Thursday, 12th December 2024

ಎಚ್ ಎ ಎಲ್ ಘಟಕಕ್ಕೆ ಡಾ.ಬಿ ಆರ್ ಅಂಬೇಡ್ಕರ್ ಹೆಸರಿಡುವಂತೆ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರಿಂದ ಒತ್ತಾಯ

ಗುಬ್ಬಿ : ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಮಿತಿ ಸಭೆಯನ್ನು ಶಾಸಕ ಹಾಗೂ ಕೆ ಎಸ್ ಆರ್ ಟಿ ಸಿ ನಿಗಮ ಮಂಡಳಿ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್ ಅವರ ಉಪಸ್ಥಿತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಳೆದ ಸಭೆಯಲ್ಲಿ ಸ್ವೀಕೃತವಾದ ಅಹವಾಲು ಹಾಗೂ ಚರ್ಚಿಸಲಾಗಿದ್ದ ಅನುಪಾಲನಾ ವರದಿಯನ್ನು ಅನುಷ್ಠಾನಕ್ಕೆ ತಂದಿರುವ ಬಗ್ಗೆ ಸ್ವೀಕೃತ್ವ ಅಹವಾಲುಗಳ ವಿಷಯವಾರು ಸಭೆಯಲ್ಲಿ ತಹಶೀಲ್ದಾರ್ ಬಿ ಆರತಿ ಮಂಡಿಸಿದರು. ಹಲವು ಬಾರಿ ಕುಂದು ಕೊರತೆ ಸಭೆಗಳಲ್ಲಿ ಸಮಸ್ಯೆ ಕುರಿತಾಗಿ ಮನವಿ ನೀಡಿದರು ತಾಲೂಕು ಮಟ್ಟದ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ದಲಿತ ಮುಖಂಡರು ಶಾಸಕರೆದುರು ಬೇಸರ ವ್ಯಕ್ತಪಡಿಸಿ ದರು.
ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಮುಂದೆ ಇ ಸ್ವತ್ತು ಮಾಡುವ ವಿಚಾರದಲ್ಲಿ ಪಿಡಿಓ ವಿಳಂಬ ಅನುಸರಿಸುತ್ತಿರುವುದು ಹಾಗೂ ಹಕ್ಕುಪತ್ರ ವಿತರಣೆ ಮಾಡುತ್ತಿಲ್ಲ ಎಂಬ ವಿಚಾರ ಕುರಿತು ಮುಖಂಡರು ಧರಣಿ ಕುಳಿತರು.
ತಾಲೂಕಿನಲ್ಲಿ ಎಸ್ ಸಿ ಎಸ್ ಟಿ ಸ್ಮಶಾನಕ್ಕೆ ಮಂಜೂರು ಆಗಿರುವ ಬಗ್ಗೆ, ಭೂಮಿ ಮಂಜೂರಾತಿ, ದಾರಿ ವಿಚಾರವಾಗಿ, ಕೆಲವು ದೇವಾಲಯಗಳಲ್ಲಿ ಪ್ರವೇಶ ನಿರ್ಬಂಧ, ಮೂಲಭೂತ ಸೌಲಭ್ಯಗಳ ಕೊರತೆ ಸೇರಿದಂತೆ ಎಚ್ಎಎಲ್ ಘಟಕಕ್ಕೆ  ಡಾ. ಬಿ ಆರ್ ಅಂಬೇಡ್ಕರ್ ಹೆಸರಿಡುವಂತೆ, ತಾಲೂಕು ಕಚೇರಿಯ ಮುಂದೆ ಬಾಬಾ ಸಾಹೇಬರ  ಪುತ್ಥಳಿ ನಿರ್ಮಾಣ ಮಾಡುವ ಕುರಿತು ದಲಿತ ಮುಖಂಡರು ಪ್ರಸ್ತಾಪಿಸಿದ್ದು.
