ಹಿಂದಿರುಗಿ ನೋಡಿದಾಗ
ನಮ್ಮ ಪೂರ್ವಜರ ಕಾಲಮಾನವನ್ನು ಶಿಲಾಯುಗ, ಕಂಚಿನ ಯುಗ ಮತ್ತು ಕಬ್ಬಿಣದ ಯುಗ ಎಂದು ವರ್ಗೀಕರಿಸಬಹುದು. ಶಿಲಾಯುಗವನ್ನು ಮತ್ತೆ
ಮೂರು ಉಪಯುಗಗಳನ್ನಾಗಿ ವರ್ಗೀಕರಿಸುವ ಪದ್ಧತಿಯಿದೆ.
ಪ್ರಾಚೀನ ಶಿಲಾಯುಗ, ಕ್ರಿ.ಪೂ.೫,೦೦,೦೦೦-ಕ್ರಿ.ಪೂ. ೧೦,೦೦೦ ವರ್ಷಗಳು ನಡುವಿನ ಅವಧಿ; ಮಧ್ಯಮ ಶಿಲಾಯುಗ, ಕ್ರಿ.ಪೂ.೧೦,೦೦೦-ಕ್ರಿ.ಪೂ.೬,೦೦೦ ವರ್ಷಗಳ ನಡುವಿನ ಅವಧಿ;
ನವಶಿಲಾಯುಗ, ಕ್ರಿ.ಪೂ.೬೦೦೦-ಕ್ರಿ.ಪೂ.೧,೦೦೦ ವರ್ಷಗಳ ನಡುವಿನ ಅವಧಿ.
ನವಶಿಲಾಯುಗದ ಕಾಲವ್ಯಾಪ್ತಿಯಲ್ಲಿ ‘ಕಂಚಿನಯುಗ’ ಅಥವಾ ‘ಚಾಲ್ಕೋಲಿಥಿಕ್’ ಯುಗವು ಅಲ್ಲಲ್ಲಿ ಕಾಣಿಸಿಕೊಂಡಿತು. ಸರಿಸುಮಾರು ೩,೦೦೦ ವರ್ಷಗಳ ಹಿಂದೆ ಆರಂಭವಾಗಿ ಕ್ರಿ.ಪೂ.೫೦೦ರವರೆಗೆ ಮುಂದುವರಿಯಿತು. ಗ್ರೀಕ್ ಭಾಷೆಯಲ್ಲಿ ‘ಖಾಲ್ಕೋಸ್’ ಎಂದರೆ ತಾಮ್ರ, ‘ಲಿಥೋಸ್’ ಎಂದರೆ ಕಲ್ಲು. ಹಾಗಾಗಿ ಚಾಲ್ಕೋಲಿಥಿಕ್ ಯುಗವನ್ನು ‘ತಾಮ್ರಶಿಲಾಯುಗ’ ಎಂದು ಕರೆಯುವುದುಂಟು. ಆದರೆ ವಾಡಿಕೆಯಲ್ಲಿ ಈ ಅವಧಿಯು ಕಂಚಿನ ಯುಗ (ಬ್ರಾಂಜ಼್ ಏಜ್) ಎಂದೇ ಪ್ರಸಿದ್ಧವಾಗಿದೆ. ಈ ಅವಧಿಯಲ್ಲಿ ನಮ್ಮ ಪೂರ್ವಜರು ತಾಮ್ರವನ್ನು ಮೊದಲ ಬಾರಿಗೆ ಕಂಡುಹಿಡಿದರು ಎನ್ನುವುದು ನಿಜ.
ಆದರೆ ಅವರು ತಾಮ್ರಕ್ಕಿಂತ ಕಂಚನ್ನು, ಕಂಚಿನಿಂದ ಮಾಡಿದ ಉಪಕರಣಗಳನ್ನೇ ಬಳಸಿದ್ದು ಹೆಚ್ಚು. ತಾಮ್ರದ ಜತೆಯಲ್ಲಿ ಸುಮಾರು ಶೇ.೧೨ರಷ್ಟು
ತವರವನ್ನು ಮಿಶ್ರ ಮಾಡಿದರೆ ಕಂಚು ದೊರೆಯುತ್ತದೆ. ಈ ಕಂಚಿನ ಯುಗದ ನಂತರ ‘ಕಬ್ಬಿಣದ ಯುಗ’ವು ಸರಿಸುಮಾರು ಕ್ರಿ.ಪೂ.೧೫೦೦ರಲ್ಲಿ ಆರಂಭವಾಗಿ ಕ್ರಿ.ಪೂ.೨೦೦ ರವರೆಗೆ ಮುಂದುವರಿಯಿತು.
