕುಳಿತಿದ್ದೆವು.
ನಮ್ಮ ಓದಿಗೆ ಬೆಳಕು ನೀಡುತ್ತಿದ್ದುದು ಒಂದು ಚಿಮಿಣಿ ಎಣ್ಣೆಯ ಬುಡ್ಡಿ ದೀಪ. ಸಾಕಷ್ಟು ದುರ್ಲಭವೆಂದೇ ಪರಿಗಣಿಸಲ್ಪಟ್ಟ, ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ ಲಭ್ಯವಾಗಿದ್ದ, ಪಡಿತರ ಚೀಟಿಯಲ್ಲಿ ನಮೂದಾಗಿ, ತಿಂಗಳಿಗೆ ಒಂದೋ ಎರಡೋ ಬಾಟಲಿ (ಬಿಯರ್ ಬಾಟಲಿ ಗಾತ್ರ!) ದೊರಕುತ್ತಿದ್ದ ಚಿಮಿಣಿ ಎಣ್ಣೆಯನ್ನು ಜತನದಿಂದ ಉಪಯೋಗಿಸುವಂತೆ, ಹಿರಿಯರು ತಾಕೀತು ಮಾಡುತ್ತಿದ್ದರು.
‘ನಾವೆಲ್ಲಾ ಮಕ್ಕಳಾಗಿದ್ದಾಗ, ರಾತ್ರಿ ಏಳು ಗಂಟೆಗೇ ಊಟ ಮುಗಿಸಿ, ಎಲ್ಲರೂ ಲಗಬೇಕಿತ್ತು, ಗೊತ್ತಿತ್ತಾ? ಜಾಸ್ತಿ ದೀಪ ಉರಿಸಿದರೆ, ಎಣ್ಣೆ ಖಾಲಿ ಮಾಡಿದರೆ ದೊಡ್ಡವರು ಸಮಾ
ಬೈಯುತ್ತಿದ್ದರು’ ಎಂದು ಆಗಾಗ ಎಚ್ಚರಿಸುತ್ತಿದ್ದ ನಮ್ಮ ಅಮ್ಮಮ್ಮ, ನಾವು ಬೇಗಬೇಗನೆ ಪಾಠ ಓದುವ ಕೆಲಸ ಮುಗಿಸುತ್ತಿದ್ದೇವೋ, ಇಲ್ಲವೋ ಎಂಬುದನ್ನ ಪರಿಶೀಲಿಸಲು, ತಮ್ಮ ಕೆಲಸಗಳ ನಡುವೆಯೇ, ನಮ್ಮ ಸುತ್ತಮುತ್ತ ಆಗಾಗ ಠಳಾಯಿಸುತ್ತಿದ್ದರು. ‘ನೀವು, ಒಂದೇ ವರ್ಷ ಶಾಲೆಗೆ ಹೋಗಿದ್ದು, ಅಲ್ದಾ? ಆಗ ನಿಮಗೂ ಹೋಂ ವರ್ಕ್ ಕೊಟ್ಟಿದ್ದಾರಾ, ರಾತ್ರಿ ಕೂತ್ಕೊಂಡು ಬರೆಯೋಕೆ?’ ಎಂದು ನಾವು ಕಿಚಾಯಿಸುತ್ತಿದ್ದೆವು. ಅವರು ಕೆಲವು ತಿಂಗಳುಗಳ ಕಾಲ ಮಾತ್ರ ಐಗಳ ಮಠಕ್ಕೆ ಹೋಗಿ, ‘ರುಜು ಹಾಕಲು’ ಮತ್ತು ‘ಕನ್ನಡ ಅಕ್ಷರ ಓದಲು’ ಕಲಿತದ್ದು ಎಂದು
ಅದೆಷ್ಟೋ ಬಾರಿ ಹೇಳಿಕೊಳ್ಳುತ್ತಿದ್ದರಲ್ಲ!
