ಶಶಾಂಕಣ
shashidhara.halady@gmail.com
ಲಾಲಾ ಲಜಪತ್ ರಾಯ್ ಅವರ ಹೆಸರನ್ನು ನೀವೆಲ್ಲಾ ಕೇಳಿರಬೇಕು. ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡು, ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದರು. ೧೯೨೧ರಿಂದ ೧೯೨೩ರ ತನಕ ಜೈಲಿನಲ್ಲಿದ್ದರು. ೧೯೨೮ರಲ್ಲಿ ಸೈಮನ್ ಕಮಿಷನ್ ಭಾರತಕ್ಕೆ ಭೇಟಿ ನೀಡಿತ್ತು; ಭಾರತೀಯರ ಹಿತಚಿಂತನೆ ಮಾಡುತ್ತದೆ ಎನ್ನಲಾದ ಆ ಕಮಿಷನ್ ನಲ್ಲಿ ಭಾರತೀಯ ಸದಸ್ಯರೇ ಇರಲಿಲ್ಲ!
೩೦.೧೦.೧೯೨೮ರಂದು ‘ಸೈಮನ್ ಗೋ ಬ್ಯಾಕ್’ ಪ್ರತಿಭಟನೆಯು ಲಾಹೋರಿನಲ್ಲಿ ನಡೆದಿದ್ದು, ಅದರ ನೇತೃತ್ವವನ್ನು ಲಾಲಾ ಲಜಪತ್ ರಾಯ್ ವಹಿಸಿದ್ದರು. ಅವರದ್ದು ಶಾಂತಿಯುತ ಪ್ರತಿಭಟನೆ; ಕಪ್ಪು ಬಾವುಟ ಪ್ರದರ್ಶನ. ಆದರೆ, ಜೇಮ್ಸ್ ಎ. ಸ್ಕಾಟ್ ಎಂಬ ಬ್ರಿಟಿಷ್ ಪೊಲೀಸ್ ಸೂಪರಿಂಟೆಂಡೆಂಟ್‌ನು ಅವರ ಮೇಲೆ ಲಾಠಿ ಚಾರ್ಜ್ ಮಾಡಿಸಿದ; ಅವನು ಅದೆಷ್ಟು ತೀವ್ರವಾಗಿ ಅವರನ್ನು ಬಡಿಸಿದ್ದನೆಂದರೆ, ೧೭.೧೧.೧೯೨೮ರಂದು ರಾಯ್ ಅವರು ಆ ಏಟಿನಿಂದ ಮೃತಪಟ್ಟರು. ಅವರ ಮೇಲೆ ಬ್ರಿಟಿಷ್ ಪೊಲೀಸರು ಲಾಠಿಚಾರ್ಜ್ ಮಾಡಿದಾಗ, ಒಬ್ಬ ವ್ಯಕ್ತಿ
ಎದುರಿನಲ್ಲಿದ್ದ. ಅವನೇ ಭಗತ್‌ಸಿಂಗ್.