ನಮ್ಮ ಪೂರ್ವಜರು ಈ ಕಂಚಿನ ಯುಗದಲ್ಲಿ ಐದು ಮಹಾನ್ ನಾಗರಿಕತೆಗಳನ್ನು ಕಟ್ಟಿದರು. ಈ ನಾಗರಿಕತೆಗಳ ನಿರ್ಮಾಣದಲ್ಲಿ ಕಂಚು ಮತ್ತು ಕಂಚಿನಿಂದ ಮಾಡಿದ ಆಯುಧಗಳು, ಗೃಹೋಪಕರಣಗಳು, ಸಾಧನಗಳು ಸಾಮ್ರಾಜ್ಯ ವಿಸ್ತರಣೆಗೆ, ಕೃಷಿಗೆ ಹಾಗೂ ನಗರ ನಿರ್ಮಾಣಕ್ಕೆ ನೆರವಾದವು. ಪ್ರಾಚೀನ ಮೆಸೊಪೊಟೋಮಿಯನ್ ನಾಗರಿಕತೆ (ಕ್ರಿ.ಪೂ.೪೪೦೦-ಕ್ರಿ.ಪೂ.೧೯೦೦), ಪ್ರಾಚೀನ ಸಿಂಧು- ಸರಸ್ವತಿ ಕಣಿವೆಯ ನಾಗರಿಕತೆ (ಕ್ರಿ.ಪೂ.೩೩೦೦-
ಕ್ರಿ.ಪೂ.೧೩೦೦), ಪ್ರಾಚೀನ ಈಜಿಪ್ಷಿಯನ್ ನಾಗರಿಕತೆ (ಕ್ರಿ.ಪೂ.೩೧೦೦-ಕ್ರಿ.ಪೂ.೩೩೨), ಪ್ರಾಚೀನ ಮಿನೋವನ್ ನಾಗರಿಕತೆ (ಕ್ರಿ.ಪೂ.೩೦೦೦-ಕ್ರಿ.ಪೂ. ೧೧೦೦) ಮತ್ತು ಪ್ರಾಚೀನ ಚೀನೀ ನಾಗರಿಕತೆ (ಕ್ರಿ.ಪೂ.೧೬೦೦-ಕ್ರಿ.ಪೂ.೨೨೧) ಈ ಐದು ನಾಗರಿಕತೆಗಳಲ್ಲಿ ಮೆಸೊಪೊಟೋಮಿಯನ್ ನಾಗರಿಕತೆಯಲ್ಲಿ ವೈದ್ಯಕೀಯ, ವೈದ್ಯಕೀಯ ಪದ್ಧತಿ ಹಾಗೂ ಆಸ್ಪತ್ರೆಗಳು ಬೆಳೆದು ಬಂದ ಬಗೆಯತ್ತ ಒಂದು ಪಕ್ಷಿನೋಟವನ್ನು ಹರಿಸೋಣ.
