Thursday, 19th September 2024

Encounter in Kupwara: ಕುಪ್ವಾರದಲ್ಲಿ ಎನ್‌ಕೌಂಟರ್‌; 3 ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

Encounter in Kupwara

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಕುಪ್ವಾರ (Kupwara) ಜಿಲ್ಲೆಯಲ್ಲಿ ಯೋಧರೊಂದಿಗೆ ನಡೆದ 2 ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ 3 ಭಯೋತ್ಪಾದಕರು ಹತರಾಗಿದ್ದಾರೆ.  ಭಯೋತ್ಪಾದಕರ ಬಗ್ಗೆ ಮಾಹಿತಿ ಪಡೆದ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಈ ಎನ್‌ಕೌಂಟರ್‌ ನಡೆದಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಪ್ವಾರ ಜಿಲ್ಲೆಯ ನಿಯಂತ್ರಣ ರೇಖೆ (Line of Control)ಯ ಉದ್ದಕ್ಕೂ ಕಾರ್ಯಾಚರಣೆ ನಡೆಸಲಾಯಿತು.

“ಸಂಭಾವ್ಯ ಒಳನುಸುಳುವಿಕೆ ಪ್ರಯತ್ನಗಳ ಬಗ್ಗೆ ಗುಪ್ತಚರ ಇಲಾಖೆಯ ಮಾಹಿತಿಯ ಆಧಾರದ ಮೇಲೆ, ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಆಗಸ್ಟ್ 28-29ರ ಮಧ್ಯರಾತ್ರಿ ಕುಪ್ವಾರದ ಮಚ್ಚಲ್‌ನಲ್ಲಿ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಪ್ರತಿಕೂಲ ಹವಾಮಾನದ ಮಧ್ಯೆಯೂ ಅನುಮಾನಾಸ್ಪದ ಚಲನೆ ಕಂಡುಬಂತು.  ಈ ವೇಳೆ ಭಯೋತ್ಪಾದಕರು ದಾಳಿ ಆರಂಭಿಸಿದ್ದರು. ಭದ್ರತಾ ಪಡೆ ಪ್ರತಿ ದಾಳಿ ಮಾಡಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ” ಎಂದು ಸೇನೆಯ ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.

https://x.com/ChinarcorpsIA/status/1828989738952581510

ಇನ್ನು ಕುಪ್ವಾರದ ತಂಗ್ಧರ್‌ನಲ್ಲಿ ನಡೆದ ಮತ್ತೊಂದು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಇನ್ನೊಬ್ಬ ಉಗ್ರ ಹತನಾಗಿದ್ದಾನೆ. ಆಗಸ್ಟ್‌ 28ರ ಸಂಜೆ ತಂಗ್ಧರ್‌ನಲ್ಲಿ ಸೇನೆ ಈ ಕಾರ್ಯಾಚರಣೆ ಕೈಗೊಂಡಿತ್ತು. ಕುಪ್ವಾರದಲ್ಲಿ ಭಯೋತ್ಪಾದಕರ ಸಾನಿಧ್ಯ ಕಂಡು ಬಂದ ಹಿನ್ನಲೆಯಲ್ಲಿ ಭದ್ರತಾ ಪಡೆ ರಾಜೌರಿ ಜಿಲ್ಲೆಯ ಲಾಥಿ ಪ್ರದೇಶದಲ್ಲಿಯೂ ಶೋಧ ಕಾರ್ಯ ನಡೆಸಿದೆ. ಇಲ್ಲೂ ಎರಡರಿಂದ ಮೂರು ಭಯೋತ್ಪಾದಕರು ಅಡಗಿ ಕೂತಿದ್ದಾರೆ. ಈಗಲೂ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

https://x.com/ChinarcorpsIA/status/1828990689897857336

ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರ ಚಟುವಟಿಕೆ ಹೆಚ್ಚಾಗಿದ್ದು, ಕುಪ್ವಾರ ಜಿಲ್ಲೆಯಲ್ಲಿ ಜುಲೈ 27ರಂದು ನಡೆದ ಎನ್‌ಕೌಂಟರ್‌ನಲ್ಲಿಸೈನಿಕರರೊಬ್ಬರು ಹುತಾತ್ಮರಾಗಿದ್ದರು. ಜುಲೈ 24ರಂದು ಕುಪ್ವಾರ ಜಿಲ್ಲೆಯ ಕೌಟ್‌ನ ತ್ರಿಮುಖ್ ಟಾಪ್ ಬಳಿ ಸೇನಾ ಸಿಬ್ಬಂದಿಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಯೋತ್ಪಾದಕನೊಬ್ಬ ಹತನಾಗಿದ್ದ. ಈ ವೇಳೆ ಎನ್‌ಸಿಒ ನಿಯೋಜಿತ ಅಧಿಕಾರಿಯೊಬ್ಬರು ಗಾಯಗೊಂಡಿದ್ದರು.

ಇನ್ನು ಜುಲೈ 18ರಂದು ಕುಪ್ವಾರ ಜಿಲ್ಲೆಯಲ್ಲಿ ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಕೇರನ್‌ ಗಡಿ ನಿಯಂತ್ರಣ ರೇಖೆ ಬಳಿ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆಯೂ ಒಬ್ಬ ಯೋಧ ಗಂಭೀರವಾಗಿ ಗಾಯಗೊಂಡಿದ್ದರು.

ಜುಲೈ 16ರಂದು ದೋಡಾ ಜಿಲ್ಲೆಯ ದೇಸಾ ಎಂಬ ಪ್ರದೇಶದ ಅರಣ್ಯದಲ್ಲಿ ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಭಯೋತ್ಪಾದಕರು ಯೋಧರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದರು.  ರಾತ್ರೋರಾತ್ರಿ ನಡೆದ ಈ ಗುಂಡಿನ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್‌ ಶಾ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕುವುದಾಗಿ ಗುಡುಗಿದ್ದಾರೆ.