ಜೇಮ್ಸ್ ಎ. ಸ್ಕಾಟ್‌ನಿಗೆ ತಕ್ಕ ಪಾಠ ಕಲಿಸಬೇಕು ಎಂದು ಭಗತ್‌ಸಿಂಗ್ ನಿರ್ಧರಿಸಿ, ರಾಜಗುರು, ಸುಖದೇವ್ ಥಾಪರ್, ಚಂದ್ರಶೇಖರ್ ಆಜಾದ್ ಮೊದಲಾದವರೊಡನೆ ಸೇರಿ, ಒಂದು ತಂಡ ಕಟ್ಟಿ, ಬಂದೂಕುಗಳನ್ನು ತರಿಸಿಕೊಂಡ. ಇವರ ತಂಡ ಜೇಮ್ಸ್ ಎ. ಸ್ಕಾಟ್‌ನ ಮೇಲೆ ಗುಂಡು ಹಾರಿಸಿತು; ಆದರೆ, ಸ್ಕಾಟ್ ಬದಲು ಜಾನ್ಸ್ ಪಿ. ಸಾಂಡರ್ಸ್ ಎಂಬಾತನನ್ನು ಸಾಯಿಸಲಾಯಿತು. ಈತನು, ಲಾಹೋರಿನ ಪೊಲೀಸ್ ವಿಭಾಗದಲ್ಲಿ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಆಗಿದ್ದ. ಸಾಂಡರ್ಸ್ ಮೇಲೆ ಗುಂಡು ಹಾರಿಸಿದ್ದು ರಾಜಗುರು. ಬ್ರಿಟಿಷರು ನಮ್ಮ ದೇಶದಲ್ಲಿ ನಡೆಸಿದ ಅತಿ ಕ್ರೂರ ಎಂಬಂಥ ಕೆಲವು ನಡೆಗಳನ್ನು ನಾವಿಂದು ಮರೆತೇ ಬಿಟ್ಟಿದ್ದೇವೆ! ಈ ನಿಟ್ಟಿನಲ್ಲಿ ನೋಡಿದರೆ, ಭಾರತೀಯರು ಉದಾರ ಹೃದಯದವರು; ಅನ್ಯಾಯಗಳನ್ನು ಮರೆತು, ಕ್ಷಮಿಸಿದಂಥ ಸಜ್ಜನರು; ಇಂದಿಗೂ ಬ್ರಿಟಿಷರ ಕೆಲವು ಅನ್ಯಾಯಗಳ ಹೆಚ್ಚಿನ ವಿವರಗಳನ್ನು ಜನಸಾಮಾನ್ಯರಿಗೆ ಸ್ಪಷ್ಟವಾಗಿ ತಿಳಿಯದಂತೆ ಮಾಡಿ, ಬ್ರಿಟಿಷರನ್ನು ಪರೋಕ್ಷವಾಗಿ ಹೊಗಳುವ ಜನಾಂಗ ನಮ್ಮದು! ಇವರು ಭಗತ್ ಸಿಂಗ್‌ನನ್ನು ನಡೆಸಿಕೊಂಡ ರೀತಿ ಕ್ರೂರಾತಿಕ್ರೂರ.
ಕೇವಲ ೨೩ ವರ್ಷ ಬದುಕಿದ್ದ ಭಗತ್ ಸಿಂಗ್‌ನಿಗೆ, ಅಧಿಕೃತ ಮಾನ್ಯತೆ ಇಲ್ಲದ (ನಿಜ, ಅಧಿಕೃತ ಮಾನ್ಯತೆ ಇಲ್ಲದ) ಒಂದು ಟ್ರಿಬ್ಯುನಲ್ ಮೂಲಕ ವಿಚಾರಣೆ ನಡೆಸಿ, ಮರಣದಂಡನೆಯನ್ನು ಬ್ರಿಟಿಷ್ ಸರಕಾರ ವಿಧಿಸಿದ್ದು, ಈ ವಿಚಾರವು ಇಂದಿಗೂ ಸಾಕಷ್ಟು ಪ್ರಚಾರಕ್ಕೆ ಬಂದಿಲ್ಲ ಎನ್ನಬಹುದು. ಇಂದಿಗೂ ಜನಸಾಮಾನ್ಯರಲ್ಲಿ ಭಗತ್ ಸಿಂಗ್‌ನ ಕುರಿತು ಅಪಾರ ಗೌರವ
ಇದ್ದು, ಆತ ನಮ್ಮ ದೇಶಕ್ಕಾಗಿ ತನ್ನ ಪ್ರಾಣವನ್ನು ಕೊಟ್ಟ ಧೀರಯುವಕ ಎಂಬ ಮಾಹಿತಿ ಇದೆ; ಆದರೆ, ಅಂದಿನ ಕಾನೂನುವ್ಯಾಪ್ತಿ ಮೀರಿದ ಒಂದು ವ್ಯವಸ್ಥೆಯ ಮೂಲಕ ಆತನಿಗೆ ಮರಣ ದಂಡನೆ ವಿಽಸಲಾಯಿತು ಮತ್ತು ಇದು ಬ್ರಿಟಿಷ್ ಸರಕಾರ ಮಾಡಿದ ಘೋರ ಅನ್ಯಾಯಗಳಲ್ಲಿ ಒಂದು ಎಂಬ ವಿಚಾರದ ಸಮಗ್ರ ಅರಿವಿಲ್ಲ.