‘ಅದೆಲ್ಲಾ ನಿಮಗೆಂತಕೆ? ನಾನು ಐಗಳ ಮಠಕ್ಕೆ ಒಂದು ವರ್ಷ ಹೋಗಿದ್ದೆನೋ, ಎರಡು ವರ್ಷ ಹೋಗಿದ್ದೆನೋ, ನಿಮಗ್ಯಾಕೆ? ಆ ಐಗಳು ಬೆತ್ತ ತಕೊಂಡು ಬಾರಿಸ್ತಿದ್ದರು ಗೊತ್ತಿತ್ತಾ? ನೀವೀಗ ಬೇಗ ಬರಿಯೋದು ಮುಗಿಸಿ, ಮನೇಲಿ ಸೀಮೆಎಣ್ಣೆ ಅರ್ಧ ಬಾಟಲಿ ಮಾತ್ರ ಉಳಿದಿದೆ’ ಎಂದು ಗದರುತ್ತಿದ್ದರು. ‘ಆಗ ನಿಮಗೆ ಚಿಮಿಣಿ ಬುಡ್ಡಿ ದೀಪವೇಯಾ?’ ಎಂದು ಮತ್ತೊಂದು ಪ್ರಶ್ನೆ ಕೇಳಿದಾಗ, ‘ಚಿಮಿಣೆ ಎಣ್ಣೆ ಆಗ ಇನ್ನೂ ಬರಲಿಲ್ಲ, ಆಗೆಲ್ಲಾ ಹೊನ್ನೆಣ್ಣೆ ದೀಪ. ಸೊಡರಿನಲ್ಲಿ ಬತ್ತಿ ಹಾಕಿ, ಹೊನ್ನೆಣ್ಣೆ ಹಾಕಿ ದೀಪ ಹಚ್ಚುವುದು; ಎಣ್ಣೆ ಖಾಲಿ ಆಗುವ ಮುಂಚೆ ಎಲ್ಲಾ ಊಟ ಮಾಡಿ ಮಲಗಬೇಕಿತ್ತು’ ಎಂದುತ್ತರಿಸಿ, ತಮ್ಮ ಕೆಲಸ ಮಾಡಲು ಹೋಗುತ್ತಿದ್ದರು. ನಮ್ಮ ಹಳ್ಳಿಯಲ್ಲಿ ಬಹು ಹಿಂದೆ, ಹೊನ್ನೆಕಾಯಿಗಳನ್ನು ಒಣಗಿಸಿ, ಜಜ್ಜಿ, ಕುದಿಸಿ ಎಣ್ಣೆ ಮಾಡಿ, ದೀಪ ಉರಿಸಲು
ಬಳಸುತ್ತಿದ್ದರಂತೆ. ದುಂಡನೆಯ ಹೊನ್ನೆಕಾಯಿಯಿಂದ ಎಣ್ಣೆ ತಯಾರಿಸುವ ಪದ್ಧತಿ ನಮ್ಮ ಬಾಲ್ಯಕಾಲದಲ್ಲಾಗಲೇ ಕಣ್ಮರೆಯಾಗಿದ್ರೂ, ಹಳೆಯ ಕೆಲವು ಹೊನ್ನೆ ಮರಗಳು ಗದ್ದೆಯ ಅಂಚಿನಲ್ಲಿ, ತೋಡಿನ ಬದಿಯಲ್ಲಿ ಅಲ್ಲಲ್ಲಿ ಬೆಳೆದುಕೊಂಡಿದ್ದವು. ಆಗಿನ ಜನರು, ಎಣ್ಣೆ ನೀಡುವ ಆ ಮರಗಳನ್ನು ಹಾಗೆ ಬೆಳೆಯಗೊಟ್ಟಿದ್ದರು ಎಂಬುದು ಸ್ಪಷ್ಟ.
