ತಮಿಳುನಾಡು: ಸೇತುಪತಿ ಅಭಿನಯದ 50ನೇ ಚಿತ್ರ ‘ಮಹಾರಾಜ’ ಬಾಕ್ಸ್ ಆಫೀಸ್ನಲ್ಲಿ ಹೆಚ್ಚಿನ ಭರವಸೆ ಮೂಡಿಸದೇ ಹೋದರೂ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆದ ಮೊದಲ ದಿನದಿಂದಲೂ ಸಖತ್ ಸದ್ದು ಮಾಡುತ್ತಿದೆ.
ತಮಿಳು ನಟ ವಿಜಯ್ ಸೇತುಪತಿ ಅಭಿನಯದ ‘ಮಹಾರಾಜ’ ಸಿನಿಮಾ ಇತ್ತೀಚೆಗಷ್ಟೇ ಅಧಿಕೃತವಾಗಿ ಒಟಿಟಿ ಪ್ಲಾಟ್ಫಾರ್ಮ್ ಆದ ನೆಟ್ಫ್ಲಿಕ್ಸ್ಗೆ ಎಂಟ್ರಿ ಕೊಟ್ಟಿತು.
ಭಾರತೀಯ ಚಿತ್ರರಂಗದಲ್ಲಿ ತನ್ನದೇ ವಿಶೇಷ ಅಭಿಮಾನಿಗಳ ಬಳಗ ಹೊಂದಿರುವ ವಿಜಯ್ ಸೇತುಪತಿ, ಸಿನಿಪ್ರೇಕ್ಷಕರು ಅತಿಯಾಗಿ ಇಷ್ಟಪಡುವ ಪ್ರಮುಖ ಸ್ಟಾರ್ ನಟರಲ್ಲಿ ಒಬ್ಬರು.
ನಿಥಿಲನ್ ಸ್ವಾಮಿನಾಥನ್ ನಿರ್ದೇಶನದ ‘ಮಹಾರಾಜ’ ಚಿತ್ರ ಇದೀಗ 2024ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಲಾದ ಭಾರತೀಯ ಚಲನಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಒಟಿಟಿಗೆ ಎಂಟ್ರಿ ಕೊಟ್ಟ ಕೇವಲ 6 ವಾರಗಳಲ್ಲಿ ಈ ಮೈಲಿಗಲ್ಲು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದಲ್ಲದೆ, ‘ದಿ ಕ್ರೂ’ ಮತ್ತು ‘ಲಾಪಟಾ ಲೇಡೀಸ್’ನಂತಹ ಬಾಲಿವುಡ್ ಹಿಟ್‌ಗಳ ಸಿನಿಮಾಗಳ ಒಟ್ಟು ವೀಕ್ಷಣೆಗಳನ್ನು ಮೀರಿಸಿ, ಮುನ್ನುಗ್ಗಿದೆ.
ವಿಜಯ್ ಸೇತುಪತಿ ಅಭಿನಯದ ಈ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಒಟ್ಟು 18.6 ಮಿಲಿಯನ್ ವೀಕ್ಷಣೆಯೊಂದಿಗೆ ಅತಿ ಹೆಚ್ಚು ಸ್ಟ್ರೀಮ್ ಮಾಡಲಾದ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ನಂತರದಲ್ಲಿ ‘ದಿ ಕ್ರ್ಯೂ’ 17.9 ಮತ್ತು ‘ಲಾಪಟಾ ಲೇಡೀಸ್’ 17.1 ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ ಎರಡನೇ ಹಾಗೂ ಮೂರನೇ ಸ್ಥಾನವನ್ನು ಅಲಂಕರಿಸಿದೆ.