ಈ ರೀತಿ ಹೇಳಲು ದಾಖಲೆಗಳಿವೆ. ಅಂದು ಪ್ರಚಲಿತವಿದ್ದ, ಬ್ರಿಟಿಷರೇ ಹೊಗಳಿಕೊಂಡಿರುವ ನ್ಯಾಯವ್ಯವಸ್ಥೆಯ ವ್ಯಾಪ್ತಿಯಲ್ಲೇ, ‘ನ್ಯಾಯ ದಾನದ ಮೂಲ ತತ್ವ, ಸಿದ್ಧಾಂತಗಳಿಗೆ ತಿಲಾಂಜಲಿ
ಇಟ್ಟು, ಭಗತ್ ಸಿಂಗ್‌ನಿಗೆ ಮರಣದಂಡನೆಯನ್ನು ವಿಽಸಲಾಯಿತು’ ಎಂದು ಸುಪ್ರೀಂ ಕೋರ್ಟ್, ಆ ನಂತರ ಅಭಿಪ್ರಾಯ ಪಟ್ಟಿದೆ! ಇದು ಬ್ರಿಟಿಷರು ನಡೆಸಿದ ಈ ಕುಕೃತ್ಯದ ಕುರಿತಾಗಿ ಸ್ಪಷ್ಟ ಮತ್ತು ಖಚಿತ ಅಭಿಪ್ರಾಯವೇ ಸರಿ. ಬ್ರಿಟಿಷರೇ ರೂಪಿಸಿರುವ ವ್ಯವಸ್ಥೆಯಂತೆ, ನ್ಯಾಯ ನೀಡುವಾಗ, ಆರೋಪಿತನು ತನ್ನ ಅಹವಾಲನ್ನು ಹೇಳಿಕೊಳ್ಳುವ ಅವಕಾಶ ನೀಡಲೇಬೇಕು
ಎಂಬುದು ಪ್ರಾಥಮಿಕ ಅಂಶ. ಆದರೆ ಅಂಥ ಒಂದು ಸಮರ್ಪಕ ಅವಕಾಶವನ್ನು ನೀಡದೇ ಭಗತ್‌ಸಿಂಗ್ ನನ್ನು ಗಲ್ಲಿಗೆ ಏರಿಸಲಾಯಿತು! ಇದನ್ನು ನಡೆಸಿದ್ದು ಬ್ರಿಟಿಷ್ ಸರಕಾರದ ನ್ಯಾಯಾಂಗ ವ್ಯವಸ್ಥೆ!
ಭಗತ್ ಸಿಂಗ್ ಜನಿಸಿದ್ದು ಪಂಜಾಬ್‌ನಲ್ಲಿ, ಸೆಪ್ಟೆಂಬರ್ ೧೯೦೭ರಲ್ಲಿ. ಆತ ಜನಿಸಿದ ಊರು ಇಂದು ಪಾಕಿಸ್ತಾನಕ್ಕೆ ಸೇರಿಹೋಗಿದೆ. ೧೯೨೮ರಲ್ಲಿ ಆತನನ್ನು ಗಲ್ಲಿಗೇರಿಸಿದ ಲಾಹೋರ್ ಸಹ ಪಾಕಿಸ್ತಾನಕ್ಕೆ ಸೇರಿಹೋಯಿತು. ಭಗತ್ ಸಿಂಗ್‌ನು ಬ್ರಿಟಿಷರ ವಿರುದ್ಧ ಹೋರಾಡಿದ ರೀತಿಗೆ ಗಾಂಧೀಜಿಯವರ ಸಹಮತವಿರಲಿಲ್ಲ! ಬ್ರಿಟಿಷರ ವಿರುದ್ಧ ಗುಂಡು ಹಾರಿಸಬಾರದು ಎಂಬುದು ಅವರ ಖಚಿತ ನಿಲುವು; ಭಗತ್ ಸಿಂಗ್‌ನ ಜೀವವನ್ನು ಉಳಿಸಲು ಗಾಂಧೀಜಿ ಮತ್ತು ಅವರ ಪಕ್ಷ ಪ್ರಯತ್ನಿಸಲಿಲ್ಲ ಎಂಬ ಅಭಿಪ್ರಾಯವೂ ಇದೆ.
