ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಖಾಸಗಿ ವಾಹಿನಿಯ (ಪವರ್ ಟಿವಿ) ಮುಖ್ಯಸ್ಥರು ಅವಹೇಳನಕಾರಿ ಹೇಳಿಕೆ ನೀಡಿದ್ದು ಇನ್ನು ಮುಂದೆ ಇಂತಹ ಸುದ್ದಿ ಪ್ರಸಾರ ಮಾಡುವುದನ್ನು ನಿಲ್ಲಿಸದಿದ್ದರೆ ಹೋರಾಟ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಖಾಸಗಿ ವಾಹಿನಿಯ ಮಾಲೀಕರು ದೇವೇಗೌಡರ ಬಗ್ಗೆ ಹಗುರವಾಗಿ ಪದೇಪದೇ ಮಾತನಾಡುವುದನ್ನು ನಿಲ್ಲಿಸಬೇಕು. ಒಂದು ವೇಳೆ ಮುಂದುವರೆಸಿದ್ದೇ ಆದರೆ ಸಮುದಾಯದ ವಿವಿಧ ಸಂಘಟನೆಗಳ ಜೊತೆ ದೊಡ್ಡ ಮಟ್ಟದ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದರು.
ದೇವೇಗೌಡರ ಬಗ್ಗೆ ಅವಹೇಳನಕಾರಿ ಸುದ್ದಿ ಬಿತ್ತರವಾಗಿರುವುದರ ಬಗ್ಗೆ ಒಕ್ಕಲಿಗ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮಿಜಿಯವರನ್ನು ಭೇಟಿ ಮಾಡಿ ಮಾರ್ಗದರ್ಶನವನ್ನು ಪಡೆಯಲಾಗುವುದು ಎಂದು ಹೇಳಿದರು.
ರಾಜ್ಯ, ರಾಷ್ಟ್ರಕ್ಕಾಗಿ ಆರು ದಶಕಗಳ ಕಾಲ ದೇವೇಗೌಡರು ಸಾಕಷ್ಟು ಹೋರಾಟ ನಡೆಸಿ ಸೇವೆಯನ್ನು ಸಲ್ಲಿಸಿದ್ದಾರೆ. ಅಂತವರ ಬಗ್ಗೆ ಅಗೌರವ ವಾಗಿ ಮಾತನಾಡುವುದು ಸರಿಯಲ್ಲ. ಯಾವುದೇ ಮಾಧ್ಯಮ ಇದುವರೆಗೂ ಅವರ ಬಗ್ಗೆ ಅಗೌರವವಾದ ಸುದ್ದಿ ಪ್ರಕಟಿಸಿಲ್ಲ. ರಾಷ್ಟ್ರಮಟ್ಟದಲ್ಲೂ ಅವರ ಸಾಧನೆ, ಸೇವೆಯ ಬಗ್ಗೆ ಮೆಚ್ಚುಗೆಯ ಸುದ್ದಿ ಪ್ರಸಾರವಾಗಿದೆ ಎಂದರು.
ಈಗಾಗಲೇ ಅವಹೇಳನಕಾರಿ ರೀತಿ ಹೇಳಿಕೆ ಹಾಗೂ ಸುದ್ದಿ ಪ್ರಸಾರ ಮಾಡಿರುವ ಬಗ್ಗೆ ಕ್ಷಮೆ ಯಾಚಿಸಬೇಕೆಂದು ಅವರು ಆಗ್ರಹಿಸಿದರು.
ಖಾಸಗಿ ಸುದ್ದಿವಾಹಿನಿಯಲ್ಲಿ ದೇವೇಗೌಡರ ಬಗ್ಗೆ ಪ್ರಸಾರವಾಗಿರುವ ಸುದ್ದಿ ತುಂಬಾ ನೋವು ತಂದಿದೆ. ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಮುತ್ಸದ್ದಿ ಅವರು. ಅಂತವರ ಬಗ್ಗೆ ಹಗುರವಾಗಿ ಸುದ್ದಿ ಪ್ರಸಾರ ಮಾಡಿ ಬ್ಲಾಕ್ಮೇಲ್ ಮಾಡುವುದು ಸರಿಯಲ್ಲ. ಇದನ್ನು ಮುಂದೆ ಸರಿಪಡಿಸಿಕೊಂಡು ಹೋಗ ದಿದ್ದರೆ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ನಿರ್ದೇಶಕರಾದ ಕೆ.ವಿ.ಶ್ರೀಧರ್ ಮಾತನಾಡಿ, ದೇವೇಗೌಡರನ್ನು ಅವಮಾನಿಸುವುದು ನಾಡಿನ ಜನರನ್ನು ಅವಮಾನಿಸಿದಂತಾಗುತ್ತದೆ. ಟಿಆರ್ಪಿಗಾಗಿ ಅಗೌರವಯುತವಾದ ಸುದ್ದಿ ಪ್ರಸಾರ ಮಾಡಬಾರದು. ಅನ್ಯಾಯವಾಗಿದ್ದರೆ ಕಾನೂನು ಚೌಕಟ್ಟಿನಲ್ಲಿ ಹೋರಾಟ ನಡೆಸಲಿ ಎಂದರು.
ನಿರ್ದೇಶಕ ಡಾ.ಅಂಜನಪ್ಪ ಮಾತನಾಡಿ , ಖಾಸಗಿ ವಾಹಿನಿ ಜನರಿಗೆ ತಪ್ಪು ಸಂದೇಶ ನೀಡಬಾರದು. ಆಗಿರುವುದನ್ನು ಸರಿಪಡಿಸಿಕೊಂಡು ಮತ್ತೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು.