Thursday, 21st November 2024

ಕಾವೇರಿ ನದಿ ದಡದಲ್ಲಿರೋ ಬ್ಯಾಂಕ್ – ಕಾವೇರಿ ಬ್ಯಾಂಕ್

ತುಂಟರಗಾಳಿ

ಸಿನಿಗನ್ನಡ

ಕನ್ನಡ ಚಿತ್ರರಂಗಕ್ಕೂ ಕೃಷ್ಣನಿಗೂ ಅದೇನೋ ಒಂಥರಾ ಸ್ಪೆಷಲ್ ಸಂಬಂಧ. ‘ಕೃಷ್ಣ’ ಹೆಸರಲ್ಲಿ ಬಂದ ಸಿನಿಮಾಗಳಿಗೆ ಲೆಕ್ಕವೇ ಇಲ್ಲ. ನಟ ಅಜಯ್ ರಾವ್ ಅವರಂತೂ ಕೃಷ್ಣ ಅನ್ನೋ ಹೆಸರನ್ನ ಸಂಪೂರ್ಣ ಬಳಸಿಕೊಂಡು ಅನೇಕ ಸಿನಿಮಾಗಳನ್ನ ಮಾಡಿದ್ರು. ಇನ್ನು ಗಣೇಶ್ ಕೂಡಾ ‘ಕೃಷ್ಣ’ ಅನ್ನೋ ಸಿನಿಮಾ ಮಾಡಿದ್ರು. ಈಗ ಅವರದ್ದೇ ಅಭಿನಯದಲ್ಲಿ ‘ಕೃಷ್ಣಂ ಪ್ರಣಯ ಸಖಿ’ ಬಂದಿದೆ.

ಈ ಸಿನಿಮಾ ಹೇಗಿದೆ ಅಂತ ಕೇಳಿದ್ರೆ ಚೆನ್ನಾಗಿದೆ ಅಂತ ಹೇಳಬಹುದು. ಆದ್ರೆ ಹೊಸ ರೀತಿಯ ಕಾನ್ಸೆಪ್ಟ್ ಗಳ ಜತೆಗೆ ಇಂದಿನ ಪೀಳಿಗೆಯ ನಿರ್ದೇಶಕರು ಈ ವಾರ ಬಿಡುಗಡೆ ಆಗಿರೋ ‘ತಂಗಳಾನ್’ ಸಿನಿಮಾ ರೀತಿಯ ವಿಭಿನ್ನ ಸಿನಿಮಾಗಳನ್ನ ಮಾಡ್ತಾ ಇದ್ರೆ, ಇವರಿನ್ನೂ ಅದೇ ಹಳೇ ಕಥೆ ಇಟ್ಕೊಂಡು  ತಂಗಳನ್ನದ ಥರ ಸಿನಿಮಾ ಮಾಡ್ತಾ ಇದ್ದಾರೆ ಅಂತ ಕಂಪ್ಲೇಂಟ್ ಮಾಡೋದಾದ್ರೆ ಈ ಸಿನಿಮಾ ನಿಮಗೆ ಇಷ್ಟ ಆಗಲ್ಲ. ಅದನ್ನ ಬಿಟ್ಟು ‘ಕಾಮಿಡಿ,
ಹಾಡುಗಳು, ರೊಮ್ಯಾ, ಫ್ಯಾಮಿಲಿ ಸೆಂಟಿಮೆಂಟ್ ಇಷ್ಟಿದ್ರೆ ಸಾಕು, ಸಿನಿಮಾ ನೋಡ್ತೀನಿ’ ಅನ್ನೋರು ನೀವಾದ್ರೆ ಇದು ನಿಮ್ಮ ಕೆಟಗರಿ ಸಿನಿಮಾ. ಈ
ಚಿತ್ರದಲ್ಲಿ ನೀವು ಹೊಸತನ ಹುಡುಕಿದರೆ ದು ಅಪರಾಧ. ಆದ್ರೆ ಮನರಂಜನೆ ಹುಡುಕಿದ್ರೆ ನಿರಾಸೆ ಖಂಡಿತಾ ಇಲ್ಲ.