ಸಶಸ್ತ್ರ ಹೋರಾಟದ ಮೂಲಕ ಬ್ರಿಟಿಷರನ್ನು ಓಡಿಸಬಹುದು ಎಂದುಕೊಂಡಿದ್ದವರ ಗುಂಪಿಗೆ ಭಗತ್ ಸಿಂಗ್ ಸೇರುತ್ತಾನೆ. ೧೯೨೮ರಲ್ಲಿ ಬ್ರಿಟಿಷರು ಸೈಮನ್ ಕಮಿಷನ್ ಸ್ಥಾಪಿಸಿದರು. ಆದರೆ ಆ ಸಮಿತಿಯಲ್ಲಿ ಭಾರತೀಯರೇ ಇರಲಿಲ್ಲ! ಇದನ್ನು ಕಾಂಗ್ರೆಸ್ ಸಹಿತ ಎಲ್ಲರೂ ವಿರೋಧಿಸಿದರು. ಅಹಿಂಸಾತ್ಮಕ ಹೋರಾಟದಲ್ಲಿ ನಂಬಿಕೆ ಇಟ್ಟಿದ್ದ ಕಾಂಗ್ರೆಸ್‌ನ ಲಾಲಾ ಲಜಪತ್ ರಾಯ್ ಅವರ ನೇತೃತ್ವದಲ್ಲಿ ಅಹಿಂಸಾತ್ಮಕ ಮೆರವಣಿಗೆಯೊಂದು ೩೦.೧೦.೧೯೨೮ರಂದು ಲಾಹೋರ್‌ನಲ್ಲಿ ಹೊರಟಿತು. ಲಾಹೋರಿನ ಪೊಲೀಸ್ ಸೂಪರಿಂಟೆಂಡೆಂಟ್ ಜೇಮ್ಸ್ ಎ. ಸ್ಕಾಟ್ ಎಂಬಾತ ಈ ಮೆರವಣಿಗೆಯ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದು ಮಾತ್ರವಲ್ಲ, ಲಾಲಾ ಲಜಪತ್ ರಾಯ್ ಅವರ ಮೇಲೆ ತಾನೇ ಖುದ್ದಾಗಿ ಹಲ್ಲೆ ಮಾಡಿದ.
ಅಂದು ಏಟು ತಿಂದ ಲಾಲಾ ಲಜಪತ್ ರಾಯ್ ಅವರು ಕೆಲವೇ ದಿನಗಳಲ್ಲಿ ಮೃತಪಟ್ಟರು. ಲಾಲಾ ಲಜಪತ್ ರಾಯ್ ಕೊಲೆಗೆ ಸೇಡಿನ ರೂಪದಲ್ಲಿ ೧೯೨೮ರಲ್ಲಿ ಭಗತ್ ಸಿಂಗ್ ಮತ್ತು ಅವರ
ತಂಡದವರು ಹಾರಿಸಿದ ಗುಂಡಿಗೆ, ಚಂದ್ರಶೇಖರ ಆಜಾದರು ಬೆಂಬಲ ನೀಡಿದ್ದರು. ಆ ಸಂದರ್ಭದಲ್ಲಿ, ಸಾಂಡರ್ಸ್ ಎಂಬ ಪೊಲೀಸ್ ಅಧಿಕಾರಿ ಮತ್ತು ಚನನ್ ಸಿಂಗ್ ಎಂಬ ಪೊಲೀಸ್ ಸತ್ತುಹೋದರು. ಗುಂಡು ಚಲಾಯಿಸಿದ ತಕ್ಷಣ, ಭಗತ್‌ಸಿಂಗ್ ಮೊದಲಾದವರು ಸೈಕಲ್ ಹತ್ತಿ ತಪ್ಪಿಸಿಕೊಂಡರು. ವಿವಿಧ ವೇಷಗಳನ್ನು ಧರಿಸಿ, ಕಾನ್‌ಪುರ, ಹೌರಾ ಮೊದಲಾದ ಸ್ಥಳಗಳಲ್ಲಿ ತಲೆಮರೆಸಿಕೊಂಡರು.