ಪುಸು ಪುಸು ಹೊಗೆಬಿಡುತ್ತಿದ್ದ ಬುಡ್ಡಿ ದೀಪದ ಪಕ್ಕದಲ್ಲೇ ಕುಳಿತು, ಆ ಹೊಗೆಯು ನಮ್ಮ ಮುಖದತ್ತ ತೇಲಿ ಬರುತ್ತಿದ್ದರೂ, ತುಸು ಅತ್ತಿತ್ತ ಜರುಗಿ ಕುಳಿತು, ನಾನು ಮತ್ತು ನನ್ನ ತಂಗಿಯರು ಆ ರಾತ್ರಿಯ ‘ಅಧ್ಯಯನ’ದಲ್ಲಿ ಮಗ್ನರಾಗುವುದು ದಿನನಿತ್ಯದ ಪದ್ಧತಿ. ಇಲ್ಲವಾದರೆ, ಅಮ್ಮಮ್ಮ ಬಿಡುತ್ತಿರಲಿಲ್ಲವಲ್ಲ! ಅಬ್ಬಬ್ಬಾ ಅಂದರೆ, ಅರ್ಧ ಗಂಟೆಯಿಂದ ಒಂದು ಗಂಟೆಯೊಳಗೆ ನಮ್ಮ ಓದು ಮುಗಿಯುತ್ತಿತ್ತು ಅನ್ನಿ. ‘ಮಕ್ಕಳೆ, ಎದ್ದು ಈಚೆಗೆ ಬನ್ನಿ, ಈ ಬದಿಗೆ…’ ಎನ್ನುತ್ತಾ ತುಸು ಗಾಬರಿಯಿಂದ, ಒಂದು ತೆಂಗಿನ ಕಡ್ಡಿ ಪೊರಕೆ ಹಿಡಿದು ಅಮ್ಮಮ್ಮ ಗಡಿಯಿಡಿಯಿಂದ ನಮ್ಮತ್ತ ಬಂದರು ಅಂದರೆ, ಆ ಕಗ್ಗತ್ತಲ ರಾತ್ರಿಯಲ್ಲಿ ಯಾವುದೋ ಮರಕಪ್ಪೆಯೋ, ಅಪರಿಚಿತ ಸಂದಿಪದಿಯೋ ಮನೆಯೊಳಗೆ ಬಂದಿದೆ ಎಂದರ್ಥ.
ಓದುತ್ತಿದ್ದ ನಮಗೆ ಅದು ಒಂದು ಒಳ್ಳೆಯ ನೆಪ! ಓದು ತಪ್ಪಿಸಿಕೊಳ್ಳುವ ನೆಪ! ಪುಸ್ತಕಗಳನ್ನು ನೆಲದ ಮೇಲೆ ಹಾಗೆಯೇ ಬಿಟ್ಟು ನಾವು ಎದ್ದು ಓಡುವಷ್ಟರಲ್ಲಿ, ಅಮ್ಮಮ್ಮ ತನ್ನ ಕೈಲಿದ್ದ ಕಡ್ಡಿ ಪರಕೆಯನ್ನು ಮೆಲ್ಲಗೆ, ಸದ್ದಾಗುವಂತೆ ಗೋಡೆಯ ಬುಡಕ್ಕೆ ಬಡಿದೇ ಬಿಡುತ್ತಿದ್ದರು. ನಮಗೆಲ್ಲಾ ಕುತೂಹಲ! ರಾತ್ರಿ ಹೊತ್ತು ಮನೆಯೊಳಗೆ ಬಂದ ಅತಿಥಿ ಯಾರು? ‘ಕಾಣಿ ಮಕ್ಕಳೇ, ಹೇಗೆ ಇದರ ಮೈಮೇಲೆಲ್ಲಾ ಬೆಳಕಿನ ಬರೆಗಳು! ಕಾಣಿ’ ಎಂದು ಕಡ್ಡಿ ಪರಕೆಯನ್ನು ತುಸು ಈಚೆ ಸರಿಸಿದರು. ಆ ಪುಟ್ಟ ಜೀವಿಯನ್ನು ಅವರು ಕೊಲ್ಲಲಿಲ್ಲ, ಬದಲಿಗೆ, ಪರಕೆಯ ಮೂಲಕ ಹಿಡಿಯಲು
ಪ್ರಯತ್ನಿಸಿದ್ದರು.
ಅವರು ಪೊರಕೆ ಎತ್ತಿದ್ದ ಜಾಗದಲ್ಲಿ, ಒಂದು ಪುಟ್ಟಜೀವಿ ಅತ್ತಿತ್ತ ನುಲಿಯುತ್ತಾ, ನಿಧಾನವಾಗಿ ತೆವಳಲು ಪ್ರಯತ್ನಿಸುತ್ತಿತ್ತು. ಸುಮಾರು ಎರಡು ಇಂಚು ಉದ್ದ, ದಪ್ಪನೆಯ ದಾರದಷ್ಟು ದಪ್ಪ; ನಿಧಾನವಾಗಿ ತೆವಳುತ್ತಾ ಚಲಿಸುವ ಆ ಜೀವಿ ಸಂದಿಪದಿಯನ್ನು ಹೋಲುತ್ತಿದ್ದರೂ, ತುಸು ಭಿನ್ನವಾಗಿ ಕಾಣಿಸುತ್ತಿತ್ತು. ಅಚ್ಚರಿಯ ವಿಚಾರವೆಂದರೆ, ಅದರ ಹಸುರು ಮೈಮೇಲೆ, ಅಲ್ಲಲ್ಲಿ ಬೆಂಕಿಯಂಥ ಪುಟ್ಟ ಪುಟ್ಟ ಗೆರೆಗಳು! ಅಮ್ಮಮ್ಮ ಹೇಳಿದಂತೆ ‘ಬರೆ’ಗಳು! ಅದು ಅತ್ತಿತ್ತ ನುಲಿಯುತ್ತಿದ್ದಂತೆ, ಆ ಬೆಂಕಿಯ ಗೆರೆಗಳು ಹೆಚ್ಚು ಹೆಚ್ಚು ಹೊಳೆದು ಕಾಣುತ್ತಿದ್ದವು.‘ಇದೇ ಕಾಣಿ ಸರಸ್ವತಿ ಚೇಳು! ಹಿಡಿಸೂಡಿಯ ಕಡ್ಡಿಗಳು ತಾಗಿದ ಜಾಗದಲ್ಲಿ ಹೊಳೆಯುತ್ತಾ ಉಂಟು’ ಎಂದು ಅಮ್ಮಮ್ಮ ನಮಗೆ ಪರಿಸರದ ಪಾಠ ಹೇಳಿದರು!
ನಿಧಾನವಾಗಿ ಪೊರಕೆಯ ಒಂದೆರಡು ಕಡ್ಡಿಗಳನ್ನು ಆ ಸರಸ್ವತಿ ಚೇಳಿಗೆ ತಾಗಿಸಿದರು- ಆ ಜಾಗದಲ್ಲಿ ಇನ್ನೂ ಒಂದೆರಡು ಬೆಳಕಿನ ಪಟ್ಟಿಗಳು ಅದರ ಮೈಮೇಲೆ ಕಾಣಿಸಿಕೊಂಡವು. ಪೊರಕೆಯ ಕಡ್ಡಿ ತಾಗಿದ ಜಾಗದಲ್ಲೆಲ್ಲಾ ಮಿನುಗುವ ಗೆರೆಗಳು ಉತ್ಪತ್ತಿಯಾಗುವ ಆ ಕ್ರಿಯೆಯು, ಅದರ ದೇಹದ ಮೇಲೆಲ್ಲಾ ಬೆಳಕಿನ ಬಾಸುಂಡೆಗಳನ್ನೇ ಸೃಷ್ಟಿಸಿದ್ದವು. ‘ಸರಸ್ವತಿ ಚೇಳು ಮನೆಯೊಳಗೆ ಬಂದರೆ ಒಳ್ಳೆಯದು ಅಂತಾರೆ. ಅದನ್ನು ಸಾಯಿಸುವಂತಿಲ್ಲ. ಲಕ್ಷ್ಮಿ ಚೇಳು ಬಂದರೂ ಅಷ್ಟೆ, ಮನೆಗೆ ಒಳ್ಳೆಯದು. ಇವನ್ನು ನಿಧಾನವಾಗಿ ಹೊರಗೆ ಬಿಡಬೇಕು. ಸರಸ್ವತಿ ಚೇಳು ತನ್ನ
ಮೈಮೇಲೆ ಬೆಳಕಿನ ಬರೆಗಳನ್ನು ಮೂಡಿಸುವುದನ್ನು ತೋರಿಸುವುದಕ್ಕೋಸ್ಕರ, ಮೆಲ್ಲಗೆ ಒಂದು ಪೆಟ್ಟು ಹಾಕಿದೆ ಅಷ್ಟೆ. ಅದರ ಮೈ ಮಿಣಕು ಮಿಣಕು ಅಂಬುದನ್ನು ಕಂಡ್ರ್ಯಾ? ಇನ್ನು ಹೊರಗೆ ಬಿಡುವ’ ಎನ್ನುತ್ತಾ, ಕಡ್ಡಿ ಪೊರಕೆಯನ್ನು ನಿಧಾನವಾಗಿ ಸರಸ್ವತಿ ಚೇಳಿನ ಮೇಲಿಟ್ಟು, ಕಡ್ಡಿಗಳ ಸಂದಿಯಲ್ಲಿ ಅದನ್ನು ಹಿಡಿದು, ಅಂಗಳದಾಚೆಯ ತೆಂಗಿನ ಕಟ್ಟೆಯಲ್ಲಿ ಬಿಟ್ಟು ಬಂದರು.
ಆವತ್ತಿನ ನಮ್ಮ ಪಠ್ಯ ಅಧ್ಯಯನಕ್ಕೆ ವಿರಾಮ ಬಿತ್ತು; ಚಿಮಿಣಿ ಬುಡ್ಡಿ ದೀಪ ಹಿಡಿದು, ಊಟ ಮಾಡಲು ಒಳಗೆ ನಡೆದೆವು. ಸರಸ್ವತಿ ಚೇಳಿನ ನಾಜೂಕಾದ ಪುಟಾಣಿ ಗಾತ್ರವಂತೂ ವಿಸ್ಮಯ ಹುಟ್ಟಿಸುವಂಥದ್ದು. ಬೇರೆ ಬೇರೆ ಸಂದರ್ಭಗಳಲ್ಲಿ ಆಗಾಗ ಮನೆಯೊಳಗೆ ಬರುವ ಅವು, ಅಂದಾಜು ಒಂದು ಇಂಚಿನಿಂದ ಎರಡು-ಎರಡೂವರೆ ಇಂಚು ಉದ್ದವಿದ್ದುದನ್ನು ಕಂಡಿದ್ದೆ. ಅದಕ್ಕೂ
ಉದ್ದನೆಯ ಸರಸ್ವತಿ ಚೇಳನ್ನು ನಾನು ಕಂಡಿಲ್ಲ. ಇದಕ್ಕಿಂತ ವಿಭಿನ್ನ ಪ್ರಭೇದದ, ಮೈಮೇಲೆ ಪಟ್ಟಿ ಪಟ್ಟಿ ಬಣ್ಣ ಇರುವ ಲಕ್ಷ್ಮಿ ಚೇಳುಗಳು ಇನ್ನೂ ಉದ್ದ, ದಪ್ಪ ಇರುತ್ತವೆ. ಸಣ್ಣ ಕಡ್ಡಿಯನ್ನು ಸರಸ್ವತಿ ಚೇಳಿನ ನುಣುಪು ಮೈಗೆ ತಾಗಿಸಿದ ತಕ್ಷಣ, ಆ ಜಾಗ ಮಾತ್ರ ಬಾಸುಂಡೆ ಬಂದಂತೆ ಮಿನುಗುವುದು ಈ ಪ್ರಕೃತಿಯ ಒಂದು ವಿಸ್ಮಯವೇ ಸರಿ. ಅದೇನು ರಕ್ಷಣಾ ತಂತ್ರವೋ? ಬೇರೆ
ಜೀವಿಗಳು ತಾಗಿದರೆ ಅಥವಾ ಅಪಾಯ ಸನಿಹವಾದಾಗ, ಮೈತುಂಬಾ ಮಿನುಗುವ ಬೆಳಕನ್ನು ಉತ್ಪಾದಿಸಿ, ವೈರಿಯನ್ನು ಬೆದರಿಸುವ ತಂತ್ರವೋ? ಬಹಳ ಸೂಕ್ಷ್ಮ ದೇಹದ, ನಿಧಾನವಾಗಿ ನೆಲದ ಮೇಲೆ ತೆವಳುವ ಸರಸ್ವತಿ ಚೇಳಿನ ಮೈಮೇಲಿನ ಬೆಳಕಿನ ಬಾಸುಂಡೆಯನ್ನು, ವಿಕಾಸವಾದದ ಹಿನ್ನೆಲೆಯಲ್ಲಿ ಯಾವ ರೀತಿ ಅರ್ಥೈಸುವುದೋ ನನಗೆ ಸ್ಪಷ್ಟವಿಲ್ಲ.
ಇದಕ್ಕೆ ವೈಜ್ಞಾನಿಕ ಉತ್ತರವಿದ್ದೇ ಇರುತ್ತದೆ, ವಿಷಯ ತಜ್ಞರು ಈ ಕುರಿತು ವಿವರಣೆ ನೀಡಬಲ್ಲರು. ಇತ್ತ ಮನೆಯೊಳಗೆ ಸರಸ್ವತಿ ಚೇಳು ಮಿನುಗುತ್ತಿದ್ದರೆ, ಅತ್ತ ಮನೆಯ ಹೊರಭಾಗದಲ್ಲಿ (ಒಮ್ಮೊಮ್ಮೆ ಒಳಗೂ) ಹಾರಾಡುವ ಮಿಣುಕುಹುಳಗಳ ಬೆಳಕು ಇದಕ್ಕಿಂತ ವಿಭಿನ್ನ. ಅವು ತಮ್ಮ ಬಾಲದ ತುದಿಯಲ್ಲಿ ‘ಮಿಣುಕು ಮಿಣುಕು’ ಎಂದು ಬೆಳಕು ಮಾಡುತ್ತಾ, ರಾತ್ರಿಯಾಗಸದಲ್ಲಿ ಹಾರಾಡುತ್ತಿರುತ್ತವೆ. ಆದರೆ, ಸರಸ್ವತಿ ಚೇಳಿನ ದೇಹದ ಮೇಲ್ಭಾಗದಲ್ಲಿ, ಸಣ್ಣದಾಗಿ ಏಟಾದಾಗ ಒಡಮೂಡುವ ‘ಬೆಳಕಿನ ಬಾಸುಂಡೆ’ ಮಿಣುಕು ಹುಳಗಳ ಬೆಳಕಿಗಿಂತ ಭಿನ್ನ. ಸರಸ್ವತಿ ಚೇಳಿನ
ದೇಹದ ಮೇಲೆ ಏನಾದರೂ ಸಣ್ಣ ಏಟು ಅಕಸ್ಮಾತ್ ಬೀಳದೇ ಇದ್ದರೆ, ಅದು ಬೆಳಗುವುದೇ ಇಲ್ಲ! ಬಳುಕುವ ಹಸಿರು ದೇಹವನ್ನು ಹೊತ್ತು ತನ್ನ ಪಾಡಿಗೆ ತಾನು ತೆವಳುತ್ತಾ ಸಾಗುತ್ತದೆ, ಅಷ್ಟೆ.
