ನೂರೆಂಟು ವಿಶ್ವ
vbhat@me.com
ದೇವರು ನಮ್ಮ ಯೋಜನೆಗಳನ್ನು ತಲೆಕೆಳಗು ಮಾಡುತ್ತಿರುತ್ತಾನೆ. ಆಗ ನೀವು ಬೇಸರಿಸಿಕೊಳ್ಳಬಾರದು, ಯಾಕೆಂದರೆ ಆತ ತನ್ನ ಯೋಜನೆ ಗಳನ್ನು ಜಾರಿಗೊಳಿಸಲು ಸ್ಕೆಚ್ ಹಾಕಿರುತ್ತಾನೆ. ಹೀಗಾಗಿ ಜೀವನದಲ್ಲಿ ಹಿನ್ನಡೆಯಾದಾಗ ಕಿಂಚಿತ್ತೂ ಅಧೀರರಾಗಬಾರದು. ನಮ್ಮ ಒಳ್ಳೆಯ ದಕ್ಕಾಗಿಯೇ ಇವೆಲ್ಲ ಆಗುತ್ತಿದೆಯೆಂದು ಭಾವಿಸಿ ಸಾಕು, ಎಲ್ಲವೂ ಸರಿ ಹೋಗುತ್ತದೆ.
ಸಂಪಾದಕನಾಗುವುದರ ಬಹುದೊಡ್ಡ ಪ್ರಯೋಜನವೆಂದರೆ, ಓದುಗರ ಜತೆ ನಿತ್ಯ ಸಾಂಗತ್ಯದಲ್ಲಿರುವುದು ಎಂಬ ಮಾತನ್ನು ನಾನು ಸದಾ ಅನು
ಭವಿಸುತ್ತಲೇ ಇರುತ್ತೇನೆ. ಪತ್ರಿಕೆಯಲ್ಲಿ ಒಂದು ತಪ್ಪಾದರೆ, ಉತ್ತಮ ಶೀರ್ಷಿಕೆ ನೀಡಿದರೆ, ತುಸು ಅಶ್ಲೀಲ ಎಂಬಂಥ ಫೋಟೊ ಪ್ರಕಟಿಸಿದರೆ, ಒಳ್ಳೆಯ ವರದಿ ಪ್ರಕಟಿಸಿದರೆ ನೂರಾರು ಓದುಗರು ಫೋನ್, ಎಸ್ಸೆಮ್ಮೆಸ್ ಮೂಲಕ ತಮ್ಮ ಅನಿಸಿಕೆಗಳನ್ನುಹರಿಬಿಡುತ್ತಾರೆ. ತಾವು ಕಂಡ ಅನ್ಯಾಯ, ಅನಾಚಾರ ಗಳನ್ನು ವರದಿ ಮಾಡಿ ಎಂದು ವಿವರಗಳನ್ನು ನೀಡುತ್ತಾರೆ.
ಇಷ್ಟೇ ಅಲ್ಲ, ಇನ್ನು ಕೆಲವರು ಅದನ್ನು ಓದಿ, ಇದನ್ನು ಓದಿ ಎಂದು ಶಿಫಾರಸು ಮಾಡುತ್ತಾರೆ. ಮತ್ತೆ ಕೆಲವರು ಆಫೀಸಿಗೆ ಬಂದು ಪುಸ್ತಕಗಳನ್ನು ಕೊಟ್ಟು, ಇದನ್ನು ಓದಿ ಇದರ ಬಗ್ಗೆ ಬರೆಯಲೇಬೇಕು ಎಂದು ತಾಕೀತು ಮಾಡಿ ಹೋಗುತ್ತಾರೆ. ಮೊನ್ನೆ ಉದಯಕುಮಾರ್ ಎಂಬುವವರು ಬಂದಿದ್ದರು. ಅವರು ಈ ಹಿಂದೆ ಹಲವು ಸಲ ಇಮೇಲ್ ಮಾಡಿದ್ದರು. ಪತ್ರಿಕೆಯ ಅಭಿಮಾನಿ. ಅವರು ಬಹಳ ಕಷ್ಟ ಪಟ್ಟು ಜೀವನದಲ್ಲಿ ನೆಲೆ ನಿಂತವರು. ಕಚೇರಿಯೊಂದರಲ್ಲಿ ಅಟೆಂಡರ್ ಆಗಿ ಕೆಲಸಕ್ಕೆ ಸೇರಿಕೊಂಡು ಈಗ ತಮ್ಮದೇ ಆದ ಕಂಪನಿಯೊಂದನ್ನು ಹುಟ್ಟುಹಾಕಿದ್ದಾರೆ.