ಮೆಸೊಪೊಟೋಮಿಯನ್ ನಾಗರಿಕತೆಯನ್ನು ‘ನಾಗರಿಕತೆಯ ತೊಟ್ಟಿಲು’ (ಕ್ರಾಡಲ್ ಆಫ್ ಸಿವಿಲೈಜ಼ೇಶನ್) ಎಂದು ಕರೆಯುವುದುಂಟು. ಹಾಗಾಗಿ ಸಮಕಾಲೀನ ಮನುಕುಲ ನಾಗರಿಕತೆಯ ಎಲ್ಲ ಬೇರುಗಳನ್ನು ಮೆಸೊಪೊಟೋಮಿಯನ್ ನಾಗರಿಕತೆಯಲ್ಲೇ ಹುಡುಕಬೇ ಕಾಗುತ್ತದೆ. ಸಮಕಾಲೀನ ಆಸ್ಪತ್ರೆಗಳ ನಿರ್ಮಾಣ ಹಾಗೂ ಕಾರ್ಯವೈಖರಿಗಳ ಸ್ಥೂಲ ಪರಿಕಲ್ಪನೆಯು ಮೆಸೊ ಪೊಟೋಮಿಯನ್ ನಾಗರಿಕತೆಯಲ್ಲಿ ಕಂಡುಬರುತ್ತದೆ. ಪ್ರಾಚೀನ ಮೆಸೊಪೋಟೋಮಿಯನ್ ನಾಗರಿಕತೆಯನ್ನು ನಾವು ಇಂದು ‘ಇರಾಕ್’ ಎಂಬ ಹೆಸರಿನಿಂದ ಗುರುತಿಸುತ್ತೇವೆ. ಸಿರಿಯ, ಇರಾನ್ ಮತ್ತು ತುರ್ಕಿಯ ಕೆಲವು ಭೂಭಾಗಗಳು ಸಹ ಮೆಸೊಪೊಟೋಮಿಯನ್ ನಾಗರಿಕತೆಯ ವ್ಯಾಪ್ತಿಯಲ್ಲಿ ಒಳಗೊಳ್ಳುತ್ತವೆ.
ದೇವಾಲಯ ಮತ್ತು ಆಸ್ಪತ್ರೆ: ಜಗತ್ತಿನ ಎಲ್ಲ ನಾಗರಿಕತೆಗಳ ಜನರು ದೈವ ಅಥವಾ ದೆವ್ವಗಳ ಕೋಪದ ಕಾರಣ ನಾನಾ ರೀತಿಯ ರೋಗ-ರುಜಿನಗಳು, ಸಾವು- ನೋವುಗಳು ಬರುತ್ತವೆ ಎಂದು ನಂಬಿದ್ದರು. ಪುರೋಹಿತರು ದೈವ/ದೆವ್ವ ಮತ್ತು ಸಾಮಾನ್ಯ ಜನರ ನಡುವೆ ಕೊಂಡಿಯಾಗಿದ್ದರು. ಜನಸಾಮಾನ್ಯರ ನೋವುಗಳನ್ನು ದೈವ/ದೆವ್ವಗಳಿಗೆ ನಿವೇದಿಸಿ, ಅವರಿಂದ ಉಪಶಮನದ ಮಾರ್ಗವನ್ನು ತಿಳಿದು, ಪರಿಹಾರೋಪಾಯವನ್ನು ತಿಳಿಸುತ್ತಿ ದ್ದರು. ಹಾಗಾಗಿ ಆರಂಭದ ದಿನಗಳಲ್ಲಿ ದೇವಾಲಯಗಳು ಬೇರೆ ಬೇರೆ ಆಗಿರಲಿಲ್ಲ. ಅವೆರಡೂ ಒಂದೇ ಆಗಿದ್ದವು. ಇದರಿಂದಾಗಿ ದೇವಾಲಯಗಳಲ್ಲಿಯೇ ರೋಗಿಗಳು ಉಳಿದುಕೊಳ್ಳುತ್ತಿದ್ದರು.
ಅವರಿಗೆ ದೇವಾಲಯಗಳಲ್ಲಿಯೇ ಚಿಕಿತ್ಸಾ ಸೌಲಭ್ಯಗಳು ದೊರೆಯುತ್ತಿದ್ದವು. ಈಜಿಪ್ಷಿಯನ್ ಸಂಸ್ಕೃತಿ ಎಂದರೆ ಮೊದಲು ನಮ್ಮ ನೆನಪಿನಲ್ಲಿ ಪಿರಮಿಡ್ಡು ಗಳು ಮೂಡುತ್ತವೆ. ಹಾಗೆಯೇ ಮೆಸೊಪೊಟೋಮಿಯನ್ ಸಂಸ್ಕೃತಿಯೆಂದರೆ ನಮ್ಮ ಮನಸ್ಸಿನಲ್ಲಿ ಜ಼ಿಗುರಾತ್ ಮೂಡುತ್ತವೆ. ಜ಼ಿಗುರಾತ್ ಎನ್ನುವ ಬೃಹತ್ ಕಟ್ಟಡದಲ್ಲಿ ದೇವಾಲಯವಿರುತ್ತಿತ್ತು. ಅಲ್ಲಿ ಧಾರ್ಮಿಕ/ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯು ತ್ತಿದ್ದವು. ಹಾಗೆಯೇ ಇವು ಆಡಳಿತ ನಿರ್ವಹಣಾ ಕೇಂದ್ರಗಳಾಗಿದ್ದವು.