ಹಳೇ ಕಾನ್ಸೆಪ್ಟ್ ಆದ್ರೂ ಸಿನಿಮಾದಲ್ಲಿ ಲವಲವಿಕೆ ಇದೆ. ಅದಕ್ಕೆ ತಕ್ಕಂತೆ ದೊಡ್ಡ ತಾರಾಗಣ ಇದೆ. ತಮ್ಮ ಬುದ್ಧಿಮತ್ತೆ ಮತ್ತು ಅಲ್ಲಿ ಇಲ್ಲಿ ಕೇಳಿದ್ದು, ಓದಿದ್ದು ಎರಡನ್ನೂ ಚೆನ್ನಾಗಿ ಬಳಸಿಕೊಂಡಿರೋ ಡೈಲಾಗ್ ರೈಟರ್ ಇದ್ದಾರೆ. ನಾನ್ ಸ್ಟಾಪ್ ಕಾಮಿಡಿ, ಕೇಳ್ತಾನೆ ಇರಬೇಕು ಅನ್ನುವಂಥ ಹಾಡುಗಳಿವೆ. ಅವು ನೋಡೋಕೂ ಚೆನ್ನಾಗಿವೆ. ಬೋರಾಗು ವಂಥ ವಿಷಯ ಇಲ್ಲ. ಹಂಗಾಗಿ ಈ ಸಿನಿಮಾ ಎರಡೂ ಮುಕ್ಕಾಲು ಗಂಟೆ ಇದ್ದರೂ ಎಲ್ಲೂ ‘ಕಷ್ಟಂ ಪ್ರಯಾಣ ಸಖಿ’ ಅನ್ನುವಂಥ ಪರಿಸ್ಥಿತಿ ಬರಲ್ಲ.

ಹೇಳಿ ಕೇಳಿ ಗೋಲ್ಟನ್ ಸ್ಟಾರ್ ಗಣೇಶ್ ಇಂಥ ಚಿತ್ರಗಳಿಗೆ ಹೆಸರುವಾಸಿ. ಅವರು ತಮ್ಮ ಇಮೇಜ್‌ಗೆ ಹೊಂದುವ ಇಂಥ ಚಿತ್ರಗಳನ್ನೇ ಮಾಡೋದು. ಸಿನಿಮಾ ದಲ್ಲಿ ‘ಮೈ ಮ್ಯಾರೇಜ್ ಈಸ್ ಫಿಕ್ಸ್‌ಡ್, ಐ ಆಮ್ ರೆಡಿ ಟು ಟೇಕ್ ರಿ’ ಅಂತ ಹಾಡು ಹೇಳಿದ್ರೂ, ಸಿನಿಮಾ ವಿಷಯದಲ್ಲಿ ತೀರಾ ವಿಭಿನ್ನವಾದ ಕಾನ್ಸೆಪ್ಟ್ ತಗೊಂಡು ರಿ ತಗೊಳ್ಳೋಕೆ ಹೋಗಿಲ್ಲ ಅವರು. ಸಿನಿಮಾದ ಕಥೆ ನೋಡೋಕೆ ಹೋದ್ರೆ ನಿಮಗೆ ಅದರಲ್ಲಿ ಹಲವಾರು ಕಥೆಗಳು, ಹಲವಾರು ಸಿನಿಮಾಗಳು ಕಾಣಿಸಬಹುದು. ಏನೂ ಮಾಡೋಕಾ ಗಲ್ಲ. ಕೃಷ್ಣ ಅಂದ್ರೆ ದೇವರು. ಹಾಗಾಗಿ ದೇವನೊಬ್ಬ ನಾಮ ಹಲವು ಥರ ಇದೂ ಅಂದ್ಕೊಂಡು ಸುಮ್ನೆ ನೋಡ್ಬೇಕು.

ಲೂಸ್ ಟಾಕ್ -ಸಿದ್ರಾಮಯ್ಯ
ಏನ್ ಸರ್, ನಿಮ್ಮ ಮೇಲಿನ ಆಪಾದನೆಗಳು ದಿನೇದಿನೆ ಜಾಸ್ತಿ ಕಾವು ಪಡಕೊಳ್ತಾ ಇವೆಯಲ್ಲ?
– ದನ ಕಾಯೋ ಪರಮಾತ್ಮ ಕೃಷ್ಣನ್ನೇ ಆಪಾದನೆಗಳು ಬಿಡ್ಲಿಲ್ಲ, ಕುರಿ ಕಾಯೋ ಕುರುಬನ್ನ ಬಿಡ್ತಾವಾ, ಬಿಟ್ಟಾಕ್ರೀ ಅತ್ಲಾಗೆ.