ಸ್ವಾಮಿಗಳನ್ನು ನೋಡುವಾಗ ಹಣ್ಣು ಕಾಯಿಗಳನ್ನು ಒಯ್ಯುವಂತೆ ನನ್ನನ್ನು ಭೇಟಿಯಾಗಲು ಬರುವಾಗ ಪುಸ್ತಕವನ್ನು ತಂದಿದ್ದರು. ‘ಸರ್, ಸಾಧ್ಯ ವಾದರೆ ಈ ಪುಸ್ತಕವನ್ನು ಓದಿ, ತುಂಬಾ ಚೆನ್ನಾಗಿದೆ. ನೀವು ಓದಿದರೆ ಅದರ ಬಗ್ಗೆ ಬರೆದೇ ಬರೆಯುತ್ತೀರಿ. ಉತ್ತಮ ವಿಚಾರಗಳು ನಾಲ್ಕು ಜನರಿಗೆ ಗೊತ್ತಾಗಲಿ’ ಎಂದು ಹೇಳಿಹೋದರು. ಹೀಗೆ ಓದುಗರು ಕೊಟ್ಟು ಹೋದ ಪುಸ್ತಕಗಳ ಮೇಲೆ ನನ್ನ ಬಿಡುವಿಲ್ಲದ ಕೆಲಸಗಳ ಮಧ್ಯದಲ್ಲಿಯೂ ಒಮ್ಮೆ ಕಣ್ಣಾಡಿಸುತ್ತೇನೆ. ಆದರೆ ಈ ಪುಸ್ತಕ ಹೇಗೋ ಕಣ್ತಪ್ಪಿಸಿಕೊಂಡಿತ್ತು.
ನನ್ನ ಕಣ್ಣಿಗೆ ಬಿದ್ದಿದ್ದೇ ತಡ, ಓದಲಾರಂಭಿಸಿದೆ. ಪುಸ್ತಕ ಪಕ್ಕಕ್ಕಿಟ್ಟಾಗ ಬೆಳಗಿನ ಎರಡೂವರೆ. ಪುಸ್ತಕದ ಹಿಂದಿನ ಪುಟದಲ್ಲಿದ್ದ ಒಂದು ಸಾಲು ಈ ಕೃತಿಯ ಬಗ್ಗೆ ಕುತೂಹಲವನ್ನು ಮೂಡಿಸಿತು. ಅಲ್ಲಿ ಹೀಗೆ ಬರೆದಿತ್ತು-‘Success is in the big things, happiness is in the small things, meditation is in nothing, god is in everything, That’s life’.. ಆ ಪುಸ್ತಕದ ಬಗ್ಗೆ ಸಣ್ಣ ಕುತೂಹಲ ಮೂಡಿದ್ದು ಆಗಲೇ. ಬಳಿಕ ನಾನು ಮುಖಪುಟದ ಕಡೆಗೆ ಹೊರಳಿದೆ. ಮುಖಪುಟದಲ್ಲಿ ಬರೆದಿತ್ತು- ‘my dear readers… Unspotted Letter, Loving You,’ T.T. RangaRajan (Excited to be alive). ನಿಮ್ಮಲ್ಲಿ ಎಷ್ಟು ಜನ ಈ ಟಿ.ಟಿ. ರಂಗರಾಜನ್ ಅವರ ಹೆಸರನ್ನು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಆದರೆ ಇವರು ‘ನ್ಯೂ ಏಜ್ ಗುರು’ ಅಂತಾನೇ ಪ್ರಸಿದ್ಧ.