ಆದರೆ ಭಗತ್‌ಸಿಂಗ್‌ನ ಹೃದಯದಲ್ಲಿ ಬ್ರಿಟಿಷರ ವಿರುದ್ಧದ ಹೋರಾಟದ ಕಿಡಿಯು ಜ್ವಾಲೆಯಾಗಿ ಉರಿಯತೊಡಗುತ್ತದೆ. ಸಾಂಡರ್ಸ್‌ನಂಥ ಬ್ರಿಟಿಷ್ ಪೊಲೀಸರನ್ನು ಸಾಯಿಸುವುದು ಮಾತ್ರ ವಲ್ಲ, ಬ್ರಿಟಿಷರ ವಿರುದ್ಧದ ಹೋರಾಟದ ತಮ್ಮ ವಿಧಾನವು ನಮ್ಮ ದೇಶದ ಜನರಿಗೆ ತಿಳಿಯುವಂತೆ ಮಾಡಬೇಕು, ಅದಕ್ಕೆ ಪ್ರಚಾರ ನೀಡಬೇಕು ಎಂಬುದು ಅವರ ಅಭಿಮತ. ಅದಕ್ಕೆಂದೇ, ೧೮.೧೨.೧೯೨೮ರಂದು ಅವರ ‘ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್’ (ಎಚ್‌ಎಸ್‌ಆರ್‌ಎ) ಸಂಘಟನೆಯು ಒಂದು ಕರಪತ್ರ ಹೊರಡಿಸಿ, ಲಾಲಾ ಲಜಪತ್ ರಾಯ್ ಅವರ ಕೊಲೆಗೆ ಪ್ರತಿಯಾಗಿ ಈತನನ್ನು ಸಾಯಿಸಿದ್ದೇವೆ ಎಂದು ಹೇಳಿಕೆ ನೀಡಿತು. ಅಂದು ಅದರ ಕಮಾಂಡರ್ ಇನ್ ಚೀಫ್ ಆಗಿದ್ದದು ಬಲರಾಜ್. ತಮ್ಮ ಹೋರಾಟಕ್ಕೆ ಹೆಚ್ಚು ಪ್ರಚಾರ ನೀಡಲು, ಇನ್ನೊಂದು ನಾಟಕೀಯ ಕೆಲಸವನ್ನು ಭಗತ್ ಸಿಂಗ್ ಮತ್ತು ಸಂಗಡಿದರು ಮಾಡಿದರು.
೮.೪.೧೯೨೯ರಂದು ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ತ ದೆಹಲಿಯ ಅಸೆಂಬ್ಲಿಯ ಸಾರ್ವಜನಿಕ ಗ್ಯಾಲರಿಯಿಂದ ಎರಡು ಕಚ್ಚಾ ಬಾಂಬ್ ಎಸೆದರು. ಆ ಬಾಂಬುಗಳಿಂದ ಯಾರನ್ನೂ ಸಾಯಿಸುವ ಉದ್ದೇಶ ಹೊಂದಿರಲಿಲ್ಲ, ಬದಲಿಗೆ ಪ್ರಚಾರವೇ ಮುಖ್ಯ ಉದ್ದೇಶ. ಕಚ್ಚಾ ಬಾಂಬ್‌ಗಳ ಜತೆಗೆ ಕರಪತ್ರಗಳನ್ನು ತೂರಿಬಿಟ್ಟರು. ಇಬ್ಬರೂ ‘ಇಂಕ್ವಿಲಾಬ್ ಜಿಂದಾಬಾದ್’ ಎಂದು ಘೋಷಣೆ ಕೂಗುತ್ತಾ, ಅಲ್ಲಿದ್ದ ಪೊಲೀಸರಿಗೆ ತಮ್ಮನ್ನು ತಾವು ಒಪ್ಪಿಸಿಕೊಂಡರು. ಈ ಸಮಯದಲ್ಲಿ ಸಾಂಡರ್ಸ್ ಕೊಲೆಯನ್ನು ಇವರೇ ಮಾಡಿದ್ದು ಎಂದು ಇನ್ನೂ ಬಯಲಾಗಿರಲಿಲ್ಲ.