ಆದ್ರೂ ನಿಮ್ಮನ್ನ ಮುಖ್ಯಮಂತ್ರಿ ಸ್ಥಾನದಿಂದ ಇಳಿಸೋಕೆ ತುಂಬಾ ಜನ ಟ್ರೈ ಮಾಡ್ತಾ ಇದ್ದಾರಲ್ಲ?
– ಏನ್ ಮಾಡೋದು ಸ್ವಾಮಿ, ‘ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಮಧ್ಯೆ ಸಿದ್ರಾಮಯ್ಯ ಬಡವಾದ’ ಅಂತಾರಲ್ಲ ಹಂಗಾಗ್ತಿದೆ.

ಅದೂ ನಿಜ ಬಿಡಿ. ಆದ್ರೆ ನೀವು ನಿಮ್ಮ ಸ್ಥಾನ ಕಳಕೊಂಡ್ರೆ ಅದಕ್ಕೆ ಯಾರು ಕಾರಣ?
– ನೋಡ್ರೀ, ‘ಬಿಹೈಂಡ್ ಎವ್ವೆರಿ ಅನ್-ಸಕ್ಸಸ್ ಫುಲ್ ಮ್ಯಾನ್ ದೇರ್ ಈಸ್ ಎ ವುಮನ್’ ಅಂತಾರೆ. ನನ್ನ ವಿಷಯದಲ್ಲಿ ಅದು ಬಿಟ್ಟಿ ‘ಭಾಗ್ಯ’
ಇರಬಹುದು.

ಇದ್ಯಾವುದೋ ಹೊಸ ಗಾದೆ ಹೇಳಿಬಿಟ್ರಲ್ಲ?
– ಅದ್ ಹಂಗೇ… ಗಾದಿ ಬಿಟ್ಟು ಇಳಿಯೋ ಟೈಮಲ್ಲಿ ಹಿಂಗೇ ಹೊಸ ಗಾದೆಗಳು ಹೊರಗೆ ಬರ್ತವೆ.

ಹೋಗ್ಲಿ, ನೀವು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ್ರೆ ನಿಮ್ಮ ಜಾಗದಲ್ಲಿ ಯಾರನ್ನ ಕೂಡಿಸ್ತೀರಾ?

– ರೀ ಅದೇನೋ ಅಂತಾರಲ್ಲ, ನಾನ್ ಸ್ಟಾಪ್ ಬಸ್ಸಲ್ಲಿ ನನ್ ಸ್ಟಾಪ್ ಬಂದಾಗ ಇಳಿದುಹೋಗ್ತೀನಿ, ಆಮೇಲೆ ನನ್ನ ಸೀಟಲ್ಲಿ ಯಾರ್ ಕೂತ್ರೆ ನಂಗೇನು?
(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ನ್ಯಾಷನಲ್ ಹೈವೇನಲ್ಲಿ ಎರಡು ಕಾರುಗಳು ಡಿಕ್ಕಿಯಾಗಿ ದೊಡ್ಡ ಅಪಘಾತವೇ ಆಯಿತು. ಕಾರು ಚಲಾಯಿಸುತ್ತಿದ್ದ ಖೇಮು ಕೆಳಗಿಳಿದು ಬಂದು ನೋಡಿದ. ಇನ್ನೊಂದು ಕಾರಿನಲ್ಲಿದ್ದಿದ್ದು ಒಂದು ಹುಡುಗಿ. ಹಾಗೆ ನೋಡಿದರೆ ಖೇಮುದೇನೂ ತಪ್ಪಿರಲಿಲ್ಲ. ಆಕೆಯೇ – ಆಗಿ ರಾಂಗ್ ಸೈಡಲ್ಲಿ ಬಂದು ಗುದ್ದಿದ್ದಳು. ಇಬ್ಬರ ಕಾರಿಗೂ ಡ್ಯಾಮೇಜ್ ಆಗಿತ್ತು. ಖೇಮು ಅವಳ ಬಳಿ ಎಲ್ಲದರ ಖರ್ಚು ವಸೂಲಿ ಮಾಡಬೇಕು ಎಂದುಕೊಂಡು ಬಂದ. ಆದರೆ ಹುಡುಗಿಯನ್ನ ನೋಡಿ ಒಂದು ಕ್ಷಣ ಮೈಮರೆತ. ಅಷ್ಟು ಚೆನ್ನಾಗಿದ್ಳು ಹುಡುಗಿ. ಅವಳು ಸೀದಾ ಇವನ ಬಳಿ ಬಂದವಳೇ, ಕಾಮ್ ಆಗಿ ಮಾತಾಡಿದಳು. ‘ಇಲ್ನೋಡಿ, ಇಬ್ಬರ ಕಾರೂ ಸಿಕ್ಕಾಪಟ್ಟೆ ಡ್ಯಾಮೇಜ್ ಆಗಿದೆ. ಆದರೆ ನಮಗಿಬ್ಬರಿಗೂ ಏನೂ ಆಗಿಲ್ಲ. ಇದರ ಅರ್ಥ ಏನು?’ ಅಂತ ಕೇಳಿದಳು. ‘ಏನು?’ ಅಂದ ಖೇಮು. ‘ನೋಡಿ, ನಮ್ಮಿಬ್ಬರನ್ನು ಸೇರಿಸೋಕೆ ಅಂತನೇ ದೇವರು ಈ ರೀತಿ ಮಾಡಿದ್ದಾನೆ.