ಮೂಲತಃ ಇವರು ವ್ಯಕ್ತಿತ್ವ ವಿಕಸನ ಪ್ರಚಾರಕ. ಇಷ್ಟೇ ಆಗಿದ್ದರೆ ಇವರ ಬಗ್ಗೆ ಅಂಥ ಕುತೂಹಲ ತಾಳಬೇಕಿರಲಿಲ್ಲ. ಕಾರಣ ನಮ್ಮ ಮಧ್ಯೆ ಇಂಥ ಹಲವಾರು ಮಂದಿ ಇದ್ದಾರೆ. ಎಲ್ಲರೂ ಬದುಕುವ ಕಲೆ ಹೇಗೆ ಎಂದು ಕ್ಲಾಸುಗಳನ್ನು ಸಂಘಟಿಸಿ ಹಣ ಮಾಡುವವರೇ. ಆದರೆ ರಂಗರಾಜನ್ ಹಾಗಲ್ಲ. ನಮ್ಮಲ್ಲಿರುವ ನಮ್ಮನ್ನು ಹುಡುಕುವುದು ಹೇಗೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡುತ್ತಾರೆ. The messenger should be the message ಎಂಬುದು ಅವರ ನಂಬಿಕೆ. ಇವರು ದೇವರು ದಿಂಡರು ಬಗ್ಗೆ ಕೊರೆಯುವುದಿಲ್ಲ. ಬದುಕಿನ ಸರಳ ಮಾರ್ಗಗಳನ್ನು ಹೇಳಿಕೊಡುತ್ತಾರೆ. ಇವರ ಮಾತನ್ನು ಕೇಳಿದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಇವರ ಮಾತನ್ನು ಕೇಳಿದವರು ‘ವಾಯ್ಸ್ ಆಫ್ ಲವ್’ ಎಂದು ಹೇಳುವುದುಂಟು. ‘ಅಲ್ಮಾ
ಮೇಟರ್’ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಅವರು ಮಾಡುತ್ತಿರುವ ಕೆಲಸ ಅಸಾಮಾನ್ಯವಾದುದು. ಈ ಪುಸ್ತಕದ ಮೂಲಕ ರಂಗರಾಜನ್ ಅವರು ಮತ್ತಷ್ಟು ಆಪ್ತರಾದರು.
ಈ ಪುಸ್ತಕವನ್ನು ಓದಿದ ಬಳಿಕ ನಾನು ಈ ಮನುಷ್ಯನ ಬಗ್ಗೆ ಎಲ್ಲೋ ಓದಿದ್ದೇನಲ್ಲಾ ಎಂದೆನಿಸಿತು. ಕೆಲ ದಿನಗಳ ಹಿಂದೆ ಸ್ನೇಹಿತರೊಬ್ಬರು ಒಂದು ಪುಟ್ಟ ಬರಹವನ್ನು ಇಮೇಲ್ ಮಾಡಿದ್ದರು. ಅದರ ಶೀರ್ಷಿಕೆ (What the world calls failure, I call it a turning point) ) ಆಕರ್ಷಕವಾಗಿತ್ತು. ಆ ಲೇಖನದಲ್ಲಿ ರಂಗರಾಜನ್ ಬರೆದುಕೊಂಡಿದ್ದರು- ನನಗೆ ಹದಿನೇಳು ವರ್ಷಗಳಾಗಿದ್ದಾಗ ಎಂಜಿನಿಯರ್ ಆಗಬೇಕೆಂದು ಕನಸು ಕಂಡಿದ್ದೆ. ಆದರೆ ಪಿಯುಸಿ ಎರಡನೇ ವರ್ಷದಲ್ಲಿ ನನಗೆ ಉತ್ತಮ ಅಂಕ ಬರಲಿಲ್ಲ. ಹೀಗಾಗಿ ಗಣಿತದಲ್ಲಿ ಡಿಗ್ರಿ ಓದಬೇಕಾಯಿತು. ಬರೀ ಇದನ್ನು ಮಾತ್ರ ಓದಿದರೆ ಒಳ್ಳೆಯ ಕೆಲಸ
ಸಿಗಲಿಕ್ಕಿಲ್ಲವೆಂದು ಕಂಪ್ಯೂಟರ್ ಸೈನ್ಸ್ ಪ್ರೋಗ್ರಾಮಿಂಗ್ ಓದಿದೆ. ನಾನು ಓದಿದ್ದೇ ಒಂದು, ಆಗಲು ಹೊರಟಿದ್ದೇ ಇನ್ನೊಂದು.