ಎಸ್ ಸಿ ಎಸ್ ಟಿ ಅನುದಾನದಲ್ಲಿ ಬರುವ ಸೋಲಾರ್ ಅಳವಡಿಕೆ, ವಿದ್ಯಾಭ್ಯಾಸದ ಸ್ಕಾಲರ್ ಶಿಪ್ , ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡೆಗಳಿಗೆ ತೆರಳುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿ ನಲ್ಲಿ ಪ್ರೋತ್ಸಾಹ ಧನವನ್ನು ನೀಡದೆ ಗ್ರಾಮ ಪಂಚಾಯತ್ ಗಳಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಮುಖಂಡರು ಸಭೆಯಲ್ಲಿ ವಿಚಾರ ಮಂಡಿಸಿದ ವೇಳೆ ಶಾಸಕರು ಈ ವಿಚಾರದಲ್ಲಿ ಪ್ರತ್ಯೇಕವಾಗಿ ಎಸ್ ಸಿ ಎಸ್ ಟಿ ಅನುದಾನವನ್ನು ಬೇರೆ ಬೇರೆ ರೀತಿಯಲ್ಲಿ ದುರ್ಬಳಕೆ ಆಗಿರುವ ಬಗ್ಗೆ ಇದ್ದರೆ ಗಮನಕ್ಕೆ ತಂದಲ್ಲಿ ತನಿಖೆಗೆ ಒಳಪಡಿಸಿ ಮೀಸಲಿರುವ ಯೋಜನೆಗಳಿಗೆ ಅನುದಾನ ಬಳಸಲು ಕ್ರಮ ಕೈಗೊಳ್ಳಲಾಗುವುದು, ಎಸ್.ಸಿ. ಮತ್ತು ಎಸ್.ಟಿ.ಕುಂದು ಕೊರತೆ ಸಭೆಯಲ್ಲಿ ಸಾಕಷ್ಟು ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬಂದಿದ್ದು, ತಾಲೂಕಿನಲ್ಲಿ ಸ್ಮಶಾನ, ಕಂದಾಯ ಗ್ರಾಮ, ಉದ್ಯಾನವನ, ಊರಿಗೊಂದು ಗುರ್ತು ಮಾಡಲಾಗಿದ್ದು, ಹಂತ ಹಂತವಾಗಿ ಸರ್ಕಾರದ ಮಟ್ಟದಲ್ಲಿ ಮಂಜೂರಾಗಿ ಬರುತ್ತಾ ಇದ್ದು, ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಗ್ರಾಮ ಪಂಚಾಯತ್ ಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲು ನಿರ್ದೇಶನ ನೀಡಲಾಗಿದೆ.
77 ಸ್ಮಶಾನಕ್ಕೆ ಜಾಗವನ್ನು ಗುರುತಿಸಲಾಗಿದ್ದು, 47 ನ್ನು ಪಂಚಾಯಿತಿಗಳಿಗೆ ಹಸ್ತಾಂತರ ಮಾಡಲಾಗಿದೆ. ದಲಿತರ ಕಾಲೋನಿಗಳಲ್ಲಿ ಮನೆ ಕಟ್ಟಲು ಜಾಗವಿಲ್ಲದೆ ಇದ್ದು, ಅದಕ್ಕಾಗಿ ಪ್ರತಿ ಗ್ರಾಮದಲ್ಲಿಯೂ ಮೂರು ಎಕರೆ, ನಾಲ್ಕು ಎಕರೆ ಜಾಗವನ್ನು ಗುರುತಿಸಿ ಮೀಸಲಿಡಲು ನಿರ್ದೇಶನ ನೀಡಲಾಗಿದೆ. ಎಚ್ ಎ ಎಲ್ ಗೆ ಅಂಬೇಡ್ಕರ್ ಹೆಸರಿಡುವ ವಿಚಾರ ಪ್ರಸ್ತಾಪ ಆಗಿದ್ದು ರೆಸುಲೇಷನ್ ಮಾಡಿ ಕೇಂದ್ರಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಶಾಸಕ ಹಾಗೂ ಕೆ ಎಸ್ ಆರ್ ಟಿ ಸಿ ನಿಗಮ ಮಂಡಳಿ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ಈ ಸಭೆಯಲ್ಲಿ ತಾ.ಪಂ ಇಓ ಶಿವಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಉಪಸ್ಥಿತರಿದ್ದರು.