ಇವುಗಳ ಜತೆಯಲ್ಲಿ ಆಸ್ಪತ್ರೆಯೂ ಇರುತ್ತಿದ್ದವು. ಉದಾಹರಣೆಗೆ ಮೆಸೊಪೊಟೋಮಿಯನ್ ಸಂಸ್ಕೃತಿಯ ಪ್ರಾಚೀನ ನಗರಗಳಲ್ಲಿ ಒಂದಾದ ‘ಎರುಡು’ ವಿನಲ್ಲಿರುವ ಜ಼ಿಗುರಾತ್. ಇದರ ಅಧಿದೈವ ಎಂಕಿ. ಎಂಕಿಯು ಜ್ಞಾನ, ಜಲ, ಮಂತ್ರ-ತಂತ್ರ ಹಾಗೂ ಚಿಕಿತ್ಸಾ ವೈದ್ಯನಾಗಿದ್ದ. ಉರ್ ಮತ್ತು ಬ್ಯಾಬಿಲೋನ್ ನಗರಗಳಲ್ಲೂ ಜ಼ಿಗುರಾತ್ ಇದ್ದವು. ಪ್ರಾಚೀನ ಮೆಸೊಪೊಟೋಮಿಯನ್ ಸಂಸ್ಕೃತಿಯಲ್ಲಿ ಎರಡು ವರ್ಗದ ವೈದ್ಯರಿದ್ದರು. ಮೊದಲನೆಯವರನ್ನು
‘ಅಸು’ ಅಥವಾ ‘ಚಿಕಿತ್ಸಾ ವೈದ್ಯರು’ ಎಂದು ಕರೆಯಬಹುದು.
ಹೆಸರೇ ಸೂಚಿಸುವ ಹಾಗೆ, ಇವರು ನಾನಾ ರೀತಿಯ ಮೂಲಿಕೆಗಳನ್ನು ಪ್ರಯೋಗಿಸಿ ರೋಗರುಜಿನಗಳನ್ನು ನಿಯಂತ್ರಿಸುತ್ತಿದ್ದರು. ಎರಡನೆಯ ವರ್ಗದವರೇ ‘ಅಸಿಪು’ ವೈದ್ಯರು. ಇವರನ್ನು ‘ಮಂತ್ರವೈದ್ಯರು’ ಎಂದು ಕರೆಯಬಹುದು. ಇವರು ನಾನಾ ರೀತಿಯ ಮಂತ್ರ- ತಂತ್ರಗಳನ್ನು ಪಠಿಸಿ ದುಷ್ಟಶಕ್ತಿಗಳನ್ನು ಹೊಡೆದೋಡಿ ಸುತ್ತಿದ್ದರು. ತಾಯತಗಳನ್ನು ಕಟ್ಟಿ ರಕ್ಷಣೆಯನ್ನು ಒದಗಿಸುತ್ತಿದ್ದರು. ‘ಸಬ್ಸೂತು’ ಎಂಬ ಸೂಲಗಿತ್ತಿಯರು ಇರುತ್ತಿದ್ದರು. ಸೂಲಗಿತ್ತಿಯರೇ ಹೆರಿಗೆಯನ್ನು ಮಾಡಿಸುತ್ತಿದ್ದರು. ವೈದ್ಯರು ಹೆರಿಗೆಯನ್ನು ಮಾಡಿಸುತ್ತಿರಲಿಲ್ಲ. ಆದರೆ ವೈದ್ಯರು ಹೆರಿಗೆಯ ಅವಽಯಲ್ಲಿ ಅಗತ್ಯ ವೈದ್ಯಕೀಯ ಉಪಚಾರಗಳನ್ನು ನಿರ್ವಹಿಸುತ್ತಿದ್ದರು. ಹೆರಿಗೆಯ ಅವಧಿಯಲ್ಲಿ ಮಂತ್ರವೈದ್ಯರು ಇರುತ್ತಿದ್ದರು.