ನಮ್ಮ ಹಳ್ಳಿ ಮನೆಯ ಸುತ್ತಮುತ್ತ ವಿದ್ಯುತ್ ಸಂಪರ್ಕ ದೊರೆತದ್ದು, ತೀರಾ ತಡವಾಗಿ. ಹಾಲಾಡಿ ಪೇಟೆಯಲ್ಲಿ ೧೯೬೦-೭೦ರ ದಶಕದಲ್ಲೇ ವಿದ್ಯುದ್ದೀಪಗಳು ಬೆಳಗಿದ್ದವು. ಆದರೆ, ಪೇಟೆಯ
ರಸ್ತೆಯಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿದ್ದ ನಮ್ಮ ಹಳ್ಳಿಮನೆಯ ಸರಹದ್ದಿಗೆ ವಿದ್ಯುತ್ ಸಂಪರ್ಕ ತರಲು ನಾನಾ ವಿಘ್ನಗಳು. ಕಂಬದ ಬೆಲೆ ಇಂತಿಷ್ಟು ಎಂದು ಲೆಕ್ಕಹಾಕಿ, ಎಷ್ಟು ಕಂಬ ಬೇಕೊ ಅಷ್ಟು ದುಡ್ಡು ಕೊಟ್ಟರೆ ವಿದ್ಯುತ್ ಕೊಡ್ತಾರಂತೆ, ಪಂಪ್ ಸೆಟ್ ಹಾಕಿಸಿಕೊಂಡರೆ ಬೇಗನೆ ವಿದ್ಯುತ್ ಸಂಪರ್ಕ ಕೊಡ್ತಾರಂತೆ- ಈ ರೀತಿಯ ಮಾತುಗಳು ನಮ್ಮ ಹಳ್ಳಿಯಲ್ಲಿ ಅದೆಷ್ಟು ಬಾರಿ ಚರ್ಚೆಗೆ ಒಳಗಾದವೋ ಲೆಕ್ಕವಿಲ್ಲ. ಈ ನಡುವೆ, ಯಾರೋ ಒಬ್ಬ ಭೂಪ ಬಂದು, ಜನರ ಆಸೆಗಳೊಂದಿಗೆ ಆಟವಾಡಿದ: ‘ಬೇಗ ಕರೆಂಟು ತರಿಸ್ತೇನೆ, ನೀವೆಲ್ಲಾ ಒಟ್ಟಿಗೆ ಸೈನ್ ಮಾಡಿ
ಅರ್ಜಿ ಕೊಡಿ, ನಾನು ಮಾಡಿಸ್ತೇನೆ’ ಎಂದು ಮನವಿ ಪತ್ರಕ್ಕೆ ಸಹಿ ಹಾಕಿಸಿಕೊಂಡು, ಹತ್ತಾರು ಮನೆಗಳಿಂದ ತಲಾ ೫೦೦ ಅಥವಾ ೧೦೦೦ ರುಪಾಯಿ ಪಡೆದು (ಕೊಡುವವರ ಶಕ್ತಿಯ ಮೇಲೆ ಈ ಮೊತ್ತದ ನಿಗದಿ!), ಅಂತರ್ಧಾನನಾದ ಘಟನೆಯೂ ನಡೆಯಿತು! ಪಾಪ, ಅವನು ಕರೆಂಟು ತರಿಸಿಕೊಡುತ್ತಾನೆ ಎಂದು ಎಲ್ಲರೂ ನಿಜವಾಗಿಯೂ ನಂಬಿದ್ದರು. ನಮ್ಮ ಹಳ್ಳಿಯ ಜನರು
ಅದೆಷ್ಟು ಮುಗ್ಧರು ಮತ್ತು ಒಳ್ಳೆಯವರು ಎಂದರೆ, ಆ ಭೂಪ ಎಲ್ಲರಲ್ಲೂ ಆಸೆ ಹುಟ್ಟಿಸಿ, ಹಣವನ್ನು ಮೋಸ ಮಾಡಿದ ಘಟನೆಯನ್ನು ಹಾಸ್ಯದ ವಸ್ತುವನ್ನಾಗಿ ಸ್ವೀಕರಿಸಿ, ಹೇಳಿಕೊಂಡು ನಕ್ಕರೇ ಶಿವಾಯ್, ಅವನನ್ನು ಶಿಕ್ಷಿಸಲು ಅವನ ಬೆನ್ನು ಹತ್ತಿ ಹೋಗಲಿಲ್ಲ.