ಅಸೆಂಬ್ಲಿ ಹಾಲ್ ಕಚ್ಚಾ ಬಾಂಬ್ ಸ್ಫೋಟದ ವಿಚಾರಣೆ ನಡೆದು, ಭಗತ್ ಸಿಂಗ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆ ಬಾಂಬ್ ಸ್ಪೋಟದಲ್ಲಿ ಯಾವುದೇ ಜೀವಹಾನಿ ಆಗಿರಲಿಲ್ಲ, ಆದರೂ ಜೀವಾವಧಿ ಶಿಕ್ಷೆ ವಿಧಿಸಿತು ಬ್ರಿಟಿಷ್ ನ್ಯಾಯದಾನ ವ್ಯವಸ್ಥೆ! ಈ ನಡುವೆ ೧೫.೪.೧೯೨೯ರಂದು ಲಾಹೋರಿನಲ್ಲಿ ಎಚ್ ಎಸ್‌ಆರ್‌ಎ ನಡೆಸುತ್ತಿದ್ದ ಸಣ್ಣ ಮಟ್ಟದ ರಹಸ್ಯ ಬಾಂಬ್ ಕಾರ್ಯಾ ಗಾರವನ್ನು ಬ್ರಿಟಿಷ್ ಪೊಲೀಸರು ಪತ್ತೆ ಹಚ್ಚಿದರು. ಸಹರಾನ್‌ಪುರದಲ್ಲಿದ್ದ ಇನ್ನೊಂದು ಪುಟ್ಟ ಕಾರ್ಯಾಗಾರವನ್ನು ಸಹ ಪತ್ತೆಹಚ್ಚಲಾಯಿತು.
ಅಲ್ಲಿದ್ದ ಕೆಲಸಗಾರರೇ ಬ್ರಿಟಿಷ್ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು! ಈ ಮಾಹಿತಿಯನ್ನು ಕೆದಕುತ್ತಾ ಹೋದ ಪೊಲೀಸರು, ಸಾಂಡರ್ಸ್ ಕೊಲೆ ಪ್ರಕರಣಕ್ಕೆ ಒಂದು ತಿರುವು ಕೊಟ್ಟು, ಭಗತ್ ಸಿಂಗ್, ಸುಖದೇವ್, ರಾಜಗುರು ಮತ್ತು ಇತರ ೨೧ ಜನರ ಮೇಲೆ ಆ ಕೊಲೆ ಪ್ರಕರಣ ಹೊರಿಸಿದರು. ಭಗತ್ ಸಿಂಗ್ ಮತ್ತು ಅವರ ಸಹವರ್ತಿಗಳನ್ನು ಇನ್ನಷ್ಟು ತೀವ್ರವಾದ ಶಿಕ್ಷೆಗೆ ಗುರಿಪಡಿಸಬೇಕು ಎಂದು ಬ್ರಿಟಿಷರು ನಿರ್ಧರಿಸಿದರು. ಇತರ ಪ್ರಸಿದ್ಧ ರಾಜಕೀಯ ಕೈದಿಗಳಂತೆ ಅವರಿಗೆ ಆರಾಮವಾದ ಜೈಲುಗಳನ್ನು ನೀಡಲಿಲ್ಲ; ಬದಲಿಗೆ ಕಠಿಣವಾಗಿ ನಡೆಸಿಕೊಂಡರು. ಅಂದು ನಮ್ಮನ್ನು ಆಳುತ್ತಿದ್ದ ವೈಸ್ ರಾಯ್ ಇರ್ವಿನ್‌ನು, ಈ ನಡುವೆ, ಇವರ ಪ್ರಕರಣದ ತನಿಖೆಗೆಂದು ವಿಶೇಷ ಟ್ರಿಬ್ಯುನಲನ್ನು (ನ್ಯಾಯಮಂಡಳಿ) ೧.೫.೧೯೩೦ರಂದು ಸ್ಥಾಪಿಸಿ
ದನು. ಇದರಲ್ಲಿ ಮೂವರು ನ್ಯಾಯಾಧೀಶರಿದ್ದರು.