ಶಿಶುಗಳನ್ನು ಬಲಿ ತೆಗೆದುಕೊಳ್ಳುವ ಅಥವಾ ಹೊತ್ತೊಯ್ಯುವ ‘ಲಮಾ ಷ್ತು’ ಅಥವಾ ‘ಪಜ಼ೂಜ಼ು’ ದುಷ್ಟಶಕ್ತಿಗಳನ್ನು ನಿಗ್ರಹಿಸುತ್ತಿದ್ದರು. ಈ ಎರಡೂ ವರ್ಗದ ವೈದ್ಯರು ಆಸ್ಪತ್ರೆಗಳಲ್ಲಿಯೇ ಇರುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಇವರು ರೋಗಿಯ ಮನೆಗೇ ಹೋಗಿ, ಅಲ್ಲಿ ಅಗತ್ಯ ಸೇವೆಯನ್ನು ಸಲ್ಲಿಸುತ್ತಿ ದ್ದರು. ಅಸು ಮತ್ತು ಅಸಿಪು ವೈದ್ಯಕೀಯವನ್ನು ಸ್ತ್ರೀ-ಪುರುಷರಿಬ್ಬರೂ ಕಲಿಯಲು ಅವಕಾಶವಿತ್ತು. ಆದರೆ ಸ್ತ್ರೀವೈದ್ಯರಿಗಿಂತ ಪುರುಷ ವೈದ್ಯರೇ ಅಽಕ ಪ್ರಮಾಣ ದಲ್ಲಿದ್ದರು ಎನ್ನಲಾಗಿದೆ.
ಪ್ರಾಚೀನ ಮೆಸೊಪೊಟೋಮಿಯನ್ ಸಂಸ್ಕೃತಿಯಲ್ಲಿ ಆರೋಗ್ಯದ ಅಧಿದೇವತೆಯ ಹೆಸರು ‘ಗುಲ’. ಗುಲ ಎಂಬ ಶಬ್ದವನ್ನು ‘ಗ್ರೇಟ್’, ‘ಮಹಾನ್’ ಎಂದು ಅರ್ಥೈಸಬಹುದು. ಸ್ವಾಸ್ಥ್ಯ ಮಹಾನ್ ಅಧಿದೇವತೆ ಎನ್ನುವುದು ಈ ಹೆಸರಿನ ಸಾರಾಂಶ. ಈಕೆಯನ್ನು ‘ನಿನ್ಕರಾಕ್’ ಎಂದೂ ಕರೆಯುತ್ತಿದ್ದರು. ‘ಕರಾಕ್’ ಎನ್ನುವುದು ಒಂದು ನಗರದ ಹೆಸರು. ನಿನ್ಕರಾಕ್ ಎಂದರೆ ‘ಕರಾಕ್ ನಗರದ ದೇವಿ’ ಎಂದರ್ಥ. ಪ್ರತಿಮಾಶಾಸದ ಅನ್ವಯ ಈಕೆಯ ವಿಗ್ರಹವು ನಕ್ಷತ್ರಗಳ ನಡುವೆ ತೇಲುತ್ತಿರುವ ಹಾಗೆ ಕೆತ್ತುತ್ತಿದ್ದರು ಹಾಗೂ ಜತೆಯಲ್ಲಿ ಒಂದು ನಾಯಿ ಇರುತ್ತಿತ್ತು.
ಈ ದೇವಾಲಯ ಆಸ್ಪತ್ರೆಗಳಲ್ಲಿ ದೊರೆಯುತ್ತಿದ್ದ ಸೇವೆಗಳೆಂದರೆ: ವೈದ್ಯಕೀಯ ಸಲಹೆ (ಮೆಡಿಕಲ್ ಕನ್ಸಲ್ಟೇಷನ್): ನಮ್ಮ ಇಂದಿನ ಆಸ್ಪತ್ರೆಗಳ ಹಾಗೆ, ಜನಸಾಮಾನ್ಯರು ದೇವಾಲಯ ಆಸ್ಪತ್ರೆಗಳಿಗೆ ಬರುತ್ತಿದ್ದರು. ತಮ್ಮ ಅನಾರೋಗ್ಯವನ್ನು ನಿವೇದಿಸಿಕೊಳ್ಳುತ್ತಿದ್ದರು ಹಾಗೂ ವೈದ್ಯರು ನೀಡುತ್ತಿದ್ದ ಚಿಕಿತ್ಸೆ, ಸಲಹೆ ಮತ್ತು ಮಾರ್ಗದರ್ಶನಗಳನ್ನು ಅನುಸರಿಸುತ್ತಿದ್ದರು.