ಅವನ ಮನಸ್ಸಿನಲ್ಲಿ ನಾವಿಬ್ಬರೂ ಜೊತೆಯಾಗಿ ಜೀವನ ಮಾಡಬೇಕು ಅನ್ನೋ ಆಸೆ ಇದೆ ಅನ್ನಿಸುತ್ತೆ. ಹಾಗಾಗಿ ನಮ್ಮನ್ನ ಈ ರೀತಿ ಭೇಟಿ ಮಾಡಿಸಿದ್ದಾನೆ’ ಅಂತ ರೊಮ್ಯಾಂಟಿಕ್ ಆಗಿ ಹೇಳಿದಳು. ಅದನ್ನು ಕೇಳಿ ಖೇಮು ಒಂದೇ ನಿಮಿಷದಲ್ಲಿ ಅವಳ ಕಡೆ ಆಕರ್ಷಿತನಾದ. ಆ ಹುಡುಗಿ ಮತ್ತೆ ಹೇಳಿದಳು, ‘ಅಲ್ನೋಡಿ, ನನ್ನ ಕಾರು ಅಷ್ಟೊಂದ್ ಡ್ಯಾಮೇಜ್ ಆಗಿದ್ದರೂ, ಅದರಲ್ಲಿದ್ದ ವಿಸ್ಕಿ ಬಾಟಲ್ ಮಾತ್ರ ಹಾಗೇ ಇದೆ. ಇದರ ಅರ್ಥ, ದೇವರು ನಮ್ಮ ಜೀವನದ ಈ ಪ್ರಮುಖ ಗಳಿಗೆಯನ್ನು ಎಂಜಾಯ್ ಮಾಡಿ ಅಂತ ನಮಗೆ ಹೇಳ್ತಾ ಇದ್ದಾನೆ’. ಖೇಮು ಹೌದು ಅಂತ ತಲೆ ಆಡಿಸಿದ.

ತಕ್ಷಣ, ಖೇಮುಗೆ ಒಂದು ಗ್ಲಾಸಿನಲ್ಲಿ ವಿಸ್ಕಿ ಸುರಿದು ಕೊಟ್ಟಳು. ಅವಳನ್ನು ನೋಡುತ್ತಾ ವಿಸ್ಕಿ ಹೀರುತ್ತಿದ್ದ ಖೇಮುಗೆ ಗ್ಲಾಸ್ ಖಾಲಿ ಆಗಿದ್ದೇ ಗೊತ್ತಾಗಲಿಲ್ಲ. ಮತ್ತೆ ವಿಸ್ಕಿ ಹಾಕಿದಳು ಹುಡುಗಿ. ಅದನ್ನೂ ಹೀರುತ್ತಾ ಖೇಮು, ‘ಅರೇ, ಬರೀ ನನಗೇ ಕುಡಿಸುತ್ತಿದ್ದೀಯ, ನೀನು ಕುಡಿಯಲ್ವಾ?’ ಅಂತ ಕೇಳಿದ. ಅದಕ್ಕೆ
ಹುಡುಗಿ ಹೇಳಿದಳು, ‘ಇಲ್ಲ, ಪೊಲೀಸ್ ಬರಲಿ ಅಂತ ನಾನು ಕಾಯ್ತಾ ಇದ್ದೀನಿ’.