ಅದು ನೀಡಿದ ತೀರ್ಪನ್ನು ಕೇವಲ ಇಂಗ್ಲೆಂಡಿನಲ್ಲಿದ್ದ ‘ಪ್ರೈವಿ ಕೌನ್ಸಿಲ್’ನಲ್ಲಿ ಮಾತ್ರ ಮರು ಅಪೀಲ್ ಮಾಡಬಹುದು ಎಂಬ ಕಠೋರ ಷರತ್ತನ್ನು ವೈಸ್‌ರಾಯ್ ಇರ್ವಿನ್ ವಿಧಿಸಿದನು. ಬ್ರಿಟಿಷರ ಈ
ನ್ಯಾಯದಾನದ ಪ್ರಕ್ರಿಯೆ ಎಷ್ಟು ಏಕಪಕ್ಷೀ ಯವಾಗಿತ್ತೆಂದರೆ, ಆರೋಪಿತರು ತಮ್ಮ ಕೇಸನ್ನು ಡಿಫೆಂಡ್ ಮಾಡುವಂತಿರಲಿಲ್ಲ. ಆ ನ್ಯಾಯಾಲಯದ ಆವರಣದಲ್ಲಿ ಆರೋಪಿಗಳು ಹಾಜರಿರ ಬೇಕೆಂದೇ ಇರಲಿಲ್ಲ ಮತ್ತು ಎಕ್ಸ್ ಪಾರ್ಟಿಯಾಗಿ ಅಂದರೆ, ಅವರ ಅನುಪಸ್ಥಿತಿಯಲ್ಲಿ ಶಿಕ್ಷೆಯನ್ನು ವಿಧಿಸಲಾಗಿತ್ತು! ೭.೧೦.೧೯೩೦ರಂದು ವಿಶೇಷ ಟ್ರಿಬ್ಯುನಲ್ ತನ್ನ ತೀರ್ಪನ್ನು ನೀಡಿತು. ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಇವರಿಗೆ ಸಾಂಡರ್ಸ್ ಪ್ರಕರಣದಲ್ಲಿ ಮರಣದಂಡನೆ ವಿಧಿಸಲಾಯಿತು.
ಕುಂದನ್ ಲಾಲ್‌ಗೆ ಏಳು ವರ್ಷ, ಪ್ರೇಮ್ ದತ್‌ಗೆ ಐದು ವರ್ಷ ಶಿಕ್ಷೆ ಮತ್ತು ಏಳು ಮಂದಿಗೆ ಗಡಿಪಾರಿನ ಶಿಕ್ಷೆ ವಿಧಿಸಲಾಯಿತು. ಇಲ್ಲೊಂದು ದೊಡ್ಡ ವ್ಯಂಗ್ಯ, ಅನ್ಯಾಯ, ಮೋಸ ನಡೆದಿತ್ತು. ವೈಸ್‌ರಾಯ್ ಇರ್ವಿನ್ ರೂಪಿಸಿದ ಮತ್ತು ಭಗತ್ ಸಿಂಗ್‌ಗೆ ಮರಣ ದಂಡನೆ ವಿಧಿಸಿದ ಈ ವಿಶೇಷ ಟ್ರಿಬ್ಯುನಲ್, ಕೊನೆಗೂ ಅಧಿಕೃತ ಮಾನ್ಯತೆಯನ್ನು ಪಡೆಯಲೇ ಇಲ್ಲ. ಅಂದಿನ ನಿಯಮ ದಂತೆ, ಬ್ರಿಟಿಷ್ ಪಾರ್ಲಿಮೆಂಟಿನ ಸೆಂಟ್ರಲ್ ಅಸೆಂಬ್ಲಿಯಲ್ಲಿ ಈ ವಿಶೇಷ ಟ್ರಿಬ್ಯುನಲ್‌ಗೆ ಮಾನ್ಯತೆ ದೊರಕಬೇಕಿತ್ತು;ಆದರೆ, ಯಾವುದೇ ಮಾನ್ಯತೆ ಪಡೆಯದೇ ಇರುವ ಈ ಟ್ರಿಬ್ಯೂನಲ್ ಭಗತ್ ಸಿಂಗ್ ಮತ್ತು ಅವರ ಗೆಳೆಯರಿಗೆ ಗಲ್ಲುಶಿಕ್ಷೆ ವಿಽಸಿತ್ತು. ಆ ಟ್ರಿಬ್ಯೂನಲ್‌ಗೆ ಯಾವುದೇ ಸಾಂವಿಧಾನಿಕ ಅಧಿಕಾರ ಕೊನೆಯ ತನಕವೂ ದೊರಕಲೇ ಇಲ್ಲ.