ಶಸ್ತ್ರ ವೈದ್ಯಕೀಯ (ಸರ್ಜರಿ): ಕೆಲವು ಆದಿಮ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದ್ದವು. ಸಾಮಾನ್ಯವಾಗಿ ಹಲವು ವಿಧವಾದ ಗಾಯಗಳಿಗೆ ಚಿಕಿತ್ಸೆಯು ದೊರೆಯುತ್ತಿತ್ತು. ಜಾರಿದ ಕೀಲುಗಳನ್ನು ಮರುಕೂರಿಸುತ್ತಿದ್ದರು ಅಥವಾ ಮುರಿದ ಮೂಳೆಗಳಿಗೆ ಕಟ್ಟು ಕಟ್ಟುತ್ತಿದ್ದರು. ಕಣ್ಣುಪೊರೆಗೂ ಚಿಕಿತ್ಸೆಯು ದೊರೆಯುತ್ತಿತ್ತು.
ಮದ್ದಿನಂಗಡಿ (ಫಾರ್ಮಸಿ): ದೇವಾಲಯ ಆಸ್ಪತ್ರೆಗಳಲ್ಲಿ ಮೂಲಿಕಾ ಔಷಧಗಳನ್ನು, ಕಷಾಯಗಳನ್ನು, ಲೇಪನಗಳನ್ನು ತಯಾರಿಸಿ ಅವನ್ನು ರೋಗಿಗಳಿಗೆ ನೀಡುವ ವ್ಯವಸ್ಥೆ ಇರುತ್ತಿತ್ತು.
ಆಧ್ಯಾತ್ಮಿಕ ಚಿಕಿತ್ಸೆ (ಸ್ಪಿರಿಚುವಲ್ ಹೀಲಿಂಗ್): ರೋಗ-ರುಜಿನಗಳು ದೈವ/ದೆವ್ವದ ಕೋಪದ ಕಾರಣ ಬರುತ್ತವೆ ಎಂಬ ನಂಬಿಕೆಯು ಪ್ರಧಾನವಾಗಿದ್ದ ಕಾರಣ, ಅವುಗಳನ್ನು ಆರಾಧನೆ ಮತ್ತು ಕಾಣಿಕೆಗಳ ಮೂಲಕ ಒಲಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿದ್ದವು. ಮಂತ್ರ, ತಂತ್ರ, ಭಜನೆ, ಪೂಜೆ, ಆರಾಧನೆಗಳ ಮೂಲಕ ತಮ್ಮ ರೋಗ-ರುಜಿನಗಳನ್ನು ಗುಣಪಡಿಸುವಂತೆ ಪ್ರಾರ್ಥಿಸುತ್ತಿದ್ದರು. ಅಂದಿನ ‘ಅಸಿಪು’ ವೈದ್ಯರು ರೋಗಿಗಳಿಗೆ ಧೈರ್ಯ, ಭರವಸೆ ಹಾಗೂ ಸಾಂತ್ವನಗಳನ್ನು ನೀಡುತ್ತಿದ್ದರು. ದೇವಾಲಯ ಆಸ್ಪತ್ರೆಗಳ ನಿರ್ಮಾಣ ಹಾಗೂ ಕಾರ್ಯವು ಪೂರ್ವಯೋಜಿತವಾಗಿ ಇರುತ್ತಿತ್ತು. ದೇವಾಲಯಗಳ ಆಸ್ಪತ್ರೆಗಳಿಗೆ ಬರುವವರು ನಡೆದುಕೊಳ್ಳಬೇಕಾದ ರೀತಿ ರಿವಾಜುಗಳನ್ನು ತಿಳಿಸುವ ಜೇಡಿಮಣ್ಣಿನ ಹಲಗೆಗಳು ಇರುತ್ತಿದ್ದವು.