ಆದರೇನಂತೆ ನನಗೆ ಇಪ್ಪತ್ತೈದು ವರ್ಷ ಆಗುವ ಹೊತ್ತಿಗೆ ನನ್ನದೇ ಒಂದು ಸಾಫ್ಟ್ ವೇರ್ ಕಂಪನಿ ಆರಂಭಿಸಿದ್ದೆ. ಐವತ್ತಕ್ಕೂ ಹೆಚ್ಚಿನ ಎಂಜಿನಿಯರ್
ಗಳು ನನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹದಿನೇಳನೇ ವಯಸ್ಸಿನಲ್ಲಿ ನಾನು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗದಿದ್ದಾಗ, ಇಡೀ ಜಗತ್ತು ನಾನೊಬ್ಬ ನಿಷ್ಪ್ರಯೋಜಕ ಎಂಬ ಹಣೆಪಟ್ಟಿ ಕಟ್ಟಿತ್ತು. ಆದರೆ ನಾನು ಹೊಸ ಸಾಧನೆಗೆ ಭಾಷ್ಯ ಬರೆದಿದ್ದೆ. ‘ಅಲ್ಮಾ ಮೇಟರ್’ ಎಂಬ ಸಂಸ್ಥೆಯನ್ನು ನನಗೆ ಮೂವತ್ತು ವರ್ಷವಾದಾಗ ಸ್ಥಾಪಿಸಿದೆ. ಆದಾದ ಐದು ವರ್ಷಗಳಲ್ಲಿ ‘ಪ್ರೋಜನ್ ಥಾಟ್ಸ್’ ಎಂಬ ಮ್ಯಾಗಜಿನ್ ಆರಂಭಿಸಿದೆ.
ಯುಗೊಸ್ಲಾವಿಯಾದ ಅಗ್ನೇಸ್ ಗೋಂಕ್ಸಾ ಬೊಜೊಕ್ಸಿಯೋ ಕೊಲ್ಕತ್ತಾದ ಕಾನ್ವೆಂಟ್ ಸ್ಕೂಲ್ನಲ್ಲಿ ಪಾಠ ಮಾಡಲು ಬಂದಳು. ಅವಳು ಬರುವಾಗ ಒಂದು ದಿನ ಇಡೀ ಜಗತ್ತೇ ಹೆಮ್ಮೆಯಿಂದ, ಅಭಿಮಾನದಿಂದ ಕರೆಯುವ ಮದರ್ ತೆರೇಸಾ ಆಗುತ್ತೇನೆಂದು ಅಂದುಕೊಂಡಿರಲಿಲ್ಲ. ಅವಳಿಗೆ ನೊಬೆಲ್ ಪ್ರಶಸ್ತಿಯೂ ಬಂತು. ಜವಾಹರಲಾಲ್ ನೆಹರು ಆರಂಭಿಸಿದ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಗೆ ಬಾಲಕೃಷ್ಣ ಮೆನನ್ ಎಂಬುವವರು ಉಪಸಂಪಾದಕರಾಗಿ ಸೇರಿದರು. ಒಂದು ದಿನ ಈ ಮೆನನ್ ಅವರು ಸ್ವಾಮಿ ಶಿವಾನಂದರನ್ನು ಭೇಟಿಯಾದರು. ಈ ಭೇಟಿ ಸ್ನೇಹಕ್ಕೆ ತಿರುಗಿತು. ಸ್ವಾಮಿ ಶಿವಾನಂದರ ಪ್ರಭಾವ ದಿಂದ ಬಾಲಕೃಷ್ಣ ಮೆನನ್ ಕೊನೆಗೆ ಸ್ವಾಮಿ ಚಿನ್ಮಯಾನಂದರಾದರು. ದೇಶ ವಿದೇಶಗಳಲ್ಲಿ ಕೋಟ್ಯಂತರ ಭಕ್ತರು ಮತ್ತು ಅನುಯಾಯಿಗಳನ್ನು
ಪಡೆದರು. ಚಿನ್ಮಯ ಮಿಷನ್ ಮೂಲಕ ಅಮೋಘವಾದ ಸಮಾಜಸೇವೆಗೆ ತಮ್ಮನ್ನು ತೊಡಗಿಸಿಕೊಂಡರು.
ಕ್ರಿಸ್ಟೋಫರ್ ಕೊಲಂಬಸ್ ಮನೆಯಿಂದ ಹೊರಟಾಗ ಮುಂದೊಂದು ದಿನ ತಾನು ಅಮೆರಿಕವನ್ನು ಶೋಧಿಸುತ್ತೇನೆ ಅಂತ ಅಂದುಕೊಂಡಿದ್ದನಾ? ಏನೋ ಆಗಬೇಕೆಂದು ಅಂದುಕೊಂಡು ಇನ್ನೇನೋ ಆದ ಅಸಂಖ್ಯ ಜನರ ಸಾಧನೆ ನಮ್ಮ ಕಣ್ಣ ಮುಂದಿದೆ. ಮೊದಲು ವಿಫಲರಾಗಿ, ಲೋಕನಿಂತರಾಗಿ,
ಜನರ ನಿಂದನೆಗೆ ಪಾತ್ರರಾಗಿ, ಕೇಳಬಾರದ ಬೈಗುಳಗಳನ್ನು ಕೇಳಿಸಿಕೊಂಡು ಕೊನೆಗೆ ಯಾರೂ ಮಾಡದ ಅಸಾಮಾನ್ಯ ಸಾಧನೆ ಮಾಡಿದವರು ಇದ್ದಾರೆ. ಹೀಗಾಗಿ ನೀವು ಅಂದುಕೊಂಡಿದ್ದನ್ನು ಸಾಧಿಸಲು ಆಗದಿದ್ದರೆ, ಜೀವನದ ಆರಂಭದಲ್ಲಿ ನಿಮ್ಮ ಮನೋರಥ ಈಡೇರದಿದ್ದರೆ ಅದಕ್ಕಾಗಿ ಎದೆಗುಂದ
ಬೇಕಿಲ್ಲ. ಜೀವನದಲ್ಲಿ ಜಿಗುಪ್ಸೆ ಹೊಂದಿ ಖಿನ್ನರಾಗಬೇಕಿಲ್ಲ.
ಅದು ನಿಮ್ಮ ಜೀವನದ ಹೊಸ ಮಾರ್ಗ ಶೋಧನೆಗೆ ಕಾರಣ ವಾಗಬಹುದು. ನಿಮ್ಮನ್ನು ಹೊಸ ಸಾಹಸಕ್ಕೆ ಅಣಿಗೊಳಿಸಬಹುದು. ಯಾರಿಗೆ ಗೊತ್ತು, ನೀವು ಬಸ್ಸು ತಪ್ಪಿಸಿಕೊಂಡಿದ್ದೇ ಒಳ್ಳೆಯದಾಯಿತು ಅಂತ ನಿಮಗೆ ಅನಿಸಬಹುದು, ನೀವು ಹತ್ತಬೇಕಿದ್ದ ಬಸ್ಸು ಕಮರಿಗೆ ಬಿತ್ತು ಎಂಬ ಸುದ್ದಿ ಕೇಳಿದಾಗ! ನಾನು ಆಗಾಗ ಹೇಳುತ್ತಿರುತ್ತೇನೆ, ಅದೇನೆಂದರೆ, ದೇವರು ನಮ್ಮ ಯೋಜನೆಗಳನ್ನು ತಲೆಕೆಳಗು ಮಾಡುತ್ತಿರುತ್ತಾನೆ. ಆಗ ನೀವು ಬೇಸರಿಸಿಕೊಳ್ಳಬಾರದು, ಯಾಕೆಂದರೆ ಆತ ತನ್ನ ಯೋಜನೆಗಳನ್ನು ಜಾರಿಗೊಳಿಸಲು ಸ್ಕೆಚ್ ಹಾಕಿರುತ್ತಾನೆ. ಹೀಗಾಗಿ ಜೀವನದಲ್ಲಿ ಹಿನ್ನಡೆಯಾದಾಗ ಕಿಂಚಿತ್ತೂ ಅಧೀರರಾಗ ಬಾರದು. ನಮ್ಮ ಒಳ್ಳೆಯದಕ್ಕಾಗಿಯೇ ಇವೆಲ್ಲ ಆಗುತ್ತಿದೆಯೆಂದು ಭಾವಿಸಿ ಸಾಕು, ಎಲ್ಲವೂ ಸರಿ ಹೋಗುತ್ತದೆ.
ನಾನು ಭೇಟಿ ಮಾಡಿದ ಅನೇಕರು ಕಂಡುಕೊಂಡ ಸಂಗತಿಯೇನೆಂದರೆ, ಆ ಪೈಕಿ ಬಹುತೇಕ ಮಂದಿಗೆ ತಮ್ಮ ಮಹತ್ವವೇ ಗೊತ್ತಿಲ್ಲದಿರುವುದು. ತಮ್ಮನ್ನು ಲಘುವಾಗಿ ಪರಿಗಣಿಸುವುದು, ತಾನೇ ಗ್ರೇಟ್ ಎಂದು ಭಾವಿಸಬೇಕು ಅಂತ ನಾನು ಹೇಳುತ್ತಿಲ್ಲ. ಅದು ಅಹಂಕಾರ. ಆದರೆ, ಈ ಕೆಲಸ ನನ್ನಿಂದ ಸಾಧ್ಯ ಎಂಬ ಆತ್ಮವಿಶ್ವಾಸ ಸಹ ಅವರಲ್ಲಿ ಇರುವುದಿಲ್ಲ. ಮನಸ್ಸು ಮಾಡಿದರೆ ಅವರಿಗೆ ಆಗದ ಕೆಲಸವೇನೂ ಅಲ್ಲ. ಆದರೂ ಮನಸ್ಸು ಮಾಡುವುದಿಲ್ಲ.
‘ಜೀವನದಲ್ಲಿ ಸರ್ವಸ್ವವೂ ನಾಶವಾಗಿ ಹೋಯಿತು. ನನಗೆ ಆತ್ಮಹತ್ಯೆಯೊಂದೇ ಪರಿಹಾರ’ ಎಂದು ಕೆಲವರು ಹೇಳುತ್ತಾ ಬರುತ್ತಾರೆ. ‘ಸರ್ವಸ್ವವೂ ನಾಶವಾದ ಬಳಿಕ, ಹೊಸದಾಗಿ ಜೀವನ ರೂಪಿಸಿಕೊಳ್ಳುವ ಸಾಮರ್ಥ್ಯ ನನ್ನಲ್ಲಿದೆ’ ಎಂದು ಯಾರೂ ಯೋಚಿಸುವುದಿಲ್ಲ. ಹಾಗೆ ನೋಡಿದರೆ ಮನುಷ್ಯನ ಅಸ್ತಿತ್ವವಿರುವುದೇ ಕಟ್ಟುವುದರಲ್ಲಿ. ನೀವು ಒಂದು ನೂರು ಕೋಟಿ ರುಪಾಯಿ ಗಳಿಸಿದ್ದೀರೆನ್ನಿ.
ಅವೆಲ್ಲವೂ ನಿಮ್ಮ ಎಪ್ಪತ್ತನೇ ವಯಸ್ಸಿನಲ್ಲಿ ಕಳೆದುಹೋಯಿತೆನ್ನಿ, ಅಲ್ಲಿಗೆ ಎಲ್ಲವೂ ಮುಗಿದುಹೋಯಿತು ಎಂದಲ್ಲ. ಅಲ್ಲಿಂದ ಆರಂಭಿಸುತ್ತೀರಲ್ಲ, ಪುನಃ ಕಟ್ಟಬೇಕೆಂಬ ಸಂಕಲ್ಪ ತೊಡುತ್ತೀರಲ್ಲ, ಅದು ಬಹಳ ಮುಖ್ಯ. ಈ ಗುಣವೇ ನಮ್ಮನ್ನು ಪೊರೆಯುವುದು. ಇದರಿಂದ ಕಳೆದುಕೊಂಡ ನೂರು ಕೋಟಿ ರುಪಾಯಿ ಯನ್ನು ಪುನಃ ಸಂಪಾದಿಸಬಹುದು. ನನ್ನ ಮುಂದೆಯೇ ಇದನ್ನು ಮಾಡಿ ತೋರಿಸಿದ ಹಲವಾರು ಮಂದಿಯಿದ್ದಾರೆ. ನಿಮಗೆ ನೂರು ಕೋಟಿ ರುಪಾಯಿ ಗಳಿಸುವುದು ಗೊತ್ತಿದೆ ಅಂದ್ರೆ, ಅದನ್ನು ಕಳೆದುಕೊಂಡ ಬಳಿಕ, ಪುನಃ ಸಂಪಾದಿಸುವುದು ಸಹ ಗೊತ್ತಿದೆ ಎಂದೇ ಅರ್ಥ. ಆದರೆ ಮೊದಲು ಗಳಿಸಿದ್ದು ವಾಮಮಾರ್ಗದಿಂದಾದರೆ ಮಾತ್ರ ಪುನಃ ಗಳಿಸುವುದಕ್ಕೆ ನೀವು ಹಿಂದೇಟು ಹಾಕುತ್ತೀರಿ.
Your most precious resource is yourself. Are you using yourself enough? ಈ ಪ್ರಶ್ನೆಯನ್ನು ಎಲ್ಲರಿಗೂ ಕೇಳುತ್ತೇನೆ. ಎಲ್ಲರೂ ಈ ಪ್ರಶ್ನೆಗೆ ವಿಚಿತ್ರ ವಾಗಿಯೇ ಉತ್ತರಿಸುತ್ತಾರೆ. ಯಾರೂ ಆತ್ಮವಿಶ್ವಾಸಭರಿತವಾಗಿ ‘ಹೂಂ’ ಅನ್ನುವುದಿಲ್ಲ. ಅವರ ಬಗ್ಗೆ ಅವರಿಗೆ ಅಂಥ ವಿಶ್ವಾಸ! ನಿಮಗೆ ಗೊತ್ತಿರಬಹುದು. ೧೯೬೦ರಲ್ಲಿ ಜಪಾನ್ ಸ್ಟೀಲನ್ನು ಉತ್ಪಾದಿಸಲು ನಿರ್ಧರಿಸಿತು. ಸ್ಟೀಲ್ ತಯಾರಿಕೆಗೆ ಮೂಲಭೂತವಾಗಿ ಎರಡು ಕಚ್ಚಾ ವಸ್ತು ಗಳು ಬೇಕು- ಕಬ್ಬಿಣದ ಅದಿರು ಹಾಗೂ ಕಲ್ಲಿದ್ದಲು. ವಿಚಿತ್ರವೆಂದರೆ ಈ ಎರಡೂ ವಸ್ತುಗಳು ಜಪಾನ್ನಲ್ಲಿ ಸಿಗುವುದಿಲ್ಲ. ಆದರೆ ಜಪಾನ್ಗೆ ಇವೆರಡನ್ನು ಎಲ್ಲಿಂದ ಪಡೆಯ ಬಹುದೆಂಬುದು ಗೊತ್ತಿತ್ತು. ಹೀಗಾಗಿ ಇವೆರಡು ಅತಿ ಕಡಿಮೆ ಬೆಲೆಗೆ ಧಾರಾಳವಾಗಿ ಸಿಗುವ ದೇಶದಿಂದ ಆಮದು ಮಾಡಿ ಕೊಳ್ಳಲು ನಿರ್ಧರಿಸಿತು. ಇದಕ್ಕೆ ಪ್ರತಿಯಾಗಿ ಬೇಡಿಕೆ ಅಧಿಕವಾಗಿರುವ ದೇಶಗಳಿಗೆ ಸ್ಟೀಲ್ ಅನ್ನು ರಫ್ತು ಮಾಡಲು ತೀರ್ಮಾನಿಸಿತು.
ಎಂಥ ಸೋಜಿಗವೆನ್ನಿ! ಒಂದು ಕಾಲಕ್ಕೆ ಜಪಾನ್ ಜಗತ್ತಿನಲ್ಲಿ ಸ್ಟೀಲ್ ಉತ್ಪಾದಿಸುವ ದೇಶಗಳ ಪೈಕಿ ಅಗ್ರಗಣ್ಯ ಸ್ಥಾನ ಪಡೆಯಿತು. ಅದಾಗಿ ಬರೀ ಎರಡು ದಶಕಗಳ ಅವಽಯಲ್ಲಿ ಕೈಗಾರಿಕಾ ಕ್ರಾಂತಿಗೆ ಸಾಕ್ಷಿಯಾಯಿತು. ಕಬ್ಬಿಣದ ಅದಿರೂ ಇರಲಿಲ್ಲ. ಕಲ್ಲಿದ್ದಲೂ ಇರಲಿಲ್ಲ. ಇದ್ದಿದ್ದು ಬುದ್ಧಿಮತ್ತೆ ಹಾಗೂ
ಈಡೇರಿಸುವ ಛಲ. ಏನೂ ಇಲ್ಲದಿದ್ದರೂ ಜಪಾನ್ ಅಗಾಧವಾದುದನ್ನು ಸಾಧಿಸಿತು. ಒಂದು ಸಂಗತಿ ಗೊತ್ತಿರಲಿ, ನೀವು ಯಾವುದೋ ಹೊಸ ದಂಧೆ, ವ್ಯಾಪಾರ ಮಾಡಲು ನಿಂತಿದ್ದೀರಿ ಎನ್ನಿ. ತಕ್ಷಣ ನಿಮಗೆ ಎದುರಾಗುವ ಪ್ರಶ್ನೆಯೆಂದರೆ, ಅಷ್ಟೊಂದು ಹಣವನ್ನು ಎಲ್ಲಿಂದ ತರೋದು? ಆದರೆ ಆಗ ನಿಮಗೆ ನಿಮ್ಮ ನೆನಪೇ ಆಗುವುದಿಲ್ಲ. ನಿಮ್ಮಂಥ ದೊಡ್ಡ ಸಂಪನ್ಮೂಲ ಮತ್ತೊಂದಿಲ್ಲ ಎಂಬ ಸರಳ ಸಂಗತಿ ನಿಮ್ಮ ಅರಿವಿಗೆ ಬರುವುದಿಲ್ಲ. ಬರೀ ಹಣದ ಬಗ್ಗೆ ಅಷ್ಟೇ ಯೋಚಿಸುತ್ತಿರುತ್ತೀರಿ.