ಅದರ ಅರ್ಥ, ಅಧಿಕೃತ ಮಾನ್ಯತೆ ಇಲ್ಲದ ಒಂದು ಟ್ರಿಬ್ಯೂನಲ್ ರಚಿಸಿದ ಅಂದಿನ ಬ್ರಿಟಿಷ್ ಸರಕಾರ, ಆರೋಪಿಗಳಿಗೆ ತಮ್ಮ ಪ್ರಕರಣವನ್ನು ರಕ್ಷಿಸಿಕೊಳ್ಳುವ ಸಮರ್ಪಕ ಅವಕಾಶ
ನೀಡದೇ, ಮರಣದಂಡನೆಯನ್ನು ವಿಽಸಿತು! ೨೩.೩.೧೯೩೧ರಂದು ಭಗತ್ ಸಿಂಗ್ ಮತ್ತು ಇನ್ನಿಬ್ಬರನ್ನು ಲಾಹೋರಿನಲ್ಲಿ ಬ್ರಿಟಿಷರು ಫಾಶಿ ಶಿಕ್ಷೆ ವಿಧಿಸಿ, ಸಾಯಿಸಿದರು. ಇವರ ವಿಚಾರಣೆಯು
ನ್ಯಾಯದಾನದ ಮೂಲಭೂತ ವಿಧಿವಿಧಾನಗಳಿಗೆ ವಿರುದ್ಧವಾಗಿ ನಡೆದಿದೆ ಎಂದು ಸುಪ್ರೀಂ ಕೋರ್ಟ್ ನಂತರ ಹೇಳಿದೆ. ೨೪.೩.೧೯೩೧ರಂದು ಅವರನ್ನು ಮರಣದಂಡನೆಗೆ ಒಳಪಡಿಸಬೇಕು ಎಂಬ ಆದೇಶವಿದ್ದರೂ, ೨೩.೩.೧೯೩೧ರಂದು ಅವರನ್ನು ಬ್ರಿಟಿಷರು ಸಾಯಿಸಿದರು! ಅವರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಿಲ್ಲ, ಬದಲಿಗೆ, ಜೈಲಿನ ಹಿಂಭಾಗದ ಗೋಡೆಯಲ್ಲಿ ಒಂದು ತೂತು ಮಾಡಿ, ರಹಸ್ಯವಾಗಿ ಹೊರಸಾಗಿಸಿ ಅಂತ್ಯಕ್ರಿಯೆ ಮಾಡಲಾಯಿತು.
ಭಗತ್ ಸಿಂಗ್‌ನನ್ನು ನಾವೆಲ್ಲಾ ಇಂದು ನೆನಪಿಸಿಕೊಳ್ಳುತ್ತಿದ್ದೇವೆ. ಜತೆಯಲ್ಲೇ, ಅಧಿಕೃತ ಮಾನ್ಯತೆ ಇಲ್ಲದ ಒಂದು ಟ್ರಿಬ್ಯೂನಲ್ ಮೂಲಕ ಅವನಿಗೆ ಗಲ್ಲು ಶಿಕ್ಷೆಯನ್ನು ಬ್ರಿಟಿಷರು ವಿಽಸಿದರು
ಎಂಬುದನ್ನು ಸಹ ನೆನಪಿಸಿಕೊಳ್ಳಲೇಬೇಕು.