ದೇವಾಲಯ ಆಸ್ಪತ್ರೆಗಳಲ್ಲಿ ವಿವಿಧ ವಿಭಾಗಗಳು ಇರುತ್ತಿದ್ದವು. ದೇವಾಲಯದ ಗರ್ಭಗುಡಿ ಹಾಗೂ ಪ್ರಾರ್ಥನಾ ಮಂದಿರ, ವೈದ್ಯರ ಪರೀಕ್ಷಾ ಸ್ಥಳ, ಔಷಧ
ತಯಾರಿಕೆ ಮತ್ತು ವಿತರಣೆಯ ಸ್ಥಳ ಹಾಗೂ ರೋಗಿಗಳು ಉಳಿದುಕೊಳ್ಳಲು ಇಂದಿನ ವಾರ್ಡ್ ರೂಪದ ಕೋಣೆಗಳು ಇರುತ್ತಿದ್ದವು. ಸೋಂಕು ರೋಗದಿಂದ ನರಳುತ್ತಿದ್ದವರಿಗೆ ಪ್ರತ್ಯೇಕ ವಾರ್ಡ್ ಇರುತ್ತಿದ್ದವು. ಅವರಿರುವ ಕೊಠಡಿಯೊಳಗೆ ಅಸು ವೈದ್ಯರು ಹಾಗೂ ಅವರ ಸಹಾಯಕರಿಗೆ ಮಾತ್ರ ಪ್ರವೇಶ ವಿರುತ್ತಿತ್ತು. ದೇವಾಲಯ ಆಸ್ಪತ್ರೆಗಳಲ್ಲಿ ದಾಖಲೀಕರಣ ವ್ಯವಸ್ಥೆಯು ಅಚ್ಚುಕಟ್ಟಾಗಿರುತ್ತಿತ್ತು. ಎಷ್ಟು ಜನ ರೋಗಿಗಳು ಬಂದರು, ಅವರ ಅನಾರೋಗ್ಯದ ಸ್ವರೂಪ (ರೋಗನಿದಾನ), ಅವರಿಗೆ ಏನು ಚಿಕಿತ್ಸೆಯನ್ನು ನೀಡಲಾಯಿತು, ಎಷ್ಟು ದಿನ ಆಸ್ಪತ್ರೆಯಲ್ಲಿದ್ದರು, ಅವರು ಪೂರ್ಣ ಗುಣಮುಖರಾದರೆ? ಎನ್ನುವ ಬಗ್ಗೆ ವಿವರಗಳಿರುವ ಜೇಡಿಮಣ್ಣಿನ ಫಲಕಗಳನ್ನು ರಕ್ಷಿಸಿಡುತ್ತಿದ್ದರು.
ಹಮುರಬಿಯ ವೈದ್ಯಕೀಯ ನೀತಿ ಸಂಹಿತೆ (ಕೋಡ್ ಆಫ್ ಹಮುರಬಿ) ಮನುಕುಲದ ಲಭ್ಯ ನ್ಯಾಯವೈದ್ಯಕೀಯ ಕಾನೂನು. ತಪ್ಪು ಮಾಡಿದ ವೈದ್ಯರಿಗೆ ಕಠಿಣ ಶಿಕ್ಷೆಯನ್ನು ನೀಡುತ್ತಿದ್ದರು. ಈ ವ್ಯವಸ್ಥೆಯು ವೈದ್ಯರನ್ನು ಸದಾ ಜಾಗರೂಕತೆಯಿಂದ ವೃತ್ತಿಯಲ್ಲಿ ತೊಡಗುವಂತೆ ಎಚ್ಚರಿಸುತ್ತಿತ್ತು. ಪ್ರಾಚೀನ ಮೆಸೊಪೊಟೋಮಿಯನ್ ವೈದ್ಯರ ವೈದ್ಯಕೀಯ ಜ್ಞಾನವು ಸೀಮಿತವಾಗಿತ್ತು. ಆದರೆ ಅವರು ವ್ಯಕ್ತಿಯ ರೋಗಲಕ್ಷಣಗಳನ್ನು ಅನುಸರಿಸಿ, ಇವು ಕಾಯಜನ್ಯವಾದದ್ದೋ ಅಥವ ದೈವಪ್ರಕೋಪದಿಂದ (ಮನೋಜನ್ಯ?) ಹುಟ್ಟಿದ್ದೋ ಎನ್ನುವುದನ್ನು ತಿಳಿಯಲು ಶಕ್ತರಿದ್ದರು. ಈ ಹಿನ್ನೆಲೆಯಲ್ಲಿ ಚಿಕಿತ್ಸೆಯನ್ನು ನೀಡುತ್ತಿದ್ದ ಪರಿಯು ತರ್ಕಬದ್ಧವಾಗಿತ್ತು ಎನ್ನಬಹುದು. ಅವರು ತಮಗೆ ತಿಳಿದಿದ್ದ ವಿಷಯ ಜ್ಞಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸು ತ್ತಿದ್ದರು.
