Friday, 20th September 2024

ಇಂದು ಟ್ರಂಪ್-ಜೋ ಬಿಡೆನ್ ಕೊನೆಯ ಹೈವೋಲ್ಟೇಜ್ ಚರ್ಚೆ

ವಾಷಿಂಗ್ಟನ್: ಅಮೆರಿಕದಲ್ಲಿ ನ.3ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗಾಗಿ ಕೊರೊನಾ ವೈರಸ್ ಹಾವಳಿಯ ನಡುವೆಯೂ ಕಾವೇರ ತೊಡಗಿದೆ.

ಬಾಲ್ಟ್’ಮೋರ್ ಯೂನಿವರ್ಸಿಟಿಯಲ್ಲಿ ಅಮೆರಿಕ ಅಧ್ಯಕ್ಷ -ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಾಗೂ ಮಾಜಿ ಉಪಾಧ್ಯಕ್ಷ -ಡೆಮಾಕ್ರೆಟಿಕ್ ಪಕ್ಷದ ನಾಯಕ ಜೋ ಬಿಡೆನ್ ನಡುವೆ ಕೊನೆ ಹಂತದ ಹೈ ವೊಲ್ಟೇಜ್ ಮುಖಾಮುಖಿ ಚರ್ಚೆ ನಡೆಯಲಿದೆ.

ಈವರೆಗೆ ನಡೆದ ಚುನಾವಣಾ ಪ್ರಚಾರದ ವೇಳೆ 74 ವರ್ಷದ ಟ್ರಂಪ್ ಮತ್ತು 77ರ ಪ್ರಾಯದ ಬಿಡೆನ್ ಪರಸ್ಪರ ಆರೋಪ-ಪ್ರತ್ಯಾ ರೋಪಗಳ ಮೂಲಕ ವಾಕ್ಸಮರ ನಡೆಸಿದ್ದರು.

ಮುಖಾಮುಖಿ ಚರ್ಚೆ ವೇಳೆ ಗೊಂದಲಕ್ಕೆ ಆಸ್ಪದ ನೀಡದಿರಲು ಕೆಲವು ನಿಯಮಗಳನ್ನು ಜಾರಿಗೊಳಿಸಲಾಗಿದ್ದು , ಮೈಕ್ರೋ ಫೋನ್ ಮ್ಯೂಟ್ (ಮೈಕ್ರೋ ಫೋನ್ ಸ್ಥಗಿತ)ವ್ಯವಸ್ಥೆ ಕಲ್ಪಿಸಲಾಗಿದೆ. ಉಭಯ ನಾಯಕರ ಆರೋಪ-ಪ್ರತ್ಯಾರೋಪಗಳು ವಿಕೋಪಕ್ಕೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಇ-ತಂತ್ರಜ್ಞಾನವನ್ನು ಇದೇ ಮೊದಲ ಬಾರಿಗೆ ಅಳವಡಿಸಲಾಗಿದೆ.

ಒಟ್ಟು ಮೂರು ಫೇಸ್ ಟು ಫೇಸ್ ಸ್ಟೇಜ್ ಫೈಟ್ ಶುರುವಾಗಿತ್ತು. ಮೊದಲ ಸಂವಾದದಲ್ಲಿ ಟ್ರಂಪ್ ಮತ್ತು ಬಿಡೆನ್ ಪರಸ್ಪರ ಹರಿ ಹಾಯ್ದಿದ್ದರು. ಎರಡನೆ ಮುಖಾಮುಖಿ ಚರ್ಚೆ ಟ್ರಂಪ್ ಅವರಿಗೆ ಕೊರೊನಾ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ರದ್ದಾಗಿತ್ತು.