ಕೊನೆಗೂ ೧೯೯೦ರ ದಶಕದಲ್ಲಿ ನಮ್ಮ ಹಳ್ಳಿಮನೆಗೆ ವಿದ್ಯುತ್ ಸಂಪರ್ಕ ದೊರಕಿತು; ಅದಕ್ಕಾಗಿ ನಮ್ಮಪ್ಪ ಸಾಕಷ್ಟು ಓಡಾಡಿ, ಚಪ್ಪಲಿ ಸವೆಸಿದರು. ವಿದ್ಯುತ್ ದೀಪ ಬಂದ ನಂತರ, ಸರಸ್ವತಿ ಚೇಳಿನ ಮೈಮೇಲಿನ ಬೆಳಕನ್ನು ನಾವು ಕಾಣಲು ಸಾಧ್ಯವಾಗಲಿಲ್ಲ! ಏಕೆಂದರೆ, ಅದರ ಮೈ ಮೇಲೆ ಮೂಡುವ ಬೆಳಕಿನ ಬಾಸುಂಡೆಗಳು ತುಂಬಾ ಸೂಕ್ಷ್ಮ; ಕಗ್ಗತ್ತಲಿನ ಪ್ರದೇಶವಿದ್ದರೆ, ಬುಡ್ಡಿ ದೀಪದ ಮಂಕು ಬೆಳಕಿದ್ದರೆ ಮಾತ್ರ ಕಾಣಿಸುವಷ್ಟು ತೆಳುವಾದ ಬೆಳಕು ಅದು. ವಿದ್ಯುತ್ ದೀಪದ ಪ್ರಖರತೆಯಲ್ಲಿ, ಬರಿಗಣ್ಣಿಗೆ ಗೋಚರವಾಗದಷ್ಟು ಸಣ್ಣ ಪ್ರಮಾಣದ ಬೆಳಕು. ಅದನ್ನು ಪೊರಕೆಯಲ್ಲಿ ಜೋಪಾನವಾಗಿ ಹಿಡಿದು, ಮನೆಯಿಂದ ತುಸು ದೂರ, ವಿದ್ಯುತ್ ದೀಪದ ಪ್ರಖರತೆಯ ವಲಯದಿಂದಾಚೆ ತೆಗೆದುಕೊಂಡು ಹೋಗಿ, ಐದು ನಿಮಿಷ ಅಲ್ಲೇ ಕತ್ತಲಲ್ಲಿ ನಿಂತು,
ರಾತ್ರಿಯ ಕಗ್ಗತ್ತಲಿಗೆ ಕಣ್ಣುಗಳು ಹೊಂದಿಕೊಂಡ ನಂತರ, ಸರಸ್ವತಿ ಚೇಳಿನ ಮೈಮೇಲಿನ ಬೆಳಕಿನ ಬಾಸುಂಡೆಗಳನ್ನು ನೋಡುವ ಪ್ರಯತ್ನ ಮಾಡಿದ್ದುಂಟು.
ಆದರೆ ವಿದ್ಯುತ್ ಸಂಪರ್ಕ, ಟಿವಿ, ಮಣಭಾರದಷ್ಟು ಹೋಂವರ್ಕ್, ನಂತರ ಮೊಬೈಲ್ ಮೊದಲಾದವುಗಳು ನಮ್ಮ ಹಳ್ಳಿಯ ದಿನಚರಿಯಲ್ಲಿ ಪ್ರವೇಶಿಸಿದ ನಂತರ, ಮೇಲ್ನೋಟಕ್ಕೆ ಕ್ಷುಲ್ಲಕವಾಗಿ
ಕಾಣುವ, ಸಣ್ಣ ಗಾತ್ರದ ಸರಸ್ವತಿ ಚೇಳಿನ ‘ಬೆಳಕಿನ ಬಾಸುಂಡೆ’ಯಂಥ ವಿಸ್ಮಯಗಳು, ಜನರ ಅರಿವಿನ ಪರಿಧಿಯಿಂದ ದೂರ ಹೊರಟುಹೋಗಿವೆ.