ಅವರು ಪ್ರಧಾನವಾಗಿ ಗಿಡಮೂಲಿಕೆಗಳು, ಖನಿಜಗಳು ಹಾಗೂ ಕೆಲವು ಪ್ರಾಣಿಜನ್ಯ ವಸ್ತುಗಳಿಂದ ಔಷಧಗಳನ್ನು ತಯಾರಿಸುತ್ತಿದ್ದರು. ಅವರು ನೋವು ನಿವಾರಣೆಗಾಗಿ ವಿಲ್ಲೋ ತೊಗಟೆಯನ್ನು (ಸ್ಯಾಲಿಕ್ಸ್ ಹರ್ಬೇಶಿಯೆ) ಬಳಸುತ್ತಿದ್ದರು. ಅದನ್ನು ಇಂದಿಗೂ ನಾವು ಬಳಸುತ್ತಿದ್ದೇವೆ. ವಿಲ್ಲೋ ತೊಗಟೆ/ಎಲೆಯಲ್ಲಿರುವ ‘ಅಸಿಟೈಲ್ ಸ್ಯಾಲಿಸಿಲಿಕ್ ಆಸಿಡ್’ ಜ್ವರಹಾರಕ ಹಾಗೂ ನೋವು ನಿವಾರಕ ಎಂಬ ಅಂಶ ನಮಗೆ ತಿಳಿದಿದೆ. ಪ್ರಾಚೀನ ಮೆಸೊಪೊಟೋ ಮಿಯನ್ ವೈದ್ಯರಿಗೆ ಸುಮಾರು ೫೦೦೦ ಮೂಲಿಕೆಗಳ ಪರಿಚಯವಿತ್ತು ಎನ್ನಲಾಗಿದೆ.
ಮೆಸೊಪೊಟೋಮಿಯನ್ ಸಂಸ್ಕೃತಿಯು ಆಚರಣೆಗೆ ತಂದ ಆಸ್ಪತ್ರೆಗಳ ಉತ್ತರದಾಯಿತ್ವವನ್ನು ಹಾಗೂ ಪ್ರಭಾವವನ್ನು ಈಜಿಪ್ಷಿಯನ್ ಸಂಸ್ಕೃತಿಯ ವೈದ್ಯಕೀಯ ಪದ್ಧತಿಯಲ್ಲಿ ನೋಡಬಹುದು. ಹಾಗೆಯೇ ನಂತರ ಆವಿರ್ಭವಿಸಿದ ಗ್ರೀಕ್ ಮತ್ತು ರೋಮನ್ ಸಂಸ್ಕೃತಿಗಳೂ ಮೆಸೊಪೊಟೋಮಿಯನ್ ಆರೋಗ್ಯ ಸಂಸ್ಕೃತಿಯ ಉತ್ತಮಾಂಶಗಳನ್ನು ತಮ್ಮ ಸಂಸ್ಕೃತಿಯಲ್ಲೂ ಅಳವಡಿಸಿಕೊಳ್ಳಲು ಹಿಂಜರಿಯಲಿಲ್ಲ. ಹಾಗಾಗಿ ಈ ಪ್ರಾಚೀನ ಸಂಸ್ಕೃತಿಯು
ಹಾಕಿಕೊಟ್ಟ ಬಲವಾದ ಅಡಿಪಾಯದ ಮೇಲೆ ಆಧುನಿಕ ವೈದ್ಯಕೀಯವು ಬೆಳೆದುಬಂದಿತು ಎನ್ನಲು ಯಾವುದೇ ಅಡ್ಡಿಯಿಲ್ಲ.