ಜೀವನದಲ್ಲಿ ಯಾರೂ ನಿಮ್ಮನ್ನು ಇಷ್ಟಪಡದಿರಬಹುದು. ಬೇರೆ ಎಲ್ಲರೂ ನಿಮ್ಮನ್ನು ನಂಬದಿರಬಹುದು. ಆದರೆ ನೀವು ನಂಬಲೇಬೇಕು. ಜಗತ್ತು ನಿಮ್ಮನ್ನು ಹೇಗೆಯೇ ನೋಡಲಿ ಅದರಿಂದ ನಿಮಗೆ ಹೆಚ್ಚು ಫರಕ್ಕು ಬೀಳುವುದಿಲ್ಲ. ಆದರೆ, ಅದೇ ನೀವು ನಿಮ್ಮನ್ನು ಹೇಗೆ ನೋಡುತ್ತೀರಿ ಎಂಬ ಸಂಗತಿ
ನಿಮ್ಮಲ್ಲಿ ಅಗಾಧ ಪರಿಣಾಮ ಹಾಗೂ ವ್ಯತ್ಯಾಸವ ನ್ನುಂಟುಮಾಡುತ್ತದೆ. ನನ್ನ ತಾಯಿ ನನ್ನನ್ನು ಭೌತವಿಜ್ಞಾನಿಯನ್ನಾಗಿ ಮಾಡಿದಳು ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಐಸಿಡೋರ್ ಐಸಾಕ್ ರಬಿ ಹೇಳಿದ್ದಾನೆ. ‘ಎಲ್ಲ ತಾಯಂದಿರೂ ಅವರವರ ಮಕ್ಕಳಿಗೆ ಇಂದು ಹೊಸತೇನನ್ನು ಕಲಿತೆ? ಎಂದು ಕೇಳುತ್ತಿದ್ದರು.
ಆದರೆ ನನ್ನ ತಾಯಿ ಪ್ರತಿದಿನ ‘ಇಂದು ಸ್ಕೂಲಿನಲ್ಲಿ ಒಳ್ಳೆಯ ಪ್ರಶ್ನೆ ಕೇಳಿದೆ ತಾನೆ?’ ಎಂದು ಕೇಳುತ್ತಿದ್ದಳು. ಅದೇ ನನ್ನನ್ನು ವಿಜ್ಞಾನಿಯನ್ನಾಗಿ ಮಾಡಿತು’ ಎಂದು ರಬಿ ಹೇಳಿದ್ದಾನೆ. ಎಂಥ ವ್ಯತ್ಯಾಸ! ಬದುಕು ನಾವು ಅಂದುಕೊಂಡಷ್ಟು ಕಷ್ಟವಾಗಿಲ್ಲ. ಆದರೆ ನಾವು ಅಂದುಕೊಂಡಿದ್ದಕ್ಕಿಂತ ಸರಳವಾಗಿದೆ, ಸುಲಭವಾಗಿದೆ. ಇದನ್ನು ನೀವೇ ಅನುಭವಿಸಬೇಕು.