ಲೈನ್ ಮ್ಯಾನ್

ಫುಡ್ V/S ಫಿಲಾಸಫಿ 
ಹಸಿವಿಲ್ಲದವನಿಗೆ ಅನ್ನ ಕೊಡಬಾರದು, ಟೇ ಇಲ್ಲದವನಿಗೆ ಬಿರಿಯಾನಿ ಕೊಡಬಾರದು.

ಸಹಕಾರ-ಸರಕಾರ
‘ಒಂದು ನಿಸ್ವಾರ್ಥ ಸೇವೆಯ ಕೆಲಸ ಮಾಡಬೇಕು ಅಂತಿದ್ದೀವಿ’. ‘ಮಾಡಿ, ಮಾಡಿ, ನನ್ನ ಸಹಕಾರ ಇದ್ದೇ ಇರುತ್ತೆ’. ‘ಹಂಗಾದ್ರೆ ಒಂದ್ ೧೦ ಲಕ್ಷ ಕೊಡಿ’.
‘ನಾನ್ ಹೇಳಿದ್ದು, ನನ್ನ ಸಹಕಾರ ಇದೆ ಅಂತ, ನನ್ನ ಸರಕಾರ ಇದೆ ಅಂತ ಅಲ್ಲ’.

ಕೆಲವರಿಗೆ ಎಷ್ಟ್ ಹೇಳಿದ್ರೂ ಬುದ್ಧಿ ಬರಲ್ಲ ಅನ್ನೋದನ್ನು ಹಿಂಗೂ ಹೇಳಬಹುದು ಕುರುಡರ ಜೊತೆ ಕಣ್ಣಾಮುಚ್ಚಾಲೆ ಆಡೋಕಾಗುತ್ತಾ?
ಹೋಟೆಲ್ ಉದ್ಯಮದ ಸತ್ಯ ಸಣ್ಣ ರೂಮ್ ಥರ ಇದ್ದ ಹೋಟೆಲ್, ಎಷ್ಟೇ ದೊಡ್ಡ ಲೆವೆಲ್‌ಗೆ ಬೆಳೆದು ಬದಲಾದ್ರೂ, ಎಕ್ಸ್‌ಟ್ರಾ ಚಟ್ನಿ ಕೇಳ್ದಾಗ
ಮುಖ ನೋಡೋದ್ ಮಾತ್ರ ಬದಲಾಗಲ್ಲ.

ಒಂದ್ ಡೌಟು
ನಿಂಗೆ ಇಗೋ ಜಾಸ್ತಿ ಅಂತ ಹೇಳಿದಾಗ, ‘ಹೌದು’ ಅಂತ ಒಪ್ಪಿಕೊಳ್ಳೋನಿಗೆ ಇಗೋ ಇದೆ ಅಂತ ಅರ್ಥನಾ?
ಇಲ್ಲ ಅಂತ ಅರ್ಥನಾ?

ಕಾವೇರಿ ನದಿ ‘ದಡ’ದಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ಅನ್ನು ಏನಂತಾರೆ ?
ಕಾವೇರಿ ‘ಬ್ಯಾಂಕ್’

ವಿದ್ಯೆ, ಕೆಲಸ ಇಲ್ಲದೆ ಮನೆಗೆ ದೊಡ್ಡ ತಲೆನೋವಾಗಿರುವ ಮಗ
ಅಮೃತಾಂಜನೀಪುತ್ರ

ವಿವಾದಿತ ಪುಸ್ತಕ ಬರೆದು ಜೈಲು ಸೇರಿದವನು
‘ಬುಕ್ಡ್’

ನಿಮ್ಮ ಮೇಲೆ ಯುದ್ಧ ಮಾಡ್ತೀವಿ ಅಂತ ಮೊದಲೇ ಕೊಡುವ ಎಚ್ಚರಿಕೆ
‘ವಾರ್’ ನಿಂಗ್

ಯಾರ ಮುಡಿ ಸೇರುತ್ತೆ ಅನ್ನೋದು ಗೊತ್ತಿಲ್ಲದ ಪುಷ್ಪ
Whoವು